೧ |
ಒಂದು ತಿಂಗಳ ನಂತರ ಅಮ್ಮೋನಿಯನಾದ ನಾಹಾಷನು ದಂಡೆತ್ತಿ ಬಂದು ಯಾಬೇಷ್ ಗಿಲ್ಯಾದಿಗೆ ಮುತ್ತಿಗೆ ಹಾಕಿದನು. ಯಾಬೇಷಿನವರು ಅವನನ್ನು, “ನೀನು ನಮ್ಮ ಸಂಗಡ ಸಂಧಾನ ಮಾಡಿಕೋ; ನಾವು ನಿನಗೆ ಅಧೀನರಾಗಿರುತ್ತೇವೆ,” ಎಂದು ಬೇಡಿಕೊಂಡರು. |
೨ |
ಅದಕ್ಕೆ ಅವನು, “ಇಸ್ರಯೇಲರೆಲ್ಲರನ್ನು ಅವಮಾನಪಡಿಸುವುದಕ್ಕಾಗಿ ನಾನು ಮೊದಲು ನಿಮ್ಮಲ್ಲಿ ಪ್ರತಿಯೊಬ್ಬರ ಬಲಗಣ್ಣನ್ನು ಕಿತ್ತು ಹಾಕುತ್ತೇನೆ. ಇದಕ್ಕೆ ನೀವು ಒಪ್ಪುವಿರಾದರೆ ನಿಮ್ಮ ಸಂಗಡ ಸಂಧಾನ ಮಾಡಿಕೊಳ್ಳುತ್ತೇನೆ,” ಎಂದು ಉತ್ತರಕೊಟ್ಟನು. |
೩ |
ಆಗ ಯಾಬೇಷಿನ ಹಿರಿಯರು ಅವನಿಗೆ, “ಏಳು ದಿವಸಗಳವರೆಗೆ ಸಮಯ ಕೊಡು; ಅಷ್ಟರೊಳಗೆ ನಾವು ಇಸ್ರಯೇಲರ ಪ್ರಾಂತ್ಯಗಳಿಗೆ ದೂತರನ್ನು ಕಳುಹಿಸುತ್ತೇವೆ. ನಮ್ಮನ್ನು ಯಾರೂ ರಕ್ಷಿಸದಿದ್ದರೆ ನಾವು ನಿನ್ನ ಬಳಿಗೆ ಬಂದು ಶರಣಾಗುತ್ತೇವೆ,” ಎಂದು ವಿನಂತಿಸಿದರು. |
೪ |
ದೂತರು ಸೌಲನು ವಾಸವಾಗಿದ್ದ ಗಿಬೆಯಕ್ಕೆ ಬಂದು ಅಲ್ಲಿನವರಿಗೆ ಈ ವರ್ತಮಾನವನ್ನು ತಿಳಿಸಿದರು. ಎಲ್ಲರೂ ಗಟ್ಟಿಯಾಗಿ ಅಳತೊಡಗಿದರು. |
೫ |
ಅಷ್ಟರಲ್ಲಿ ಸೌಲನು ಹೊಲದಿಂದ ದನಗಳನ್ನು ಹೊಡೆದುಕೊಂಡು ಬಂದನು. ಜನರು ಗೋಳಾಡುವುದಕ್ಕೇನು ಕಾರಣವೆಂದು ಕೇಳಲು ಯಾಬೇಷಿನವರ ವರ್ತಮಾನವನ್ನು ಅವನಿಗೆ ತಿಳಿಸಲಾಯಿತು. |
೬ |
ಆಗ ಸರ್ವೇಶ್ವರನ ಆತ್ಮ ಅವನ ಮೇಲೆ ಬಂದಿತು. ಅವನು ಅತ್ಯಂತ ಕುಪಿತನಾದನು. |
೭ |
ಒಂದು ಜೋಡಿ ಎತ್ತುಗಳನ್ನು ತೆಗೆದುಕೊಂಡು ತುಂಡುತುಂಡು ಮಾಡಿ, ಆ ತುಂಡುಗಳನ್ನು ದೂತರ ಮುಖಾಂತರ ಇಸ್ರಯೇಲರ ಎಲ್ಲ ಪ್ರಾಂತ್ಯಗಳಿಗೆ ಕಳುಹಿಸಿದನು. “ಯಾರು ಸೌಲ ಹಾಗು ಸಮುವೇಲರನ್ನು ಹಿಂಬಾಲಿಸುವುದಿಲ್ಲವೋ ಅವರ ಎತ್ತುಗಳನ್ನು ಹೀಗೆಯೇ ಕಡಿಯಲಾಗುವುದು,” ಎಂದು ಹೇಳಿಸಿದನು. ಸರ್ವೇಶ್ವರನ ಭಯಭಕ್ತಿಯಿಂದ ಪ್ರೇರಿತರಾದ ಜನರೆಲ್ಲರೂ ಏಕಮನಸ್ಸಿನಿಂದ ಕೂಡಿಬಂದರು. |
೮ |
ಅವರನ್ನು ಬೆಜೆಕಿನಲ್ಲಿ ಕ್ರಮಪಡಿಸಿ ಲೆಕ್ಕಿಸಿದಾಗ ಇಸ್ರಯೇಲರಲ್ಲಿ ಮೂರು ಲಕ್ಷ ಸೈನಿಕರೂ ಯೆಹೂದ್ಯರಲ್ಲಿ ಮೂವತ್ತು ಸಾವಿರ ಸೈನಿಕರೂ ಇದ್ದರು. |
೯ |
ಬಂದಿದ್ದ ದೂತರಿಗೆ, “ನಾಳೆ ಮಧ್ಯಾಹ್ನದೊಳಗೆ ನಿಮಗೆ ಸಹಾಯ ಸಿಕ್ಕುವುದೆಂದು ಯಾಬೇಷ್ ಗಿಲ್ಯಾದಿನವರಿಗೆ ತಿಳಿಸಿರಿ,” ಎಂದು ಹೇಳಿ ಅವರನ್ನು ಕಳುಹಿಸಲಾಯಿತು. |
೧೦ |
ದೂತರು ಹೋಗಿ ಈ ವರ್ತಮಾನವನ್ನು ತಿಳಿಸಲು ಯಾಬೇಷಿನವರು ಸಂತೋಷಭರಿತರಾದರು. ಅಮ್ಮೋನಿಯರಿಗೆ, “ನಾವು ನಾಳೆ ನಿಮ್ಮ ಬಳಿಗೆ ಬರುವೆವು; ನಿಮ್ಮ ಇಚ್ಛೆಯ ಪ್ರಕಾರ ಮಾಡಬಹುದು,” ಎಂದು ಹೇಳಿದರು. |
೧೧ |
ಸೌಲನು ಬೆಳಗಿನ ಜಾವದಲ್ಲಿ ತನ್ನ ಜನರನ್ನು ಮೂರು ಪಂಗಡವಾಗಿ ವಿಂಗಡಿಸಿದನು. ಅಮ್ಮೋನಿಯರ ಪಾಳೆಯದೊಳಕ್ಕೆ ನುಗ್ಗಿ ದಾಳಿಮಾಡಿ ಮಧ್ಯಾಹ್ನದವರೆಗೆ ಅವರನ್ನು ಸದೆಬಡಿದನು. ಅಳಿದುಳಿದವರನ್ನು ಒಬ್ಬರನ್ನೊಬ್ಬರು ಕೂಡದ ಹಾಗೆ ಚದರಿಸಿಬಿಟ್ಟನು. |
೧೨ |
ತರುವಾಯ ಜನರು ಸಮುವೇಲನಿಗೆ, “ಸೌಲನು ನಮಗೆ ಅರಸನಾಗಬಾರದೆಂದು ಹೇಳಿದವರಾರು? ಅವರನ್ನು ನಮಗೆ ಒಪ್ಪಿಸಿರಿ; ನಾವೇ ಕೊಂದುಹಾಕುತ್ತೇವೆ,” ಎಂದರು. ಸೌಲನು ಅವರಿಗೆ, |
೧೩ |
“ಸರ್ವೇಶ್ವರ ಈ ದಿನ ಇಸ್ರಯೇಲರಿಗೆ ಜಯವನ್ನುಂಟುಮಾಡಿರುವರು. ಆದ್ದರಿಂದ ಯಾರನ್ನೂ ಕೊಲ್ಲಬಾರದು,” ಎಂದು ಹೇಳಿದನು. |
೧೪ |
ಸಮುವೇಲನು ಜನರಿಗೆ, “ಬನ್ನಿ, ಗಿಲ್ಗಾಲಿಗೆ ಹೋಗಿ ಸೌಲನ ಅರಸುತನವನ್ನು ಘೋಷಿಸೋಣ,” ಎಂದನು. |
೧೫ |
ಅವರೆಲ್ಲರು ಅಲ್ಲಿಗೆ ಹೋಗಿ ಸರ್ವೇಶ್ವರನ ಸನ್ನಿಧಿಯಲ್ಲಿ ಸೌಲನ ಅರಸುತನವನ್ನು ಘೋಷಿಸಿ ಸ್ಥಿರಪಡಿಸಿದರು. ಸರ್ವೇಶ್ವರನಿಗೆ ಶಾಂತಿಸಮಾಧಾನದ ಬಲಿಗಳನ್ನು ಸಮರ್ಪಿಸಿದರು. ಸೌಲನೊಡನೆ ಸೇರಿ ಬಹಳವಾಗಿ ಆನಂದಿಸಿದರು.
|
Kannada Bible (KNCL) 2016 |
No Data |