A A A A A

ಏಂಜಲ್ಸ್ ಮತ್ತು ರಾಕ್ಷಸರು: [ಪ್ರಧಾನ ದೇವದೂತರು]


ಯೂದನು ೧:೯
ಪ್ರಧಾನ ದೇವದೂತನಾದ ಮಿಕಾಯೇಲನೂ ಸಹ ಹೀಗೆ ಮಾಡಲಿಲ್ಲ. ಮೋಶೆಯ ದೇಹವು ಯಾರಿಗೆ ಸೇರಬೇಕೆಂಬುದರ ಬಗ್ಗೆ ಮಿಕಾಯೇಲನು ಸೈತಾನನ ಬಗ್ಗೆ ದೂಷಣೆ ಮಾಡಲು ಧೈರ್ಯಗೊಳ್ಳದೆ, “ಪ್ರಭುವು ನಿನ್ನನ್ನು ದಂಡಿಸುತ್ತಾನೆ” ಎಂದು ಹೇಳಿದನು.

ದಾನಿಯೇಲನ ೧೦:೧೩-೨೧
[೧೩] ಆದರೆ ಪಾರಸಿಯ ರಾಜ್ಯದ ದಿವ್ಯಪಾಲಕನು ನನ್ನೊಂದಿಗೆ ಕಳೆದ ಇಪ್ಪತ್ತೊಂದು ದಿನಗಳಿಂದ ಹೋರಾಡುತ್ತಿದ್ದನು; ನನಗೆ ತೊಂದರೆ ಕೊಡುತ್ತಿದ್ದನು. ಆಗ ಪ್ರಧಾನ ದಿವ್ಯಪಾಲಕರಲ್ಲೊಬ್ಬನಾದ ಮಿಕಾಯೇಲನು ನನ್ನ ಸಹಾಯಕ್ಕೆ ಬಂದನು. ನಾನು ಅಲ್ಲಿ ಪಾರಸಿಯ ರಾಜನ ಹತ್ತಿರ ಸಿಕ್ಕಿಹಾಕಿಕೊಂಡಿದ್ದೆ.[೧೪] ದಾನಿಯೇಲನೇ, ಭವಿಷ್ಯದಲ್ಲಿ ನಿನ್ನ ಜನರಿಗೆ ಏನಾಗುವದೆಂಬುದನ್ನು ನಿನಗೆ ವಿವರಿಸಲು ನಾನು ಈಗ ಇಲ್ಲಿಗೆ ಬಂದೆನು. ಈ ಕನಸು ಭವಿಷ್ಯದ ಒಂದು ಕಾಲದ ಕುರಿತಾಗಿದೆ” ಎಂದು ಹೇಳಿದನು.[೧೫] ಆ ಪುರುಷನು ನನ್ನೊಂದಿಗೆ ಮಾತನಾಡುತ್ತಿದ್ದಾಗ ನಾನು ನೆಲವನ್ನು ನೋಡುತ್ತಾ ಬಾಗಿಕೊಂಡಿದ್ದೆ. ಮಾತನಾಡಲು ನನ್ನಿಂದ ಸಾಧ್ಯವಾಗಲಿಲ್ಲ.[೧೬] ಆಗ ಮನುಷ್ಯಕುಮಾರನಂತಿರುವವನು ನನ್ನ ತುಟಿಗಳನ್ನು ಸ್ಪರ್ಶಿಸಿದನು. ನಾನು ಬಾಯಿ ತೆರೆದು ಮಾತನಾಡಲು ಪ್ರಾರಂಭಿಸಿದೆ. ನನ್ನ ಎದುರಿಗೆ ನಿಂತುಕೊಂಡಿದ್ದವನಿಗೆ, “ಸ್ವಾಮಿ, ದರ್ಶನದಲ್ಲಿ ನೋಡಿದ ಸಂಗತಿಗಳಿಂದ ನಾನು ಚಿಂತಾಕ್ರಾಂತನಾಗಿದ್ದೇನೆ; ಅಂಜಿಕೊಂಡಿದ್ದೇನೆ; ನಿಸ್ಸಹಾಯಕನಾಗಿದ್ದೇನೆ.[೧೭] ಸ್ವಾಮೀ, ನಾನು ನಿಮ್ಮ ಸೇವಕನಾದ ದಾನಿಯೇಲ. ನಾನು ನಿಮ್ಮ ಸಂಗಡ ಹೇಗೆ ಮಾತನಾಡಲಿ. ನನಗೆ ಶಕ್ತಿಯೇ ಇಲ್ಲದಂತಾಗಿದೆ. ಉಸಿರಾಡುವುದೂ ಕಷ್ಟವಾಗಿದೆ” ಎಂದೆ.[೧೮] ಆ ಮನುಷ್ಯಕುಮಾರನಂತಿರುವವನು ಪುನಃ ನನ್ನನ್ನು ಸ್ಪರ್ಶಿಸಿದನು. ಆತನು ನನ್ನನ್ನು ಸ್ಪರ್ಶಿಸಿದಾಗ ನನಗೆ ಉಪಶಮನವಾಯಿತು.[೧೯] ಆಗ ಆತನು “ದಾನಿಯೇಲನೇ, ಭಯಪಡಬೇಡ. ದೇವರು ನಿನ್ನನ್ನು ತುಂಬ ಪ್ರೀತಿಸುತ್ತಾನೆ. ಸಮಾಧಾನ ತಂದುಕೊ. ಈಗ ನೀನು ಬಲಗೊಳ್ಳು, ಬಲಗೊಳ್ಳು” ಎಂದು ಹೇಳಿದನು. ಆತನು ನನ್ನೊಂದಿಗೆ ಮಾತನಾಡಿದ ಮೇಲೆ ನನಗೆ ಬಲಬಂದಿತು. ಆಗ ನಾನು, “ಸ್ವಾಮೀ, ನೀವು ನನಗೆ ಬಲವನ್ನು ನೀಡಿದಿರಿ. ಈಗ ನೀವು ಮಾತನಾಡಬಹುದು” ಎಂದು ಹೇಳಿದೆ.[೨೦] ಆಗ ಅವನು, “ದಾನಿಯೇಲನೇ, ನಾನು ಏಕೆ ಬಂದಿದ್ದೇನೆಂಬುದು ನಿನಗೆ ಗೊತ್ತಿಲ್ಲವೇ? ತಕ್ಷಣ ನಾನು ಪಾರಸಿಯ ರಾಜ್ಯದ ದಿವ್ಯಪಾಲಕನೊಂದಿಗೆ ಹೋರಾಡಲು ಹಿಂದಿರುಗಬೇಕು. ನಾನು ಹೋದಮೇಲೆ ಗ್ರೀಕ್ ರಾಜ್ಯದ ದಿವ್ಯಪಾಲಕನು ಬರುವನು.[೨೧] ದಾನಿಯೇಲನೇ, ನಾನು ಹೋಗುವ ಮುಂಚೆ ‘ಸತ್ಯಶಾಸನ’ದಲ್ಲಿ ಏನು ಬರೆದಿದೆ ಎಂಬುದನ್ನು ನಿನಗೆ ಹೇಳುವೆನು. ಆ ದುಷ್ಟದೂತರೊಂದಿಗೆ ಹೋರಾಡುವಲ್ಲಿ ಮಿಕಾಯೇಲನ ಹೊರತು ನನಗೆ ಬೆಂಬಲವಾಗತಕ್ಕವರು ಇನ್ಯಾರೂ ಇಲ್ಲ. ಮಿಕಾಯೇಲನು ನಿಮ್ಮ ಜನರ ಪಾಲಕನಾಗಿದ್ದಾನೆ.

ದಾನಿಯೇಲನ ೧೨:೧
“ದರ್ಶನದಲ್ಲಿ ಕಾಣಿಸಿಕೊಂಡ ಮನುಷ್ಯನು, ‘ದಾನಿಯೇಲನೇ, ಆಗ ದೇವದೂತನಾದ ಮಿಕಾಯೇಲನು ಏಳುವನು. ಮಿಕಾಯೇಲನು ಯೆಹೂದ್ಯರಾದ ನಿಮ್ಮ ಹಿತಾಸಕ್ತಿಗಳನ್ನು ನೋಡಿಕೊಳ್ಳುವನು. ಮಹಾಸಂಕಟದ ಕಾಲ ಬರುವದು. ಭೂಮಿಯ ಮೇಲೆ ರಾಷ್ಟ್ರಗಳು ಹುಟ್ಟಿದಂದಿನಿಂದ ಸಂಭವಿಸದಂತಹ ಸಂಕಟಗಳು ಸಂಭವಿಸುವವು. ಆದರೆ ದಾನಿಯೇಲನೇ, ನಿಮ್ಮ ಜನಗಳಲ್ಲಿ ಯಾರ ಹೆಸರುಗಳು ‘ಜೀವಬಾಧ್ಯರ ಗ್ರಂಥದಲ್ಲಿ’ ಬರೆಯಲ್ಪಟ್ಟಿದೆಯೋ ಅವರೆಲ್ಲರನ್ನು ರಕ್ಷಿಸಲಾಗುವುದು.

ಥೆಸೆಲೋನಿಯರಿಗೆ ೧ ೪:೧೬
ಪ್ರಭುವು ತಾನೇ ಪರಲೋಕದಿ0ದ ಇಳಿದುಬರುವನು. ಆಗ ಪ್ರಧಾನ ದೇವದೂತನು ದೇವರ ತುತೂರಿ ಧ್ವನಿಯೊಡನೆ ಆಜ್ಞಾಘೋಷ ಮಾಡುವನು. ಕೂಡಲೇ ಕ್ರಿಸ್ತನಲ್ಲಿರುವ ಸತ್ತವರು ಮೊದಲು ಎದ್ದುಬರುವರು.

ದಾನಿಯೇಲನ ೯:೨೧
ನಾನು ಪ್ರಾರ್ಥಿಸುತ್ತಿದ್ದಾಗ ಗಬ್ರಿಯೇಲನೆಂಬ ಪುರುಷನು ನನ್ನಲ್ಲಿಗೆ ಬಂದನು. ಗಬ್ರಿಯೇಲನನ್ನೇ ನಾನು ದರ್ಶನದಲ್ಲಿ ಕಂಡಿದ್ದೆನು. ಗಬ್ರಿಯೇಲನು ವೇಗವಾಗಿ ಹಾರುತ್ತಾ ಸಾಯಂಕಾಲದ ನೈವೇದ್ಯದ ಸಮಯದಲ್ಲಿ ನನ್ನ ಬಳಿಗೆ ಬಂದನು.

ದಾನಿಯೇಲನ ೮:೧೧-೧೬
[೧೧] ಆ ಚಿಕ್ಕ ಕೊಂಬು ಅತಿ ಪ್ರಬಲವಾಯಿತು ಮತ್ತು ನಕ್ಷತ್ರಾಧಿಪತಿಯನ್ನು (ದೇವರನ್ನು) ವಿರೋಧಿಸತೊಡಗಿತು. ಆ ಚಿಕ್ಕ ಕೊಂಬು ನಕ್ಷತ್ರಾಧಿಪತಿಗೆ ನಿತ್ಯಹೋಮಗಳು ಸಲ್ಲದಂತೆ ಮಾಡಿತು. ಜನರು ನಕ್ಷತ್ರಾಧಿಪತಿಯನ್ನು ಪೂಜಿಸುವ ಸ್ಥಳವನ್ನು ಕೆಡವಿಬಿಟ್ಟಿತು.[೧೨] ಆ ಚಿಕ್ಕ ಕೊಂಬು ನಿತ್ಯಹೋಮಗಳನ್ನು ತಡೆಯುವ ಪಾಪವನ್ನು ಮಾಡಿತು. ಅದು ಒಳ್ಳೆಯತನವನ್ನು (ಸತ್ಯ, ಧರ್ಮವನ್ನು) ನೆಲಕ್ಕೆ ತಳ್ಳಿತು. ಇದೆಲ್ಲವನ್ನು ಮಾಡಿ ಆ ಚಿಕ್ಕ ಕೊಂಬು ತನ್ನ ಇಷ್ಟಾರ್ಥವನ್ನು ಸಾಧಿಸುವದರಲ್ಲಿ ಜಯ ಪಡೆಯಿತು.[೧೩] ಆಗ ಒಬ್ಬ ಪವಿತ್ರನು ಮಾತನಾಡುವದನ್ನು ಕೇಳಿದೆ. ಮತ್ತೊಬ್ಬ ಪವಿತ್ರನು ಮೊದಲನೆಯ ಪವಿತ್ರನಿಗೆ ಉತ್ತರಿಸುವದನ್ನೂ ಕೇಳಿದೆ. ಮೊದಲನೆಯ ಪವಿತ್ರನು, “ಈ ದರ್ಶನ ನಿತ್ಯಹೋಮಗಳಿಗೆ ಏನಾಗುವದೆಂಬುದನ್ನು ತೋರಿಸುವದು. ಇದು ಆ ಭಯಾನಕ ಪಾಪದ ಕುರಿತಾಗಿದೆ. ಅಧಿಪತಿಯು ಆರಾಧಿಸಲ್ಪಡುವ ಪವಿತ್ರಾಲಯವನ್ನು ಜನರು ಹಾಳುಮಾಡಿದರೆ, ಜನರು ಆ ಸ್ಥಳವನ್ನು ತುಳಿದಾಡಿದರೆ, ಆ ನಕ್ಷತ್ರಗಳ ಮೇಲೆ ಜನರು ನಡೆದಾಡಿದರೆ ಏನಾಗುವದೆಂಬುದನ್ನು ಇದು ತೋರಿಸಿಕೊಡುತ್ತದೆ. ಆದರೆ ಇದೆಲ್ಲ ಎಷ್ಟು ದಿನ ನಡೆಯುವದು?” ಎಂದನು.[೧೪] ಇನ್ನೊಬ್ಬ ಪವಿತ್ರನು, “ಇದೆಲ್ಲಾ ಎರಡು ಸಾವಿರದ ಮುನ್ನೂರು ದಿನಗಳವರೆಗೆ ನಡೆಯುವುದು. ಆಮೇಲೆ ಪವಿತ್ರಾಲಯಕ್ಕೆ ಪುನಃ ನ್ಯಾಯ ಸಿಕ್ಕುವುದು” ಎಂದು ಉತ್ತರಿಸಿದನು.[೧೫] ದಾನಿಯೇಲನೆಂಬ ನಾನು ಈ ದರ್ಶನವನ್ನು ಕಂಡೆ ಮತ್ತು ಅದರ ಅರ್ಥವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿದೆ. ನಾನು ಈ ದರ್ಶನದ ಬಗ್ಗೆ ವಿಚಾರ ಮಾಡುತ್ತಿದ್ದಾಗ ಮನುಷ್ಯನಂತಿದ್ದವನೊಬ್ಬನು ನನ್ನ ಎದುರಿಗೆ ನಿಂತಿದ್ದನು.[೧೬] ಆಗ ನಾನು ಮನುಷ್ಯನ ಧ್ವನಿಯನ್ನು ಕೇಳಿದೆ. ಈ ಧ್ವನಿಯು ಊಲಾ ನದಿಯ ಮೇಲಿಂದ ಬಂದಿತು. ಆ ಧ್ವನಿಯು, “ಗಬ್ರಿಯೇಲನೇ, ಕನಸಿನ ಅರ್ಥವನ್ನು ಈ ಮನುಷ್ಯನಿಗೆ ತಿಳಿಸು” ಎಂದು ಆದೇಶ ಕೊಟ್ಟಿತು.

ಪ್ರಕಟನೆ ೧೨:೭-೯
[೭] ನಂತರ ಪರಲೋಕದಲ್ಲಿ ಒಂದು ಯುದ್ಧವಾಯಿತು. ಮಿಕಾಯೇಲನು ಮತ್ತು ಅವನ ಸಹದೂತರು ಆ ಘಟಸರ್ಪದ ವಿರುದ್ಧ ಹೋರಾಡಿದರು. ಆ ಘಟಸರ್ಪ ಮತ್ತು ಅದರ ದೂತರೂ ಹೋರಾಡಿದರು.[೮] ಆದರೆ ಆ ಘಟಸರ್ಪವೂ ಅದರ ದೂತರೂ ಸೋತುಹೋಗಿ ಪರಲೋಕದಲ್ಲಿ ತಮ್ಮ ಸ್ಥಾನಗಳನ್ನು ಕಳೆದುಕೊಂಡರು.[೯] ಆ ಘಟಸರ್ಪವನ್ನು ಪರಲೋಕದಿಂದ (ಆ ಘಟಸರ್ಪಕ್ಕೆ ಸೈತಾನನೆಂತಲೂ ಪಿಶಾಚನೆಂತಲೂ ಹೆಸರಿದೆ. ಅದು ಲೋಕವನ್ನೆಲ್ಲಾ ತಪ್ಪು ಮಾರ್ಗಕ್ಕೆ ಎಳೆಯುತ್ತಿತ್ತು.) ಅದರ ದೂತರೊಂದಿಗೆ ಭೂಮಿಯ ಮೇಲೆ ಎಸೆಯಲಾಯಿತು.

ಲೂಕನು ೧:೨೬
ಎಲಿಜಬೇತಳು ಆರು ತಿಂಗಳ ಗರ್ಭಿಣಿಯಾಗಿದ್ದಾಗ, ದೇವರು ತನ್ನ ದೂತನಾದ ಗಬ್ರಿಯೇಲನನ್ನು ಗಲಿಲೇಯ ಪ್ರಾಂತ್ಯದ ನಜರೇತ್ ಎಂಬ ಊರಿನಲ್ಲಿ ವಾಸಿಸುತ್ತಿದ್ದ ಒಬ್ಬ ಕನ್ಯೆಯ ಬಳಿಗೆ ಕಳುಹಿಸಿದನು. ಆಕೆಗೆ ದಾವೀದನ ಮನೆತನದ ಯೋಸೇಫನೊಂದಿಗೆ ನಿಶ್ಚಿತಾರ್ಥವಾಗಿತ್ತು. ಆಕೆಯ ಹೆಸರು ಮರಿಯಳು. (Verses 26-27)

ಹಿಬ್ರಿಯರಿಗೆ ೧:೧೪
ದೇವದೂತರೆಲ್ಲರೂ ದೇವರ ಸೇವೆಮಾಡುವ ಆತ್ಮಗಳಾಗಿದ್ದಾರೆ ಮತ್ತು ರಕ್ಷಣೆಯನ್ನು ಹೊಂದಿಕೊಳ್ಳುವ ಜನರ ಸಹಾಯಕ್ಕಾಗಿ ಕಳುಹಿಸಲ್ಪಟ್ಟವರಾಗಿದ್ದಾರೆ.

ಯೊಹೋಶುವ ೫:೧೩-೧೫
[೧೩] ಯೆಹೋಶುವನು ಜೆರಿಕೊವಿನ ಸಮೀಪದಲ್ಲಿದ್ದಾಗ ಕಣ್ಣೆತ್ತಿ ನೋಡಲು ಒಬ್ಬ ಮನುಷ್ಯನು ಅವನ ಎದುರಿಗೆ ನಿಂತಿರುವುದನ್ನು ಕಂಡನು. ಆ ಮನುಷ್ಯನ ಕೈಯಲ್ಲಿ ಒಂದು ಖಡ್ಗವಿತ್ತು. ಯೆಹೋಶುವನು ಆ ಮನುಷ್ಯನ ಹತ್ತಿರಹೋಗಿ, “ನೀನು ನಮ್ಮ ಜನರ ಸ್ನೇಹಿತನೋ ಅಥವಾ ನೀನು ನಮ್ಮ ಶತ್ರುಗಳಲ್ಲಿ ಒಬ್ಬನೋ?” ಎಂದು ಕೇಳಿದನು.[೧೪] ಆ ಮನುಷ್ಯನು, “ನಾನು ಶತ್ರುವಲ್ಲ, ನಾನು ಯೆಹೋವನ ಸೇನಾಧಿಪತಿ. ನಾನು ಈಗಲೇ ನಿನ್ನಲ್ಲಿಗೆ ಬಂದಿದ್ದೇನೆ” ಎಂದು ಉತ್ತರಿಸಿದನು. ಆಗ ಯೆಹೋಶುವನು ನೆಲದವರೆಗೂ ತಲೆಬಾಗಿ ನಮಸ್ಕರಿಸಿ ಅವನಿಗೆ, “ನಾನು ನಿನ್ನ ಸೇವಕ. ನನ್ನ ಒಡೆಯನು ನನಗೆ ಯಾವುದಾದರೂ ಆಜ್ಞೆಯನ್ನು ವಿಧಿಸಬೇಕಾಗಿದೆಯೇ?” ಎಂದು ಕೇಳಿದನು.[೧೫] ಯೆಹೋವನ ಸೇನಾಧಿಪತಿಯು, “ನಿನ್ನ ಪಾದರಕ್ಷೆಗಳನ್ನು ಬಿಚ್ಚಿಬಿಡು. ಈಗ ನೀನು ನಿಂತುಕೊಂಡಿರುವ ಸ್ಥಳವು ಪವಿತ್ರವಾದದ್ದು” ಎಂದು ಹೇಳಿದನು. ಯೆಹೋಶುವನು ಅವನು ಹೇಳಿದಂತೆಯೇ ಮಾಡಿದನು.

ಮತ್ತಾಯನು ೧೮:೧೦
“ಎಚ್ಚರವಾಗಿರಿ! ಈ ಚಿಕ್ಕ ಮಕ್ಕಳಿಗೆ ಬೆಲೆಯೇ ಇಲ್ಲವೆಂದು ನೆನೆಸಬೇಡಿ. ಇವರಿಗಾಗಿ ಪರಲೋಕದಲ್ಲಿ ದೂತರನ್ನು ನೇಮಿಸಲಾಗಿದೆ. ಆ ದೂತರು ಪರಲೋಕದಲ್ಲಿರುವ ನನ್ನ ತಂದೆಯ ಸಮ್ಮುಖದಲ್ಲಿ ಇರುತ್ತಾರೆ. 

ವಿಮೋಚನಾಕಾಂಡ ೩:೨
ಆ ಬೆಟ್ಟದಲ್ಲಿ ಯೆಹೋವನ ದೂತನು ಮೋಶೆಗೆ ಉರಿಯುವ ಪೊದೆಯಲ್ಲಿ ಕಾಣಿಸಿಕೊಂಡನು. ಪೊದೆಯು ಉರಿಯುತ್ತಿದ್ದರೂ ಸುಟ್ಟು ಹೋಗದಿರುವುದನ್ನು ಮೋಶೆ ಗಮನಿಸಿದನು.

ಪ್ರಕಟನೆ ೧:೪
ಏಷ್ಯಾ ಪ್ರದೇಶದಲ್ಲಿರುವ ಏಳು ಸಭೆಗಳಿಗೆ ಯೋಹಾನನು ಬರೆಯುವುದೇನೆಂದರೆ: ವರ್ತಮಾನ, ಭೂತ, ಭವಿಷ್ಯತ್ಕಾಲಗಳಲ್ಲಿರುವಾತನಿಂದ ಮತ್ತು ಆತನ ಸಿಂಹಾಸನದ ಮುಂದಿರುವ ಏಳು ಆತ್ಮಗಳಿಂದ ಮತ್ತು

ಮತ್ತಾಯನು ೨೨:೩೦
ಸ್ತ್ರೀಯರು ಮತ್ತು ಪುರುಷರು ಪುನರುತ್ಥಾನ ಹೊಂದಿದ ಮೇಲೆ ಮದುವೆ ಮಾಡಿಕೊಳ್ಳುವುದಿಲ್ಲ. ಅವರೆಲ್ಲರೂ ಪರಲೋಕದ ದೇವದೂತರಂತೆ ಇರುತ್ತಾರೆ.

ಯೋಬನ ೧:೬
ದೇವದೂತರು ಯೆಹೋವನನ್ನು ಭೇಟಿಯಾಗುವ ದಿನ ಬಂದಿತು. ಆಗ ಸೈತಾನನು ಸಹ ಆ ದೂತರೊಂದಿಗೆ ಬಂದನು.

ಲೂಕನು ೨೦:೩೬
ಆ ಜೀವನದಲ್ಲಿ ಅವರು ದೇವದೂತರಂತಿರುತ್ತಾರೆ. ಅವರಿಗೆ ಮರಣವೂ ಇರುವುದಿಲ್ಲ. ಅವರು ದೇವರ ಮಕ್ಕಳಾಗಿರುತ್ತಾರೆ, ಏಕೆಂದರೆ ಅವರು ಪುನರುತ್ಥಾನ ಹೊಂದಿದವರಾಗಿದ್ದಾರೆ.

Kannada Bible 1934
Public Domain: 1934