A A A A A
×

ಕನ್ನಡ ಬೈಬಲ್ (KNCL) 2016

ರೂತಳು ೨

ನವೊಮಿಗೆ ಬೋವಜ ಎಂಬ ನೆಂಟನು ಇದ್ದನು. ಅವನು ಐಶ್ವರ್ಯವಂತ ಮತ್ತು ಒಬ್ಬ ಗಣ್ಯ ವ್ಯಕ್ತಿ; ನವೊಮಿಯ ಪತಿ ಎಲಿಮೆಲೆಕನ ಕುಟುಂಬಕ್ಕೆ ಸೇರಿದವನು.
ರೂತಳು ನವೊಮಿಗೆ: “ನಾನು ಹೊಲಗಳಿಗೆ ಹೋಗಿ ತೆನೆಗಳನ್ನು ಆಯ್ದುಕೊಂಡು ಬರಲೇ? ಇದಕ್ಕೆ ಯಾರಾದರು ನನಗೆ ನೆರವಾಗಬಹುದು,” ಎಂದು ಕೇಳಿದಳು. ನವೊಮಿ, “ಹೋಗಿ ಬಾ, ಮಗಳೇ,” ಎಂದು ಅಪ್ಪಣೆಕೊಟ್ಟಳು.
ರೂತಳು ಕೊಯ್ಯುವವರ ಹಿಂದೆ ಹೋಗುತ್ತಾ ಅಲ್ಲಲ್ಲಿ ಬಿದ್ದ ತೆನೆಗಳನ್ನು ಆಯ್ದುಕೊಳ್ಳುತ್ತಿದ್ದಳು. ಸುದೈವದಿಂದ ಅದು ಎಲಿಮೆಲೆಕನ ನೆಂಟನಾದ ಬೋವಜನ ಹೊಲವಾಗಿತ್ತು.
ಸ್ವಲ್ಪ ಹೊತ್ತಾದ ಮೇಲೆ, ಇದ್ದಕ್ಕಿದ್ದ ಹಾಗೆ ಬೋವಜನು ಬೆತ್ಲೆಹೇಮಿನಿಂದ ಅಲ್ಲಿಗೆ ಬಂದನು. ಅವನು, “ಸರ್ವೇಶ್ವರಸ್ವಾಮಿ ನಿಮ್ಮೊಡನೆ ಇರಲಿ!” ಎಂದು ಕೆಲಸದಾಳುಗಳನ್ನು ವಂದಿಸಿದನು. ಅದಕ್ಕೆ ಅವರು, “ಸರ್ವೇಶ್ವರ ನಿಮ್ಮನ್ನೂ ಹರಸಲಿ!” ಎಂದು ಪ್ರತಿವಂದನೆ ಮಾಡಿದರು.
ಬೋವಜನು ಮೇಸ್ತ್ರಿಯನ್ನು ಕರೆದು, “ಇವಳು ಯಾವ ಮನೆಯ ಹೆಣ್ಣು?” ಎಂದು ವಿಚಾರಿಸಿದನು.
ಅದಕ್ಕೆ ಆ ಮೇಸ್ತ್ರಿ, “ಇವಳು ಮೋವಾಬ್ಯಳು, ನವೊಮಿಯ ಸಂಗಡ ಮೋವಾಬ್ ನಾಡಿನಿಂದ ಹಿಂದಿರುಗಿ ಬಂದವಳು.
ಕೊಯ್ಯುವವರ ಹಿಂದೆ ಹೋಗಿ ಸಿವುಡುಗಳ ಮಧ್ಯೆ ಹಕ್ಕಲಾಯ್ದುಕೊಳ್ಳುವುದಕ್ಕೆ ಅಪ್ಪಣೆಯಾಗಬೇಕೆಂದು ಕೇಳಿಕೊಂಡಳು. ಬೆಳಿಗ್ಗೆ ಬಂದವಳು ಇನ್ನೂ ಇಲ್ಲೇ ಇದ್ದಾಳೆ. ಸದ್ಯಕ್ಕೆ ನೆರಳಿನಲ್ಲಿ ವಿಶ್ರಮಿಸಿಕೊಳ್ಳುತ್ತಿದ್ದಾಳೆ,” ಎಂದು ಉತ್ತರಕೊಟ್ಟನು.
ತದನಂತರ ಬೋವಜನು ರೂತಳಿಗೆ, “ನೋಡಮ್ಮಾ, ಈ ಹೊಲವನ್ನು ಬಿಟ್ಟು ಮತ್ತೆ ಎಲ್ಲಿಯೂ ತೆನೆ ಆಯಲು ಹೋಗಬೇಕಾಗಿಲ್ಲ, ನನ್ನ ಹೆಣ್ಣಾಳುಗಳ ಜೊತೆಯಲ್ಲಿಯೇ ಇರು.
ಅವರು ಎಲ್ಲಿ ಪೈರು ಕೊಯ್ಯುತ್ತಾರೋ ಅವರ ಹಿಂದೆ ಹೋಗಿ ತೆನೆಗಳನ್ನು ಆರಿಸಿಕೊ. ನಿನಗೆ ಯಾರೂ ತೊಂದರೆ ಕೊಡಬಾರದೆಂದು ನನ್ನ ಆಳುಗಳಿಗೆ ಆಜ್ಞಾಪಿಸಿದ್ದೇನೆ. ನಿನಗೆ ಬಾಯಾರಿಕೆಯಾದರೆ ಹೋಗಿ ನನ್ನ ಆಳುಗಳು ತುಂಬಿಸಿರುವ ನೀರಿನ ಬಾನೆಗಳಿಂದ ಕುಡಿ,” ಎಂದನು.
೧೦
ಆಗ ರೂತಳು ಅವನಿಗೆ ಸಾಷ್ಟಾಂಗವೆರಗಿ ನಮಸ್ಕರಿಸಿ, “ಒಡೆಯಾ, ನನ್ನ ಮೇಲೆ ಏಕೆ ಇಷ್ಟು ಕನಿಕರ? ಪರದೇಶಿಯಾದ ನನಗೆ ತಾವಿಷ್ಟು ದಯೆತೋರಿಸುವುದೇಕೆ?” ಎಂದಳು.
೧೧
ಅದಕ್ಕೆ ಬೋವಜನು, “ನಿನ್ನ ಪತಿ ತೀರಿಹೋದಂದಿನಿಂದ ನೀನು ಅತ್ತೆಗಾಗಿ ಮಾಡಿದ್ದ ಎಲ್ಲವನ್ನೂ ಕುರಿತು ಕೇಳಿದ್ದೇನೆ. ನೀನು ಹೇಗೆ ನಿನ್ನ ತಂದೆತಾಯಿಗಳನ್ನು ಮತ್ತು ಸ್ವಂತ ನಾಡನ್ನು ಬಿಟ್ಟು, ಅಪರಿಚಿತರಾದ ಜನರ ಮಧ್ಯೆ ವಾಸಿಸಲು ಬಂದಿರುವೆ ಎಂಬುದು ಸಹ ನನಗೆ ತಿಳಿದಿದೆ.
೧೨
ನೀನು ಮಾಡಿದ್ದಕ್ಕೆಲ್ಲಾ ದೇವರು ನಿನಗೆ ತಕ್ಕ ಪ್ರತಿಫಲವನ್ನೀಯಲಿ. ಇಸ್ರಯೇಲಿನ ದೇವರಾದ ಸರ್ವೇಶ್ವರಸ್ವಾಮಿಯ ಆಶ್ರಯವನ್ನರಸಿ ಬಂದಿರುವೆ. ಅವರು ನಿನಗೆ ಹೇರಳವಾದ ಆಶೀರ್ವಾದವನ್ನು ಅನುಗ್ರಹಿಸಲಿ!” ಎಂದನು.
೧೩
ಆಗ ರೂತಳು, “ಒಡೆಯಾ, ತಾವು ನನಗೆ ದೊಡ್ಡ ಉಪಕಾರವನ್ನು ಮಾಡಿದ್ದೀರಿ. ನಾನು ತಮ್ಮ ದಾಸಿ ಎನಿಸಿಕೊಳ್ಳುವುದಕ್ಕೂ ಯೋಗ್ಯಳಲ್ಲ. ಆದರೂ ನನ್ನನ್ನು ಕನಿಕರಿಸಿ ಪ್ರೀತಿಯಿಂದ ಮಾತನಾಡಿದ್ದೀರಿ,” ಎಂದು ಹೇಳಿದಳು.
೧೪
ಊಟದ ಸಮಯದಲ್ಲಿ ಬೋವಜನು ರೂತಳನ್ನು ಕರೆದು, “ಇಲ್ಲಿ ಬಾ, ರೊಟ್ಟಿಯನ್ನು ತೆಗೆದುಕೊಂಡು ದ್ರಾಕ್ಷಾರಸದಲ್ಲಿ ಅದ್ದಿ ತಿನ್ನು,” ಎಂದನು. ಆಕೆ ಕೊಯ್ಯುವವರ ಸಂಗಡ ಕುಳಿತುಕೊಂಡಳು. ಇದಲ್ಲದೆ ಬೋವಜನು ಆಕೆಗೆ ಸುಟ್ಟ ತೆನೆಗಳನ್ನು ಕೊಟ್ಟನು. ಅವಳು ತೃಪ್ತಿಯಾಗಿ ಊಟಮಾಡಿ ಇನ್ನೂ ಸ್ವಲ್ಪ ಉಳಿಸಿಕೊಂಡಳು.
೧೫
ಅವಳು ಪುನಃ ಹಕ್ಕಲು ತೆನೆಗಳನ್ನು ಆರಿಸಿಕೊಳ್ಳಲು ಹೋದಾಗ, ಬೋವಜನು ತನ್ನ ಆಳುಗಳಿಗೆ, “ಸಿವುಡುಗಳ ಮಧ್ಯದಲ್ಲೂ ಅವಳು ತೆನೆಗಳನ್ನು ಆರಿಸಿಕೊಳ್ಳಲಿ; ಅಡ್ಡಿಮಾಡಬೇಡಿ.
೧೬
ನೀವು ಕೊಯ್ಯುವಾಗ ಕೆಲವು ತೆನೆಗಳಿಂದ ಕಟ್ಟುಗಳಿಂದ ಕಿತ್ತು ಕೆಳಗೆ ಹಾಕಿರಿ. ಅವಳು ಆಯ್ದುಕೊಳ್ಳಲಿ; ಯಾರೂ ಅವಳನ್ನು ಗದರಿಸಬೇಡಿ,” ಎಂದು ಆಜ್ಞೆಯಿತ್ತನು.
೧೭
ಅದರಂತೆಯೇ ರೂತಳು ಸಾಯಂಕಾಲದವರೆಗೆ ತೆನೆಗಳನ್ನು ಆಯ್ದುಕೊಂಡಳು. ಅವನ್ನು ಬಡಿದಾಗ ಸುಮಾರು ಅರ್ಧ ಚೀಲದಷ್ಟು ಜವೆಗೋದಿ ಸಿಕ್ಕಿತು.
೧೮
ಅದನ್ನು ತೆಗೆದುಕೊಂಡು ಊರೊಳಕ್ಕೆ ಹೋಗಿ ತನ್ನ ಅತ್ತೆಗೆ ತೋರಿಸಿದಳು. ಅಂತೆಯೇ ತನ್ನ ಆಹಾರದಿಂದ ಉಳಿಸಿಟ್ಟಿದ್ದನ್ನು ತನ್ನ ಅತ್ತೆಗೆ ಕೊಟ್ಟಳು.
೧೯
ಅದನ್ನು ನೋಡಿ ನವೊಮಿ, “ನೀನು ಈ ದಿನ ಎಲ್ಲಿ ಹಕ್ಕಲಾಯ್ದೆ? ಯಾರ ಹೊಲದಲ್ಲಿ ಕೆಲಸಮಾಡಿದೆ? ನಿನಗೆ ದಯೆ ತೋರಿಸಿದವನಿಗೆ ಶುಭವಾಗಲಿ!” ಎಂದಳು. ಅದಕ್ಕೆ ರೂತಳು, “ನಾನು ತೆನೆ ಆಯ್ದುಕೊಂಡ ಹೊಲವು ಬೋವಜನದು,” ಎಂದು ಹೇಳಿದಳು.
೨೦
ಇದನ್ನು ಕೇಳಿದ ನವೊಮಿ ಆವೇಶದಿಂದ, “ಜೀವಂತರಿಗೂ ಮೃತರಿಗೂ ಮಾಡಿದ ವಾಗ್ದಾನಗಳನ್ನು ನೆರವೇರಿಸುವ ಸರ್ವೇಶ್ವರ ಅವನನ್ನು ಆಶೀರ್ವದಿಸಲಿ!” ಎಂದು ಹರಸಿ, “ಆ ಮನುಷ್ಯ ನಮಗೆ ಹತ್ತಿರದ ನೆಂಟ, ನಮ್ಮನ್ನು ಪೋಷಿಸಬೇಕಾದವನು,” ಎಂದು ತಿಳಿಸಿದಳು.
೨೧
ಇದಲ್ಲದೆ ರೂತಳು, “ಸುಗ್ಗಿಕಾಲ ತೀರುವವರೆಗೂ ನನ್ನ ಆಳುಗಳ ಜೊತೆಯಲ್ಲೇ ಇರಬಹುದೆಂದು ಹೇಳಿದ್ದಾನೆ,” ಎಂದಳು.
೨೨
ಅದಕ್ಕೆ ನವೊಮಿ ತನ್ನ ಸೊಸೆಗೆ, “ಹೌದು, ಮಗಳೇ, ನೀನು ಆತನ ಹೆಣ್ಣಾಳುಗಳ ಸಂಗಡ ಇರುವುದೇ ಒಳ್ಳೆಯದು; ಬೇರೆಯವರ ಹೊಲದಲ್ಲಿ ನಿನಗೆ ತೊಂದರೆಯಾದೀತು,” ಎಂದು ಸಲಹೆಕೊಟ್ಟಳು.
೨೩
ಅದರಂತೆಯೆ ರೂತಳು ಜವೆಗೋದಿ ಮತ್ತು ಗೋದಿಯ ಸುಗ್ಗಿ ಮುಗಿಯುವವರೆಗೂ ಬೋವಜನ ಹೆಣ್ಣಾಳುಗಳ ಸಂಗಡ ತೆನೆಗಳನ್ನು ಆಯ್ದುಕೊಳ್ಳುತ್ತಾ ಇದ್ದಳು. ಅತ್ತೆಯ ಮನೆಯಲ್ಲೇ ವಾಸಿಸುತ್ತಿದ್ದಳು.
ರೂತಳು ೨:1
ರೂತಳು ೨:2
ರೂತಳು ೨:3
ರೂತಳು ೨:4
ರೂತಳು ೨:5
ರೂತಳು ೨:6
ರೂತಳು ೨:7
ರೂತಳು ೨:8
ರೂತಳು ೨:9
ರೂತಳು ೨:10
ರೂತಳು ೨:11
ರೂತಳು ೨:12
ರೂತಳು ೨:13
ರೂತಳು ೨:14
ರೂತಳು ೨:15
ರೂತಳು ೨:16
ರೂತಳು ೨:17
ರೂತಳು ೨:18
ರೂತಳು ೨:19
ರೂತಳು ೨:20
ರೂತಳು ೨:21
ರೂತಳು ೨:22
ರೂತಳು ೨:23
ರೂತಳು 1 / ರೂತಳು 1
ರೂತಳು 2 / ರೂತಳು 2
ರೂತಳು 3 / ರೂತಳು 3
ರೂತಳು 4 / ರೂತಳು 4