English
A A A A A
×

ಕನ್ನಡ ಬೈಬಲ್ (KNCL) 2016

ರೂತಳು ೧
ಇಸ್ರಯೇಲ್ ನಾಡಿನಲ್ಲಿ ನ್ಯಾಯಸ್ಥಾಪಕರು ಆಳುತ್ತಿದ್ದಾಗ, ಒಮ್ಮೆ ಕಠಿಣವಾದ ಬರಗಾಲವು ತಲೆದೋರಿತು. ಈ ಕಾರಣ ಜುದೇಯ ಪ್ರಾಂತ್ಯದ ಬೆತ್ಲೆಹೇಮ್ ಎಂಬ ಊರಿನವನೊಬ್ಬನು ತನ್ನ ಪತ್ನಿ ಮತ್ತು ಪುತ್ರರಿಬ್ಬರನ್ನು ಕರೆದುಕೊಂಡು ಮೋವಾಬ್ ಎಂಬ ನಾಡಿಗೆ ವಲಸೆ ಹೋದನು.
ಅವನ ಹೆಸರು ಎಲಿಮೆಲೆಕ್; ಅವನ ಪತ್ನಿಯ ಹೆಸರು ನವೊಮಿ. ಮಹ್ಲೋನ್ ಮತ್ತು ಕಿಲ್ಯೋನ್ ಅವರ ಇಬ್ಬರು ಪುತ್ರರು. ಇವರು ಇಸ್ರಯೇಲ್ ವಂಶದ ಎಫ್ರಾತಕುಲಕ್ಕೆ ಸೇರಿದವರು, ಬೆತ್ಲೆಹೇಮಿನವರು.
ಇವರು ಮೋವಾಬ್ ನಾಡಿನಲ್ಲಿ ವಾಸಿಸುತ್ತಿದ್ದಾಗ ಎಲಿಮೆಲೆಕನು ಮರಣ ಹೊಂದಿದನು. ವಿಧವೆಯಾದ ನವೊಮಿ ಇಬ್ಬರು ಗಂಡುಮಕ್ಕಳೊಡನೆ ಅಲ್ಲೇ ಉಳಿದಳು.
ಹುಡುಗರು ಇಬ್ಬರೂ, ಮೋವಾಬ್ಯ ಹುಡುಗಿಯರನ್ನು ವಿವಾಹ ಆದರು. ಒಬ್ಬಳ ಹೆಸರು ಒರ್ಫಾ ಮತ್ತು ಇನ್ನೊಬ್ಬಳು ರೂತ್. ಅವರು ಅಲ್ಲಿ ಸುಮಾರು ಹತ್ತು ವರ್ಷಗಳ ಕಾಲ ವಾಸಮಾಡಿದ ನಂತರ,
ಮಹ್ಲೋನ್ ಮತ್ತು ಕಿಲ್ಯೋನ್ ಸಹ ತೀರಿಹೋದರು. ಹೀಗೆ ನವೊಮಿ ತನ್ನ ಪತಿಯನ್ನೂ ಇಬ್ಬರು ಪುತ್ರರನ್ನೂ ಕಳೆದುಕೊಂಡು ಒಬ್ಬಂಟಿಗಳು ಆದಳು.
ಸರ್ವೇಶ್ವರಸ್ವಾಮಿಯ ಅನುಗ್ರಹದಿಂದ ತನ್ನ ನಾಡಿನಲ್ಲಿ ಒಳ್ಳೆಯ ಮಳೆ ಬೆಳೆಗಳಾಗಿವೆ ಎಂಬ ಸಮಾಚಾರ ಮೋವಾಬ್ ನಾಡಿನಲ್ಲಿದ್ದ ನವೊಮಿಗೆ ತಿಳಿದು ಬಂದಿತು.
ಆದ್ದರಿಂದ ಅವಳು ಅಲ್ಲಿಗೆ ಹಿಂದಿರುಗಿ ಹೋಗಲು ಸಿದ್ಧತೆಮಾಡಿ ಜುದೇಯಕ್ಕೆ ಹೊರಟಳು. ಸೊಸೆಯರು ಅವಳ ಜೊತೆಯಲ್ಲೆ ಹೋದರು.
ಹೀಗೆ ಹೋಗುತ್ತಿರುವಾಗ ದಾರಿಯಲ್ಲಿ ನವೊಮಿ ಅವರಿಗೆ: “ನೀವು ಇಬ್ಬರೂ ನಿಮ್ಮ ತವರುಮನೆಗಳಿಗೆ ಹಿಂದಿರುಗಿರಿ. ನನಗೂ ಮರಣಹೊಂದಿದ ನನ್ನ ಮಕ್ಕಳಿಗೂ ನೀವು ಒಳಿತು ಮಾಡಿದಿರಿ.
ಸರ್ವೇಶ್ವರ ನಿಮಗೂ ಹಾಗೆಯೇ ಒಳಿತನ್ನು ಮಾಡಲಿ. ನೀವಿಬ್ಬರೂ ಪುನಃ ಮದುವೆಯಾಗಿ ಸುಖವಾಗಿರುವಂತೆ ಅನುಗ್ರಹಿಸಲಿ!” ಎಂದು ಹರಸಿ ಅವರನ್ನು ಬೀಳ್ಕೊಡುತ್ತಾ ಮುದ್ದಿಟ್ಟಳು.
೧೦
ಆದರೆ ಅವರು, “ಇಲ್ಲಮ್ಮಾ, ನಿಮ್ಮನ್ನು ಬಿಟ್ಟು ಹೋಗಲಾರೆವು. ನಾವೂ ನಿಮ್ಮ ಜೊತೆಯಲ್ಲಿಯೇ ನಿಮ್ಮ ಸ್ವಜನರ ಬಳಿಗೆ ಬರುತ್ತೇವೆ,” ಎಂದು ಅಳಲಾರಂಭಿಸಿದರು.
೧೧
ಆಗ ನವೊಮಿ, “ಮಕ್ಕಳೇ, ನೀವು ಹಿಂತಿರುಗುವುದು ಒಳ್ಳೆಯದು. ನನ್ನ ಸಂಗಡ ಏಕೆ ಬರಬೇಕೆಂದಿರುವಿರಿ? ನೀವು ಪುನಃ ಮದುವೆಯಾಗುವುದಕ್ಕೆ ನನಗೆ ಬೇರೆ ಮಕ್ಕಳಿರುವರೇ?
೧೨
ಮಕ್ಕಳೇ, ನೀವು ಹಿಂದಿರುಗಿ ಹೋಗಿರಿ. ಪುನಃ ಮದುವೆಮಾಡಿಕೊಳ್ಳುವ ಪ್ರಾಯ ನನಗೆ ದಾಟಿಹೋಗಿದೆ. ಒಂದು ವೇಳೆ ಸಂತಾನಭಾಗ್ಯದ ನಿರೀಕ್ಷೆಯಿಂದ ಈ ಹೊತ್ತೇ ಮದುವೆಯಾಗಿ ಮಕ್ಕಳನ್ನು ಹಡೆದರೂ
೧೩
ಅವರು ಬೆಳೆದು ದೊಡ್ಡವರಾಗುವವರೆಗೂ ಮದುವೆಯಾಗದೆ ಇರುವಿರೋ? ಬೇಡ, ಮಕ್ಕಳೇ, ಸರ್ವೇಶ್ವರ ನನ್ನ ಕೈ ಬಿಟ್ಟಿದ್ದಾರೆ, ನಿಮಗಾಗಿ ನಾನು ಬಹಳ ವಿಷಾದಿಸುತ್ತೇನೆ,” ಎಂದು ಸಮಾಧಾನ ಹೇಳಿದಳು.
೧೪
ಅವರು ಇದನ್ನು ಕೇಳಿ ಇನ್ನೂ ಹೆಚ್ಚಾಗಿ ಅತ್ತರು. ಅನಂತರ ಒರ್ಫಾ ಅತ್ತೆಗೆ ಮುತ್ತಿಟ್ಟು ತನ್ನ ಮನೆಗೆ ಹಿಂದಿರುಗಿ ಹೋದಳು. ರೂತಳು ಮಾತ್ರ ಅತ್ತೆಯನ್ನು ಬಿಟ್ಟುಹೋಗಲಿಲ್ಲ.
೧೫
ಆಗ ನವೊಮಿ ರೂತಳಿಗೆ: “ನೋಡು, ನಿನ್ನ ಓರಗಿತ್ತಿಯು ತನ್ನ ಜನಾಂಗದವರ ಬಳಿಗೂ ತನ್ನ ಕುಲದೇವರ ಬಳಿಗೂ ಹಿಂದಿರುಗಿ ಹೋಗಿದ್ದಾಳೆ. ನೀನೂ ಅವಳಂತೆಯೇ ಹೋಗಿಬಿಡು,” ಎಂದು ಒತ್ತಾಯಪಡಿಸಿದಳು.
೧೬
ಅದಕ್ಕೆ ರೂತಳು: “ನಿಮ್ಮನ್ನು ಬಿಟ್ಟು ಹೋಗುವಂತೆ ಒತ್ತಾಯಪಡಿಸಬೇಡಿ. ನೀವು ಎಲ್ಲಿಗೆ ಹೋದರೂ ನಾನೂ ಅಲ್ಲಿಗೆ ಬರುತ್ತೇನೆ. ನೀವು ಎಲ್ಲಿ ವಾಸಿಸಿದರೂ ನಾನು ಅಲ್ಲೇ ವಾಸಿಸುತ್ತೇನೆ.
೧೭
ನಿಮ್ಮ ಜನರೇ ನನ್ನ ಜನರು; ನಿಮ್ಮ ದೇವರೇ ನನ್ನ ದೇವರು; ನೀವು ಸಾಯುವಲ್ಲೇ ನಾನು ಸಾಯುವೆನು; ಅಲ್ಲಿಯೇ ನನಗೆ ಸಮಾಧಿಯಾಗಲಿ. ಮರಣದಲ್ಲಿಯೂ ನಾನು ನಿಮ್ಮನ್ನು ಬಿಟ್ಟಿರಲಾರೆ. ಇಲ್ಲದಿದ್ದರೆ ಸರ್ವೇಶ್ವರ ನನಗೆ ತಕ್ಕ ದಂಡನೆಯನ್ನು ವಿಧಿಸಲಿ!” ಎಂದು ಬೇಡಿಕೊಂಡಳು.
೧೮
ರೂತಳು ತನ್ನ ಸಂಗಡ ಬರಲು ನಿರ್ಧರಿಸಿದ್ದಾಳೆಂದು ತಿಳಿದು ನವೊಮಿ ಅವಳನ್ನು ಮತ್ತೆ ಒತ್ತಾಯಪಡಿಸಲಿಲ್ಲ.
೧೯
ಹಾಗೆಯೇ ಪ್ರಯಾಣವನ್ನು ಮುಂದುವರೆಸಿ ಅವರಿಬ್ಬರೂ ಬೆತ್ಲೆಹೇಮನ್ನು ತಲುಪಿದರು. ಅವರು ಊರಿಗೆ ಹಿಂದಿರುಗಿ ಬಂದ ಸಂಗತಿ ಜನರಲ್ಲಿ ಕುತೂಹಲ ಮೂಡಿಸಿತು. ಊರಿನ ಹೆಂಗಸರು, “ಈಕೆ ನವೊಮಿಯಲ್ಲವೇ?” ಎಂದು ವಿಚಾರಿಸತೊಡಗಿದರು.
೨೦
ಅದಕ್ಕೆ ಅವಳು, “ನನ್ನನ್ನು ‘ನವೊಮಿ’ ಎಂದು ಕರೆಯಬೇಡಿ; ‘ಮಾರಾ’ ಎಂದು ಕರೆಯಿರಿ. ಏಕೆಂದರೆ ಸರ್ವಶಕ್ತ ದೇವರು ನನ್ನನ್ನು ಬಹಳ ದುಃಖಪಡಿಸಿದ್ದಾರೆ.
೨೧
ಸಿರಿವಂತಳಾಗಿ ಇಲ್ಲಿಂದ ಹೋದೆ. ಗತಿಹೀನಳನ್ನಾಗಿ ಸರ್ವೇಶ್ವರ ನನ್ನನ್ನು ಹಿಂದಕ್ಕೆ ಕರೆತಂದಿದ್ದಾರೆ. ಹೀಗೆ ಸರ್ವಶಕ್ತ ದೇವರು ನನಗೆ ವಿರೋಧವಾಗಿ ನನ್ನನ್ನು ಬಾಧಿಸಿರುವಾಗ ನೀವು ನನ್ನನ್ನು ನವೊಮಿ ಎಂದು ಕರೆಯುವುದು ಸರಿಯೇ?’ ಎಂದು ಉತ್ತರಕೊಟ್ಟಳು.
೨೨
ಹೀಗೆ ನವೊಮಿ ತನ್ನ ಮೋವಾಬ್ಯ ಸೊಸೆಯಾದ ರೂತಳ ಸಂಗಡ ಬೆತ್ಲೆಹೇಮಿಗೆ ಬಂದಳು. ಆಗ ಜವೆಗೋದಿಯ ಸುಗ್ಗಿ ಪ್ರಾರಂಭವಾಗಿತ್ತು