A A A A A

ಏಂಜಲ್ಸ್ ಮತ್ತು ರಾಕ್ಷಸರು: [ರಾಕ್ಷಸರು]


ಯೊವಾನ್ನನು ೧ 4:4
ಪ್ರಿಯಮಕ್ಕಳೇ, ನೀವಂತೂ ದೇವರಿಗೆ ಸೇರಿದವರು. ಲೋಕದಲ್ಲಿರುವ ದುರಾತ್ಮಕ್ಕಿಂತಲೂ ನಿಮ್ಮಲ್ಲಿರುವ ಆತ್ಮವು ಶ್ರೇಷ್ಠವಾದುದು. ಆದ್ದರಿಂದಲೇ ಆ ಕಪಟ ಪ್ರವಾದಿಗಳನ್ನು ಜಯಿಸಿದ್ದೀರಿ.

ತಿಮೊಥೇಯನಿಗ ೧ 4:1
ಮುಂಬರುವ ದಿನಗಳಲ್ಲಿ ಕೆಲವರು ವಂಚಿಸುವ ಆತ್ಮಗಳಿಗೆ ಬಲಿಬಿದ್ದು, ದುರಾತ್ಮಗಳ ದುರುಪದೇಶಗಳಿಗೆ ಕಿವಿಗೊಟ್ಟು ವಿಶ್ವಾಸಭ್ರಷ್ಟರಾಗುವರೆಂದು ಪವಿತ್ರಾತ್ಮ ಸ್ಪಷ್ಟವಾಗಿ ತಿಳಿಸಿದ್ದಾರೆ.

ಕೊರಿಂಥಿಯರಿಗೆ ೨ 2:11
ಸೈತಾನನ ಕುತಂತ್ರಗಳನ್ನು ನಾವು ಅರಿಯದವರಲ್ಲ; ಅವನ ಕೈ ಮೇಲಾಗದಂತೆ ನಾವು ನೋಡಿಕೊಳ್ಳಬೇಕು.

ಕೊರಿಂಥಿಯರಿಗೆ ೨ 4:4
ಇವರು ವಿಶ್ವಾಸಿಸುವುದಿಲ್ಲ. ಏಕೆಂದರೆ, ಪೃಥ್ವಿಯ ಮಿಥ್ಯ ದೈವವು ಇವರ ಮನಸ್ಸನ್ನು ಮಂಕಾಗಿಸಿದೆ; ದೇವರ ಪ್ರತಿರೂಪವಾಗಿರುವ ಕ್ರಿಸ್ತಯೇಸುವಿನ ಮಹಿಮೆಯನ್ನು ಸಾರುವ ಶುಭಸಂದೇಶದ ಬೆಳಕನ್ನು ಕಾಣದಂತೆ ಇವರನ್ನು ಕುರುಡಾಗಿಸಿದೆ.

ಯಕೋಬನು 2:19
ದೇವರು ಒಬ್ಬರೇ ಎಂದು ನೀವು ನಂಬುತ್ತೀರಿ. ಈ ನಂಬಿಕೆ ಒಳ್ಳೆಯದೇ. ಆದರೆ ದೆವ್ವಗಳೂ ನಂಬುತ್ತವೆ; ಹೆದರಿ ನಡುಗುತ್ತವೆ.

ಯೋಬನ 4:15
ಆಗ ಆತ್ಮವೊಂದು ಮುಖದ ಮುಂದೆ ಹಾದುಹೋಯಿತು ನನ್ನ ಮೈಯೆಲ್ಲ ನಿಲುಗೂದಲಾಯಿತು.

ಮತ್ತಾಯನು 8:31
“ನೀವು ನಮ್ಮನ್ನು ಹೊರದೂಡಿದ್ದೇ ಆದರೆ ಆ ಹಂದಿಗಳ ಹಿಂಡಿಗೆ ನಮ್ಮನ್ನು ಕಳುಹಿಸಿಕೊಡಿ,” ಎಂದು ಆ ದೆವ್ವಗಳು ಯೇಸುವನ್ನು ಬೇಡಿಕೊಂಡವು.

ಮತ್ತಾಯನು 12:45
ಪುನಃ ಹೊರಟುಹೋಗಿ ತನಗಿಂತಲೂ ಕೆಟ್ಟವುಗಳಾದ ಬೇರೆ ಏಳು ದೆವ್ವಗಳನ್ನು ತನ್ನೊಡನೆ ಕರೆದುಕೊಂಡು ಬರುತ್ತದೆ. ಅವು ಆ ಮನುಷ್ಯನ ಒಳಹೊಕ್ಕು ನೆಲಸುತ್ತವೆ. ಆಗ ಅವನ ಪರಿಸ್ಥಿತಿ ಪೂರ್ವಸ್ಥಿತಿಗಿಂತಲೂ ಅಧೋಗತಿಗಿಳಿಯುತ್ತದೆ. ಈ ದುಷ್ಟ ಪೀಳಿಗೆಗೆ ಸಂಭವಿಸುವ ಗತಿಯೂ ಅದೇ,” ಎಂದರು.

ಲೂಕನು ೮:೩೦
ಯೇಸು, “ನಿನ್ನ ಹೆಸರೇನು?” ಎಂದು ಕೇಳಲು, ಅವನು “ಗಣ\, ಎಂದು ಉತ್ತರಕೊಟ್ಟನು; ಏಕೆಂದರೆ, ಅನೇಕ ಪಿಶಾಚಿಗಳು ಅವನನ್ನು ಹೊಕ್ಕಿದ್ದವು.

ಪ್ರಕಟನೆ ೨೦:೧೦
ಜನರನ್ನು ಮರುಳುಗೊಳಿಸುತ್ತಿದ್ದ ಪಿಶಾಚಿಯನ್ನು ಗಂಧಕದ ಅಗ್ನಿ ಸರೋವರಕ್ಕೆ ಎಸೆಯಲಾಯಿತು. ಆ ಮೃಗವನ್ನೂ ಕಪಟ ಪ್ರವಾದಿಯನ್ನೂ ಮೊದಲೇ ಅದಕ್ಕೆ ಎಸೆಯಲಾಗಿತ್ತು. ಇವರೆಲ್ಲರೂ ಯುಗಯುಗಾಂತರಗಳವರೆಗೆ ಹಗಲಿರುಳೆನ್ನದೆ ಅಲ್ಲಿಯೇ ಬೇನೆಬೇಗುದಿಗಳಿಂದ ನರಳುವರು.

ಕೊರಿಂಥಿಯರಿಗೆ ೧ ೧೦:೨೦-೨೧
[೨೦] ಯಾವುದೂ ಅಲ್ಲ. ನಾನು ಹೇಳುವುದೇನೆಂದರೆ: ಅನ್ಯಜನರು ಬಲಿಯನ್ನು ದೆವ್ವಗಳಿಗೆ ಅರ್ಪಿಸುತ್ತಾರೆ ಹೊರತು ದೇವರಿಗಲ್ಲ. ಹೀಗೆ ನೀವು ದೆವ್ವಗಳೊಂದಿಗೆ ಭಾಗಿಯಾಗುವುದನ್ನು ನಾನೆಂದಿಗೂ ಇಷ್ಟಪಡುವುದಿಲ್ಲ.[೨೧] ನೀವು ಪ್ರಭುವಿನ ಪಾತ್ರೆಯಿಂದ ಹಾಗೂ ದೆವ್ವಗಳ ಪಾತ್ರೆಯಿಂದ ಕುಡಿಯಲಾಗದು. ಪ್ರಭುವಿನ ಪಂಕ್ತಿಯಲ್ಲೂ ಅಂತೆಯೇ ದೆವ್ವಗಳ ಪಂಕ್ತಿಯಲ್ಲೂ ಊಟಮಾಡಲಾಗದು.

ಕೀರ್ತನೆಗಳು ೧೦೬:೩೭-೩೮
[೩೭] ತಮ್ಮ ಪುತ್ರ ಪುತ್ರಿಯರನೇ ಅರ್ಪಿಸಿದರು I ದೆವ್ವಭೂತಗಳಿಗೆ ಅವರನು ಬಲಿಕೊಟ್ಟರು II[೩೮] ಸುರಿಸಿದರು ತಮ್ಮ ಮಕ್ಕಳ ನಿರ್ದೋಷ ರಕ್ತವನು I ಬಲಿಕೊಟ್ಟರು ಕಾನಾನ್ಯರ ವಿಗ್ರಹಗಳಿಗೆ ಅವರನು I ಹೊಲೆಮಾಡಿದರಂಥ ಕೊಲೆಗಳಿಂದ ದೇಶವನು II

ಯೋಬನ ೧:೨೦-೨೧
[೨೦] ಆಗ ಯೋಬನು ಎದ್ದು ನಿಂತು, ದುಃಖವನ್ನು ತಾಳಲಾರದೆ ತನ್ನ ಮೇಲಂಗಿಯನ್ನು ಹರಿದುಬಿಟ್ಟ, ತಲೆಯನ್ನು ಬೋಳಿಸಿಕೊಂಡ, ನೆಲದ ಮೇಲೆ ಬಿದ್ದು, ದೇವರಿಗೆ ಸಾಷ್ಟಾಂಗವೆರಗಿ:[೨೧] ಬರಿಗೈಯಲ್ಲಿ ಬಂದೆ ನಾನು ತಾಯಗರ್ಭದಿಂದ ಬರಿಗೈಯಲ್ಲಿ ಹಿಂತಿರುಗುವೆ ನಾನು ಇಲ್ಲಿಂದ ಸರ್ವೇಶ್ವರ ಕೊಟ್ಟ ಸರ್ವೇಶ್ವರ ತೆಗೆದುಕೊಂಡ ಆತನ ನಾಮಕ್ಕೆ ಸ್ತುತಿಸ್ತೋತ್ರ! ಎಂದನು.

ಎಫೆಸಿಯರಿಗೆ ೬:೧೦-೧೨
[೧೦] ಕೊನೆಯದಾಗಿ, ಪ್ರಭುವಿನ ಅನ್ಯೋನ್ಯತೆಯಲ್ಲಿ ಬಲಾಢ್ಯರಾಗಿರಿ. ಅವರ ಪರಾಕ್ರಮ ಶಕ್ತಿಯನ್ನು ಆಶ್ರಯಿಸಿರಿ.[೧೧] ಸೈತಾನನು ನಿಮಗೆ ಒಡ್ಡುವ ಕುತಂತ್ರಗಳ ವಿರುದ್ಧ ಅಚಲರಾಗಿ ನಿಲ್ಲಲು ನೀವು ಸಮರ್ಥರಾಗುವಂತೆ ದೇವರು ನೀಡುವ ಸಕಲ ಶಸ್ತ್ರಾಸ್ತ್ರಗಳನ್ನು ಧರಿಸಿಕೊಳ್ಳಿರಿ.[೧೨] ನಮ್ಮ ಹೋರಾಟ ಕೇವಲ ನರಮಾನವರೊಂದಿಗಲ್ಲ, ದಿಗಂತದಲ್ಲಿರುವ ಅಧಿಕಾರಿಗಳ ಹಾಗೂ ಆಧಿಪತ್ಯಗಳ ವಿರುದ್ಧ; ಪ್ರಸ್ತುತ ಅಂಧಕಾರಲೋಕಾಧಿಪತಿಗಳ ಹಾಗೂ ಅಶರೀರ ದುಷ್ಟಗಣಗಳ ವಿರುದ್ಧ.

ಯೆಶಾಯನ ೧೪:೧೨-೧೫
[೧೨] ಮುಂಜಾನೆಯ ನಕ್ಷತ್ರವೆ, ಉದಯ ಕುಮಾರನೆ, ಆಗಸದಿಂದ ಹೇಗೆ ಬಿದ್ದೆ? ರಾಷ್ಟ್ರಗಳನ್ನು ಗೆದ್ದ ನೀನು, ನೆಲಕ್ಕೆ ಅದು ಹೇಗೆ ಉರುಳಿದೆ?[೧೩] ‘ಹತ್ತಿಹೋಗುವೆನು ನಾನು ಆಕಾಶಮಂಡಲಕೆ ಉತ್ತರದಿಕ್ಕಿನ ಕೊನೆಗಿರುವ ಸುರಗಣ ಪರ್ವತಕ್ಕೆ ಎತ್ತುವೆ ಸಿಂಹಾಸನವನ್ನು ದೇವ ನಕ್ಷತ್ರಗಳ ಮೇಲಕೆ ‘ಕುಳಿತಲ್ಲಿ ರಾಜ್ಯವಾಳುವೆ’ ಎಂದುಕೊಂಡೆ ನಿನ್ನೊಳಗೆ.[೧೪] ‘ಏರುವೆ ಉನ್ನತ ಮೇಘಮಂಡಲದ ಮೇಲಕೆ, ಸರಿಸಮಾನನಾಗುವೆ ಉನ್ನತೋನ್ನತನಿಗೆ’.[೧೫] ಇಂತೆಂದ ನೀನು ದೂಡಲಾಗಿರುವೆ ಪಾತಾಳಕೆ ಅಧೋಲೋಕದ ಅಗಾಧ ಕೂಪಗಳಿಗೆ.

ಪ್ರೇಷಿತರ 19:13-16
[13] “ದೆವ್ವಬಿಡಿಸುವವರು” ಎನಿಸಿಕೊಂಡು ಊರೂರು ಸುತ್ತುತ್ತಿದ್ದ ಕೆಲವು ಯೆಹೂದ್ಯರು ಸಹ ಪ್ರಭು ಯೇಸುವಿನ ನಾಮವನ್ನು ಬಳಸಿ ದೆವ್ವಬಿಡಿಸಲು ಯತ್ನಿಸಿದರು. ಇವರು ದೆವ್ವಗಳಿಗೆ, “ಪೌಲನು ಸಾರುತ್ತಿರುವ ಯೇಸುವಿನ ನಾಮದಲ್ಲಿ ನಿಮಗೆ ಆಣೆಯಿಟ್ಟು ಆಜ್ಞಾಪಿಸುತ್ತೇವೆ,” ಎಂದು ಹೇಳುತ್ತಿದ್ದರು.[14] ಮುಖ್ಯಯಾಜಕನಾಗಿದ್ದ ಸ್ಕೇವ ಎಂಬವನ ಏಳು ಮಕ್ಕಳು ಹೀಗೆಯೇ ಮಾಡುತ್ತಿದ್ದರು.[15] ಆದರೆ ಆ ದೆವ್ವ ಅವರಿಗೆ, “ಯೇಸು ನನಗೆ ಗೊತ್ತು, ಪೌಲನನ್ನು ನಾನು ಬಲ್ಲೆ; ಆದರೆ ನೀವು ಯಾರು?” ಎಂದು ಪ್ರಶ್ನಿಸಿತು.[16] ಅಲ್ಲದೆ ದೆವ್ವ ಹಿಡಿದಿದ್ದ ಮನುಷ್ಯನು ಅವರ ಮೇಲೆ ಹಾರಿಬಿದ್ದು, ಅಪ್ಪಳಿಸಿ, ಅವರೆಲ್ಲರನ್ನೂ ಅಧೀನಪಡಿಸಿದನು. ಅವರು ಗಾಯಗೊಂಡು, ನಗ್ನರಾಗಿ, ಆ ಮನೆಯಿಂದ ಓಡಿಹೋದರು.

ಪೇತ್ರನು ೨ ೨:೪-೧೦
[೪] ಪಾಪಮಾಡಿದ ದೇವದೂತರನ್ನೂ ದೇವರು ದಂಡಿಸದೆ ಬಿಡಲಿಲ್ಲ. ಅವರನ್ನು ನರಕಕ್ಕೆ ದಬ್ಬಿದರು. ಅಂತಿಮ ತೀರ್ಪಿನ ದಿನವನ್ನು ಎದುರುನೋಡುತ್ತಾ ಕಾದಿರುವಂತೆ, ಕಾರಿರುಳ ಕೂಪದಲ್ಲಿ ಕೂಡಿಹಾಕಿದರು.[೫] ಪುರಾತನ ಕಾಲದ ಜನರನ್ನೂ ಸಹ ದೇವರು ದಂಡಿಸದೆ ಬಿಡಲಿಲ್ಲ. ನೀತಿಮಾರ್ಗವನ್ನು ಸಾರಿದ ನೋವನನ್ನು ಮತ್ತು ಅವನೊಂದಿಗಿದ್ದ ಇತರ ಏಳು ಜನರನ್ನು ಮಾತ್ರ ಕಾಪಾಡಿ, ದುರ್ಜನರಿಂದ ಕೂಡಿದ್ದ ಜಗತ್ತಿನ ಮೇಲೆ ಜಲಪ್ರಳಯವನ್ನು ಬರಮಾಡಿದರು.[೬] ಸೊದೋಮ್ ಮತ್ತು ಗೊಮೋರ ಪಟ್ಟಣಗಳನ್ನು ಕೂಡ ದೇವರು ಬಿಡಲಿಲ್ಲ. ದುರ್ಜನರಿಗೆ ಬರಲಿರುವ ದುರ್ಗತಿ ಏನೆಂದು ಸೂಚಿಸುವುದಕ್ಕಾಗಿ ಆ ಪಟ್ಟಣಗಳನ್ನು ಸುಟ್ಟು ಭಸ್ಮಮಾಡಿದರು.[೭] ಆದರೆ, ಆ ದುರ್ಜನರ ಅನೈತಿಕ ನಡವಳಿಕೆಯನ್ನು ಕಂಡು ಅತಿಯಾಗಿ ಮನನೊಂದಿದ್ದ ಲೋತ ಎಂಬ ಸತ್ಪುರುಷನನ್ನು ಸಂರಕ್ಷಿಸಿದರು.[೮] ಆತನು ಆ ದುರ್ಜನರ ನಡುವೆ ಬಾಳುತ್ತಾ ಅವರ ದುಷ್ಕೃತ್ಯಗಳನ್ನು ಕಂಡು ಕೇಳುತ್ತಿದ್ದಾಗ, ಅವನ ನಿರ್ಮಲ ಹೃದಯ ದಿನೇದಿನೇ ಅತೀವ ವೇದನೆಯನ್ನು ಅನುಭವಿಸುತ್ತಿತ್ತು.[೯] ಹೀಗೆ, ಸಜ್ಜನರನ್ನು ಸಂಕಟಶೋಧನೆಗಳಿಂದ ಸಂರಕ್ಷಿಸಲು, ದುರ್ಜನರನ್ನು ಅಂತಿಮ ನ್ಯಾಯತೀರ್ಪಿನ ದಿನದವರೆಗೂ ಶಿಕ್ಷಾವಸ್ಥೆಯಲ್ಲಿರಿಸಲು ಪ್ರಭುವಿಗೆ ತಿಳಿದಿದೆ.[೧೦] ಮುಖ್ಯವಾಗಿ, ತುಚ್ಛವಾದ ದೈಹಿಕ ವ್ಯಾಮೋಹಗಳಿಗೆ ಬಲಿಯಾಗಿರುವವರನ್ನು ಮತ್ತು ದೇವರ ಅಧಿಕಾರವನ್ನು ತೃಣೀಕರಿಸುವವರನ್ನು ಅವರು ಶಿಕ್ಷಿಸದೆ ಬಿಡುವುದಿಲ್ಲ.

ಪ್ರಕಟನೆ ೯:೧-೭
[೧] ಐದನೆಯ ದೇವದೂತನು ತುತೂರಿಯನ್ನು ಊದಿದನು. ಆಗ ಆಕಾಶದಿಂದ ಭೂಮಿಗೆ ಬಿದ್ದಿದ್ದ ಒಂದು ನಕ್ಷತ್ರವನ್ನು ಕಂಡೆ. ಪಾತಾಳಕೂಪದ ಬೀಗದ ಕೈಯನ್ನು ಅವನಿಗೆ ಕೊಡಲಾಗಿತ್ತು.[೨] ಅವನು ಆ ಕೂಪದ ಮುಚ್ಚಳವನ್ನು ತೆರೆದನು. ಅದರೊಳಗಿಂದ ದಟ್ಟಹೊಗೆ ದೊಡ್ಡ ಕುಲುಮೆ ಒಂದರಿಂದ ಬರುತ್ತಿರುವಂತೆ ಮೇಲೇರಿತು. ಇದರಿಂದಾಗಿ ಸೂರ್ಯನೂ ವಾಯುಮಂಡಲವೂ ಕಪ್ಪಾದವು.[೩] ಆ ಹೊಗೆಯೊಳಗಿಂದ ಮಿಡತೆಗಳು ಹೊರಟು ಭೂಮಿಗೆ ಬಂದವು. ಭೂಮಿಯಲ್ಲಿ ಇರುವ ಚೇಳುಗಳಿಗಿರುವಂಥ ಶಕ್ತಿಯನ್ನು ಅವುಗಳಿಗೆ ಕೊಡಲಾಗಿತ್ತು.[೪] ಭೂಮಿಯ ಮೇಲಣ ಹುಲ್ಲಿಗಾಗಲಿ, ಯಾವುದೇ ಹಸಿರು ಇಲ್ಲವೇ ಮರಗಳಿಗಾಗಲಿ ಕೇಡನ್ನುಂಟುಮಾಡಬಾರದು ಎಂದೂ ಮಾನವರಲ್ಲಿ ಯಾರ ಹಣೆಯ ಮೇಲೆ ದೇವರ ಮುದ್ರೆಯಿಲ್ಲವೋ ಅಂಥವರಿಗೆ ಮಾತ್ರ ಕೇಡು ಮಾಡಬಹುದೆಂದೂ ಅಪ್ಪಣೆಯಾಗಿತ್ತು.[೫] ಅಲ್ಲದೆ, ಅವರನ್ನು ಕೊಲ್ಲದೆಯೇ ಐದು ತಿಂಗಳಕಾಲ ಬಾಧಿಸಬೇಕೆಂದು ಆಜ್ಞಾಪಿಸಲಾಗಿತ್ತು. ಆ ಬಾಧೆ, ಚೇಳು ಕುಟುಕಿದರೆ ಉಂಟಾಗುವ ಬಾಧೆಯಂಥದ್ದು.[೬] ಆಂಥ ದಿನಗಳಲ್ಲಿ ಮನುಷ್ಯರು ಮರಣವನ್ನು ಅಪೇಕ್ಷಿಸುವರು. ಆದರೆ ಅದು ಅವರಿಗೆ ಪ್ರಾಪ್ತವಾಗುವುದಿಲ್ಲ. ಸತ್ತರೆ ಸಾಕೆಂದು ಬಯಸುವರು; ಪ್ರಯತ್ನಿಸುವರು. ಆದರೆ ಮೃತ್ಯು ಅವರಿಂದ ದೂರ ಸರಿಯುವುದು.[೭] ಆ ಮಿಡತೆಗಳು ನೋಡುವುದಕ್ಕೆ ಸಮರಕ್ಕೆ ಸನ್ನದ್ಧರಾಗಿರುವ ಕುದುರೆಗಳಂತಿದ್ದವು. ಅವುಗಳ ತಲೆಯ ಮೇಲೆ ಚಿನ್ನದ ಕಿರೀಟವಿದ್ದಂತೆ ಕಾಣಿಸುತ್ತಿತ್ತು. ಮುಖಗಳು ಮನುಷ್ಯರ ಮುಖಗಳಂತೆ ಇದ್ದವು.

ಮಾರ್ಕನು ೧:೨೧-೨೭
[೨೧] ಬಳಿಕ ಅವರೆಲ್ಲರೂ ಕಫೆರ್ನವುಮ್ ಎಂಬ ಊರನ್ನು ಸೇರಿದರು. ಸಬ್ಬತ್‍ದಿನ ಬಂದ ಕೂಡಲೇ ಯೇಸುಸ್ವಾಮಿ ಪ್ರಾರ್ಥನಾಮಂದಿರಕ್ಕೆ ಹೋಗಿ ಬೋಧಿಸತೊಡಗಿದರು. ಅವರ ಉಪದೇಶವನ್ನು ಕೇಳಿ ಜನರು ಬೆರಗಾದರು.[೨೨] ಏಕೆಂದರೆ ಯೇಸು, ಧರ್ಮಶಾಸ್ತ್ರಿಗಳಂತೆ ಬೋಧಿಸದೆ ಅಧಿಕಾರವಾಣಿಯಿಂದ ಪ್ರಬೋಧಿಸುತ್ತಿದ್ದರು. ಅಲ್ಲಿ ದೆವ್ವ ಹಿಡಿದ ಒಬ್ಬನಿದ್ದನು.[೨೩] ಅವನು, “ನಜರೇತಿನ ಯೇಸುವೇ, ನಿಮಗೇಕೆ ನಮ್ಮ ಗೊಡವೆ? ನೀವು ನಮ್ಮ ವಿನಾಶಕ್ಕಾಗಿ ಬಂದವರೇನು?[೨೪] ನೀವು ಯಾರೆಂದು ನನಗೆ ಗೊತ್ತು. ದೇವರಿಂದ ಬಂದ ಪರಮಪೂಜ್ಯರು ನೀವು,” ಎಂದು ಕಿರುಚಿದನು. ಆದರೆ ಯೇಸುಸ್ವಾಮಿ ಅವನನ್ನು ಗದರಿಸಿ, “ಸುಮ್ಮನಿರು, ಇವನನ್ನು ಬಿಟ್ಟು ತೊಲಗು,” ಎಂದು ಆ ದೆವ್ವಕ್ಕೆ ಆಜ್ಞಾಪಿಸಿದರು.[೨೫] ದೆವ್ವವು ಆ ಮನುಷ್ಯನನ್ನು ಒದ್ದಾಡಿಸಿ, ಗಟ್ಟಿಯಾಗಿ ಚೀರುತ್ತಾ ಅವನನ್ನು ಬಿಟ್ಟುಹೋಯಿತು.[೨೬] ಜನರೆಲ್ಲರೂ ಆಶ್ಚರ್ಯಚಕಿತರಾದರು.[೨೭] “ಇದೇನು ಹೊಸ ಬೋಧನೆ!? ಈತ ದೆವ್ವಗಳಿಗೆ ಕೂಡ ಅಧಿಕಾರದಿಂದ ಆಜ್ಞಾಪಿಸುತ್ತಾನೆ; ಅವು ಈತ ಹೇಳಿದ ಹಾಗೆ ಕೇಳುತ್ತವೆಯಲ್ಲ!” ಎಂದು ಪರಸ್ಪರ ಮಾತಾಡಿಕೊಂಡರು.

ಮತ್ತಾಯನು ೭:೧೪-೨೦
[೧೪] ಅಮರ ಜೀವಕ್ಕೆ ಕೊಂಡೊಯ್ಯುವ ಮಾರ್ಗ ದುರ್ಭರ, ಅದರ ಬಾಗಿಲು ಕಿರಿದು; ಅದನ್ನು ಗುರುತಿಸುವವರೋ ಕೆಲವರು.”[೧೫] “ಸುಳ್ಳು ಪ್ರವಾದಿಗಳ ಬಗ್ಗೆ ಎಚ್ಚರಿಕೆಯಿಂದಿರಿ. ಹೊರಗೆ ಕುರಿಯ ವೇಷದಲ್ಲಿ ಬಂದರೂ ಒಳಗೆ ಅವರು ಕಿತ್ತುತಿನ್ನುವ ತೋಳಗಳು.[೧೬] ಅವರ ವರ್ತನೆಯಿಂದ ನೀವು ಅವರನ್ನು ಗುರುತು ಹಚ್ಚುವಿರಿ. ಮುಳ್ಳುಕಳ್ಳಿಯಲ್ಲಿ ದ್ರಾಕ್ಷಿ ಕೊಯ್ಯುವುದುಂಟೇ? ಮದ್ದುಗುಣಿಕೆಯಲ್ಲಿ ಅಂಜೂರ ಕೀಳುವುದುಂಟೇ?[೧೭] ಅದರಂತೆಯೇ ಒಳ್ಳೆಯ ಮರ ಒಳ್ಳೆಯ ಹಣ್ಣನ್ನೂ ಕೆಟ್ಟ ಮರವು ಕೆಟ್ಟ ಹಣ್ಣನ್ನೂ ಕೊಡುತ್ತದೆ.[೧೮] ಒಳ್ಳೆಯ ಮರ ಕೆಟ್ಟ ಹಣ್ಣನ್ನು ಕೊಡಲಾರದು, ಹಾಗೆಯೇ ಕೆಟ್ಟ ಮರ ಒಳ್ಳೆಯ ಹಣ್ಣನ್ನು ಕೊಡಲಾರದು.[೧೯] ಒಳ್ಳೆಯ ಫಲವನ್ನು ಕೊಡದ ಪ್ರತಿಯೊಂದು ಮರವನ್ನೂ ಕಡಿದು ಬೆಂಕಿಯಲ್ಲಿ ಹಾಕಲಾಗುವುದು.[೨೦] ಆದ್ದರಿಂದ ಸುಳ್ಳು ಪ್ರವಾದಿಗಳನ್ನು ಅವರ ನಡತೆಯಿಂದ ಗುರುತುಹಚ್ಚುವಿರಿ.”

ಲೂಕನು ೪:೩೧-೪೧
[೩೧] ಬಳಿಕ ಯೇಸುಸ್ವಾಮಿ ಗಲಿಲೇಯ ಪ್ರಾಂತ್ಯದ ಕಫೆರ್ನವುಮ್ ಎಂಬ ಊರಿಗೆ ಬಂದು ಸಬ್ಬತ್‍ದಿನ ಅಲ್ಲಿನ ಜನರಿಗೆ ಬೋಧಿಸುತ್ತಿದ್ದರು.[೩೨] ಅವರು ಅಧಿಕಾರವಾಣಿಯಿಂದ ಉಪದೇಶಿಸುತ್ತಿದ್ದುದನ್ನು ಕೇಳಿ ಜನರೆಲ್ಲರೂ ಬೆರಗಾದರು.[೩೩] ದುಷ್ಟದೆವ್ವ ಹಿಡಿದಿದ್ದ ಒಬ್ಬನು ಆ ಪ್ರಾರ್ಥನಾಮಂದಿರದಲ್ಲಿ ಇದ್ದನು.[೩೪] ಅವನು, “ನಜರೇತಿನ ಯೇಸುವೇ, ನಿಮಗೇಕೆ ನಮ್ಮ ಗೊಡವೆ? ನೀವು ನಮ್ಮ ವಿನಾಶಕ್ಕಾಗಿ ಬಂದವರೇನು? ನೀವು ಯಾರೆಂದು ನನಗೆ ಗೊತ್ತು; ದೇವರಿಂದ ಬಂದ ಪರಮಪೂಜ್ಯರು ನೀವು,” ಎಂದು ಗಟ್ಟಿಯಾಗಿ ಕಿರುಚಿದನು.[೩೫] ಆದರೆ ಯೇಸು ಅವನನ್ನು ಗದರಿಸಿ, “ಸುಮ್ಮನಿರು, ಇವನನ್ನು ಬಿಟ್ಟು ತೊಲಗು,” ಎಂದು ದೆವ್ವಕ್ಕೆ ಆಜ್ಞಾಪಿಸಿದರು. ಆ ದೆವ್ವ ಎಲ್ಲರ ಎದುರಿಗೇ ಅವನನ್ನು ಕೆಡವಿ, ಯಾವ ಕೆಡುಕನ್ನೂ ಮಾಡದೆ ಅವನನ್ನು ಬಿಟ್ಟು ಹೋಯಿತು.[೩೬] ಜನರೆಲ್ಲರೂ ಆಶ್ಚರ್ಯಚಕಿತರಾದರು. “ಎಂಥಾ ಮಾತುಗಳಿವು! ಅಧಿಕಾರದಿಂದಲೂ ಶಕ್ತಿಯಿಂದಲೂ ದೆವ್ವಗಳಿಗೆ ಕೂಡ ಆಜ್ಞೆಮಾಡುತ್ತಾನೆ; ಅವು ಕೂಡ ಈತ ಹೇಳಿದ ಹಾಗೆ ಕೇಳುತ್ತವಲ್ಲಾ!” ಎಂದು ತಮ್ಮತಮ್ಮೊಳಗೇ ಮಾತನಾಡಿಕೊಂಡರು.[೩೭] ಯೇಸುವಿನ ಸಮಾಚಾರ ಆ ಪ್ರಾಂತ್ಯದಲ್ಲೆಲ್ಲಾ ಹಬ್ಬಿ ಹರಡಿತು.[೩೮] ಪ್ರಾರ್ಥನಾಮಂದಿರದಿಂದ ಹೊರಟ ಯೇಸುಸ್ವಾಮಿ ಸಿಮೋನನ ಮನೆಗೆ ಬಂದರು. ಆ ಸಿಮೋನನ ಅತ್ತೆ ವಿಷಮಜ್ವರದಿಂದ ನರಳುತ್ತಿದ್ದಳು. ಅಲ್ಲಿದ್ದವರು ಅವಳ ಪರವಾಗಿ ಯೇಸುವಿನಲ್ಲಿ ಮೊರೆಯಿಟ್ಟರು.[೩೯] ಯೇಸು ಆಕೆಯ ಬಳಿ ನಿಂತು, ಬಾಗಿ, ಜ್ವರಕ್ಕೆ ಬಿಟ್ಟುಹೋಗೆಂದು ಆಜ್ಞಾಪಿಸಿದರು; ಅದು ಬಿಟ್ಟುಹೋಯಿತು. ಆ ಕ್ಷಣವೇ ಆಕೆ ಎದ್ದು ಅವರೆಲ್ಲರನ್ನು ಸತ್ಕರಿಸಿದಳು.[೪೦] ಸಂಜೆಯಾಗುತ್ತಿದ್ದಂತೆ ಜನರು ತಮ್ಮ ಮನೆಯಲ್ಲಿ ವಿಧವಿಧವಾದ ಕಾಯಿಲೆಯಿಂದ ನರಳುತ್ತಿದ್ದವರನ್ನೆಲ್ಲಾ ಯೇಸುಸ್ವಾಮಿಯ ಬಳಿಗೆ ಕರೆತಂದರು. ಯೇಸು ಪ್ರತಿಯೊಬ್ಬನ ಮೇಲೆ ತಮ್ಮ ಕೈಯಿಟ್ಟು ಗುಣಪಡಿಸಿದರು.[೪೧] ಅನೇಕರ ಮೈಮೇಲಿದ್ದ ದೆವ್ವಗಳು ಸಹ, “ನೀವು ದೇವರ ಪುತ್ರ,” ಎಂದು ಬೊಬ್ಬೆಹಾಕುತ್ತಾ ಬಿಟ್ಟುಹೋದುವು. ಇವರೇ ‘ಕ್ರಿಸ್ತ’ ಎಂದು ಅವುಗಳು ತಿಳಿದಿದ್ದರಿಂದ ಯೇಸು ಅವುಗಳನ್ನು ಗದರಿಸಿ ಮಾತೆತ್ತಲು ಬಿಡಲಿಲ್ಲ.

ಎಫೆಸಿಯರಿಗೆ ೬:೧-೧೮
[೧] ಮಕ್ಕಳೇ, ಪ್ರಭುವಿನಲ್ಲಿ ನಿಮ್ಮ ತಂದೆತಾಯಿಗಳ ಮಾತಿಗೆ ಕಿವಿಗೊಡಿ. ಇದು ಧರ್ಮಸಮ್ಮತವಾದುದು.[೨] ‘ನಿನ್ನ ತಂದೆತಾಯನ್ನು ಗೌರವಿಸು’ ಎಂಬುದು ವಾಗ್ದಾನದಿಂದ ಕೂಡಿದ ಮೊದಲನೆಯ ಆಜ್ಞೆ.[೩] ಇದನ್ನು ಪಾಲಿಸಿದರೆ ನಿನಗೆ ಶುಭವಾಗುವುದು; ನೀನು ಬಹುಕಾಲ ಬಾಳುವೆ.[೪] ತಂದೆತಾಯಿಗಳೇ, ನಿಮ್ಮ ಮಕ್ಕಳನ್ನು ಕೆಣಕಿ ಕೆರಳಿಸಬೇಡಿ. ಪ್ರತಿಯಾಗಿ ಪ್ರಭುವಿಗೆ ಮೆಚ್ಚುಗೆಯಾಗುವ ರೀತಿಯಲ್ಲಿ ಅವರಿಗೆ ಶಿಕ್ಷಣವನ್ನು ಕೊಟ್ಟು ಶಿಸ್ತಿನಿಂದ ಸಾಕಿಸಲಹಿರಿ.[೫] ಸೇವಕರೇ, ನೀವು ಮಾಡುತ್ತಿರುವುದು ಕ್ರಿಸ್ತಯೇಸುವಿನ ಸೇವೆಯನ್ನೇ ಎಂದು ಭಾವಿಸಿ, ನಿಮ್ಮ ಲೌಕಿಕ ಧಣಿಗಳಿಗೆ ಭಯಭಕ್ತಿಯಿಂದಲೂ ಏಕಮನಸ್ಸಿನಿಂದಲೂ ವಿಧೇಯರಾಗಿರಿ.[೬] ಧಣಿಗಳನ್ನು ಮೆಚ್ಚಿಸುವ ಸಲುವಾಗಿ ಮುಖದಾಕ್ಷಿಣ್ಯದ ಸೇವೆಯನ್ನು ಮಾಡದಿರಿ. ಕ್ರಿಸ್ತಯೇಸುವಿನ ದಾಸರಂತೆ ದೈವೇಚ್ಛೆಯನ್ನು ಹೃದಯಪೂರ್ವಕವಾಗಿ ಈಡೇರಿಸಿರಿ.[೭] ನೀವು ಮಾಡುವುದು ಜನಸೇವೆಯಲ್ಲ, ಪ್ರಭುಸೇವೆ ಎಂದೇ ಭಾವಿಸಿ ನಗುಮುಖದಿಂದ ಸೇವೆಮಾಡಿ.[೮] ದಾಸ್ಯದಲ್ಲಿರುವವನಾಗಲಿ, ಸ್ವತಂತ್ರವುಳ್ಳವನಾಗಿರಲಿ ಸತ್ಕಾರ್ಯವನ್ನು ಮಾಡುವವನು ಪ್ರಭುವಿನಿಂದ ತಕ್ಕ ಪ್ರತಿಫಲವನ್ನು ಪಡೆದೇ ತೀರುವನೆಂದು ನೀವು ಬಲ್ಲಿರಿ.[೯] ಯಜಮಾನರೇ, ನೀವು ಕೂಡ ನಿಮ್ಮ ಸೇವಕರೊಡನೆ ಯೋಗ್ಯವಾದ ರೀತಿಯಲ್ಲಿ ವರ್ತಿಸಿರಿ. ಅವರನ್ನು ಬೆದರಿಸುವುದನ್ನು ಬಿಟ್ಟುಬಿಡಿ. ಸ್ವರ್ಗಲೋಕದಲ್ಲಿ ನಿಮಗೂ ಅವರಿಗೂ ಒಬ್ಬ ಯಜಮಾನ ಇರುತ್ತಾನೆ. ಆತ ಪಕ್ಷಪಾತಿಯಲ್ಲ ಎಂಬುದನ್ನು ಮರೆಯದಿರಿ.[೧೦] ಕೊನೆಯದಾಗಿ, ಪ್ರಭುವಿನ ಅನ್ಯೋನ್ಯತೆಯಲ್ಲಿ ಬಲಾಢ್ಯರಾಗಿರಿ. ಅವರ ಪರಾಕ್ರಮ ಶಕ್ತಿಯನ್ನು ಆಶ್ರಯಿಸಿರಿ.[೧೧] ಸೈತಾನನು ನಿಮಗೆ ಒಡ್ಡುವ ಕುತಂತ್ರಗಳ ವಿರುದ್ಧ ಅಚಲರಾಗಿ ನಿಲ್ಲಲು ನೀವು ಸಮರ್ಥರಾಗುವಂತೆ ದೇವರು ನೀಡುವ ಸಕಲ ಶಸ್ತ್ರಾಸ್ತ್ರಗಳನ್ನು ಧರಿಸಿಕೊಳ್ಳಿರಿ.[೧೨] ನಮ್ಮ ಹೋರಾಟ ಕೇವಲ ನರಮಾನವರೊಂದಿಗಲ್ಲ, ದಿಗಂತದಲ್ಲಿರುವ ಅಧಿಕಾರಿಗಳ ಹಾಗೂ ಆಧಿಪತ್ಯಗಳ ವಿರುದ್ಧ; ಪ್ರಸ್ತುತ ಅಂಧಕಾರಲೋಕಾಧಿಪತಿಗಳ ಹಾಗೂ ಅಶರೀರ ದುಷ್ಟಗಣಗಳ ವಿರುದ್ಧ.[೧೩] ಎಂದೇ, ದೇವರು ಕೊಡುವ ಸಕಲ ಶಸ್ತ್ರಾಸ್ತ್ರಗಳೊಂದಿಗೆ ಸುಸಜ್ಜಿತರಾಗಿರಿ. ಆ ದುರ್ದಿನದಂದು ವೈರಿಗಳನ್ನು ಎದುರಿಸಲು ಆಗ ನೀವು ಶಕ್ತರಾಗುತ್ತೀರಿ. ಮಾತ್ರವಲ್ಲ, ಕಟ್ಟಕಡೆಯವರೆಗೆ ಹಿಮ್ಮೆಟ್ಟದೆ ನಿಲ್ಲುತ್ತೀರಿ;[೧೪] ಹಿಮ್ಮೆಟ್ಟದೆ ನಿಲ್ಲಲೇಬೇಕು. ಇದಕ್ಕಾಗಿ ಸತ್ಯವೆಂಬ ನಡುಕಟ್ಟನ್ನು ಕಟ್ಟಿಕೊಳ್ಳಿ. ನೀತಿಯೆಂಬ ರಕ್ಷಕವಚವನ್ನು ತೊಟ್ಟುಕೊಳ್ಳಿರಿ.[೧೫] ಶಾಂತಿಯ ಶುಭಸಂದೇಶವನ್ನು ಸಾರಲು ಶ್ರದ್ಧೆಯೆಂಬ ಪಾದರಕ್ಷೆಯನ್ನು ಮೆಟ್ಟುಕೊಳ್ಳಿರಿ.[೧೬] ಸತತವೂ ವಿಶ್ವಾಸವೆಂಬ ಗುರಾಣಿಯನ್ನು ಹಿಡಿದುಕೊಳ್ಳಿರಿ. ಹೀಗೆ ಸೈತಾನನ ಅಗ್ನಿಬಾಣಗಳನ್ನೆಲ್ಲಾ ನಂದಿಸಲು ಶಕ್ತರಾಗುವಿರಿ.[೧೭] ರಕ್ಷಣೆಯೆಂಬ ಶಿರಸ್ತ್ರಾಣವನ್ನು ಧರಿಸಿಕೊಳ್ಳಿ; ಪವಿತ್ರಾತ್ಮರ ಕೊಡುಗೆಯಾದ ದೇವರ ವಾಕ್ಯವು ನಿಮಗೆ ಖಡ್ಗವಾಗಿರಲಿ.[೧೮] ಪವಿತ್ರಾತ್ಮರಿಂದ ಪ್ರೇರಿತರಾಗಿ ಎಲ್ಲಾ ಸಮಯಗಳಲ್ಲೂ ಪ್ರಾರ್ಥಿಸಿರಿ. ನಿಮ್ಮ ಕೋರಿಕೆ, ಬೇಡಿಕೆಗಳನ್ನು ದೇವರಿಗೆ ಅರ್ಪಿಸಿರಿ. ಎಚ್ಚರವಾಗಿದ್ದು ಎಲ್ಲಾ ದೇವಜನರಿಗಾಗಿ ಎಡೆಬಿಡದೆ ಪ್ರಾರ್ಥಿಸಿರಿ.

Kannada Bible (KNCL) 2016
No Data