೧ |
ಸೌಲನು ಅರಸನಾದಾಗ ಅವನಿಗೆ ಮೂವತ್ತು ವರ್ಷ. ಅವನು ಇಸ್ರಯೇಲರನ್ನು ನಾಲ್ವತ್ತೆರಡು ವರ್ಷ ಆಳಿದನು. |
೨ |
ಅವನು ಅವರಲ್ಲಿ ಮೂರು ಸಾವಿರ ಜನರನ್ನು ಮಿಕ್ಮಾಷಿನಲ್ಲೂ ಬೇತೇಲಿನ ಗುಡ್ಡದಲ್ಲೂ ಇಟ್ಟುಕೊಂಡನು. ಉಳಿದ ಸಾವಿರ ಜನರನ್ನು ಬೆನ್ಯಾಮೀನ್ಯರ ಗೆಬೆಯದಲ್ಲಿದ್ದ ಯೋನಾತಾನನ ವಶಕ್ಕೆ ಕೊಟ್ಟನು. ಬೇರೆ ಇಸ್ರಯೇಲರನ್ನು ಅವರವರ ಮನೆಗಳಿಗೆ ಕಳುಹಿಸಿದನು. |
೩ |
ಯೋನಾತಾನನು ಗೆಬದಲ್ಲಿದ್ದ ಫಿಲಿಷ್ಟಿಯರ ದಂಡುಪ್ರದೇಶವನ್ನು ನಾಶಮಾಡಿದನು. ಈ ಸಮಾಚಾರ ಫಿಲಿಷ್ಟಿಯರಿಗೆ ಮುಟ್ಟಿತು. ಹಿಬ್ರಿಯರೆಲ್ಲರಿಗೂ ಇದು ಗೊತ್ತಾಗುವಂತೆ ಸೌಲನು ದೇಶದಲ್ಲೆಲ್ಲಾ ಕೊಂಬೂದಿಸಿದನು. |
೪ |
ಸೌಲನು ಫಿಲಿಷ್ಟಿಯರ ದಂಡುಪ್ರದೇಶವನ್ನು ನಾಶಮಾಡಿದ್ದರಿಂದ, ತಾವು ಅವರ ದ್ವೇಷಕ್ಕೆ ಗುರಿಯಾದೆವೆಂದು ಇಸ್ರಯೇಲರು ತಿಳಿದು, ಗಿಲ್ಗಾಲಿಗೆ ಬಂದು ಸೌಲನನ್ನು ಕೂಡಿಕೊಂಡರು. |
೫ |
ಆಗ ಫಿಲಿಷ್ಟಿಯರು ಇಸ್ರಯೇಲರೊಡನೆ ಯುದ್ಧಮಾಡುವುದಕ್ಕಾಗಿ ಮೂವತ್ತು ಸಾವಿರ ರಥಬಲವನ್ನು, ಆರು ಸಾವಿರ ಅಶ್ವಬಲವನ್ನು ಹಾಗು ಸಮುದ್ರದ ಮರಳಿನಂತೆ ಅಸಂಖ್ಯವಾದ ಕಾಲಾಳುಗಳನ್ನು ತೆಗೆದುಕೊಂಡು ಬಂದು ಬೇತಾವೆನಿನ ಪೂರ್ವದಿಕ್ಕಿನಲ್ಲಿರುವ ಮಿಕ್ಮಾಷಿನಲ್ಲಿ ಪಾಳೆಯ ಮಾಡಿಕೊಂಡರು. |
೬ |
ಇಸ್ರಯೇಲರಿಗೆ ಕೇಡು ಬಂದೊದಗಿತು. ತಾವು ಇಕ್ಕಟ್ಟಿನಲ್ಲಿ ಇದ್ದೇವೆಂದು ಅವರು ತಿಳಿದು ಗವಿ, ಕಾಡು, ಬಂಡೆ, ನೆಲಮನೆ, ಗುಂಡಿ ಇವುಗಳಲ್ಲಿ ಅಡಗಿಕೊಂಡರು. |
೭ |
ಕೆಲವರು ಜೋರ್ಡನ್ ನದಿ ದಾಟಿ ಗಾದ್ಯರ ದೇಶಕ್ಕೂ ಗಿಲ್ಯಾದ್ ಪ್ರಾಂತ್ಯಕ್ಕೂ ಹೊರಟುಹೋದರು. ಸೌಲನು ಇನ್ನೂ ಗಿಲ್ಗಾಲಿನಲ್ಲೇ ಇದ್ದನು. ಅವನ ಸಂಗಡ ಇದ್ದವರು ಭಯದಿಂದ ನಡುಗುತ್ತಿದ್ದರು. |
೮ |
ಸೌಲನು ಸಮುವೇಲನ ಆಜ್ಞೆಯಂತೆ ಗಿಲ್ಗಾಲಿನಲ್ಲೇ ಏಳು ದಿವಸ ಇದ್ದರೂ ಸಮುವೇಲನು ಅಲ್ಲಿಗೆ ಬರಲಿಲ್ಲ; ಅಷ್ಟರಲ್ಲಿ ಜನರು ಚದರಿಹೋದರು. |
೯ |
ಆಗ ಸೌಲನು ಜನರಿಂದ ದಹನಬಲಿಗೆ ಹಾಗು ಶಾಂತಿಸಮಾಧಾನ ಬಲಿಗೆ ಬೇಕಾದದ್ದನ್ನು ತರಿಸಿ ದಹನಬಲಿಯನ್ನು ಅರ್ಪಿಸಿದನು. |
೧೦ |
ಅದು ಮುಗಿಯುವಷ್ಟರಲ್ಲೇ ಸಮುವೇಲನು ಬಂದನು. ಸೌಲನು ಅವನನ್ನು ವಂದಿಸುವುದಕ್ಕಾಗಿ ಮುಂದೆ ಹೋದನು. |
೧೧ |
ಸಮುವೇಲನು, ಅವನನ್ನು ನೋಡಿ, “ಇದೇನು ನೀನು ಮಾಡಿದ್ದು?” ಎಂದು ಕೇಳಿದನು. ಅವನು, “ಜನರು ಚದರಿಹೋಗುವುದನ್ನು, ನೀವು ನಿಯಮಿತಕಾಲಕ್ಕೆ ಬಾರದಿರುವುದನ್ನು ಹಾಗು ಫಿಲಿಷ್ಟಿಯರು ಮಿಕ್ಮಾಷಿನಲ್ಲಿ ನಮಗೆ ವಿರೋಧವಾಗಿ ಕೂಡಿಕೊಂಡಿರುವುದನ್ನು ನೋಡಿದೆ; |
೧೨ |
ಸರ್ವೇಶ್ವರನಿಗೆ ಶಾಂತಿಸಮಾಧಾನದ ಬಲಿಯನ್ನು ಸಲ್ಲಿಸುವುದಕ್ಕಿಂತ ಮೊದಲೇ ಫಿಲಿಷ್ಟಿಯರು ಗಿಲ್ಗಾಲಿಗೆ ಬಂದು ನನ್ನ ಮೇಲೆ ಬಿದ್ದಾರೆಂದು ಭಯಪಟ್ಟೆ. ಆದುದರಿಂದ ದಹನಬಲಿಯನ್ನು ಸಮರ್ಪಿಸುವುದಕ್ಕೆ ನಾನೇ ಮುಂದಾದೆ,” ಎಂದನು. |
೧೩ |
ಆಗ ಸಮುವೇಲನು, “ನೀನು ಬುದ್ಧಿಹೀನ ಕಾರ್ಯವನ್ನು ಮಾಡಿದೆ; ನಿನ್ನ ದೇವರಾದ ಸರ್ವೇಶ್ವರನ ಆಜ್ಞೆಯನ್ನು ಕೈಗೊಳ್ಳಲಿಲ್ಲ. ಕೈಗೊಂಡಿದ್ದರೆ ನಿನ್ನ ರಾಜ್ಯವನ್ನು ಇಸ್ರಯೇಲರಲ್ಲಿ ಶಾಶ್ವತವಾಗಿ ಸ್ಥಿರಪಡಿಸುತ್ತಿದ್ದರು. |
೧೪ |
ಈಗಲಾದರೋ, ನಿನ್ನ ಅರಸುತನ ನಿಲ್ಲುವುದಿಲ್ಲ; ನೀನು ಸರ್ವೇಶ್ವರನ ಆಜ್ಞೆಯನ್ನು ಕೈಗೊಳ್ಳದೆ ಹೋದುದರಿಂದ ಅವರು ತಮಗೆ ಒಪ್ಪಿಗೆಯಾದ ಬೇರೊಬ್ಬ ವ್ಯಕ್ತಿಯನ್ನು ತಮ್ಮ ಪ್ರಜೆಯ ಮೇಲೆ ಅರಸನನ್ನಾಗಿ ನೇಮಿಸಿದ್ದಾರೆ,” ಎಂದು ಹೇಳಿದನು. |
೧೫ |
ಅನಂತರ ಸಮುವೇಲನು ಗಿಲ್ಗಾಲನ್ನು ಬಿಟ್ಟು ಬೆನ್ಯಾಮೀನ್ಯರ ಗಿಬೆಯಕ್ಕೆ ಹೋದನು. ಸೌಲನು ತನ್ನ ಜೊತೆಯಲ್ಲಿದ್ದ ಸೈನಿಕರನ್ನು ಎಣಿಸಿದಾಗ ಆರುನೂರು ಮಂದಿಯಿದ್ದರು. |
೧೬ |
ಅವರೊಡನೆ ಅವನೂ ಅವನ ಮಗನಾದ ಯೋನಾತಾನನೂ ಬೆನ್ಯಾಮೀನ್ಯರ ಗೆಬದಲ್ಲಿ ಇಳಿದುಕೊಂಡರು. ಫಿಲಿಷ್ಟಿಯರು ಮಿಕ್ಮಾಷಿನಲ್ಲಿ ಪಾಳೆಯಮಾಡಿಕೊಂಡಿದ್ದರು. |
೧೭ |
ಸುಲಿಗೆ ಮಾಡುವುದಕ್ಕಾಗಿ ಫಿಲಿಷ್ಟಿಯರ ಪಾಳೆಯದಿಂದ ಮೂರು ಗುಂಪುಗಳು ಹೊರಟುಬಂದವು. ಒಂದು ಗುಂಪು ಒಫ್ರದ ಮಾರ್ಗವಾಗಿ ಶುವಲ್ನಾಡಿಗೆ, |
೧೮ |
ಇನ್ನೊಂದು ಬೇತ್ಹೋರೋನಿನ ಕಡೆಗೆ, ಮತ್ತೊಂದು ಜೆಬೋಯೀಮ್ ಕಣಿವೆಯೂ ಅದರ ಕೆಳಗಿರುವ ಅರಣ್ಯವೂ ಕಾಣಿಸುವ ಸ್ಥಳಕ್ಕೆ ಹೋದವು. |
೧೯ |
ಹಿಬ್ರಿಯರು ಈಟಿಕತ್ತಿಗಳನ್ನು ಮಾಡಿಸಿಕೊಳ್ಳಕೂಡದೆಂದು ಫಿಲಿಷ್ಟಿಯರ ಆಜ್ಞೆ ಇದ್ದುದರಿಂದ ಇಸ್ರಯೇಲ್ ದೇಶದಲ್ಲಿ ಅವುಗಳನ್ನು ಮಾಡುವ ಕಮ್ಮಾರರೇ ಇರಲಿಲ್ಲ. |
೨೦ |
(ಅವರು ತಮ್ಮ ನೇಗಿಲಿನ ಗುಳ, ಸಲಿಕೆ, ಕೊಡಲಿ, ಗುದ್ದಲಿ ಇವುಗಳನ್ನು ಹಣಿಸುವುದಕ್ಕಾಗಿ ಫಿಲಿಷ್ಟಿಯರ ಬಳಿಗೆ ಹೋಗಬೇಕಾಗಿತ್ತು. |
೨೧ |
ಗುದ್ದಲಿ, ಸಲಿಕೆ, ತ್ರಿಶೂಲ, ಕೊಡಲಿ, ಮುಳ್ಳುಗೋಲು ಇವುಗಳನ್ನು ಹದಮಾಡುವುದಕ್ಕಾಗಿ ಅವರಲ್ಲಿ ಅರ ಮಾತ್ರ ಇತ್ತು.) |
೨೨ |
ಹೀಗಿದ್ದುದರಿಂದ ಯುದ್ಧ ಪ್ರಾರಂಬಿಸಿದಾಗ ಸೌಲ ಯೋನಾತಾನರ ಹೊರತು, ಅವರ ಜೊತೆಯಲ್ಲಿದ್ದ ಜನರಲ್ಲಿ ಒಬ್ಬನ ಕೈಯಲ್ಲಾದರೂ ಕತ್ತಿಯಾಗಲಿ ಭರ್ಜಿಯಾಗಲಿ ಇರಲಿಲ್ಲ. |
೨೩ |
ಫಿಲಿಷ್ಟಿಯರ ಕಾವಲುದಂಡು ಮಿಕ್ಮಾಷಿನ ಕಣಿವೆಯ ಕಡೆಗೆ ಹೊರಟಿತು.
|
Kannada Bible (KNCL) 2016 |
No Data |