Instagram
English
A A A A A

ದೇವರು: [Фінансове благословення]
ಸಮುವೇಲನು ೧ 2:7
Господь робить убогим і багатим, принижує, але й підносить угору.

ಕೊರಿಂಥಿಯರಿಗೆ ೨ 8:9
ಪ್ರಭು ಯೇಸುಕ್ರಿಸ್ತರ ಕೃಪಾಶಕ್ತಿಯನ್ನು ನೀವು ಬಲ್ಲಿರಿ. ಅವರು ತಮ್ಮ ಬಡತನದಿಂದ ನಿಮ್ಮನ್ನು ಶ್ರೀಮಂತವಾಗಿಸಲೆಂದು, ತಾವು ಶ್ರೀಮಂತರಾಗಿದ್ದರೂ ನಿಮಗೋಸ್ಕರ ಬಡವರಾದರು.

ಯೊವಾನ್ನನು ಮೂರು 1:2
ಪ್ರಿಯನೇ, ಎಲ್ಲಾ ವಿಷಯಗಳಲ್ಲಿ ನಿನಗೆ ಶುಭವನ್ನು ಕೋರುತ್ತೇನೆ; ನಿನ್ನ ಸುಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇನೆ. ಆತ್ಮದ ವಿಷಯದಲ್ಲಿ ನೀನು ಅಭಿವೃದ್ಧಿಗೊಳ್ಳುತ್ತಿರುವೆ ಎಂದು ನಂಬಿದ್ದೇನೆ.

ಉಪದೇಷಕ 9:10
ನಿನ್ನ ಕೈಗೆ ಸಿಕ್ಕಿದ ಕೆಲಸವನ್ನೆಲ್ಲ ಪೂರ್ಣಶಕ್ತಿಯಿಂದ ಮಾಡು. ಏಕೆಂದರೆ ನೀನು ಹೋಗಲಿಕ್ಕಿರುವ ಪಾತಾಳದಲ್ಲಿ ಯಾವ ಕೆಲಸವೂ ಯೋಜನೆಯೂ ತಿಳುವಳಿಕೆಯೂ ಜ್ಞಾನವೂ ಇರುವುದಿಲ್ಲ.

ಗಲಾತ್ಯರಿಗೆ 6:9
ಸತ್ಕಾರ್ಯಗಳನ್ನು ಮಾಡುವುದರಲ್ಲಿ ಬೇಸರಪಡದಿರೋಣ, ಎದೆಗುಂದದಿರೋಣ; ಆಗ ಸೂಕ್ತಕಾಲದಲ್ಲಿ ಸತ್ಫಲವನ್ನು ಕೊಯ್ಯುವೆವು.

ಆದಿಕಾಂಡ ೧೩:೨
ಈಗ ಅವನಿಗೆ ಪಶುಪ್ರಾಣಿಗಳಿದ್ದವು. ಬೆಳ್ಳಿಬಂಗಾರವಿತ್ತು. ಅವನೀಗ ಘನಧನವಂತನಾಗಿದ್ದನು.

ಹೊಶೇಯನ 4:6
ಜನರು ಜ್ಞಾನಹೀನರಾಗಿ ಅಳಿದುಹೋಗುತ್ತಿದ್ದಾರೆ. “ನೀವು ದೈವಜ್ಞಾನವನ್ನು ತಿರಸ್ಕರಿಸಿದ್ದೀರಿ; ನಾನು ಸಹ ಯಾಜಕವರ್ಗದಿಂದ ನಿಮ್ಮನ್ನು ವರ್ಜಿಸಿಬಿಡುತ್ತೇನೆ. ನೀವು ದೇವರ ಧರ್ಮೋಪದೇಶವನ್ನು ಮರೆತುಬಿಟ್ಟಿದ್ದೀರಿ; ನಾನು ನಿಮ್ಮ ಮಕ್ಕಳನ್ನು ಮರೆತುಬಿಡುತ್ತೇನೆ.

ಯಕೋಬನು 5:12
ಮುಖ್ಯವಾಗಿ ಸಹೋದರರೇ, ಆಣೆಯಿಡಬೇಡಿ. ಪರಲೋಕದ ಮೇಲಾಗಲಿ, ಭೂಲೋಕದ ಮೇಲಾಗಲಿ, ಇನ್ನಾವುದರ ಮೇಲಾಗಲಿ ನೀವು ಆಣೆಯಿಡಬಾರದು. ಹೌದಾದರೆ ಹೌದು, ಇಲ್ಲವಾದರೆ ಇಲ್ಲ ಎನ್ನಿ. ಆಗ ನೀವು ದಂಡನಾತೀರ್ಪಿಗೆ ಗುರಿಯಾಗುವುದಿಲ್ಲ.

ಯೊವಾನ್ನನು 6:12
ಅವರೆಲ್ಲರೂ ತಿಂದು ತೃಪ್ತರಾದ ಮೇಲೆ ಯೇಸು, “ತಿಂದುಳಿದ ತುಂಡುಗಳನ್ನೆಲ್ಲಾ ಒಟ್ಟುಗೂಡಿಸಿರಿ; ಒಂದು ತುಂಡೂ ಹಾಳಾಗಬಾರದು,” ಎಂದು ತಮ್ಮ ಶಿಷ್ಯರಿಗೆ ಹೇಳಿದರು.

ಲೂಕನು 6:38
ಪರರನ್ನು ಕ್ಷಮಿಸಿರಿ, ದೇವರು ನಿಮ್ಮನ್ನೂ ಕ್ಷಮಿಸುವರು; ಪರರಿಗೆ ಕೊಡಿ, ದೇವರು ನಿಮಗೂ ಕೊಡುವರು; ಅಳತೆಯಲ್ಲಿ ತುಂಬಿ, ಕುಲುಕಿ, ಅದುಮಿ ತುಳುಕುವಂತೆ ಅಳೆದು ನಿಮ್ಮ ಮಡಿಲಿಗೆ ಹಾಕುವರು. ನೀವು ಕೊಟ್ಟ ಅಳತೆಯಲ್ಲೇ ದೇವರು ನಿಮಗೂ ಅಳೆದುಕೊಡುವರು,” ಎಂದರು.

ಲೂಕನು 12:34
ನಿಮ್ಮ ನಿಧಿ ಎಲ್ಲಿದೆಯೋ ಅಲ್ಲೇ ಇರುವುದು ನಿಮ್ಮ ಹೃದಯ.

ಜ್ಞಾನೋಕ್ತಿಗಳು ೧೦:೨೨
ಸರ್ವೇಶ್ವರನ ಆಶೀರ್ವಾದ ಭಾಗ್ಯದಾಯಕ; ಅದಕ್ಕೆ ಬಾಹಿರವಾದುದು ಕಷ್ಟದುಃಖ.

ಜ್ಞಾನೋಕ್ತಿಗಳು 11:14
ನಾಯಕನಿಲ್ಲದ ಜನತೆ ನಾಶವಾಗುವುದು; ಹಲವರು ಸುಮಂತ್ರಿಗಳಿರುವಲ್ಲಿ ಸಂರಕ್ಷಣೆ ಇರುವುದು.

ಜ್ಞಾನೋಕ್ತಿಗಳು 19:17
ಬಡವರಿಗೆ ತೋರುವ ದಯೆ ಸರ್ವೇಶ್ವರನಿಗೆ ಕೊಟ್ಟ ಸಾಲ; ಆ ಉಪಕಾರಕ್ಕೆ ಸರ್ವೇಶ್ವರನಿಂದಲೆ ಪ್ರತ್ಯುಪಕಾರ.

ಜ್ಞಾನೋಕ್ತಿಗಳು 21:17
ಭೋಗಾಸಕ್ತನು ಬಡವನಾಗುವನು, ಮಧ್ಯಸುಗಂಧಗಳನ್ನು ಬಯಸುವವನು ಧನವಂತನಾಗನು.

ಜ್ಞಾನೋಕ್ತಿಗಳು ೨೨:೯
ಉದಾರ ದೃಷ್ಟಿಯುಳ್ಳವನು ಆಶೀರ್ವದಿತನು; ಆಹಾರವನ್ನು ಬಡವರೊಂದಿಗೆ ಆತ ಹಂಚಿಕೊಳ್ಳುವನು.

ಜ್ಞಾನೋಕ್ತಿಗಳು 28:22-27
[22] ಆಸ್ತಿ ಗಳಿಸಲು ಲೋಭಿಗೆ ಆತುರ; ತನಗೆ ಕೊರತೆ ಕಾದಿದೆಯೆಂದು ಆತ ಅರಿಯ.[23] ಮುಖಸ್ತುತಿ ಮಾಡುವವನಿಗಿಂತ ಗದರಿಸುವವನೇ ಕೊನೆಗೆ ಹೆಚ್ಚು ದಯಾವಂತ.[24] “ಅದು ತಪ್ಪಲ್ಲ” ಎಂದು ಹೆತ್ತವರ ಆಸ್ತಿಯನ್ನು ಕದಿಯುವವನು ಕೊಳ್ಳೆ ಹೊಡೆಯುವವರ ಸಂಗಡಿಗನು.[25] ಅತ್ಯಾಸೆಪಡುವವನು ಜಗಳವೆಬ್ಬಿಸುವನು; ಸರ್ವೇಶ್ವರನಲ್ಲಿ ಭರವಸೆಯಿಟ್ಟವನು ಬಲಿಷ್ಠನು.[26] ತನ್ನ ಶಕ್ತಿಯಲ್ಲೆ ಭರವಸೆ ಇಡುವವನು ಮೂಢನು; ಜ್ಞಾನಿಗಳ ಮಾರ್ಗದಲ್ಲಿ ನಡೆವವನು ವಿಮುಕ್ತನಾಗುವನು.[27] ಬಡವರಿಗೆ ಕೊಡುವವನು ಕೊರತೆಪಡನು; ಅವರನ್ನು ಕಂಡೂ ಕಾಣದಂತೆ ಇರುವವನು ಬಹುಶಾಪಗ್ರಸ್ಥನು.

ಕೀರ್ತನೆಗಳು 24:1
ಪೊಡವಿಯೂ ಅದರಲ್ಲಿರುವುದೆಲ್ಲವೂ ಪ್ರಭುವಿನದೇ I ಜಗವೂ ಅದರ ಜೀವಜಂತುಗಳೆಲ್ಲವೂ ಆತನದೇ II

ಮತ್ತಾಯನು 6:33
ನೀವಾದರೋ ಮೊದಲು ದೇವರ ಸಾಮ್ರಾಜ್ಯಕ್ಕಾಗಿ, ಅವರ ಸತ್ಸಂಬಂಧಕ್ಕಾಗಿ ತವಕಪಡಿ. ಇದರೊಂದಿಗೆ ಅವೆಲ್ಲವೂ ನಿಮಗೆ ನೀಡಲಾಗುವುದು.

ಮತ್ತಾಯನು 23:23
ಕಪಟ ಧರ್ಮಶಾಸ್ತ್ರಿಗಳೇ, ಫರಿಸಾಯರೇ, ನಿಮಗೆ ಧಿಕ್ಕಾರ! ನೀವು ಪುದೀನ, ಸದಾಪ, ಜೀರಿಗೆ ಮುಂತಾದವುಗಳ ದಶಾಂಶವನ್ನು ದೇವರಿಗೆ ಸಲ್ಲಿಸುತ್ತೀರಿ. ಆದರೆ ಧರ್ಮಶಾಸ್ತ್ರದಲ್ಲಿ ಪ್ರಮುಖವಾದ ನ್ಯಾಯನೀತಿ, ದಯೆದಾಕ್ಷಿಣ್ಯ, ಪ್ರಾಮಾಣಿಕತೆ ಇವುಗಳನ್ನು ಬದಿಗೊತ್ತಿದ್ದೀರಿ. ನೀವು ಅವುಗಳನ್ನು ಅಲಕ್ಷ್ಯಮಾಡಬೇಕೆಂದು ಅಲ್ಲ, ಆದರೆ ಇವುಗಳನ್ನೂ ಅನುಷ್ಠಾನಕ್ಕೆ ತರಲೇಬೇಕಿತ್ತು.

ಮತ್ತಾಯನು ೨೫:೨೧
ಅದಕ್ಕೆ ಆ ಧಣಿ, “ಭಲಾ, ನೆಚ್ಚಿನ ಸೇವಕ, ನೀನು ಪ್ರಾಮಾಣಿಕ, ಈ ಚಿಕ್ಕ ಕಾರ್ಯದಲ್ಲಿ ಪ್ರಾಮಾಣಿಕನಾಗಿದ್ದ ನಿನಗೆ ದೊಡ್ಡ ಜವಾಬ್ದಾರಿಯನ್ನೇ ವಹಿಸುತ್ತೇನೆ. ಬಾ, ನಿನ್ನ ಧಣಿಯ ಸೌಭಾಗ್ಯದಲ್ಲಿ ಭಾಗಿಯಾಗು,’ ಎಂದ.

ರೋಮನರಿಗೆ ೧೩:೮
ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಋಣವೇ ಹೊರತು ಬೇರೆ ಯಾವ ವಿಧವಾದ ಋಣವೂ ನಿಮಗಿರಬಾರದು. ಏಕೆಂದರೆ ಪರರನ್ನು ಪ್ರೀತಿಸುವವನು ಧರ್ಮಶಾಸ್ತ್ರವನ್ನು ಪೂರ್ಣವಾಗಿ ನೆರವೇರಿಸಿದವನು.

ಜ್ಞಾನೋಕ್ತಿಗಳು ೩:೯-೧೦
[೯] ನಿನ್ನ ಆಸ್ತಿಯನ್ನರ್ಪಿಸಿ ಸರ್ವೇಶ್ವರನನ್ನು ಸನ್ಮಾನಿಸು, ನಿನ್ನ ಬೆಳೆಯ ಪ್ರಥಮ ಫಲವನ್ನು ಕಾಣಿಕೆಯಾಗಿಕೊಡು.[೧೦] ಆಗ ನಿನ್ನ ಕಣಜಗಳು ದವಸಧಾನ್ಯದಿಂದ ಭರ್ತಿಯಾಗುವುವು, ನಿನ್ನ ತೊಟ್ಟಿಗಳು ದ್ರಾಕ್ಷಾರಸದಿಂದ ತುಂಬಿ ತುಳುಕುವುವು.

ಕೀರ್ತನೆಗಳು ೧೨೧:೧-೨
[೧] (ಯಾತ್ರಾಗೀತೆ) ಕಣ್ಣೆತ್ತಿ ನಾ ನೋಡುವೆ ಪರ್ವತದತ್ತ I ಕೇಳುವೆ: “ನನಗೆ ಒತ್ತಾಸೆ ಎತ್ತಣಿಂದ?” II[೨] ನನಗೆ ಒತ್ತಾಸೆ ಪ್ರಭುವಿನಿಂದ I ಭೂಮ್ಯಾಕಾಶ ಸೃಜಿಸಿದವನಿಂದ II

ಮಾರ್ಕನು ೧೧:೨೨-೨೩
[೨೨] ಅದಕ್ಕೆ ಯೇಸು, “ನಿಮಗೆ ದೇವರಲ್ಲಿ ವಿಶ್ವಾಸವಿರಲಿ,[೨೩] ಆಗ ಯಾವನಾದರೂ ಈ ಬೆಟ್ಟಕ್ಕೆ, ‘ನೀನು ಇಲ್ಲಿಂದ ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ಬೀಳು!’ ಎಂದು ಹೇಳಿ, ಮನಸ್ಸಿನಲ್ಲಿ ಸಂದೇಹಪಡದೆ, ಅದು ಸಂಭವಿಸುವುದೆಂದು ವಿಶ್ವಾಸಿಸಿದರೆ, ನಾನು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ, ಅವನು ಹೇಳಿದಂತೆಯೇ ಆಗುವುದು.

ಆದಿಕಾಂಡ ೧:೨೬-೨೭
[೨೬] ಅದಾದನಂತರ ದೇವರು, “ನಮ್ಮಂತೆಯೇ ಇರುವ ಹಾಗು ನಮ್ಮನ್ನು ಹೋಲುವ, ಮನುಷ್ಯರನ್ನು ಉಂಟುಮಾಡೋಣ. ಅವರು ಸಮುದ್ರದಲ್ಲಿರುವ ಮೀನುಗಳ ಮೇಲೆಯೂ ಅಂತರಿಕ್ಷದಲ್ಲಿ ಹಾರಾಡುವ ಪಕ್ಷಿಗಳ ಮೇಲೆಯೂ ದೊಡ್ಡ - ಚಿಕ್ಕ ಸಾಕುಪ್ರಾಣಿ ಹಾಗು ಕಾಡುಮೃಗಗಳ ಮೇಲೆಯೂ ನೆಲದ ಮೇಲೆ ಹರಿದಾಡುವ ಕ್ರಿಮಿಕೀಟಗಳ ಮೇಲೆಯೂ ದೊರೆತನ ಮಾಡಲಿ,” ಎಂದರು. ಹೀಗೆ ದೇವರು:[೨೭] ಸೃಷ್ಟಿಸಿದರು ನರರನ್ನು ತಮ್ಮ ಹೋಲಿಕೆಯಲ್ಲಿ ಸೃಷ್ಟಿಸಿದರವರನ್ನು ದೇವಾನುರೂಪದಲ್ಲಿ ಸೃಷ್ಟಿಸಿದರವರನ್ನು ಸ್ತ್ರೀಪುರುಷರನ್ನಾಗಿ.

ಕೊರಿಂಥಿಯರಿಗೆ ೨ ೯:೬-೮
[೬] ವಿರಳವಾಗಿ ಬಿತ್ತುವವನು ವಿರಳವಾಗಿ ಕೊಯ್ಯುತ್ತಾನೆ ಹೇರಳವಾಗಿ ಬಿತ್ತುವವನು ಹೇರಳವಾಗಿ ಕೊಯ್ಯುತ್ತಾನೆ. ಇದು ನಿಮಗೆ ತಿಳಿದಿರಲಿ[೭] ಪ್ರತಿಯೊಬ್ಬನೂ ತನ್ನ ಮನಸ್ಸಿನಲ್ಲಿ ನಿಶ್ಚಯಿಸಿಕೊಂಡಷ್ಟು ನೀಡಲಿ. ಒಲ್ಲದ ಮನಸ್ಸಿನಿಂದಾಗಲಿ ಬಲಾತ್ಕಾರದಿಂದಾಗಲಿ ಕೊಡುವುದು ಬೇಡ. ನಗುನಗುತ್ತಾ ನೀಡುವಾತನನ್ನು ದೇವರು ಪ್ರೀತಿಸುತ್ತಾರೆ.[೮] ಸಕಲ ವಿಧವಾದ ವರದಾನಗಳನ್ನು ನಿಮಗೆ ಯಥೇಚ್ಛವಾಗಿ ನೀಡಬಲ್ಲ ಶಕ್ತಿ ದೇವರಿಗಿದೆ. ನೀವು ಸದಾ ಸಮೃದ್ಧಿಯಿಂದಿರುವಿರಿ. ಹೀಗೆ ಸಕಲ ಸತ್ಕಾರ್ಯಗಳಿಗೆ ಹೃತ್ಪೂರ್ವಕವಾಗಿ ನೆರವಾಗುವಿರಿ.

ಲೂಕನು 14:28-30
[28] ನಿಮ್ಮಲ್ಲಿ ಒಬ್ಬನು ಒಂದು ಗೋಪುರವನ್ನು ಕಟ್ಟಲು ಇಚ್ಛಿಸಿದರೆ, ಕೆಲಸವನ್ನು ಮುಗಿಸಲು ತನ್ನಿಂದ ಸಾಧ್ಯವೇ ಎಂದು ನೋಡಲು, ಮೊದಲು ಕುಳಿತು, ಬೇಕಾಗುವ ಖರ್ಚುವೆಚ್ಚವನ್ನು ಲೆಕ್ಕಹಾಕುವುದಿಲ್ಲವೇ?[29] ಇಲ್ಲದೆಹೋದರೆ, ಇವನು ಅಸ್ತಿವಾರ ಹಾಕಿದ ಮೇಲೆ ಕೆಲಸ ಪೂರೈಸದೆ ಇರುವುದನ್ನು ಕಂಡು,[30] ‘ಕಟ್ಟಲಾರಂಭಿಸಿದ; ಮುಗಿಸಲು ಇವನಿಂದಾಗಲಿಲ್ಲ!’ ಎಂದು ನೋಡುವವರೆಲ್ಲರೂ ಅವನನ್ನು ಪರಿಹಾಸ್ಯಮಾಡುವರು.

ಲೂಕನು 6:34-36
[34] ಸಾಲತೀರಿಸುವಂಥ ನಂಬಿಗಸ್ಥರಿಗೇ ಸಾಲಕೊಟ್ಟರೆ ಅದೇನು ಪುಣ್ಯ? ಕೊಟ್ಟಷ್ಟೂ ಬರುತ್ತದೆಂದು ಪಾಪಿಷ್ಠರು ಸಹ ಸಾಲ ಕೊಡುತ್ತಾರಲ್ಲವೆ?’[35] “ಆದುದರಿಂದ ನಿಮ್ಮ ಶತ್ರುಗಳನ್ನು ಪ್ರೀತಿಸಿರಿ. ಅವನಿಗೆ ಒಳಿತನ್ನೇ ಮಾಡಿರಿ. ಪ್ರತಿಯಾಗಿ ಪಡೆಯುವ ಆಶೆಯಿಡದೆ ಸಾಲಕೊಡಿ. ಆಗ ನಿಮಗೆ ಮಹತ್ತಾದ ಸಂಭಾವನೆ ದೊರಕುವುದು. ನೀವು ಮಹೋನ್ನತ ದೇವರ ಮಕ್ಕಳಾಗುವಿರಿ. ದೇವರು ದುರ್ಜನರಿಗೂ ಒಳ್ಳೆಯವರು, ಕೃತಘ್ನರಿಗೂ ಒಳ್ಳೆಯವರು.[36] ನಿಮ್ಮ ತಂದೆಯಾದ ದೇವರಂತೆ ನೀವೂ ದಯಾವಂತರಾಗಿರಿ.

ಯಕೋಬನು 5:1-3
[1] ಐಶ್ವರ್ಯವಂತರೇ, ಕೇಳಿ: ನಿಮಗೆ ಬರಲಿರುವ ಮಹಾಕಷ್ಟಗಳಿಗಾಗಿ ಕಣ್ಣೀರಿಡಿ, ಗೋಳಾಡಿರಿ.[2] ನಿಮ್ಮ ಐಶ್ವರ್ಯ ನಾಶವಾಗಿದೆ. ನಿಮ್ಮ ಬೆಲೆಬಾಳುವ ಬಟ್ಟೆಗಳಿಗೆ ನುಸಿಹತ್ತಿದೆ.[3] ನಿಮ್ಮ ಬೆಳ್ಳಿಬಂಗಾರಕ್ಕೆ ತುಕ್ಕುಹಿಡಿದಿದೆ. ಆ ತುಕ್ಕೇ ನಿಮಗೆ ವಿರುದ್ಧ ಸಾಕ್ಷಿಯಾಗಿ ನಿಮ್ಮನ್ನು ಬೆಂಕಿಯಂತೆ ದಹಿಸಿಬಿಡುತ್ತದೆ. ಅಂತ್ಯಕಾಲಕ್ಕಾಗಿ ನೀವು ಬೆಂಕಿಯನ್ನೇ ಶೇಖರಿಸಿಟ್ಟುಕೊಂಡಿದ್ದೀರಿ.

ಆದಿಕಾಂಡ ೧೨:೧-೨೦
[೧] ಸರ್ವೇಶ್ವರ‍ಸ್ವಾಮಿ ಅಬ್ರಾಮನಿಗೆ ಹೀಗೆಂದರು - “ನೀನು ನಿನ್ನ ಸ್ವಂತ ನಾಡನ್ನೂ ಬಂಧುಬಳಗದವರನ್ನೂ ತವರು ಮನೆಯನ್ನೂ ಬಿಟ್ಟು ನಾನು ತೋರಿಸುವ ನಾಡಿಗೆ ಹೊರಟುಹೋಗು.[೨] ನಾನು ನಿನ್ನನ್ನು ದೊಡ್ಡ ಜನಾಂಗವಾಗಿ ಮಾಡುತ್ತೇನೆ. ನಿನ್ನನ್ನು ಆಶೀರ್ವದಿಸಿ ನಿನ್ನ ಹೆಸರಿಗೆ ಘನತೆಗೌರವವನ್ನು ತರುತ್ತೇನೆ. ನೀನೇ ಆದರ್ಶದ ಆಶೀರ್ವಾದವಾಗಿ ಬೆಳಗುವೆ.[೩] \ನಿನ್ನನ್ನು ಹರಸುವವರನು ನಾ ಹರಸುವೆ, ನಿನ್ನನ್ನು ಶಪಿಸುವವರನು ನಾ ಶಪಿಸುವೆ. ಧರೆಯ ಕುಲದವರಿಗೆಲ್ಲ ನಿನ್ನ ಮುಖೇನ ದೊರಕುವುದು ನನ್ನಿಂದ ಆಶೀರ್ವಾದ.”[೪] ಸರ್ವೇಶ್ವರ ಹೀಗೆಂದು ಹೇಳಿದ ಮೇಲೆ ಅಬ್ರಾಮನು ಹೊರಟನು. ಲೋಟನು ಅವನ ಸಂಗಡವೆ ಹೋದನು. ಆ ಹಾರಾನ್ ಪಟ್ಟಣವನ್ನು ಬಿಟ್ಟು ಹೊರಟಾಗ ಅಬ್ರಾಮನಿಗೆ ಎಪ್ಪತ್ತೈದು ವರ್ಷಗಳಾಗಿದ್ದವು.[೫] ತನ್ನ ಹೆಂಡತಿ ಸಾರಯಳನ್ನು, ತನ್ನ ತಮ್ಮನ ಮಗನಾದ ಲೋಟನನ್ನು, ತಾನು ಮತ್ತು ಲೋಟನು ಹಾರಾನಿನಲ್ಲಿ ಗಳಿಸಿದ ಆಸ್ತಿಪಾಸ್ತಿಯನ್ನು ಹಾಗು ದಾಸದಾಸಿಯರನ್ನು ತೆಗೆದುಕೊಂಡು ಹೋಗಿ ಕಾನಾನ್ ನಾಡನ್ನು ಸೇರಿದನು.[೬] ಆ ನಾಡಿನಲ್ಲಿ ಸಂಚರಿಸುತ್ತಾ ಅಬ್ರಾಮನು ಶೆಕೆಮ್ ಪುಣ್ಯಕ್ಷೇತ್ರದಲ್ಲಿರುವ ‘ಮೋರೆ’ ಎಂಬ ವೃಕ್ಷದ ಬಳಿಗೆ ಬಂದನು. ಆ ಕಾಲದಲ್ಲಿ ಕಾನಾನ್ಯರು ಆ ನಾಡಿನಲ್ಲಿ ವಾಸವಾಗಿದ್ದರು.[೭] ಅಲ್ಲಿ ಸರ್ವೇಶ್ವರ ಸ್ವಾಮಿ ಅಬ್ರಾಮನಿಗೆ ದರ್ಶನವಿತ್ತು - “ಈ ನಾಡನ್ನು ನಾನು ನಿನ್ನ ಸಂತಾನಕ್ಕೆ ಕೊಡುತ್ತೇನೆ” ಎಂದು ಹೇಳಿದರು. ತನಗೆ ದರ್ಶನಕೊಟ್ಟ ಸರ್ವೇಶ್ವರನಿಗೆ ಅಬ್ರಾಮನು ಅಲ್ಲಿ ಒಂದು ಬಲಿಪೀಠವನ್ನು ಕಟ್ಟಿಸಿದನು.[೮] ಬಳಿಕ ಅವನು ಅಲ್ಲಿಂದ ದಕ್ಷಿಣಕ್ಕೆ ಹೊರಟು ಬೇತೇಲಿಗೆ ಪೂರ್ವಕ್ಕಿರುವ ಗುಡ್ಡಗಾಡಿಗೆ ಬಂದು ಗುಡಾರ ಹಾಕಿ ನೆಲಸಿದನು. ಪಶ್ಚಿಮಕ್ಕೆ ಬೇತೇಲೂ ಪೂರ್ವಕ್ಕೆ ಆಯಿ ಎಂಬ ಊರು ಇದ್ದವು. ಅಲ್ಲೂ ಸರ್ವೇಶ್ವರ ಸ್ವಾಮಿಗೆ ಒಂದು ಬಲಿಪೀಠವನ್ನು ಕಟ್ಟಿಸಿ ಅವರ ನಾಮಸ್ಮರಣೆಮಾಡಿ ಆರಾಧಿಸಿದನು.[೯] ತರುವಾಯ ಅಲ್ಲಿಂದ ಮುಂದ ಮುಂದಕ್ಕೆ ಸಾಗುತ್ತಾ ಕಾನಾನ್ ನಾಡಿನ ದಕ್ಷಿಣ ಪ್ರಾಂತ್ಯಕ್ಕೆ ಬಂದನು.[೧೦] ಕಾನಾನ್ ನಾಡಿನಲ್ಲಿ ಕ್ಷಾಮ ತಲೆದೋರಿತು. ಅದು ಘೋರವಾಗಿದ್ದುದರಿಂದ ಅಬ್ರಾಮನು ಕೆಲವು ಕಾಲ ಈಜಿಪ್ಟಿನಲ್ಲಿರಲು ಅಲ್ಲಿಗೆ ಇಳಿದುಹೋದನು.[೧೧] ಈಜಿಪ್ಟನ್ನು ಪ್ರವೇಶಿಸುವುದಕ್ಕೆ ಮುಂಚೆಯೆ ತನ್ನ ಹೆಂಡತಿ ಸಾರಯಳಿಗೆ, “ನೀನು ಬಲು ಚೆಲುವಾದ ಹೆಣ್ಣು;[೧೨] ಈಜಿಪ್ಟಿನವರು ನಿನ್ನನ್ನು ನೋಡಿ, ನೀನು ನನ್ನ ಹೆಂಡತಿಯಾಗಿರಬಹುದೆಂದು ಊಹಿಸಿ, ನನ್ನನ್ನು ಕೊಂದು ನಿನ್ನನ್ನು ಜೀವದಿಂದ ಉಳಿಸಾರು.[೧೩] ಆದಕಾರಣ ನೀನು ನನಗೆ ತಂಗಿಯೆಂದೇ ಅವರಿಗೆ ಹೇಳು. ಆಗ ನಿನ್ನ ನಿಮಿತ್ತ ನನಗೆ ಸತ್ಕಾರ ದೊರಕುವುದು; ನಿನ್ನ ದೆಸೆಯಿಂದ ನನ್ನ ಪ್ರಾಣ ಉಳಿಯುವುದು,” ಎಂದು ತಿಳಿಸಿದನು.[೧೪] ಅಬ್ರಾಮನು ಈಜಿಪ್ಟಿಗೆ ಬಂದಾಗ ಈಜಿಪ್ಟಿನವರು ಅವನ ಸಂಗಡ ಇದ್ದ ಹೆಣ್ಣು ಬಹಳ ಚೆಲುವೆಯೆಂದುಕೊಂಡರು[೧೫] ಫರೋಹನ ಪದಾಧಿಕಾರಿಗಳು ಆಕೆಯನ್ನು ನೋಡಿಬಂದು ಆಕೆಯ ಚೆಲುವನ್ನು ಅವನ ಮುಂದೆ ಹೊಗಳಿದರು.[೧೬] ಅವನು ಆಕೆಯನ್ನು ಅರಮನೆಗೆ ಕರೆಸಿದನು. ಆಕೆಯ ನಿಮಿತ್ತ ಅಬ್ರಾಮನಿಗೆ ಸತ್ಕಾರ ದೊರಕಿತು; ಕುರಿಮೇಕೆಗಳು, ದನಕರುಗಳು, ಗಂಡುಹೆಣ್ಣು ಕತ್ತೆಗಳು, ದಾಸದಾಸಿಯರು ಹಾಗು ಒಂಟೆಗಳು ದೊರೆತವು.[೧೭] ಆದರೆ ಅಬ್ರಾಮನ ಹೆಂಡತಿಯನ್ನು ಕರೆಸಿಕೊಂಡ ಕಾರಣ ಫರೋಹನಿಗೂ ಮತ್ತು ಅವನ ಮನೆಯವರಿಗೂ ಸರ್ವೇಶ್ವರ ದೊಡ್ಡ ದೊಡ್ಡ ಗಂಡಾಂತರಗಳನ್ನು ಬರಮಾಡಿದರು.[೧೮] ಆಗ ಫರೋಹನು ಅಬ್ರಾಮನನ್ನು ಕರೆಸಿ, “ನೀನು ಮಾಡಿರುವುದೇನು?[೧೯] ಆಕೆ ನಿನ್ನ ಹೆಂಡತಿಯೆಂದು ನನಗೇಕೆ ತಿಳಿಸಲಿಲ್ಲ? ತಂಗಿಯೆಂದು ಏಕೆ ಹೇಳಿದೆ? ಹಾಗೆ ಹೇಳಿದ್ದರಿಂದಲೆ ಆಕೆ ನನಗೆ ಹೆಂಡತಿಯಾಗಲೆಂದು ಕರೆಸಿಕೊಂಡೆ. ಇಗೋ ನಿನ್ನ ಹೆಂಡತಿ! ಕರೆದುಕೊಂಡು ಇಲ್ಲಿಂದ ತೆರಳು,” ಎಂದು ಆಜ್ಞಾಪಿಸಿದನು.[೨೦] ಅವನ ಅಪ್ಪಣೆ ಪಡೆದ ಸೇವಕರು ಅಬ್ರಾಮನನ್ನೂ ಅವನ ಹೆಂಡತಿಯನ್ನೂ ಅವನಿಗಿದ್ದ ಎಲ್ಲದರ ಸಮೇತ ಅಲ್ಲಿಂದ ಕಳಿಸಿಬಿಟ್ಟರು.

ಮತ್ತಾಯನು 6:1-34
[1] “ಜನರಿಗೆ ತೋರಿಸಿಕೊಳ್ಳುವುದಕ್ಕಾಗಿ ನಿಮ್ಮ ಧಾರ್ಮಿಕ ಕಾರ್ಯಗಳನ್ನು ಅವರ ಎದುರಿಗೆ ಪ್ರದರ್ಶಿಸದಂತೆ ಎಚ್ಚರಿಕೆಯಿಂದಿರಿ. ಹಾಗೆ ಮಾಡಿದರೆ, ಸ್ವರ್ಗದಲ್ಲಿರುವ ನಿಮ್ಮ ತಂದೆಯಿಂದ ನಿಮಗೆ ಪ್ರತಿಫಲ ದೊರಕದು.[2] ಅಂತೆಯೇ, ನೀನು ದಾನಧರ್ಮ ಮಾಡುವಾಗ ತುತೂರಿಯನ್ನು ಊದಿಸಬೇಡ. ಜನರ ಹೊಗಳಿಕೆಗಾಗಿ ಕಪಟಿಗಳು ಪ್ರಾರ್ಥನಾಮಂದಿರಗಳಲ್ಲೂ ಹಾದಿಬೀದಿಗಳಲ್ಲೂ ಹೀಗೆ ಪ್ರದರ್ಶನ ಮಾಡುತ್ತಾರೆ. ಅವರಿಗೆ ಬರಬೇಕಾದ ಫಲ ಪೂರ್ತಿಯಾಗಿ ದೊರಕಿದ್ದಾಯಿತೆಂದು ನಿಮಗೆ ಖಚಿತವಾಗಿ ಹೇಳುತ್ತೇನೆ.[3] ಆದರೆ ನೀನು ದಾನಧರ್ಮಮಾಡುವಾಗ ನಿನ್ನ ಬಲಗೈ ಕೊಡುವುದು ನಿನ್ನ ಎಡಗೈಗೂ ತಿಳಿಯದ ಹಾಗೆ ಗೋಪ್ಯವಾಗಿರಲಿ.[4] ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆ ನಿನಗೆ ಪ್ರತಿಫಲವನ್ನು ಕೊಡುವರು.[5] “ಪ್ರಾರ್ಥನೆ ಮಾಡುವಾಗ ಕಪಟಿಗಳಂತೆ ಮಾಡಬೇಡಿ. ಜನರು ತಮ್ಮನ್ನು ನೋಡಲೆಂದು ಪ್ರಾರ್ಥನಾ ಮಂದಿರಗಳಲ್ಲೂ ಬೀದಿಯ ಚೌಕಗಳಲ್ಲೂ ನಿಂತು ಪ್ರಾರ್ಥನೆ ಮಾಡಲು ಇಚ್ಛಿಸುತ್ತಾರೆ. ಅವರಿಗೆ ಬರಬೇಕಾದ ಪೂರ್ತಿ ಫಲ ಆಗಲೇ ಬಂದಾಯಿತೆಂಬುದು ನಿಮಗೆ ಚೆನ್ನಾಗಿ ತಿಳಿದಿರಲಿ.[6] ನೀನು ಪ್ರಾರ್ಥನೆ ಮಾಡುವಾಗ ನಿನ್ನ ಕೊಠಡಿಗೆ ಹೋಗು; ಬಾಗಿಲನ್ನು ಮುಚ್ಚು; ಅಂತರಂಗದಲ್ಲಿರುವ ನಿನ್ನ ತಂದೆಗೆ ಪ್ರಾರ್ಥನೆಮಾಡು. ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆ ನಿನಗೆ ಪ್ರತಿಫಲವನ್ನು ಕೊಡುವರು.”[7] “ಪ್ರಾರ್ಥನೆ ಮಾಡುವಾಗ ಪರಕೀಯರಂತೆ ನಿರರ್ಥಕ ಪದಗಳನ್ನು ಪಿಸುಗುಟ್ಟಬೇಡ. ತಮ್ಮ ಪ್ರಾರ್ಥನೆ ದೀರ್ಘವಾದಷ್ಟೂ ದೇವರು ಆಲಿಸುತ್ತಾರೆಂದು ಅವರು ಭಾವಿಸುತ್ತಾರೆ.[8] ನೀವು ಅವರಂತೆ ಆಗಬೇಡಿ. ನಿಮ್ಮ ಅಗತ್ಯಗಳೇನೆಂದು ನೀವು ಕೇಳುವುದಕ್ಕೆ ಮೊದಲೇ ನಿಮ್ಮ ತಂದೆಗೆ ಗೊತ್ತಿದೆ.[9] ಆದುದರಿಂದ ಹೀಗೆಂದು ಪ್ರಾರ್ಥನೆಮಾಡಿ:[10] ‘ಸ್ವರ್ಗ ದಲ್ಲಿರುವ ಓ ನಮ್ಮ ತಂದೆಯೇ, ನಿಮ್ಮ ಪವಿತ್ರ ನಾಮ ಪೂಜಿತವಾಗಲಿ; ನಿಮ್ಮ ಸಾಮ್ರಾಜ್ಯ ಬರಲಿ; ನಿಮ್ಮ ಚಿತ್ತ ಸ್ವರ್ಗದಲ್ಲಿ ನೆರವೇರುವ ಪ್ರಕಾರ ಜಗತ್ತಿನಲ್ಲಿಯೂ ನೆರವೇರಲಿ.[11] ನಮ್ಮ ಅನುದಿನದ ಆಹಾರವನ್ನು ನಮಗಿಂದು ಕೊಡಿ.[12] ನಮಗೆ ತಪ್ಪುಮಾಡಿದವರನ್ನು ನಾವು ಕ್ಷಮಿಸುವ ಪ್ರಕಾರ ನಾವು ಮಾಡಿದ ತಪ್ಪುಗಳನ್ನು ಕ್ಷಮಿಸಿ.[13] ನಮ್ಮನ್ನು ಶೋಧನೆಗೆ ಒಳಪಡಿಸಬೇಡಿ; ಕೇಡಿನಿಂದ ನಮ್ಮನ್ನು ರಕ್ಷಿಸಿರಿ.’[14] “ಜನರ ತಪ್ಪುಗಳನ್ನು ನೀವು ಕ್ಷಮಿಸಿದರೆ ಸ್ವರ್ಗದಲ್ಲಿರುವ ನಿಮ್ಮ ತಂದೆ ನಿಮ್ಮನ್ನು ಕ್ಷಮಿಸುವರು.[15] ಜನರನ್ನು ನೀವು ಕ್ಷಮಿಸದಿದ್ದರೆ, ನಿಮ್ಮ ತಂದೆಯೂ ನಿಮ್ಮ ತಪ್ಪುಗಳನ್ನು ಕ್ಷಮಿಸರು.”[16] “ಉಪವಾಸ ಮಾಡುವಾಗ ಕಪಟಿಗಳಂತೆ ಮುಖ ಸಪ್ಪೆಮಾಡಬೇಡಿ. ಜನರ ಕಣ್ಣಿಗೆ ತಾವು ಉಪವಾಸಿಗಳೆಂದು ತೋರ್ಪಡಿಸಿಕೊಳ್ಳುವುದಕ್ಕಾಗಿ ಅವರು ಮುಖವನ್ನು ಬಾಡಿಸಿಕೊಳ್ಳುತ್ತಾರೆ. ಅವರಿಗೆ ಬರಬೇಕಾದ ಫಲ ಪೂರ್ತಿಯಾಗಿ ದೊರಕಿಯಾಯಿತೆಂದು ನಿಮಗೆ ಖಚಿತವಾಗಿ ಹೇಳುತ್ತೇನೆ.[17] ಆದರೆ ನೀನು ಉಪವಾಸ ಕೈಗೊಂಡಾಗ ಮುಖ ತೊಳೆದುಕೊ, ತಲೆಬಾಚಿಕೊ.[18] ಆಗ ಉಪವಾಸ ಮಾಡುವವನಂತೆ ನೀನು ಜನರಿಗೆ ಕಾಣಿಸಿಕೊಳ್ಳುವುದಿಲ್ಲ; ಅಂತರಂಗದಲ್ಲಿ ಇರುವ ನಿನ್ನ ತಂದೆಗೆ ಮಾತ್ರ ಕಾಣಿಸಿಕೊಳ್ಳುವೆ. ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆ ಅದಕ್ಕೆಲ್ಲ ಪ್ರತಿಫಲ ಕೊಡುವರು.”[19] “ಇಹಲೋಕದಲ್ಲಿ ಆಸ್ತಿಪಾಸ್ತಿಯನ್ನು ಶೇಖರಿಸಿಡಬೇಡಿ. ಇಲ್ಲಿ ತುಕ್ಕು ಹಿಡಿದೀತು; ನುಸಿ ಹೊಡೆದೀತು; ಕಳ್ಳರು ಕನ್ನ ಕೊರೆದು ಕದ್ದಾರು.[20] ನಿಮ್ಮ ಆಸ್ತಿಯನ್ನು ಸ್ವರ್ಗದಲ್ಲಿ ಕೂಡಿಸಿಡಿ. ಅಲ್ಲಿ ತುಕ್ಕು ಹಿಡಿಯದು. ನುಸಿ ಹೊಡೆಯದು, ಕಳ್ಳರು ಕನ್ನ ಕೊರೆದು ಕದಿಯರು.[21] ನಿನ್ನ ನಿಧಿ ಎಲ್ಲಿದೆಯೋ ಅಲ್ಲೇ ಇರುವುದು ನಿನ್ನ ಹೃದಯ.”[22] “ಕಣ್ಣೇ ದೇಹಕ್ಕೆ ದೀಪ. ನಿನ್ನ ಕಣ್ಣು ಸರಿಯಿದ್ದರೆ ದೇಹವೆಲ್ಲ ಕಾಂತಿಮಯವಾಗುವುದು. ಅದು ಕೆಟ್ಟಿದ್ದರೆ ನಿನ್ನ ದೇಹವೆಲ್ಲ ಕತ್ತಲೆಮಯವಾಗುವುದು.[23] ನಿನ್ನೊಳಗಿರುವ ಬೆಳಕೇ ಕತ್ತಲೆಯಾದಲ್ಲಿ ಅದೆಂತಹ ಕರಾಳ ಕತ್ತಲೆಯಾಗಿರಬಹುದು!”[24] “ಯಾರೂ ಇಬ್ಬರು ಯಜಮಾನರಿಗೆ ಜೀತಮಾಡಲಾಗದು. ಅವನು ಒಬ್ಬನನ್ನು ದ್ವೇಷಿಸಿ, ಇನ್ನೊಬ್ಬನನ್ನು ಪ್ರೀತಿಸುತ್ತಾನೆ; ಅಥವಾ, ಒಬ್ಬನೊಡನೆ ಹೊಂದಿಕೊಂಡು ಇನ್ನೊಬ್ಬನನ್ನು ತಾತ್ಸಾರ ಮಾಡುತ್ತಾನೆ. ದೇವರಿಗೂ ದ್ರವ್ಯಕ್ಕೂ ಒಟ್ಟಿಗೆ ಸೇವೆಮಾಡಲು ನಿಮ್ಮಿಂದಾಗದು.”[25] “ನಾನು ಹೇಳುವುದನ್ನು ಕೇಳಿ: ‘ಪ್ರಾಣಧಾರಣೆಗೆ ಏನು ಉಣ್ಣುವುದು, ಏನು ಕುಡಿಯುವುದು; ದೇಹರಕ್ಷಣೆಗೆ ಏನು ಹೊದೆಯುವುದು’ ಎಂದು ಚಿಂತೆಮಾಡಬೇಡಿ. ಊಟಕ್ಕಿಂತ ಪ್ರಾಣ ಉಡುಪಿಗಿಂತ ದೇಹ ಮೇಲಾದುದಲ್ಲವೆ?[26] ಆಕಾಶದಲ್ಲಿ ಹಾರಾಡುವ ಹಕ್ಕಿಗಳನ್ನು ಗಮನಿಸಿ: ಅವು ಬಿತ್ತುವುದಿಲ್ಲ, ಕೊಯ್ಯುವುದಿಲ್ಲ, ಕಣಜಗಳಲ್ಲಿ ಕೂಡಿಡುವುದೂ ಇಲ್ಲ. ಆದರೂ ಸ್ವರ್ಗದಲ್ಲಿರುವ ನಿಮ್ಮ ತಂದೆ ಅವುಗಳನ್ನು ಪೋಷಿಸುತ್ತಾರೆ. ಹಕ್ಕಿಗಳಿಗಿಂತ ನೀವು ಎಷ್ಟೋ ಮೇಲಾದವರಲ್ಲವೆ?[27] ಚಿಂತಿಸಿ, ಚಿಂತಿಸಿ ನಿಮ್ಮ ಜೀವನಾವಧಿಯನ್ನು ಕೊಂಚಕಾಲವಾದರೂ ದೀರ್ಘಮಾಡಲು ನಿಮ್ಮಲ್ಲಿ ಯಾರಿಂದಾದೀತು?[28] ಉಡುಗೆತೊಡುಗೆಗಳ ಚಿಂತೆ ನಿಮಗೇಕೆ? ವನಕುಸುಮಗಳು ಬೆಳೆಯುವ ರೀತಿಯನ್ನು ಗಮನಿಸಿ ನೋಡಿ; ಅವು ದುಡಿಯುವುದಿಲ್ಲ, ನೂಲುವುದಿಲ್ಲ.[29] ಆದರೂ ಅರಸ ಸೊಲೊಮೋನನು ತನ್ನ ಸರ್ವವೈಭವದಲ್ಲಿ ಇದ್ದಾಗಲೂ ಈ ಕುಸುಮಗಳಲ್ಲಿ ಒಂದರಷ್ಟೂ ಸುಂದರವಾದ ಉಡುಪನ್ನು ಧರಿಸಿರಲಿಲ್ಲ.[30] ಅಲ್ಪವಿಶ್ವಾಸಿಗಳೇ, ಇಂದಿದ್ದು ನಾಳೆ ಒಲೆಪಾಲಾಗುವ ಬಯಲಿನ ಹುಲ್ಲಿಗೆ ದೇವರು ಹೀಗೆ ಉಡಿಸಿದರೆ, ನಿಮಗೆ ಮತ್ತಷ್ಟೂ ಮಾಡಲಾರರೇ?[31] ಆದುದರಿಂದ ತಿನ್ನಲು ಏನು? ಕುಡಿಯಲು ಏನು? ಉಡಲು ಏನು? ಎಂದು ಪೇಚಾಡಬೇಡಿ.[32] ಇವೆಲ್ಲವುಗಳಿಗಾಗಿ ಪರಕೀಯರೂ ಪರದಾಡುತ್ತಾರೆ; ಇವೆಲ್ಲಾ ನಿಮಗೆ ಅವಶ್ಯ ಎಂದು ಸ್ವರ್ಗದಲ್ಲಿರುವ ನಿಮ್ಮ ತಂದೆಗೆ ತಿಳಿದಿದೆ.[33] ನೀವಾದರೋ ಮೊದಲು ದೇವರ ಸಾಮ್ರಾಜ್ಯಕ್ಕಾಗಿ, ಅವರ ಸತ್ಸಂಬಂಧಕ್ಕಾಗಿ ತವಕಪಡಿ. ಇದರೊಂದಿಗೆ ಅವೆಲ್ಲವೂ ನಿಮಗೆ ನೀಡಲಾಗುವುದು.[34] ಆದುದರಿಂದ ನಾಳೆಯ ಚಿಂತೆ ನಿಮಗೆ ಬೇಡ. ನಾಳೆಯ ಚಿಂತೆ ನಾಳೆಗೇ ಇರಲಿ. ಇಂದಿನ ಪಾಡೇ ಇಂದಿಗೆ ಸಾಕು.”

ಧರ್ಮೋಪದೇಷಕಾಂಡ ೨೮:೧-೬೮
[೧] “ನೀವು ನಿಮ್ಮ ದೇವರಾದ ಸರ್ವೇಶ್ವರನ ಮಾತನ್ನು ಶ್ರದ್ಧೆಯಿಂದ ಕೇಳಿ, ನಾನು ಈಗ ನಿಮಗೆ ಬೋಧಿಸುವ ಅವರ ಆಜ್ಞೆಗಳನ್ನೆಲ್ಲಾ ಅನುಸರಿಸಿ ನಡೆದರೆ, ಅವರು ಜಗದ ಎಲ್ಲ ಜನಾಂಗಗಳಿಗಿಂತ ನಿಮ್ಮನ್ನು ಉನ್ನತಸ್ಥಿತಿಗೆ ತರುವರು.[೨] ನಿಮ್ಮ ದೇವರಾದ ಸರ್ವೇಶ್ವರನ ಮಾತಿಗೆ ಕಿವಿಗೊಟ್ಟು ನಡೆದರೆ ಈ ಕೆಳಕಂಡ ಶುಭಗಳೆಲ್ಲ ನಿಮಗೆ ಪ್ರಾಪ್ತವಾಗುವುವು:[೩] “ನಿಮಗೆ ಊರಲ್ಲೂ ಅಡವಿಯಲ್ಲೂ ಶುಭವುಂಟಾಗುವುದು.[೪] ನಿಮ್ಮ ಸಂತಾನಕ್ಕೂ ವ್ಯವಸಾಯಗಳಿಗೂ ದನಕುರಿ ಮುಂತಾದ ಪಶುಗಳಿಗೂ ಶುಭವುಂಟಾಗುವುದು.[೫] ನಿಮ್ಮ ಧಾನ್ಯಕ್ಕೂ ಅದರಿಂದ ಮಾಡುವ ಭೋಜನಕ್ಕೂ ಶುಭ ಉಂಟಾಗುವುದು.[೬] ನೀವು ಕೆಲಸಕ್ಕೆ ಹೋಗುವಾಗಲೂ ಬರುವಾಗಲೂ ಶುಭವುಂಟಾಗುವುದು.[೭] “ನಿಮ್ಮ ಮೇಲೆ ಎರಗುವ ಶತ್ರುಗಳು ನಿಮ್ಮಿಂದ ಸೋತುಹೋಗುವಂತೆ ಸರ್ವೇಶ್ವರ ಮಾಡುವರು; ಅವರು ಒಂದೇ ದಾರಿಯಿಂದ ನಿಮ್ಮ ಮೇಲೆ ಬಂದರೂ ಏಳು ದಾರಿಗಳಿಂದ ಓಡಿಹೋಗುವರು.[೮] “ನಿಮ್ಮ ಕಣಜಗಳು ಯಾವಾಗಲೂ ತುಂಬಿ ಇರುವಂತೆ ಹಾಗು ನಿಮ್ಮ ಪ್ರಯತ್ನಗಳೆಲ್ಲಾ ಸಫಲವಾಗುವಂತೆ ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಶುಭವನ್ನು ಅನುಗ್ರಹಿಸುವರು. ಅವರು ನಿಮಗೆ ಕೊಡುವ ನಾಡಿನಲ್ಲಿ ನಿಮಗೆ ಶುಭವನ್ನೇ ಉಂಟುಮಾಡುವರು.[೯] “ನೀವು ನಿಮ್ಮ ದೇವರಾದ ಸರ್ವೇಶ್ವರನ ಆಜ್ಞೆಗಳನ್ನು ಅನುಸರಿಸಿ, ಅವರು ಹೇಳಿದ ಮಾರ್ಗದಲ್ಲೇ ನಡೆದರೆ ಅವರು ವಾಗ್ದಾನಮಾಡಿದಂತೆ ನಿಮ್ಮನ್ನು ತಮ್ಮ ಮೀಸಲಾದ ಜನರನ್ನಾಗಿ ನೆಲೆಗೊಳಿಸುವರು.[೧೦] ಜಗದ ಜನರೆಲ್ಲರು ನಿಮ್ಮನ್ನು ಸರ್ವೇಶ್ವರನ ಜನರೆಂದು ತಿಳಿದುಕೊಂಡು ನಿಮಗೆ ಭಯಪಡುವರು.[೧೧] “ಸರ್ವೇಶ್ವರ ನಿಮ್ಮ ಪಿತೃಗಳಿಗೆ ಪ್ರಮಾಣ ಮಾಡಿದ ಮೇರೆಗೆ, ನಿಮಗೆ ಕೊಡುವ ನಾಡಿನಲ್ಲಿ ಅವರು ನಿಮಗೆ ಸಂತಾನ, ಪಶು, ವ್ಯವಸಾಯಗಳ ಸಮೃದ್ಧಿಯನ್ನುಂಟುಮಾಡುವರು.[೧೨] ಸರ್ವೇಶ್ವರ ಆಕಾಶದಲ್ಲಿರುವ ತಮ್ಮ ಜಲನಿಧಿಯನ್ನು ತೆರೆದು ನಿಮ್ಮ ನಾಡಿನ ಮೇಲೆ, ಬೆಳೆಗೆ ಬೇಕಾದ ಹಾಗೆ ಮಳೆಯನ್ನು ಸುರಿಸಿ, ನಿಮ್ಮ ಎಲ್ಲ ವ್ಯವಸಾಯವನ್ನೂ ಫಲಭರಿತವಾಗಿ ಮಾಡುವರು. “ನೀವು ಅನೇಕ ಜನಗಳಿಗೆ ಸಾಲಕೊಡುವಿರೇ ಹೊರತು ಸಾಲತೆಗೆದುಕೊಳ್ಳುವುದಿಲ್ಲ.[೧೩] ನಾನು ಈಗ ನಿಮಗೆ ಬೋಧಿಸುವ ಮಾತುಗಳನ್ನು ನೀವು ಬಿಟ್ಟು ಎಡಬಲಕ್ಕೆ ಹೋಗದೆ, ಬೇರೆ ದೇವರುಗಳನ್ನು ಅವಲಂಬಿಸದೆ, ನಿಮ್ಮ ದೇವರಾದ ಸರ್ವೇಶ್ವರನ ಆಜ್ಞೆಗಳಲ್ಲೇ ಲಕ್ಷ್ಯವಿಟ್ಟು ಅವುಗಳನ್ನೇ ಅನುಸರಿಸಿ ನಡೆದರೆ ಅವರು ಇತರರಿಗೆ ನಿಮ್ಮನ್ನು ಅಧೀನಮಾಡದೆ, ಎಲ್ಲರಿಗೂ ಶಿರಸ್ಸನ್ನಾಗಿಯೇ ಮಾಡುವರು; ನೀವು ಎಲ್ಲರಿಗಿಂತಲೂ ಮೇಲಿನವರಾಗುವಿರೇ ಹೊರತು ಕೆಳಗಿನವರಾಗಿ ಇರುವುದಿಲ್ಲ.[೧೪] ***[೧೫] “ಆದರೆ ನೀವು ನಿಮ್ಮ ದೇವರಾದ ಸರ್ವೇಶ್ವರನ ಮಾತಿಗೆ ಕಿವಿಗೊಡದೆ, ನಾನು ಈಗ ನಿಮಗೆ ಬೋಧಿಸುವ ಅವರ ಆಜ್ಞಾವಿಧಿಗಳನ್ನು ಅನುಸರಿಸದೆ ಹೋದರೆ, ಈ ಕೆಳಕಂಡ ಅಶುಭಗಳು ನಿಮಗೆ ಪ್ರಾಪ್ತವಾಗುವುವು:[೧೬] “ನಿಮಗೆ ಊರಲ್ಲೂ ಅಡವಿಯಲ್ಲೂ ಅಶುಭವುಂಟಾಗುವುದು.[೧೭] ನಿಮ್ಮ ಧಾನ್ಯಗಳಿಗೂ ಅವುಗಳಿಂದಾದ ಭೋಜನಗಳಿಗೂ ಅಶುಭ ಉಂಟಾಗುವುದು.[೧೮] ನಿಮ್ಮ ಸಂತಾನಗಳಿಗೆ, ವ್ಯವಸಾಯಗಳಿಗೆ, ಹಾಗು ದನಕುರಿಗಳಿಗೆ ಅಶುಭ ಉಂಟಾಗುವುದು.[೧೯] ನೀವು ಕೆಲಸಕ್ಕೆ ಹೋಗುವಾಗಲೂ ಬರುವಾಗಲೂ ಅಶುಭವುಂಟಾಗುವುದು.[೨೦] “ನೀವು ದುರ್ನಡತೆಯುಳ್ಳವರಾಗಿ ಸರ್ವೇಶ್ವರನನ್ನು ಬಿಟ್ಟದ್ದರಿಂದ ಅವರು ನಿಮ್ಮ ಎಲ್ಲ ಪ್ರಯತ್ನಗಳಲ್ಲೂ ವಿಪತ್ತು, ಕಳವಳ, ಶಾಪ, ಇವುಗಳನ್ನುಂಟುಮಾಡುತ್ತಾ ನಿಮ್ಮನ್ನು ಬೇಗನೆ ನಾಶಮಾಡುವರು.[೨೧] ವ್ಯಾಧಿ ನಿಮಗೆ ಹತ್ತಿಕೊಂಡೇ ಇರುವಂತೆ ಮಾಡಿ ನೀವು ಸ್ವಾಧೀನ ಮಾಡಿಕೊಳ್ಳಲು ಹೋಗುವ ನಾಡಿನಲ್ಲಿ ನಿಮ್ಮಲ್ಲಿ ಒಬ್ಬರೂ ಉಳಿಯದಂತೆ ಸರ್ವೇಶ್ವರ ಮಾಡುವರು.[೨೨] ನಿಮ್ಮನ್ನು ಕ್ಷಯರೋಗ, ಚಳಿಜ್ವರ, ಉರಿತ, ಉಷ್ಣಜ್ವರ ಇವುಗಳಿಂದಲೂ, ನಾಡನ್ನು ಕ್ಷಾಮದಿಂದಲೂ, ಬೆಳೆಯನ್ನು ಕಾಡಿನ ಬಿಸಿಗಾಳಿಗಳಿಂದಲೂ ಪೀಡಿಸುವರು. ನೀವು ಸಾಯುವ ತನಕ ಈ ಪೀಡೆಗಳು ನಿಮ್ಮನ್ನು ಬೆನ್ನತ್ತುವುವು.[೨೩] ಆಮೇಲೆ ಆಕಾಶ ಮಳೆ ಸುರಿಸದೆ ತಾಮ್ರದಂತೆಯೂ ಕೆಳಗೆ ಭೂಮಿ ಬೆಳೆಕೊಡದೆ ಕಬ್ಬಿಣದಂತೆಯೂ ಇರುವುವು.[೨೪] ನಿಮ್ಮ ನಾಡಿನ ಮೇಲೆ ಆಕಾಶದಿಂದ ಮಳೆಗೆ ಬದಲಾಗಿ ಧೂಳಿಯನ್ನೂ ಉಸುಬನ್ನೂ ಸರ್ವೇಶ್ವರ ಸುರಿಸುವರು; ಇದರಿಂದ ನೀವು ನಾಶವಾಗಿ ಹೋಗುವಿರಿ.[೨೫] ಶತ್ರುಗಳಿಂದ ನೀವುಪರಾಜಯವನ್ನು ಹೊಂದುವಂತೆ ಸರ್ವೇಶ್ವರ ಮಾಡುವರು; ನೀವು ಒಂದೇ ದಾರಿಯಿಂದ ಅವರ ಮೇಲೆ ದಾಳಿಮಾಡಲು ಹೋಗಿ ಏಳು ದಾರಿ ಹಿಡಿದು ಓಡಿಹೋಗುವಿರಿ. ಜಗದ ರಾಜ್ಯಗಳೆಲ್ಲವೂ ಇದನ್ನು ಕಂಡು ಬೆರಗಾಗುವುವು.[೨೬] ನಿಮ್ಮ ಹೆಣಗಳು ಪಕ್ಷಿಗಳಿಗೂ ಕಾಡುಮೃಗಗಳಿಗೂ ಆಹಾರವಾಗುವುವು; ಅವುಗಳನ್ನು ಬೆದರಿಸಿ ಓಡಿಸುವುದಕ್ಕೂ ಯಾರೂ ಇರುವುದಿಲ್ಲ.[೨೭] “ಈಜಿಪ್ಟರನ್ನು ಬಾಧಿಸಿದಂತೆ ಹುಣ್ಣು, ಬಾವು, ತುರಿಕಜ್ಜಿ ಮುಂತಾದ ವಾಸಿಯಾಗದ ರೋಗಗಳಿಂದ ಸರ್ವೇಶ್ವರ ನಿಮ್ಮನ್ನು ಬಾಧಿಸುವರು.[೨೮] ಹುಚ್ಚುತನ, ಕುರುಡುತನ, ಬೆಪ್ಪುತನ ಇವುಗಳಿಂದ ಸರ್ವೇಶ್ವರ ನಿಮ್ಮನ್ನು ಪೀಡಿಸುವರು.[೨೯] ಕುರುಡರಂತೆ ನಡುಮಧ್ಯಾಹ್ನದಲ್ಲೂ ಕತ್ತಲಾಯಿತೆಂದು ನೀವು ತಡವರಿಸುವಿರಿ; ನೀವು ಮಾಡುವ ಕೆಲಸ ಯಾವುದೂ ಕೈಗೂಡುವುದಿಲ್ಲ. ಅನ್ಯರು ನಿಮ್ಮನ್ನು ನಿರಂತರವಾಗಿ ಪೀಡಿಸುತ್ತಾ ನಿಮ್ಮ ಸೊತ್ತನ್ನು ಸೂರೆಮಾಡುತ್ತಾ ಇರುವರು. ನಿಮಗೆ ಸಹಾಯ ಮಾಡಲು ಯಾರೂ ಇರುವುದಿಲ್ಲ.[೩೦] “ನೀವು ಮದುವೆಮಾಡಿಕೊಂಡ ಮಹಿಳೆಯನ್ನು ಮತ್ತೊಬ್ಬನು ಮಾನಭಂಗಪಡಿಸುವನು; ನೀವು ಕಟ್ಟಿಕೊಂಡ ಮನೆಯಲ್ಲಿ ಮತ್ತೊಬ್ಬನು ವಾಸಮಾಡುವನು; ನೀವು ಮಾಡಿದ ದ್ರಾಕ್ಷಿತೋಟದ ಬೆಳೆ ನಿಮಗೆ ದೊರಕದು.[೩೧] ನಿಮ್ಮ ಪಶುಗಳನ್ನು ನಿಮ್ಮ ಕಣ್ಣಮುಂದೆಯೇ ಕೊಯ್ಯುವರು; ಆದರೆ ಅವುಗಳ ಮಾಂಸ ನಿಮಗೆ ಸಿಕ್ಕದು. ನಿಮ್ಮ ಕತ್ತೆಯನ್ನು ನಿಮ್ಮೆದುರಿಗೇ ಬಲಾತ್ಕಾರದಿಂದ ಹಿಡಿದುಕೊಂಡು ಹೋಗುವರು. ಆದರೆ ಅದನ್ನು ನಿಮಗೆ ಹಿಂದಕ್ಕೆ ಕೊಡುವುದಿಲ್ಲ. ನಿಮ್ಮ ಆಡುಕುರಿಗಳು ಶತ್ರುಗಳ ಪಾಲಾಗುವುವು. ನಿಮಗೆ ರಕ್ಷಕರು ಯಾರೂ ಇರುವುದಿಲ್ಲ.[೩೨] ನಿಮ್ಮ ಗಂಡು ಹೆಣ್ಣು ಮಕ್ಕಳನ್ನು ನಿಮ್ಮ ಮುಂದೆಯೇ ಹಿಡಿದು ಅನ್ಯರಿಗೆ ವಶಪಡಿಸುವರು; ನೀವು ಹಗಲೆಲ್ಲಾ ಅವರನ್ನು ಕಾಣಬೇಕೆಂದು ಹಂಬಲಿಸುತ್ತಾ ಕಂಗೆಡುವಿರಿ; ಆದರೆ ನಿಮ್ಮ ಯತ್ನವೇನೂ ಸಾಗುವುದಿಲ್ಲ.[೩೩] ನಿಮಗೆ ಗುರುತೇ ಇಲ್ಲದ ಜನಾಂಗದವರು ಬಂದು ನಿಮ್ಮ ನಾಡಿನ ಬೆಳೆಯನ್ನೂ ನಿಮ್ಮ ಕಷ್ಟಾರ್ಜಿತವನ್ನೂ ತಿಂದುಬಿಡುವರು. ನೀವಾದರೋ ನಿರಂತರ ಹಿಂಸೆಗೂ ಬಲಾತ್ಕಾರಕ್ಕೂ ಗುರಿಯಾಗುವಿರಿ.[೩೪] ನಿಮ್ಮ ಮುಂದೆ ನಡೆಯುವ ದೃಶ್ಯಗಳನ್ನು ನೋಡಿ ಹುಚ್ಚರಾಗಿಹೋಗುವಿರಿ.[೩೫] “ನಿಮ್ಮ ಮೊಣಕಾಲುಗಳಲ್ಲೂ ತೊಡೆಗಳಲ್ಲೂ ಮತ್ತು ಅಂಗಾಲು ಮೊದಲ್ಗೊಂಡು ನಡುನೆತ್ತಿಯವರೆಗೂ ವಾಸಿಯಾಗದ ಕೆಟ್ಟಕೆಟ್ಟ ಹುಣ್ಣುಗಳನ್ನು ಸರ್ವೇಶ್ವರ ಹುಟ್ಟಿಸಿ ಬಾಧಿಸುವರು;[೩೬] ನಿಮಗೂ ನಿಮ್ಮ ಪಿತೃಗಳಿಗೂ ಗೊತ್ತಿಲ್ಲದ ಜನಾಂಗದವರ ದೇಶಕ್ಕೆ ನಿಮ್ಮನ್ನೂ ನೀವು ನೇಮಿಸಿಕೊಳ್ಳುವ ಅರಸರನ್ನೂ ಒಯ್ಯಿಸುವರು; ಅಲ್ಲಿ ನೀವು ಮರದ ದೇವರುಗಳನ್ನೂ ಕಲ್ಲಿನ ದೇವರುಗಳನ್ನೂ ಪೂಜಿಸುವಿರಿ.[೩೭] ಸರ್ವೇಶ್ವರ ನಿಮ್ಮನ್ನು ಒಯ್ಯಿಸುವ ಜನಾಂಗಗಳಲ್ಲಿ ನೀವು ಭೀಕರತೆಗೂ ನಿಂದೆಲಾವಣಿಗೂ ಪರಿಹಾಸ್ಯಕ್ಕೂ ಗುರಿಯಾಗುವಿರಿ.[೩೮] “ಹೊಲದಲ್ಲಿ ನೀವು ಎಷ್ಟು ಬೀಜ ಬಿತ್ತಿದರೂ ಮಿಡತೆಯ ದಂಡುಬಂದು ಅದನ್ನು ತಿಂದುಬಿಡುವುದು; ನಿಮಗೆ ದೊರೆಯುವ ಬೆಳೆ ಅತ್ಯಲ್ಪವಾಗುವುದು;[೩೯] ದ್ರಾಕ್ಷಾವ್ಯವಸಾಯವನ್ನು ನೀವು ಎಷ್ಟುಮಾಡಿದರೂ ಅದರ ಹಣ್ಣುಗಳನ್ನು ಹುಳುಗಳೇ ತಿಂದುಹಾಕುವುವು; ನೀವು ಕೂಡಿಸಿಕೊಳ್ಳಲು ನಿಮಗೆ ಬಿಡವು. ಅವುಗಳ ರಸವನ್ನು ರುಚಿನೋಡಗೊಡಿಸವು.[೪೦] ನಿಮ್ಮ ದೇಶಪ್ರದೇಶಗಳಲ್ಲಿ ಎಣ್ಣೇಮರಗಳು ಎಷ್ಟಿದ್ದರೂ ಅವುಗಳ ಕಾಯಿಗಳು ಉದುರಿಹೋಗುವುವು; ಮೈಗೆ ಹಚ್ಚಿಕೊಳ್ಳಲು ಎಣ್ಣೆ ಸಿಗದು.[೪೧] ನಿಮಗೆ ಗಂಡುಹೆಣ್ಣು ಮಕ್ಕಳು ಎಷ್ಟು ಹುಟ್ಟಿದರೂ ಅವರು ಸೆರೆಯವರಾಗಿ ಒಯ್ಯಲ್ಪಡುವರು; ನಿಮ್ಮ ಬಳಿ ಅವರು ಇರರು.[೪೨] ನಿಮ್ಮ ಗಿಡಮರಗಳೂ ಪಚ್ಚೆಪೈರುಗಳೂ ಮಿಡತೆಯ ಪಾಲಾಗುವುವು.[೪೩] ನಿಮ್ಮ ಮಧ್ಯೆಯಿರುವ ಅನ್ಯರು ನಿಮಗಿಂತಲೂ ಹೆಚ್ಚೆಚ್ಚಾಗಿ ಅಭಿವೃದ್ಧಿಗೆ ಬರುವರು; ನೀವೋ ಕಡಿಮೆ ಆಗುತ್ತಾ ಹೀನಸ್ಥಿತಿಗೆ ಇಳಿಯುವಿರಿ.[೪೪] ಅವರು ನಿಮಗೆ ಸಾಲಕೊಡುವರೇ ಹೊರತು ನೀವು ಅವರಿಗೆ ಕೊಡುವುದಿಲ್ಲ. ನೀವು ಅವರಿಗೆ ಅಧೀನರಾಗುವಿರಿ; ಅವರು ನಿಮಗೆ ಶಿರಸ್ಸಾಗುವರು.[೪೫] “ನೀವು ನಿಮ್ಮ ದೇವರಾದ ಸರ್ವೇಶ್ವರನ ಮಾತಿಗೆ ಕಿವಿಗೊಡದೆ ಅವರು ನೇಮಿಸಿದ ಆಜ್ಞಾವಿಧಿಗಳನ್ನು ಅನುಸರಿಸದೆ ಹೋದುದರಿಂದ ಈ ಎಲ್ಲಾ ಅಶುಭಗಳು ನಿಮಗೆ ಪ್ರಾಪ್ತವಾಗಿ, ನಿಮ್ಮನ್ನು ಹಿಂದಟ್ಟಿ ಹಿಡಿದು, ಕಡೆಗೆ ನಾಶಮಾಡುವುವು.[೪೬] ಇವು ನಿಮಗೂ ನಿಮ್ಮ ಸಂತತಿಯವರಿಗೂ ನಿರಂತರವಾಗಿ ಪ್ರಾಪ್ತವಾಗುವುವು; ಸರ್ವರಿಗೆ ಬೆರಗನ್ನೂ ಎಚ್ಚರಿಕೆಯನ್ನೂ ಉಂಟುಮಾಡುವುವು.[೪೭] “ನಿಮಗೆ ಸರ್ವಸಮೃದ್ಧಿಯುಂಟಾದ ಕಾಲದಲ್ಲಿ ನೀವು ನಿಮ್ಮ ದೇವರಾದ ಸರ್ವೇಶ್ವರನಿಗೆ ಹರ್ಷಾನಂದದಿಂದ ಸೇವೆಮಾಡದೆಹೋದಿರಿ.[೪೮] ಆದುದರಿಂದ ಸರ್ವೇಶ್ವರ ನಿಮ್ಮ ಮೇಲೆ ಶತ್ರುಗಳನ್ನು ಬರಮಾಡುವರು; ಆಗ ನೀವು ಹಸಿವು ಬಾಯಾರಿಕೆಗಳಿಗೆ ಗುರಿಯಾಗಿ ಬಟ್ಟೆಬರೆ ಏನೂ ಇಲ್ಲದೆ, ಆ ಶತ್ರುಗಳಿಗೇ ಸೇವಕರಾಗಬೇಕಾಗುವುದು. ಕಬ್ಬಿಣದ ನೊಗವನ್ನು ಹೇರಿಸಿ ಸರ್ವೇಶ್ವರ ನಿಮ್ಮನ್ನು ನಾಶಮಾಡುವರು;[೪೯] ನಿಮಗೆ ತಿಳಿಯದ ಭಾಷೆಯನ್ನಾಡುವ ಒಂದು ಜನಾಂಗ, ರಣಹದ್ದು ಹೇಗೆ ದೂರದಿಂದ ಹಾರಿಬರುವುದೊ ಹಾಗೆಯೇ ದೂರದಿಂದ ನಿಮ್ಮ ಮೇಲೆ ಬರುವಂತೆ ಮಾಡುವರು.[೫೦] ಆ ಜನಾಂಗದವರು ಕ್ರೂರಮುಖವುಳ್ಳವರು; ನೀವು ವೃದ್ಧರೆಂದು ಮರ್ಯಾದೆ ತೋರಿಸುವುದಿಲ್ಲ, ಚಿಕ್ಕವರೆಂದು ಕನಿಕರಿಸುವುದಿಲ್ಲ.[೫೧] ಅವರು ನಿಮ್ಮ ದನಗಳನ್ನೂ ಬೆಳೆಗಳನ್ನೂ ತಿಂದುಬಿಡುವರು. ನಿಮಗೆ ಧಾನ್ಯವನ್ನಾಗಲಿ, ದ್ರಾಕ್ಷಾರಸವನ್ನಾಗಲಿ, ಎಣ್ಣೆಯನ್ನಾಗಲಿ, ದನಕುರಿಗಳ ಸಂತಾನವನ್ನಾಗಲಿ, ಉಳಿಸದೆ ನಿಮ್ಮನ್ನು ಸಂಪೂರ್ಣವಾಗಿ ನಾಶಮಾಡುವರು.[೫೨] ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಕೊಟ್ಟಿರುವ ನಾಡಿನ ಪಟ್ಟಣಗಳಿಗೆಲ್ಲಾ ಅವರು ಮುತ್ತಿಗೆ ಹಾಕುವರು; ನೀವು ನೆಚ್ಚಿಕೊಳ್ಳುವ ಎತ್ತರವಾದ ಕೊತ್ತಲುಗಳುಳ್ಳ ಗೋಡೆಗಳನ್ನು ಕೆಡವಿಬಿಡುವರು.[೫೩] “ಶತ್ರುಗಳು ನಿಮ್ಮ ಪಟ್ಟಣಗಳಿಗೆ ಮುತ್ತಿಗೆ ಹಾಕಿ ನಿಮ್ಮನ್ನು ಎಂಥ ಇಕ್ಕಟ್ಟಿಗೆ ಸಿಕ್ಕಿಸುವರೆಂದರೆ, ನೀವು ನಿಮ್ಮ ಸಂತಾನವನ್ನೇ, ಅಂದರೆ, ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಕೊಟ್ಟಿರುವ ಗಂಡುಹೆಣ್ಣು ಮಕ್ಕಳ ಮಾಂಸವನ್ನೇ ತಿನ್ನುವಿರಿ.[೫೪] ಶತ್ರುಗಳು ನಿಮ್ಮ ಪಟ್ಟಣಗಳಿಗೆಲ್ಲಾ ಮುತ್ತಿಗೆ ಹಾಕಿ, ನಿಮ್ಮನ್ನು ಭೀಕರವಾದ ಬಿಕ್ಕಟ್ಟಿಗೆ ಸಿಕ್ಕಿಸುವರು. ಆಗ ನಿಮ್ಮಲ್ಲಿ ಮೃದುಸ್ವಭಾವಿ ಹಾಗು ಅತಿ ಸುಕುಮಾರ ಆದವನೂ ಕೂಡ ತನಗೇ ತಿನ್ನಲಿಕ್ಕೆ ಏನೂ ಉಳಿಯದೆ, ತನ್ನ ಮಕ್ಕಳ ಮಾಂಸವನ್ನು ತಾನೇ ತಿನ್ನಬೇಕೆಂದು, ಅಣ್ಣತಮ್ಮಂದಿರಿಗೂ ಪ್ರಾಣಪ್ರಿಯ ಹೆಂಡತಿಗೂ ಉಳಿದ ಮಕ್ಕಳಿಗೂ ಮೋರೆಸಿಂಡರಿಸಿಕೊಂಡು ಆ ಮಾಂಸದಲ್ಲಿ ಅವರಿಗೆ ಸ್ವಲ್ಪವನ್ನಾದರೂ ಕೊಡದೆ ಹೋಗುವನು.[೫೫] ***[೫೬] ಶತ್ರುಗಳು ನಿಮ್ಮ ಪಟ್ಟಣಗಳಿಗೆ ಮುತ್ತಿಗೆ ಹಾಕಿ ನಿಮ್ಮನ್ನು ಆ ಭೀಕರ ಇಕ್ಕಟ್ಟಿಗೆ ಸಿಕ್ಕಿಸಿದ ಕಾಲದಲ್ಲಿ ಅಂಗಾಲನ್ನೂ ನೆಲಕ್ಕೆ ಇಡದಷ್ಟು ಕೋಮಲ ಹಾಗು ಸುಕುಮಾರಿಯಾದ ಸ್ತ್ರೀ ತಿನ್ನಲಿಕ್ಕೆ ಏನೂ ಇಲ್ಲದವಳಾಗಿ, ತಾನು ಆಗಲೇ ಹೆತ್ತ ಮಗುವನ್ನೂ ಅದರ ಮೇಲಣ ಮಾಸನ್ನೂ ಗುಟ್ಟಾಗಿ ತಿನ್ನಲಾಶಿಸುವಳು; ಪ್ರಾಣಪ್ರಿಯರಾದ ಗಂಡನಿಗು, ಮಗನಿಗು, ಮಗಳಿಗು ಕೊಡಲಿಚ್ಛಿಸದೆ ಮೋರೆಯನ್ನು ಸಿಂಡರಿಸಿಕೊಳ್ಳುವಳು.[೫೭] ***[೫೮] “ಈ ಗ್ರಂಥದಲ್ಲಿ ಬರೆದಿರುವ ಧರ್ಮಶಾಸ್ತ್ರ ವಾಕ್ಯಗಳನ್ನೆಲ್ಲಾ ನೀವು ಅನುಸರಿಸಲೊಲ್ಲದೆ, ನಿಮ್ಮ ದೇವರಾದ ಸರ್ವೇಶ್ವರನೆಂಬ ಮಹಾಮಹಿಮೆಯುಳ್ಳ ಪೂಜ್ಯನಾಮದಲ್ಲಿ ನೀವು ಭಯಭಕ್ತಿಯುಳ್ಳವರಾಗಿರದೇ ಹೋದರೆ[೫೯] ಅವರು ನಿಮಗೂ ನಿಮ್ಮ ಸಂತತಿಯವರಿಗೂ ದೀರ್ಘಕಾಲವಿರುವ ಬಹುಭಯಂಕರವಾದ ಉಪದ್ರವಗಳನ್ನು ಬರಮಾಡುವರು. ದೀರ್ಘಕಾಲ ವಾಸಿಯಾಗದ ಘೋರವ್ಯಾಧಿಗಳಿಂದ ನಿಮ್ಮನ್ನು ಬಾಧಿಸುವರು.[೬೦] ನೀವು ಅಂಜಿಕೊಳ್ಳುತ್ತಿದ್ದ ಈಜಿಪ್ಟ್ ದೇಶದ ರೋಗಗಳನ್ನೆಲ್ಲ ಮತ್ತೆ ನಿಮ್ಮ ಮೇಲೆ ಬರಮಾಡುವರು; ಅವು ನಿಮಗೆ ಅಂಟಿಕೊಂಡೇ ಇರುವುವು.[೬೧] ಇಷ್ಟುಮಾತ್ರವಲ್ಲದೆ, ಈ ಧರ್ಮಶಾಸ್ತ್ರಗ್ರಂಥದಲ್ಲಿ ಬರೆಯದೆ ಇರುವ ವಿಧವಿಧವಾದ ರೋಗಗಳನ್ನೂ ವ್ಯಾಧಿಗಳನ್ನೂ ನಿಮ್ಮ ಮೇಲೆ ಬರಮಾಡಿ ನಿಮ್ಮನ್ನು ನಾಶಮಾಡುವರು.[೬೨] ನಕ್ಷತ್ರಗಳಷ್ಟು ಅಸಂಖ್ಯರಾಗಿರುವ ನೀವು, ನಿಮ್ಮ ದೇವರಾದ ಸರ್ವೇಶ್ವರನ ಮಾತಿನಲ್ಲಿ ಲಕ್ಷ್ಯವಿಡದೆ ಹೋದುದರಿಂದ ಸ್ವಲ್ಪ ಮಂದಿಯೇ ಉಳಿಯುವಿರಿ.[೬೩] ಸರ್ವೇಶ್ವರ ಈಗ ನಿಮ್ಮನ್ನು ಅಭಿವೃದ್ಧಿಪಡಿಸುವುದರಲ್ಲೂ ಹೆಚ್ಚಿಸುವುದರಲ್ಲೂ ಹೇಗೆ ಸಂತೋಷಪಡುತ್ತಾರೋ ಹಾಗೆಯೇ ಆಗ ನಿಮ್ಮನ್ನು ಕೆಡಿಸಿ ನಾಶಮಾಡುವುದರಲ್ಲಿ ಸಂತೋಷಪಡುವರು. ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಹೋಗುವ ನಾಡಿನೊಳಗಿಂದ ನಿಮ್ಮನ್ನು ಕಿತ್ತುಹಾಕುವರು.[೬೪] “ಭೂಮಂಡಲದ ಚತುರ್ದಿಕ್ಕುಗಳಲ್ಲಿರುವ ಎಲ್ಲ ಜನಾಂಗಗಳಲ್ಲಿಯೂ ಸರ್ವೇಶ್ವರ ನಿಮ್ಮನ್ನು ಚದುರಿಸುವರು; ಅಲ್ಲಿ ನಿಮಗಾಗಲಿ ನಿಮ್ಮ ಪಿತೃಗಳಿಗಾಗಲಿ ಗೊತ್ತಿಲ್ಲದ ಮರದ ದೇವರುಗಳನ್ನೂ ಕಲ್ಲಿನ ದೇವರುಗಳನ್ನೂ ಪೂಜಿಸುವಿರಿ.[೬೫] ಆ ದೇಶಗಳಲ್ಲಿ ನಿಮಗೆ ಯಾವ ವಿಶ್ರಾಂತಿಯೂ ದೊರೆಯುವುದಿಲ್ಲ. ಸ್ವಂತದ್ದು ಎಂದು ಹೇಳಿಕೊಳ್ಳಲು ಅಂಬೆಗಾಲಿಡುವಷ್ಟು ಸ್ಥಳಸಿಕ್ಕುವುದಿಲ್ಲ. ನೀವು ಗಡಗಡನೆ ನಡುಗುವ ಹೃದಯವುಳ್ಳವರಾಗಿ, ದಿಕ್ಕುತೋರದೆ ಕಂಗೆಟ್ಟವರಾಗಿ ಹಾಗು ಮನಗುಂದಿದವರಾಗಿ ಇರುವಂತೆ ಸರ್ವೇಶ್ವರ ಮಾಡುವರು.[೬೬] ಬದುಕುವೆವೋ ಇಲ್ಲವೋ ಎಂಬುದಾಗಿ ಅನುಮಾನಪಟ್ಟು ನೀವು ಹಗಲಿರುಳು ಪ್ರಾಣಭಯದಲ್ಲಿರುವಿರಿ; ಪ್ರಾಣದ ಮೇಲಣ ನಂಬಿಕೆಯನ್ನು ಬಿಟ್ಟೇಬಿಡುವಿರಿ.[೬೭] ಮನಸ್ಸಿನಲ್ಲಿ ನಿರಂತರ ಪ್ರಾಣಭಯವಿರುವುದರಿಂದ ಹಾಗು ಕಣ್ಣಿನಿಂದ ಭಯಂಕರವಾದ ಸಂಗತಿಗಳನ್ನು ನೋಡುವುದರಿಂದ ನೀವು ಹೊತ್ತಾರೆಯಲ್ಲೇ, ‘ಅಯ್ಯೋ, ಅಯ್ಯೋ, ಸಾಯಂಕಾಲ ಯಾವಾಗ ಬರುವುದೋ?’ ಎಂದೂ ಸಾಯಂಕಾಲದಲ್ಲಿ, ‘ಅಯ್ಯೋ, ಅಯ್ಯೋ, ಮರುದಿನ ಯಾವಾಗ ಬರುವುದೋ?’ ಎಂದೂ ಕೊರಗುವಿರಿ.[೬೮] ನೀವು ಈಜಿಪ್ಟ್ ದೇಶವನ್ನು ಮರಳಿ ಎಂದಿಗೂ ನೋಡುವುದಿಲ್ಲವೆಂದು ಸರ್ವೇಶ್ವರ ಹೇಳಿದ್ದರೂ ಅವರು ನಿಮ್ಮನ್ನು ಹಡಗುಗಳನ್ನೇರಿಸಿ ಅಲ್ಲಿಗೆ ತಿರುಗಿ ಹೋಗಮಾಡುವರು. ಅಲ್ಲಿ ನೀವು ಶತ್ರುಗಳಿಗೆ ನಿಮ್ಮನ್ನೇ ಗಂಡು ಹೆಣ್ಣು ಎನ್ನದೆ ಗುಲಾಮರನ್ನಾಗಿ ಮಾರಿಕೊಳ್ಳಬೇಕೆಂದು ಅಪೇಕ್ಷಿಸಿದರೂ ಯಾರೂ ನಿಮ್ಮನ್ನು ಕೊಂಡುಕೊಳ್ಳುವುದಿಲ್ಲ.”

Kannada Bible (KNCL) 2016
No Data