೧ |
ಸಮುವೇಲನು ಸೌಲನಿಗೆ, “ಸರ್ವೇಶ್ವರಸ್ವಾಮಿ ನಿನ್ನನ್ನು ತಮ್ಮ ಪ್ರಜೆಗಳಾದ ಇಸ್ರಯೇಲರ ಮೇಲೆ ಅರಸನನ್ನಾಗಿ ಅಭಿಷೇಕಿಸುವುದಕ್ಕಾಗಿ ನನ್ನನ್ನೇ ಕಳುಹಿಸಿದರು ಅಲ್ಲವೆ?” ಅವರು ಈಗ ಹೇಳುವುದನ್ನು ಕೇಳು; |
೨ |
“ಇಸ್ರಯೇಲರು ಈಜಿಪ್ಟಿನಿಂದ ಬರುತ್ತಿರುವಾಗ ದಾರಿಯಲ್ಲಿ ಅಮಾಲೇಕ್ಯರು ಅವರಿಗೆ ವಿರೋಧವಾಗಿ ನಿಂತು ತೊಂದರೆಪಡಿಸಿದರು. ಆದ್ದರಿಂದ ನಾನು ಅವರಿಗೆ ಮುಯ್ಯಿತೀರಿಸುವೆನು. |
೩ |
ಈಗ ನೀನು ಹೋಗಿ ಅವರನ್ನು ಸೋಲಿಸಿ ಅವರಿಗಿರುವುದನ್ನೆಲ್ಲಾ ಸಂಪೂರ್ಣವಾಗಿ ಹಾಳುಮಾಡು. ಗಂಡಸರನ್ನು, ಹೆಂಗಸರನ್ನು, ಮಕ್ಕಳನ್ನು, ಶಿಶುಗಳನ್ನು ಹಾಗು ಎತ್ತು, ಕುರಿ, ಕತ್ತೆ, ಒಂಟೆ ಇವುಗಳನ್ನೂ ಉಳಿಸದೆ ಕೊಂದುಹಾಕು ಎಂದು ಹೇಳುತ್ತಾರೆ ಸೇನಾಧೀಶ್ವರರಾದ ಸರ್ವೇಶ್ವರ,” ಎಂದನು. |
೪ |
ಸೌಲನು ತೆಲಾಯೀಮಿನಲ್ಲಿ ಸೈನ್ಯವನ್ನು ಕೂಡಿಸಿ, ಲೆಕ್ಕ ತೆಗೆದನು. ಅದರಲ್ಲಿ ಎರಡು ಲಕ್ಷಮಂದಿ ಕಾಲಾಳುಗಳು ಇದ್ದರು; ಯೆಹೂದ್ಯರು ಹತ್ತುಸಾವಿರ ಮಂದಿ ಇದ್ದರು. |
೫ |
ಅವನು ಇವರೊಡನೆ ಅಮಾಲೇಕ್ಯರ ರಾಜಧಾನಿಯ ಬಳಿಗೇ ಹೋಗಿ ಅಲ್ಲಿನ ಒಂದು ತಗ್ಗಿನಲ್ಲಿ ಹೊಂಚುಹಾಕುತ್ತಿದ್ದನು. |
೬ |
ಆದರೆ ಕೇನ್ಯರಿಗೆ ಅವನು, “ನೀವು ಅಮಾಲೇಕ್ಯರನ್ನು ಬಿಟ್ಟುಹೋಗಿ; ಇಲ್ಲವಾದರೆ ನೀವೂ ಅವರೊಡನೆ ನಾಶವಾದೀರಿ; ಇಸ್ರಯೇಲರು ಈಜಿಪ್ಟಿನಿಂದ ಬರುತ್ತಿದ್ದಾಗ ನೀವು ಅವರಿಗೆ ದಯೆತೋರಿಸಿದಿರ ಅಲ್ಲವೆ?” ಎಂದು ಹೇಳಿ ಕಳುಹಿಸಿದನು. ಅದರಂತೆಯೇ ಅವರು ಅಮಾಲೇಕ್ಯರನ್ನು ಬಿಟ್ಟುಹೋದರು. |
೭ |
ಆಗ ಸೌಲನು ಅಮಾಲೇಕ್ಯರನ್ನು ಹವೀಲಾ ಪ್ರಾಂತ್ಯದಿಂದ ಈಜಿಪ್ಟಿನ ಪೂರ್ವದಿಕ್ಕಿನಲ್ಲಿರುವ ಶೂರಿನವರೆಗೂ ಸದೆಬಡಿಯುತ್ತಾ ಹೋದನು. |
೮ |
ಅವರ ಅರಸನಾದ ಅಗಾಗನನ್ನು ಜೀವಂತವಾಗಿ ಹಿಡಿದು ಜನರೆಲ್ಲರನ್ನು ಕತ್ತಿಯಿಂದ ಸಂಹರಿಸಿದನು. |
೯ |
ಸೌಲನು ಹಾಗು ಇಸ್ರಯೇಲರು ಅಗಾಗನನ್ನು ಮಾತ್ರವಲ್ಲ, ಮೇಲ್ತರದ ಕುರಿದನಗಳನ್ನು, ಕುರಿಮರಿಗಳನ್ನು, ಕೊಬ್ಬಿದ ಪಶುಗಳನ್ನು ಹಾಗು ಶ್ರೇಷ್ಠವಾದ ಎಲ್ಲ ಪದಾರ್ಥಗಳನ್ನು ನಾಶಮಾಡಲು ಮನಸ್ಸಿಲ್ಲದೆ ಉಳಿಸಿ ಪ್ರಯೋಜನವಿಲ್ಲದಂಥ ಹೀನವಾದವುಗಳನ್ನೆಲ್ಲ ನಾಶಮಾಡಿಬಿಟ್ಟರು. |
೧೦ |
ಸರ್ವೇಶ್ವರ ಸಮುವೇಲನಿಗೆ, “ಸೌಲನನ್ನು ಅರಸನನ್ನಾಗಿ ಮಾಡಿದ್ದಕ್ಕೆ ಈಗ ವಿಷಾದಿಸುತ್ತೇನೆ. ಅವನು ನನಗೆ ವಿಮುಖನಾಗಿದ್ದಾನೆ. ನನ್ನ ಆಜ್ಞೆಗಳನ್ನು ನೆರವೇರಿಸುವುದಿಲ್ಲ,” ಎಂದು ಹೇಳಿದರು. ಸಮುವೇಲನು ಸಿಟ್ಟುಗೊಂಡು ರಾತ್ರಿಯೆಲ್ಲಾ ಸರ್ವೇಶ್ವರನಿಗೆ ಮೊರೆಯಿಟ್ಟನು. |
೧೧ |
*** |
೧೨ |
ಬೆಳಿಗ್ಗೆ ಎದ್ದು ಸೌಲನನ್ನು ಕರ್ಮೆಲಿಗೆ ಹೋಗಿ ಅಲ್ಲಿ ತನಗಾಗಿ ಒಂದು ಜ್ಞಾಪಕಸ್ತಂಭವನ್ನು ನಿಲ್ಲಿಸಿ, ಅಲ್ಲಿಂದ ದಿಬ್ಬ ಇಳಿದು ಗಿಲ್ಗಾಲಿಗೆ ಹೋದನು ಎಂಬ ಸಮಾಚಾರ ಸಿಕ್ಕಿತು. |
೧೩ |
ಸಮುವೇಲನು ಅಲ್ಲಿಗೂ ಹೋದನು. ಸೌಲನು ಅವನನ್ನು ಕಂಡು, “ಸರ್ವೇಶ್ವರ ನಿನ್ನನ್ನು ಹರಸಲಿ! ನಾನು ಅವರ ಅಪ್ಪಣೆಯನ್ನು ನೆರವೇರಿಸಿದ್ದೇನೆ,” ಎಂದನು. |
೧೪ |
ಅದಕ್ಕೆ ಸಮುವೇಲನು, “ಹಾಗಾದರೆ ಇದೇನು? ಕುರಿಗಳ ಕೂಗು ನನ್ನ ಕಿವಿಗೆ ಬೀಳುತ್ತಿದೆ, ದನಗಳ ಶಬ್ದವು ನನಗೆ ಕೇಳಿಸುತ್ತಿದೆ,” ಎಂದನು. |
೧೫ |
ಸೌಲನು, “ಜನರು ನಿಮ್ಮ ದೇವರಾದ ಸರ್ವೇಶ್ವರನಿಗೆ ಬಲಿಸಲ್ಲಿಸುವುದಕ್ಕಾಗಿ ಅಮಾಲೇಕ್ಯರ ಕುರಿದನಗಳಲ್ಲಿ ಮೇಲ್ತರದವುಗಳನ್ನು ಉಳಿಸಿ ತಂದಿದ್ದಾರೆ; ಮಿಕ್ಕವುಗಳನ್ನೆಲ್ಲಾ ಸಂಪೂರ್ಣವಾಗಿ ನಾಶಮಾಡಿದೆವು,” ಎಂದು ಉತ್ತರಕೊಟ್ಟನು. |
೧೬ |
ಆಗ ಸಮುವೇಲನು, “ಅದಿರಲಿ; ಸರ್ವೇಶ್ವರ ಕಳೆದ ರಾತ್ರಿ ನನಗೆ ಹೇಳಿದ್ದನ್ನು ತಿಳಿಸುತ್ತೇನೆ ಕೇಳು,” ಎಂದನು. ಅವನು, “ಹೇಳು,” ಎನ್ನಲು ಸಮುವೇಲನು, |
೧೭ |
“ನೀನು ನಿನ್ನ ದೃಷ್ಟಿಯಲ್ಲಿ ಅಲ್ಪನಾಗಿದ್ದರೂ ಸರ್ವೇಶ್ವರ ನಿನಗೆ ಇಸ್ರಯೇಲರಲ್ಲಿ ರಾಜಾಭಿಷೇಕ ಮಾಡಿದ್ದರಿಂದ ನೀನು ಎಲ್ಲಾ ಕುಲಗಳಿಗೆ ಶಿರಸ್ಸಾದೆ. |
೧೮ |
ಅವರು ನಿನಗೆ, ‘ಹೊರಟು ಹೋಗಿ ದುಷ್ಟರಾದ ಅಮಾಲೇಕ್ಯರೊಡನೆ ಯುದ್ಧಮಾಡಿ ಅವರೆಲ್ಲರನ್ನೂ ಸಂಪೂರ್ಣವಾಗಿ ನಾಶಮಾಡು’ ಎಂದು ಹೇಳಿದರು. |
೧೯ |
ಆದರೆ ನೀನು ಸರ್ವೇಶ್ವರನ ಮಾತನ್ನು ಕೇಳದೆ, ಕೊಳ್ಳೆಗಾಗಿ ಮನಸೋತು, ಅವರಿಗೆ ದ್ರೋಹಮಾಡಿದ್ದೇಕೆ?” ಎಂದನು. |
೨೦ |
ಆಗ ಸೌಲನು ಸಮುವೇಲನಿಗೆ, “ಏನು? ನಾನು ಸರ್ವೇಶ್ವರನ ಮಾತನ್ನು ಕೇಳಲಿಲ್ಲವೇ? ಅವರು ಕಳುಹಿಸಿದಲ್ಲಿಗೆ ಹೋಗಿ ಅಮಾಲೇಕ್ಯರನ್ನೆಲ್ಲ ಸಂಹರಿಸಿ ಅವರ ಅರಸನಾದ ಅಗಾಗನನ್ನು ಹಿಡಿದದುತಂದೆ. |
೨೧ |
ಆದರೆ ಜನರು ಸಂಪೂರ್ಣವಾಗಿ ಸಂಹರಿಸಬೇಕಾದ ಕೊಳ್ಳೆಯಲ್ಲಿ ಉತ್ತಮವಾದ ಕುರಿದನಗಳನ್ನು ನಿಮ್ಮ ದೇವರಾದ ಸರ್ವೇಶ್ವರನಿಗೆ ಗಿಲ್ಗಾಲಿನಲ್ಲಿ ಬಲಿಯರ್ಪಣೆ ಮಾಡುವುದಕ್ಕಾಗಿ ಉಳಿಸಿತಂದರು,” ಎಂದು ಉತ್ತರಕೊಟ್ಟನು. |
೨೨ |
ಅದಕ್ಕೆ ಸಮುವೇಲನು ಇಂತೆಂದನು: “ವಿಧೇಯತೆಯನ್ನು ಮೆಚ್ಚುವಷ್ಟು ಬಲಿ ಹೋಮಗಳನ್ನು ಮೆಚ್ಚುತ್ತಾರೆಯೇ ಸರ್ವೇಶ್ವರಾ? ಇಲ್ಲ. ಬಲಿಯರ್ಪಣೆಗಿಂತ ಆಜ್ಞಾಪಾಲನೆ ಶ್ರೇಷ್ಠ; ಟಗರುಗಳ ಕೊಬ್ಬಿಗಿಂತ ವಿಧೇಯತೆ ವಿಶಿಷ್ಟ. |
೨೩ |
ತಂತ್ರಮಂತ್ರಗಳಷ್ಟೇ ಕೆಟ್ಟದು ಪ್ರತಿಭಟನೆ ಕಳ್ಳಭಕ್ತಿಗೂ ವಿಗ್ರಹಾರಾಧನೆಗೂ ಸಮಾನ ಹಟಮಾರಿತನ. ನೀ ತಳ್ಳಿಬಿಟ್ಟೆ ಸರ್ವೇಶ್ವರನ ಆದೇಶವನ್ನು; ತಳ್ಳಿಬಿಟ್ಟರವರು ನಿನ್ನ ಅರಸುತನವನ್ನು,” ಎಂದು ನುಡಿದನು. |
೨೪ |
ಸೌಲನು ಸಮುವೇಲನಿಗೆ, “ನಾನು ಸರ್ವೇಶ್ವರನ ಮತ್ತು ನಿಮ್ಮ ಆಜ್ಞೆಗಳನ್ನು ಮೀರಿ ಪಾಪಮಾಡಿದ್ದೇನೆ; ಜನರಿಗೆ ಹೆದರಿ ಅವರ ಮಾತನ್ನು ಕೇಳಿದೆ. |
೨೫ |
ದಯವಿಟ್ಟು ನನ್ನ ಪಾಪವನ್ನು ಕ್ಷಮಿಸಿ; ನಾನು ಸರ್ವೇಶ್ವರನನ್ನು ಆರಾಧಿಸುವಂತೆ ಹಿಂದಿರುಗಿ ನನ್ನ ಜೊತೆಯಲ್ಲೇ ಬನ್ನಿ,” ಎಂದು ಅವನನ್ನು ಬೇಡಿಕೊಂಡನು. |
೨೬ |
ಅದಕ್ಕೆ ಸಮುವೇಲನು, “ನಾನು ಹಿಂದಿರುಗಿ ನಿನ್ನ ಜೊತೆಯಲ್ಲಿ ಬರುವುದಿಲ್ಲ; ನೀನು ಸರ್ವೇಶ್ವರನ ಮಾತನ್ನು ತಳ್ಳಿಬಿಟ್ಟಿದ್ದರಿಂದ ಅವರು ನಿನ್ನನ್ನು ಇಸ್ರಯೇಲರ ಅರಸುತನದಿಂದ ತಳ್ಳಿಬಿಟ್ಟಿದ್ದಾರೆ,” ಎಂದು ಹೇಳಿ ಹಿಂದಿರುಗಿ ಅಲ್ಲಿಂದ ಹೊರಟನು. |
೨೭ |
ಆದರೆ ಸೌಲನು ಅವನ ಮೇಲಂಗಿಯ ಅಂಚನ್ನು ಹಿಡಿದು ಎಳೆದನು; ಅದು ಹರಿದುಹೋಯಿತು. |
೨೮ |
ಆಗ ಸಮುವೇಲನು ಅವನಿಗೆ, “ಸರ್ವೇಶ್ವರ ಈ ದಿನ ಇಸ್ರಯೇಲ್ ರಾಜ್ಯವನ್ನು ನಿನ್ನಿಂದ ಕಿತ್ತು ನಿನಗಿಂತ ಉತ್ತಮವಾದ ಇನ್ನೊಬ್ಬನಿಗೆ ಕೊಟ್ಟಿದ್ದಾರೆ. |
೨೯ |
ಇಸ್ರಯೇಲರ ನಿತ್ಯಾಧಾರವಾದ ಅವರು ಸುಳ್ಳಾಡುವವರಲ್ಲ; ಮಾತನ್ನು ಹಿಂತೆಗೆದುಕೊಳ್ಳುವವರಲ್ಲ; ಏಕೆಂದರೆ ಅವರು ಮನಸ್ಸು ಬದಲಾಯಿಸುವಂಥ ಮನುಷ್ಯರಲ್ಲ,” ಎಂದು ಹೇಳಿದನು. |
೩೦ |
ಅದಕ್ಕೆ ಸೌಲನು, “ನಾನು ಪಾಪಮಾಡಿದ್ದೇನೆ; ದಯವಿಟ್ಟು ಇಸ್ರಯೇಲರ ಮುಂದೆ ಹಾಗು ಜನರ ಹಿರಿಯರ ಮುಂದೆ ನನ್ನ ಮಾನವನ್ನು ಉಳಿಸಿ; ನಾನು ನಿಮ್ಮ ದೇವರಾದ ಸರ್ವೇಶ್ವರಸ್ವಾಮಿಯನ್ನು ಆರಾಧಿಸಲು ಶಕ್ತನಾಗುವಂತೆ ಹಿಂದಿರುಗಿ ನನ್ನ ಜೊತೆಯಲ್ಲೇ ಬನ್ನಿ,” ಎಂದು ಬೇಡಿಕೊಂಡನು. |
೩೧ |
ಆಗ ಸಮುವೇಲನು ಹಿಂದಿರುಗಿ ಸೌಲನ ಜೊತೆಯಲ್ಲೇ ಹೋದನು. ಸೌಲನು ದೇವರನ್ನು ಆರಾಧಿಸಿದನು. |
೩೨ |
ತರುವಾಯ ಸಮುವೇಲನು ಅಮಾಲೇಕ್ಯರ ಅರಸನಾದ ಅಗಾಗನನ್ನು ತನ್ನ ಬಳಿಗೆ ಬರಹೇಳಿದನು. ಅಗಾಗನು ಮರಣಭಯ ತಪ್ಪಿತೆಂದು ನೆನಸಿಕೊಂಡು ಸಂತೋಷದಿಂದ ಅವನ ಹತ್ತಿರ ಬಂದನು. |
೩೩ |
ಆದರೆ ಸಮುವೇಲನು ಅವನಿಗೆ: “ನಿನ್ನ ಕತ್ತಿ ಪುತ್ರಶೋಕವನ್ನುಂಟುಮಾಡಿತು ಅನೇಕ ಸ್ತ್ರೀಯರಿಗೆ; ನಿನ್ನ ತಾಯಿ ಸವಿಯಲಿ ಆ ಶೋಕವನು ಎಲ್ಲರಿಗೂ ಹೆಚ್ಚಿಗೆ’ ಎಂದು ಹೇಳಿ ಅಗಾಗನನ್ನು ಗಿಲ್ಗಾಲಿನಲಿ ಸರ್ವೇಶ್ವರನ ಸನ್ನಿಧಿಯಲ್ಲೇ ಕಡಿದುಹಾಕಿದನು. |
೩೪ |
ಅನಂತರ ಸಮುವೇಲನು ರಾಮಾಕ್ಕೆ ಹೋದನು; ಇತ್ತ ಸೌಲನು ತನ್ನ ಊರಾದ ಗಿಬೆಯದಲ್ಲಿದ್ದ ಮನೆಗೆ ತೆರಳಿದನು. |
೩೫ |
ಸಮುವೇಲನು ಜೀವದಿಂದಿರುವವರೆಗೂ ಸೌಲನನ್ನು ನೋಡಲು ಹೋಗಲಿಲ್ಲ. ಸೌಲನನ್ನು ಇಸ್ರಯೇಲರ ಅರಸನನ್ನಾಗಿ ಮಾಡಿದ್ದಕ್ಕಾಗಿ ಸರ್ವೇಶ್ವರ ವಿಷಾದಿಸಿದರು; ಈ ಕಾರಣ ಸಮುವೇಲನು ಅವನ ವಿಷಯದಲ್ಲಿ ದುಃಖಪಡುತ್ತಿದ್ದನು.
|
Kannada Bible (KNCL) 2016 |
No Data |