೧ |
ದಾವೀದನು ಅಲ್ಲಿಂದ ತಪ್ಪಿಸಿಕೊಂಡು ಅದುಲ್ಲಾಮ್ ಎಂಬ ಗವಿಗೆ ಹೋದನು. ಈ ಸಮಾಚಾರ, ಅವನ ಅಣ್ಣಂದಿರಿಗೂ ಬೇರೆ ಎಲ್ಲಾ ಸಂಬಂಧಿಕರಿಗೂ ಮುಟ್ಟಿತು. ಅವರೂ ಬಂದು ಅವನನ್ನು ಸೇರಿಕೊಂಡರು. |
೨ |
ಇದಲ್ಲದೆ ಶೋಷಿತರು, ಸಾಲಗಾರರು ಹಾಗು ಮನನೊಂದವರು ಆಗಿದ್ದ ಜನಸಾಮಾನ್ಯರು ಬಂದು ಅವನನ್ನು ಆಶ್ರಯಿಸಿಕೊಂಡರು. ಹೀಗೆ ಅವನು ಸುಮಾರು ನಾನೂರು ಜನರಿಗೆ ನಾಯಕನಾದನು. |
೩ |
ಅನಂತರ ದಾವೀದನು ತನ್ನ ತಂದೆತಾಯಿಗಳನ್ನು ಮೋವಾಬ್ ದೇಶದ ಮಿಚ್ಪೆ ಎಂಬಲ್ಲಿಗೆ ಕರೆದುಕೊಂಡು ಹೋದನು. ಅಲ್ಲಿನ ರಾಜನನ್ನು, “ದೇವರು ನನಗೆ ಮಾರ್ಗತೋರಿಸುವವರೆಗೂ ನನ್ನ ತಂದೆತಾಯಿಗಳು ನಿಮ್ಮ ಬಳಿಯಲ್ಲಿರುವುದಕ್ಕೆ ಅಪ್ಪಣೆಯಾಗಬೇಕು,” ಎಂದು ಬೇಡಿಕೊಂಡನು. |
೪ |
ಅವರನ್ನು ಆ ರಾಜನ ಬಳಿಯಲ್ಲಿ ಬಿಟ್ಟನು. ದಾವೀದನು ದುರ್ಗದಲ್ಲಿದ್ದ ಕಾಲವೆಲ್ಲಾ ಅವನ ತಂದೆತಾಯಿಗಳು ಆ ರಾಜನ ಬಳಿಯಲ್ಲೇ ವಾಸವಾಗಿದ್ದರು. |
೫ |
ಗಾದ್ ಪ್ರವಾದಿಯು ದಾವೀದನಿಗೆ, “ನೀನು ಈ ದುರ್ಗದಲ್ಲಿರಬಾರದು; ಇದನ್ನು ಬಿಟ್ಟು ಯೆಹೂದ ನಾಡಿಗೆ ಹೋಗು,” ಎಂದು ಹೇಳಿದ್ದರಿಂದ ಅವನು ಹೆರೆತ್ ಮರುಭೂಮಿಗೆ ಹೋದನು. |
೬ |
ಒಂದು ದಿನ ಸೌಲನು ತನ್ನ ಎಲ್ಲಾ ಪರಿವಾರದವರ ನಡುವೆ ಕೈಯಲ್ಲಿ ಭರ್ಜಿಯನ್ನು ಹಿಡಿದುಕೊಂಡು ಗಿಬೆಯ ಗುಡ್ಡದ ಪಿಚುಲವೃಕ್ಷದ ಕೆಳಗೆ ಕುಳಿತುಕೊಂಡನು. “ದಾವೀದನೂ ಅವನ ಜನರೂ ಅಡಗಿಕೊಂಡಿರುವ ಸ್ಥಳ ಗೊತ್ತಾಗಿದೆ,” ಎಂಬ ಸುದ್ದಿ ಅವನಿಗೆ ಮುಟ್ಟಿತು. |
೭ |
ಆಗ ಅವನು ತನ್ನ ಸುತ್ತಲೂ ನಿಂತಿದ್ದ ಪರಿವಾರದವರಿಗೆ, “ಬೆನ್ಯಾಮೀನನ ಕುಲಪುತ್ರರೇ ಕೇಳಿ; ನೀವೆಲ್ಲರೂ ನನಗೆ ವಿರೋಧವಾಗಿ ಒಳಸಂಚು ಮಾಡುವುದೇಕೆ? ಜೆಸ್ಸೆಯನ ಮಗನು ನಿಮ್ಮೆಲ್ಲರಿಗೂ ಹೊಲಗಳನ್ನೂ ದ್ರಾಕ್ಷಿತೋಟಗಳನ್ನೂ ಕೊಡುತ್ತಾನೆಯೇ? ಎಲ್ಲರನ್ನು ಸಹಸ್ರಾಧಿಪತಿಗಳನ್ನಾಗಲಿ, ಶತಾಧಿಪತಿಗಳನ್ನಾಗಲಿ ಮಾಡುತ್ತಾನೆಯೆ? |
೮ |
ನನ್ನ ಮಗನು ಜೆಸ್ಸೆಯನ ಮಗನೊಡನೆ ಒಪ್ಪಂದಮಾಡಿಕೊಂಡದ್ದನ್ನು ನಿಮ್ಮಲ್ಲಿ ಒಬ್ಬನಾದರೂ ನನಗೆ ತಿಳಿಸಲಿಲ್ಲ. ನನ್ನ ಸೇವಕನೊಬ್ಬ ನನಗೆ ವಿರೋಧವಾಗಿ ಒಳಸಂಚುಮಾಡುವ ಹಾಗೆ ನನ್ನ ಮಗನೇ ಅವನನ್ನು ಎತ್ತಿಕಟ್ಟಿದ್ದಾನೆಂದು ಒಬ್ಬನಾದರೂ ನನಗೆ ಏಕೆ ತಿಳಿಸಲಿಲ್ಲ? ನನ್ನ ಹಿತಚಿಂತೆ ನಿಮಗೆ ಕಿಂಚಿತ್ತೂ ಇಲ್ಲ,” ಎಂದನು. |
೯ |
ಆಗ ಸೌಲನ ಸೇವಕರ ಬಳಿಯಲ್ಲಿ ನಿಂತಿದ್ದ ಎದೋಮ್ಯನಾದ ದೋಯೇಗನು, “ಆ ಜೆಸ್ಸೆಯನ ಮಗ ನೋಬದಲ್ಲಿರುವ ಅಹೀಟೂಬನ ಮಗನಾದ ಅಹೀಮೆಲೆಕನ ಬಳಿಗೆ ಬಂದದ್ದನ್ನು ನಾನು ನೋಡಿದೆ. |
೧೦ |
ಆ ಯಾಜಕ ಇವನಿಗೆ ಸರ್ವೇಶ್ವರನ ಚಿತ್ತವನ್ನು ತಿಳಿಸಿ, ಆಹಾರವನ್ನೂ ಫಿಲಿಷ್ಟಿಯನಾದ ಗೊಲ್ಯಾತನ ಕತ್ತಿಯನ್ನೂ ಕೊಟ್ಟನು,” ಎಂದು ಹೇಳಿದನು. |
೧೧ |
ಕೂಡಲೆ ಸೌಲನು ಅಹೀಟೂಬನ ಮಗನೂ ಯಾಜಕನೂ ಆಗಿದ್ದ ಅಹೀಮೆಲೆಕನನ್ನು ಹಾಗು ಅವನ ಕುಟುಂಬಕ್ಕೆ ಸೇರಿದ್ದ ನೋಬದ ಬೇರೆ ಎಲ್ಲಾ ಯಾಜಕರನ್ನೂ ಬರಮಾಡಿದನು. ಅವರೆಲ್ಲರೂ ಅರಸನ ಸನ್ನಿಧಿಗೆ ಬಂದರು. |
೧೨ |
ಅರಸನು, “ಅಹೀಟೂಬನ ಮಗನೇ, ನಾನು ಕೇಳುವ ಪ್ರಶ್ನೆಗೆ ಉತ್ತರಕೊಡು,” ಎಂದನು. ಅದಕ್ಕೆ ಅವನು, “ಒಡೆಯಾ, ಅಪ್ಪಣೆಯಾಗಲಿ,” ಎಂದನು. |
೧೩ |
ಆಗ ಸೌಲನು, “ನೀನು ನನಗೆ ವಿರೋಧವಾಗಿ ಜೆಸ್ಸೆಯನ ಮಗನೊಡನೆ ಒಳಸಂಚುಮಾಡಿದ್ದೇಕೆ? ಅವನು ನನಗೆ ವಿರೋಧವಾಗಿ ಎದ್ದು ನನ್ನ ಜೀವಕ್ಕಾಗಿ ಹೊಂಚುಹಾಕುವಂತೆ ನೀನು ಅವನಿಗೆ ರೊಟ್ಟಿ ಹಾಗು ಕತ್ತಿಯನ್ನು ಕೊಟ್ಟು ದೈವೋತ್ತರವನ್ನು ತಿಳಿಸಿದ್ದೇಕೆ?” ಎಂದು ಕೇಳಿದನು. |
೧೪ |
ಅಹೀಮೆಲೆಕನು, “ನಿಮ್ಮ ಎಲ್ಲಾ ಸೇವಕರಲ್ಲಿ, ಅರಸನ ಅಳಿಯನಾಗಿರುವ ದಾವೀದನಂತೆ ನಂಬಿಗಸ್ತನಾದವನು ಯಾರಿದ್ದಾನೆ? ದಾವೀದನು ನಿಮ್ಮ ಆಲೋಚಕರಲ್ಲೊಬ್ಬನೂ ತಮ್ಮ ಮನೆಯವರಲ್ಲಿ ಗೌರವಾನ್ವಿತನೂ ಆಗಿದ್ದಾನಲ್ಲವೇ? |
೧೫ |
ನಾನು ಅವರ ಪರವಾಗಿ ದೇವರ ಸನ್ನಿಧಿಯಲ್ಲಿ ವಿಚಾರಮಾಡಿದ್ದು ಇದೇ ಮೊದಲನೆಯ ಸಾರಿಯೇ? ಇಲ್ಲವೇ ಇಲ್ಲ, ಅರಸರು ತಮ್ಮ ಸೇವಕನಾದ ನನ್ನ ಮೇಲೆ ಹಾಗು ನನ್ನ ಮನೆಯವರ ಮೇಲೆ ಇಂಥ ಅಪವಾದವನ್ನು ಹೊರಿಸಬಾರದು. ಈ ವಿಷಯದಲ್ಲಿ ತಮ್ಮ ಸೇವಕನಾದ ನನಗೆ ಸ್ವಲ್ಪವೂ ಗೊತ್ತಿರಲಿಲ್ಲ,” ಎಂದು ಉತ್ತರಕೊಟ್ಟನು. |
೧೬ |
ಆಗ ಅರಸನು ಅವನಿಗೆ, “ಅಹೀಮೆಲೆಕನೇ, ನೀನೂ ನಿನ್ನ ಮನೆಯವರೂ ಸಾಯಲೇಬೇಕು,” ಎಂದು ಹೇಳಿದನು. |
೧೭ |
ತನ್ನ ಬಳಿಯಲ್ಲಿದ್ದ ಸಿಪಾಯಿಗಳಿಗೆ, “ನೀವು ಹಿಂದಿರುಗಿ ಸರ್ವೇಶ್ವರನ ಈ ಯಾಜಕರನ್ನು ಕೊಲ್ಲಿರಿ; ದಾವೀದನು ಪಲಾಯನ ಆದದ್ದು ಗೊತ್ತಿದ್ದರೂ ನನಗೆ ತಿಳಿಸದೆ ಅವನಿಗೆ ಸಹಾಯಮಾಡಿದ್ದಾರೆ,” ಎಂದು ಆಜ್ಞಾಪಿಸಿದನು. ಆದರೆ ಅರಸನ ಸಿಪಾಯಿಗಳು ಸರ್ವೇಶ್ವರನ ಯಾಜಕರ ಮೇಲೆ ಕೈಹಾಕುವುದಕ್ಕೆ ಮನಸ್ಸುಮಾಡಲಿಲ್ಲ. |
೧೮ |
ಆದುದರಿಂದ ಸೌಲನು ಎದೋಮ್ಯನಾದ ದೋಯೇಗನಿಗೆ, “ನೀನು ಹೋಗಿ ಅವರನ್ನು ಕೊಲ್ಲು,” ಎಂದು ಆಜ್ಞಾಪಿಸಿದನು. ಅವನು ನಾರುಮಡಿಯ ಏಫೋದನ್ನು ಧರಿಸಿಕೊಂಡಿದ್ದ ಎಂಬತ್ತೈದು ಮಂದಿ ಯಾಜಕರನ್ನು ಆ ದಿವಸ ಕೊಂದುಹಾಕಿದನು. |
೧೯ |
ಅನಂತರ ಅವನು ಯಾಜಕರ ಪಟ್ಟಣವಾದ ನೋಬಕ್ಕೆ ಹೋಗಿ ಅಲ್ಲಿನ ಸ್ತ್ರೀಪುರುಷರನ್ನೂ ಶಿಶುಬಾಲಕರನ್ನೂ ದನಕುರಿಕತ್ತೆಗಳನ್ನೂ ಕತ್ತಿಯಿಂದ ಸಂಹರಿಸಿದನು. |
೨೦ |
ಅಹೀಟೂಬನ ಮಗನಾದ ಅಹೀಮೆಲೆಕನ ಮಕ್ಕಳಲ್ಲೊಬ್ಬನಾದ ಏಬ್ಯಾತಾರನೆಂಬವನು ತಪ್ಪಿಸಿಕೊಂಡು ದಾವೀದನ ಬಳಿಗೆ ಓಡಿಬಂದನು. |
೨೧ |
ಸೌಲನು ಸರ್ವೇಶ್ವರನ ಯಾಜಕರನ್ನು ಕೊಲ್ಲಿಸಿದ ಸಂಗತಿಯನ್ನು ಅವನಿಗೆ ತಿಳಿಸಿದನು. |
೨೨ |
ದಾವೀದನು, “ಎದೋಮ್ಯನಾದ ದೋಯೇಗನನ್ನು ನಾನು ಅಲ್ಲಿ ಕಂಡಾಗಲೇ ಇವನು ಸೌಲನಿಗೆ ಹೇಗೂ ಈ ಸಂಗತಿಯನ್ನು ತಿಳಿಸುವನೆಂದು ನೆನೆಸಿಕೊಂಡೆ; ನಿನ್ನ ಸಂಬಂಧಿಕರ ವಧೆಗೆ ನಾನೇ ಕಾರಣನಾದೆನಲ್ಲಾ! |
೨೩ |
ನೀನಾದರೋ ಹೆದರದೆ ನನ್ನ ಸಂಗಡ ಇರು; ನನ್ನ ಪ್ರಾಣವನ್ನು ತೆಗೆಯಬೇಕೆಂದಿರುವವನು ನಿನ್ನ ಪ್ರಾಣವನ್ನೂ ತೆಗೆಯಬೇಕೆಂದಿರುತ್ತಾನೆ. ನೀನು ನನ್ನ ಜೊತೆಯಲ್ಲಿ ಇರುವುದಾದರೆ ಸುರಕ್ಷಿತನಾಗಿರುವೆ,” ಎಂದನು.
|
Kannada Bible (KNCL) 2016 |
No Data |