A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ಸಮುವೇಲನು ೧ ೧೨ಸಮುವೇಲನು ಇಸ್ರಯೇಲರೆಲ್ಲರಿಗೆ, “ನೋಡಿ, ನಾನು ನಿಮ್ಮ ಬಿನ್ನಹಗಳನ್ನು ಆಲಿಸಿ, ನಿಮಗೊಬ್ಬ ಅರಸನನ್ನು ನೇಮಿಸಿದೆ.
ಇನ್ನು ಇವನೇ ನಿಮ್ಮನ್ನು ಮುನ್ನಡೆಸುವನು. ಚಿಕ್ಕಂದಿನಿಂದ ನಿಮ್ಮ ನಾಯಕನಾಗಿದ್ದ ನಾನು ಈಗ ತಲೆನರೆತ ಮುದುಕನಾಗಿದ್ದೇನೆ; ನನ್ನ ಮಕ್ಕಳು ನಿಮ್ಮ ಮಧ್ಯದಲ್ಲಿದ್ದಾರೆ.
ಇಲ್ಲಿ ನಿಂತುಕೊಂಡಿರುವ ನಾನು, ಯಾರ ಎತ್ತನ್ನಾಗಲಿ, ಕತ್ತೆಯನ್ನಾಗಲಿ ತೆಗೆದುಕೊಂಡು ಯಾರನ್ನಾದರು ವಂಚಿಸಿ ಪೀಡಿಸಿದ್ದುಂಟೋ? ಲಂಚ ತೆಗೆದುಕೊಂಡು ಕುರುಡನಂತೆ ತೀರ್ಪು ಕೊಟ್ಟಿದ್ದುಂಟೋ? ಹಾಗೇನಾದರು ಮಾಡಿದ್ದರೆ ಸರ್ವೇಶ್ವರನ ಹಾಗು ಅವರ ಅಭಿಷಿಕ್ತನ ಮುಂದೆ ಹೇಳಿರಿ; ನಾನು ಅದನ್ನು ಹಿಂದಕ್ಕೆ ಕೊಡುತ್ತೇನೆ,” ಎಂದನು.
ಅವರು, “ಇಲ್ಲ, ನೀವು ನಮ್ಮನ್ನು ವಂಚಿಸಿ ಪೀಡಿಸಿ ನಮ್ಮಿಂದ ಏನೂ ಕಸಿದುಕೊಂಡಿಲ್ಲ,” ಎಂದು ಉತ್ತರಕೊಟ್ಟರು.
ಸಮುವೇಲನು ಪುನಃ, “ನೀವು ನನ್ನಲ್ಲಿ ಇಂಥದನ್ನೇನೂ ಕಾಣಲಿಲ್ಲವೆಂಬುದಕ್ಕೆ ಸರ್ವೇಶ್ವರ ಹಾಗು ಅವರ ಅಭಿಷಿಕ್ತನು ಸಾಕ್ಷಿಯಾಗಿದ್ದಾರೆ,” ಎಂದನು. ಅವರು, “ಹೌದು, ಸರ್ವೇಶ್ವರ ಸಾಕ್ಷಿ ಆಗಿದ್ದಾರೆ,” ಎಂದು ನುಡಿದರು.
ಆಗ ಸಮುವೇಲನು, “ನಿಮ್ಮ ಪೂರ್ವಜರನ್ನು ಈಜಿಪ್ಟಿನಿಂದ ಕರೆದುತರುವುದಕ್ಕಾಗಿ ಮೋಶೆ ಹಾಗು ಆರೋನರನ್ನು ನೇಮಿಸಿದ ಸರ್ವೇಶ್ವರಸ್ವಾಮಿಯೇ ಇದಕ್ಕೆ ಸಾಕ್ಷಿ: ಇಲ್ಲಿ ನಿಂತುಕೊಳ್ಳಿರಿ:
ಸರ್ವೇಶ್ವರ ನಿಮ್ಮ ಹಾಗು ನಿಮ್ಮ ಪೂರ್ವಜರ ಪರವಾಗಿ ನಡೆಸಿದ ನೀತಿಕಾರ್ಯಗಳನ್ನು ಕುರಿತು ಅವರೆದುರಿನಲ್ಲೇ ನಿಮಗೆ ನೆನಪಿಗೆ ತಂದು, ನಿಮ್ಮನ್ನು ಎಚ್ಚರಿಸುತ್ತೇನೆ.
ಈಜಿಪ್ಟಿಗೆ ಬಂದ ಯಕೋಬನ ವಂಶದವರಾದ ನಮ್ಮ ಹಿರಿಯರು ಸರ್ವೇಶ್ವರನಿಗೆ ಮೊರೆಯಿಟ್ಟಾಗ, ಅವರು ಮೋಶೆ ಹಾಗು ಆರೋನರ ಮುಖಾಂತರ ಅವರನ್ನು ಈಜಿಪ್ಟಿನಿಂದ ಬಿಡಿಸಿ ತಂದು ಈ ನಾಡಿನಲ್ಲಿ ನೆಲೆಗೊಳಿಸಿದರು.
ಅವರು ತಮ್ಮ ದೇವರಾದ ಸರ್ವೇಶ್ವರನನ್ನು ಮರೆತುಬಿಟ್ಟರು. ಆಗ ಅವರನ್ನು ಹಾಚೋರಿನ ಸೇನಾಪತಿಯಾದ ಸೀಸೆರನಿಗೂ ಫಿಲಿಷ್ಟಿಯರಿಗೂ ಮೋವಾಬ್ ರಾಜನಿಗೂ ಮಾರಿಬಿಡಲಾಯಿತು. ಇವರು ದಂಡೆತ್ತಿ ಬಂದು ಅವರೊಡನೆ ಯುದ್ಧಮಾಡಿದರು.
೧೦
ಆಗ ಅವರು, “ನಾವು ಸರ್ವೇಶ್ವರನಾದ ನಿಮ್ಮನ್ನು ಬಿಟ್ಟು ಬಾಳ್, ಅಷ್ಟೋರೆತ್ ಎಂಬ ದೇವತೆಗಳನ್ನು ಪೂಜಿಸಿ ಪಾಪಮಾಡಿದ್ದೇವೆ. ಈಗ ಕೃಪೆಮಾಡಿ ನಮ್ಮನ್ನು ಶತ್ರುಗಳ ಕೈಯಿಂದ ಬಿಡಿಸಿರಿ; ನಾವು ಇನ್ನು ಮುಂದೆ ನಿಮ್ಮನ್ನೇ ಪೂಜಿಸಿ, ಸೇವೆಮಾಡುತ್ತೇವೆ,” ಎಂದು ಮೊರೆಯಿಟ್ಟರು.
೧೧
ಆಗ ಸರ್ವೇಶ್ವರ ಯೆರುಬ್ಬಾಳ್, ಬಾರಾಕ್, ಯೆಫ್ತಾಹ, ಸಮುವೇಲ್ ಇವರನ್ನು ಕಳುಹಿಸಿ ನಿಮ್ಮನ್ನು ಎಲ್ಲಾ ಶತ್ರುಗಳ ಕೈಯಿಂದ ತಪ್ಪಿಸಿ ಸುರಕ್ಷಿತವಾಗಿ ವಾಸಿಸುವಂತೆ ಮಾಡಿದರು.
೧೨
ಅಮ್ಮೋನಿಯರ ಅರಸನಾದ ನಾಹಾಷನು ನಿಮ್ಮ ಮೇಲೆ ಯುದ್ಧಕ್ಕೆ ಬರುತ್ತಾನೆಂದು ನಿಮಗೆ ಗೊತ್ತಾಗಲು, ನಿಮ್ಮ ದೇವರಾದ ಸರ್ವೆಶ್ವರ ನಿಮ್ಮ ಅರಸನಾಗಿದ್ದರೂ ನೀವು, ‘ನಮಗೊಬ್ಬ ಅರಸನನ್ನು ನೇಮಿಸು’ ಎಂದು ನನ್ನನ್ನು ಬೇಡಿಕೊಂಡಿರಿ.
೧೩
“ಇಗೋ, ನೀವು ಅಪೇಕ್ಷಿಸಿ ಆರಿಸಿಕೊಂಡ ಅರಸ ಇವನೇ; ಸರ್ವೇಶ್ವರ ಇವನನ್ನು ನಿಮ್ಮ ಮೇಲೆ ಅರಸನನ್ನಾಗಿ ನೇಮಿಸಿದ್ದಾರೆ.
೧೪
ನೀವೂ ನಿಮ್ಮ ಅರಸನೂ ನಿಮ್ಮ ದೇವರಾದ ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವರಾಗಿ ಅವರಿಗೆ ವಿಧೇಯರಾಗಿ ಅವರನ್ನೇ ಪೂಜಿಸಿರಿ; ಅವರ ಮಾತನ್ನು ತಪ್ಪದೆ ಪಾಲಿಸುತ್ತಾ ಅವರನ್ನೇ ಹೊಂದಿಕೊಂಡಿರಿ. ಹೀಗೆ ಮಾಡಿದರೆ ಎಷ್ಟೋ ಒಳ್ಳೆಯದು.
೧೫
ಆದರೆ ನೀವು ಸರ್ವೆಶ್ವರನ ಮಾತನ್ನು ಕೇಳದೆ, ಅವರ ಆಜ್ಞೆಗಳನ್ನು ಕೈಕೊಳ್ಳದೆ ನಡೆದರೆ, ಅವರ ಹಸ್ತ ನಿಮ್ಮ ಹಿರಿಯರಿಗೆ ವಿರೋಧವಾಗಿದ್ದಂತೆ ನಿಮಗೂ ವಿರೋಧವಾಗಿಯೇ ಇರುವುದು.
೧೬
ಈಗ ಸರ್ವೇಶ್ವರ ನಿಮ್ಮ ಕಣ್ಮುಂದೆಯೇ ಮಾಡುವ ಮಹತ್ಕಾರ್ಯವನ್ನು ಹತ್ತಿರಬಂದು ನೋಡಿರಿ.
೧೭
ನಾನು ಸರ್ವೇಶ್ವರನಿಗೆ ಮೊರೆಯಿಡುತ್ತೇನೆ; ಈಗ ಗೋದಿಯ ಸುಗ್ಗಿಕಾಲವಾಗಿದ್ದರೂ ಗುಡುಗನ್ನೂ ಮಳೆಯನ್ನೂ ಕಳುಹಿಸುವುದರ ಮೂಲಕ ನೀವು ಅರಸನನ್ನು ಕೇಳಿಕೊಂಡದ್ದು ತಮ್ಮ ದೃಷ್ಟಿಯಲ್ಲಿ ಎಷ್ಟೋ ಕೆಟ್ಟದ್ದಾಗಿದೆ ಎಂಬುದನ್ನು ಅವರು ತೋರಿಸಿಕೊಡುವರು,” ಎಂದು ಅವರಿಗೆ ಹೇಳಿದನು.
೧೮
ಅಂತೆಯೇ ಸಮುವೇಲನು ಮೊರೆ ಇಡಲು ಸರ್ವೇಶ್ವರ ಗುಡುಗು ಮಳೆಗಳನ್ನು ಕಳುಹಿಸಿದರು. ಜನರೆಲ್ಲರು ಸರ್ವೇಶ್ವರನಿಗೂ ಸಮುವೇಲನಿಗೂ ಬಹಳವಾಗಿ ಭಯಪಟ್ಟು,
೧೯
ಸಮುವೇಲನನ್ನು, “ನಮಗೊಬ್ಬ ಅರಸನು ಬೇಕೆಂದು ನಾವು ಬೇಡಿಕೊಂಡದ್ದರಿಂದ ನಮ್ಮ ಪಾಪಗಳಿಗೆ ಮತ್ತೊಂದು ಪಾಪ ಕೂಡಿತು; ಆದುದರಿಂದ ನಿಮ್ಮ ಸೇವಕರಾದ ನಾವು ಸಾಯದಂತೆ ನಿಮ್ಮ ದೇವರಾದ ಸರ್ವೇಶ್ವರನನ್ನು ಬೇಡಿಕೊಳ್ಳಿ,” ಎಂದು ಸಮುವೇಲನನ್ನು ವಿಜ್ಞಾಪಿಸಿದರು.
೨೦
ಆಗ ಸಮುವೇಲನು, “ಭಯಪಡಬೇಡಿ; ಇಷ್ಟು ಪಾಪಮಾಡಿದ ನೀವು ಇನ್ನು ಮುಂದೆ ಆದರೂ ಅದನ್ನು ಬಿಟ್ಟು, ಸರ್ವೇಶ್ವರನನ್ನು ಹೊಂದಿಕೊಂಡು ಪೂರ್ಣಮನಸ್ಸಿನಿಂದ ಅವರೊಬ್ಬರನ್ನೇ ಪೂಜಿಸಿರಿ.
೨೧
ದೇವರಲ್ಲದವುಗಳನ್ನು ಹಿಂಬಾಲಿಸಬೇಡಿ; ಅವುಗಳಿಂದ ನಿಮಗೆ ಲಾಭವಿಲ್ಲ; ರಕ್ಷಣೆಯೂ ಸಿಕ್ಕುವುದಿಲ್ಲ. ಅವು ವ್ಯರ್ಥವಾದವುಗಳೇ ಸರಿ.
೨೨
ಸರ್ವೇಶ್ವರನ ದಯೆ ನಿಮ್ಮನ್ನು ಸ್ವಕೀಯ ಜನರನ್ನಾಗಿ ಆರಿಸಿಕೊಂಡ ಮೇಲೆ, ಅವರು ತಮ್ಮ ಮಹೋನ್ನತ ನಾಮದ ನಿಮಿತ್ತ, ನಿಮ್ಮನ್ನು ಖಂಡಿತವಾಗಿ ಕೈಬಿಡುವುದಿಲ್ಲ.
೨೩
ನಾನಾದರೋ ನಿಮ್ಮ ಪರವಾಗಿ ಸರ್ವೇಶ್ವರನನ್ನು ಪ್ರಾರ್ಥಿಸುತ್ತೇನೆ; ಅವರ ನೀತಿಯುತ ಉತ್ತಮ ಮಾರ್ಗವನ್ನು ನಿಮಗೆ ತೋರಿಸಿಕೊಡುವುದನ್ನು ಬಿಡುವುದಿಲ್ಲ; ಬಿಟ್ಟರೆ ದೇವರ ದೃಷ್ಟಿಯಲ್ಲಿ ನಾನೂ ಪಾಪಿಯಾಗುತ್ತೇನೆ.
೨೪
ನೀವಾದರೋ ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವರಾಗಿದ್ದು, ಅವರು ನಿಮಗಾಗಿ ಮಾಡಿದ ಮಹತ್ಕಾರ್ಯಗಳನ್ನು ಸ್ಮರಿಸಿಕೊಂಡು, ಅವರಿಗೆ ಶ್ರದ್ಧೆಯಿಂದಲೂ ಪೂರ್ಣಮನಸ್ಸಿನಿಂದಲೂ ಸೇವೆಸಲ್ಲಿಸುತ್ತಾ ಬರಬೇಕು.
೨೫
ನೀವು ದ್ರೋಹಿಗಳಾಗಿಯೇ ಇದ್ದರೆ ನಿಮ್ಮ ಅರಸನ ಸಮೇತ ನಾಶವಾಗುವಿರಿ,” ಎಂದು ಹೇಳಿದನು.