೧ |
ಫಿಲಿಷ್ಟಿಯರು ಇಸ್ರಯೇಲರೊಡನೆ ಯುದ್ಧಮಾಡಿದರು. ಇಸ್ರಯೇಲರು ಅವರಿಂದ ಅಪಜಯಹೊಂದಿ ಗಿಲ್ಬೋವ ಬೆಟ್ಟದಲ್ಲಿ ಹತರಾದರು. |
೨ |
ಫಿಲಿಷ್ಟಿಯರು ಸೌಲನನ್ನೂ ಅವನ ಮಕ್ಕಳನ್ನೂ ಬಿಡದೆ ಹಿಂದಟ್ಟಿ ಅವನ ಮಕ್ಕಳಾದ ಯೋನಾತಾನನನ್ನೂ ಅಬೀನಾದಾಬನನ್ನೂ ಮಲ್ಕೀಷೂವನನ್ನೂ ಕೊಂದರು. |
೩ |
ಸೌಲನಿದ್ದ ಕಡೆಯಲ್ಲಿ ಯುದ್ಧವು ಬಹುಘೋರವಾಗಿತ್ತು. ಬಿಲ್ಲುಗಾರರು ಅವನಿಗೆ ಗುರಿಯಿಟ್ಟರು. |
೪ |
ಆದುದರಿಂದ ಸೌಲನು ಭಯಭೀತನಾಗಿ ತನ್ನ ಆಯುಧವಾಹಕನಿಗೆ, “ನಿನ್ನ ಕತ್ತಿಯನ್ನು ಹಿರಿದು ನನ್ನನ್ನು ತಿವಿದು ಕೊಲ್ಲು; ಇಲ್ಲವಾದರೆ ಸುನ್ನತಿಯಿಲ್ಲದ ಈ ಜನರು ಬಂದು ನನ್ನನ್ನು ತಿವಿದು ಅಪಕೀರ್ತಿಯನ್ನುಂಟುಮಾಡಬಹುದು,” ಎಂದು ಹೇಳಿದನು. ವಾಹಕನು ಹೆದರಿ, “ಒಲ್ಲೆ” ಎಂದನು. ಆದುದರಿಂದ ಸೌಲನು ತಾನೇ ಕತ್ತಿಯನ್ನು ಹಿರಿದು ಅದರ ಮೇಲೆ ಬಿದ್ದನು. |
೫ |
ಸೌಲನು ಸತ್ತದ್ದನ್ನು ಅವನ ಆಯುಧವಾಹಕನು ಕಂಡು ತಾನೂ ಕತ್ತಿಯ ಮೇಲೆ ಬಿದ್ದು ಅಲ್ಲಿಯೇ ಸತ್ತನು. |
೬ |
ಹೀಗೆ ಸೌಲನೂ ಅವನ ಮೂರು ಮಂದಿ ಮಕ್ಕಳೂ ಅವನ ಆಯುಧವಾಹಕನೂ ಎಲ್ಲ ಆಳುಗಳೂ ಅದೇ ದಿವಸ ಸತ್ತರು. |
೭ |
ಇಸ್ರಯೇಲ್ ಯೋಧರು ಸೋತರು; ಸೌಲನೂ ಅವನ ಮಕ್ಕಳೂ ಸತ್ತರು ಎಂಬ ಸಮಾಚಾರವನ್ನು ಕಣಿವೆಯ ಆಚೆಯಲ್ಲೂ ಜೋರ್ಡನಿನ ಆಚೆಯಲ್ಲೂ ವಾಸವಾಗಿದ್ದ ಇಸ್ರಯೇಲರು ಕೇಳಿ ತಮ್ಮ ತಮ್ಮ ಪಟ್ಟಣಗಳನ್ನು ಬಿಟ್ಟು ಓಡಿಹೋದರು. ಫಿಲಿಷ್ಟಿಯರು ಬಂದು ಅವುಗಳಲ್ಲಿ ವಾಸಿಸಿದರು. |
೮ |
ಮರುದಿನ ಬೆಳಿಗ್ಗೆ ಫಿಲಿಷ್ಟಿಯರು ಸತ್ತವರ ಒಡವೆಗಳನ್ನು ಸುಲಿದುಕೊಳ್ಳುವುದಕ್ಕೆ ಬಂದಾಗ ಸೌಲನೂ ಅವನ ಮೂರು ಮಂದಿ ಮಕ್ಕಳೂ ಗಿಲ್ಬೋವ ಬೆಟ್ಟದಲ್ಲಿ ಸತ್ತು ಬಿದ್ದಿರುವುದನ್ನು ಕಂಡರು. |
೯ |
ಸೌಲನ ತಲೆಯನ್ನು ಕಡಿದು, ಅವನ ಆಯುಧಗಳನ್ನು ತೆಗೆದುಕೊಂಡು, ಅವುಗಳನ್ನು ತಮ್ಮ ದೇಶದ ಎಲ್ಲಾ ಕಡೆಗೂ ಕಳುಹಿಸಿದರು. ತಮ್ಮ ಎಲ್ಲಾ ಜನರಿಗೂ ದೇವಸ್ಥಾನಗಳಿಗೂ ವಿಜಯವಾರ್ತೆಯನ್ನು ಮುಟ್ಟಿಸಿದರು. |
೧೦ |
ಅವನ ಆಯುಧಗಳನ್ನು ಅಷ್ಟೋರೆತ್ ದೇವತೆಯ ಗುಡಿಯಲ್ಲಿಟ್ಟರು. ಅವನ ಶವವನ್ನು ಬೇತ್ ಷೆಯಾನಿನ ಕೋಟೆ ಗೋಡೆಗೆ ನೇತುಹಾಕಿದರು. |
೧೧ |
ಫಿಲಿಷ್ಟಿಯರು ಸೌಲನಿಗೆ ಏನೇನು ಮಾಡಿದರೆಂಬ ವರದಿ ಯಾಬಿಷ್ ಗಿಲ್ಯಾದಿನವರಿಗೆ ಮುಟ್ಟಿತು. |
೧೨ |
ಆಗ ಅವರಲ್ಲಿದ್ದ ಶೂರರೆಲ್ಲರೂ ಹೊರಟು, ರಾತ್ರಿಯೆಲ್ಲಾ ನಡೆದುಹೋಗಿ, ಸೌಲನ ಮತ್ತು ಅವನ ಮಕ್ಕಳ ಶವಗಳನ್ನು ಬೇತ್ ಷೆಯಾನಿನ ಗೋಡೆಯಿಂದ ಇಳಿಸಿ, ಯಾಬೇಷಿಗೆ ತೆಗೆದುಕೊಂಡು ಬಂದು, ಅಲ್ಲಿ ಅವುಗಳನ್ನು ದಹಿಸಿದರು. |
೧೩ |
ಅವರ ಎಲುಬುಗಳನ್ನು ಯಾಬೇಷಿನಲ್ಲಿದ್ದ ಪಿಚುಲ ವೃಕ್ಷದ ಕೆಳಗೆ ಸಮಾಧಿಮಾಡಿ, ಏಳು ದಿವಸ ಉಪವಾಸವನ್ನು ಆಚರಿಸಿದರು.
|
Kannada Bible (KNCL) 2016 |
No Data |