A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ಸಮುವೇಲನು ೧ ೧೦ಆ ಆಳು ಮುಂದೆ ಹೋದಾದ ಮೇಲೆ ಸಮುವೇಲನು ಓಲಿವ್ ಎಣ್ಣೇಕುಪ್ಪಿಯಿಂದ ಅವನ ತಲೆಯ ಮೇಲೆ ತೈಲವನ್ನು ಹೊಯ್ದು, ಅವನನ್ನು ಮುದ್ದಿಟ್ಟು ಅವನಿಗೆ, “ಸರ್ವೇಶ್ವರ ತಮ್ಮ ಜನರ ಮೇಲೆ ರಾಜ್ಯ ಆಳಲು ನಿಜವಾಗಿ ನಿನ್ನನ್ನು ಅಭಿಷೇಕಿಸಿದ್ದಾರೆ.
ಈ ದಿನ ನೀನು ನನ್ನನ್ನು ಬಿಟ್ಟುಹೋದನಂತರ, ಬೆನ್ಯಾಮೀನ್ಯರ ಮೇರೆಯೊಳಗಿರುವ ರಾಖೇಲಳ ಸಮಾಧಿಯ ಬಳಿಯಲ್ಲಿರುವಂಥ ಚೆಲ್ಚಹಿನಲ್ಲಿ ಇಬ್ಬರು ವ್ಯಕ್ತಿಗಳನ್ನು ಕಾಣುವೆ; ಅವರು, ‘ನೀನು ಹುಡುಕುತ್ತಿರುವ ಕತ್ತೆಗಳು ಸಿಕ್ಕಿದವು; ನಿನ್ನ ತಂದೆ ಕತ್ತೆಗಳ ಚಿಂತೆಬಿಟ್ಟು ನನ್ನ ಮಗನೆಲ್ಲಿ ಹೋದನೋ ಎಂದು ನಿನಗಾಗಿ ಹಂಬಲಿಸುತ್ತಾ ಇರುತ್ತಾರೆ’ ಎಂದು ಹೇಳುವರು.
ನೀನು ಅಲ್ಲಿಂದ ಮುಂದೆ ನಡೆದು ತಾಬೋರಿನ ಹತ್ತಿರವಿರುವ ಏಲೋನ್ ವೃಕ್ಷದ ಬಳಿಗೆ ಬಂದಾಗ ದೇವದರ್ಶನಕ್ಕಾಗಿ ಬೇತೇಲಿಗೆ ಹೋಗುವ ಮೂವರು ಜನರು ನಿನಗೆದುರಾಗುವರು. ಅವರಲ್ಲೊಬ್ಬನು ಮೂರು ಹೋತಮರಿಗಳನ್ನೂ ಮತ್ತೊಬ್ಬನು ಮೂರು ರೊಟ್ಟಿಗಳನ್ನೂ ಇನ್ನೊಬ್ಬನು ದ್ರಾಕ್ಷಾರಸದ ಒಂದು ಬುದ್ದಲಿಯನ್ನೂ ಹೊತ್ತುಕೊಂಡು ಇರುವರು.
ಅವರು ನಿನ್ನ ಕ್ಷೇಮಸಮಾಚಾರವನ್ನು ವಿಚಾರಿಸಿ ಎರಡು ರೊಟ್ಟಿಗಳನ್ನು ಕೊಡುವರು; ನೀನು ಅವುಗಳನ್ನು ತೆಗೆದುಕೊಳ್ಳಬೇಕು.
ಅಲ್ಲಿಂದ ದೇವಗಿರಿಯನ್ನು ಮುಟ್ಟಿದಾಗ ಫಿಲಿಷ್ಟಿಯರ ದಂಡುಪ್ರದೇಶವನ್ನು ಕಾಣುವೆ; ಮುಂಗಡೆಯಲ್ಲಿ ಸ್ವರಮಂಡಲ, ತಮ್ಮಟೆ, ಕೊಳಲು, ಕಿನ್ನರಿ ಈ ವಾದ್ಯಗಾರರೊಡನೆ ಗುಡ್ಡದಿಂದಿಳಿದು ಬರುತ್ತಿರುವ ಪ್ರವಾದಿಗಳ ಒಂದು ಗುಂಪನ್ನು ಕಾಣುವೆ. ಅವರು ಪರವಶರಾಗಿ ಪ್ರವಾದಿಸುವರು.
ಆಗ ಸರ್ವೇಶ್ವರನ ಆತ್ಮ ನಿನ್ನ ಮೇಲೆ ಬರುವುದು. ನೀನೂ ಮಾರ್ಪಟ್ಟು ಪ್ರವಾದಿಸುವೆ.
ಈ ಗುರುತುಗಳೆಲ್ಲ ಸಂಭವಿಸಿದಾಗ ನಿನಗೆ ಅನುಕೂಲವಿದ್ದ ಹಾಗೆ ವರ್ತಿಸು, ದೇವರು ನಿನ್ನೊಂದಿಗೆ ಇದ್ದಾರೆ!
ನೀನು ಮುಂದಾಗಿ ಗಿಲ್ಗಾಲಿಗೆ ಹೋಗು; ಏಳು ದಿವಸಗಳಾದ ನಂತರ ನಾನು ದಹನಬಲಿಗಳನ್ನೂ ಶಾಂತಿಸಮಾಧಾನಬಲಿಗಳನ್ನೂ ಸಮರ್ಪಿಸುವುದಕ್ಕಾಗಿ ಅಲ್ಲಿಗೆ ಬಂದು ನೀನು ಮಾಡಬೇಕಾದುದನ್ನು ನಿನಗೆ ತಿಳಿಸುವೆನು; ಅಲ್ಲಿಯವರೆಗೆ ಕಾದುಕೊಂಡಿರು,” ಎಂದು ಹೇಳಿದನು.
ಸೌಲನು ಸಮುವೇಲನನ್ನು ಬಿಟ್ಟು ಹೊರಟ ಕೂಡಲೆ ದೇವರು ಅವನಿಗೆ ನೂತನ ಚೈತನ್ಯವನ್ನು ಕೊಟ್ಟರು. ಅದೇ ದಿನದಲ್ಲಿ ಆ ಎಲ್ಲ ಘಟನೆಗಳು ಸಂಭವಿಸಿದವು.
೧೦
ಅವನು ದೇವಗಿರಿಗೆ ಬಂದ ಕೂಡಲೆ ಪರವಶರಾದ ಪ್ರವಾದಿಗಳ ಗುಂಪೊಂದು ತನ್ನೆದುರಿಗೆ ಬರುವುದನ್ನು ಕಂಡನು. ದೇವರ ಆತ್ಮ ಅವನ ಮೇಲೆ ಇಳಿದು ಬಂದುದರಿಂದ ಅವನೂ ಪರವಶನಾಗಿ ಅವರೊಳಗೆ ಸೇರಿ ಪ್ರವಾದಿಸಿದನು.
೧೧
ಅವನು ಪರವಶನಾಗಿ ಮಾತಾಡುವುದನ್ನು ಪರಿಚಿತರು ಕಂಡು ತಮ್ಮತಮ್ಮೊಳಗೆ, “ಕೀಷನ ಮಗನಿಗೆ ಏನಾಯಿತು? ಸೌಲನೂ ಪ್ರವಾದಿಗಳಲ್ಲಿ ಒಬ್ಬನೆ?” ಎಂದು ಮಾತಾಡಿಕೊಳ್ಳುತ್ತಿದ್ದರು.
೧೨
ಆಗ ಆ ಸ್ಥಳೀಯರಲ್ಲಿ ಒಬ್ಬನು, “ಹಾಗಾದರೆ ಇವರ ತಂದೆ ಯಾರು?” ಎಂದು ಕೇಳಿದನು. ಈ ಘಟನೆಯಿಂದಾಗಿ, “ಏನು, ಸೌಲನೂ ಪ್ರವಾದಿಯಾಗಿಬಿಟ್ಟನೊ?” ಎಂಬ ಗಾದೆ ಹುಟ್ಟಿತು.
೧೩
ಅವನು ಪ್ರವಾದಿಸಿ ಆದ ಮೇಲೆ ಪೂಜಾಸ್ಥಳಕ್ಕೆ ಬಂದನು.
೧೪
ಸೌಲನ ಚಿಕ್ಕಪ್ಪನು ಅವನನ್ನೂ ಅವನ ಸೇವಕನನ್ನೂ ನೋಡಿ, “ನೀವು ಎಲ್ಲಿಗೆ ಹೋಗಿದ್ದಿರಿ?” ಎಂದು ಕೇಳಿದನು. ಅವನು, “ಕತ್ತೆಗಳನ್ನು ಹುಡುಕುವುದಕ್ಕೆ ಹೋಗಿದ್ದೆವು. ಅವು ಸಿಕ್ಕಲಿಲ್ಲ. ಆದುದರಿಂದ ಸಮುವೇಲನ ಬಳಿಗೆ ಹೋದೆವು,” ಎಂದನು.
೧೫
ಸಮುವೇಲನು ಏನು ಹೇಳಿದನೆಂದು ಚಿಕ್ಕಪ್ಪನು ಕೇಳಲು,
೧೬
ಸೌಲನು, “ಕತ್ತೆಗಳು ಸಿಕ್ಕಿದವೆಂದು ತಿಳಿಸಿದನು,” ಎಂಬುದಾಗಿ ಹೇಳಿದನೇ ಹೊರತು ಸಮುವೇಲನು ಹೇಳಿದ ಆ ರಾಜ್ಯಭಾರದ ಮಾತನ್ನು ತಿಳಿಸಲಿಲ್ಲ.
೧೭
ಸಮುವೇಲನು ಇಸ್ರಯೇಲರನ್ನು ಮಿಚ್ಪೆಗೆ ಕರೆಯಿಸಿ ಸರ್ವೇಶ್ವರನ ಸನ್ನಿಧಿಯಲ್ಲಿ ಸಭೆ ಸೇರಿಸಿದನು.
೧೮
ಅವರಿಗೆ, “ಇಸ್ರಯೇಲ್ ದೇವರಾದ ಸರ್ವೇಶ್ವರ ಹೇಳುವುದನ್ನು ಕೇಳಿರಿ: ‘ನೀವು ಈಜಿಪ್ಟಿನವರ ಕೈಯಿಂದ ತಪ್ಪಿಸಿಕೊಳ್ಳುವಂತೆ ನಿಮ್ಮನ್ನು ಅವರ ದೇಶದಿಂದ ಬಿಡಿಸಿದವನು ಹಾಗು ಬಾಧಿಸುತ್ತಿದ್ದ ಬೇರೆ ಎಲ್ಲಾ ಜನಾಂಗಗಳಿಂದ ನಿಮ್ಮನ್ನು ರಕ್ಷಿಸಿದವನು ನಾನೇ.
೧೯
ನೀವಾದರೋ, ನಿಮ್ಮನ್ನು ಕಷ್ಟಸಂಕಟಗಳಿಂದ ಬಿಡಿಸಿದ ನಿಮ್ಮ ದೇವರಾದ ನನ್ನನ್ನು ತಿರಸ್ಕರಿಸಿ ಈಗ ನಮಗೊಬ್ಬ ಅರಸನನ್ನು ನೇಮಿಸೆಂದು ಕೇಳುತ್ತೀರಿ. ಆದುದರಿಂದ ನೀವು ನಿಮ್ಮ ನಿಮ್ಮ ಕುಲ ಹಾಗು ಗೋತ್ರಗಳ ಅನುಸಾರ ಸರ್ವೇಶ್ವರನ ಸನ್ನಿಧಿಯಲ್ಲಿ ಹಾಜರಾಗಿರಿ,” ಎಂದು ಅಪ್ಪಣೆ ಮಾಡಿದನು.
೨೦
ಹೀಗೆ ಸಮುವೇಲನು ಇಸ್ರಯೇಲರ ಎಲ್ಲಾ ಕುಲಗಳನ್ನು ಸಮೀಪಕ್ಕೆ ಕರೆದಾಗ ಬೆನ್ಯಾಮೀನ್ ಕುಲಕ್ಕೆ ಚೀಟು ಬಿದ್ದಿತು.
೨೧
ಆ ಕುಲದ ಗೋತ್ರಗಳನ್ನು ಬರಮಾಡಿದಾಗ ಮಟ್ರಿಯ ಗೋತ್ರದಲ್ಲಿ ಕೀಷನ ಮಗನಾದ ಸೌಲನಿಗೆ ಚೀಟು ಬಿದ್ದಿತು. ಅವನನ್ನು ಹುಡುಕಲು ಅವನು ಸಿಕ್ಕಲಿಲ್ಲ.
೨೨
ಅವರು, “ಆ ವ್ಯಕ್ತಿ ಇಲ್ಲಿಗೆ ಬರುವನೋ?” ಎಂದು ಸರ್ವೇಶ್ವರನನ್ನು ವಿಚಾರಿಸಿದಾಗ, “ಬಂದಿದ್ದಾನೆ; ಇಗೋ, ಸರಕು ಸಾಮಾನುಗಳ ನಡುವೆ ಅಡಗಿಕೊಂಡಿದ್ದಾನೆ,” ಎಂದು ಉತ್ತರ ಬಂದಿತು.
೨೩
ಅವರು ತಟ್ಟನೆ ಹೋಗಿ ಅವನನ್ನು ಹಿಡಿದುಕೊಂಡು ಬಂದು ಜನರ ಮಧ್ಯೆ ನಿಲ್ಲಿಸಿದರು. ಎಲ್ಲ ಜನರ ಗುಂಪಿನಲ್ಲಿ ಅವನ ಹೆಗಲೂ ತಲೆಯೂ ಕಾಣುವಷ್ಟು ಬಹು ಎತ್ತರದ ವ್ಯಕ್ತಿ ಅವನಾಗಿದ್ದನು.
೨೪
ಆಗ ಸಮುವೇಲನು ಜನರೆಲ್ಲರಿಗೆ, “ನೋಡಿ, ಸರ್ವೇಶ್ವರನಿಂದ ಆಯ್ಕೆಯಾದವನು ಇವನೇ; ಸರ್ವಜನರಲ್ಲಿ ಇವನಿಗೆ ಸಮಾನರು ಇಲ್ಲವೇ ಇಲ್ಲ,” ಎಂದನು. ಜನರೆಲ್ಲರೂ, “ಅರಸನಿಗೆ ಜಯವಾಗಲಿ!” ಎಂದು ಘೋಷಿಸಿದರು.
೨೫
ತರುವಾಯ ಸಮುವೇಲನು ಜನರಿಗೆ ರಾಜನೀತಿಯನ್ನು ಬೋಧಿಸಿ, ಅದನ್ನು ಒಂದು ಪುಸ್ತಕದಲ್ಲಿ ಬರೆದು, ಸರ್ವೇಶ್ವರನ ಸನ್ನಿಧಿಯಲ್ಲಿಟ್ಟನು; ಆಮೇಲೆ ಜನರನ್ನು ಅವರವರ ಮನೆಗಳಿಗೆ ಕಳುಹಿಸಿಬಿಟ್ಟನು.
೨೬
ಸೌಲನೂ ಗಿಬೆಯದಲ್ಲಿದ್ದ ತನ್ನ ಮನೆಗೆ ಹೋದನು. ಕೆಲವು ಮಂದಿ ಶೂರರು ದೇವರಿಂದ ಪ್ರೇರಿತರಾಗಿ ಅವನ ಜೊತೆಯಲ್ಲೇ ಹೋದರು.
೨೭
ಕೆಲವು ಮಂದಿ ಪುಂಡುಪೋಕರು, “ಇವನೇನೋ ನಮ್ಮನ್ನು ರಕ್ಷಿಸುವವನು!” ಎಂದು ತಾತ್ಸಾರಮಾಡಿ ಕಾಣಿಕೆಗಳನ್ನು ತರಲಿಲ್ಲ. ಆದರೂ ಸೌಲನು ಸುಮ್ಮನಿದ್ದನು.