A A A A A

ರಹಸ್ಯಗಳು: [ಡ್ರ್ಯಾಗನ್ಗಳು]


ಯೆಜೆಕಿಯೇಲನ 29:3
‘ನನ್ನ ಒಡೆಯನಾದ ಯೆಹೋವನು ಹೀಗೆ ಹೇಳಿದ್ದಾನೆ ಎಂದು ಅವರಿಗೆ ತಿಳಿಸು, “‘ಈಜಿಪ್ಟಿನ ರಾಜನಾದ ಫರೋಹನೇ, ನಾನು ನಿನಗೆ ವಿರುದ್ಧವಾಗಿದ್ದೇನೆ. ನೀನು ನೈಲ್ ನದಿಯ ದಡದಲ್ಲಿ ಮಲಗಿರುವ ಪೇರ್ಮೊಸಳೆ, “ಇದು ನಾನು ನಿರ್ಮಿಸಿದ ಹೊಳೆ” ಎಂದು ನೀನು ಹೇಳಿಕೊಳ್ಳುವೆ.

ಯೆಜೆಕಿಯೇಲನ ೩೨:೨
“ನರಪುತ್ರನೇ, ಈಜಿಪ್ಟಿನ ರಾಜನಾದ ಫರೋಹನಿಗೆ ಈ ಶೋಕಗೀತೆಯನ್ನು ಹಾಡು. ಅವನಿಗೆ ಹೀಗೆ ಹೇಳು: “‘ಜನಾಂಗಗಳ ಮಧ್ಯೆ ಹೆಮ್ಮೆಯಿಂದ ನಡೆದಾಡುತ್ತಿರುವ ಮೃಗರಾಜನಂತೆ ನೀನಿರುವೆ ಎಂದು ನೀನು ಭಾವಿಸಿದ್ದೆ. ಆದರೆ ನಿಜವಾಗಿಯೂ ನೀನು ಸರೋವರದಲ್ಲಿರುವ ಪೇರ್ಮೊಸಳೆಯಾಗಿರುವೆ. ನೀರಿನ ಹೊಳೆಗಳಲ್ಲಿ ನೀನು ನಿನ್ನ ದಾರಿಯನ್ನು ಮಾಡುವೆ. ನಿನ್ನ ಕಾಲುಗಳಿಂದ ಆ ನೀರನ್ನು ನೀನು ಕೆಸರಾಗಿ ಮಾಡುವೆ. ನೀನು ಈಜಿಪ್ಟಿನ ಹೊಳೆಗಳನ್ನು ಕದಡಿಸುವೆ.”‘

ಯೆಶಾಯನ ೨೭:೧
ಆ ಸಮಯದಲ್ಲಿ ಯೆಹೋವನು ವಂಚನೆಯ ಸರ್ಪವಾದ ಲಿವ್ಯಾತಾನನಿಗೆ ನ್ಯಾಯತೀರಿಸುವನು. ಯೆಹೋವನು ಕಠಿಣವೂ ಮಹತ್ವವೂ ಬಲವೂ ಆಗಿರುವ ತನ್ನ ಖಡ್ಗದಿಂದ ಸುತ್ತಿಕೊಂಡಿರುವ ಸರ್ಪವಾದ ಲಿವ್ಯಾತಾನನನ್ನು ಕೊಲ್ಲುವನು. ಯೆಹೋವನು ಸಮುದ್ರದಲ್ಲಿರುವ ಘಟಸರ್ಪವನ್ನು ಕೊಲ್ಲುವನು.

ಯೆಶಾಯನ ೫೧:೯
ಯೆಹೋವನ ಭುಜಬಲವೇ, ಎಚ್ಚರಗೊಳ್ಳು ಎಚ್ಚರಗೊಳ್ಳು, ಬಲವನ್ನು ಹೊಂದಿಕೊ! ಪುರಾತನ ಕಾಲದಲ್ಲಿ ಮಾಡಿದಂತೆಯೇ ನಿನ್ನ ಶಕ್ತಿಯನ್ನು ತೋರು. ನಿನ್ನ ಶಕ್ತಿಯಿಂದ ನೀನು ರಹಬನ್ನು ಸೋಲಿಸಿರುವೆ. ದೈತ್ಯಾಕಾರದ ಮೃಗವನ್ನು ಸೋಲಿಸಿರುವೆ.

ಯೋಬನ ೭:೧೨
ದೇವರೇ, ನೀನು ನನ್ನನ್ನು ಕಾಯುವುದೇಕೆ? ನಾನೇನು ಸಮುದ್ರವೇ? ಭಯಂಕರವಾದ ಸಮುದ್ರ ಪ್ರಾಣಿಯೇ?

ಯೋಬನ ೪೧:೧೮-೨೧
[೧೮] ಅದರ ಸೀನಿನ ತುಂತುರುಗಳು ಥಳಥಳಿಸುತ್ತವೆ. ಅದರ ಕಣ್ಣುಗಳು ಮುಂಜಾನೆಯ ಬೆಳಕಿನಂತಿವೆ.[೧೯] ಅದರ ಬಾಯೊಳಗಿಂದ ಉರಿಯುವ ಕೊಳ್ಳಿಗಳು ಹೊರಬರುತ್ತವೆ. ಬೆಂಕಿಯ ಜ್ವಾಲೆಗಳು ಹಾರುತ್ತವೆ.[೨೦] ಕಾಯ್ದಮಡಕೆಯ ಕೆಳಗೆ ಉರಿಯುತ್ತಿರುವ ಆಪು ಹುಲ್ಲಿನಿಂದ ಬರುವ ಹೊಗೆಯಂತೆ ಅದರ ಮೂಗಿನಿಂದ ಹೊಗೆಯು ಹಾಯುವುದು.[೨೧] ಅದರ ಉಸಿರು ಇದ್ದಲನ್ನು ಹೊತ್ತಿಸುವುದು; ಜ್ವಾಲೆಗಳು ಅದರ ಬಾಯೊಳಗಿಂದ ಹಾರುವವು.

ಕೀರ್ತನೆಗಳು ೧೮:೮
ಆತನ ಮೂಗಿನಿಂದ ಹೊಗೆಯು ಬಂದಿತು; ಆತನ ಬಾಯಿಂದ ಅಗ್ನಿಜ್ವಾಲೆಯೂ ಬೆಂಕಿಯ ಕಿಡಿಗಳೂ ಬಂದವು.

ಕೀರ್ತನೆಗಳು ೪೪:೧೯
ಆದರೆ ನರಿಗಳು ವಾಸಿಸುವ ಈ ಸ್ಥಳದಲ್ಲಿ ನೀನು ನಮ್ಮನ್ನು ಜಜ್ಜಿಹಾಕಿರುವೆ. ಮರಣದಂತೆ ಕತ್ತಲಾಗಿರುವ ಈ ಸ್ಥಳದಲ್ಲಿ ನೀನು ನಮ್ಮನ್ನು ತೊರೆದುಬಿಟ್ಟಿರುವೆ.

ಕೀರ್ತನೆಗಳು ೭೪:೧೩
ಮಹಾಶಕ್ತಿಯಿಂದ ಕೆಂಪು ಸಮುದ್ರವನ್ನು ಇಬ್ಭಾಗ ಮಾಡಿದಾತನು ನೀನೇ. ಸಮುದ್ರದಲ್ಲಿ ಮಹಾ ತಿಮಿಂಗಲಗಳ ತಲೆಗಳನ್ನು ಜಜ್ಜಿ ಹಾಕಿದಾತನು ನೀನೇ.

ಪ್ರಕಟನೆ ೧:೭
ಇಗೋ, ಯೇಸು ಮೋಡಗಳ ಸಂಗಡ ಬರುತ್ತಿದ್ದಾನೆ. ಪ್ರತಿಯೊಬ್ಬರು ಆತನನ್ನು ನೋಡುವರು, ಆತನನ್ನು ಇರಿದವರು ಸಹ ನೋಡುವರು. ಆತನನ್ನು ಕಂಡು ಲೋಕದ ಜನರೆಲ್ಲರೂ ಎದೆಬಡಿದುಕೊಂಡು ಗೋಳಾಡುವರು. ಹೌದು, ಇದು ಸಂಭವಿಸುತ್ತದೆ! ಆಮೆನ್.

ಪ್ರಕಟನೆ ೧೧:೭
ಈ ಇಬ್ಬರು ಸಾಕ್ಷಿಗಳು ತಮ್ಮ ಸಂದೇಶವನ್ನು ಹೇಳಿ ಮುಗಿಸಿದ ನಂತರ, ತಳವಿಲ್ಲದ ಕೂಪದಿಂದ ಮೇಲಕ್ಕೆ ಬರುವ ಮೃಗವು ಅವರ ವಿರುದ್ಧ ಹೋರಾಟ ಮಾಡುತ್ತದೆ. ಈ ಮೃಗವು ಅವರನ್ನು ಸೋಲಿಸಿ, ಕೊಂದು ಹಾಕುತ್ತದೆ.

ಧರ್ಮೋಪದೇಷಕಾಂಡ ೩೨:೩೩
ಅವರ ದ್ರಾಕ್ಷೆಯು ವಿಷದಂತೆಯೂ ಅವರ ದ್ರಾಕ್ಷಾರಸವು ಹಾವಿನ ವಿಷದಂತೆಯೂ ಕಹಿಯಾಗಿವೆ.

ಪ್ರಕಟನೆ ೧೩:೮
ಲೋಕದಲ್ಲಿ ವಾಸಿಸುವ ಜನರೆಲ್ಲರೂ ಆ ಮೃಗವನ್ನು ಆರಾಧಿಸುತ್ತಾರೆ. ಲೋಕವು ಆರಂಭಗೊಂಡಂದಿನಿಂದಲೂ ಕೊಲ್ಲಲ್ಪಟ್ಟ ಕುರಿಮರಿಯಾದಾತನ ಜೀವಬಾಧ್ಯರ ಪುಸ್ತಕದಲ್ಲಿ ಯಾರ ಹೆಸರುಗಳನ್ನು ಬರೆದಿಲ್ಲವೋ ಅವರೇ ಈ ಜನರು.

ಪ್ರಕಟನೆ ೧೬:೧೩
ಆಗ ಕಪ್ಪೆಗಳಂತಿದ್ದ ಮೂರು ಅಶುದ್ಧಾತ್ಮಗಳನ್ನು ನಾನು ನೋಡಿದೆನು. ಅವು ಘಟಸರ್ಪದ ಬಾಯಿಂದ, ಮೃಗದ ಬಾಯಿಂದ ಮತ್ತು ಸುಳ್ಳುಪ್ರವಾದಿಯ ಬಾಯಿಂದ ಹೊರಗೆ ಬಂದವು.

ವಿಮೋಚನಾಕಾಂಡ ೭:೧೦-೧೨
[೧೦] ಆದ್ದರಿಂದ ಮೋಶೆ ಆರೋನರು ಫರೋಹನ ಬಳಿಗೆ ಹೋದರು. ಯೆಹೋವನು ಆಜ್ಞಾಪಿಸಿದ್ದಂತೆಯೇ ಅವರು ಮಾಡಿದರು. ಆರೋನನು ತನ್ನ ಊರುಗೋಲನ್ನು ಫರೋಹನ ಮತ್ತು ಅವನ ಅಧಿಕಾರಿಗಳ ಮುಂದೆ ನೆಲದ ಮೇಲೆ ಬಿಸಾಡಿದಾಗ ಅದು ಸರ್ಪವಾಯಿತು.[೧೧] ಆಗ ರಾಜನು ತನ್ನ ವಿದ್ವಾಂಸರನ್ನೂ ಮಂತ್ರಗಾರರನ್ನೂ ಕರೆಯಿಸಿದನು. ಅವರು ತಮ್ಮ ಮಂತ್ರವಿದ್ಯೆಯಿಂದ ಅದೇ ರೀತಿ ಮಾಡಿದರು.[೧೨] ಅವರು ತಮ್ಮ ಊರುಗೋಲುಗಳನ್ನು ನೆಲದ ಮೇಲೆ ಬಿಸಾಡಿದಾಗ ಅವು ಸರ್ಪಗಳಾದವು. ಆದರೆ ಆರೋನನ ಕೋಲು ಅವರ ಕೋಲುಗಳನ್ನು ನುಂಗಿಬಿಟ್ಟಿತು.

ಯೋಬನ ೪೦:೧೫-೨೦
[೧೫] “ಯೋಬನೇ, ಬೆಹೇಮೋತನ್ನು ನೋಡು. ಅದನ್ನು ನಿರ್ಮಿಸಿದವನು ನಾನೇ; ನಿನ್ನನ್ನು ನಿರ್ಮಿಸಿದವನೂ ನಾನೇ. ಅದು ಹಸುವಿನಂತೆ ಹುಲ್ಲನ್ನು ಮೇಯುತ್ತದೆ.[೧೬] ಅದರ ದೇಹದಲ್ಲಿ ಬಹಳ ಶಕ್ತಿಯಿದೆ. ಅದರ ಹೊಟ್ಟೆಯಲ್ಲಿರುವ ಮಾಂಸಖಂಡಗಳು ಬಹು ಶಕ್ತಿಯುತವಾಗಿವೆ.[೧೭] ಅದರ ಬಾಲವು ದೇವದಾರು ಮರದಂತೆ ಬಲವಾಗಿ ನಿಂತುಕೊಳ್ಳುತ್ತದೆ. ಅದರ ಕಾಲಿನ ಮಾಂಸಖಂಡಗಳು ಬಹು ಬಲವಾಗಿವೆ.[೧೮] ಅದರ ಎಲುಬುಗಳು ತಾಮ್ರದಂತೆ ಬಲವಾಗಿವೆ. ಅದರ ಕಾಲುಗಳು ಕಬ್ಬಿಣದ ಕಂಬಿಗಳಂತಿವೆ.[೧೯] ನನ್ನಿಂದ ನಿರ್ಮಿತವಾಗಿರುವ ಅತ್ಯದ್ಭುತವಾದ ಪ್ರಾಣಿ ಅದು. ಅದನ್ನು ಸೃಷ್ಟಿಸಿದ ನಾನೊಬ್ಬನೇ ಅದನ್ನು ಕೊಲ್ಲಬಲ್ಲೆನು.[೨೦] ಕಾಡುಪ್ರಾಣಿಗಳು ಆಟವಾಡುವ ಬೆಟ್ಟಗಳ ಮೇಲೆ ಬೆಳೆಯುವ ಹುಲ್ಲನ್ನು ಅದು ತಿನ್ನುತ್ತದೆ.

ಪ್ರಕಟನೆ ೧೨:೧-೧೭
[೧] ಆಗ ಪರಲೋಕದಲ್ಲಿ ಮಹಾ ಅದ್ಭುತವು ಕಾಣಿಸಿತು. ಸೂರ್ಯನನ್ನು ಧರಿಸಿದ್ದ ಒಬ್ಬ ಸ್ತ್ರೀ ಅಲ್ಲಿದ್ದಳು. ಆಕೆಯ ಪಾದದ ಕೆಳಗೆ ಚಂದ್ರನಿದ್ದನು. ಆಕೆಯ ತಲೆಯ ಮೇಲೆ ಹನ್ನೆರಡು ನಕ್ಷತ್ರಗಳುಳ್ಳ ಒಂದು ಕಿರೀಟವಿತ್ತು.[೨] ಆಕೆಯು ಗರ್ಭಿಣಿಯಾಗಿದ್ದಳು ಆಕೆಯು ಪ್ರಸವವೇದನೆಯಿಂದ ಕೂಗಿದಳು.[೩] ಆಗ ಪರಲೋಕದಲ್ಲಿ ಮತ್ತೊಂದು ಅದ್ಭುತವು ಕಾಣಿಸಿತು: ಕೆಂಪಾದ ಮಹಾ ಘಟಸರ್ಪವೊಂದು ಅಲ್ಲಿತ್ತು. ಆ ಘಟಸರ್ಪಕ್ಕೆ ಏಳು ತಲೆಗಳಿದ್ದು, ಪ್ರತಿಯೊಂದು ತಲೆಯ ಮೇಲೂ ಏಳು ಕಿರೀಟಗಳಿದ್ದವು. ಆ ಸರ್ಪಕ್ಕೆ ಹತ್ತು ಕೊಂಬುಗಳಿದ್ದವು.[೪] ಆ ಸರ್ಪದ ಬಾಲವು ಆಕಾಶದ ನಕ್ಷತ್ರಗಳಲ್ಲಿ ಮೂರನೆಯ ಒಂದು ಭಾಗವನ್ನು ಸೆಳೆದೆಳೆದು ಭೂಮಿಯ ಮೇಲೆ ಎಸೆಯಿತು. ಆ ಘಟಸರ್ಪವು ಪ್ರಸವ ವೇದನೆಪಡುತ್ತಿದ್ದ ಸ್ತ್ರೀಯ ಎದುರಿನಲ್ಲಿ ನಿಂತುಕೊಂಡಿತು. ಆ ಸ್ತ್ರೀಯು ಹೆರುವ ಮಗುವನ್ನು ನುಂಗಿಹಾಕಲು ಆ ಸರ್ಪವು ಕಾದುಕೊಂಡಿತ್ತು.[೫] ಆ ಸ್ತ್ರೀಯು ಅವನು ಎಲ್ಲಾ ಜನಾಂಗಗಳನ್ನು ಕಬ್ಬಿಣದ ಕೋಲಿನಿಂದ ಆಳುವ ಒಂದು ಗಂಡು ಮಗುವನ್ನು ಹೆತ್ತಳು. ಅವಳ ಮಗುವನ್ನು ದೇವರ ಬಳಿಗೂ ಆತನ ಸಿಂಹಾಸನದ ಬಳಿಗೂ ತೆಗೆದುಕೊಂಡು ಹೋಗಲಾಯಿತು.[೬] ಆ ಸ್ತ್ರೀಯು ತನಗಾಗಿ ದೇವರು ಸಿದ್ಧಪಡಿಸಿದ್ದ ಮರುಳುಗಾಡಿನ ಒಂದು ಸ್ಥಳಕ್ಕೆ ಓಡಿಹೋದಳು. ಆ ಮರಳುಗಾಡಿನಲ್ಲಿ ಆಕೆಯನ್ನು ಸಾವಿರದ ಇನ್ನೂರ ಅರವತ್ತು ದಿನಗಳ ಕಾಲ ಪೋಷಿಸಲಾಗುವುದು.[೭] ನಂತರ ಪರಲೋಕದಲ್ಲಿ ಒಂದು ಯುದ್ಧವಾಯಿತು. ಮಿಕಾಯೇಲನು ಮತ್ತು ಅವನ ಸಹದೂತರು ಆ ಘಟಸರ್ಪದ ವಿರುದ್ಧ ಹೋರಾಡಿದರು. ಆ ಘಟಸರ್ಪ ಮತ್ತು ಅದರ ದೂತರೂ ಹೋರಾಡಿದರು.[೮] ಆದರೆ ಆ ಘಟಸರ್ಪವೂ ಅದರ ದೂತರೂ ಸೋತುಹೋಗಿ ಪರಲೋಕದಲ್ಲಿ ತಮ್ಮ ಸ್ಥಾನಗಳನ್ನು ಕಳೆದುಕೊಂಡರು.[೯] ಆ ಘಟಸರ್ಪವನ್ನು ಪರಲೋಕದಿಂದ (ಆ ಘಟಸರ್ಪಕ್ಕೆ ಸೈತಾನನೆಂತಲೂ ಪಿಶಾಚನೆಂತಲೂ ಹೆಸರಿದೆ. ಅದು ಲೋಕವನ್ನೆಲ್ಲಾ ತಪ್ಪು ಮಾರ್ಗಕ್ಕೆ ಎಳೆಯುತ್ತಿತ್ತು.) ಅದರ ದೂತರೊಂದಿಗೆ ಭೂಮಿಯ ಮೇಲೆ ಎಸೆಯಲಾಯಿತು.[೧೦] ಆಗ ಪರಲೋಕದಲ್ಲಾದ ಒಂದು ಮಹಾಶಬ್ದವನ್ನು ನಾನು ಕೇಳಿದೆನು: “ನಮ್ಮ ದೇವರ ಜಯವು, ಶಕ್ತಿಯು ಮತ್ತು ರಾಜ್ಯವು ಹಾಗೂ ಆತನವನಾಗಿರುವ ಕ್ರಿಸ್ತನ ಅಧಿಕಾರವು ಈಗ ಬಂದಿವೆ. ನಮ್ಮ ಸಹೋದರರ ಮೇಲೆ ದೂಷಣೆ ಮಾಡುವವನನ್ನು ಹೊರಕ್ಕೆ ಎಸೆದಿರುವುದರಿಂದ ಇವುಗಳೆಲ್ಲಾ ಬಂದಿವೆ. ನಮ್ಮ ದೇವರ ಮುಂದೆ ಹಗಲಿರುಳು ನಮ್ಮ ಸಹೋದರರ ಬಗ್ಗೆ ಅವನು ದೂರು ಹೇಳಿದನು.[೧೧] ನಮ್ಮ ಸಹೋದರರು ಕುರಿಮರಿಯಾದಾತನ ರಕ್ತದಿಂದಲೂ ತಮ್ಮ ವಾಕ್ಯದ ಬಲದಿಂದಲೂ ಅವನನ್ನು ಸೋಲಿಸಿದರು. ಅವರು ತಮ್ಮ ಜೀವಗಳನ್ನು ಪ್ರೀತಿಸಲಿಲ್ಲ. ಅವರು ಮರಣಕ್ಕೆ ಭಯಪಡಲಿಲ್ಲ.[೧೨] ಆದ್ದರಿಂದ ಪರಲೋಕವೇ, ಅದರಲ್ಲಿ ವಾಸಮಾಡುವವರೆಲ್ಲರೇ, ಹರ್ಷಗೊಳ್ಳಿರಿ! ಆದರೆ ಭೂಮಿಯೇ, ಸಮುದ್ರವೇ, ಸೈತಾನನು ನಿಮ್ಮ ಬಳಿಗೆ ಬಂದಿರುವುದರಿಂದ ನಿಮಗೆ ದುರ್ಗತಿಯುಂಟಾಗುವುದು! ಸೈತಾನನು ಕೋಪದಿಂದ ತುಂಬಿಕೊಂಡಿದ್ದಾನೆ. ತನಗಿರುವುದು ಸ್ವಲ್ಪಕಾಲವೆಂಬುದು ಅವನಿಗೆ ತಿಳಿದಿದೆ.”[೧೩] ಘಟಸರ್ಪಕ್ಕೆ ತನ್ನನ್ನು ಭೂಮಿಗೆ ತಳ್ಳಿಬಿಟ್ಟಿರುವುದು ತಿಳಿಯಿತು. ಆದ್ದರಿಂದ ಅವನು ಗಂಡು ಮಗುವನ್ನು ಹೆತ್ತ ಸ್ತ್ರೀಯನ್ನು ಅಟ್ಟಿಸಿಕೊಂಡು ಹೋದನು.[೧೪] ಆದರೆ ಆ ಸ್ತ್ರೀಗೆ ಮಹಾಗರುಡನ ಎರಡು ರೆಕ್ಕೆಗಳನ್ನು ಕೊಡಲ್ಪಟ್ಟದ್ದರಿಂದ, ತನಗಾಗಿ ಮರುಳುಗಾಡಿನಲ್ಲಿ ಸಿದ್ಧಪಡಿಸಿದ ಸ್ಥಳಕ್ಕೆ ಹಾರಿ ಹೋಗಲು ಆಕೆಗೆ ಸಾಧ್ಯವಾಯಿತು. ಅಲ್ಲಿ ಅವಳು ಮೂರುವರೆ ವರ್ಷಗಳ ಕಾಲ ಪೋಷಣೆ ಹೊಂದುತ್ತಾ ಸರ್ಪಕ್ಕೆ ಕಾಣದಂತೆ ಮರೆಯಾಗಿರುವಳು.[೧೫] ಆಗ ಸರ್ಪವು ತನ್ನ ಬಾಯಿಂದ ನದಿಯಂತೆ ನೀರನ್ನು ಹೊರಚೆಲ್ಲಿತು. ಆ ಪ್ರವಾಹದ ನೀರು ಅವಳನ್ನು ಕೊಚ್ಚಿ ಕೊಂಡುಹೋಗಲಿ ಎಂಬುದೇ ಆ ಘಟಸರ್ಪದ ಉದ್ದೇಶವಾಗಿತ್ತು.[೧೬] ಆದರೆ ಭೂಮಿಯು ಆ ಸ್ತ್ರೀಗೆ ಸಹಾಯ ಮಾಡಲು ತನ್ನ ಬಾಯನ್ನು ತೆರೆದು, ಘಟಸರ್ಪದ ಬಾಯಿಂದ ಹೊರಬಂದ ನದಿಯನ್ನು ಕುಡಿದುಬಿಟ್ಟಿತು.[೧೭] ಆಗ ಘಟ ಸರ್ಪವು ಆ ಸ್ತ್ರೀಯ ಮೇಲೆ ಬಹಳ ಕೋಪಗೊಂಡು ಆಕೆಯ ಇತರ ಮಕ್ಕಳೆಲ್ಲರ ಮೇಲೆ ಅಂದರೆ ದೇವರ ಆಜ್ಞೆಗಳನ್ನು ಅನುಸರಿಸುವವರ ಮತ್ತು ಯೇಸುವಿನ ಕುರಿತು ಸಾಕ್ಷಿ ಹೇಳುವವರ ಮೇಲೆ ಹೋರಾಟ ಮಾಡಲು ಹೋಯಿತು.

ಪ್ರಕಟನೆ ೧೩:೧-೧೮
[೧] ನಂತರ ಸಮುದ್ರದಿಂದ ಒಂದು ಮೃಗವು ಹೊರಗೆ ಬರುತ್ತಿರುವುದನ್ನು ನಾನು ನೋಡಿದೆನು. ಅದಕ್ಕೆ ಹತ್ತು ಕೊಂಬುಗಳೂ ಏಳು ತಲೆಗಳೂ ಇದ್ದವು. ಅದರ ಪ್ರತಿಯೊಂದು ಕೊಂಬಿನ ಮೇಲೆ ಒಂದೊಂದು ಕಿರೀಟವಿತ್ತು. ಪ್ರತಿಯೊಂದು ತಲೆಯ ಮೇಲೂ ದೇವದೂಷಣೆ ನಾಮಗಳನ್ನು ಬರೆಯಲಾಗಿತ್ತು.[೨] ಈ ಮೃಗವು ನೋಡಲು ಚಿರತೆ ಯಂತಿತ್ತು. ಅದರ ಪಾದಗಳು ಕರಡಿಯ ಪಾದಗಳಂತಿದ್ದವು. ಅದರ ಬಾಯಿಯು ಸಿಂಹದ ಬಾಯಿಯಂತಿತ್ತು. ಘಟಸರ್ಪವು ಆ ಮೃಗಕ್ಕೆ ತನ್ನ ಶಕ್ತಿಯನ್ನು, ತನ್ನ ಸಿಂಹಾಸನವನ್ನು ಮತ್ತು ಅಧಿಕವಾದ ಅಧಿಕಾರವನ್ನು ನೀಡಿತು.[೩] ಮೃಗದ ತಲೆಗಳಲ್ಲಿ ಒಂದು ತಲೆಯು ಗಾಯಗೊಂಡು ಸತ್ತಂತೆ ಕಾಣುತ್ತಿತ್ತು. ಆದರೆ ಮರಣಕರವಾದ ಈ ಗಾಯವನ್ನು ವಾಸಿಮಾಡಲಾಯಿತು. ಈ ಲೋಕದಲ್ಲಿದ್ದ ಜನರೆಲ್ಲರೂ ಆಶ್ಚರ್ಯಗೊಂಡು ಆ ಮೃಗವನ್ನು ಹಿಂಬಾಲಿಸಿದರು.[೪] ಆ ಘಟಸರ್ಪವು ತನ್ನ ಶಕ್ತಿಯನ್ನೆಲ್ಲಾ ಆ ಮೃಗಕ್ಕೆ ನೀಡಿದ್ದರಿಂದ ಜನರೆಲ್ಲರೂ ಆ ಸರ್ಪವನ್ನೂ ಆ ಮೃಗವನ್ನೂ ಆರಾಧಿಸಿ, “ಮೃಗಕ್ಕಿಂತಲೂ ಅಧಿಕ ಬಲಶಾಲಿಗಳು ಯಾರಿದ್ದಾರೆ? ಅದರ ವಿರುದ್ಧ ಯಾರು ಹೋರಾಡಬಲ್ಲರು?” ಎಂದು ಹೇಳುತ್ತಿದ್ದರು.[೫] ಆ ಮೃಗಕ್ಕೆ ಬಡಾಯಿ ಮಾತುಗಳನ್ನೂ ದೂಷಣೆಯ ಮಾತುಗಳನ್ನೂ ಆಡಲು ಅವಕಾಶ ನೀಡಲಾಯಿತು. ಆ ಮೃಗಕ್ಕೆ ಅದರ ಶಕ್ತಿಯನ್ನು ನಲವತ್ತೆರಡು ತಿಂಗಳ ಕಾಲ ಬಳಸಲು ಅವಕಾಶ ನೀಡಲಾಯಿತು.[೬] ಆ ಮೃಗವು ದೇವರಿಗೆ ಅಪಮಾನ ಮಾಡಲು ತನ್ನ ಬಾಯನ್ನು ತೆರೆಯಿತು. ಅಲ್ಲದೆ ದೇವರ ಹೆಸರಿನ ವಿರುದ್ಧವಾಗಿಯೂ ದೇವರು ವಾಸಿಸುವ ಸ್ಥಳದ ವಿರುದ್ಧವಾಗಿಯೂ ಪರಲೋಕದಲ್ಲಿ ಜೀವಿಸುವ ಜನರೆಲ್ಲರ ವಿರುದ್ಧವಾಗಿಯೂ ದೂಷಣೆ ಮಾಡಿತು.[೭] ದೇವರ ಪರಿಶುದ್ಧ ಜನರ ವಿರುದ್ಧ ಯುದ್ಧಮಾಡಿ, ಅವರನ್ನು ಸೋಲಿಸುವ ಶಕ್ತಿಯನ್ನು ಮೃಗಕ್ಕೆ ನೀಡಲಾಯಿತು. ಸಕಲ ಕುಲ, ಪ್ರಜೆ, ಭಾಷೆ ಮತ್ತು ಜನಾಂಗಗಳ ಮೇಲಿನ ಅಧಿಕಾರವನ್ನು ಆ ಮೃಗಕ್ಕೆ ಕೊಡಲಾಯಿತು.[೮] ಲೋಕದಲ್ಲಿ ವಾಸಿಸುವ ಜನರೆಲ್ಲರೂ ಆ ಮೃಗವನ್ನು ಆರಾಧಿಸುತ್ತಾರೆ. ಲೋಕವು ಆರಂಭಗೊಂಡಂದಿನಿಂದಲೂ ಕೊಲ್ಲಲ್ಪಟ್ಟ ಕುರಿಮರಿಯಾದಾತನ ಜೀವಬಾಧ್ಯರ ಪುಸ್ತಕದಲ್ಲಿ ಯಾರ ಹೆಸರುಗಳನ್ನು ಬರೆದಿಲ್ಲವೋ ಅವರೇ ಈ ಜನರು.[೯] ಇವುಗಳನ್ನು ಕೇಳುವವನು ಗಮನವಿಟ್ಟು ಆಲಿಸಲಿ:[೧೦] ಸೆರೆ ಒಯ್ಯುವವನು[೧೧] ನಂತರ ಭೂಮಿಯಿಂದ ಹೊರಗೆ ಬರುತ್ತಿರುವ ಮತ್ತೊಂದು ಮೃಗವನ್ನು ನಾನು ನೋಡಿದೆನು. ಅದಕ್ಕೆ ಟಗರಿನಂತೆ ಎರಡು ಕೊಂಬುಗಳಿದ್ದವು. ಆದರೆ ಅದು ಘಟಸರ್ಪದಂತೆ ಮಾತಾಡುತ್ತಿತ್ತು.[೧೨] ಈ ಮೃಗವು ಮೊದಲಿನ ಮೃಗದ ಅಧಿಕಾರವನ್ನೇ ಬಳಸುತ್ತದೆ. ಭೂಮಿಯ ಮೇಲೆ ವಾಸಿಸುವ ಜನರೆಲ್ಲರೂ ಮೊದಲಿನ ಮೃಗವನ್ನು ಆರಾಧಿಸುವಂತೆ ಮಾಡಲು ಅದು ತನ್ನ ಶಕ್ತಿಯನ್ನೆಲ್ಲಾ ಬಳಸುತ್ತದೆ. ಮರಣಕರವಾದ ಗಾಯದಿಂದ ಗುಣಮುಖವಾದದ್ದೇ ಮೊದಲನೆಯ ಮೃಗ.[೧೩] ಈ ಎರಡನೆಯ ಮೃಗವು ಮಹಾ ಅದ್ಭುತಗಳನ್ನು ಮಾಡುತ್ತದೆ. ಅದು ಜನರ ಕಣ್ಣೆದುರಿನಲ್ಲಿಯೇ ಬೆಂಕಿಯನ್ನು ಆಕಾಶದಿಂದ ಭೂಮಿಗೆ ಸುರಿಸುತ್ತದೆ.[೧೪] ಈ ಎರಡನೆಯ ಮೃಗವು ಅದ್ಭುತಗಳನ್ನು ಮಾಡಲು ತನಗೆ ನೀಡಿರುವ ಶಕ್ತಿಯಿಂದ ಭೂಮಿಯ ಮೇಲೆ ವಾಸಿಸುವ ಜನರನ್ನು ಮರುಳು ಗೊಳಿಸುತ್ತದೆ. ಮೊದಲನೆಯ ಮೃಗದ ಸೇವೆಯನ್ನು ಮಾಡಲು ಅದು ಈ ಅದ್ಭುತಗಳನ್ನು ಮಾಡುತ್ತದೆ. ಕತ್ತಿಯಿಂದ ಗಾಯಗೊಂಡಿದ್ದೂ ಸಾಯದೆ ಬದುಕಿದ ಮೊದಲನೆಯ ಮೃಗಕ್ಕೆ ಗೌರವ ತೋರಲು ವಿಗ್ರಹವನ್ನು ನಿರ್ಮಿಸುವಂತೆ ಅದು ಜನರಿಗೆ ಆಜ್ಞಾಪಿಸಿತು.[೧೫] ಮೊದಲನೆಯ ಮೃಗದ ವಿಗ್ರಹಕ್ಕೆ ಜೀವ ಬರುವಂತೆ ಮಾಡುವ ಶಕ್ತಿಯನ್ನು ಎರಡನೆಯ ಮೃಗಕ್ಕೆ ಕೊಡಲಾಯಿತು. ಆಗ ಆ ವಿಗ್ರಹಕ್ಕೆ ಮಾತಾಡುವ ಶಕ್ತಿ ಬಂದಿತು. ಅದು ತನ್ನನ್ನು ಪೂಜಿಸದವರನ್ನೆಲ್ಲಾ ಕೊಲ್ಲುವುದಾಗಿ ಆಜ್ಞೆ ಹೊರಡಿಸಿತು.[೧೬] ಎರಡನೆಯ ಮೃಗವು ಸಹ ಎಲ್ಲರನ್ನು ಅಂದರೆ ಚಿಕ್ಕವರನ್ನು, ದೊಡ್ಡವರನ್ನು, ಶ್ರೀಮಂತ ರನ್ನು, ಬಡವರನ್ನು, ಗುಲಾಮರನ್ನು ಮತ್ತು ಸ್ವತಂತ್ರರನ್ನು, ತಮ್ಮ ಬಲಗೈಯ ಮೇಲಾಗಲಿ ಅಥವಾ ತಮ್ಮ ಹಣೆಗಳ ಮೇಲಾಗಲಿ ಗುರುತು ಹಾಕಿಕೊಳ್ಳಬೇಕೆಂದು ಒತ್ತಾಯಪಡಿಸಿತು.[೧೭] ಈ ಗುರುತಿಲ್ಲದೆ ಯಾರೂ ಕೊಳ್ಳುವಂತಿಲ್ಲ ಮತ್ತು ಮಾರುವಂತಿಲ್ಲ. ಈ ಗುರುತು ಏನೆಂದರೆ ಆ ಮೃಗದ ಹೆಸರು ಅಥವಾ ಅದರ ಹೆಸರಿನ ಸಂಖ್ಯೆ.[೧೮] ತಿಳುವಳಿಕೆಯುಳ್ಳ ಮನುಷ್ಯನು ಮೃಗದ ಸಂಖ್ಯೆಯ ಅರ್ಥವನ್ನು ಕಂಡುಕೊಳ್ಳಲು ಸಾಧ್ಯ. ಇಲ್ಲಿ ಜ್ಞಾನದ ಅಗತ್ಯವಿದೆ. ಈ ಸಂಖ್ಯೆಯು ಮನುಷ್ಯನ ಸಂಖ್ಯೆಯಾಗಿದೆ. ಅವನ ಸಂಖ್ಯೆ 666.

ಪ್ರಕಟನೆ ๒๐:๑-๑๕
[๑] ಆಗ ಒಬ್ಬ ದೇವದೂತನು ಪರಲೋಕದಿಂದ ಬರುತ್ತಿರುವುದನ್ನು ನಾನು ನೋಡಿದೆನು. ಆ ದೇವದೂತನು ತಳವಿಲ್ಲದ ಕೂಪದ ಬೀಗದ ಕೈಯನ್ನು ಹೊಂದಿದ್ದನು ಮತ್ತು ಒಂದು ದೊಡ್ಡ ಸರಪಣಿಯನ್ನೂ ತನ್ನ ಕೈಯಲ್ಲಿ ಹಿಡಿದಿದ್ದನು.[๒] ಆ ದೇವದೂತನು ಪುರಾತನ ಘಟಸರ್ಪವನ್ನು ಹಿಡಿದನು. ಆ ಘಟಸರ್ಪವೇ ಸೈತಾನ. ದೇವದೂತನು ಅವನನ್ನು ಸರಪಣಿಗಳಿಂದ ಕಟ್ಟಿ ಒಂದುಸಾವಿರ ವರ್ಷಗಳ ಕಾಲ ಬಂಧನದಲ್ಲಿಟ್ಟನು.[๓] ಆ ದೇವದೂತನು ಘಟಸರ್ಪವನ್ನು ತಳವಿಲ್ಲದ ಕೂಪಕ್ಕೆ ತಳ್ಳಿ ಬಾಗಿಲನ್ನು ಮುಚ್ಚಿ ಬೀಗಹಾಕಿದನು, ಆ ಘಟಸರ್ಪವು ಒಂದುಸಾವಿರ ವರ್ಷಗಳ ಕಾಲ ಮುಗಿಯುವ ತನಕ ಲೋಕದ ಜನರನ್ನು ಮರುಳು ಮಾಡದಿರಲೆಂದು ಆ ದೇವದೂತನು ಹೀಗೆ ಮಾಡಿದನು. ಒಂದುಸಾವಿರ ವರ್ಷಗಳ ತರುವಾಯ ಆ ಘಟಸರ್ಪಕ್ಕೆ ಸ್ವಲ್ಪಕಾಲ ಬಿಡುಗಡೆ ಮಾಡಲಾಗುವುದು.[๔] ನಂತರ ನಾನು ಕೆಲವು ಸಿಂಹಾಸನಗಳನ್ನು ಮತ್ತು ಅವುಗಳ ಮೇಲೆ ಜನರು ಕುಳಿತಿರುವುದನ್ನು ನೋಡಿದೆನು. ಈ ಜನರು ತೀರ್ಪು ನೀಡುವ ಅಧಿಕಾರವನ್ನು ಹೊಂದಿದ್ದರು. ಯೇಸುವಿನ ಸತ್ಯಕ್ಕೆ ಮತ್ತು ದೇವರ ಸಂದೇಶಕ್ಕೆ ನಂಬಿಗಸ್ತರಾಗಿದ್ದರ ನಿಮಿತ್ತವಾಗಿ ಕೊಲ್ಲಲ್ಪಟ್ಟವರ ಜೀವಾತ್ಮಗಳನ್ನು ನಾನು ನೋಡಿದೆನು. ಆ ಜನರು ಮೃಗವನ್ನಾಗಲಿ ಅದರ ವಿಗ್ರಹವನ್ನಾಗಲಿ ಆರಾಧಿಸಿರಲಿಲ್ಲ. ಅವರು ತಮ್ಮ ಹಣೆಯ ಮೇಲಾಗಲಿ ಕೈಗಳ ಮೇಲಾಗಲಿ ಮೃಗದ ಗುರುತನ್ನು ಹಾಕಿಸಿಕೊಂಡಿರಲಿಲ್ಲ. ಆ ಜನರು ಮತ್ತೆ ಜೀವವನ್ನು ಪಡೆದು ಕ್ರಿಸ್ತನೊಂದಿಗೆ ಒಂದುಸಾವಿರ ವರ್ಷ ಆಳಿದರು.[๕] (ಸತ್ತುಹೋಗಿದ್ದ ಇತರ ಜನರು ಒಂದುಸಾವಿರ ವರ್ಷಗಳು ಮುಗಿಯುವ ತನಕ ಜೀವಂತರಾಗಲೇ ಇಲ್ಲ.) ಇದೇ ಪ್ರಥಮ ಪುನರುತ್ಥಾನ.[๖] ಪ್ರಥಮ ಪುನರುತ್ಥಾನದಲ್ಲಿ ಸೇರಿರುವವರು ಪವಿತ್ರರೂ ಧನ್ಯರೂ ಆಗಿದ್ದಾರೆ. ಈ ಜನರ ಮೇಲೆ ಎರಡನೆ ಮರಣಕ್ಕೆ ಅಧಿಕಾರವಿಲ್ಲ. ಆ ಜನರು ದೇವರಿಗೆ ಮತ್ತು ಕ್ರಿಸ್ತನಿಗೆ ಯಾಜಕರಾಗಿರುತ್ತಾರೆ. ಅವರು ಆತನೊಂದಿಗೆ ಒಂದು ಸಾವಿರ ವರ್ಷ ಆಳುತ್ತಾರೆ.[๗] ಒಂದುಸಾವಿರ ವರ್ಷಗಳು ಮುಗಿದ ನಂತರ, ಸೈತಾನನನ್ನು ಅವನ ಸೆರೆಯಿಂದ ಬಿಡುಗಡೆ ಮಾಡಲಾಗುತ್ತದೆ.[๘] ಸೈತಾನನು ಗೋಗ್ ಮತ್ತು ಮಾಗೋಗ್ ಜನಾಂಗಗಳನ್ನು ಮರುಳುಗೊಳಿಸಲು ಭೂಲೋಕದಲ್ಲೆಲ್ಲಾ ಹೋಗಿ ಆ ಜನರನ್ನು ಯುದ್ಧಕ್ಕೆ ಒಟ್ಟುಗೂಡಿಸುತ್ತಾನೆ. ಅವರು ಸಮುದ್ರ ತೀರದ ಮರಳಿನ ಕಣಗಳಂತೆ ಅಸಂಖ್ಯಾತವಾಗಿರುತ್ತಾರೆ.[๙] ಸೈತಾನನ ಸೈನ್ಯವು ಭೂಮಿಯಲ್ಲೆಲ್ಲಾ ಶಿಸ್ತಿನಿಂದ ನಡೆದಾಡಿ ದೇವಜನರ ಶಿಬಿರದ ಸುತ್ತಲೂ ದೇವರ ಪ್ರಿಯ ನಗರದ ಸುತ್ತಲೂ ಒಟ್ಟುಗೂಡಿದರು. ಆದರೆ ಪರಲೋಕದಿಂದ ಇಳಿದು ಬಂದ ಬೆಂಕಿಯು ಸೈತಾನನ ಸೈನ್ಯವನ್ನು ನಾಶಗೊಳಿಸಿತು.[๑๐] ಸೈತಾನನನ್ನು (ಇವನೇ ಜನರನ್ನು ಮೋಸಗೊಳಿಸಿದವನು.) ಬೆಂಕಿಗಂಧಕಗಳು ಉರಿಯುತ್ತಿದ್ದ ಕೆರೆಗೆ ಎಸೆಯಲಾಯಿತು. ಅಲ್ಲಿ ಮೃಗವೂ ಇತ್ತು, ಸುಳ್ಳುಪ್ರವಾದಿಗಳೂ ಇದ್ದರು. ಅಲ್ಲಿ ಅವರು ಹಗಲಿರುಳು ಎಂದೆಂದಿಗೂ ಹಿಂಸೆ ಅನುಭವಿಸುವರು.[๑๑] ಬಳಿಕ ನಾನು ಒಂದು ದೊಡ್ಡ ಬಿಳಿ ಸಿಂಹಾಸನವನ್ನೂ ಆ ಸಿಂಹಾಸನದ ಮೇಲೆ ಕುಳಿತಿದ್ದಾತನನ್ನೂ ನೋಡಿದೆನು. ಭೂಮಿ ಮತ್ತು ಆಕಾಶಗಳು ಆತನ ಬಳಿಯಿಂದ ಓಡಿಹೋಗಿ ಅದೃಶ್ಯವಾದವು.[๑๒] ಸತ್ತುಹೋಗಿದ್ದ ಚಿಕ್ಕವರು ಮತ್ತು ದೊಡ್ಡವರು ಸಿಂಹಾಸನದ ಮುಂದೆ ನಿಂತಿದ್ದರು. ಆಗ ಜೀವಬಾಧ್ಯರ ಪುಸ್ತಕವನ್ನು ತೆರೆಯಲಾಯಿತು. ತೆರೆದಿದ್ದ ಇತರ ಪುಸ್ತಕಗಳೂ ಅಲ್ಲಿದ್ದವು. ಸತ್ತುಹೋಗಿದ್ದ ಈ ಜನರಿಗೆ ಅವರು ಮಾಡಿದ್ದ ಕಾರ್ಯಗಳ ಆಧಾರದ ಮೇಲೆ ತೀರ್ಪು ನೀಡಲಾಯಿತು. ಇವುಗಳು ಪುಸ್ತಕಗಳಲ್ಲಿ ಬರೆಯಲ್ಪಟ್ಟಿವೆ.[๑๓] ಸಮುದ್ರವು ತನ್ನಲ್ಲಿ ಸತ್ತಿದ್ದ ಜನರನ್ನು ಒಪ್ಪಿಸಿತು. ಮೃತ್ಯುವೂ ಪಾತಾಳವೂ ತನ್ನಲ್ಲಿದ್ದ ಸತ್ತ ಜನರನ್ನು ಒಪ್ಪಿಸಿದವು. ಪ್ರತಿಯೊಬ್ಬ ವ್ಯಕ್ತಿಗೂ ಅವನ ಕಾರ್ಯಗಳಿಗನುಸಾರವಾಗಿ ತೀರ್ಪು ನೀಡಲಾಯಿತು.[๑๔] ಆಮೇಲೆ ಮೃತ್ಯುವನ್ನೂ ಪಾತಾಳವನ್ನೂ ಬೆಂಕಿಯ ಕೆರೆಗೆ ಎಸೆಯಲಾಯಿತು. ಈ ಬೆಂಕಿಯ ಕೆರೆಯು ಎರಡನೆಯ ಮರಣ.[๑๕] ಜೀವಬಾಧ್ಯರ ಪುಸ್ತಕದಲ್ಲಿ ಯಾರ ಹೆಸರು ಬರೆಯಲ್ಪಟ್ಟಿಲ್ಲವೋ ಆ ವ್ಯಕ್ತಿಯನ್ನು ಬೆಂಕಿಯ ಕೆರೆಗೆ ಎಸೆಯಲಾಯಿತು.

Kannada Bible 1934
Public Domain: 1934