A A A A A

ದೇವರು: [ಆರ್ಥಿಕ ಆಶೀರ್ವಾದ]


ಸಮುವೇಲನು ೧ ೨:೭
ಯೆಹೋವನು ಜನರನ್ನು ಬಡವರನ್ನಾಗಿಸುತ್ತಾನೆ. ಆತನು ಜನರನ್ನು ಹಣವಂತರನ್ನಾಗಿಸುತ್ತಾನೆ. ಯೆಹೋವನು ಜನರನ್ನು ದೀನರನ್ನಾಗಿಸುತ್ತಾನೆ. ಆತನು ಜನರನ್ನು ದೊಡ್ಡವರನ್ನಾಗಿಸುತ್ತಾನೆ.

ಕೊರಿಂಥಿಯರಿಗೆ ೨ ೮:೯
ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಕೃಪೆಯು ನಿಮಗೆ ಗೊತ್ತಿದೆ. ಕ್ರಿಸ್ತನು ದೇವರೊಂದಿಗೆ ಶ್ರೀಮಂತಿಕೆಯಲ್ಲಿದ್ದರೂ ನಿಮಗೋಸ್ಕರವಾಗಿ ಬಡವನಾದದ್ದು ನಿಮಗೆ ಗೊತ್ತಿದೆ. ನೀವು ಶ್ರೀಮಂತರಾಗಬೇಕೆಂದು ಕ್ರಿಸ್ತನು ಬಡವನಾದನು.

ಯೊವಾನ್ನನು ಮೂರು ೧:೨
ನನ್ನ ಪ್ರಿಯ ಸ್ನೇಹಿತನೇ, ನಿನ್ನ ಆತ್ಮವು ಅಭಿವೃದ್ಧಿ ಹೊಂದುತ್ತಿದೆ ಎಂಬುದು ನನಗೆ ತಿಳಿದಿದೆ. ನೀನು ಸರ್ವವಿಧದಲ್ಲಿಯೂ ಅಭಿವೃದ್ಧಿ ಹೊಂದಬೇಕೆಂದೂ ಆರೋಗ್ಯದಿಂದಿರಬೇಕೆಂದೂ ನಾನು ಪ್ರಾರ್ಥಿಸುತ್ತೇನೆ.

ಉಪದೇಷಕ ೯:೧೦
ನಿನ್ನ ಕೆಲಸಕಾರ್ಯಗಳನ್ನು ನಿನ್ನಿಂದಾದಷ್ಟು ಉತ್ತಮವಾಗಿ ಮಾಡು. ಸಮಾಧಿಯಲ್ಲಿ ನಿನಗೆ ಕೆಲಸವಿಲ್ಲ. ಅಲ್ಲಿ ಆಲೋಚನೆಯಾಗಲಿ ಜ್ಞಾನವಾಗಲಿ ವಿವೇಕವಾಗಲಿ ಇರುವುದಿಲ್ಲ. ನಾವೆಲ್ಲರೂ ಮರಣದ ಆ ಸ್ಥಳಕ್ಕೆ ಹೋಗುತ್ತಿದ್ದೇವೆ.

ಗಲಾತ್ಯರಿಗೆ ೬:೯
ನಾವು ಒಳ್ಳೆಯ ಕಾರ್ಯ ಮಾಡುವುದರಲ್ಲಿ ಬೇಸರಗೊಳ್ಳಬಾರದು. ತಕ್ಕ ಸಮಯದಲ್ಲಿ ನಾವು ನಿತ್ಯಜೀವವೆಂಬ ಸುಗ್ಗಿಯನ್ನು ಪಡೆಯುವೆವು. ಆದ್ದರಿಂದ ಒಳ್ಳೆಯ ಕಾರ್ಯ ಮಾಡುವುದನ್ನು ನಾವು ಬಿಟ್ಟುಬಿಡಬಾರದು.

ಆದಿಕಾಂಡ ೧೩:೨
ಆಗ ಅಬ್ರಾಮನು ತುಂಬ ಐಶ್ವರ್ಯವಂತನಾಗಿದ್ದನು. ಅವನಿಗೆ ಅನೇಕ ಪಶುಗಳಿದ್ದವು; ಬಹಳ ಬೆಳ್ಳಿಬಂಗಾರಗಳಿದ್ದವು.

ಹೊಶೇಯನ ೪:೬
“ನನ್ನ ಜನರು ಅಜ್ಞಾನಿಗಳಾಗಿರುವುದರಿಂದ ಅವರು ನಾಶವಾಗುವರು, ನೀವು ಕಲಿಯಲು ನಿರಾಕರಿಸುತ್ತೀರಿ. ಆದ್ದರಿಂದ ನೀವು ನನ್ನ ಯಾಜಕರಾಗಿರಲು ನಾನು ನಿರಾಕರಿಸುತ್ತೇನೆ. ನಿಮ್ಮ ದೇವರ ಕಟ್ಟಳೆಗಳನ್ನು ನೀವು ಮರೆತುಬಿಟ್ಟಿರುವಿರಿ. ಆದ್ದರಿಂದ ನಾನು ನಿಮ್ಮ ಮಕ್ಕಳನ್ನು ಮರೆತುಬಿಡುವೆನು.

ಯಕೋಬನು ೫:೧೨
ನನ್ನ ಸಹೋದರ ಸಹೋದರಿಯರೇ, ನೀವು ವಾಗ್ದಾನ ಮಾಡುವಾಗ ಆಣೆ ಇಡಬೇಡಿರಿ. ಇದು ಬಹಳ ಮುಖ್ಯವಾದದ್ದು. ನಿಮ್ಮ ಹೇಳಿಕೆಯನ್ನು ನಿರೂಪಿಸಲು ಪರಲೋಕದ, ಭೂಲೋಕದ ಮತ್ತು ಬೇರಾವುದರ ಹೆಸರನ್ನೂ ಬಳಸಬೇಡಿ. ಹೌದಾಗಿದ್ದರೆ, “ಹೌದು” ಎನ್ನಿರಿ. ಇಲ್ಲವಾಗಿದ್ದರೆ, “ಇಲ್ಲ” ಎನ್ನಿರಿ. ನೀವು ಹೀಗೆ ಮಾಡಿದರೆ, ನಿಮಗೆ ದೋಷಿಗಳೆಂಬ ತೀರ್ಪಾಗುವುದಿಲ್ಲ.

ಯೊವಾನ್ನನು ೬:೧೨
ಅವರೆಲ್ಲರೂ ಊಟ ಮಾಡಿ ತೃಪ್ತರಾದ ಮೇಲೆ ಯೇಸು ತನ್ನ ಶಿಷ್ಯರಿಗೆ, “ಉಳಿದುಹೋದ ರೊಟ್ಟಿ ಮತ್ತು ಮೀನುಗಳ ತುಂಡುಗಳನ್ನು ಒಟ್ಟುಗೂಡಿಸಿರಿ. ಯಾವುದನ್ನೂ ಹಾಳುಮಾಡಬೇಡಿ” ಎಂದು ಹೇಳಿದನು.

ಲೂಕನು ೬:೩೮
ಇತರರಿಗೆ ಕೊಡಿರಿ, ಆಗ ನಿಮಗೂ ದೊರೆಯುವುದು. ಪಾತ್ರೆಯಲ್ಲಿ ಅದುಮಿ, ಅಲ್ಲಾಡಿಸಿ ಹೊರಚೆಲ್ಲುವಂತೆ ಅಳೆದು ನಿಮ್ಮ ಸೆರಗಿಗೆ ಹಾಕುವರು. ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆದುಕೊಡುವರು.”

ಲೂಕನು ೧೨:೩೪
ನಿಮ್ಮ ಭಂಡಾರ ಎಲ್ಲಿದೆಯೋ ಅಲ್ಲಿಯೇ ನಿಮ್ಮ ಹೃದಯವೂ ಇರುತ್ತದೆ.

ಜ್ಞಾನೋಕ್ತಿಗಳು ೧೦:೨೨
ಐಶ್ವರ್ಯವು ಯೆಹೋವನ ಆಶೀರ್ವಾದವೇ. ಶ್ರಮದ ಕೆಲಸವು ಅದನ್ನು ಹೆಚ್ಚಿಸಲಾರದು.

ಜ್ಞಾನೋಕ್ತಿಗಳು ೧೧:೧೪
ಜ್ಞಾನದ ಮಾರ್ಗದರ್ಶನವಿಲ್ಲದೆ ದೇಶವು ಬಿದ್ದು ಹೋಗುವುದು. ಆದರೆ ಒಳ್ಳೆಯ ಸಲಹೆಗಾರರನ್ನು ಹೊಂದಿರುವ ದೇಶವು ಕ್ಷೇಮವಾಗಿರುವುದು.

ಜ್ಞಾನೋಕ್ತಿಗಳು ೧೯:೧೭
ಬಡಜನರಿಗೆ ಉದಾರವಾಗಿ ಕೊಡುವವನು ಯೆಹೋವನಿಗೆ ಸಾಲಕೊಡುತ್ತಾನೆ; ಅವನ ಕರುಣೆಯ ಕಾರ್ಯಕ್ಕೆ ಯೆಹೋವನು ಅವನಿಗೆ ಮರುಪಾವತಿ ಮಾಡುವನು.

ಜ್ಞಾನೋಕ್ತಿಗಳು ೨೧:೧೭
ಸುಖವನ್ನು ಪ್ರೀತಿಸುವವನು ಬಡವನಾಗುವನು. ದ್ರಾಕ್ಷಾರಸವನ್ನೂ ತೈಲವನ್ನೂ ಪ್ರೀತಿಸುವವನು ಐಶ್ವರ್ಯವಂತನಾಗಲಾರನು.

ಜ್ಞಾನೋಕ್ತಿಗಳು ೨೨:೯
ಉದಾರಿಯು ತನ್ನ ಆಹಾರವನ್ನು ಬಡವರೊಂದಿಗೆ ಹಂಚಿಕೊಳ್ಳುವುದರಿಂದ ಆಶೀರ್ವಾದ ಹೊಂದುವನು.

ಜ್ಞಾನೋಕ್ತಿಗಳು ೨೮:೨೨-೨೭
[೨೨] ಜಿಪುಣನು ಐಶ್ವರ್ಯವಂತನಾಗಲು ಆತುರಪಡುವನು: ಆದರೆ ತಾನು ಬೇಗನೆ ಬಡವನಾಗಲಿರುವುದನ್ನು ಅವನು ಗ್ರಹಿಸಿಕೊಳ್ಳಲಾರನು.[೨೩] ಗದರಿಸುವವನು ಸ್ವಲ್ಪಕಾಲದ ನಂತರ ಮುಖಸ್ತುತಿ ಮಾಡುವವನಿಗಿಂತಲೂ ಹೆಚ್ಚಾಗಿ ಗೌರವಿಸಲ್ಪಡುವನು.[೨೪] ಕೆಲವರು ತಮ್ಮ ತಂದೆತಾಯಿಗಳಿಂದ ಕದ್ದುಕೊಂಡು, “ಅದು ತಪ್ಪಲ್ಲ” ಎಂದು ಹೇಳುವರು. ಆದರೆ ಆ ವ್ಯಕ್ತಿಯು ಮನೆಯೊಳಗೆ ನುಗ್ಗಿ ಸರ್ವಸ್ವವನ್ನು ನಾಶಮಾಡುವ ವ್ಯಕ್ತಿಯಂತೆಯೇ ಕೆಟ್ಟವನಾಗಿದ್ದಾನೆ.[೨೫] ದುರಾಶೆಯುಳ್ಳವನು ಜಗಳಗಳನ್ನು ಎಬ್ಬಿಸುತ್ತಾನೆ. ಯೆಹೋವನಲ್ಲಿ ಭರವಸೆ ಇಡುವವನಾದರೋ ಅಭಿವೃದ್ಧಿ ಹೊಂದುವನು.[೨೬] ಸ್ವಂತ ಆಲೋಚನೆಯ ಮೇಲೆ ಭರವಸೆ ಇಡುವವನು ಮೂರ್ಖನಾಗಿದ್ದಾನೆ. ಜ್ಞಾನಮಾರ್ಗದಲ್ಲಿ ನಡೆಯುವವನು ಸುರಕ್ಷಿತನಾಗಿರುವನು.[೨೭] ಬಡವರಿಗೆ ಕೊಡುವವನು ತನಗೆ ಅಗತ್ಯವಾದ ಪ್ರತಿಯೊಂದನ್ನೂ ಹೊಂದಿಕೊಳ್ಳುವನು. ಬಡವರಿಗೆ ಸಹಾಯಮಾಡದವನಿಗೆ ಅನೇಕ ಶಾಪಗಳು ಬರುತ್ತವೆ.

ಕೀರ್ತನೆಗಳು ೨೪:೧
ಭೂಮಿಯೂ ಅದರಲ್ಲಿರುವ ಸಮಸ್ತವೂ ಯೆಹೋವನವೇ. ಲೋಕವೂ ಅದರ ನಿವಾಸಿಗಳೂ ಆತನವೇ.

ಮತ್ತಾಯನು ೬:೩೩
ಆದ್ದರಿಂದ ನೀವು ದೇವರ ರಾಜ್ಯಕ್ಕಾಗಿ ಮತ್ತು ಆತನ ಚಿತ್ತಕ್ಕನುಸಾರವಾಗಿ ಕಾರ್ಯಗಳನ್ನು ಮಾಡಲು ಬಹಳ ತವಕಪಡಬೇಕು. ಆಗ ನಿಮಗೆ ಅಗತ್ಯವಾದ ಉಳಿದವುಗಳನ್ನು ಸಹ ಕೊಡಲಾಗುವುದು.

ಮತ್ತಾಯನು ೨೩:೨೩
ನೀವು ಜನರಿಗೆ ಮಾರ್ಗದರ್ಶನ ಮಾಡುತ್ತೀರಿ. ಆದರೆ ನೀವೇ ಕುರುಡರು! ಒಬ್ಬನು ತಾನು ಕುಡಿಯುವ ಪಾನೀಯದೊಳಗಿಂದ ಸಣ್ಣ ಸೊಳ್ಳೆಯನ್ನು ತೆಗೆದುಹಾಕಿ ಆಮೇಲೆ ಒಂಟೆಯನ್ನು ನುಂಗುವವನಂತೆ ನೀವಿದ್ದೀರಿ.

ಮತ್ತಾಯನು ೨೫:೨೧
“ಯಜಮಾನನು, ‘ನೀನು ನಂಬಿಗಸ್ತನಾದ ಒಳ್ಳೆಯ ಸೇವಕ. ಆ ಸ್ವಲ್ಪ ಹಣವನ್ನು ಒಳ್ಳೆಯ ರೀತಿಯಲ್ಲಿ ಉಪಯೋಗಿಸಿದೆ. ಆದ್ದರಿಂದ ನಾನು ನಿನಗೆ ಇದಕ್ಕಿಂತಲೂ ದೊಡ್ಡ ಕೆಲಸವನ್ನು ಕೊಡುತ್ತೇನೆ. ಬಂದು ನನ್ನ ಸೌಭಾಗ್ಯದಲ್ಲಿ ಸೇರು’ ಎಂದು ಉತ್ತರಕೊಟ್ಟನು.

ರೋಮನರಿಗೆ ೧೩:೮
ಜನರಿಗೆ ಯಾವ ವಿಷಯದಲ್ಲಿಯೂ ಸಾಲಗಾರರಾಗಿರಬೇಡಿ. ಆದರೆ ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ವಿಷಯದಲ್ಲಿ ಮಾತ್ರ ಯಾವಾಗಲೂ ಸಾಲಗಾರರಾಗಿದ್ದೀರಿ. ಇತರ ಜನರನ್ನು ಪ್ರೀತಿಸುವ ವ್ಯಕ್ತಿಯು ಇಡೀ ಧರ್ಮಶಾಸ್ತ್ರಕ್ಕೆ ವಿಧೇಯನಾಗಿದ್ದಾನೆ.

ಜ್ಞಾನೋಕ್ತಿಗಳು ೩:೯-೧೦
[೯] ನಿನಗೆ ಬರುವ ಆದಾಯದಿಂದಲೂ ಬೆಳೆಯ ಪ್ರಥಮ ಫಲದಿಂದಲೂ ಯೆಹೋವನನ್ನು ಸನ್ಮಾನಿಸು.[೧೦] ಆಗ ನಿನ್ನ ಕಣಜಗಳು ದವಸಧಾನ್ಯಗಳಿಂದ ತುಂಬಿರುತ್ತವೆ. ನಿನ್ನ ದ್ರಾಕ್ಷಾರಸದ ತೊಟ್ಟಿಗಳು ತುಂಬಿತುಳುಕುತ್ತವೆ.

ಕೀರ್ತನೆಗಳು ೧೨೧:೧-೨
[೧] ನಾನು ಕಣ್ಣೆತ್ತಿ ಪರ್ವತಗಳ ಕಡೆಗೆ ನೋಡುತ್ತೇನೆ. ನನಗೆ ಸಹಾಯವು ಎಲ್ಲಿಂದ ಬರುವುದು?[೨] ಭೂಮ್ಯಾಕಾಶಗಳ ಸೃಷ್ಟಿಕರ್ತನಾದ ಯೆಹೋವನಿಂದಲೇ ನನಗೆ ಸಹಾಯವು ಬರುವುದು.

ಮಾರ್ಕನು ೧೧:೨೨-೨೩
[೨೨] ಯೇಸು, “ದೇವರಲ್ಲಿ ನಂಬಿಕೆ ಇಡಿರಿ.[೨೩] ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ಈ ಬೆಟ್ಟಕ್ಕೆ, ‘ನೀನು ಹೋಗಿ ಸಮುದ್ರದೊಳಗೆ ಬೀಳು’ ಎಂದು ಹೇಳಿ, ಸಂಶಯವನ್ನೇಪಡದೆ, ನೀವು ಹೇಳಿದ್ದು ಖಂಡಿತವಾಗಿ ನೆರವೇರುತ್ತದೆ ಎಂದು ನಂಬಿದರೆ, ದೇವರು ಅದನ್ನು ನಿಮಗಾಗಿ ಮಾಡುತ್ತಾನೆ.

ಆದಿಕಾಂಡ ೧:೨೬-೨೭
[೨೬] ಬಳಿಕ ದೇವರು, “ಈಗ ನಾವು ಮನುಷ್ಯನನ್ನು ನಮ್ಮ ಸ್ವರೂಪದಲ್ಲಿ ನಮ್ಮ ಹೋಲಿಕೆಗೆ ಸರಿಯಾಗಿ ನಿರ್ಮಿಸೋಣ. ಮನುಷ್ಯರು ಸಮುದ್ರದಲ್ಲಿರುವ ಎಲ್ಲಾ ಮೀನುಗಳ ಮೇಲೆ, ಆಕಾಶದಲ್ಲಿ ಹಾರಾಡುವ ಎಲ್ಲಾ ಪಕ್ಷಿಗಳ ಮೇಲೆ ಮತ್ತು ಭೂಮಿಯ ಮೇಲೆ ಹರಿದಾಡುವ ಎಲ್ಲಾ ಕ್ರಿಮಿಗಳ ಮೇಲೆ ದೊರೆತನ ಮಾಡಲಿ” ಅಂದನು.[೨೭] ಹೀಗೆ ದೇವರು ಮನುಷ್ಯನನ್ನು ತನ್ನ ಸ್ವರೂಪದಲ್ಲಿ ತನ್ನ ಹೋಲಿಕೆಗೆ ಸರಿಯಾಗಿ ಸೃಷ್ಟಿಸಿದನು. ಆತನು ಅವರನ್ನು ಗಂಡು ಮತ್ತು ಹೆಣ್ಣುಗಳಾಗಿ ರೂಪಿಸಿದನು.

ಕೊರಿಂಥಿಯರಿಗೆ ೨ ೯:೬-೮
[೬] ಇದನ್ನು ಜ್ಞಾಪಕದಲ್ಲಿಟ್ಟುಕೊಂಡಿರಿ: ಸ್ವಲ್ಪ ಬಿತ್ತುವವನು ಕೇವಲ ಸ್ವಲ್ಪವನ್ನೇ ಕೊಯ್ಯುವನು, ಆದರೆ ಹೆಚ್ಚಾಗಿ ಬಿತ್ತುವವನು ಹೆಚ್ಚಾಗಿ ಕೊಯ್ಯುವನು.[೭] ಪ್ರತಿಯೊಬ್ಬ ವ್ಯಕ್ತಿಯು ತನ್ನು ಹೃದಯದಲ್ಲಿ ಎಷ್ಟನ್ನು ನಿರ್ಧರಿಸಿಕೊಂಡಿದ್ದಾನೊ ಅಷ್ಟನ್ನೇ ಕೊಡಬೇಕು. ಯಾವನೂ ದುಃಖದಿಂದ ಕೊಡಬಾರದು. ಅಲ್ಲದೆ ಯಾವನೂ ಒತ್ತಾಯದ ದೆಸೆಯಿಂದ ಕೊಡಬಾರದು. ಸಂತೋಷವಾಗಿ ಕೊಡುವವನನ್ನು ದೇವರು ಪ್ರೀತಿಸುತ್ತಾನೆ.[೮] ಮತ್ತು ನಿಮಗೆ ಅಗತ್ಯವಾದದ್ದಕ್ಕಿಂತಲೂ ಹೆಚ್ಚು ಆಶೀರ್ವಾದಗಳನ್ನು ದೇವರು ಕೊಡಬಲ್ಲನು. ಆಗ ನಿಮ್ಮಲ್ಲಿ ನಿಮಗೆ ಅಗತ್ಯವಾದ ಪ್ರತಿಯೊಂದೂ ಯಾವಾಗಲೂ ಇರುವುದು. ಪ್ರತಿಯೊಂದು ಒಳ್ಳೆಯ ಕಾರ್ಯಕ್ಕೆ ಕೊಡಲು ನಿಮ್ಮಲ್ಲಿ ಸಾಕಷ್ಟು ಇರುವುದು.

ಲೂಕನು ೧೪:೨೮-೩೦
[೨೮] “ನೀನು ಒಂದು ಕಟ್ಟಡವನ್ನು ಕಟ್ಟಬೇಕೆಂದಿದ್ದರೆ ಮೊದಲು ನೀನು ಕುಳಿತುಕೊಂಡು ಅದಕ್ಕೆ ಎಷ್ಟು ಖರ್ಚಾಗುತ್ತದೆ ಎಂಬುದನ್ನು ಆಲೋಚಿಸು. ಆ ಕಟ್ಟಡವನ್ನು ಪೂರೈಸಲು ನಿನ್ನಲ್ಲಿ ಸಾಕಷ್ಟು ಹಣವಿದೆಯೋ ಎಂದು ಲೆಕ್ಕಹಾಕಿ ನೋಡು.[೨೯] ಇಲ್ಲವಾದರೆ, ನೀನು ಕಟ್ಟಡದ ಕೆಲಸವನ್ನು ಪ್ರಾರಂಭಿಸಿದರೂ ಅದನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ಜನರು ನಿನ್ನನ್ನು ನೋಡಿ,[೩೦] ‘ಇವನು ಈ ಕಟ್ಟಡದ ಕೆಲಸವನ್ನು ಪ್ರಾರಂಭಿಸಿದನು. ಆದರೆ ಪೂರೈಸಲು ಅವನಿಂದಾಗಲಿಲ್ಲ’ ಎಂದು ಗೇಲಿ ಮಾಡುವರು.

ಲೂಕನು ೬:೩೪-೩೬
[೩೪] ನೀವು ಯಾರಿಗಾದರೂ ಸಾಲಕೊಟ್ಟು, ಅದನ್ನು ಪೂರ್ತಿಯಾಗಿ ಮತ್ತೆ ಅವರಿಂದ ತೆಗೆದುಕೊಂಡರೆ ಅದರಿಂದ ನಿಮಗೆ ಹೊಗಳಿಕೆ ಬರುವುದೇ? ಪಾಪಿಷ್ಠರು ಸಹ ಹಾಗೆಯೇ ಸಾಲಕೊಟ್ಟು ಮತ್ತೆ ಅದನ್ನು ಪೂರ್ತಿಯಾಗಿ ಮರಳಿ ಪಡೆಯುತ್ತಾರೆ![೩೫] “ಆದ್ದರಿಂದ ನಿಮ್ಮ ವೈರಿಗಳನ್ನು ಪ್ರೀತಿಸಿರಿ. ಅವರಿಗೆ ಒಳ್ಳೆಯದನ್ನು ಮಾಡಿರಿ. ನೀವು ಅವರಿಗೆ ಸಾಲ ಕೊಡುವಾಗ ಮತ್ತೆ ಅವರಿಂದ ಪಡೆಯಬಹುದೆಂಬ ನಿರೀಕ್ಷೆಯಿಲ್ಲದೆ ಕೊಡಿರಿ. ಆಗ ನಿಮಗೆ ದೊಡ್ಡ ಪ್ರತಿಫಲವಿರುವುದು. ನೀವು ಮಹೋನ್ನತನಾದ ದೇವರ ಮಕ್ಕಳಾಗುವಿರಿ. ಏಕೆಂದರೆ ದೇವರು ಪಾಪಿಷ್ಠರಿಗೂ ಕೃತಜ್ಞತೆಯಿಲ್ಲದವರಿಗೂ ಒಳ್ಳೆಯವನಾಗಿದ್ದಾನೆ.[೩೬] ನಿಮ್ಮ ಪರಲೋಕದ ತಂದೆಯು ಕರುಣಾಮಯನಾಗಿರುವಂತೆ ನೀವೂ ಕರುಣೆಯುಳ್ಳವರಾಗಿರಿ.

ಯಕೋಬನು ೫:೧-೩
[೧] ಶ್ರೀಮಂತ ಜನರೇ, ಕೇಳಿರಿ! ನಿಮಗೆ ಮಹಾಕಷ್ಟವು ಬರಲಿರುವುದರಿಂದ ಗೋಳಾಡಿರಿ, ದುಃಖಪಡಿರಿ.[೨] ನಿಮ್ಮ ಶ್ರೀಮಂತಿಕೆಯು ಕೊಳೆತುಹೋಗುತ್ತದೆ ಮತ್ತು ಬೆಲೆಯಿಲ್ಲದಂತಾಗುತ್ತದೆ. ನಿಮ್ಮ ಬಟ್ಟೆಗಳನ್ನು ನುಸಿಗಳು ತಿಂದುಹಾಕುತ್ತವೆ.[೩] ನಿಮ್ಮ ಬೆಳ್ಳಿಬಂಗಾರಗಳು ತುಕ್ಕು ಹಿಡಿಯುತ್ತವೆ. ನೀವು ತಪ್ಪಿತಸ್ಥರೆಂಬುದಕ್ಕೆ ಅದೇ ಸಾಕ್ಷಿಯಾಗಿದೆ. ಅವುಗಳ ತುಕ್ಕು ನಿಮ್ಮ ದೇಹವನ್ನು ಬೆಂಕಿಯಂತೆ ತಿಂದುಬಿಡುತ್ತವೆ. ನೀವು ಈ ಕೊನೆಯ ದಿನಗಳಲ್ಲಿ ನಿಮ್ಮ ಭಂಡಾರವನ್ನು ತುಂಬಿಸಿಕೊಂಡಿದ್ದೀರಿ.

ಆದಿಕಾಂಡ ೧೨:೧-೨೦
[೧] ಯೆಹೋವನು ಅಬ್ರಾಮನಿಗೆ, “ನಿನ್ನ ದೇಶವನ್ನೂ ನಿನ್ನ ಜನರನ್ನೂ ಬಿಟ್ಟು ಹೊರಡು. ನಿನ್ನ ತಂದೆಯ ಕುಟುಂಬವನ್ನು ಬಿಟ್ಟು ನಾನು ತೋರಿಸುವ ದೇಶಕ್ಕೆ ಹೋಗು.[೨] ನಾನು ನಿನ್ನನ್ನು ಆಶೀರ್ವದಿಸುವೆನು; ನಿನ್ನನ್ನು ದೊಡ್ಡ ಜನಾಂಗವನ್ನಾಗಿ ಮಾಡಿ ನಿನ್ನ ಹೆಸರನ್ನು ಪ್ರಖ್ಯಾತಿಪಡಿಸುವೆನು; ನೀನು ಆಶೀರ್ವಾದದಾಯಕನಾಗುವಂತೆ ಮಾಡುವೆನು.[೩] ನಿನಗೆ ಒಳ್ಳೆಯದನ್ನು ಮಾಡುವವರನ್ನು ಆಶೀರ್ವದಿಸುವೆನು; ನಿನಗೆ ಕೇಡುಮಾಡುವವರನ್ನು ಶಿಕ್ಷಿಸುವೆನು. ನಿನ್ನ ನಿಮಿತ್ತವಾಗಿ ಲೋಕದವರೆಲ್ಲರೂ ಆಶೀರ್ವಾದ ಹೊಂದುವರು” ಎಂದು ಹೇಳಿದನು.[೪] ಆದ್ದರಿಂದ ಅಬ್ರಾಮನು ಯೆಹೋವನಿಗೆ ವಿಧೇಯನಾದನು. ಅವನು ಹಾರಾನ್ ಪಟ್ಟಣವನ್ನು ಬಿಟ್ಟು ಹೊರಟನು. ಅವನೊಡನೆ ಲೋಟನು ಸಹ ಹೋದನು. ಆಗ ಅಬ್ರಾಮನಿಗೆ ಎಪ್ಪತ್ತೈದು ವರ್ಷ ವಯಸ್ಸಾಗಿತ್ತು.[೫] ಅಬ್ರಾಮನು ಹಾರಾನ್ ಪಟ್ಟಣವನ್ನು ಬಿಟ್ಟು ಒಬ್ಬಂಟಿಗನಾಗಿ ಹೋಗಲಿಲ್ಲ. ಅಬ್ರಾಮನು ತನ್ನ ಹೆಂಡತಿಯಾದ ಸಾರಯಳನ್ನೂ ತನ್ನ ತಮ್ಮನ ಮಗನಾದ ಲೋಟನನ್ನೂ ತನ್ನೊಂದಿಗೆ ಕರೆದುಕೊಂಡು ಹೋದನು. ಹಾರಾನ್ ಪಟ್ಟಣದಲ್ಲಿ ತಮಗಿದ್ದ ಸ್ವತ್ತುಗಳನ್ನೆಲ್ಲ ಅವರು ತೆಗೆದುಕೊಂಡು ಹೋದರು. ಅಬ್ರಾಮನು ಹಾರಾನ್ ಪಟ್ಟಣದಲ್ಲಿ ಹೊಂದಿದ್ದ ಸೇವಕರು ಸಹ ಅವನೊಡನೆ ಹೋದರು. ಅಬ್ರಾಮನು ಮತ್ತು ಅವನ ಸಂಗಡಿಗರು ಹಾರಾನ್ ಪಟ್ಟಣವನ್ನು ಬಿಟ್ಟು ಕಾನಾನ್ ದೇಶಕ್ಕೆ ಪ್ರಯಾಣಮಾಡಿದರು.[೬] ಅಬ್ರಾಮನು ಕಾನಾನ್ ದೇಶದಲ್ಲಿ ಪ್ರಯಾಣವನ್ನು ಮುಂದುವರಿಸಿದನು. ಅವನು ಶೆಕೆಮ್ ನಗರವನ್ನು ತಲುಪಿ, ಅಲ್ಲಿಂದ ಮೋರೆ ಎಂಬ ದೊಡ್ಡ ಓಕ್ ಮರವಿದ್ದ ಸ್ಥಳಕ್ಕೆ ಬಂದನು. ಆ ಕಾಲದಲ್ಲಿ ಕಾನಾನ್ಯರು ಆ ದೇಶದಲ್ಲಿ ವಾಸವಾಗಿದ್ದರು.[೭] ಯೆಹೋವನು ಅಬ್ರಾಮನಿಗೆ ಕಾಣಿಸಿಕೊಂಡು, “ನಿನ್ನ ಸಂತತಿಯವರಿಗೆ ಈ ದೇಶವನ್ನು ಕೊಡುವೆನು” ಎಂದು ಹೇಳಿದನು. ಆ ಸ್ಥಳದಲ್ಲಿ ಯೆಹೋವನು ಅಬ್ರಾಮನಿಗೆ ಕಾಣಿಸಿಕೊಂಡನು. ಆದ್ದರಿಂದ ಅಬ್ರಾಮನು ಯೆಹೋವನನ್ನು ಆರಾಧಿಸುವುದಕ್ಕಾಗಿ ಅಲ್ಲಿ ಒಂದು ಯಜ್ಞವೇದಿಕೆಯನ್ನು ಕಟ್ಟಿದನು.[೮] ಆಮೇಲೆ ಅಬ್ರಾಮನು ಆ ಸ್ಥಳದಿಂದ ಹೊರಟು ಬೇತೇಲಿಗೆ ಪೂರ್ವದಲ್ಲಿರುವ ಗುಡ್ಡಗಳ ಬಳಿಗೆ ಪ್ರಯಾಣ ಮಾಡಿದನು. ಅಲ್ಲಿ ಅಬ್ರಾಮನು ತನ್ನ ಗುಡಾರಗಳನ್ನು ಹಾಕಿದನು. ಪಶ್ಚಿಮಕ್ಕೆ ಬೇತೇಲ್ ಪಟ್ಟಣವಿತ್ತು, ಪೂರ್ವಕ್ಕೆ ಆಯಿ ಪಟ್ಟಣವಿತ್ತು. ಆ ಸ್ಥಳದಲ್ಲಿ ಅವನು ಯೆಹೋವನಿಗೋಸ್ಕರ ಒಂದು ಯಜ್ಞವೇದಿಕೆಯನ್ನು ಕಟ್ಟಿ ಅಲ್ಲಿ ಅವನು ಯೆಹೋವನನ್ನು ಆರಾಧಿಸಿದನು.[೯] ತರುವಾಯ ಅವನು ಮತ್ತೆ ಪ್ರಯಾಣವನ್ನು ಮುಂದುವರಿಸಿ ನೆಗೆವ್ ಸ್ಥಳದ ಕಡೆಗೆ ಹೋದನು.[೧೦] ಈ ಕಾಲದಲ್ಲಿ ಭೂಮಿಯು ಒಣಗಿಹೋಗಿತ್ತು; ಮಳೆ ಇರಲಿಲ್ಲ. ಅಲ್ಲಿ ಆಹಾರವನ್ನು ಬೆಳೆಯಲು ಸಾಧ್ಯವಿರಲಿಲ್ಲ. ಆದ್ದರಿಂದ ಅಬ್ರಾಮನು ವಾಸಿಸುವುದಕ್ಕಾಗಿ ಈಜಿಪ್ಟಿಗೆ ಹೋದನು.[೧೧] ತನ್ನ ಹೆಂಡತಿ ಸಾರಯಳು ರೂಪವತಿಯಾಗಿರುವುದು ಅಬ್ರಾಮನಿಗೆ ತಿಳಿದಿತ್ತು. ಆದ್ದರಿಂದ ಈಜಿಪ್ಟಿಗೆ ಹೋಗುವ ಮೊದಲೇ, ಅಬ್ರಾಮನು ಸಾರಯಳಿಗೆ, “ನೀನು ರೂಪವತಿಯೆಂದು ನನಗೆ ಗೊತ್ತಿದೆ.[೧೨] ಈಜಿಪ್ಟಿನ ಗಂಡಸರು ನಿನ್ನನ್ನು ನೋಡಿ, ‘ಈಕೆ ಇವನ ಹೆಂಡತಿ’ ಎಂದು ತಿಳಿದು ನಿನ್ನನ್ನು ಪಡೆದುಕೊಳ್ಳುವುದಕ್ಕಾಗಿ ನನ್ನನ್ನು ಕೊಂದು ನಿನ್ನನ್ನು ಜೀವಂತವಾಗಿ ಉಳಿಸುವರು.[೧೩] ಆದ್ದರಿಂದ ನೀನು ನನಗೆ ತಂಗಿಯಾಗಬೇಕೆಂದು ಜನರಿಗೆ ಹೇಳು. ಆಗ ಅವರು ನನ್ನನ್ನು ನಿನ್ನ ಸಹೋದರನೆಂದು ಭಾವಿಸಿ ನನ್ನನ್ನು ಕೊಲ್ಲದೆ ನನಗೆ ದಯೆತೋರುವರು. ಹೀಗೆ ನೀನು ನನ್ನ ಪ್ರಾಣ ಉಳಿಸುವೆ” ಎಂದು ಹೇಳಿದನು.[೧೪] ಅಂತೆಯೇ ಅಬ್ರಾಮನು ಈಜಿಪ್ಟಿಗೆ ಹೋದನು. ಈಜಿಪ್ಟಿನ ಗಂಡಸರು ಸಾರಯಳನ್ನು ಕಂಡು ಈಕೆ ತುಂಬ ರೂಪವತಿ ಎಂದರು.[೧೫] ಈಜಿಪ್ಟಿನ ಕೆಲವು ನಾಯಕರು ಸಹ ಆಕೆಯನ್ನು ಕಂಡರು. ಅವರು ಫರೋಹನ ಬಳಿಗೆ ಹೋಗಿ ಆಕೆಯ ಅಮೋಘ ಸೌಂದರ್ಯವನ್ನು ತಿಳಿಸಿದರು. ಬಳಿಕ ಆ ನಾಯಕರು ಸಾರಯಳನ್ನು ಫರೋಹನ ಬಳಿಗೆ ಕರೆದೊಯ್ದರು.[೧೬] ಅಬ್ರಾಮನು ಸಾರಯಳ ಸಹೋದರನೆಂದು ಭಾವಿಸಿ ಫರೋಹನು ಅಬ್ರಾಮನಿಗೆ ದಯೆತೋರಿದನು. ಫರೋಹನು ಅಬ್ರಾಮನಿಗೆ ದನಕುರಿಗಳನ್ನೂ ಕತ್ತೆಗಳನ್ನೂ ಕೊಟ್ಟನು. ಅಲ್ಲದೆ ಅಬ್ರಾಮನಿಗೆ ದಾಸದಾಸಿಯರನ್ನೂ ಒಂಟೆಗಳನ್ನೂ ಕೊಟ್ಟನು.[೧೭] ಫರೋಹನು ಅಬ್ರಾಮನ ಹೆಂಡತಿಯನ್ನು ತೆಗೆದುಕೊಂಡದ್ದರಿಂದ ಯೆಹೋವನು ಫರೋಹನಿಗೂ ಅವನ ಮನೆಯಲ್ಲಿದ್ದವರಿಗೂ ಭಯಂಕರವಾದ ರೋಗಗಳನ್ನು ಬರಮಾಡಿದನು.[೧೮] ಆಗ ಫರೋಹನು ಅಬ್ರಾಮನನ್ನು ಕರೆಯಿಸಿ, “ನೀನು ನನಗೆ ತುಂಬ ಕೆಟ್ಟದ್ದನ್ನು ಮಾಡಿರುವೆ; ಸಾರಯಳು ನಿನಗೆ ಹೆಂಡತಿಯಾಗಬೇಕೆಂದು ಯಾಕೆ ತಿಳಿಸಲಿಲ್ಲ?[೧೯] ‘ಈಕೆ ನನಗೆ ತಂಗಿಯಾಗಬೇಕು’ ಎಂದು ಯಾಕೆ ಹೇಳಿದೆ? ನೀನು ಹೀಗೆ ಹೇಳಿದ್ದರಿಂದ ನಾನು ಆಕೆಯನ್ನು ನನ್ನ ಹೆಂಡತಿಯಾಗಲಿಕ್ಕೆ ತೆಗೆದುಕೊಂಡೆ. ಆದರೆ ಈಗ ನಾನು ನಿನ್ನ ಹೆಂಡತಿಯನ್ನು ಮತ್ತೆ ನಿನಗೇ ಕೊಡುತ್ತೇನೆ. ನೀನು ಆಕೆಯನ್ನು ನಿನ್ನೊಂದಿಗೆ ಕರೆದುಕೊಂಡು ಹೊರಟುಹೋಗು” ಎಂದು ಹೇಳಿದನು.[೨೦] ಆಮೇಲೆ ಫರೋಹನು ತನ್ನ ಜನರಿಗೆ ಅಬ್ರಾಮನನ್ನು ಈಜಿಪ್ಟಿನಿಂದ ಕಳುಹಿಸಿಕೊಡಬೇಕೆಂದು ಆಜ್ಞಾಪಿಸಿದನು. ಆದ್ದರಿಂದ ಅಬ್ರಾಮನು ಮತ್ತು ಅವನ ಹೆಂಡತಿ ಆ ಸ್ಥಳದಿಂದ ಹೊರಟುಹೋದರು; ಅವರು ತಮ್ಮೊಡನೆ ಇದ್ದವುಗಳನ್ನೆಲ್ಲ ತೆಗೆದುಕೊಂಡು ಹೋದರು.

ಮತ್ತಾಯನು ೬:೧-೩೪
[೧] “ಎಚ್ಚರವಾಗಿರಿ! ನೀವು ಒಳ್ಳೆಯ ಕಾರ್ಯಗಳನ್ನು ಜನರ ಮುಂದೆ ಮಾಡಬೇಡಿ. ಜನರು ನೋಡಲೆಂದು ನೀವು ಅವುಗಳನ್ನು ಮಾಡಿದರೆ ಪರಲೋಕದಲ್ಲಿರುವ ನಿಮ್ಮ ತಂದೆಯಿಂದ ನಿಮಗೆ ಪ್ರತಿಫಲ ದೊರೆಯುವುದಿಲ್ಲ.[೨] “ನೀವು ಬಡಜನರಿಗೆ ಮಾಡುವ ದಾನವನ್ನು ಪ್ರಕಟಿಸಬೇಡಿ. ನೀವು ಕಪಟಿಗಳಂತೆ ಮಾಡಕೂಡದು. ತಾವು ಮಾಡುವ ದಾನವನ್ನು ಜನರಿಗೆ ತೋರಿಸಿಕೊಳ್ಳುವುದಕ್ಕಾಗಿ ಕಪಟಿಗಳು ಸಭಾಮಂದಿರಗಳಲ್ಲಿ ಮತ್ತು ಬೀದಿಗಳಲ್ಲಿ ತುತ್ತೂರಿ ಊದಿಸುತ್ತಾರೆ. ಜನರಿಂದ ಗೌರವ ಪಡೆಯಬೇಕೆಂಬುದೇ ಅವರ ಉದ್ದೇಶ.[೩] ಆದ್ದರಿಂದ ನೀವು ಬಡಜನರಿಗೆ ಕೊಡುವಾಗ ಬಹಳ ಗುಟ್ಟಾಗಿ ಕೊಡಿ. ನೀವು ಮಾಡುವಂಥದ್ದು ಯಾರಿಗೂ ತಿಳಿಯದಿರಲಿ.[೪] ನೀವು ದಾನವನ್ನು ರಹಸ್ಯವಾಗಿ ಕೊಡಬೇಕು. ರಹಸ್ಯದಲ್ಲಿ ನಡೆಯುವ ಕಾರ್ಯಗಳನ್ನು ನೋಡಬಲ್ಲ ನಿಮ್ಮ ತಂದೆ ನಿಮಗೆ ಪ್ರತಿಫಲ ಕೊಡುವನು.[೫] “ನೀವು ಪ್ರಾರ್ಥಿಸುವಾಗ ಕಪಟಿಗಳ ಹಾಗೆ ಪ್ರಾರ್ಥಿಸಬೇಡಿ. ಕಪಟಿಗಳು ಸಭಾಮಂದಿರಗಳಲ್ಲಿ ಮತ್ತು ಬೀದಿಯ ಮೂಲೆಗಳಲ್ಲಿ ನಿಂತುಕೊಂಡು ಗಟ್ಟಿಯಾಗಿ ಪ್ರಾರ್ಥಿಸಲು ಇಷ್ಟಪಡುತ್ತಾರೆ. ತಾವು ಪ್ರಾರ್ಥಿಸುವುದನ್ನು ಜನರು ನೋಡಬೇಕೆಂಬುದೇ ಅವರ ಬಯಕೆ. ಅವರು ಆಗಲೇ ಅದರ ಪೂರ್ಣ ಪ್ರತಿಫಲವನ್ನು ಹೊಂದಿಕೊಂಡಾಯಿತೆಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ.[೬] ನೀವು ಪ್ರಾರ್ಥನೆ ಮಾಡಬೇಕಾದರೆ, ನಿಮ್ಮ ಕೋಣೆಯೊಳಗೆ ಹೋಗಿ ಬಾಗಿಲನ್ನು ಮುಚ್ಚಿಕೊಂಡು ನಿಮಗೆ ಕಾಣದಿರುವ ನಿಮ್ಮ ತಂದೆಗೆ ಪ್ರಾರ್ಥಿಸಿ. ರಹಸ್ಯದಲ್ಲಿ ನಡೆಯುವ ಕಾರ್ಯಗಳನ್ನು ನೋಡಬಲ್ಲ ನಿಮ್ಮ ತಂದೆಯು ನಿಮಗೆ ಪ್ರತಿಫಲವನ್ನು ಕೊಡುವನು.[೭] “ನೀವು ಪ್ರಾರ್ಥಿಸುವಾಗ ದೇವರನ್ನು ತಿಳಿದಿಲ್ಲದ ಜನರಂತೆ ಪ್ರಾರ್ಥಿಸಬೇಡಿ. ಅವರು ಅರ್ಥವಿಲ್ಲದ ಸಂಗತಿಗಳನ್ನು ಹೇಳುತ್ತಲೇ ಇರುತ್ತಾರೆ. ಆ ರೀತಿ ಪ್ರಾರ್ಥಿಸಬೇಡಿ. ತಾವು ಅನೇಕ ವಿಷಯಗಳನ್ನು ಹೇಳುವುದರಿಂದ ದೇವರು ತಮ್ಮ ಪ್ರಾರ್ಥನೆಯನ್ನು ಕೇಳುತ್ತಾನೆಂಬುದು ಅವರ ಆಲೋಚನೆ.[೮] ನೀವು ಅವರಂತಾಗಬೇಡಿ. ನೀವು ಕೇಳುವುದಕ್ಕೆ ಮೊದಲೇ ನಿಮಗೆ ಏನೇನು ಬೇಕು ಎಂಬುದು ನಿಮ್ಮ ತಂದೆಗೆ ತಿಳಿದಿದೆ.[೯] ಆದ್ದರಿಂದ ನೀವು ಹೀಗೆ ಪ್ರಾರ್ಥಿಸಿರಿ:[೧೦] ನಿನ್ನ ರಾಜ್ಯ ಬರಲಿ.[೧೧] ನಮ್ಮ ಅನುದಿನದ ಆಹಾರವನ್ನು ಈ ಹೊತ್ತು ನಮಗೆ ದಯಪಾಲಿಸು.[೧೨] ನಮಗೆ ತಪ್ಪು ಮಾಡಿದವರನ್ನು ನಾವು ಕ್ಷಮಿಸಿದಂತೆಯೇ[೧೩] ನಮ್ಮನ್ನು ಶೋಧನೆಗೆ ಒಳಪಡಿಸದೆ[೧೪] ಹೌದು, ಬೇರೆಯವರು ನಿಮಗೆ ಮಾಡಿದ ತಪ್ಪುಗಳನ್ನು ನೀವು ಕ್ಷಮಿಸಿದರೆ, ಪರಲೋಕದಲ್ಲಿರುವ ನಿಮ್ಮ ತಂದೆಯೂ ನಿಮ್ಮ ತಪ್ಪುಗಳನ್ನು ಕ್ಷಮಿಸುತ್ತಾನೆ.[೧೫] ಆದರೆ ಜನರು ನಿಮಗೆ ಮಾಡಿದ ತಪ್ಪುಗಳನ್ನು ನೀವು ಕ್ಷಮಿಸದಿದ್ದರೆ, ಪರಲೋಕದಲ್ಲಿರುವ ನಿಮ್ಮ ತಂದೆಯು ಸಹ ನಿಮ್ಮ ತಪ್ಪುಗಳನ್ನು ಕ್ಷಮಿಸುವುದಿಲ್ಲ.[೧೬] “ನೀವು ಉಪವಾಸ ಮಾಡುವಾಗ ನಿಮ್ಮ ಮುಖವನ್ನು ಸಪ್ಪಗೆ ಮಾಡಿಕೊಳ್ಳಬೇಡಿ. ಕಪಟಿಗಳು ಹಾಗೆ ಮಾಡುತ್ತಾರೆ. ಆದರೆ ನೀವು ಕಪಟಿಗಳಂತಿರಬೇಡಿ. ತಾವು ಉಪವಾಸ ಮಾಡುತ್ತಿರುವುದಾಗಿ ಜನರಿಗೆ ತೋರ್ಪಡಿಸಿಕೊಳ್ಳಲು ಅವರು ತಮ್ಮ ಮುಖಗಳನ್ನು ವಿಕಾರಮಾಡಿಕೊಳ್ಳುತ್ತಾರೆ. ಆ ಕಪಟಿಗಳು ತಮಗೆ ಬರತಕ್ಕ ಪ್ರತಿಫಲವನ್ನು ಸಂಪೂರ್ಣವಾಗಿ ಹೊಂದಾಯಿತೆಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ.[೧೭] ಆದ್ದರಿಂದ ನೀವು ಉಪವಾಸ ಮಾಡುವಾಗ, ಮುಖವನ್ನು ತೊಳೆದುಕೊಳ್ಳಿರಿ; ತಲೆಗೆ ಎಣ್ಣೆಯನ್ನು ಹಚ್ಚಿಕೊಳ್ಳಿರಿ.[೧೮] ಆಗ ನೀವು ಉಪವಾಸ ಮಾಡುತ್ತಿದ್ದೀರೆಂದು ಜನರಿಗೆ ಗೊತ್ತಾಗುವುದಿಲ್ಲ. ಆದರೆ ನಿಮಗೆ ಅಗೋಚರವಾಗಿರುವ ನಿಮ್ಮ ತಂದೆಯು ನಿಮ್ಮನ್ನು ನೋಡುತ್ತಾನೆ. ರಹಸ್ಯದಲ್ಲಿ ನಡೆಯುವ ಸಂಗತಿಗಳನ್ನು ನೋಡಬಲ್ಲ ನಿಮ್ಮ ತಂದೆಯು ನಿಮಗೆ ಪ್ರತಿಫಲವನ್ನು ಕೊಡುತ್ತಾನೆ.[೧೯] “ನಿಮಗೋಸ್ಕರ ಈ ಭೂಮಿಯ ಮೇಲೆ ಭಂಡಾರಗಳನ್ನು ಮಾಡಿಕೊಳ್ಳಬೇಡಿ. ಅವು ಕಿಲುಬುಹತ್ತಿ ಹಾಳಾಗುತ್ತವೆ. ಕಳ್ಳರು ನಿಮ್ಮ ಮನೆಯೊಳಗೆ ಕನ್ನಕೊರೆದು ನಿಮ್ಮಲ್ಲಿರುವುದನ್ನು ಕದಿಯಬಲ್ಲರು.[೨೦] ಆದ್ದರಿಂದ ನಿಮ್ಮ ಭಂಡಾರಗಳನ್ನು ಪರಲೋಕದಲ್ಲಿ ಮಾಡಿಟ್ಟುಕೊಳ್ಳಿ. ಅಲ್ಲಿ ಅವುಗಳಿಗೆ ನುಸಿ ಹಿಡಿಯುವುದಿಲ್ಲ. ಕಿಲುಬುಹತ್ತುವುದಿಲ್ಲ, ಕಳ್ಳರು ಕನ್ನಕೊರೆದು ಕದಿಯುವುದಿಲ್ಲ.[೨೧] ನಿಮ್ಮ ಭಂಡಾರ ಎಲ್ಲಿರುವುದೋ ಅಲ್ಲೇ ನಿಮ್ಮ ಮನಸ್ಸಿರುವುದು.[೨೨] “ಕಣ್ಣು ಶರೀರಕ್ಕೆ ಬೆಳಕಾಗಿದೆ. ನಿನ್ನ ಕಣ್ಣು ಸರಿಯಿದ್ದರೆ, ನಿನ್ನ ದೇಹವೆಲ್ಲಾ ಬೆಳಕಿನಿಂದ ಕೂಡಿರುವುದು.[೨೩] ಆದರೆ ನಿನ್ನ ಕಣ್ಣು ಕೆಟ್ಟಿದ್ದರೆ, ನಿನ್ನ ಶರೀರವೆಲ್ಲ ಕತ್ತಲೆಯಿಂದ (ಪಾಪದಿಂದ) ತುಂಬಿರುವುದು. ನಿನ್ನಲ್ಲಿರುವ ಒಂದೇ ಬೆಳಕು ನಿಜವಾಗಿಯೂ ಕತ್ತಲಾದರೆ, ಆಗ ನೀನು ಕಗ್ಗತ್ತಲಲ್ಲಿರುವೆ.[೨೪] “ಯಾವನೂ ಇಬ್ಬರು ಯಜಮಾನರಿಗೆ ಒಂದೇ ಸಮಯದಲ್ಲಿ ಸೇವೆ ಮಾಡಲಾರನು. ಅವನು ಒಬ್ಬ ಯಜಮಾನನನ್ನು ದ್ವೇಷಿಸಿ ಮತ್ತೊಬ್ಬನನ್ನು ಪ್ರೀತಿಸುತ್ತಾನೆ ಅಥವಾ ಒಬ್ಬ ಯಜಮಾನನನ್ನು ಹಿಂಬಾಲಿಸಿ ಮತ್ತೊಬ್ಬನನ್ನು ತಾತ್ಸಾರ ಮಾಡುತ್ತಾನೆ. ಆದ್ದರಿಂದ ನೀನು ದೇವರಿಗೆ ಮತ್ತು ಹಣಕ್ಕೆ ಒಂದೇ ಸಮಯದಲ್ಲಿ ಸೇವೆ ಮಾಡಲಾರೆ.[೨೫] “ಆದ್ದರಿಂದ ನಿಮ್ಮ ಪ್ರಾಣಧಾರಣೆಗೆ ಬೇಕಾದ ಆಹಾರಕ್ಕಾಗಲಿ ದೇಹಕ್ಕೆ ಬೇಕಾದ ಬಟ್ಟೆಗಾಗಲಿ ನೀವು ಚಿಂತಿಸಬಾರದು. ಪ್ರಾಣವು ಆಹಾರಕ್ಕಿಂತಲೂ ದೇಹವು ಬಟ್ಟೆಗಿಂತಲೂ ಬಹಳ ಮುಖ್ಯವಾದದ್ದೆಂದು ನಾನು ನಿಮಗೆ ಹೇಳುತ್ತೇನೆ.[೨೬] ಪಕ್ಷಿಗಳ ಕಡೆಗೆ ನೋಡಿ. ಅವು ಬಿತ್ತುವುದಿಲ್ಲ, ಕೊಯ್ಯುವುದಿಲ್ಲ ಇಲ್ಲವೇ ಕಣಜಗಳಲ್ಲಿ ತುಂಬಿಟ್ಟುಕೊಳ್ಳುವುದಿಲ್ಲ. ಆದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ಅವುಗಳಿಗೆ ಆಹಾರವನ್ನು ನೀಡುತ್ತಾನೆ. ನೀವು ಆ ಪಕ್ಷಿಗಳಿಗಿಂತ ಎಷ್ಟೋ ಅಮೂಲ್ಯರೆಂಬುದು ನಿಮಗೆ ಗೊತ್ತಿದೆ.[೨೭] ನೀವು ಚಿಂತಿಸುವುದರಿಂದ ನಿಮ್ಮ ಆಯುಷ್ಯು ಹೆಚ್ಚೇನೂ ಆಗುವುದಿಲ್ಲ.[೨೮] “ಬಟ್ಟೆಗಾಗಿ ಚಿಂತಿಸುವುದೇಕೆ? ಹೊಲದಲ್ಲಿರುವ ಹೂವುಗಳನ್ನು ನೋಡಿ. ಅವು ಬೆಳೆಯುವ ಬಗೆಯನ್ನು ಗಮನಿಸಿ. ಅವು ದುಡಿಯುವುದಿಲ್ಲ ಅಥವಾ ತಮಗಾಗಿ ಬಟ್ಟೆಗಳನ್ನು ನೇಯುವುದಿಲ್ಲ.[೨೯] ಆದರೆ ನಾನು ನಿಮಗೆ ಹೇಳುವುದೇನೆಂದರೆ, ಸೊಲೊಮೋನನು ತನ್ನ ವೈಭವದಿಂದ ಇದ್ದಾಗಲೂ ಈ ಹೂವುಗಳಲ್ಲಿ ಒಂದಕ್ಕಿರುವಷ್ಟು ಸೌಂದರ್ಯವುಳ್ಳ ಬಟ್ಟೆಗಳನ್ನು ಧರಿಸಲಿಲ್ಲ.[೩೦] ಬಯಲಿನಲ್ಲಿರುವ ಹುಲ್ಲಿಗೂ ದೇವರು ಹಾಗೆ ಹೊದಿಸುತ್ತಾನೆ. ಹುಲ್ಲಾದರೋ ಈ ಹೊತ್ತು ಇದ್ದು ನಾಳೆ ಬೆಂಕಿಯ ಪಾಲಾಗುತ್ತದೆ. ಆದ್ದರಿಂದ ದೇವರು ನಿಮಗೆ ಎಷ್ಟೋ ಹೆಚ್ಚಾಗಿ ತೊಡಿಸುತ್ತಾನೆಂದು ನಿಮಗೆ ಗೊತ್ತಿದೆ. ಅಲ್ಪವಿಶ್ವಾಸಿಗಳಾಗಿರಬೇಡಿ![೩೧] “‘ನಾವು ಏನು ತಿನ್ನಬೇಕು? ಏನು ಕುಡಿಯಬೇಕು? ಏನನ್ನು ಧರಿಸಬೇಕು?’ ಎಂದು ಚಿಂತಿಸಬೇಡಿ.[೩೨] ದೇವರನ್ನು ತಿಳಿಯದ ಜನರೆಲ್ಲರೂ ಇವುಗಳನ್ನು ಪಡೆಯಲು ಪ್ರಯತ್ನಿಸುತ್ತಾರೆ. ಚಿಂತಿಸಬೇಡಿರಿ, ಏಕೆಂದರೆ ಈ ವಸ್ತುಗಳು ನಿಮಗೆ ಅಗತ್ಯವೆಂದು ಪರಲೋಕದಲ್ಲಿರುವ ನಿಮ್ಮ ತಂದೆಗೆ ತಿಳಿದಿದೆ.[೩೩] ಆದ್ದರಿಂದ ನೀವು ದೇವರ ರಾಜ್ಯಕ್ಕಾಗಿ ಮತ್ತು ಆತನ ಚಿತ್ತಕ್ಕನುಸಾರವಾಗಿ ಕಾರ್ಯಗಳನ್ನು ಮಾಡಲು ಬಹಳ ತವಕಪಡಬೇಕು. ಆಗ ನಿಮಗೆ ಅಗತ್ಯವಾದ ಉಳಿದವುಗಳನ್ನು ಸಹ ಕೊಡಲಾಗುವುದು.[೩೪] ಆದ್ದರಿಂದ ನಾಳೆಗಾಗಿ ಚಿಂತಿಸಬೇಡಿ. ಪ್ರತಿದಿನವು ತನ್ನದೇ ಆದ ಎಷ್ಟೋ ಕಷ್ಟಗಳನ್ನು ಹೊಂದಿರುತ್ತದೆ. ನಾಳೆಯು ಸಹ ತನ್ನದೇ ಆದ ಚಿಂತೆಗಳನ್ನು ಹೊಂದಿದೆ.

ಧರ್ಮೋಪದೇಷಕಾಂಡ ೨೮:೧-೬೮
[೧] “ನಾನು ಹೇಳಿದಂಥ ಎಲ್ಲಾ ಧರ್ಮಶಾಸ್ತ್ರವನ್ನು ಅನುಸರಿಸಿ ಅದಕ್ಕೆ ವಿಧೇಯರಾದರೆ ನಿಮ್ಮ ದೇವರಾದ ಯೆಹೋವನು ಪ್ರಪಂಚದ ಎಲ್ಲಾ ದೇಶಗಳಿಗಿಂತ ನಿಮ್ಮ ದೇಶವನ್ನು ಅತೀ ಉನ್ನತಸ್ಥಾನದಲ್ಲಿರುವ ದೇಶವನ್ನಾಗಿ ಮಾಡುವನು.[೨] ನೀವು ದೇವರಿಗೆ ವಿಧೇಯರಾದರೆ ಈ ಎಲ್ಲಾ ಆಶೀರ್ವಾದಗಳು ನಿಮ್ಮದಾಗುವವು.[೩] “ಯೆಹೋವನು ನಿಮ್ಮನ್ನು ಹೊಲಗಳಲ್ಲಿಯೂ ಪಟ್ಟಣಗಳಲ್ಲಿಯೂ ಆಶೀರ್ವದಿಸುವನು.[೪] “ಯೆಹೋವನು ನಿಮ್ಮನ್ನು ಆಶೀರ್ವದಿಸಿ ನಿಮಗೆ ಅನೇಕ ಮಕ್ಕಳನ್ನು ಅನುಗ್ರಹಿಸುವನು. ನಿಮ್ಮ ಹೊಲಗಳನ್ನು ಆಶೀರ್ವದಿಸಿ ಒಳ್ಳೆಯ ಬೆಳೆಯನ್ನು ಅನುಗ್ರಹಿಸುವನು. ನಿಮ್ಮ ಪಶುಪ್ರಾಣಿಗಳನ್ನು ಆಶೀರ್ವದಿಸಿ ಅವು ಹೆಚ್ಚು ಮರಿಗಳನ್ನು ಈಯುವಂತೆ ಮಾಡುವನು. ಆತನು ನಿಮ್ಮ ಎಲ್ಲಾ ದನಕರು, ಕುರಿಮರಿಗಳನ್ನು ಆಶೀರ್ವದಿಸುವನು.[೫] “ಯೆಹೋವನು ನಿಮ್ಮ ಪುಟ್ಟಿಗಳನ್ನೂ ಪಾತ್ರೆಗಳನ್ನೂ ಆಶೀರ್ವದಿಸಿ ಅವು ಯಾವಾಗಲೂ ಆಹಾರಪದಾರ್ಥಗಳಿಂದ ತುಂಬಿರುವಂತೆ ಮಾಡುವನು.[೬] “ನೀವು ಮಾಡುವ ಎಲ್ಲಾ ಕಾರ್ಯಗಳಲ್ಲಿ ಸಫಲ ಹೊಂದುವಂತೆ ಆಶೀರ್ವದಿಸುವನು.[೭] “ವೈರಿಗಳು ನಿಮ್ಮೆದುರಾಗಿ ಯುದ್ಧಮಾಡಲು ಬಂದಾಗ ನಿಮಗೆ ಆತನು ಸಹಾಯ ಮಾಡುವನು. ವೈರಿಗಳು ಒಂದು ದಿಕ್ಕಿನಿಂದ ಬಂದರೆ ಏಳು ದಾರಿಯಲ್ಲಿ ಪಲಾಯನ ಮಾಡುವರು.[೮] “ಯೆಹೋವನು ನಿಮ್ಮನ್ನು ಆಶೀರ್ವದಿಸಿ ನಿಮ್ಮ ಕಣಜಗಳನ್ನು ಆಶೀರ್ವದಿಸುವನು. ನೀವು ಮಾಡುವ ಕಾರ್ಯಗಳನ್ನೆಲ್ಲಾ ಆಶೀರ್ವದಿಸುವನು. ನಿಮಗೆ ಕೊಡುವ ದೇಶದಲ್ಲಿ ನೀವು ವಾಸಿಸುವಾಗ ನಿಮ್ಮನ್ನು ಆಶೀರ್ವದಿಸುವನು.[೯] ನೀವು ಯೆಹೋವನ ಆಜ್ಞೆಗಳಿಗೆ ವಿಧೇಯರಾದರೆ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ತನ್ನ ವಾಗ್ದಾನಕ್ಕನುಸಾರವಾಗಿ ವಿಶೇಷವಾದ ಸ್ವಕೀಯ ಪ್ರಜೆಯನ್ನಾಗಿ ಮಾಡುವನು.[೧೦] ಆಗ ನಿಮ್ಮ ದೇಶದಲ್ಲಿ ವಾಸಿಸುವವರೆಲ್ಲರೂ ನೀವು ದೇವರ ಹೆಸರಿನಿಂದ ಕರೆಯಲ್ಪಟ್ಟವರೆಂಬುದನ್ನು ನೋಡುವಾಗ ನಿಮಗೆ ಭಯಪಡುವರು.[೧೧] “ನಿಮ್ಮ ದೇವರಾದ ಯೆಹೋವನು ನಿಮಗೆ ಒಳ್ಳೆಯ ವಸ್ತುಗಳನ್ನು ಕೊಡುವನು; ನಿಮಗೆ ಹೆಚ್ಚು ಮಕ್ಕಳನ್ನು ಅನುಗ್ರಹಿಸುವನು. ನಿಮ್ಮ ಪಶುಗಳು ಹೆಚ್ಚು ಮರಿಗಳನ್ನು ಈಯುವಂತೆ ಮಾಡುವನು. ಯೆಹೋವನು ನಿಮಗೆ ಕೊಡುವುದಾಗಿ ವಾಗ್ದಾನ ಮಾಡಿದ ದೇಶದಲ್ಲಿ ನಿಮ್ಮ ಹೊಲವು ಒಳ್ಳೆಯ ಬೆಳೆಗಳನ್ನು ಫಲಿಸುತ್ತದೆ.[೧೨] ಯೆಹೋವನು ತನ್ನ ಆಶೀರ್ವಾದಗಳೆಂಬ ಭಂಡಾರವನ್ನೇ ನಿಮಗೆ ತೆರೆಯುವನು. ಕಾಲಕ್ಕೆ ತಕ್ಕಹಾಗೆ ಮಳೆ ಸುರಿಯುವಂತೆ ಮಾಡುವನು; ನಿಮ್ಮ ಕಾರ್ಯವನ್ನೆಲ್ಲಾ ಸಫಲ ಮಾಡುವನು. ಇತರ ದೇಶಗಳಿಗೆ ಸಾಲ ಕೊಡಲು ನಿಮ್ಮಲ್ಲಿ ಹಣವಿರುವುದು; ಬೇರೆಯವರಿಂದ ಸಾಲ ತೆಗೆದುಕೊಳ್ಳುವ ಅವಶ್ಯಕತೆ ನಿಮಗೆ ಬಾರದು.[೧೩] ಯೆಹೋವನು ನಿಮ್ಮನ್ನು ತಲೆಯನ್ನಾಗಿ ಮಾಡಲು ಬಯಸುತ್ತಾನೆಯೇ ಹೊರತು ಬಾಲವನ್ನಾಗಿಯಲ್ಲ. ನೀವು ಮೇಲಿನ ಅಂತಸ್ತಿನಲ್ಲಿರುವಿರಿ, ಕೆಳಗಿನದರಲ್ಲಿ ಅಲ್ಲ. ನೀವು ಯೆಹೋವನ ಆಜ್ಞೆಯನ್ನು ಪಾಲಿಸಿದಾಗ ನಿಮಗೆ ಹೀಗೆ ಆಗುವುದು.[೧೪] ನಾನು ಈ ಹೊತ್ತು ಬೋಧಿಸುವ ಯಾವುದನ್ನೂ ನೀವು ಉಲ್ಲಂಘಿಸಬಾರದು. ಇತರ ದೇವರುಗಳನ್ನು ಹಿಂಬಾಲಿಸಿ ಅವುಗಳನ್ನು ಪೂಜಿಸಬಾರದು.[೧೫] “ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ಆಜ್ಞೆ, ಕಟ್ಟಳೆಗಳಿಗೆ ನೀವು ವಿಧೇಯರಾಗದಿದ್ದರೆ ಈ ಕೆಟ್ಟ ಸಂಗತಿಗಳು ನಿಮಗೆ ತಟ್ಟುವವು:[೧೬] “ನಿಮ್ಮ ಹೊಲದಲ್ಲಿಯೂ ನೀವು ವಾಸಿಸುವ ಪಟ್ಟಣದಲ್ಲಿಯೂ ಯೆಹೋವನು ನಿಮ್ಮನ್ನು ಶಪಿಸುವನು.[೧೭] “ನಿಮ್ಮ ಪುಟ್ಟಿಗಳನ್ನೂ ಪಾತ್ರೆಗಳನ್ನೂ ಆಹಾರವಿಲ್ಲದಂತೆ ಬರಿದಾಗಿ ಮಾಡುವನು.[೧೮] “ನಿಮಗೆ ಹೆಚ್ಚು ಮಕ್ಕಳಿಲ್ಲದಂತೆ ಮಾಡುವನು. ನಿಮ್ಮ ಹೊಲಗಳನ್ನು ಶಪಿಸಿ ನಿಮಗೆ ಹೆಚ್ಚು ಬೆಳೆಯಾಗದಂತೆ ಮಾಡುವನು. ನಿಮ್ಮ ಪಶುಪ್ರಾಣಿಗಳನ್ನು ಶಪಿಸಿ ಅವುಗಳು ಮರಿಗಳನ್ನು ಈಯದಂತೆ ಮಾಡುವನು. ಆತನು ನಿಮ್ಮ ಎಲ್ಲಾ ಮರಿಗಳನ್ನೂ ಕರುಗಳನ್ನೂ ಶಪಿಸುವನು.[೧೯] “ನೀವು ಎಲ್ಲಾ ಸಮಯಗಳಲ್ಲಿ ಮಾಡುವ ಎಲ್ಲಾ ಕೆಲಸಕಾರ್ಯಗಳನ್ನು ನಿಮ್ಮ ದೇವರಾದ ಯೆಹೋವನು ಶಪಿಸುವನು.[೨೦] “ನೀವು ಕೆಟ್ಟಕಾರ್ಯಗಳನ್ನು ಮಾಡಿ ಯೆಹೋವನಿಂದ ದೂರವಾಗಿ ಹೋದರೆ ನಿಮಗೆ ಕೆಟ್ಟಸಂಗತಿಗಳು ಉಂಟಾಗುವವು. ನಿಮಗೆ ಉಪದ್ರವಗಳೂ ಮನಸ್ಸಿಗೆ ಅಸಮಾಧಾನವೂ ಉಂಟಾಗುವವು. ನೀವು ಸಂಪೂರ್ಣವಾಗಿ ನಾಶವಾಗುವ ತನಕ ಈ ಸಂಗತಿಗಳು ನಿಮ್ಮನ್ನು ಬಾಧಿಸುವವು. ನೀವು ಆತನನ್ನು ತೊರೆದದ್ದರಿಂದ ನಿಮಗೆ ಹಾಗೆ ಮಾಡುವನು.[೨೧] ನೀವು ಸ್ವಾಸ್ತ್ಯವಾಗಿ ಹೊಂದಲಿರುವ ದೇಶದಿಂದ ನೀವು ನಾಶವಾಗುವವರೆಗೆ, ನಿಮ್ಮ ದೇವರಾದ ಯೆಹೋವನು ನಿಮಗೆ ಭಯಂಕರವಾದ ರೋಗಗಳನ್ನು ಬರಮಾಡುವನು.[೨೨] ಜ್ವರ, ಬಾಧೆ, ದೇಹ ಊದಿಕೊಳ್ಳುವಿಕೆ ಇವುಗಳಿಂದ ನಿಮ್ಮನ್ನು ಶಿಕ್ಷಿಸುವನು. ನಿಮ್ಮ ದೇಶದೊಳಗೆ ಸಹಿಸಲಾರದ ಉಷ್ಣವನ್ನು ಕಳುಹಿಸಿ ಮಳೆಬೀಳದಂತೆ ಮಾಡುವನು. ನಿಮ್ಮ ಬೆಳೆ ರೋಗದಿಂದಲೂ ಬಿಸಿಲಿನಿಂದಲೂ ನಾಶವಾಗುವುದು. ಇವೆಲ್ಲಾ ನಿಮಗೆ ಉಂಟಾಗಿ ನೀವು ನಾಶವಾಗುವ ತನಕ ಮುಂದುವರಿಯುವವು.[೨೩] ಆಕಾಶವು ಮೋಡಗಳೇ ಇರದ ಕಾದ ಹಿತ್ತಾಳೆಯಂತಿರುವುದು. ಕಾಲಿನ ಅಡಿಯಲ್ಲಿರುವ ನೆಲವು ಕಬ್ಬಿಣದಂತೆ ಗಟ್ಟಿಯಾಗಿರುವುದು.[೨೪] ಯೆಹೋವನು ನಿಮಗೆ ಮಳೆಯನ್ನು ಬೀಳಮಾಡುವುದಿಲ್ಲ; ಕೇವಲ ಧೂಳು ಮತ್ತು ಮರಳು ಆಕಾಶದಿಂದ ಬೀಳುವುದು. ನೀವು ನಾಶವಾಗುವವರೆಗೆ ಅದು ಮೇಲಿನಿಂದ ಬೀಳುತ್ತಿರುವುದು.[೨೫] “ನಿಮ್ಮ ವೈರಿಗಳು ಬಂದು ನಿಮ್ಮನ್ನು ಸೋಲಿಸಿಬಿಡುವಂತೆ ಮಾಡುವನು. ನೀವು ಒಂದು ದಾರಿಯಿಂದ ನಿಮ್ಮ ವೈರಿಗೆ ಎದುರಾಗಿ ಯುದ್ಧಕ್ಕೆ ಇಳಿದರೆ ಏಳುದಾರಿಗಳಿಂದ ರಣರಂಗದಿಂದ ಪಲಾಯನ ಮಾಡುವಿರಿ. ನಿಮಗೆ ಸಂಭವಿಸುವ ಬಾಧೆಗಳನ್ನು ನೋಡಿ ಇತರ ಜನಾಂಗದವರು ಭಯಪಡುವರು.[೨೬] ಕಾಡುಪಕ್ಷಿಗಳಿಗೆ ಮತ್ತು ಕಾಡುಪ್ರಾಣಿಗಳಿಗೆ ನಿಮ್ಮ ಹೆಣಗಳು ಆಹಾರವಾಗುವವು. ಅವುಗಳನ್ನು ಓಡಿಸಲು ಯಾರೂ ಇರುವುದಿಲ್ಲ.[೨೭] “ಈಜಿಪ್ಟಿನವರಿಗೆ ಕಳುಹಿಸಿದಂತೆ ನಿಮಗೂ ಮೈಯಲ್ಲಿ ಬಾಧಿಸುವ ಹುಣ್ಣುಗಳನ್ನು ಕಳುಹಿಸುವನು. ದೇಹದಲ್ಲಿ ಗಡ್ಡೆಗಳುಂಟಾಗುವವು. ಕೀವುಸೋರುವ ಹುಣ್ಣುಗಳು, ಗುಣವಾಗದ ತುರಿಸುವ ಕಜ್ಜಿಗಳು ಉಂಟಾಗುವವು.[೨೮] ಯೆಹೋವನು ನಿಮ್ಮನ್ನು ದಿಗ್ಬ್ರಾಂತರನ್ನಾಗಿ ಮಾಡುವನು; ನಿಮ್ಮನ್ನು ಕುರುಡರನ್ನಾಗಿ ಮಾಡಿ ಗಲಿಬಿಲಿ ಮಾಡುವನು.[೨೯] “ಹಗಲಿನಲ್ಲೂ ಕುರುಡರಂತೆ ನೀವು ತಡವರಿಸುವಿರಿ. ನೀವು ಮಾಡುವ ಕಾರ್ಯವೆಲ್ಲವೂ ನಿಷ್ಫಲವಾಗುವವು. ಜನರು ನಿಮ್ಮನ್ನು ಬಾಧಿಸಿ ನಿಮ್ಮಲ್ಲಿರುವದನ್ನೆಲ್ಲಾ ದೋಚಿಕೊಂಡು ಹೋಗುವರು. ನಿಮ್ಮನ್ನು ರಕ್ಷಿಸಲು ಯಾರೂ ಬರುವುದಿಲ್ಲ.[೩೦] “ನೀವು ಮದುವೆಯಾಗಲು ಕನ್ನಿಕೆಯೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳುವಿರಿ. ಆದರೆ ಬೇರೊಬ್ಬನು ಆಕೆಯನ್ನು ಕೂಡುವನು. ನೀವೊಂದು ಮನೆಯನ್ನು ಕಟ್ಟುವಿರಿ. ಆದರೆ ಬೇರೊಬ್ಬನು ಅದರಲ್ಲಿ ವಾಸಿಸುವನು. ನೀವು ದ್ರಾಕ್ಷಾತೋಟ ಮಾಡಿ ದ್ರಾಕ್ಷಾಲತೆಗಳನ್ನು ನೆಡುವಿರಿ. ಆದರೆ ಅದರ ಫಲಗಳನ್ನು ನೀವು ಕೂಡಿಸುವುದಿಲ್ಲ.[೩೧] ನಿಮ್ಮ ದನಗಳನ್ನು ನಿಮ್ಮೆದುರಿನಲ್ಲಿ ಜನರು ಕೊಯ್ಯುವರು. ಆದರೆ ನೀವು ಅದರ ಮಾಂಸವನ್ನು ತಿನ್ನುವುದಿಲ್ಲ. ನಿಮ್ಮ ಕತ್ತೆಗಳನ್ನು ಜನರು ನಿಮ್ಮಿಂದ ತೆಗೆದುಕೊಂಡು ಹೋಗುವರು. ಆದರೆ ಅವುಗಳನ್ನು ಹಿಂದಕ್ಕೆ ಕೊಡರು. ನಿಮ್ಮ ಕುರಿಗಳನ್ನು ವೈರಿಗಳು ಕೊಂಡೊಯ್ಯುವರು. ನಿಮ್ಮನ್ನು ರಕ್ಷಿಸಲು ಯಾರೂ ಬರಲಾರರು.[೩೨] “ನಿಮ್ಮ ಗಂಡುಹೆಣ್ಣು ಮಕ್ಕಳನ್ನು ಬೇರೆಯವರು ಎತ್ತಿಕೊಂಡು ಹೋಗುವರು. ನೀವು ಹಗಲುರಾತ್ರಿ ನಿಮ್ಮ ಮಕ್ಕಳಿಗಾಗಿ ಹುಡುಕಾಡುವಿರಿ. ಹುಡುಕಾಡುತ್ತಾ ನಿಮ್ಮ ಕಣ್ಣುಗಳು ಕಂಗೆಡುವವು; ಆದರೆ ಅವರು ನಿಮಗೆ ದೊರಕುವುದಿಲ್ಲ. ಯೆಹೋವನು ನಿಮಗೆ ಸಹಾಯ ಮಾಡುವುದಿಲ್ಲ.[೩೩] “ನೀವು ಅರಿಯದಿರುವ ದೇಶದವರು ಬಂದು ನಿಮ್ಮ ಪೈರನ್ನು ಕೊಯ್ದುಕೊಂಡು ಹೋಗುವರು; ನೀವು ದುಡಿದು ಸಂಪಾದಿಸಿದವುಗಳನ್ನು ಎತ್ತಿಕೊಂಡು ಹೋಗುವರು. ಜನರು ನಿಮ್ಮನ್ನು ಕುಗ್ಗಿಸಿ ಬಲಹೀನರನ್ನಾಗಿ ಮಾಡುವರು.[೩೪] ನೀವು ನೋಡುವ ಸಂಗತಿಗಳು ನಿಮ್ಮನ್ನು ಹುಚ್ಚರನ್ನಾಗಿ ಮಾಡುತ್ತವೆ.[೩೫] ಯೆಹೋವನು ನಿಮ್ಮನ್ನು ಉರಿಯುವ ಹುಣ್ಣುಗಳಿಂದ ಬಾಧಿಸುವನು; ಅವುಗಳು ಗುಣವಾಗುವುದಿಲ್ಲ. ಈ ಹುಣ್ಣುಗಳು ನಿಮ್ಮ ದೇಹದ ಎಲ್ಲಾ ಭಾಗಗಳಲ್ಲಿ ಅಂದರೆ ನಿಮ್ಮ ಪಾದದಿಂದ ಹಿಡಿದು ನಡುನೆತ್ತಿಯ ತನಕ ಇರುವವು.[೩೬] “ಯೆಹೋವನು ನಿಮ್ಮನ್ನೂ ನಿಮ್ಮ ಅರಸನನ್ನೂ ನೀವು ಅರಿಯದ ದೇಶಕ್ಕೆ ಅಟ್ಟಿಬಿಡುವನು. ನೀವಾಗಲಿ ನಿಮ್ಮ ಪೂರ್ವಿಕರಾಗಲಿ ಆ ದೇಶವನ್ನು ಎಂದೂ ನೋಡಲಿಲ್ಲ. ಅಲ್ಲಿ ಮರ, ಕಲ್ಲುಗಳಿಂದ ಮಾಡಿದ ಸುಳ್ಳುದೇವರನ್ನು ಆರಾಧಿಸುವಿರಿ.[೩೭] ನೀವು ಯಾವ ದೇಶಕ್ಕೆ ಕಳುಹಿಸಲ್ಪಡುವಿರೋ ಆ ದೇಶದವರು ನಿಮ್ಮ ದುರವಸ್ಥೆಯನ್ನು ನೋಡಿ ನಗುವರು; ಕೆಟ್ಟಮಾತುಗಳನ್ನಾಡುವರು.[೩೮] “ಹೊಲದಲ್ಲಿ ಧಾನ್ಯ ಯಥೇಚ್ಛವಾಗಿ ಬೆಳೆದರೂ ನೀವು ಮನೆಯೊಳಗೆ ತರುವುದು ಸ್ವಲ್ಪ ಮಾತ್ರ. ಪ್ರಿಯತಮತೆಯು ನಿಮ್ಮ ಬೆಳೆಯನ್ನು ತಿಂದು ಬಿಡುವದು.[೩೯] ನೀವು ದ್ರಾಕ್ಷಾತೋಟ ಮಾಡಿ ಪ್ರಯಾಸಪಟ್ಟು ಅದರಲ್ಲಿ ಕೆಲಸ ಮಾಡುವಿರಿ. ಆದರೆ ಅದರ ಫಲವನ್ನು ಹುಳಗಳು ತಿಂದುಬಿಡುವುದರಿಂದ ನೀವು ದ್ರಾಕ್ಷಿಯನ್ನು ಸಂಗ್ರಹಿಸುವುದಿಲ್ಲ; ದ್ರಾಕ್ಷಾರಸವನ್ನು ಕುಡಿಯುವುದಿಲ್ಲ.[೪೦] ನಿಮ್ಮ ಭೂಮಿಯಲ್ಲಿ ಆಲಿವ್ ಮರಗಳು ತುಂಬಿದ್ದರೂ ಎಣ್ಣೆಯ ಬರದಲ್ಲಿ ಸಂಕಟಪಡುವಿರಿ. ಯಾಕೆಂದರೆ ಆಲಿವ್ ಕಾಯಿಗಳು ಭೂಮಿಯ ಮೇಲೆ ಉದುರಿಬಿದ್ದು ಹಾಳಾಗುವವು.[೪೧] ನಿಮಗೆ ಗಂಡುಹೆಣ್ಣು ಮಕ್ಕಳು ಹುಟ್ಟುವರು. ಆದರೆ ಅವರು ನಿಮ್ಮೊಂದಿಗೆ ಇರುವುದಿಲ್ಲ. ಅವರು ಸೆರೆಹಿಡಿಯಲ್ಪಟ್ಟು ಒಯ್ಯಲ್ಪಡುವರು.[೪೨] ನಿಮ್ಮ ತೋಟದ ಎಲ್ಲಾ ಮರಗಳನ್ನೂ ಹೊಲದ ಪೈರುಗಳನ್ನೂ ಪ್ರಿಯತಮತೆಗಳು ತಿಂದುಬಿಡುವವು.[೪೩] ನಿಮ್ಮ ಮಧ್ಯದಲ್ಲಿ ವಾಸಿಸುವ ಅನ್ಯರು ಬಲಿಷ್ಠರಾಗುವರು. ನೀವಾದರೋ ಬಲಹೀನರಾಗುವಿರಿ.[೪೪] ನಿಮಗೆ ಸಾಲ ಕೊಡಲು ವಿದೇಶಿಯರಿಗೆ ಹಣವಿರುವುದು. ಆದರೆ ಅವರಿಗೆ ಸಾಲ ಕೊಡಲು ನಿಮ್ಮಲ್ಲಿ ಹಣವಿರುವುದಿಲ್ಲ. ತಲೆಯು ದೇಹವನ್ನು ಹೇಗೆ ಹಿಡಿತದಲ್ಲಿಟ್ಟುಕೊಂಡಿರುತ್ತದೋ ಹಾಗೆಯೇ ಅವರು ನಿಮ್ಮನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳುವರು. ನೀವು ಅವರಿಗೆ ಬಾಲದಂತಿರುವಿರಿ.[೪೫] “ನಿಮ್ಮ ದೇವರಾದ ಯೆಹೋವನು ಹೇಳಿದ ಸಂಗತಿಗಳಿಗೆ ನೀವು ಕಿವಿಗೊಡದೆ ಹೋದದ್ದರಿಂದ, ಆತನು ಕೊಟ್ಟ ಆಜ್ಞೆಗಳಿಗೂ ನಿಯಮಗಳಿಗೂ ನೀವು ವಿಧೇಯರಾಗದಿದ್ದ ಕಾರಣ ಈ ಶಾಪಗಳೆಲ್ಲಾ ನಿಮ್ಮ ಮೇಲೆ ಬರುತ್ತವೆ. ನೀವು ನಾಶವಾಗುವವರೆಗೂ ಅವು ನಿಮ್ಮನ್ನು ಅಟ್ಟಿಸಿಕೊಂಡು ಬರುತ್ತವೆ.[೪೬] ನೀವೂ ನಿಮ್ಮ ಸಂತತಿಯವರೂ ದೇವರ ಶಾಶ್ವತವಾದ ತೀರ್ಪನ್ನು ಹೊಂದಿದ್ದೀರೆಂಬುದಕ್ಕೆ ಬೇರೆಯವರಿಗೆ ಈ ಶಾಪಗಳೇ ಸೂಚನೆಯಾಗಿಯೂ ರುಜುವಾತಾಗಿಯೂ ಇರುತ್ತವೆ.[೪೭] “ನಿಮ್ಮದೇವರಾದ ಯೆಹೋವನು ನಿಮಗೆ ಹೆಚ್ಚಾದ ಆಶೀರ್ವಾದವನ್ನು ಕೊಟ್ಟನು. ಆದರೆ ನೀವು ಸಂತೋಷ ಮತ್ತು ಉಪಕಾರದ ಹೃದಯದಿಂದ ಆತನ ಸೇವೆಮಾಡಲಿಲ್ಲ.[೪೮] ಆದ್ದರಿಂದ ಆತನು ನಿಮ್ಮ ವೈರಿಗಳನ್ನು ಕಳುಹಿಸಿ ಅವರ ಸೇವೆ ನೀವು ಮಾಡುವಂತೆ ಮಾಡುವನು. ನೀವು ಹಸಿವು ಬಾಯಾರಿಕೆಗಳಿಂದ ಬಳಲುವಿರಿ; ಬಟ್ಟೆಯಿಲ್ಲದೆ ಬಡವರಾಗಿ ಜೀವಿಸುವಿರಿ. ನಿಮ್ಮ ಯೆಹೋವನು ನಿಮ್ಮ ಮೇಲೆ ಭಾರವನ್ನು ಹೊರಿಸುವನು. ಆ ಭಾರವನ್ನು ನಿಮ್ಮಿಂದ ತೆಗೆಯಲಾಗುವುದಿಲ್ಲ; ನೀವು ನಾಶವಾಗುವಿರಿ.[೪೯] “ಬಹಳ ದೂರದಿಂದ ಒಂದು ಜನಾಂಗವು ನಿಮ್ಮೊಂದಿಗೆ ಯುದ್ಧಮಾಡಲು ಬರುವಂತೆ ಯೆಹೋವನು ಮಾಡುವನು. ನೀವು ಅವರ ಭಾಷೆಯನ್ನು ಅರಿಯದಿರುವಿರಿ. ಆಕಾಶದಿಂದ ಹದ್ದು ಹಾರಿಬರುವಂತೆ ಅತೀ ವೇಗವಾಗಿ ಅವರು ನಿಮ್ಮ ಮೇಲೆ ಬೀಳುವರು.[೫೦] ಅವರು ಮಹಾಕ್ರೂರಿಗಳು. ಅವರು ನಿಮ್ಮಲ್ಲಿರುವ ಮುದುಕರಿಗೆ ಅಥವಾ ಎಳೆಗೂಸುಗಳಿಗೆ ಕರುಣೆ ತೋರಿಸರು.[೫೧] ಅವರು ನಿಮ್ಮ ಪಶುಗಳನ್ನು ಅಟ್ಟಿಸಿಕೊಂಡು ಹೋಗುವರು; ನೀವು ಬೆಳೆದ ಬೆಳೆಯನ್ನು ಕೊಂಡೊಯ್ಯುವರು. ನಿಮ್ಮನ್ನು ನಾಶಪಡಿಸುವ ತನಕ ಅವರು ಪ್ರತಿಯೊಂದನ್ನೂ ತೆಗೆದುಕೊಂಡು ಹೋಗುವರು. ಅವರು ನಿಮಗೆ ದವಸಧಾನ್ಯವನ್ನಾಗಲಿ ದ್ರಾಕ್ಷಾರಸವನ್ನಾಗಲಿ ಎಣ್ಣೆಯನ್ನಾಗಲಿ ಹಸುಗಳನ್ನಾಗಲಿ ಕುರಿಗಳನ್ನಾಗಲಿ ಮೇಕೆಗಳನ್ನಾಗಲಿ ಬಿಟ್ಟುಹೋಗುವುದಿಲ್ಲ. ಅವರು ನಿಮ್ಮನ್ನು ನಾಶಪಡಿಸುವ ತನಕ ಪ್ರತಿಯೊಂದನ್ನೂ ತೆಗೆದುಕೊಂಡು ಹೋಗುವರು.[೫೨] “ಆ ವೈರಿಗಳು ನಿಮ್ಮ ಪಟ್ಟಣಗಳನ್ನೆಲ್ಲಾ ಮುತ್ತಿ ವಶಪಡಿಸಿಕೊಳ್ಳುವರು. ಆ ಪಟ್ಟಣಗಳಿಗೆ ಎತ್ತರದ ಪೌಳಿಗೋಡೆಗಳಿವೆ. ಆದ್ದರಿಂದ ನಮಗೆ ಭಯವಿಲ್ಲವೆಂದು ನೀವು ಭರವಸೆಯಿಂದಿರುವಿರಿ. ಆದರೆ ಅವರು ಪೌಳಿಗೋಡೆಗಳನ್ನು ಕೆಡವಿ ನೆಲಸಮ ಮಾಡುವರು. ದೇವರಾದ ಯೆಹೋವನು ನಿಮಗೆ ಕೊಟ್ಟಿರುವ ಪಟ್ಟಣಗಳಲ್ಲೆಲ್ಲಾ ತೊಂದರೆ ಮಾಡುವರು.[೫೩] ವೈರಿಗಳು ನಿಮ್ಮ ಪಟ್ಟಣವನ್ನು ಮುತ್ತಿಗೆ ಹಾಕಿದಾಗ ನೀವು ಸಂಕಟ ಅನುಭವಿಸುವಿರಿ. ಆಗ ನೀವು ಊಟಕ್ಕೆ ಇಲ್ಲದೆ ತೊಂದರೆಗೊಳಗಾಗುವಿರಿ; ಹಸಿವು ತಾಳಲಾರದೆ ನಿಮ್ಮ ಮಕ್ಕಳನ್ನೇ ತಿನ್ನುವಿರಿ.[೫೪] “ನಿಮ್ಮಲ್ಲಿರುವ ಮೃದುವಾದ ಮತ್ತು ಕನಿಕರವುಳ್ಳ ಮನುಷ್ಯನೂ ಬೇರೆಯವರಿಗೆ ಕ್ರೂರಿಯಾಗುವನು; ತನ್ನನ್ನು ಬಹಳವಾಗಿ ಪ್ರೀತಿಸುವ ಹೆಂಡತಿಗೂ ಅವನು ಕ್ರೂರಿಯಾಗುವನು; ಇನ್ನೂ ಜೀವಂತವಾಗಿರುವ ತನ್ನ ಮಕ್ಕಳಿಗೂ ಅವನು ಕ್ರೂರಿಯಾಗುವನು.[೫೫] ಅವನಿಗೆ ಊಟಕ್ಕೇನೂ ಇಲ್ಲದಿರುವುದರಿಂದ ಸ್ವಂತ ಮಕ್ಕಳನ್ನೇ ತಿನ್ನುವನು. ಅವರನ್ನು ಇತರರೊಂದಿಗೆ ಹಂಚಿಕೊಳ್ಳದೆ, ತನ್ನ ಸ್ವಂತ ಕುಟುಂಬದವರೊಂದಿಗೆ ಹಂಚಿಕೊಳ್ಳದೆ ತಾನೊಬ್ಬನೇ ತಿನ್ನುವನು. ನಿಮ್ಮ ವೈರಿಗಳು ಬಂದು ನಿಮ್ಮ ಪಟ್ಟಣಕ್ಕೆ ಮುತ್ತಿಗೆ ಹಾಕಿದಾಗ ನಿಮಗೆ ಇವೆಲ್ಲಾ ಸಂಭವಿಸುತ್ತವೆ.[೫೬] “ನಿಮ್ಮಲ್ಲಿರುವ ಅತ್ಯಂತ ಮೃದುವಾದ ಮತ್ತು ಕನಿಕರವುಳ್ಳ ಸ್ತ್ರೀಯೂ ಕ್ರೂರಿಯಾಗುವಳು. ನೆಲದ ಮೇಲೆ ಬರಿಗಾಲಿನಲ್ಲಿ ಎಂದೂ ನಡೆಯದಷ್ಟು ಮೃದುವೂ ಕೋಮಲೆಯೂ ಆಗಿದ್ದ ಆಕೆ ತನ್ನನ್ನು ಬಹಳವಾಗಿ ಪ್ರೀತಿಸುವ ಗಂಡನಿಗೇ ಕ್ರೂರಿಯಾಗುವಳು; ಅವಳು ತನ್ನ ಸ್ವಂತ ಮಗನಿಗೂ ಮಗಳಿಗೂ ಕ್ರೂರಿಯಾಗುವಳು.[೫೭] ಅವಳು ಅಡಗಿಕೊಂಡು ಮಗುವನ್ನು ಹೆರುವಳು. ಬಳಿಕ ಆ ಮಗುವನ್ನೂ ಅದರೊಡನೆ ಬರುವುದೆಲ್ಲವನ್ನೂ ಭಯಂಕರವಾದ ಹಸಿವೆಯಿಂದಾಗಿ ತಿಂದುಬಿಡುವಳು. ನಿಮ್ಮ ಶತ್ರುವು ಬಂದು ನಿಮ್ಮ ಪಟ್ಟಣಗಳಿಗೆ ಮುತ್ತಿಗೆ ಹಾಕಿ ನಿಮ್ಮನ್ನು ಸಂಕಟಕ್ಕೆ ಗುರಿ ಮಾಡಿದಾಗ ಈ ಕೆಟ್ಟ ಸಂಗತಿಗಳೆಲ್ಲಾ ನಿಮಗೆ ಸಂಭವಿಸುತ್ತವೆ.[೫೮] “ಈ ಪುಸ್ತಕದಲ್ಲಿ ಬರೆದಿರುವ ಎಲ್ಲಾ ಆಜ್ಞೆಗಳಿಗೂ ಉಪದೇಶಗಳಿಗೂ ನೀವು ವಿಧೇಯರಾಗಬೇಕು. ನಿಮ್ಮ ದೇವರಾದ ಯೆಹೋವನು ಅದ್ಭುತನೂ ಭಯಂಕರನೂ ಆಗಿರುವುದರಿಂದ ಆತನ ಹೆಸರನ್ನು ನೀವು ಗೌರವಿಸಬೇಕು.[೫೯] ನಿಮಗೂ ನಿಮ್ಮ ಸಂತತಿಯವರಿಗೂ ಅನೇಕ ತೊಂದರೆಗಳನ್ನು ಕೊಡುವನು. ಆ ತೊಂದರೆಗಳು ಮತ್ತು ರೋಗಗಳು ಭಯಂಕರವಾಗಿವೆ.[೬೦] ನೀವು ಈಜಿಪ್ಟಿನಲ್ಲಿರುವಾಗ ದೇವರು ಅವರಿಗೆ ಕಳುಹಿಸಿದ ವ್ಯಾಧಿಸಂಕಟಗಳನ್ನು ನೋಡಿ ಭಯಗ್ರಸ್ತರಾದಿರಿ. ಅಂಥ ಸಂಕಟಗಳು ನಿಮಗೆ ಬರುವವು.[೬೧] ಈ ಪುಸ್ತಕದಲ್ಲಿ ಬರೆದಿಲ್ಲದ ಸಂಕಟಗಳೂ ರೋಗಗಳೂ ನಿಮಗೆ ಪ್ರಾಪ್ತಿಯಾಗುವವು. ನೀವು ನಾಶವಾಗುವ ತನಕ ಅವೆಲ್ಲಾ ನಿಮಗೆ ಬರುತ್ತವೆ.[೬೨] ನೀವು ಆಕಾಶದ ನಕ್ಷತ್ರದಷ್ಟು ಅಸಂಖ್ಯಾತರಾಗಿದ್ದರೂ ನಿಮ್ಮಲ್ಲಿ ಕೆಲವರೇ ಉಳಿದುಕೊಳ್ಳುವರು. ಯಾಕೆಂದರೆ ನೀವು ನಿಮ್ಮ ದೇವರಾದ ಯೆಹೋವನಿಗೆ ಕಿವಿಗೊಡಲಿಲ್ಲ.[೬೩] “ಯೆಹೋವನು ನಿಮ್ಮ ಅಭಿವೃದ್ದಿಯಲ್ಲಿ ಸಂತೋಷಪಡುವಂತೆ ನಿಮ್ಮ ಅವನತಿಯಲ್ಲಿಯೂ ನಿಮ್ಮ ನಾಶನದಲ್ಲಿಯೂ ಸಂತೋಷಪಡುವನು. ನೀವು ಆ ದೇಶವನ್ನು ನಿಮ್ಮದನ್ನಾಗಿಸಿಕೊಳ್ಳಲು ಹೋಗುವಿರಿ. ಆದರೆ ಜನರು ನಿಮ್ಮನ್ನು ದೇಶದಿಂದ ಹೊರಡಿಸಿ ಅಟ್ಟಿಬಿಡುವರು.[೬೪] ಯೆಹೋವನು ನಿಮ್ಮನ್ನು ಲೋಕದ ಎಲ್ಲಾ ದೇಶಗಳಿಗೆ ಚದರಿಸಿಬಿಡುವನು. ಆತನು ಪ್ರಪಂಚದ ಒಂದು ಕಡೆಯಿಂದ ಇನ್ನೊಂದು ಕಡೆಯ ತನಕ ನಿಮ್ಮನ್ನು ಚದರಿಸುವನು. ಅಲ್ಲಿ ನೀವು ಕಲ್ಲುಮರಗಳಿಂದ ಮಾಡಿದ ದೇವರುಗಳನ್ನು ಪೂಜಿಸುವಿರಿ. ಆ ಸುಳ್ಳುದೇವರುಗಳನ್ನು ನೀವಾಗಲಿ ನಿಮ್ಮ ಪೂರ್ವಿಕರಾಗಲಿ ಎಂದೂ ಪೂಜಿಸಿರಲಿಲ್ಲ.[೬೫] “ಆ ಜನಾಂಗದವರೊಂದಿಗೆ ಜೀವಿಸುವಾಗ ನಿಮಗೆ ಸಮಾಧಾನವಿರುವುದಿಲ್ಲ; ನಿಮಗೆ ವಿಶ್ರಾಂತಿ ಇರುವುದಿಲ್ಲ. ನಿಮ್ಮ ಯೆಹೋವನು ನಿಮಗೆ ಚಿಂತೆಬೇಸರಗಳನ್ನು ತಂದು ತುಂಬಿಸುವನು. ನಿಮ್ಮ ಕಣ್ಣುಗಳು ಆಯಾಸದಿಂದ ತುಂಬಿರುವವು; ನೀವು ಕಳವಳದಿಂದಿರುವಿರಿ.[೬೬] ನೀವು ಹಗಲಿರುಳು ಭಯದಿಂದಿರುವಿರಿ ಮತ್ತು ಅಪಾಯದಲ್ಲಿ ಜೀವಿಸುವಿರಿ. ನಿಮ್ಮ ಜೀವಿತದ ಬಗ್ಗೆ ನಿಮಗೆಂದಿಗೂ ನಿಶ್ಚಯತ್ವವಿರುವುದಿಲ್ಲ.[೬೭] ಮುಂಜಾನೆಯಲ್ಲಿ ನೀವು, ‘ಇದು ಸಾಯಂಕಾಲವಾಗಿದ್ದರೆ ಉತ್ತಮವಾಗಿರುತ್ತಿತ್ತು’ ಎಂದು ಅನ್ನುವಿರಿ. ಸಾಯಂಕಾಲದಲ್ಲಿ, ‘ಇದು ಮುಂಜಾನೆಯಾಗಿದ್ದರೆ ಉತ್ತಮವಾಗಿರುತ್ತಿತ್ತು’ ಎಂದು ಅನ್ನುವಿರಿ. ನಿಮ್ಮ ಹೃದಯದಲ್ಲಿರುವ ಭಯ ಮತ್ತು ನೀವು ಕಣ್ಣಾರೆ ಕಾಣುವ ಭಯಂಕರ ಸಂಗತಿಗಳೇ ಇದಕ್ಕೆ ಕಾರಣ.[೬೮] ಯೆಹೋವನು ನಿಮ್ಮನ್ನು ಹಡಗುಗಳ ಮುಖಾಂತರ ಈಜಿಪ್ಟಿಗೆ ಕೊಂಡೊಯ್ಯುವನು. ನೀವು ಅಲ್ಲಿಗೆ ಹೋಗುವುದೇ ಇಲ್ಲವೆಂದು ನಾನು ಹೇಳಿದ್ದೆನು. ಆದರೆ ದೇವರು ನಿಮ್ಮನ್ನು ಅಲ್ಲಿಗೆ ಕಳುಹಿಸುವನು. ಈಜಿಪ್ಟಿನಲ್ಲಿ ನಿಮ್ಮನ್ನು ನೀವೇ ಗುಲಾಮರನ್ನಾಗಿ ನಿಮ್ಮ ವೈರಿಗಳಿಗೆ ಮಾರಿಕೊಳ್ಳುವಿರಿ; ಆದರೆ ಯಾರೂ ನಿಮ್ಮನ್ನು ಕೊಂಡುಕೊಳ್ಳುವವರಿರುವುದಿಲ್ಲ.”

Kannada Bible 1934
Public Domain: 1934