೧ |
ದಾವೀದನೂ ಅವನ ಜನರೂ ಮಾರನೆಯ ದಿನ ಚಿಕ್ಲಗ್ ಊರನ್ನು ಸೇರಿದರು. ಅಷ್ಟರೊಳಗೆ ಅಮಾಲೇಕ್ಯರು ದಂಡೆತ್ತಿ ದಕ್ಷಿಣಪ್ರಾಂತ್ಯಕ್ಕೂ ಚಿಕ್ಲಗ್ ಊರಿಗೂ ಬಂದು ಚಿಕ್ಲಗ್ ಊರನ್ನು ಸುಟ್ಟು ಹಾಳುಮಾಡಿದ್ದರು. |
೨ |
ಅದರಲ್ಲಿದ್ದ ಎಲ್ಲಾ ಹೆಂಗಸರನ್ನೂ ಚಿಕ್ಕವರನ್ನೂ ದೊಡ್ಡವರನ್ನೂ ಸೆರೆಹಿಡಿದುಕೊಂಡು ಹೋಗಿ ಇದ್ದರು; ಆದರೆ ಯಾರನ್ನೂ ಕೊಂದಿರಲಿಲ್ಲ. |
೩ |
ದಾವೀದನೂ ಅವನ ಜನರೂ ತಮ್ಮ ಊರಿಗೆ ಬಂದಾಗ ಅದು ಸುಟ್ಟುಹೋಗಿರುವುದನ್ನೂ ತಮ್ಮ ಹೆಂಡತಿಯರೂ ಗಂಡು-ಹೆಣ್ಣು ಮಕ್ಕಳೂ ಸೆರೆಯಾಗಿ ಹೋಗಿರುವುದನ್ನೂ ಕಂಡರು. |
೪ |
ದುಃಖ ತಾಳಲಾಗದೆ ದೀರ್ಘಕಾಲ ಅತ್ತು ಗೋಳಾಡಿದರು. |
೫ |
ದಾವೀದನ ಇಬ್ಬರು ಹೆಂಡತಿಯರಾದ ಜೆಸ್ರೀಲಿನವಳಾದ ಅಹೀನೋವಮಳು ಮತ್ತು ಕರ್ಮೆಲ್ಯನಾದ ನಾಬಾಲನ ಹೆಂಡತಿಯಾಗಿದ್ದ ಅಬೀಗೈಲಳು ಕೂಡ ಸೆರೆಯಾಗಿ ಹೋಗಿದ್ದರು. |
೬ |
ಇದಲ್ಲದೆ ಜನರು ತಮ್ಮ ಗಂಡುಹೆಣ್ಣು ಮಕ್ಕಳಿಗಾಗಿ ಮನಸ್ಸಿನಲ್ಲಿ ಬಹಳವಾಗಿ ನೊಂದುಕೊಂಡರು. ಮಾತ್ರವಲ್ಲ, ದಾವೀದನನ್ನು ಕಲ್ಲೆಸೆದು ಕೊಲ್ಲಬೇಕೆಂದಿದ್ದರು. ಆದುದರಿಂದ ಅವನು ಬಲು ಇಕ್ಕಟ್ಟಿಗೆ ಸಿಕ್ಕಿಕೊಂಡಿದ್ದನು. |
೭ |
ಆದರೂ ಅವನು ತನ್ನ ದೇವರಾದ ಸರ್ವೇಶ್ವರನಲ್ಲಿ ಧೈರ್ಯ ತಂದುಕೊಂಡನು. ಅಹೀಮೆಲೆಕನ ಮಗನಾದ ಎಬ್ಯಾತಾರನಿಗೆ, “ದಯವಿಟ್ಟು ‘ಏಫೋದ’ನ್ನು ಇಲ್ಲಿಗೆ ತೆಗೆದುಕೊಂಡು ಬಾ,” ಎಂದು ಹೇಳಿದನು. ಅವನು ತಂದನು. |
೮ |
ಆಗ ದಾವೀದನು ಸರ್ವೇಶ್ವರನನ್ನು, “ನಾನು ಆ ದಾಳಿಕಾರರನ್ನು ಬೆನ್ನಟ್ಟಬಹುದೇ? ಅವರು ನನಗೆ ವಶವಾಗುವರೇ?” ಎಂದು ಕೇಳಿದನು. “ಬೆನ್ನಟ್ಟು, ಅವರು ನಿನ್ನ ವಶವಾಗುವರು, ನೀನು ನಿನ್ನವರೆಲ್ಲರನ್ನೂ ಬಿಡಿಸಿಕೊಂಡು ಬರುವೆ,” ಎಂದು ಉತ್ತರಕೊಟ್ಟನು ಸರ್ವೇಶ್ವರ. |
೯ |
ದಾವೀದನೂ ಅವನ ಸಂಗಡ ಇದ್ದ ಆರುನೂರು ಮಂದಿ ಸೈನಿಕರೂ ಹೊರಟು ಬೆಸೋರ್ ಹಳ್ಳಕ್ಕೆ ಬಂದರು. |
೧೦ |
ಆಮೇಲೆ ಆ ಹಳ್ಳದಿಂದ ಮೇಲೆ ಹತ್ತಲಾರದಷ್ಟು ಆಯಾಸಗೊಂಡ ಇನ್ನೂರು ಜನರು ಅಲ್ಲೇ ನಿಂತುಬಿಟ್ಟರು. ಆದ್ದರಿಂದ ದಾವೀದನು ಉಳಿದ ನಾನೂರು ಜನರನ್ನೇ ಕರೆದುಕೊಂಡು ಮುಂದೆ ನಡೆದನು. |
೧೧ |
ಅವನ ಜನರು ಅಡವಿಯಲ್ಲಿ ಒಬ್ಬ ಈಜಿಪ್ಟಿನವನು ಬಿದ್ದಿರುವುದನ್ನು ಕಂಡು ಅವನನ್ನು ದಾವೀದನ ಬಳಿಗೆ ತಂದು ಅವನಿಗೆ ರೊಟ್ಟಿ ತಿನ್ನಿಸಿ, ನೀರು ಕುಡಿಸಿದರು. |
೧೨ |
ಅಂಜೂರ ಹಣ್ಣಿನ ಉಂಡೆಯನ್ನೂ ಎರಡು ದ್ರಾಕ್ಷಿಗೊಂಚಲುಗಳನ್ನೂ ಕೊಟ್ಟರು. ಮೂರು ದಿವಸ ಹಗಲಿರುಳು ಅನ್ನಪಾನವಿಲ್ಲದ್ದರಿಂದ ಬಹಳವಾಗಿ ಬಳಲಿಹೋಗಿದ್ದ ಇವನು ಅವುಗಳನ್ನು ತಿಂದು ಚೇತರಿಸಿಕೊಂಡನು. |
೧೩ |
ಆಗ ದಾವೀದನು ಅವನನ್ನು, “ನೀನು ಯಾರ ಕಡೆಯವನು? ಎಲ್ಲಿಯವನು?” ಎಂದು ಕೇಳಿದನು. ಆಗ ಅವನು, “ನಾನು ಈಜಿಪ್ಟಿನವನು; ಒಬ್ಬ ಅಮಾಲೇಕ್ಯನ ಗುಲಾಮನು. ನಾನು ಮೂರು ದಿನಗಳ ಹಿಂದೆ ಅಸ್ವಸ್ಥನಾಗಿ ಮಲಗಿಕೊಂಡದ್ದರಿಂದ ನನ್ನ ಯಜಮಾನ ನನ್ನನ್ನು ಬಿಟ್ಟುಹೋದನು. |
೧೪ |
ಕೆರೇತ್ಯರೂ ಯೆಹೂದ್ಯರೂ ಕಾಲೇಬ್ಯರೂ ಇರುವ ದಕ್ಷಿಣ ಪ್ರಾಂತ್ಯವನ್ನು ನಾವು ಸೂರೆಮಾಡಿ ಚಿಕ್ಲಗ್ ಊರನ್ನು ಸುಟ್ಟುಬಿಟ್ಟು ಬಂದೆವು,” ಎಂದು ಉತ್ತರಕೊಟ್ಟನು. |
೧೫ |
ಅನಂತರ ದಾವೀದನು, “ನೀನು ನನ್ನನ್ನು ಆ ಗುಂಪು ಇರುವ ಸ್ಥಳಕ್ಕೆ ಕರೆದುಕೊಂಡು ಹೋಗುವಿಯಾ?” ಎಂದು ಕೇಳಿದ್ದಕ್ಕೆ ಅವನು, “ನೀನು ನನ್ನನ್ನು ಕೊಲ್ಲುವುದಿಲ್ಲವೆಂದೂ ನನ್ನ ಯಜಮಾನನ ಕೈಗೆ ಒಪ್ಪಿಸುವುದಿಲ್ಲವೆಂದೂ ದೇವರ ಹೆಸರಿನಲ್ಲಿ ಪ್ರಮಾಣಮಾಡಿದರೆ ನಿನ್ನನ್ನು, ಆ ಗುಂಪಿನವರ ಬಳಿಗೆ ಕರೆದುಕೊಂಡು ಹೋಗುವೆನು,” ಎಂದನು. |
೧೬ |
ಅವರು ಅಲ್ಲಿಗೆ ಹೋದಾಗ ಆ ದಾಳಿಕಾರರು ತಮಗೆ ಫಿಲಿಷ್ಟಿಯ ಹಾಗು ಯೆಹೂದ ಪ್ರಾಂತ್ಯಗಳಲ್ಲಿ ದೊರಕಿದ್ದ ದೊಡ್ಡಕೊಳ್ಳೆಯ ನಿಮಿತ್ತ ಸಂತೋಷಿಸಿ, ತಿಂದು, ಕುಡಿದು, ಕುಣಿದಾಡುತ್ತಾ ಅಲ್ಲಿನ ಬಯಲಿನಲ್ಲಿ ವ್ಯಾಪಿಸಿಕೊಂಡಿದ್ದರು. |
೧೭ |
ದಾವೀದನು ಮರುದಿನ ನಸುಕಿನಲ್ಲೇ ಅವರ ಮೇಲೆ ದಾಳಿಮಾಡಿ ಸೂರ್ಯ ಅಸ್ತವಾಗುವವರೆಗೂ ಅವರನ್ನು ಸದೆಬಡಿದನು. ಒಂಟೆಗಳನ್ನು ಹತ್ತಿ ಓಡಿಹೋದ ನಾನೂರು ಮಂದಿ ಯುವಕರ ಹೊರತು ಬೇರೆ ಯಾರೂ ತಪ್ಪಿಸಿಕೊಳ್ಳಲಿಲ್ಲ. |
೧೮ |
ದಾವೀದನು ತನ್ನ ಇಬ್ಬರು ಹೆಂಡತಿಯರನ್ನು ಹಾಗು ಅಮಾಲೇಕ್ಯರು ಒಯ್ದಿದ್ದ ಎಲ್ಲಾ ಕೊಳ್ಳೆಯನ್ನು ಬಿಡಿಸಿಕೊಂಡನು. |
೧೯ |
ಅಮಾಲೇಕ್ಯರು ಒಯ್ದಿದ್ದ ಚಿಕ್ಕ ದೊಡ್ಡ ಒಡವೆಗಳಾಗಲಿ, ಗಂಡು-ಹೆಣ್ಣು ಮಕ್ಕಳಾಗಲಿ ಒಂದನ್ನೂ ಬಿಡದೆ, ಎಲ್ಲವನ್ನೂ ತೆಗೆದುಕೊಂಡು ಬಂದನು. |
೨೦ |
ಇದಲ್ಲದೆ, ದಾವೀದನು ಶತ್ರುಗಳ ದನಕುರಿಗಳನ್ನೂ ತೆಗೆದುಕೊಂಡನು. ಅವನ ಜನರು, “ಇವು ದಾವೀದನ ಕೊಳ್ಳೆ,” ಎಂದು ಹೇಳಿ ಅವುಗಳನ್ನು ತಮ್ಮ ದನಗಳ ಸಮೇತ ಹೊಡೆದುಕೊಂಡು ಬಂದರು. |
೨೧ |
ಅನಂತರ ದಾವೀದನು ಮೊದಲು ಆಯಾಸದಿಂದ ತನ್ನ ಹಿಂದೆ ಬರಲಾರದೆ ಬೆಸೋರ್ ಹಳ್ಳದ ಹತ್ತಿರ ಉಳಿದಿದ್ದ ಇನ್ನೂರು ಜನರ ಬಳಿಗೆ ಹೋದನು. ಅವನನ್ನೂ ಅವನೊಂದಿಗಿದ್ದ ಜನರನ್ನೂ ಎದುರುಗೊಳ್ಳಲು ಆ ಜನರು ಬಂದರು. ದಾವೀದನು ಅವರನ್ನು ಸಂಧಿಸಿ ಕ್ಷೇಮಸಮಾಚಾರವನ್ನು ವಿಚಾರಿಸಿದನು. |
೨೨ |
ಆಗ ದಾವೀದನ ಜೊತೆಯಲ್ಲಿ ಹೋಗಿದ್ದ ಜನರಲ್ಲಿ ದುಷ್ಟರೂ ಮೂರ್ಖರೂ ಆದ ಕೆಲವು ಮಂದಿ, “ಇವರು ನಮ್ಮ ಸಂಗಡ ಬಾರದ್ದರಿಂದ ನಾವು ಬಿಡಿಸಿಕೊಂಡು ಬಂದ ಕೊಳ್ಳೆಯಲ್ಲಿ ಇವರಿಗೆ ಏನೂ ಸಿಕ್ಕುವುದಿಲ್ಲ. ತಮ್ಮ ತಮ್ಮ ಮಡದಿ ಮಕ್ಕಳನ್ನು ಕರೆದುಕೊಂಡು ಹೋಗಿಬಿಡಲಿ,” ಎಂದರು. |
೨೩ |
ಆಗ ದಾವೀದನು ಅವರಿಗೆ, “ಸಹೋದರರೇ, ಸರ್ವೇಶ್ವರ ನಮ್ಮನ್ನು ಕಾಪಾಡಿ, ನಮಗೆ ವಿರುದ್ಧ ಬಂದಿದ್ದ ಶತ್ರುಗಳ ಗುಂಪನ್ನು ನಮ್ಮ ಕೈಗೆ ಒಪ್ಪಿಸಿ, ನಮಗೆ ಇಷ್ಟನ್ನೆಲ್ಲಾ ಅನುಗ್ರಹಿಸಿದ ಮೇಲೆ ನೀವು ಹೀಗೆ ಮಾಡಬಾರದು. |
೨೪ |
ಈ ವಿಷಯದಲ್ಲಿ ನಿಮ್ಮ ಮಾತನ್ನು ಯಾರೂ ಕೇಳಬಾರದು. ಯುದ್ಧಮಾಡಿದವನಿಗೆ ಸಿಕ್ಕುವಷ್ಟು ಪಾಲು ಸಾಧನಸಾಮಗ್ರಿಗಳನ್ನು ಕಾಯ್ದವನಿಗೂ ಸಿಕ್ಕಬೇಕು. ಉಭಯತ್ರರಿಗೂ ಸಮಪಾಲಾಗಬೇಕು,” ಎಂದು ಉತ್ತರಕೊಟ್ಟನು. |
೨೫ |
ದಾವೀದನು ಇಸ್ರಯೇಲರಲ್ಲಿ ಇದನ್ನು ಒಂದು ಕಟ್ಟಳೆಯನ್ನಾಗಿ ಅಂದು ವಿಧಿಸಿದ್ದರಿಂದ ಇಂದಿನವರೆಗೂ ಹಾಗೆಯೇ ನಡೆಯುತ್ತಾ ಬಂದಿದೆ. |
೨೬ |
ದಾವೀದನು ಚಿಕ್ಲಗಿಗೆ ಬಂದನಂತರ ತನ್ನ ಸ್ನೇಹಿತರಾದ ಯೆಹೂದ ಹಿರಿಯರಿಗೆ ಕೊಳ್ಳೆಯ ಒಂದು ಭಾಗವನ್ನು ಕಳುಹಿಸಿದನು. “ಇಗೋ, ಸರ್ವೇಶ್ವರ ಶತ್ರುಗಳನ್ನು ಸೂರೆಮಾಡಿ ತಂದವುಗಳಲ್ಲಿ ಇದು ನಿಮಗೆ ಬಹುಮಾನವಾಗಿರಲಿ,” ಎಂದು ಹೇಳಿದನು. |
೨೭ |
ಹೀಗೆ ಬಹುಮಾನ ಪಡೆದವರು ಇವರು: ಬೇತೇಲಿನವರು, ದಕ್ಷಿಣ ಪ್ರಾಂತ್ಯದ ರಾಮೋತಿನವರು, ಯತ್ತೀರಿನವರು, |
೨೮ |
ಅರೋಯೇರಿನವರು, ಸಿಪ್ಮೋತಿನವರು, ಎಷ್ಟೆಮೋವದವರು, |
೨೯ |
ರಾಕಾಲಿನವರು, ಎರಹ್ಮೇಲ್ಯರು, ಕೇನ್ಯರು, |
೩೦ |
ಹೊರ್ಮದವರು, ಬೋರಾಷಾನಿನವರು, ಅತಾಕಿನವರು, ಹೆಬ್ರೋನಿನವರು |
೩೧ |
ಮತ್ತು ದಾವೀದನೂ ಅವನ ಜನರೂ ಸಂಚರಿಸುತ್ತಿದ್ದ ಇತರ ಎಲ್ಲಾ ಸ್ಥಳಗಳವರು.
|
Kannada Bible (KNCL) 2016 |
No Data |