೧ |
ಫಿಲಿಷ್ಟಿಯರು ದೇವರ ಮಂಜೂಷವನ್ನು ಎಬೆನೆಜೆರಿನಿಂದ ಅಷ್ಡೋದಿನಲ್ಲಿರುವ ದಾಗೋನನ ಗುಡಿಗೆ ಒಯ್ದರು. |
೨ |
ಅಲ್ಲಿ ಅದನ್ನು ದಾಗೋನನ ಮಗ್ಗುಲಲ್ಲೇ ಇಟ್ಟರು. |
೩ |
ಅಷ್ಡೋದಿನವರು ಮರುದಿನ ಬೆಳಿಗ್ಗೆ ಎದ್ದು ನೋಡುವಾಗ ದಾಗೋನ್ ವಿಗ್ರಹ ಸರ್ವೇಶ್ವರನ ಮಂಜೂಷದ ಮುಂದೆ ಬೋರಲುಬಿದ್ದಿರುವುದನ್ನು ಕಂಡು ಅದನ್ನು ಪುನಃ ಅದರ ಸ್ಥಳದಲ್ಲಿಟ್ಟರು. |
೪ |
ಮಾರನೆಯ ದಿನ ಬೆಳಿಗ್ಗೆ ನೋಡುವಾಗ ದಾಗೋನನ ತಲೆ ಮತ್ತು ಕೈಗಳು ಮುರಿದು ಹೊಸ್ತಿಲಿನ ಮೇಲೆ ಬಿದ್ದಿದ್ದವು; ಮುಂಡ ಮಾತ್ರ ಸರ್ವೇಶ್ವರನ ಮಂಜೂಷದ ಮುಂದೆ ಬಿದ್ದಿತ್ತು. |
೫ |
(ಇಂದಿನವರೆಗೂ ದಾಗೋನನ ಯಾಜಕರು ಹಾಗು ಅವನ ಬಳಿಗೆ ಬರುವವರೆಲ್ಲರು ಅಷ್ಡೋದಿನ ಗುಡಿಯ ಹೊಸ್ತಿಲನ್ನು ತುಳಿಯದಿರುವುದಕ್ಕೆ ಇದೇ ಕಾರಣ.) |
೬ |
ಸರ್ವೇಶ್ವರನ ಹಸ್ತ ಅಷ್ಡೋದಿನವರಿಗೆ ಬಾಧಕವಾಗಿತ್ತು. ಸರ್ವೇಶ್ವರ ಗಡ್ಡೆರೋಗವನ್ನು ಬರಮಾಡಿ ಅವರ ನಗರವನ್ನೂ ಅದರ ಗ್ರಾಮಗಳನ್ನೂ ಹಾಳುಮಾಡಿದರು. |
೭ |
ಇದನ್ನು ನೋಡಿ ಆ ಅಷ್ಡೋದಿನ ಜನರು, “ಇಸ್ರಯೇಲ್ ದೇವರ ಮಂಜೂಷ ನಮ್ಮಲ್ಲಿರಬಾರದು; ಆತನ ಹಸ್ತ ನಮಗೂ ನಮ್ಮ ದೇವರಾದ ದಾಗೋನನಿಗೂ ಬಾಧಕವಾಗಿದೆ,” ಎಂದು ಹೇಳಿ |
೮ |
ಫಿಲಿಷ್ಟಿಯದ ರಾಜರೆಲ್ಲರನ್ನು ಕೂಡಿಸಿ, “ಇಸ್ರಯೇಲ್ ದೇವರ ಮಂಜೂಷವನ್ನು ಏನು ಮಾಡೋಣ?” ಎಂದು ವಿಚಾರಿಸಿದರು. ಅವರು ಅದನ್ನು ಗತ್ ಊರಿಗೆ ಕಳುಹಿಸಬೇಕೆಂದು ನಿರ್ಣಯಿಸಿದರು. ಹಾಗೆಯೇ ಇಸ್ರಯೇಲ್ ದೇವರ ಮಂಜೂಷವನ್ನು ಅಲ್ಲಿಗೆ ಕಳುಹಿಸಿದರು. |
೯ |
ಮಂಜೂಷವು ಅಲ್ಲಿ ಹೋದ ಮೇಲೆ ಸರ್ವೇಶ್ವರನ ಹಸ್ತ ಆ ಊರಿನವರಿಗೂ ಬಾಧಕವಾದುದರಿಂದ ಅಲ್ಲಿ ದೊಡ್ಡ ಗದ್ದಲ ಎದ್ದಿತು. ಸರ್ವೇಶ್ವರ ಆ ಊರಿನ ಚಿಕ್ಕವರಲ್ಲೂ ದೊಡ್ಡವರಲ್ಲೂ ಗಡ್ಡೆಗಳನ್ನು ಬರಮಾಡಿದರು. |
೧೦ |
ಆದುದರಿಂದ ಅವರು ದೇವರ ಮಂಜೂಷವನ್ನು ಎಕ್ರೋನಿಗೆ ಕಳುಹಿಸಿದರು. ಅದು ಅಲ್ಲಿಗೆ ಬಂದಾಗ ಆ ಊರಿನವರು, “ನೋಡಿ, ನಮ್ಮನ್ನೂ ನಮಗೆ ಸೇರಿದವರನ್ನೂ ಕೊಲ್ಲುವುದಕ್ಕಾಗಿಯೇ ಇಸ್ರಯೇಲ್ ದೇವರ ಮಂಜೂಷವನ್ನು ಇಲ್ಲಿಗೆ ಕಳುಹಿಸಿದ್ದಾರೆ,” ಎಂದು ಕೂಗಾಡಿದರು. |
೧೧ |
ದೇವರ ಹಸ್ತ ಅವರಿಗೂ ಬಾಧಕವಾಗಿದ್ದುದರಿಂದ ಅವರಿಗೆ ಮರಣಭಯವುಂಟಾಯಿತು. ಅವರು ಫಿಲಿಷ್ಟಿಯ ರಾಜರೆಲ್ಲರನ್ನು ಕೂಡಿಸಿ, “ಇಸ್ರಯೇಲ್ ದೇವರ ಮಂಜೂಷದಿಂದ ನಮಗೂ ನಮ್ಮ ಜನರಿಗೂ ಮರಣವುಂಟಾಗದ ಹಾಗೆ ಅದನ್ನು ಅದರ ಸ್ಥಳಕ್ಕೆ ಕಳುಹಿಸಿಬಿಡಿ,” ಎಂದು ಕೇಳಿಕೊಂಡರು. |
೧೨ |
ಉಳಿದ ಜನರಿಗೂ ಗಡ್ಡೆರೋಗ ಬಂದಿತ್ತು. ಪಟ್ಟಣದ ಗೋಳಾಟ ಗಗನಕ್ಕೇರಿತ್ತು.
|
Kannada Bible (KNCL) 2016 |
No Data |