A A A A A

ದೇವರು: [ಆಶೀರ್ವಾದ]


ಲೂಕನು ೬:೩೮
ಇತರರಿಗೆ ಕೊಡಿರಿ, ಆಗ ನಿಮಗೂ ದೊರೆಯುವುದು. ಪಾತ್ರೆಯಲ್ಲಿ ಅದುಮಿ, ಅಲ್ಲಾಡಿಸಿ ಹೊರಚೆಲ್ಲುವಂತೆ ಅಳೆದು ನಿಮ್ಮ ಸೆರಗಿಗೆ ಹಾಕುವರು. ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆದುಕೊಡುವರು.”

ಮತ್ತಾಯನು ೫:೪
ಈಗ ದು:ಖದಿಂದಿರುವವರು ಧನ್ಯರು.

ಫಿಲಿಪಿಯರಿಗೆ ೪:೧೯
ನನ್ನ ದೇವರು ಕ್ರಿಸ್ತ ಯೇಸುವಿನ ಮೂಲಕ ತನ್ನ ಪ್ರಭಾವದ ಐಶ್ವರ್ಯಕ್ಕೆ ಅನುಗುಣವಾಗಿ ನಿಮ್ಮ ಪ್ರತಿಯೊಂದು ಕೊರತೆಯನ್ನು ನೀಗಿಸುವನು.

ಕೀರ್ತನೆಗಳು ೬೭:೭
ಆತನು ನಮ್ಮನ್ನು ಆಶೀರ್ವದಿಸಲಿ. ಸರ್ವಭೂನಿವಾಸಿಗಳೆಲ್ಲರೂ ಆತನಲ್ಲಿ ಭಯಭಕ್ತಿವುಳ್ಳವರಾಗಲಿ.

ಸಂಖ್ಯಾಕಾಂಡ ೬:೨೪-೨೫
[೨೪] ಯೆಹೋವನು ನಿಮ್ಮನ್ನು ಆಶೀರ್ವದಿಸಿ ಕಾಪಾಡಲಿ.[೨೫] ಯೆಹೋವನು ನಿಮ್ಮನ್ನು ಕನಿಕರದಿಂದ ನೋಡಿ ನಿಮ್ಮ ಮೇಲೆ ದಯವಿಡಲಿ.

ಫಿಲಿಪಿಯರಿಗೆ ೪:೬-೭
[೬] ಯಾವುದರ ಬಗ್ಗೆಯೂ ಚಿಂತಿಸಬೇಡಿ. ಆದರೆ ಪ್ರಾರ್ಥನೆ ಮಾಡುತ್ತಾ ನಿಮ್ಮ ಅಗತ್ಯತೆಗಳಿಗೆಲ್ಲ ದೇವರಲ್ಲಿ ವಿಜ್ಞಾಪಿಸಿರಿ. ನೀವು ಪ್ರಾರ್ಥನೆ ಮಾಡುವಾಗಲೆಲ್ಲಾ ದೇವರಿಗೆ ಕೃತಜ್ಞತಾಸ್ತುತಿ ಮಾಡಿರಿ.[೭] ದೇವಶಾಂತಿಯು ಕ್ರಿಸ್ತ ಯೇಸುವಿನಲ್ಲಿ ನಿಮ್ಮ ಹೃದಯಗಳನ್ನೂ ಮನಸ್ಸುಗಳನ್ನೂ ಕಾಯುವುದು. ದೇವರು ಕೊಡುವ ಆ ಶಾಂತಿಯು ನಾವು ಅರ್ಥಮಾಡಿಕೊಳ್ಳಲಾಗದಷ್ಟು ಅಗಮ್ಯವಾಗಿದೆ.

ಯಕೋಬನು ೧:೧೭
ಎಲ್ಲಾ ಒಳ್ಳೆಯ ದಾನಗಳೂ ಕುಂದಿಲ್ಲದ ವರಗಳೂ, ಎಲ್ಲಾ ಬೆಳಕುಗಳಿಗೆ (ಸೂರ್ಯ, ಚಂದ್ರ, ನಕ್ಷತ್ರಗಳು) ಮೂಲ ಕಾರಣನಾದ ಸೃಷ್ಟಿ ಕರ್ತನಿಂದ ಬರುತ್ತವೆ. ದೇವರು ಬದಲಾಗುವುದಿಲ್ಲ. ಆತನು ಎಲ್ಲಾ ಕಾಲದಲ್ಲಿಯೂ ಒಂದೇ ರೀತಿಯಲ್ಲಿರುತ್ತಾನೆ.

ಯೆರೆಮೀಯನ ಗ್ರಂಥ ೧೭:೭-೮
[೭] ಆದರೆ ಯೆಹೋವನಲ್ಲಿ ನಂಬಿಕೆಯುಳ್ಳ ಮನುಷ್ಯನು ದೇವರ ಕೃಪೆಗೆ ಪಾತ್ರನಾಗುವನು. ಏಕೆಂದರೆ ತಾನು ನಂಬಿಕೆಯುಳ್ಳವನೆಂದು ಅವನು ಯೆಹೋವನಿಗೆ ತೋರಿಸಿಕೊಡುವನು.[೮] ಆ ಮನುಷ್ಯನು ನೀರಿನ ಸಮೀಪದಲ್ಲಿ ನೆಟ್ಟಿರುವ, ಆಳವಾಗಿ ಙೇರೂರಿ ನೀರಿನ ಸೆಲೆಗಳನ್ನು ತಲುಪಿರುವ, ಉಷ್ಣಕ್ಕೆ ಹೆದರದ, ಯಾವಾಗಲೂ ಹಸಿರೆಲೆಗಳಿಂದ ಸೊಂಪಾದ, ಮಳೆ ಬೀಳದ ವರ್ಷದಲ್ಲಿಯೂ ಚಿಂತಿಸದ, ಯಾವಾಗಲೂ ಫಲಭರಿತವಾಗಿರುವ ಮರದಂತೆ ಇರುವನು.

ಯೆಶಾಯನ ೪೧:೧೦
ನಾನೇ ನಿನ್ನ ಸಂಗಡವಿದ್ದೇನೆ. ಆದ್ದರಿಂದ ಚಿಂತಿಸದಿರು. ನಾನೇ ನಿನ್ನ ದೇವರು, ಆದ್ದರಿಂದ ಭಯಪಡಬೇಡ. ನಿನ್ನನ್ನು ಬಲಪಡಿಸುವೆನು. ನಿನಗೆ ಸಹಾಯ ಮಾಡುವೆನು. ನನ್ನ ನೀತಿಯ ಬಲಗೈಯಿಂದ ನಿನಗೆ ಆಧಾರ ಕೊಡುವೆನು.

ಯೊವಾನ್ನನು ೧:೧೬
ವಾಕ್ಯ ಎಂಬಾತನು ಕೃಪೆಯಿಂದಲೂ ಸತ್ಯದಿಂದಲೂ ತುಂಬಿದವನಾಗಿದ್ದನು. ಆತನಿಂದಲೇ ನಾವೆಲ್ಲರೂ ಕೃಪೆಯ ಮೇಲೆ ಕೃಪೆಯನ್ನು ಹೊಂದಿದೆವು.

ಆದಿಕಾಂಡ ೨೨:೧೬-೧೭
[೧೬] “ನೀನು ನನಗೋಸ್ಕರವಾಗಿ ನಿನ್ನ ಒಬ್ಬನೇ ಮಗನನ್ನು ವಧಿಸಲು ಸಿದ್ಧನಾಗಿದ್ದೆ. ಆದ್ದರಿಂದ ನಾನು ನಿನಗೆ ಈ ವಾಗ್ದಾನವನ್ನು ಮಾಡುತ್ತೇನೆ:[೧೭] ನಾನು ನಿನ್ನನ್ನು ಖಂಡಿತವಾಗಿಯೂ ಆಶೀರ್ವದಿಸುವೆನು; ನಿನ್ನ ಸಂತತಿಯನ್ನು ಖಂಡಿತವಾಗಿಯೂ ಹೆಚ್ಚಿಸುವೆನು; ನಿನ್ನ ಸಂತತಿಯವರನ್ನು ಆಕಾಶದ ನಕ್ಷತ್ರಗಳಂತೆಯೂ ಸಮುದ್ರತೀರದ ಮರಳಿನಂತೆಯೂ ಅಸಂಖ್ಯಾತರನ್ನಾಗಿ ಮಾಡುವೆನು. ಅವರು ತಮ್ಮ ಶತ್ರುಗಳ ಪಟ್ಟಣಗಳನ್ನು ವಶಪಡಿಸಿಕೊಳ್ಳುವರು.

ಆದಿಕಾಂಡ ೨೭:೨೮-೨೯
[೨೮] ಯೆಹೋವನು ನಿನಗೆ ಬೇಕಾದಷ್ಟು ಮಳೆಯನ್ನು ಕೊಡಲಿ; ನಿನಗೆ ಸಾರವುಳ್ಳ ಭೂಮಿಯೂ ಮಹಾಸುಗ್ಗಿಗಳೂ ಮತ್ತು ದ್ರಾಕ್ಷಾರಸವೂ ದೊರೆಯಲಿ.[೨೯] ಎಲ್ಲಾ ಜನರು ನಿನ್ನ ಸೇವೆಮಾಡಲಿ; ಜನಾಂಗಗಳು ನಿನಗೆ ತಲೆಬಾಗಲಿ. ನೀನು ನಿನ್ನ ಸಹೋದರರ ಮೇಲೆ ಆಡಳಿತ ಮಾಡುವೆ. ನಿನ್ನ ತಾಯಿಯ ಗಂಡುಮಕ್ಕಳು ನಿನಗೆ ತಲೆಬಾಗಿ ವಿಧೇಯರಾಗುವರು. ನಿನ್ನನ್ನು ಶಪಿಸುವ ಪ್ರತಿಯೊಬ್ಬನು ಶಾಪಗ್ರಸ್ಥನಾಗುವನು. ನಿನ್ನನ್ನು ಆಶೀರ್ವದಿಸುವ ಪ್ರತಿಯೊಬ್ಬನು ಆಶೀರ್ವದಿಸಲ್ಪಡುವನು.”

ಕೀರ್ತನೆಗಳು ೧:೧-೩
[೧] ಯಾವನು ದುಷ್ಟರ ಮಾರ್ಗವನ್ನು ಅನುಸರಿಸದೆ, ಪಾಪಿಗಳಂತೆ ಜೀವಿಸದೆ, ದೇವರಿಗೆ ಅವಿಧೇಯರಾದ ಜನರೊಂದಿಗೆ ಸೇರದೆ ಇರುವನೋ ಅವನೇ ಭಾಗ್ಯವಂತನು.[೨] ನೀತಿವಂತನಾದ ಅವನು ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಿಸುತ್ತಾ ಅದನ್ನೇ ಹಗಲಿರುಳು ಧ್ಯಾನಿಸುವನು.[೩] ಅವನು ನೀರಿನ ಕಾಲುವೆಗಳ ಬಳಿಯಲ್ಲಿ ಹುಲುಸಾಗಿ ಬೆಳೆದಿರುವ ಮರದಂತಿರುವನು. ಆ ಮರವು ತಕ್ಕಕಾಲದಲ್ಲಿ ಫಲಿಸುವುದು; ಬಾಡದ ಎಲೆಗಳಿಂದ ಯಾವಾಗಲೂ ತುಂಬಿರುವುದು; ಅಂತೆಯೇ ಅವನ ಕಾರ್ಯಗಳೆಲ್ಲಾ ಸಫಲವಾಗುವವು.

ಕೀರ್ತನೆಗಳು 23:1-4
[1] ಯೆಹೋವನೇ ನನಗೆ ಕುರುಬನು. ನನಗೆ ಕೊರತೆಯೇ ಇಲ್ಲ.[2] ಆತನು ನನ್ನನ್ನು ಹಸಿರುಗಾವಲುಗಳಲ್ಲಿ ತಂಗಿಸುವನು. ಪ್ರಶಾಂತವಾದ ನೀರಿನ ತೊರೆಗಳ ಬಳಿಯಲ್ಲಿ ನನ್ನನ್ನು ನಡೆಸುವನು.[3] ಆತನು ತನ್ನ ಹೆಸರಿಗೆ ತಕ್ಕಂತೆ ನನ್ನ ಪ್ರಾಣಕ್ಕೆ ಚೈತನ್ಯ ನೀಡಿ ನೀತಿಮಾರ್ಗದಲ್ಲಿ ನನ್ನನ್ನು ನಡೆಸುವನು.[4] ನಾನು ಕಾರ್ಗತ್ತಲಿನ ಕಣಿವೆಯಲ್ಲಿ ನಡೆಯುವಾಗಲೂ ನೀನು ನನ್ನೊಂದಿಗಿರುವುದರಿಂದ ಭಯಪಡುವುದಿಲ್ಲ. ನಿನ್ನ ದೊಣ್ಣೆಯೂ ಊರುಗೋಲೂ ನನ್ನನ್ನು ಸಂತೈಸುತ್ತವೆ.

ಸಮುವೇಲನು ೨ 22:3-4
[3] ನಾನು ಸಹಾಯಕ್ಕಾಗಿ ದೇವರ ಬಳಿಗೆ ಓಡಿಹೋಗುತ್ತೇನೆ. ಆತನೇ ನನ್ನ ಆಶ್ರಯಗಿರಿ. ಯೆಹೋವನು ನನ್ನ ಗುರಾಣಿ. ಆತನ ಶಕ್ತಿಯು ನನ್ನನ್ನು ರಕ್ಷಿಸುತ್ತದೆ. ಆತನು ನಾನು ಅಡಗಿಕೊಳ್ಳುವ ಸ್ಥಳ; ಬೆಟ್ಟಗಳ ಮೇಲಿರುವ ನನ್ನ ಸುರಕ್ಷಿತ ಸ್ಥಳ; ಆತನು ನನ್ನನ್ನು ಕ್ರೂರ ಶತ್ರುಗಳಿಂದ ರಕ್ಷಿಸುವನು![4] ಯೆಹೋವನು ಸ್ತೋತ್ರಕ್ಕೆ ಅರ್ಹನಾಗಿದ್ದಾನೆ. ನಾನು ಸಹಾಯಕ್ಕಾಗಿ ಆತನನ್ನು ಕರೆಯುವೆನು. ಆತನು ನನ್ನನ್ನು ಶತ್ರುಗಳಿಂದ ರಕ್ಷಿಸುವನು.

ಯೊವಾನ್ನನು ೧ ೫:೧೮
ದೇವರಿಂದ ಹೊಸದಾಗಿ ಹುಟ್ಟಿದವನು ಪಾಪದಲ್ಲೇ ಮುಂದುವರಿಯುವುದಿಲ್ಲವೆಂದು ನಮಗೆ ತಿಳಿದಿದೆ. ದೇವರ ಮಗನಾದ ಯೇಸು ಅವನನ್ನು ಸುರಕ್ಷಿತವಾಗಿ ಕಾಪಾಡುತ್ತಾನೆ. ಕೆಡುಕನು ಅವನಿಗೆ ಕೇಡುಮಾಡಲಾಗುವುದಿಲ್ಲ.

ಕೀರ್ತನೆಗಳು ೧೩೮:೭
ಯೆಹೋವನೇ, ನಾನು ಆಪತ್ತಿನಲ್ಲಿದ್ದರೆ, ನನ್ನ ಪ್ರಾಣವನ್ನು ಕಾಪಾಡು. ನನ್ನ ವೈರಿಗಳು ನನ್ನ ಮೇಲೆ ಕೋಪಗೊಂಡಿದ್ದರೆ, ನನ್ನನ್ನು ಅವರಿಂದ ರಕ್ಷಿಸು.

ಕೊರಿಂಥಿಯರಿಗೆ ೨ ೯:೮
ಮತ್ತು ನಿಮಗೆ ಅಗತ್ಯವಾದದ್ದಕ್ಕಿಂತಲೂ ಹೆಚ್ಚು ಆಶೀರ್ವಾದಗಳನ್ನು ದೇವರು ಕೊಡಬಲ್ಲನು. ಆಗ ನಿಮ್ಮಲ್ಲಿ ನಿಮಗೆ ಅಗತ್ಯವಾದ ಪ್ರತಿಯೊಂದೂ ಯಾವಾಗಲೂ ಇರುವುದು. ಪ್ರತಿಯೊಂದು ಒಳ್ಳೆಯ ಕಾರ್ಯಕ್ಕೆ ಕೊಡಲು ನಿಮ್ಮಲ್ಲಿ ಸಾಕಷ್ಟು ಇರುವುದು.

ಫಿಲಿಪಿಯರಿಗೆ ೪:೭
ದೇವಶಾಂತಿಯು ಕ್ರಿಸ್ತ ಯೇಸುವಿನಲ್ಲಿ ನಿಮ್ಮ ಹೃದಯಗಳನ್ನೂ ಮನಸ್ಸುಗಳನ್ನೂ ಕಾಯುವುದು. ದೇವರು ಕೊಡುವ ಆ ಶಾಂತಿಯು ನಾವು ಅರ್ಥಮಾಡಿಕೊಳ್ಳಲಾಗದಷ್ಟು ಅಗಮ್ಯವಾಗಿದೆ.

Kannada Bible 1934
Public Domain: 1934