A A A A A

ಚರ್ಚ್: [ಯೇಸುವಿನ ಜನನ]


ಮತ್ತಾಯನು ೧:೧೮-೨೩
[೧೮] ಯೇಸು ಕ್ರಿಸ್ತನ ತಾಯಿ ಮರಿಯಳು. ಯೇಸುವಿನ ಜನನ ಈ ರೀತಿ ಸಂಭವಿಸಿತು: ಮದುವೆಮಾಡಿಕೊಳ್ಳಲು ಯೋಸೇಫನಿಗೂ ಮರಿಯಳಿಗೂ ನಿಶ್ಚಿತಾರ್ಥವಾಗಿತ್ತು. ಆದರೆ ಮದುವೆಗೆ ಮೊದಲೇ ತಾನು ಗರ್ಭಿಣಿಯಾಗಿರುವುದು ಮರಿಯಳಿಗೆ ತಿಳಿದುಬಂತು. ಮರಿಯಳು ಪವಿತ್ರಾತ್ಮನ ಪ್ರಭಾವದಿಂದ ಗರ್ಭಿಣಿಯಾಗಿದ್ದಳು.[೧೯] ಮರಿಯಳನ್ನು ಮದುವೆಯಾಗಲಿದ್ದ ಯೋಸೇಫನು ನೀತಿವಂತನಾಗಿದ್ದನು. ಮರಿಯಳನ್ನು ಜನರ ಮುಂದೆ ನಾಚಿಕೆಪಡಿಸಲು ಅವನು ಇಷ್ಟಪಡಲಿಲ್ಲ. ಆದ್ದರಿಂದ ಅವನು ಗುಟ್ಟಾಗಿ ನಿಶ್ಚಿತಾರ್ಥವನ್ನು ರದ್ದುಗೊಳಿಸಬೇಕೆಂದಿದ್ದನು.[೨೦] ಯೋಸೇಫನು ಹೀಗೆ ಆಲೋಚಿಸಿಕೊಂಡನಂತರ, ಪ್ರಭುವಿನ ದೂತನು ಯೋಸೇಫನಿಗೆ ಕನಸಿನಲ್ಲಿ ಕಾಣಿಸಿಕೊಂಡನು. ಆ ದೂತನು, “ದಾವೀದನ ಮಗನಾದ ಯೋಸೇಫನೇ, ಮರಿಯಳನ್ನು ನಿನ್ನ ಹೆಂಡತಿಯಾಗಿ ಸ್ವೀಕರಿಸಲು ಭಯಪಡಬೇಡ. ಆಕೆ ಪವಿತ್ರಾತ್ಮನ ಪ್ರಭಾವದಿಂದ ಗರ್ಭಿಣಿಯಾಗಿದ್ದಾಳೆ.[೨೧] ಆಕೆ ಒಬ್ಬ ಮಗನನ್ನು ಹೆರುವಳು. ನೀನು ಆ ಮಗುವಿಗೆ ಯೇಸು ಎಂದು ಹೆಸರಿಡುವೆ. ನೀನು ಆತನಿಗೆ ಆ ಹೆಸರನ್ನೇ ಇಡು; ಏಕೆಂದರೆ ಆತನು ತನ್ನ ಜನರನ್ನು ಅವರ ಪಾಪಗಳಿಂದ ರಕ್ಷಿಸುವನು” ಎಂದು ಹೇಳಿದನು.[೨೨] ಪ್ರವಾದಿಯ ಮೂಲಕ ಪ್ರಭು ತಿಳಿಸಿದ್ದೆಲ್ಲ ನೆರವೇರುವಂತೆ ಇದೆಲ್ಲಾ ನಡೆಯಿತು.[೨೩] ಅದೇನೆಂದರೆ: “ಕನ್ನಿಕೆಯೊಬ್ಬಳು ಗರ್ಭಿಣಿಯಾಗಿ ಒಬ್ಬ ಮಗನಿಗೆ ಜನ್ಮ ಕೊಡುತ್ತಾಳೆ. ಆತನಿಗೆ ಇಮ್ಮಾನುವೇಲ್ ಎಂಬ ಹೆಸರನ್ನು ಇಡುವರು.” (ಇಮ್ಮಾನುವೇಲ್ ಎಂದರೆ “ದೇವರು ನಮ್ಮ ಸಂಗಡ ಇದ್ದಾನೆ” ಎಂದರ್ಥ.)

ಲೂಕನು ೨:೭-೨೧
[೭] ಆಕೆ ತನ್ನ ಚೊಚ್ಚಲಮಗುವನ್ನು (ಯೇಸು) ಹೆತ್ತಳು. ಅವರಿಗೆ ಇಳಿದುಕೊಳ್ಳಲು ಛತ್ರದಲ್ಲಿ ಸ್ಥಳ ದೊರೆಯಲಿಲ್ಲ. ಆದ್ದರಿಂದ ಮರಿಯಳು ಮಗುವನ್ನು ಬಟ್ಟೆಯಿಂದ ಸುತ್ತಿ ದನದ ಕೊಟ್ಟಿಗೆಯಲ್ಲಿ ಮೇವು ಹಾಕುತ್ತಿದ್ದ ತೊಟ್ಟಿಯಲ್ಲಿ ಮಲಗಿಸಿದಳು.[೮] ಆ ರಾತ್ರಿ, ಕೆಲವು ಕುರುಬರು ಹೊಲಗಳ ಸಮೀಪದಲ್ಲಿ ತಮ್ಮ ಕುರಿಗಳನ್ನು ಕಾಯುತ್ತಿದ್ದರು.[೯] ಪ್ರಭುವಿನ ದೂತನೊಬ್ಬನು ಕುರುಬರ ಮುಂದೆ ನಿಂತನು. ಅವರ ಸುತ್ತಲೂ ಪ್ರಭುವಿನ ಪ್ರಭೆಯು ಪ್ರಕಾಶಿಸಿತು. ಕುರುಬರು ಬಹಳವಾಗಿ ಹೆದರಿದರು.[೧೦] ದೇವದೂತನು ಅವರಿಗೆ, “ಹೆದರಬೇಡಿರಿ, ಜನರೆಲ್ಲರಿಗೆ ಮಹಾಸಂತೋಷವನ್ನು ಉಂಟುಮಾಡುವ ಶುಭಸಂದೇಶವನ್ನು ನಿಮಗೆ ತಿಳಿಸುತ್ತೇನೆ. ಅದೇನೆಂದರೆ:[೧೧] ಈ ದಿನ ನಿಮಗೋಸ್ಕರ ದಾವೀದನ ಊರಿನಲ್ಲಿ ರಕ್ಷಕನು ಜನಿಸಿದ್ದಾನೆ. ಆತನೇ ಪ್ರಭುವಾದ ಕ್ರಿಸ್ತನು.[೧೨] ಬಟ್ಟೆಯಲ್ಲಿ ಸುತ್ತಿರುವ ಒಂದು ಮಗು ದನದ ಕೊಟ್ಟಿಗೆಯಲ್ಲಿ ಮಲಗಿರುವುದನ್ನು ನೀವು ಕಾಣುವಿರಿ. ನೀವು ಆತನನ್ನು ಗೊತ್ತುಪಡಿಸಿಕೊಳ್ಳಲು ಅದೇ ಗುರುತಾಗಿದೆ” ಎಂದು ಹೇಳಿದನು.[೧೩] ತಕ್ಷಣವೇ ಪರಲೋಕದಿಂದ ದೇವದೂತರು ಬಹು ದೊಡ್ಡ ಗುಂಪಾಗಿ ಬಂದು ಮೊದಲನೆಯ ದೇವದೂತನೊಡನೆ ಸೇರಿಕೊಂಡರು. ಅವರೆಲ್ಲರೂ,[೧೪] “ಮೇಲಿನಲೋಕಗಳಲ್ಲಿ ದೇವರಿಗೆ ಮಹಿಮೆ;[೧೫] ದೇವದೂತರು ಕುರುಬರ ಬಳಿಯಿಂದ ಪರಲೋಕಕ್ಕೆ ಹಿಂತಿರುಗಿದ ಮೇಲೆ ಕುರುಬರು, “ನಾವು ಈಗಲೇ ಬೆತ್ಲೆಹೇಮಿಗೆ ಹೋಗಿ, ಪ್ರಭುವು ನಮಗೆ ತಿಳಿಸಿದ ಈ ಘಟನೆಯನ್ನು ನೋಡೋಣ” ಎಂದು ಮಾತಾಡಿಕೊಂಡರು.[೧೬] ಆದ್ದರಿಂದ ಕುರುಬರು ಬೇಗನೆ ಹೋಗಿ ಮರಿಯಳನ್ನೂ ಯೋಸೇಫನನ್ನೂ ದನದ ಕೊಟ್ಟಿಗೆಯಲ್ಲಿ ಮಲಗಿದ್ದ ಮಗುವನ್ನೂ ಕಂಡುಕೊಂಡರು.[೧೭] ಕುರುಬರು ಮಗುವನ್ನು ನೋಡಿದಾಗ ಅದರ ವಿಷಯವಾಗಿ ತಮಗೆ ದೇವದೂತರು ತಿಳಿಸಿದ್ದನ್ನು ಅವರಿಗೆ ತಿಳಿಯಪಡಿಸಿದರು.[೧೮] ಕುರುಬರು ತಿಳಿಸಿದ್ದನ್ನು ಕೇಳಿದ ಅವರೆಲ್ಲರೂ ಆಶ್ಚರ್ಯಪಟ್ಟರು.[೧೯] ಮರಿಯಳು ಈ ವಿಷಯಗಳನ್ನು ತನ್ನ ಹೃದಯದಲ್ಲಿಟ್ಟುಕೊಂಡು, ಅವುಗಳ ಬಗ್ಗೆ ಯೋಚಿಸತೊಡಗಿದಳು.[೨೦] ಕುರುಬರು ತಾವು ಕಂಡು ಕೇಳಿದ ಪ್ರತಿಯೊಂದು ಸಂಗತಿಗಾಗಿ ದೇವರನ್ನು ಕೊಂಡಾಡುತ್ತಾ ಆತನನ್ನು ಸ್ತುತಿಸುತ್ತಾ ತಮ್ಮ ಕುರಿಗಳಿದ್ದಲ್ಲಿಗೆ ಮರಳಿಹೋದರು. ದೇವದೂತರು ಅವರಿಗೆ ತಿಳಿಸಿದಂತೆಯೇ ಪ್ರತಿಯೊಂದು ಸಂಗತಿಯೂ ನಡೆದಿತ್ತು.[೨೧] ಮಗುವಿಗೆ ಎಂಟು ದಿನವಾದಾಗ ಸುನ್ನತಿ ಆಯಿತು ಮತ್ತು ಆತನಿಗೆ ‘ಯೇಸು’ ಎಂದು ಹೆಸರಿಡಲಾಯಿತು. ಮರಿಯಳ ಗರ್ಭದಲ್ಲಿ ಮಗುವು ಬೆಳೆಯುವುದಕ್ಕೆ ಪ್ರಾರಂಭಿಸುವ ಮೊದಲೇ ದೇವದೂತನು ಈ ಹೆಸರನ್ನೇ ಕೊಡಬೇಕೆಂದು ಸೂಚಿಸಿದ್ದನು.

ಮತ್ತಾಯನು ೨:೧-೧೨
[೧] ಹೆರೋದನು ರಾಜನಾಗಿದ್ದ ಕಾಲದಲ್ಲಿ ಯೇಸು ಜುದೇಯದ ಬೆತ್ಲೆಹೇಮ್ ಎಂಬ ಊರಲ್ಲಿ ಹುಟ್ಟಿದನು. ಯೇಸು ಹುಟ್ಟಿದ ಮೇಲೆ, ಪೂರ್ವದೇಶದ ಕೆಲವು ಜ್ಞಾನಿಗಳು ಜೆರುಸಲೇಮಿಗೆ ಬಂದರು.[೨] ಆ ಜ್ಞಾನಿಗಳು ಜನರಿಗೆ, “ಯೆಹೂದ್ಯರ ರಾಜನು ಹುಟ್ಟಿದ್ದಾನಲ್ಲವೇ? ಆತನೆಲ್ಲಿ? ಆತನು ಹುಟ್ಟಿದನೆಂದು ಸೂಚಿಸುವ ನಕ್ಷತ್ರ ಪೂರ್ವದಲ್ಲಿ ಉದಯಿಸಿದ್ದನ್ನು ಕಂಡು ಆತನನ್ನು ಆರಾಧಿಸಲು ಬಂದೆವು” ಅಂದರು.[೩] ಯೆಹೂದ್ಯರ ಈ ಹೊಸ ರಾಜನ ವಿಷಯ ತಿಳಿದಾಗ ಹೆರೋದನು ಮತ್ತು ಜೆರುಸಲೇಮಿನ ಜನರೆಲ್ಲರೂ ಗಲಿಬಿಲಿಗೊಂಡರು.[೪] ಕೂಡಲೇ, ಹೆರೋದನು ಎಲ್ಲಾ ಮಹಾಯಾಜಕರನ್ನೂ ಧರ್ಮೋಪದೇಶಕರನ್ನೂ ಸಭೆ ಸೇರಿಸಿ, “ಕ್ರಿಸ್ತನು ಹುಟ್ಟಬೇಕಾಗಿದ್ದ ಸ್ಥಳ ಯಾವುದು?” ಎಂದು ಕೇಳಿದನು.[೫] ಅವರು, “ಜುದೇಯದ ಬೆತ್ಲೆಹೇಮ್ ಎಂಬ ಊರಲ್ಲಿ ಹುಟ್ಟುವನು. ಏಕೆಂದರೆ ಪ್ರವಾದಿಯು ಪವಿತ್ರ ಗ್ರಂಥದಲ್ಲಿ ಹೀಗೆಂದು ಬರೆದಿದ್ದಾನೆ:[೬] ‘ಯೆಹೂದ ಪ್ರಾಂತ್ಯದಲ್ಲಿರುವ ಬೆತ್ಲೆಹೇಮೇ,[೭] ಆಗ ಹೆರೋದನು ಪೂರ್ವ ದೇಶದ ಜ್ಞಾನಿಗಳನ್ನು ರಹಸ್ಯವಾಗಿ ಕರೆಯಿಸಿ, ಅವರು ಆ ನಕ್ಷತ್ರವನ್ನು ಕಂಡ ಸರಿಯಾದ ಸಮಯವನ್ನು ಅವರಿಂದ ತಿಳಿದುಕೊಂಡನು.[೮] ಹೆರೋದನು ಆ ಜ್ಞಾನಿಗಳಿಗೆ, “ನೀವು ಹೋಗಿ ಚೆನ್ನಾಗಿ ವಿಚಾರಣೆ ಮಾಡಿ ಆ ಮಗು ಎಲ್ಲಿದೆ ಎಂಬುದನ್ನು ತಿಳಿದುಕೊಂಡು ನಂತರ ಬಂದು ನನಗೆ ತಿಳಿಸಿರಿ. ಆಗ ನಾನೂ ಹೋಗಿ ಆತನನ್ನು ಆರಾಧಿಸುವೆನು” ಎಂದು ಹೇಳಿ ಅವರನ್ನು ಬೆತ್ಲೆಹೇಮಿಗೆ ಕಳುಹಿಸಿಕೊಟ್ಟನು.[೯] ಆ ಜ್ಞಾನಿಗಳು ಅರಸನ ಮಾತನ್ನು ಕೇಳಿ ಅಲ್ಲಿಂದ ಹೊರಟಾಗ, ಪೂರ್ವ ದಿಕ್ಕಿನಲ್ಲಿ ಉದಯಿಸಿದ ನಕ್ಷತ್ರವನ್ನು ಮತ್ತೆ ಕಂಡರು. ಅವರು ಆ ನಕ್ಷತ್ರವನ್ನೇ ಹಿಂಬಾಲಿಸಿದರು. ಆ ನಕ್ಷತ್ರ ಅವರ ಮುಂದೆ ಚಲಿಸುತ್ತಾ ಹೋಗಿ ಮಗುವಿದ್ದ ಸ್ಥಳದ ಮೇಲೆ ನಿಂತುಕೊಂಡಿತು.[೧೦] ಅವರು ಆ ನಕ್ಷತ್ರವನ್ನು ನೋಡಿ ಅತ್ಯಂತ ಸಂತೋಷಪಟ್ಟರು.[೧೧] ಅವರು ಆ ಮನೆಗೆ ಬಂದಾಗ, ಮಗುವನ್ನು ತಾಯಿ ಮರಿಯಳ ಬಳಿ ಕಂಡು, ಅದಕ್ಕೆ ಸಾಷ್ಟಾಂಗವೆರಗಿ ಆರಾಧಿಸಿದರು. ಅಲ್ಲದೆ ತಾವು ಮಗುವಿಗಾಗಿ ತಂದಿದ್ದ ಕಾಣಿಕೆಗಳನ್ನು ತೆರೆದು ಚಿನ್ನ, ಧೂಪ ಮತ್ತು ಸುಗಂಧ ದ್ರವ್ಯಗಳನ್ನು ನೀಡಿದರು.[೧೨] ಆದರೆ ದೇವರು ಜ್ಞಾನಿಗಳಿಗೆ ಕನಸಿನಲ್ಲಿ, “ನೀವು ಹೆರೋದನ ಬಳಿಗೆ ಹಿಂತಿರುಗಿ ಹೋಗಕೂಡದು” ಎಂದು ಎಚ್ಚರಿಸಿದನು. ಆದ್ದರಿಂದ ಅವರು ಬೇರೊಂದು ಮಾರ್ಗದ ಮೂಲಕ ತಮ್ಮ ದೇಶಕ್ಕೆ ಹೊರಟುಹೋದರು.

ಗಲಾತ್ಯರಿಗೆ ೪:೪
ಆದರೆ ತಕ್ಕ ಕಾಲ ಬಂದಾಗ ದೇವರು ತನ್ನ ಮಗನನ್ನು ಕಳುಹಿಸಿದನು. ದೇವರ ಮಗನು ಸ್ತ್ರೀಯಲ್ಲಿ ಜನಿಸಿ, ಧರ್ಮಶಾಸ್ತ್ರದ ಅಧೀನದಲ್ಲಿ ಜೀವಿಸಿದನು.

ಲೂಕನು ೨:೧-೪
[೧] ಆ ಕಾಲದಲ್ಲಿ ಚಕ್ರವರ್ತಿ ಅಗಸ್ಟಸ್ ಸೀಸರನು ರೋಮನ್ನರ ಆಳ್ವಿಕೆಗೆ ಒಳಪಟ್ಟಿದ್ದ ಎಲ್ಲಾ ದೇಶಗಳಲ್ಲಿ ಜನಗಣತಿ ಆಗಬೇಕೆಂದು ಆಜ್ಞಾಪಿಸಿದನು.[೨] ಇದು ಮೊಟ್ಟಮೊದಲನೆಯ ಜನಗಣತಿಯಾಗಿತ್ತು. ಕುರೇನ್ಯನು ಸಿರಿಯ ದೇಶದ ರಾಜ್ಯಪಾಲನಾಗಿದ್ದಾಗ ಇದು ಸಂಭವಿಸಿತು.[೩] ಜನರೆಲ್ಲರೂ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು ತಮ್ಮತಮ್ಮ ಊರುಗಳಿಗೆ ಪ್ರಯಾಣ ಮಾಡಿದರು.[೪] ಆದ್ದರಿಂದ ಯೋಸೇಫನು ಗಲಿಲಾಯದಲ್ಲಿನ ನಜರೇತ್ ಎಂಬ ಊರಿನಿಂದ ಹೊರಟು ಜುದೇಯದಲ್ಲಿನ ಬೆತ್ಲೆಹೇಮ್ ಎಂಬ ಊರಿಗೆ ಹೋದನು. ಯೋಸೇಫನು ದಾವೀದನ ಮನೆತನದವನಾಗಿದ್ದುದರಿಂದ ದಾವೀದನ ಊರಾದ ಬೆತ್ಲೆಹೇಮಿಗೆ ಹೋದನು.

ಪ್ರಕಟನೆ ೧೨:೧-೫
[೧] ಆಗ ಪರಲೋಕದಲ್ಲಿ ಮಹಾ ಅದ್ಭುತವು ಕಾಣಿಸಿತು. ಸೂರ್ಯನನ್ನು ಧರಿಸಿದ್ದ ಒಬ್ಬ ಸ್ತ್ರೀ ಅಲ್ಲಿದ್ದಳು. ಆಕೆಯ ಪಾದದ ಕೆಳಗೆ ಚಂದ್ರನಿದ್ದನು. ಆಕೆಯ ತಲೆಯ ಮೇಲೆ ಹನ್ನೆರಡು ನಕ್ಷತ್ರಗಳುಳ್ಳ ಒಂದು ಕಿರೀಟವಿತ್ತು.[೨] ಆಕೆಯು ಗರ್ಭಿಣಿಯಾಗಿದ್ದಳು ಆಕೆಯು ಪ್ರಸವವೇದನೆಯಿಂದ ಕೂಗಿದಳು.[೩] ಆಗ ಪರಲೋಕದಲ್ಲಿ ಮತ್ತೊಂದು ಅದ್ಭುತವು ಕಾಣಿಸಿತು: ಕೆಂಪಾದ ಮಹಾ ಘಟಸರ್ಪವೊಂದು ಅಲ್ಲಿತ್ತು. ಆ ಘಟಸರ್ಪಕ್ಕೆ ಏಳು ತಲೆಗಳಿದ್ದು, ಪ್ರತಿಯೊಂದು ತಲೆಯ ಮೇಲೂ ಏಳು ಕಿರೀಟಗಳಿದ್ದವು. ಆ ಸರ್ಪಕ್ಕೆ ಹತ್ತು ಕೊಂಬುಗಳಿದ್ದವು.[೪] ಆ ಸರ್ಪದ ಬಾಲವು ಆಕಾಶದ ನಕ್ಷತ್ರಗಳಲ್ಲಿ ಮೂರನೆಯ ಒಂದು ಭಾಗವನ್ನು ಸೆಳೆದೆಳೆದು ಭೂಮಿಯ ಮೇಲೆ ಎಸೆಯಿತು. ಆ ಘಟಸರ್ಪವು ಪ್ರಸವ ವೇದನೆಪಡುತ್ತಿದ್ದ ಸ್ತ್ರೀಯ ಎದುರಿನಲ್ಲಿ ನಿಂತುಕೊಂಡಿತು. ಆ ಸ್ತ್ರೀಯು ಹೆರುವ ಮಗುವನ್ನು ನುಂಗಿಹಾಕಲು ಆ ಸರ್ಪವು ಕಾದುಕೊಂಡಿತ್ತು.[೫] ಆ ಸ್ತ್ರೀಯು ಅವನು ಎಲ್ಲಾ ಜನಾಂಗಗಳನ್ನು ಕಬ್ಬಿಣದ ಕೋಲಿನಿಂದ ಆಳುವ ಒಂದು ಗಂಡು ಮಗುವನ್ನು ಹೆತ್ತಳು. ಅವಳ ಮಗುವನ್ನು ದೇವರ ಬಳಿಗೂ ಆತನ ಸಿಂಹಾಸನದ ಬಳಿಗೂ ತೆಗೆದುಕೊಂಡು ಹೋಗಲಾಯಿತು.

Kannada Bible 1934
Public Domain: 1934