A A A A A

ಜೀವನ: [ವಯಸ್ಸಾದ]


ತಿಮೊಥೇಯನಿಗ ೧ ೫:೮
ಯಾರಾದರೂ ತನ್ನ ಸಂಬಂಧಿಕರನ್ನು, ವಿಶೇಷವಾಗಿ ಸ್ವಂತ ಕುಟುಂಬದವರನ್ನು ಸಂರಕ್ಷಿಸದೆಹೋದರೆ, ಅಂಥವನು ವಿಶ್ವಾಸಭ್ರಷ್ಟನೂ ಅವಿಶ್ವಾಸಿಗಳಿಗಿಂತ ತುಚ್ಛನಾದವನೂ ಆಗಿದ್ದಾನೆ.

ಕೊರಿಂಥಿಯರಿಗೆ ೨ ೪:೧೬
ಹೀಗಿರಲು, ನಾವು ಎದೆಗುಂದುವುದಿಲ್ಲ. ನಮ್ಮ ಭೌತಿಕ ದೇಹವು ನಶಿಸುತ್ತಿದ್ದರೂ ನಮ್ಮ ಅಂತರಂಗವು ದಿನೇದಿನೇ ನೂತನವಾಗುತ್ತದೆ.

ಧರ್ಮೋಪದೇಷಕಾಂಡ ೩೨:೭
ನೆನಪಿಗೆ ತಂದುಕೊಳ್ಳಿ ಆ ಪೂರ್ವಕಾಲವನು ಆಲೋಚಿಸಿ ನೋಡಿ ಪೂರ್ವಿಕರ ಚರಿತೆಯನು. ವಿಚಾರಿಸಿದರೆ ತಿಳಿಸುವರು ನಿಮ್ಮ ನಿಮ್ಮ ತಂದೆಗಳು ಕೇಳಿದರೆ ವಿವರಿಸುವರು ನಿಮ್ಮ ನಿಮ್ಮ ಹಿರಿಯರು.

ಧರ್ಮೋಪದೇಷಕಾಂಡ ೩೪:೭
ಮೋಶೆ ಸಾಯುವಾಗ ನೂರಿಪ್ಪತ್ತು ವರ್ಷದವನಾಗಿದ್ದನು. ಅವನ ಕಣ್ಣು ಮೊಬ್ಬಾಗಲಿಲ್ಲ, ಅವನ ಜೀವಕಳೆ ಕುಂದಿಹೋಗಿರಲಿಲ್ಲ.

ಉಪದೇಷಕ ೭:೧೦
ಹಿಂದಿನ ಕಾಲ ಈ ಕಾಲಕ್ಕಿಂತ ಮೇಲಾದುದಕ್ಕೆ ಕಾರಣ ಕೇಳಬೇಡ; ಇದು ಬುದ್ಧಿವಂತನು ಕೇಳುವ ಪ್ರಶ್ನೆಯಲ್ಲ.

ವಿಮೋಚನಾಕಾಂಡ ೨೦:೧೨
ನಿನ್ನ ತಂದೆತಾಯಿಗಳನ್ನು ಗೌರವಿಸು; ಗೌರವಿಸಿದರೆ ನಿನ್ನ ದೇವರೂ ಸರ್ವೇಶ್ವರನೂ ಆದ ನಾನು ನಿನಗೆ ಅನುಗ್ರಹಿಸುವ ನಾಡಿನಲ್ಲಿ ಬಹುಕಾಲ ಬಾಳುವೆ.

ಆದಿಕಾಂಡ ೬:೩
ಆಗ ಸರ್ವೇಶ್ವರ ಸ್ಸ್ವಾಮಿ, “ನನ್ನ ಆತ್ಮವು ಮನುಷ್ಯನಿಗೆ ಶಾಶ್ವತವಾಗಿ ಹೊಣೆಯಾಗಿರಲಾರದು. ಭ್ರಷ್ಟರಾದ ಅವರು ಮರ್ತ್ಯರು. ಅವರ ಆಯುಷ್ಯ ಕೇವಲ ನೂರಿಪ್ಪತ್ತು ವರ್ಷ ಇರಲಿ” ಎಂದರು.

ಆದಿಕಾಂಡ ೨೫:೮
ಪೂರ್ಣ ಆಯುಷ್ಯವನ್ನು ಕಳೆದು, ಹಣ್ಣು ಹಣ್ಣು ಮುದುಕನಾಗಿ ಪ್ರಾಣಬಿಟ್ಟು ಅವನು ತನ್ನ ಪಿತೃಗಳ ಬಳಿಗೆ ಸೇರಿದನು.

ಯೆಶಾಯನ ೪೦:೨೯
ದಯಪಾಲಿಸುವನಾತ ಬಲಾಭಿವೃದ್ಧಿಯನ್ನು ಬಳಲಿದವನಿಗೆ ಅನುಗ್ರಹಿಸುವನಾತ ಚೈತನ್ಯವನು ನಿತ್ರಾಣನಿಗೆ.

ಯೆಶಾಯನ 46:4
ನಾನೇ ನಿಮಗೆ ಆಧಾರ ಮುಪ್ಪಿನ ತನಕ ಹೊತ್ತು ಸಲಹುವೆನು ನಿಮ್ಮನು ನರೆಬಂದಾಗ. ಉಂಟುಮಾಡಿದವನು ನಾನೇ, ಹೊರುವವನು ನಾನೇ ಹೌದು, ನಿಮ್ಮನು ಹೊತ್ತು ಸಲಹುವವನು ನಾನೇ.

ಯೋಬನ 5:26
ಸುಗ್ಗಿಕಾಲದಲ್ಲಿ ಕಾಳುತೆನೆ ಕಣ ಸೇರುವಂತೆ ವೃದ್ಧಾಪ್ಯ ಕಳೆದ ಮೇಲೆ ನೀನು ಸಮಾಧಿ ಸೇರುವೆ.

ಯೋಬನ 12:12-20
[12] ಜ್ಞಾನವಿದೆ ವಯೋವೃದ್ಧರಲ್ಲಿ ವಿವೇಕವಿದೆ ದೀರ್ಘಾಯುಷ್ಯರಲ್ಲಿ.[13] ಆದರೆ ದೇವರಲ್ಲಿದೆ ಜ್ಞಾನದೊಡನೆ ಶಕ್ತಿಕೂಡ ಆತನಲ್ಲಿದೆ ವಿವೇಕ ಮತ್ತು ಸನ್ಮತಿ ಸಹ.[14] ಆತ ಕೆಡವಿದ್ದನ್ನು ಯಾರಿಂದಲೂ ಕಟ್ಟಲಾಗದು ಆತ ಸೆರೆಹಿಡಿದವರನ್ನು ಯಾರಿಂದಲೂ ಬಿಡಿಸಲಾಗದು.[15] ಆತ ನೀರನ್ನು ತಡೆದರೆ, ಬತ್ತಿಹೋಗುತ್ತದೆ ಬೆಳೆಯೆಲ್ಲ ತೂಬೆತ್ತಿದರೆ ಮುಳುಗಿಹೋಗುತ್ತದೆ ಇಳೆಯೆಲ್ಲ.[16] ಸಾಮರ್ಥ್ಯ ಹಾಗು ವಿಜಯ ಆತನ ಲಕ್ಷಣ ವಂಚಕ ಹಾಗು ವಂಚಿತ ಆತನಿಗೆ ಅಧೀನ.[17] ಮಂತ್ರಿಗಳನು ಬರಿಬತ್ತಲೆಯಾಗಿ ನಡೆಸುತ್ತಾನೆ ನ್ಯಾಯಾಧಿಪತಿಗಳನು ಮೂರ್ಖರನ್ನಾಗಿಸುತ್ತಾನೆ.[18] ಅರಸರು ಹಾಕಿದ ಬಂಧನವನ್ನು ಬಿಚ್ಚಿ ಬಿಗಿಯುತ್ತಾನೆ ಅವರ ಸೊಂಟಕ್ಕೆ ಚಿಂದಿ.[19] ಯಾಜಕರನ್ನು ಬರಿಬತ್ತಲೆಯಾಗಿ ನಡೆಸುತ್ತಾನೆ ಅಚಲ ಶಕ್ತಿಶಾಲಿಗಳನ್ನು ಕೆಡವಿಬಿಡುತ್ತಾನೆ.[20] ಮೂಕರನ್ನಾಗಿಸುತ್ತಾನೆ ವಾಕ್ ಚತುರರನ್ನು ಹಿರಿಯರ ಧೀಮಂತಿಕೆಯನ್ನು ತೆಗೆದುಬಿಡುತ್ತಾನೆ.

ಯೋಬನ 32:7
ದೊಡ್ಡವರು ಮಾತಾಡಲಿ ಎಂದುಕೊಂಡೆನು ವಯೋವೃದ್ಧರು ಸುಜ್ಞಾನವನು ಬೋಧಿಸಲಿ ಎಂದೆನು.

ಯೊವೇಲನ ೨:೨೮
“ತರುವಾಯ ಎಲ್ಲಾ ಮಾನವರ ಮೇಲೆ ನನ್ನ ಆತ್ಮವನ್ನು ಸುರಿಸುವೆನು; ಪುತ್ರಪುತ್ರಿಯರು ಪ್ರವಾದನೆ ಮಾಡುವರು; ನಿಮ್ಮ ಹಿರಿಯರು ಸ್ವಪ್ನಶೀಲರಾಗುವರು; ನಿಮ್ಮ ಯುವಕರಿಗೆ ದಿವ್ಯದರ್ಶನಗಳಾಗುವುವು.

ಯಾಜಕಕಾಂಡ ೧೯:೩೨
“ತಲೆನರೆತ ವೃದ್ಧರ ಮುಂದೆ ಎದ್ದುನಿಂತು ಅವರನ್ನು ಸನ್ಮಾನಿಸಬೇಕು. ನಿಮ್ಮ ದೇವರಲ್ಲಿ ಭಯಭಕ್ತಿಯುಳ್ಳವರಾಗಿರಬೇಕು. ನಾನು ಸರ್ವೇಶ್ವರ.

ಫಿಲೆಮೋನನಿಗೆ ೧:೯
ಆದರೂ ನಿನ್ನ ಮೇಲಿರುವ ಪ್ರೀತಿಯ ನಿಮಿತ್ತ ನಾನು ನಿನ್ನಲ್ಲಿ ವಿನಂತಿಸುತ್ತೇನೆ: ವೃದ್ಧಪ್ರಾಯನೂ ಮತ್ತು ಕ್ರಿಸ್ತಯೇಸುವಿಗೋಸ್ಕರ ಈಗ ಸೆರೆಯಾಳೂ ಆಗಿರುವ ಪೌಲನೆಂಬ ನಾನು ಒನೇಸಿಮನ ಪರವಾಗಿ ನಿನ್ನಲ್ಲಿ ವಿಜ್ಞಾಪಿಸುತ್ತೇನೆ.

ಕೀರ್ತನೆಗಳು ೭೧:೯
ವೃದ್ಧಾಪ್ಯದಲಿ ನನ್ನ ತಳ್ಳಿಬಿಡಬೇಡಯ್ಯಾ I ಶಕ್ತಿ ಕುಂದುತ್ತಿರುವಾಗ ಕೈಬಿಡಬೇಡಯ್ಯಾ II

ಕೀರ್ತನೆಗಳು ೭೧:೧೮
ದೇವಾ, ನರೆಯ ಮುದುಕನಾಗಿರುವಾಗ ನನ್ನ ಕೈ ಬಿಡಬೇಡಯ್ಯಾ I ನಿನ್ನ ಪರಾಕ್ರಮವನು ಮುಂದಿನ ಪೀಳಿಗೆಗೆ ಸಾರುವ ತನಕ ಬೇಡವಯ್ಯಾ I ನಿನ್ನ ಪ್ರತಾಪವನು ತಲತಲಾಂತರದವರೆಗೆ ಪ್ರಕಟಿಸುವೆನಯ್ಯಾ II

ಕೀರ್ತನೆಗಳು 73:26
ನನ್ನ ತನುಮನಗಳೆಲ್ಲವೂ ಸೊರಗಿಹೋದರೂ I ನನ್ನಾತ್ಮದ ಶಕ್ತಿ, ಶಾಶ್ವತ ಸೊತ್ತು ದೇವರು II

ಕೀರ್ತನೆಗಳು 90:10-12
[10] ನಮ್ಮ ಆಯುಷ್ಕಾಲ ಎಪ್ಪತ್ತು ವರುಷ I ಹೆಚ್ಚಾಗಿದ್ದರೆ ಬಲ, ಎಂಬತ್ತು ವರುಷ II[11] ನಿನ್ನ ಕೋಪದಾ ಪ್ರತಾಪವನು ಬಲ್ಲವನಾರು? I ಭಯಂಕರ ರೌದ್ರವನು ಅನುಭವಿಸುವವರಾರು? II[12] ಜೀವನಾವಧಿಯನು ಲೆಕ್ಕಿಸುವುದನು ನಮಗೆ ಕಲಿಸು I ಈ ಪರಿಜ್ಞಾನವುಳ್ಳಂಥ ಹೃದಯವನು ನೀ ಕರುಣಿಸು II

ಕೀರ್ತನೆಗಳು 91:16
ದೀರ್ಘಾಯುಸ್ಸನ್ನಿತ್ತು ತೃಪ್ತಿಪಡಿಸುವೆನು I ನಾನು ನೀಡುವ ಮುಕ್ತಿಯನವನಿಗೆ ಮನಗಾಣಿಸುವೆನು” II

ಜ್ಞಾನೋಕ್ತಿಗಳು 17:6
ಮಕ್ಕಳ ಮಕ್ಕಳು ಮುದುಕರ ಮುಕುಟ; ಮಕ್ಕಳಿಗೆ ಹೆತ್ತವರೇ ಭೂಷಣ.

ಜ್ಞಾನೋಕ್ತಿಗಳು ೨೦:೨೯
ಯುವಕರಿಗೆ ಬಲವೆ ಭೂಷಣ; ಮುದುಕರಿಗೆ ನರೆಯೆ ಕಿರೀಟ.

ಜ್ಞಾನೋಕ್ತಿಗಳು ೨೩:೨೨
ಹೆತ್ತ ತಂದೆಯ ಮಾತಿಗೆ ಕಿವಿಗೊಡು; ಮುಪ್ಪಿನ ತಾಯಿಯನ್ನು ಅಸಡ್ಡೆಮಾಡದಿರು.

ಕೀರ್ತನೆಗಳು ೩೭:೩೫
ದುರುಳನೋರ್ವ ಮಹಾಗರ್ವದಿಂದ ಬಾಳುತ್ತಿದ್ದ I ಹುಲುಸಾಗಿ ಬೆಳೆದ ದೇವದಾರು ಮರದಂತಿದ್ದ II

ಕ್ರಾನಿಕಲ್ಸ್ ೧ ೨೯:೨೮
ಸಿರಿಸಂಪತ್ತು, ಘನತೆ, ಗೌರವ ಹಾಗೂ ದೀರ್ಘಾಯುಷ್ಯ ಇವುಗಳನ್ನು ಅನುಭವಿಸಿದನಂತರ ದಾವೀದನು ಹಣ್ಣುಮುದುಕನಾಗಿ ಮರಣ ಹೊಂದಿದನು. ಅವನ ಉತ್ತರಾಧಿಕಾರಿಯಾಗಿ ಅವನ ಮಗ ಸೊಲೊಮೋನನು ಅರಸನಾದನು.

ಅರಸುಗಳು ೧ ೩:೧೪
ನೀನು ನಿನ್ನ ತಂದೆ ದಾವೀದನಂತೆ ನನ್ನ ಮಾರ್ಗದಲ್ಲೇ ನಡೆದು ನನ್ನ ಆಜ್ಞಾವಿಧಿಗಳನ್ನು ಕೈಗೊಳ್ಳುವುದಾದರೆ ನಿನ್ನ ಆಯುಷ್ಯವನ್ನೂ ಹೆಚ್ಚಿಸುವೆನು,” ಎಂದರು.

ಕೀರ್ತನೆಗಳು ೧೦೩:೫
ಒಳ್ಳೆಯವುಗಳಿಂದ ತುಂಬಿಸುವನು ನನ್ನ ಜೀವಮಾನವನು I ಪುನರುಜ್ಜೀವನಗೊಳಿಸುವನು ಗರುಡನಂತೆ ನನ್ನ ಯೌವನವನು II

ತೀತನಿಗೆ ೨:೩
ಅಂತೆಯೇ, ವೃದ್ಧ ಸ್ತ್ರೀಯರು ಸಭ್ಯರಾಗಿ ವರ್ತಿಸಬೇಕು, ಅವರು ಚಾಡಿಹೇಳಬಾರದು; ಮದ್ಯಾಸಕ್ತರಾಗಿರಬಾರದು;ಸದ್ಬೋಧಕಿಯರಾಗಿರಬೇಕೆಂದು ವಿಧಿಸು.

ತಿಮೊಥೇಯನಿಗ ೧ ೫:೧-೨
[೧] ಹಿರಿಯರನ್ನು ಗದರಿಸಬೇಡ; ಅವರನ್ನು ತಂದೆಯಂತೆ ಭಾವಿಸಿ ಗೌರವದಿಂದ ತಿಳುವಳಿಕೆ ನೀಡು. ಯುವಕರೊಡನೆ ಸೋದರಭಾವನೆಯಿಂದ ವರ್ತಿಸು.[೨] ವೃದ್ಧೆಯರೊಡನೆ ಮಾತೃಭಾವನೆಯಿಂದ ನಡೆದುಕೋ. ಯುವತಿಯರನ್ನು ಅಕ್ಕತಂಗಿಯರೆಂದು ಪರಿಗಣಿಸಿ, ಪರಿಶುದ್ಧ ಭಾವನೆಯಿಂದ ನಡೆದುಕೋ.

ಕೀರ್ತನೆಗಳು ೭೧:೮-೯
[೮] ನಿನ್ನ ಗುಣಗಾನ ನನ್ನ ಬಾಯ್ತುಂಬ I ನಿನ್ನ ಘೋಷಣೆ ನನಗೆ ದಿನವಾದ್ಯಂತ II[೯] ವೃದ್ಧಾಪ್ಯದಲಿ ನನ್ನ ತಳ್ಳಿಬಿಡಬೇಡಯ್ಯಾ I ಶಕ್ತಿ ಕುಂದುತ್ತಿರುವಾಗ ಕೈಬಿಡಬೇಡಯ್ಯಾ II

ಫಿಲಿಪಿಯರಿಗೆ ೩:೨೦-೨೧
[೨೦] ನಾವಾದರೋ ಸ್ವರ್ಗಸಾಮ್ರಾಜ್ಯದ ಪ್ರಜೆಗಳು, ಉದ್ಧಾರಕರಾದ ಪ್ರಭು ಯೇಸುಕ್ರಿಸ್ತರು ಪುನರಾಗಮಿಸುವುದು ಅಲ್ಲಿಂದಲೇ ಎಂದು ಎದುರುನೋಡುತ್ತಿದ್ದೇವೆ.[೨೧] ಅವರು ಸಮಸ್ತವನ್ನು ಸ್ವಾಧೀನಪಡಿಸಿಕೊಳ್ಳುವರು; ನಶ್ವರವಾದ ನಮ್ಮ ದೀನದೇಹಗಳನ್ನು ತಮ್ಮ ಶಕ್ತಿಯಿಂದ ರೂಪಾಂತರಗೊಳಿಸಿ ತಮ್ಮ ತೇಜೋಮಯ ಶರೀರದಂತೆ ಮಾಡುವರು.

ಯೆಶಾಯನ ೪೬:೩-೪
[೩] “ಕಿವಿಗೊಡು, ಓ ಯಕೋಬ ಮನೆತನವೆ, ಅಳಿದುಳಿದಾ ಇಸ್ರಯೇಲಿನ ಮನೆತನವೆ, ಹೊರುತ್ತಿರುವೆ ನಿಮ್ಮನು ಗರ್ಭದಿಂದ ಸಾಕಿ ಸಲಹುತ್ತಿರುವೆ ಹುಟ್ಟಿದಂದಿನಿಂದ.[೪] ನಾನೇ ನಿಮಗೆ ಆಧಾರ ಮುಪ್ಪಿನ ತನಕ ಹೊತ್ತು ಸಲಹುವೆನು ನಿಮ್ಮನು ನರೆಬಂದಾಗ. ಉಂಟುಮಾಡಿದವನು ನಾನೇ, ಹೊರುವವನು ನಾನೇ ಹೌದು, ನಿಮ್ಮನು ಹೊತ್ತು ಸಲಹುವವನು ನಾನೇ.

ಕೀರ್ತನೆಗಳು ೯೨:೧೨-೧೫
[೧೨] ಬೆಳೆಯುವರು ಸಜ್ಜನರು ಖರ್ಜೂರದ ವೃಕ್ಷದಂತೆ I ವೃದ್ಧಿಯಾಗುವರು ಲೆಬನೋನಿನ ದೇವದಾರಿನಂತೆ II[೧೩] ಅವರಿರುವರು ಪ್ರಭುವಿನಾಲಯದಲೆ ನೆಟ್ಟ ಸಸಿಗಳಂತೆ I ನಮ್ಮ ದೇವಾಂಗಳದಿ ಹುಲುಸಾಗಿ ಬೆಳೆವ ಮರಗಳಂತೆ I ಫಲಿಸುವರು ಮುಪ್ಪಿನಲೂ, ಶೋಭಿಸುವರು ಪಚ್ಚೆಪಸಿರಂತೆ II[೧೪] ***[೧೫] ಈ ಪರಿ ಪಡೆವುದು ಸಾಕ್ಷ್ಯ ಪ್ರಭುವಿನಾ ಸತ್ಯಸಂಧತೆ I ಆತನೇ ನನಗೆ ಪೊರೆಬಂಡೆ, ಆತನಲ್ಲಿಲ್ಲ ವಕ್ರತೆ II

ಉಪದೇಷಕ ೧೨:೧-೭
[೧] ಆದುದರಿಂದ ಯೌವನದಲ್ಲಿ ನಿನ್ನ ಸೃಷ್ಟಿಕರ್ತನನ್ನು ಸ್ಮರಿಸಿಕೊ. ಕಷ್ಟಕರವಾದ ದಿನಗಳು ಬರುವುದಕ್ಕೆ ಮುನ್ನ, ಜೀವನ ಬೇಸರವಾಗಿದೆ ಎಂದು ನೀನು ಹೇಳುವುದಕ್ಕೆ ಮುಂಚೆ ಆತನನ್ನು ಸ್ಮರಿಸು.[೨] ಆ ಕಷ್ಟಕರವಾದ ದಿನಗಳಲ್ಲಿ ಸೂರ್ಯಚಂದ್ರನಕ್ಷತ್ರಗಳೂ ನಿನಗೆ ಮೊಬ್ಬಾಗುವುವು. ಮಳೆಯಾದ ಮೇಲೂ ಮೋಡಗಳು ಮತ್ತೆ ಬರುವುವು;[೩] ಬಲಿಷ್ಠವಾಗಿದ್ದ ನಿನ್ನ ಕಾಲುಗಳು ಬಗ್ಗುವುವು; ಹಲ್ಲುಗಳು ಉದುರಿ ಅಗಿಯುವ ಕೆಲಸ ನಿಲ್ಲುವುದು; ಕಿಟಕಿಗಳಂಥ ಕಣ್ಣುಗಳು ಮಂಕಾಗುವುವು.[೪] ಕಿವಿಗಳು ಮಂದವಾಗಿ ಹಾದಿಬೀದಿಗಳ ಶಬ್ದವು ಕೇಳಿಸವು. ಬೀಸುವ ಶಬ್ದವು ತಗ್ಗಿ ಹಕ್ಕಿಯ ಶಬ್ದಗಳಷ್ಟು ಕಿರಿದಾಗುವುದು; ಬೀಸುವವರ ಹಾಡೆಲ್ಲಾ ಕುಗ್ಗಿಹೋಗುವುದು;[೫] ದಾರಿಯಲ್ಲಿ ನಡೆವುದು ಅಪಾಯಕರವಾಗಿರುವುದು; ಹೂಬಿಟ್ಟ ಬಾದಾಮಿ ಮರದಂತೆ ತಲೆಗೂದಲು ನರೆತುಬಿಡುವುದು, ಮಿಡತೆಯು ಕೂಡ ಭಾರವಾಗುವುದು; ಆಸೆ ಕುಂದಿಹೋಗುವುದು. ನಿನ್ನ ನಿತ್ಯಗೃಹಕ್ಕೆ ತೆರಳಿರುವೆ, ಗೋಳಾಟದವರು ಬೀದಿಯಲ್ಲಿ ಕಾಣಿಸಿಕೊಳ್ಳುವರು.[೬] ಬೆಳ್ಳಿಯ ಸರ ಕಿತ್ತುಹೋಗುವುದು, ಚಿನ್ನದಬಟ್ಟಲು ಜಜ್ಜಿಹೋಗುವುದು; ಮಡಕೆ ಬುಗ್ಗೆಯ ಹತ್ತಿರವೆ ಒಡೆಯುವುದು, ಬಾವಿಯ ರಾಟೆ ಮುರಿಯುವುದು.[೭] ಮಣ್ಣಿನ ದೇಹ ತನ್ನ ಭೂಮಿಗೆ ಸೇರಿಹೋಗುವುದು; ಆತ್ಮವು ತನ್ನನ್ನು ದಯಪಾಲಿಸಿದ ದೇವರ ಬಳಿಗೆ ಸೇರುವುದು. (ಇಷ್ಟರೊಳಗೆ ನಿನ್ನ ಸೃಷ್ಟಿಕರ್ತನನ್ನು ಸ್ಮರಿಸದಿರಬೇಡ).

Kannada Bible (KNCL) 2016
No Data