A A A A A

ಒಳ್ಳೆಯ ಅಕ್ಷರ: [ಸ್ವೀಕಾರ]


ಕೊರಿಂಥಿಯರಿಗೆ ೧ 5:11-13
[11] ಆದರೆ ತಾನು ಕ್ರೈಸ್ತ ಸಹೋದರ ಎನಿಸಿಕೊಂಡು, ದುರಾಚಾರಿಯಾಗಿಯೋ ಲೋಭೀಯಾಗಿಯೋ ವಿಗ್ರಹಾರಾಧಕನಾಗಿಯೋ ಪರನಿಂದಕನಾಗಿಯೋ ಕುಡುಕನಾಗಿಯೋ ಸುಲಿಗೆಗಾರನಾಗಿಯೋ ಯಾರಾದರೂ ಇದ್ದರೆ, ಅಂಥವನ ಸಹವಾಸ ನಿಮಗೆ ಸಲ್ಲದು. ಇದು ನನ್ನ ಪತ್ರದ ಉದ್ದೇಶ.[12] ಧರ್ಮಸಭೆಗೆ ಸೇರದೆ ಇರುವವರ ಬಗ್ಗೆ ತೀರ್ಪುಮಾಡುವುದು ನನ್ನ ಕೆಲಸವಲ್ಲ. ಅವರನ್ನು ಕುರಿತು ದೇವರೇ ತೀರ್ಪುನೀಡುವರು. ನೀವು ತೀರ್ಪುಮಾಡಬೇಕಾದುದು ಧರ್ಮಸಭೆಗೆ ಸೇರಿದವರನ್ನು ಕುರಿತು ದುರುಳನನ್ನು ನಿಮ್ಮಿಂದ ದೂರತಳ್ಳಿರಿ.[13] ನಿಮ್ಮಲ್ಲಿ ಒಬ್ಬನಿಗೆ ಮತ್ತೊಬ್ಬನ ಮೇಲೆ ವ್ಯಾಜ್ಯವಿದ್ದರೆ ನ್ಯಾಯವಿಚಾರಣೆಗೆ ದೇವಜನರ ಮುಂದೆ ಹೋಗದೆ, ಅನ್ಯಜನರ ಮುಂದೆ ಹೋಗುವಷ್ಟು ಸೊಕ್ಕು ನಿಮಗೆಲ್ಲಿಂದ ಬಂದಿತು?

ಯೊವಾನ್ನನು ೧ 1:9
ಪ್ರತಿಯಾಗಿ, ನಮ್ಮ ಪಾಪಗಳನ್ನು ಒಪ್ಪಿಕೊಂಡರೆ, ಆಗ ನಂಬಿಕಸ್ಥರೂ ನೀತಿವಂತರೂ ಆದ ದೇವರು ನಮ್ಮ ಪಾಪಗಳನ್ನು ಕ್ಷಮಿಸಿ ಎಲ್ಲಾ ಅನೀತಿ - ಅಧರ್ಮಗಳಿಂದ ನಮ್ಮನ್ನು ಶುದ್ಧೀಕರಿಸುತ್ತಾರೆ.

ಪೇತ್ರನು ೧ 3:8-9
[8] ಕಡೆಯದಾಗಿ ನೀವೆಲ್ಲರೂ ಏಕಮನಸ್ಸುಳ್ಳವರಾಗಿರಿ; ಪರಸ್ಪರ ಸಹಾನುಭೂತಿ ಇರಲಿ. ಒಡಹುಟ್ಟಿದವರಂತೆ ಒಬ್ಬರನ್ನೊಬ್ಬರು ಪ್ರೀತಿಸಿರಿ; ದಯೆತೋರುವವರೂ ದೀನಭಾವವುಳ್ಳವರೂ ಆಗಿರಿ.[9] ಮುಯ್ಯಿಗೆ ಮುಯ್ಯಿ ತೀರಿಸಬೇಡಿರಿ; ಶಾಪಕ್ಕೆ ಪ್ರತಿಶಾಪ ಹಾಕದೆ ಆಶೀರ್ವಾದ ಮಾಡಿರಿ. ಹೀಗೆ ಮಾಡಿದರೆ ದೇವರ ಆಶೀರ್ವಾದವನ್ನು ಬಾಧ್ಯವಾಗಿ ಪಡೆಯುವಿರಿ.

ಯೊವಾನ್ನನು 3:16
ದೇವರು ಲೋಕವನ್ನು ಎಷ್ಟಾಗಿ ಪ್ರೀತಿಸಿದರೆಂದರೆ ತಮ್ಮ ಏಕೈಕ ಪುತ್ರನನ್ನೇ ಧಾರೆಯೆರೆದರು; ಆತನಲ್ಲಿ ವಿಶ್ವಾಸವಿಟ್ಟ ಯಾರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂಬುದೇ ದೇವರ ಉದ್ದೇಶ.

ಜ್ಞಾನೋಕ್ತಿಗಳು 13:20
ಸುಜ್ಞಾನಿಗಳ ಸಹವಾಸದಿಂದ ಜನರು ಸುಜ್ಞಾನಿಗಳಾಗುವರು; ಅಜ್ಞಾನಿಗಳ ಒಡನಾಟದಿಂದ ಸಂಕಟಪಡುವರು.

ರೋಮನರಿಗೆ 2:11
ದೇವರು ಪಕ್ಷಪಾತಿ ಅಲ್ಲ.

ರೋಮನರಿಗೆ 5:8
ಆದರೆ ನಾವಿನ್ನೂ ಪಾಪಿಗಳಾಗಿರುವಾಗಲೇ ಕ್ರಿಸ್ತಯೇಸು ನಮಗೋಸ್ಕರ ಪ್ರಾಣತ್ಯಾಗ ಮಾಡಿದರು. ಇದರಿಂದ ನಮ್ಮ ಮೇಲೆ ದೇವರಿಗಿರುವ ಪ್ರೀತಿ ಎಷ್ಟೆಂದು ವ್ಯಕ್ತವಾಗುತ್ತದೆ.

ರೋಮನರಿಗೆ 8:31
ಹೀಗಿರುವಲ್ಲಿ ನಾವು ಏನು ಹೇಳೋಣ? ದೇವರೇ ನಮ್ಮ ಪರ ಇರುವಾಗ ನಮ್ಮನ್ನು ವಿರೋಧಿಸುವವರು ಯಾರು?

ರೋಮನರಿಗೆ 14:1-2
[1] ವಿಶ್ವಾಸದಲ್ಲಿ ಸ್ಥಿರವಿಲ್ಲದವರನ್ನೂ ನಿಮ್ಮ ಸಂಗಡ ಸೇರಿಸಿಕೊಳ್ಳಿರಿ. ಆದರೆ ವೈಯಕ್ತಿಕ ಅಭಿಪ್ರಾಯಗಳ ಬಗ್ಗೆ ವಾಗ್ವಾದ ನಡೆಸಬೇಡಿ.[2] ಒಬ್ಬನು ಎಂಥ ಆಹಾರವನ್ನಾದರೂ ಭುಜಿಸಬಹುದೆಂದು ಭಾವಿಸುತ್ತಾನೆ. ವಿಶ್ವಾಸದಲ್ಲಿ ಸ್ಥಿರವಿಲ್ಲದವನು ಸಸ್ಯಾಹಾರಿ ಆಗಿಯೇ ಇರುತ್ತಾನೆ.

ಹಿಬ್ರಿಯರಿಗೆ ೧೦:೨೪-೨೫
[೨೪] ಪರಸ್ಪರ ಹಿತಚಿಂತಕರಾಗಿರೋಣ; ಪ್ರೀತಿಸಬೇಕು, ಒಳಿತನ್ನು ಮಾಡಬೇಕು ಎಂದು ಒಬ್ಬರನ್ನೊಬ್ಬರು ಹುರಿದುಂಬಿಸೋಣ.[೨೫] ಸಭೆ ಸೇರುವ ರೂಢಿಯನ್ನು ಕೆಲವರು ಕೈಬಿಟ್ಟಿದ್ದಾರೆ. ನಾವು ಹಾಗೆ ಮಾಡದಿರೋಣ. ನಿಮಗೆ ತಿಳಿದಿರುವಂತೆ ಪ್ರಭು ಪ್ರತ್ಯಕ್ಷರಾಗುವ ದಿನವು ಸಮೀಪಿಸುತ್ತಿರುವುದರಿಂದ ಮತ್ತಷ್ಟು ಹೆಚ್ಚಾಗಿ ಒಬ್ಬರನ್ನೊಬ್ಬರು ಪ್ರೋತ್ಸಾಹಿಸೋಣ.

ಯೊವಾನ್ನನು ೬:೩೫-೩೭
[೩೫] ಆಗ ಯೇಸು, “ನಾನೇ ಜೀವದಾಯಕ ರೊಟ್ಟಿ, ನನ್ನ ಬಳಿ ಬರುವವನಿಗೆ ಹಸಿವೇ ಇರದು; ನನ್ನಲ್ಲಿ ವಿಶ್ವಾಸವಿಡುವವನಿಗೆ ಎಂದಿಗೂ ದಾಹವಾಗದು.[೩೬] ಆದರೆ, ನಾನು ನಿಮಗೆ ಹೇಳಿದಂತೆ, ನೀವು ನನ್ನನ್ನು ನೋಡಿಯೂ ವಿಶ್ವಾಸಿಸದೆ ಇದ್ದೀರಿ.[೩೭] ಪಿತನು ನನಗೆಂದು ಕೊಟ್ಟಿರುವ ಪ್ರತಿಯೊಬ್ಬನೂ ನನ್ನಲ್ಲಿಗೆ ಬರುತ್ತಾನೆ. ನನ್ನಲ್ಲಿಗೆ ಬರುವವನನ್ನು ನಾನೆಂದಿಗೂ ತಳ್ಳಿಬಿಡುವುದಿಲ್ಲ.

ಕೊಲೊಸ್ಸೆಯರಿಗೆ ೩:೧೨-೧೪
[೧೨] ನೀವು ದೇವರಿಂದ ಆಯ್ಕೆಯಾದವರು. ದೇವರಿಗೆ ಪ್ರಿಯವಾದವರು. ದೇವರ ಸ್ವಂತಜನರು. ಹೀಗಿರಲಾಗಿ ಕನಿಕರ, ದಯೆ, ದೀನತೆ, ವಿನಯಶೀಲತೆ, ಶಾಂತಿ, ಸಹನೆ ಎಂಬ ಸದ್ಗುಣಗಳೇ ನಿಮ್ಮ ಆಭರಣಗಳಾಗಿರಲಿ.[೧೩] ಒಬ್ಬರನ್ನೊಬ್ಬರು ಸೈರಿಸಿಕೊಳ್ಳಿ. ಒಬ್ಬನ ಮೇಲೆ ತಪ್ಪುಹೊರಿಸಲು ಕಾರಣವಿದ್ದರೂ ಕ್ಷಮಿಸಿಬಿಡಿ. ಪ್ರಭು ಯೇಸು ನಿಮ್ಮನ್ನು ಕ್ಷಮಿಸಿದಂತೆ ನೀವೂ ಇತರರನ್ನು ಕ್ಷಮಿಸಿರಿ.[೧೪] ಎಲ್ಲಕ್ಕಿಂತ ಮಿಗಿಲಾಗಿ ನಿಮ್ಮಲ್ಲಿ ಪ್ರೀತಿಯಿರಲಿ. ಪ್ರೀತಿಯೇ ಸಮಸ್ತವನ್ನು ಸಂಪೂರ್ಣಗೊಳಿಸುವ ಬಂಧನ.

ಮತ್ತಾಯನು ೫:೩೮-೪೨
[೩೮] “ ‘ಕಣ್ಣಿಗೆ ಪ್ರತಿಯಾಗಿ ಕಣ್ಣು, ಹಲ್ಲಿಗೆ ಬದಲಾಗಿ ಹಲ್ಲು’ ಎಂಬುದನ್ನು ನೀವು ಕೇಳಿದ್ದೀರಿ.[೩೯] ಆದರೆ ನನ್ನ ಬೋಧೆ ಇದು; ನಿನಗೆ ಅಪಕಾರ ಮಾಡಿದವನಿಗೆ ಪ್ರತೀಕಾರ ಮಾಡಬೇಡ. ನಿನ್ನ ಬಲಗೆನ್ನೆಗೆ ಒಬ್ಬನು ಹೊಡೆದರೆ ಇನ್ನೊಂದು ಕೆನ್ನೆಯನ್ನೂ ಒಡ್ಡು.[೪೦] ನಿನ್ನೊಡನೆ ವ್ಯಾಜ್ಯಮಾಡಿ ನಿನ್ನ ಒಳ ಅಂಗಿಯನ್ನು ಕಿತ್ತುಕೊಳ್ಳುವವನಿಗೆ ಹೊರ ಅಂಗಿಯನ್ನೂ ಕೊಟ್ಟುಬಿಡು.[೪೧] ಯಾರಾದರೂ ಒಂದು ಕಿಲೊಮೀಟರ್ ದೂರ ಬಾ ಎಂದು ನಿನ್ನನ್ನು ಒತ್ತಾಯಪಡಿಸಿದರೆ ಅವನೊಡನೆ ಎರಡು ಕಿಲೊಮೀಟರ್ ಹೋಗು;[೪೨] ಬೇಡಿಕೊಳ್ಳುವವನಿಗೆ ಕೊಡು. ಸಾಲ ಕೇಳಬಂದವನಿಂದ ಮುಖ ತಿರುಗಿಸಿಕೊಳ್ಳಬೇಡ.”

ಮತ್ತಾಯನು ೨೫:೩೪-೪೦
[೩೪] ಆಗ ಅರಸನು ತನ್ನ ಬಲಗಡೆಯಿರುವ ಜನರಿಗೆ, ‘ನನ್ನ ಪಿತನಿಂದ ಧನ್ಯರೆನಿಸಿಕೊಂಡವರೇ, ಬನ್ನಿ. ಲೋಕಾದಿಯಿಂದ ನಿಮಗಾಗಿ ಸಿದ್ಧಮಾಡಿದ ಸಾಮ್ರಾಜ್ಯವನ್ನು ಸ್ವಾಸ್ತ್ಯವಾಗಿ ಪಡೆಯಿರಿ.[೩೫] ಏಕೆಂದರೆ, ನಾನು ಹಸಿದಿದ್ದೆ, ನನಗೆ ಆಹಾರ ಕೊಟ್ಟಿರಿ; ಬಾಯಾರಿದ್ದೆ, ಕುಡಿಯಲು ಕೊಟ್ಟಿರಿ; ಅಪರಿಚಿತನಾಗಿದ್ದೆ, ನನಗೆ ಆಶ್ರಯ ಕೊಟ್ಟಿರಿ.[೩೬] ಬಟ್ಟೆಬರೆಯಿಲ್ಲದೆ ಇದ್ದೆ, ನನಗೆ ಉಡಲು ಕೊಟ್ಟಿರಿ. ರೋಗದಿಂದಿದ್ದೆ, ನನ್ನನ್ನು ಆರೈಕೆಮಾಡಿದಿರಿ. ಬಂಧಿಯಾಗಿದ್ದೆ, ನೀವು ನನ್ನನ್ನು ಸಂಧಿಸಿದಿರಿ,’ ಎಂದು ಹೇಳುವನು.[೩೭] ಅದಕ್ಕೆ ಆ ಸಜ್ಜನರು, ‘ಸ್ವಾಮೀ, ತಾವು ಯಾವಾಗ ಹಸಿದಿದ್ದನ್ನು ಕಂಡು ನಾವು ಆಹಾರ ಕೊಟ್ಟೆವು? ಬಾಯಾರಿದ್ದನ್ನು ಕಂಡು ಕುಡಿಯಲು ಕೊಟ್ಟೆವು?[೩೮] ಯಾವಾಗ ತಾವು ಅಪರಿಚಿತರಾಗಿದ್ದನ್ನು ಕಂಡು ನಾವು ಆಶ್ರಯಕೊಟ್ಟೆವು? ಬಟ್ಟೆಬರೆಯಿಲ್ಲದ್ದನ್ನು ಕಂಡು ಉಡಲು ಕೊಟ್ಟೆವು?[೩೯] ತಾವು ರೋಗಿಯಾಗಿರುವುದನ್ನು ಅಥವಾ ಬಂಧಿಯಾಗಿರುವುದನ್ನು ಕಂಡು ನಾವು ಸಂಧಿಸಲು ಬಂದೆವು?’ ಎಂದು ಕೇಳುವರು.[೪೦] ಆಗ ಅರಸನು ಪ್ರತ್ಯುತ್ತರವಾಗಿ, ‘ಈ ನನ್ನ ಸೋದರರಲ್ಲಿ ಒಬ್ಬನಿಗೆ, ಅವನೆಷ್ಟೇ ಕನಿಷ್ಟನಾಗಿರಲಿ, ನೀವು ಹೀಗೆ ಮಾಡಿದಾಗಲೆಲ್ಲಾ ಅದನ್ನು ನನಗೇ ಮಾಡಿದಿರಿ, ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ,’ ಎನ್ನುವನು.

ರೋಮನರಿಗೆ ೧೫:೧-೭
[೧] ವಿಶ್ವಾಸದಲ್ಲಿ ದೃಢವಾಗಿರುವ ನಾವು ನಮ್ಮ ಹಿತವನ್ನೇ ಬಯಸದೆ ವಿಶ್ವಾಸದಲ್ಲಿ ದೃಢವಲ್ಲದವರ ಲೋಪದೋಷಗಳನ್ನು ಸಹಿಸಿಕೊಳ್ಳಬೇಕು.[೨] ನಮ್ಮಲ್ಲಿ ಪ್ರತಿಯೊಬ್ಬನು ತನ್ನ ನೆರೆಯವನ ಹಿತವನ್ನೇ ಬಯಸಿ, ವಿಶ್ವಾಸದಲ್ಲಿ ಅವನು ಮತ್ತಷ್ಟು ಪ್ರವರ್ಧಿಸುವಂತೆ ನೆರವಾಗಬೇಕು.[೩] ಕ್ರಿಸ್ತಯೇಸು ತಮ್ಮ ಸ್ವಂತ ಹಿತವನ್ನು ಎಂದಿಗೂ ಬಯಸಲಿಲ್ಲ. “ದೇವರೇ, ನಿಮ್ಮನ್ನು ದೂಷಿಸಿದವರ ದೂಷಣೆಗಳು ನನ್ನ ಮೇಲೆ ಎರಗಿವೆ,” ಎಂದು ಲಿಖಿತವಾಗಿರುವ ವಾಕ್ಯ ಅವರಿಗೆ ಅನ್ವಯಿಸುತ್ತದೆ.[೪] ಪ್ರಾಚೀನ ಗ್ರಂಥಗಳಲ್ಲಿ ಬರೆದಿರುವುದೆಲ್ಲವೂ ನಮ್ಮ ಉಪದೇಶಕ್ಕಾಗಿಯೇ ಬರೆಯಲಾಗಿದೆ. ಪವಿತ್ರಗ್ರಂಥ ಪಠನದಿಂದ ದೊರಕುವ ಸ್ಥೈರಣೆ ಮತ್ತು ಉತ್ತೇಜನದಿಂದಾಗಿ ನಾವು ನಿರೀಕ್ಷೆಯುಳ್ಳವರಾಗಬೇಕೆಂದೇ ಇವೆಲ್ಲಾ ಬರೆಯಲಾಗಿದೆ.[೫] ಆ ಸ್ಥೈರಣೆ ಮತ್ತು ಉತ್ತೇಜನದ ಮೂಲವಾಗಿರುವ ದೇವರು, ನೀವೆಲ್ಲರು ಕ್ರಿಸ್ತಯೇಸುವನ್ನು ಅನುಸರಿಸುತ್ತಾ ಒಮ್ಮನಸ್ಸಿನಿಂದ ಬಾಳುವಂತೆ ಮಾಡಲಿ.[೬] ಹೀಗೆ ಒಮ್ಮನಸ್ಸಿನಿಂದಲೂ ಒಕ್ಕೊರಲಿನಿಂದಲೂ ನಮ್ಮ ಪ್ರಭು ಯೇಸುಕ್ರಿಸ್ತರ ತಂದೆಯಾದ ದೇವರನ್ನು ಕೊಂಡಾಡುವಂತಾಗಲಿ.[೭] ಕ್ರಿಸ್ತಯೇಸು ನಿಮ್ಮನ್ನು ಅಂಗೀಕರಿಸಿದಂತೆ ದೇವರ ಮಹಿಮೆಗಾಗಿ ನೀವು ಸಹ ಒಬ್ಬರನ್ನು ಒಬ್ಬರು ಅಂಗೀಕರಿಸಿರಿ.

ರೋಮನರಿಗೆ ೧೪:೧೦-೧೯
[೧೦] ಹೀಗಿರುವಲ್ಲಿ ಸಸ್ಯಾಹಾರಿಯೇ, ನೀನು ನಿನ್ನ ಸಹೋದರನನ್ನು ದೋಷಿಯೆಂದು ತೀರ್ಪಿಡುವುದೇಕೆ? ಮಾಂಸಹಾರಿಯೇ, ನಿನ್ನ ಸಹೋದರನನ್ನು ಹೀನೈಸುವುದೇಕೆ? ನಾವೆಲ್ಲರೂ ದೇವರ ನ್ಯಾಯಸ್ಥಾನದ ಮುಂದೆ ನಿಲ್ಲಬೇಕಲ್ಲವೆ?[೧೧] ಪವಿತ್ರಗ್ರಂಥದಲ್ಲಿ: ಎಲ್ಲರೂ ನನಗೆ ಸಾಷ್ಟಾಂಗವೆರಗುವರು ಎಲ್ಲರೂ ನನ್ನನ್ನು ದೇವರೆಂದು ನಿವೇದಿಸುವರು ಇದಕ್ಕೆ ಜೀವಸ್ವರೂಪನಾದ ನಾನೇ ಸಾಕ್ಷಿ,” ಎಂದು ಸರ್ವೇಶ್ವರಸ್ವಾಮಿ ಹೇಳಿದ್ದಾರೆ.[೧೨] ನಮ್ಮಲ್ಲಿ ಪ್ರತಿಯೊಬ್ಬನೂ ತನ್ನ ತನ್ನ ವಿಷಯವಾಗಿ ದೇವರಿಗೆ ಲೆಕ್ಕವನ್ನು ಒಪ್ಪಿಸಬೇಕು.[೧೩] ಆದಕಾರಣ ಒಬ್ಬರ ವಿಷಯದಲ್ಲಿ ಒಬ್ಬರು ತೀರ್ಪುಮಾಡದೆ ಇರೋಣ. ಬದಲಾಗಿ ಸಹೋದರನಿಗೆ ಯಾವ ರೀತಿಯ ಅಡ್ಡಿಯನ್ನಾಗಲೀ ಅಡಚಣೆಗಳನ್ನಾಗಲೀ ಉಂಟುಮಾಡುವುದಿಲ್ಲವೆಂದು ತೀರ್ಮಾನಿಸಿಕೊಳ್ಳಿ.[೧೪] ಯಾವ ಪದಾರ್ಥವು ಸ್ವತಃ ಅಶುದ್ಧವಲ್ಲವೆಂದು ಪ್ರಭುಯೇಸುವಿನಲ್ಲಿ ನಾನು ಖಚಿತವಾಗಿ ಹೇಳಬಲ್ಲೆ. ಆದರೆ, ಒಂದು ಪದಾರ್ಥವನ್ನು ಅಶುದ್ಧವೆಂದು ಯಾರಾದರೂ ಭಾವಿಸಿದರೆ ಅದು ಅವನಿಗೆ ಅಶುದ್ಧವೇ ಆಗುತ್ತದೆ.[೧೫] ನೀನು ಏನನ್ನಾದರೂ ತಿನ್ನುವುದರಿಂದ ನಿನ್ನ ಸಹೋದರನ ಮನಸ್ಸಿಗೆ ನೋವುಂಟಾಗುವುದಾದರೆ ನಿನ್ನ ಆ ವರ್ತನೆ ಪ್ರೀತಿಪ್ರೇರಿತವಾದುದಲ್ಲ. ಯಾರಿಗೋಸ್ಕರ ಕ್ರಿಸ್ತಯೇಸು ಪ್ರಾಣಾರ್ಪಣೆ ಮಾಡಿದರೋ ಅಂಥವನಿಗೆ ನೀನು ತಿನ್ನುವ ಆಹಾರದಿಂದಾಗಿ ನಾಶವನ್ನು ತರಬಾರದು.[೧೬] ನಿನಗೆ ರುಚಿಕರವಾದದ್ದು ಪರರಿಗೆ ದೂಷಣಾಸ್ಪದವಾಗದಿರಲಿ.[೧೭] ಏಕೆಂದರೆ, ದೇವರ ಸಾಮ್ರಾಜ್ಯ ತಿನ್ನುವುದರಲ್ಲಿ, ಕುಡಿಯುವುದರಲ್ಲಿ ಅಲ್ಲ, ಪವಿತ್ರಾತ್ಮ ಅವರಿಂದ ಬರುವ ಸತ್ಸಂಬಂಧ, ಶಾಂತಿಸಮಾಧಾನ ಮತ್ತು ಸಂತೋಷ ಇವುಗಳಲ್ಲಿ ಅಡಗಿದೆ.[೧೮] ಹೀಗೆ ಕ್ರಿಸ್ತಯೇಸುವಿಗೆ ಸೇವೆಮಾಡುವವನು, ದೇವರಿಂದ ಮೆಚ್ಚುಗೆಯನ್ನು ಮತ್ತು ಮನುಷ್ಯರಿಂದ ಮಾನ್ಯತೆಯನ್ನು ಪಡೆಯುತ್ತಾನೆ.[೧೯] ಆದ್ದರಿಂದ ಶಾಂತಿಸಮಾಧಾನಕ್ಕೂ ಪರಸ್ಪರ ಅಭ್ಯುದಯಕ್ಕೂ ಹಿತಕರವಾದವುಗಳನ್ನೇ ಅರಸೋಣ.

Kannada Bible (KNCL) 2016
No Data