A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ಸಮುವೇಲನು ೧ ೧೭ಯೆಹೂದ ಪ್ರಾಂತ್ಯದ ಸೋಕೋವಿನಲ್ಲಿ ಫಿಲಿಷ್ಟಿಯರು ಯುದ್ಧಕ್ಕಾಗಿ ಸೈನ್ಯವನ್ನು ಜಮಾಯಿಸಿದ್ದರು. ಸೋಕೋವಿಗೂ ಅಜೇಕಕ್ಕೂ ಮಧ್ಯೆಯಿರುವ ಎಫೆಸ್ದಮ್ಮೀಮಿನಲ್ಲಿ ಬೀಡುಬಿಟ್ಟಿದ್ದರು.
ಈ ಫಿಲಿಷ್ಟಿಯರೊಡನೆ ಯುದ್ಧಮಾಡಲು ಸೌಲನೂ ಇಸ್ರಯೇಲರೂ ತಮ್ಮ ಸೈನ್ಯವನ್ನು ಜಮಾಯಿಸಿಕೊಂಡು ಏಲಾ ಕಣಿವೆಯಲ್ಲಿ ಪಾಳೆಯಮಾಡಿಕೊಂಡು ವ್ಯೂಹಕಟ್ಟಿದರು.
ಫಿಲಿಷ್ಟಿಯರು ಒಂದು ಗುಡ್ಡದ ಪಕ್ಕದಲ್ಲೂ ಇಸ್ರಯೇಲರು ಇನ್ನೊಂದು ಗುಡ್ಡದ ಪಕ್ಕದಲ್ಲೂ ನಿಂತರು. ಉಭಯರ ಮಧ್ಯೆ ಒಂದು ಕಣಿವೆ ಇತ್ತು.
ಫಿಲಿಷ್ಟಿಯರ ಪಾಳೆಯದಿಂದ ಮಹಾ ಪರಾಕ್ರಮಿಯೊಬ್ಬನು ಹೊರಬಂದನು. ಅವನು ಗತ್ ಊರಿನವನು. ಅವನ ಹೆಸರು ಗೊಲ್ಯಾತ್. ಅವನ ಎತ್ತರ ಸುಮಾರು ಮೂರು ಮೀಟರ್.
ಅವನು ಧರಿಸಿದ್ದು ಕಂಚಿನ ಶಿರಸ್ತ್ರಾಣ. ಅದೇ ಲೋಹದ ಬಿಲ್ಲೆಗಳಿಂದ ಪರೆಪರೆಯಾಗಿ ಜೋಡಿಸಲಾಗಿದ್ದ ಅವನ ಕವಚ ಸುಮಾರು ಐವತ್ತೇಳು ಕಿಲೋಗ್ರಾಮಿನಷ್ಟು ತೂಕವಾಗಿತ್ತು.
ಅವನ ಪಾದರಕ್ಷೆಗಳು ಹಾಗು ಹೆಗಲ ಮೇಲಿನ ಈಟಿ ಕಂಚಿನದಾಗಿದ್ದವು.
ಅವನ ಬರ್ಜಿಯ ಕೋಲು ನೆಯ್ಗೆಗಾರರ ಕುಂಟೆಯಷ್ಟು ಗಾತ್ರದಾಗಿತ್ತು. ಅದರ ಅಲಗು ಏಳು ಕಿಲೋಗ್ರಾಮಿನಷ್ಟು ಭಾರವಾಗಿತ್ತು. ಅವನ ಗುರಾಣಿಯನ್ನು ಹೊರುವವನು ಅವನ ಮುಂದೆ ಮುಂದೆ ಹೋಗುತ್ತಿದ್ದನು.
ಗೊಲ್ಯಾತನು ಅಲ್ಲೆ ನಿಂತು, ಇಸ್ರಯೇಲರ ಸೈನ್ಯದತ್ತ ಹೀಗೆಂದು ಗರ್ಜಿಸಿದನು: “ನೀವು ಸಜ್ಜಾಗಿ ಬಂದಿರುವುದು ಯುದ್ಧಮಾಡಲಿಕ್ಕೋ? ನಾನು ಫಿಲಿಷ್ಟಿಯನು. ನೀವು ಆ ಸೌಲನ ಗುಲಾಮರು. ನಿಮ್ಮಲ್ಲಿ ಒಬ್ಬನನ್ನು ಆರಿಸಿಕೊಂಡು ನನ್ನ ಬಳಿಗೆ ಕಳುಹಿಸಿ.
ಅವನು ನನ್ನೊಡನೆ ಯುದ್ಧಮಾಡಿ ನನ್ನನ್ನು ಕೊಲ್ಲಲಿ; ಆಗ ನಮ್ಮವರು ನಿಮ್ಮ ಗುಲಾಮರಾಗುವರು. ನಾನು ಅವನನ್ನು ಸೋಲಿಸಿ ಕೊಂದರೆ ನೀವು ನಮಗೆ ಗುಲಾಮರಾಗಿ ನಮಗೆ ಸೇವೆಮಾಡಬೇಕು.”
೧೦
ಅದೂ ಅಲ್ಲದೆ ಆ ಫಿಲಿಷ್ಟಿಯನು, “ಇಸ್ರಯೇಲ್ ಸೈನಿಕರಿಗೆ ನಾನು ಇದೀಗಲೇ ಹಾಕುವ ಸವಾಲು: ಇಂದು ನನ್ನೊಡನೆ ಕಾಳಗಕ್ಕೆ ನಿಮ್ಮಿಂದ ಒಬ್ಬನನ್ನು ಆಯ್ದು ಕಳುಹಿಸಿ, ನೋಡೋಣ,” ಎಂದು ಕೊಚ್ಚಿಕೊಂಡನು.
೧೧
ಸೌಲನು ಹಾಗು ಇಸ್ರಯೇಲರೆಲ್ಲರು ಅವನ ಸವಾಲನ್ನು ಕೇಳಿ ಭಯಭೀತರಾದರು. ಅವರ ಎದೆ ಅದುರಿತು.
೧೨
ದಾವೀದನು ಜೆಸ್ಸೆಯ ಎಂಬವನ ಮಗ. ಜೆಸ್ಸೆಯ ಯೆಹೂದದ ಬೆತ್ಲೆಹೇಮ್ ಊರಿನ ಎಫ್ರಾತ್ಯನು. ಸೌಲನ ಕಾಲದಲ್ಲಿ ಹಣ್ಣುಹಣ್ಣು ಮುದುಕ. ಇವನ ಎಂಟುಮಂದಿ ಮಕ್ಕಳಲ್ಲಿ ದಾವೀದನು ಒಬ್ಬ.
೧೩
ಇವನ ಮೂರು ಮಂದಿ ಹಿರಿಯ ಮಕ್ಕಳು ಸೌಲನ ಜೊತೆ ಯುದ್ಧಕ್ಕೆ ಹೋಗಿದ್ದರು. ಅವರಲ್ಲಿ ಚೊಚ್ಚಲ ಮಗನ ಹೆಸರು ಎಲೀಯಾಬ್; ಎರಡನೆಯವನ ಹೆಸರು ಅಬೀನಾದಾಬ್; ಮೂರನೆಯವನು ಶಮ್ಮ.
೧೪
ದಾವೀದನೆ ಎಲ್ಲರಿಗಿಂತ ಕಿರಿಯವನು. ಮೂರು ಮಂದಿ ಹಿರಿಯ ಮಕ್ಕಳು ಸೌಲನೊಂದಿಗೆ ಯುದ್ಧಕ್ಕೆ ಹೋಗಿದ್ದುದರಿಂದ
೧೫
ದಾವೀದನು ಸೌಲನನ್ನು ಬಿಟ್ಟು ತನ್ನ ತಂದೆಯ ಕುರಿಗಳನ್ನು ಮೇಯಿಸುವುದಕ್ಕೆ ಬೆತ್ಲೆಹೇಮಿಗೆ ಹೋದನು.
೧೬
ಆ ಫಿಲಿಷ್ಟಿಯನು ನಾಲ್ವತ್ತು ದಿನ, ಬೆಳಿಗ್ಗೆ ಸಂಜೆ, ಒಂದೇ ಸಮನೆ ಸವಾಲು ಹಾಕುತ್ತಾ ಇದ್ದನು.
೧೭
ಒಂದು ದಿನ ಜೆಸ್ಸೆಯನು ತನ್ನ ಮಗ ದಾವೀದನಿಗೆ, “ನೋಡು, ಇಲ್ಲಿ ಹತ್ತು ಕಿಲೋಗ್ರಾಂ ಹುರಿಗಾಳು, ಹತ್ತು ರೊಟ್ಟಿ ಇವೆ. ಇವುಗಳನ್ನು ತೆಗೆದುಕೊಂಡು ಬೇಗನೆ ಪಾಳೆಯಕ್ಕೆ ಹೋಗಿ ನಿನ್ನ ಅಣ್ಣಂದಿರಿಗೆ ಕೊಟ್ಟು ಬಾ.
೧೮
ಇಲ್ಲಿ ಹತ್ತು ಗಿಣ್ಣಿನ ಉಂಡೆಗಳೂ ಇವೆ. ಇವುಗಳನ್ನು ಅವರ ಸಹಸ್ರಾಧಿಪತಿಗೆ ಕೊಡು. ಬರುವಾಗ ನಿನ್ನ ಅಣ್ಣಂದಿರ ಕ್ಷೇಮಸಮಾಚಾರವನ್ನು ವಿಚಾರಿಸಿಕೊಂಡು, ಅವರಿಂದ ಒಂದು ಗುರುತನ್ನು ತೆಗೆದುಕೊಂಡು ಬಾ.
೧೯
ಸೌಲನೂ ಇಸ್ರಯೇಲರೂ ಏಲಾ ಕಣಿವೆಯಲ್ಲಿ ಫಿಲಿಷ್ಟಿಯರೊಡನೆ ಯುದ್ಧ ಮಾಡುತ್ತಿದ್ದಾರಲ್ಲವೆ?” ಎಂದು ಹೇಳಿದನು.
೨೦
ದಾವೀದನು ಮರುದಿನ ಬೆಳಿಗ್ಗೆ ಎದ್ದು ಕುರಿಗಾಹಿಗೆ ಕುರಿಗಳನ್ನು ಒಪ್ಪಿಸಿ, ತನ್ನ ತಂದೆ ಜೆಸ್ಸೆಯನು ಹೇಳಿದವುಗಳನ್ನು ತೆಗೆದುಕೊಂಡು ಪಾಳೆಯದ ಬಂಡಿಗಳು ನಿಂತಿದ್ದ ಸ್ಥಳಕ್ಕೆ ಬಂದನು. ಸೈನ್ಯಗಳು ಯುದ್ಧಘೋಷಣೆಗಳನ್ನು ಹಾಕುವ ಸಮಯ ಅದು.
೨೧
ಇಸ್ರಯೇಲರೂ ಫಿಲಿಷ್ಟಿಯರೂ ಎದುರುಬದುರಾಗಿ ವ್ಯೂಹಕಟ್ಟುತ್ತಿದ್ದರು.
೨೨
ಅಷ್ಟರಲ್ಲಿ ದಾವೀದನು ತಾನು ತಂದವುಗಳನ್ನೂ ಆಹಾರಪದಾರ್ಥಗಳನ್ನೂ ಕಾಯುವವನ ಬಳಿಯಲ್ಲಿಟ್ಟು ರಣರಂಗಕ್ಕೆ ಓಡಿದನು. ತನ್ನ ಸಹೋದರರ ಯೋಗಕ್ಷೇಮ ವಿಚಾರಿಸಿದನು.
೨೩
ಅವರೊಡನೆ ಮಾತಾಡುತ್ತಿರುವಾಗಲೇ ಗತ್ ಊರಿನ ರಣವೀರನಾದ ಗೊಲ್ಯಾತನೆಂಬ ಆ ಫಿಲಿಷ್ಟಿಯನು ತನ್ನ ಸೈನ್ಯದಿಂದ ಹೊರಗೆ ಬಂದನು. ಎಂದಿನಂತೆ ಯುದ್ಧ ಸವಾಲನ್ನು ಘೋಷಿಸಿದನು. ದಾವೀದನು ಅವನ ಮಾತುಗಳನ್ನು ಕೇಳಿದನು.
೨೪
ಇಸ್ರಯೇಲರು ಅವನನ್ನು ನೋಡಿ ಭಯಭೀತಿಯಿಂದ ಓಡತೊಡಗಿದರು.
೨೫
“ನೋಡಿದಿರೋ, ಇಸ್ರಯೇಲರಾದ ನಮ್ಮನ್ನು ತೃಣೀಕರಿಸಲು ಬಂದಿರುವ ಈ ವ್ಯಕ್ತಿಯನ್ನು? ಇವನನ್ನು ಕೊಲ್ಲುವವನಿಗೆ ಅರಸ ಅಪಾರ ದ್ರವ್ಯಕೊಡುವರು; ತಮ್ಮ ಮಗಳನ್ನೇ ಕೊಟ್ಟು ಮದುವೆಮಾಡುವರು; ಅಲ್ಲದೆ ಅಂಥವನ ಕುಟುಂಬಕ್ಕೆ ಎಲ್ಲಾ ತೆರಿಗೆ ಕಂದಾಯದಿಂದ ವಿನಾಯಿತಿ ದೊರಕುವುದು,” ಎಂದು ಮಾತಾಡಿಕೊಳ್ಳುತ್ತಿದ್ದರು.
೨೬
ಆಗ ದಾವೀದನು ತನ್ನ ಬಳಿಯಲ್ಲೆ ನಿಂತಿದ್ದವರನ್ನು ನೋಡಿ, “ಜೀವಸ್ವರೂಪರಾದ ದೇವರ ಸೈನ್ಯವನ್ನು ಹೀಗೆ ಹಿಯ್ಯಾಳಿಸುವ, ಸುನ್ನತಿಯಿಲ್ಲದ ಈ ಫಿಲಿಷ್ಟಿಯನು ಎಷ್ಟರವನು? ಇವನನ್ನು ಕೊಂದು ಇಸ್ರಯೇಲರಿಗೆ ಬಂದಿರುವ ನಿಂದೆ ಅವಮಾನವನ್ನು ನೀಗಿಸುವವನಿಗೆ ಏನು ಸಿಕ್ಕುವುದೆಂದು ಹೇಳಿದಿರಿ?” ಎಂದು ಕೇಳಿದನು.
೨೭
ಅವರು ಮುಂದಿನಂತೆಯೇ ಇಂಥಿಂಥದ್ದು ದೊರಕುವುದೆಂದು ಉತ್ತರಕೊಟ್ಟರು.
೨೮
ದಾವೀದನು ಜನರ ಸಂಗಡ ಹೀಗೆ ಮಾತಾಡುವುದನ್ನು ಅವನ ಹಿರಿಯ ಅಣ್ಣ ಎಲೀಯಾಬನು ಕೇಳಿದನು. ದಾವೀದನ ಮೇಲೆ ಅವನು ಸಿಟ್ಟುಗೊಂಡು, “ನೀನು ಇಲ್ಲಿಗೆ ಬಂದುದೇಕೆ? ಅಡವಿಯಲ್ಲಿರುವ ನಾಲ್ಕಾರು ಕುರಿಗಳನ್ನು ಯಾರಿಗೊಪ್ಪಿಸಿ ಬಂದೆ? ನಿನ್ನ ಸೊಕ್ಕು, ತುಂಟತನ ನನಗೆ ಗೊತ್ತಿದೆ. ನೀನು ಕದನ-ಕುಚೇಷ್ಟೆ ನೋಡಬಂದಿರುವೆಯಷ್ಟೇ,” ಎಂದು ಗದರಿಸಿದನು.
೨೯
ದಾವೀದನು, “ನಾನೇನು ತಪ್ಪು ಮಾಡಿದೆ? ಪ್ರಶ್ನೆಯೊಂದನ್ನು ಕೇಳಬಾರದಿತ್ತೆ?” ಎಂದು ಹೇಳಿ ಅವನನ್ನು ಬಿಟ್ಟು ಬೇರೆ ಕಡೆಗೆ ಹೋದನು.
೩೦
ಅಲ್ಲೂ ಹಾಗೆಯೇ ವಿಚಾರಿಸಿದನು. ಜನರು ಮುಂದಿನಂತೆಯೇ ಉತ್ತರಕೊಟ್ಟರು.
೩೧
ದಾವೀದನು ಈ ಪ್ರಕಾರ ವಿಚಾರಿಸುತ್ತಿದ್ದಾನೆಂಬ ಸಮಾಚಾರವನ್ನು ಸೌಲನಿಗೆ ಮುಟ್ಟಿಸಿದರು. ಸೌಲನು ದಾವೀದನನ್ನು ಕರೆಯಿಸಿದನು.
೩೨
ದಾವೀದನು ಸೌಲನಿಗೆ, “ಆ ಫಿಲಿಷ್ಟಿಯನ ನಿಮಿತ್ತ ಯಾರೂ ಎದೆಗೆಡಬೇಕಾಗಿಲ್ಲ. ತಮ್ಮ ಸೇವಕನಾದ ನಾನೇ ಹೋಗಿ ಅವನೊಡನೆ ಯುದ್ಧಮಾಡುತ್ತೇನೆ,” ಎಂದು ಹೇಳಿದನು.
೩೩
ಅದಕ್ಕೆ ಸೌಲನು, “ಅವನೊಡನೆ ಕಾದಾಡಲು ನಿನ್ನಿಂದ ಆಗದು; ನೀನು ಇನ್ನೂ ಹುಡುಗ. ಅವನಾದರೋ ಚಿಕ್ಕಂದಿನಿಂದಲೆ ಯುದ್ಧವೀರ,” ಎಂದು ಹೇಳಿದನು.
೩೪
ಆಗ ದಾವೀದನು, “ತಮ್ಮ ಸೇವಕನಾದ ನಾನು ನನ್ನ ತಂದೆಯ ಕುರಿಗಳನ್ನು ಕಾಯುತ್ತಿದ್ದಾಗ ಸಿಂಹವಾಗಲಿ ಅಥವಾ ಕರಡಿಯಾಗಲಿ ಬಂದು ಹಿಂಡಿನಲ್ಲಿನ ಕುರಿಮರಿಯನ್ನು ಹಿಡಿದುಕೊಂಡು ಹೋಗುವಾಗ
೩೫
ನಾನು ಒಡನೆ ಬೆನ್ನಟ್ಟಿ ಹೋಗುತ್ತಿದ್ದೆ; ಆ ಕಾಡುಮೃಗವನ್ನು ಹೊಡೆದು ಕುರಿಮರಿಯನ್ನು ಕಿತ್ತುಕೊಳ್ಳುತ್ತಿದ್ದೆ. ಅದು ಹಿಂದಿರುಗಿ ನನ್ನ ಮೇಲೆ ಬಿದ್ದಾಗ ಅದನ್ನು ಗಡ್ಡ ಹಿಡಿದು, ಬಡಿದು, ಕೊಂದುಹಾಕುತ್ತಿದ್ದೆ.
೩೬
ನಿಮ್ಮ ಸೇವಕನಾದ ನನ್ನಿಂದ ಆ ಸಿಂಹಕ್ಕೂ ಕರಡಿಗೂ ಆದ ಗತಿಯೇ ಈ ಸುನ್ನತಿಯಿಲ್ಲದ ಫಿಲಿಷ್ಟಿಯನಿಗೂ ಆಗಬೇಕು; ಏಕೆಂದರೆ ಜೀವಸ್ವರೂಪರಾದ ದೇವರ ಸೈನ್ಯವನ್ನು ನಿಂದಿಸುತ್ತಿದ್ದಾನೆ.
೩೭
ನನ್ನನ್ನು ಅಂಥ ಕರಡಿ-ಸಿಂಹಗಳ ಉಗುರುಗಳಿಂದ ತಪ್ಪಿಸಿದ ಸರ್ವೇಶ್ವರ ಈ ಫಿಲಿಷ್ಟಿಯನ ಕೈಯಿಂದಲೂ ತಪ್ಪಿಸುವರು,” ಎಂದು ಹೇಳಿದನು. ಅದಕ್ಕೆ ಸೌಲನು, “ಹೋಗು, ಸರ್ವೇಶ್ವರ ನಿನ್ನೊಂದಿಗೆ ಇರಲಿ!” ಎಂದನು.
೩೮
ಅದು ಮಾತ್ರವಲ್ಲ, ತನ್ನ ಯುದ್ಧವಸ್ತ್ರಗಳನ್ನೂ ಕವಚವನ್ನೂ ಅವನಿಗೆ ತೊಡಿಸಿದನು. ಅವನ ತಲೆಯ ಮೇಲೆ ಕಂಚಿನ ಶಿರಸ್ತ್ರಾಣವನ್ನೂ ಇಟ್ಟನು.
೩೯
ದಾವೀದನು ಯುದ್ಧವಸ್ತ್ರವನ್ನು ಧರಿಸಿಕೊಂಡು, ಅದರ ಮೇಲೆ ಕತ್ತಿಯನ್ನು ಬಿಗಿದುಕೊಂಡು, ನಡೆದು ನೋಡಲಾರಂಭಿಸಿದನು. ರೂಢಿಯಿಲ್ಲದ ಕಾರಣ ಅವನು ಸೌಲನಿಗೆ, “ನನಗೆ ಅಭ್ಯಾಸವಿಲ್ಲ. ಇವುಗಳನ್ನು ಧರಿಸಿಕೊಂಡು ನಡೆಯಲಾರೆ,” ಎಂದು ಹೇಳಿ ಅವುಗಳನ್ನು ತೆಗೆದಿಟ್ಟನು.
೪೦
ಕುರಿಕಾಯುವ ತನ್ನ ಕೋಲನ್ನೇ ತೆಗೆದುಕೊಂಡು ಹೊರಟನು. ಒಂದು ಹಳ್ಳಕ್ಕೆ ಹೋಗಿ ಐದು ನುಣುಪು ಕಲ್ಲುಗಳನ್ನು ಆರಿಸಿಕೊಂಡನು. ಕುರುಬರ ಪದ್ಧತಿಯಂತೆ ಅವುಗಳನ್ನು ತನ್ನ ಸೊಂಟಚೀಲದಲ್ಲಿ ಹಾಕಿಕೊಂಡನು. ಕೈಯಲ್ಲಿ ಕವಣೆಯನ್ನು ಹಿಡಿದು, ಆ ಫಿಲಿಷ್ಟಿಯನನ್ನು ಎದುರಿಸಲು ಹೋದನು.
೪೧
ಇತ್ತ ಫಿಲಿಷ್ಟಿಯನು ದಾವೀದನ ಕಡೆ ಧಾವಿಸಿ ಬಂದನು. ಗುರಾಣಿ ಹೊರುವವನು ಅವನ ಮುಂದೆ ಇದ್ದನು.
೪೨
ಫಿಲಿಷ್ಟಿಯನು ದಾವೀದನನ್ನು ಸಮೀಪಿಸಿ ನೋಡಿದನು. ಕೆಂಬಣ್ಣದವನೂ ಸುಂದರನೂ ಆದ ಆ ಯುವಕನ್ನು ದಿಟ್ಟಿಸಿ ತಾತ್ಸಾರದಿಂದ,
೪೩
“ನೀನು ಕೋಲುಹಿಡಿದು ನನ್ನ ಬಳಿಗೆ ಬರಲು ನಾನು ನಾಯಿಯೆಂದು ತಿಳಿದುಕೊಂಡೆಯಾ?” ಎಂದು ಹೇಳಿ ಅವನನ್ನು ತನ್ನ ದೇವರ ಹೆಸರಿನಲ್ಲಿ ಶಪಿಸಿದನು.
೪೪
“ಇಲ್ಲಿ ಬಾ; ನಿನ್ನ ಮಾಂಸವನ್ನು ಆಕಾಶದ ಪಕ್ಷಿಗಳಿಗೆ, ಕಾಡಿನ ಮೃಗಗಳಿಗೆ ಹಂಚಿಕೊಡುತ್ತೇನೆ,” ಎಂದನು.
೪೫
ಅದಕ್ಕೆ ದಾವೀದನು, “ನೀನು ಈಟಿ, ಕತ್ತಿ, ಭರ್ಜಿಗಳೊಡನೆ ನನ್ನ ಬಳಿಗೆ ಬರುತ್ತಿರುವೆ; ನೀನು ಹೀಯಾಳಿಸಿದ ಸೇನಾಧೀಶ್ವರರು ಹಾಗು ಇಸ್ರಯೇಲ್ ಯೋಧರ ದೇವರು ಆದಂಥ ಸರ್ವೇಶ್ವರನ ನಾಮದೊಡನೆ ನಾನು ನಿನ್ನ ಬಳಿಗೆ ಬರುತ್ತಿದ್ದೇನೆ.
೪೬
ಅವರು ಈ ದಿನ ನಿನ್ನನ್ನು ನನ್ನ ಕೈಗೆ ಒಪ್ಪಿಸಿಕೊಡುವರು. ನಾನು ನಿನ್ನನ್ನು ಕೊಂದು, ನಿನ್ನ ತಲೆಯನ್ನು ಕಡಿದು, ಫಿಲಿಷ್ಟಿಯ ಸೈನ್ಯದ ಶವಗಳನ್ನು ಆಕಾಶದ ಪಕ್ಷಿಗಳಿಗೂ ವನ್ಯಮೃಗಗಳಿಗೂ ಹಂಚಿಕೊಡುವೆನು. ಇದರಿಂದ ಇಸ್ರಯೇಲರ ಸಂಗಡ ದೇವರಿದ್ದಾರೆಂಬುದು ಜಗತ್ತಿಗೆಲ್ಲಾ ತಿಳಿದುಬರುವುದು.
೪೭
ಈಟಿ, ಕತ್ತಿಗಳಿಲ್ಲದೆ ಸರ್ವೇಶ್ವರ ರಕ್ಷಿಸಬಲ್ಲನೆಂಬುದು ಇಲ್ಲಿ ಕೂಡಿರುವವರೆಲ್ಲರಿಗೆ ಗೊತ್ತಾಗುವುದು. ಏಕೆಂದರೆ ಸಮರದ ಪರಿಣಾಮ ಇರುವುದು ಸರ್ವೇಶ್ವರನ ಕೈಯಲ್ಲಿ; ಅವರು ತಪ್ಪದೆ ನಿಮ್ಮನ್ನು ನಮ್ಮ ಕೈಗೆ ಒಪ್ಪಿಸಿಕೊಡುವರು,” ಎಂದನು.
೪೮
ಕೂಡಲೆ ಆ ಫಿಲಿಷ್ಟಿಯನು ದಾವೀದನ ಮೇಲೆ ಎರಗಲು ಮತ್ತೆ ಧಾವಿಸಿದನು. ದಾವೀದನೂ ಫಿಲಿಷ್ಟಿಯರ ಸೈನ್ಯದ ಕಡೆಗೆ ನುಗ್ಗಿ ಆ ಫಿಲಿಷ್ಟಿಯನನ್ನು ಎದುರುಗೊಳ್ಳಲು ಓಡಿದನು.
೪೯
ಕೈಯನ್ನು ಚೀಲದಲ್ಲಿ ಹಾಕಿ, ಒಂದು ಕಲ್ಲನ್ನು ತೆಗೆದು, ಅವನ ಕಣ್ಣಿಗೆ ಗುರಿಯಿಟ್ಟು, ಕವಣೆಯನ್ನು ಬೀಸಿ ಹೊಡೆದನು. ಆ ಕಲ್ಲು ಅವನ ಹಣೆಯನ್ನು ಹೊಕ್ಕಿತು. ಅವನು ಮುಖಕೆಳಗಾಗಿ ನೆಲಕ್ಕೆ ಉರುಳಿದನು.
೫೦
ಕೂಡಲೆ ದಾವೀದನು ಹೋಗಿ ಆ ಫಿಲಿಷ್ಟಿಯನ ಮೇಲೆ ನಿಂತು, ಅವನ ಕತ್ತಿಯನ್ನೇ ಹಿರಿದು, ಅವನ ತಲೆಯನ್ನು ಕಡಿದು ಸಾಯಿಸಿದನು.
೫೧
ಹೀಗೆ ದಾವೀದನು ಕತ್ತಿಯಿಂದಲ್ಲ, ಬರೀ ಒಂದು ಕವಣೆಕಲ್ಲಿನಿಂದ ಆ ಫಿಲಿಷ್ಟಿಯನನ್ನು ಸೋಲಿಸಿ ಕೊಂದುಹಾಕಿದನು. ತಮ್ಮ ರಣವೀರನು ಸತ್ತುಹೋದದ್ದನ್ನು ಕಂಡು ಫಿಲಿಷ್ಟಿಯರು ಓಡಿಹೋದರು.
೫೨
ಇಸ್ರಯೇಲರೂ ಯೆಹೂದ್ಯರೂ ಎದ್ದು ಆರ್ಭಟಿಸಿ ಫಿಲಿಷ್ಟಿಯರನ್ನು ಕಣಿವೆಯ ದಾರಿಯವರೆಗೂ ಎಕ್ರೋನಿನ ಬಾಗಿಲುಗಳವರೆಗೂ ಹಿಂದಟ್ಟಿದರು. ಫಿಲಿಷ್ಟಿಯರ ಹೆಣಗಳು ಶಾರಯಿಮಿನಿಂದ ಗತ್, ಎಕ್ರೋನ್ ಪಟ್ಟಣಗಳವರೆಗೂ ಬಿದ್ದಿದ್ದವು.
೫೩
ಅನಂತರ ಇಸ್ರಯೇಲರು ಹಿಂದಿರುಗಿ ಬಂದು, ಫಿಲಿಷ್ಟಿಯರ ಪಾಳೆಯವನ್ನು ಸೂರೆಮಾಡಿದರು.
೫೪
ದಾವೀದನು ಆ ಫಿಲಿಷ್ಟಿಯನ ತಲೆಯನ್ನು ಜೆರುಸಲೇಮಿಗೆ ಒಯ್ದನು. ಅವನ ಆಯುಧಗಳನ್ನು ತನ್ನ ಗುಡಾರದಲ್ಲೇ ಇಟ್ಟುಕೊಂಡನು.
೫೫
ದಾವೀದನು ಆ ಫಿಲಿಷ್ಟಿಯನೊಡನೆ ಯುದ್ಧಮಾಡಲು ಹೊರಟಿದ್ದನ್ನು ಸೌಲನು ನೋಡಿದನು. ತನ್ನ ಸೇನಾಪತಿಯಾದ ಅಬ್ನೇರನನ್ನು ಉದ್ದೇಶಿಸಿ, “ಅಬ್ನೇರನೇ, ಈ ತರುಣ ಯಾರ ಮಗ?” ಎಂದು ವಿಚಾರಿಸಿದನು. ಅದಕ್ಕೆ ಅಬ್ನೇರನು, “ಅರಸರೇ, ತಮ್ಮ ಜೀವದಾಣೆ, ನನಗೆ ಗೊತ್ತಿಲ್ಲ,” ಎಂದು ಉತ್ತರಕೊಟ್ಟನು.
೫೬
ಆಗ ಅರಸನು ಅವನಿಗೆ, “ಈ ಯುವಕ ಯಾರ ಮಗನೆಂದು ವಿಚಾರಿಸು,” ಎಂದು ಆಜ್ಞಾಪಿಸಿದನು.
೫೭
ದಾವೀದನು ಫಿಲಿಷ್ಟಿಯನನ್ನು ಕೊಂದು ಅವನ ತಲೆಯನ್ನು ಹಿಡಿದುಕೊಂಡು ಹಿಂದಿರುಗಿ ಬರುವಾಗ, ಅಬ್ನೇರನು ಅವನನ್ನು ಕರೆದು, ಸೌಲನ ಮುಂದೆ ನಿಲ್ಲಿಸಿದನು.
೫೮
ಸೌಲನು ಅವನನ್ನು, “ತರುಣನೇ, ನೀನು ಯಾರ ಮಗ?” ಎಂದು ಕೇಳಿದನು. ಅದಕ್ಕೆ ಅವನು, “ನಾನು ಬೆತ್ಲೆಹೇಮಿನವನೂ ನಿಮ್ಮ ಸೇವಕನೂ ಆದ ಜೆಸ್ಸೆಯನ ಮಗ,” ಎಂದು ಉತ್ತರಿಸಿದನು.