೧ |
ಇಸ್ರಯೇಲರು ಮತ್ತೆ ಸರ್ವೇಶ್ವರಸ್ವಾಮಿಯ ದೃಷ್ಟಿಯಲ್ಲಿ ದ್ರೋಹಿಗಳಾದರು. ಆದ್ದರಿಂದ ಸರ್ವೇಶ್ವರ ಅವರನ್ನು ಏಳುವರ್ಷಕಾಲ ಮಿದ್ಯಾನ್ಯರ ಕೈಗೊಪ್ಪಿಸಿದರು. |
೨ |
ಮಿದ್ಯಾನ್ಯರ ಶಕ್ತಿ ಹೆಚ್ಚಿತು. ಇಸ್ರಯೇಲರು ಅವರಿಗೆ ಹೆದರಿ ಬೆಟ್ಟಗುಡ್ಡಗಳಲ್ಲಿ ಕಂದರಗಳನ್ನೂ ಗುಹೆಗಳನ್ನೂ ಮಾಡಿ ಅವುಗಳಲ್ಲಿ ವಾಸಮಾಡಿದರು. |
೩ |
ಇವರು ಮಾಡುತ್ತಿದ್ದ ಬಿತ್ತನೆಯನ್ನು ಮಿದ್ಯಾನ್ಯರು, ಅಮಾಲೇಕ್ಯರು, ಹಾಗು ಪೂರ್ವದೇಶದವರು ಇವರಿಗೆ ವಿರುದ್ಧ ದಂಡೆತ್ತಿ ಬಂದು ಹಾಳು ಮಾಡುತ್ತಿದ್ದರು. |
೪ |
ಗಾಜಾ ಪ್ರಾಂತ್ಯದವರೆಗೆ ಭೂಮಿಯ ಫಲವನ್ನೆಲ್ಲ ನಾಶ ಮಾಡುತ್ತಿದ್ದರು. ಈ ಕಾರಣ ಇಸ್ರಯೇಲರಿಗೆ ದವಸಧಾನ್ಯವಾಗಲಿ, ಕುರಿದನಕತ್ತೆಗಳಾಗಲಿ ಉಳಿಯುತ್ತಿರಲಿಲ್ಲ. |
೫ |
ಆ ಶತ್ರುಗಳು ತಮ್ಮ ಕುರಿದನ ಗುಡಾರಗಳ ಸಮೇತ ಮಿಡತೆಗಳಂತೆ ಗುಂಪು ಗುಂಪಾಗಿ ಬರುತ್ತಿದ್ದರು. ಅವರ ಒಂಟೆಗಳೂ ಅಸಂಖ್ಯವಾಗಿದ್ದವು. ಆ ಗುಂಪುಗಳಿಂದ ನಾಡೆಲ್ಲ ನಾಶವಾಗುತ್ತಿತ್ತು. |
೬ |
ಆ ಮಿದ್ಯಾನ್ಯರ ನಿಮಿತ್ತ ಇಸ್ರಯೇಲರು ಬಹಳವಾಗಿ ಕುಗ್ಗಿಹೋಗಿ ಸರ್ವೇಶ್ವರನಿಗೆ ಮೊರೆಯಿಟ್ಟರು. |
೭ |
ಹೀಗೆ ಮಿದ್ಯಾನ್ಯರ ಕಾಟವನ್ನು ತಾಳಲಾಗದೆ ಇಸ್ರಯೇಲರು ಮೊರೆಯಿಟ್ಟಾಗ ಸರ್ವೇಶ್ವರ ಅವರಿಗೊಬ್ಬ ಪ್ರವಾದಿಯನ್ನು ಕಳುಹಿಸಿದರು. |
೮ |
ಅವನು ಬಂದು ಇಸ್ರಯೇಲರಿಗೆ ಹೀಗೆಂದನು: “ನಿಮ್ಮ ದೇವರಾದ ಸರ್ವೇಶ್ವರ ಹೇಳುವ ಈ ಮಾತುಗಳನ್ನು ಗಮನಿಸಿರಿ: ‘ನೀವು ದಾಸತ್ವದಲ್ಲಿದ್ದಾಗ ನಿಮ್ಮನ್ನು ಈಜಿಪ್ಟಿನಿಂದ ಕರೆತಂದವನು ನಾನು. |
೯ |
ಈಜಿಪ್ಟಿನವರಿಂದ ನಿಮ್ಮನ್ನು ಬಿಡಿಸಿದೆನಲ್ಲದೆ ಬೇರೆ ಎಲ್ಲಾ ಶೋಷಕರಿಂದ ನಿಮ್ಮನ್ನು ಪಾರುಮಾಡಿ, ನಿಮ್ಮ ಕಣ್ಮುಂದೆಯೇ ಅವರನ್ನು ಅಟ್ಟಿಬಿಟ್ಟು, ಅವರ ನಾಡನ್ನು ನಿಮಗೆ ಕೊಟ್ಟೆ. |
೧೦ |
ಸರ್ವೇಶ್ವರನೆಂಬ ನಾನೇ ನಿಮ್ಮ ದೇವರಾಗಿದ್ದೇನೆಂದೂ ನೀವು ಅಮೋರಿಯರ ಮಧ್ಯೆ ವಾಸಿಸುವಾಗ ಅವರ ದೇವತೆಗಳನ್ನು ಪೂಜಿಸಬಾರದೆಂದೂ ಹೇಳಿದೆ. ಆದರೆ ನೀವು ನನ್ನ ಮಾತನ್ನು ಕೇಳಲಿಲ್ಲ’.” |
೧೧ |
ಆಮೇಲೆ ಸರ್ವೇಶ್ವರನ ದೂತನು ಬಂದು ಒಫ್ರದಲ್ಲಿದ್ದ ಓಕ್ ಮರದ ಅಡಿಯಲ್ಲಿ ಕುಳಿತುಕೊಂಡನು. ಅದು ಅಬೀಯೆಜೆರನ ಗೋತ್ರದವನಾದ ಯೋವಾಷನದಾಗಿತ್ತು. ಅವನ ಮಗ ಗಿದ್ಯೋನನು ಮಿದ್ಯಾನ್ಯರಿಗೆ ಗೊತ್ತಾಗದ ಹಾಗೆ ಅಲ್ಲಿ ದ್ರಾಕ್ಷಿಯ ಆಲೆಯ ಮರೆಯಲ್ಲಿ ಗೋದಿಯನ್ನು ಬಡಿಯುತ್ತಿದ್ದನು. |
೧೨ |
ಸರ್ವೇಶ್ವರನ ದೂತನು ಗಿದ್ಯೋನನಿಗೆ ಪ್ರತ್ಯಕ್ಷನಾಗಿ ಅವನಿಗೆ, “ಪರಾಕ್ರಮಶಾಲಿಯೇ, ಸರ್ವೇಶ್ವರ ನಿನ್ನೊಡನೆ ಇದ್ದಾರೆ” ಎಂದನು. |
೧೩ |
ಆಗ ಗಿದ್ಯೋನನು ಅವನಿಗೆ, “ಸ್ವಾಮೀ, ಸರ್ವೇಶ್ವರ ನನ್ನೊಡನೆ ಇದ್ದರೆ ನಮಗೆ ಇದೆಲ್ಲಾ ಏಕೆ ಸಂಭವಿಸಿತು? ನಮ್ಮ ಹಿರಿಯರು, ಸರ್ವೇಶ್ವರ ಅದ್ಭುತಗಳನ್ನು ನಡಿಸಿ ತಮ್ಮನ್ನು ಈಜಿಪ್ಟಿನಿಂದ ಬಿಡಿಸಿದರೆಂಬುದಾಗಿ ವಿವರಿಸುತ್ತಿದ್ದರು. ಅಂಥ ಅದ್ಭುತಗಳು ಈಗೆಲ್ಲಿವೆ? ಅವರು ನಮ್ಮನ್ನು ತಿರಸ್ಕರಿಸಿ ಮಿದ್ಯಾನ್ಯರ ಕೈಗೆ ಒಪ್ಪಿಸಿಬಿಟ್ಟಿದ್ದಾರಲ್ಲಾ,” ಎನ್ನಲು, |
೧೪ |
ಸರ್ವೇಶ್ವರ ಅವನನ್ನು ದಿಟ್ಟಿಸಿ ನೋಡಿ, “ನಾನು ನಿನ್ನನ್ನು ಕಳುಹಿಸುತ್ತೇನೆ, ಹೋಗು; ಈ ನಿನ್ನ ಬಲದಿಂದ ಇಸ್ರಯೇಲರನ್ನು ಮಿದ್ಯಾನ್ಯರಿಂದ ಬಿಡಿಸು,” ಎಂದು ಹೇಳಿದರು. |
೧೫ |
ಆಗ ಗಿದ್ಯೋನನು, “ಸ್ವಾಮೀ, ನಾನು ಇಸ್ರಯೇಲರನ್ನು ರಕ್ಷಿಸುವುದು ಹೇಗೆ? ಮನಸ್ಸೆ ಕುಲದಲ್ಲಿ ನನ್ನ ಮನೆ ಕನಿಷ್ಠವಾದದ್ದು; ಮತ್ತು ನಾನು ನಮ್ಮ ಕುಟುಂಬದಲ್ಲಿ ಅಲ್ಪನು,” ಎಂದನು. |
೧೬ |
ಸರ್ವೇಶ್ವರ ಅವನಿಗೆ, “ನಾನು ನಿನ್ನೊಂದಿಗೆ ಇರುವುದರಿಂದ ನೀನು ಮಿದ್ಯಾನ್ಯರೆಲ್ಲರನ್ನೂ ಒಬ್ಬ ಮನುಷ್ಯನನ್ನೋ ಎಂಬಂತೆ ಸದೆಬಡಿಯುವೆ,” ಎಂದರು. |
೧೭ |
ಗಿದ್ಯೋನನು: “ಸ್ವಾಮೀ, ದಯವಿರಲಿ; ನನ್ನೊಂದಿಗೆ ಮಾತಾಡುತ್ತಿರುವ ತಾವು ಸ್ವಾಮಿಯವರೇ ಆಗಿದ್ದೀರೆಂಬುದಕ್ಕೆ ನನಗೊಂದು ಗುರುತನ್ನು ಅನುಗ್ರಹಿಸಬೇಕು. |
೧೮ |
ನಾನು ಹೋಗಿ ತಮಗೆ ಕಾಣಿಕೆಯನ್ನು ತೆಗೆದುಕೊಂಡು ಬರುವವರೆಗೆ ತಾವು ಈ ಸ್ಥಳವನ್ನು ಬಿಡಬಾರದು,” ಎಂದು ಬಿನ್ನವಿಸಲು ಅವರು, “ನೀನು ತಿರುಗಿ ಬರುವವರೆಗೆ ನಾನು ಇಲ್ಲೇ ಇರುವೆನು,” ಎಂದರು. |
೧೯ |
ಗಿದ್ಯೋನನು ಮನೆಗೆ ಹೋಗಿ ಒಂದು ಆಡಿನ ಮರಿಯನ್ನು ಪಕ್ವಮಾಡಿ ಹತ್ತು ಕಿಲೋಗ್ರಾಂ ಹಿಟ್ಟಿನಿಂದ ಹುಳಿಯಿಲ್ಲದ ರೊಟ್ಟಿಗಳನ್ನು ಸುಟ್ಟು ಮಾಂಸವನ್ನು ಪುಟ್ಟಿಯಲ್ಲಿಟ್ಟು ಅದರ ರಸವನ್ನು ಬಟ್ಟಲಿನಲ್ಲಿ ಹೊಯ್ದು ಎಲ್ಲವನ್ನೂ ಓಕ್ ಮರದ ಕೆಳಗೆ ಅವರ ಮುಂದೆ ತಂದಿಟ್ಟನು. |
೨೦ |
ಆಗ ದೇವದೂತನು ಅವನಿಗೆ, “ಮಾಂಸವನ್ನೂ ರೊಟ್ಟಿಗಳನ್ನೂ ಆ ಬಂಡೆಯ ಮೇಲಿಟ್ಟು ರಸವನ್ನು ಹೊಯ್ಯಿ” ಎನ್ನಲು ಅವನು ಹಾಗೆಯೇ ಮಾಡಿದನು. |
೨೧ |
ಅನಂತರ ಸರ್ವೇಶ್ವರನ ದೂತನು ತನ್ನ ಕೈಕೋಲನ್ನು ಚಾಚಿ ಅದರ ತುದಿಯನ್ನು ಆ ರೊಟ್ಟಿಗಳಿಗೂ ಮಾಂಸಕ್ಕೂ ಮುಟ್ಟಿಸಲು ಬಂಡೆಯಿಂದ ಬೆಂಕಿಯೆದ್ದು ಅವೆರಡನ್ನೂ ದಹಿಸಿಬಿಟ್ಟಿತು. ಸರ್ವೇಶ್ವರನ ದೂತನು ಅದೃಶ್ಯನಾದನು. |
೨೨ |
ಆತನು ಸರ್ವೇಶ್ವರನ ದೂತನೆಂದು ಗಿದ್ಯೋನನು ತಿಳಿದು ಭಯಪಟ್ಟು, “ಅಯ್ಯೋ ಸ್ವಾಮಿ, ಸರ್ವೇಶ್ವರಾ, ಸರ್ವೇಶ್ವರನ ದೂತನನ್ನು ಮುಖಾಮುಖಿಯಾಗಿ ನೋಡಿಬಿಟ್ಟೆನಲ್ಲಾ” ಎಂದು ಕೂಗಿದನು. |
೨೩ |
ಆದರೆ ಸರ್ವೇಶ್ವರನು ಅವನಿಗೆ, “ಸಮಾಧಾನದಿಂದಿರು, ಹೆದರಬೇಡ; ನೀನು ಸಾಯುವುದಿಲ್ಲ,” ಎಂದನು. |
೨೪ |
ಗಿದ್ಯೋನನು ಅಲ್ಲೇ ಸರ್ವೇಶ್ವರನಿಗಾಗಿ ಒಂದು ಬಲಿಪೀಠವನ್ನು ಕಟ್ಟಿ ಅದಕ್ಕೆ ‘ಯೆಹೋವ ಷಾಲೋಮ್’ ಎಂದು ಹೆಸರಿಟ್ಟನು; ಅದು ಈವರೆಗೂ ಅಬೀಯೆಜೆರ್ ಗೋತ್ರದವರ ಒಫ್ರದಲ್ಲಿರುತ್ತದೆ. |
೨೫ |
ಅದೇ ದಿನ ರಾತ್ರಿ ಸರ್ವೇಶ್ವರ ಅವನಿಗೆ, “ನೀನು ನಿನ್ನ ತಂದೆಯ ಹೋರಿಗಳಲ್ಲಿ ಒಂದು ಚಿಕ್ಕ ಹೋರಿಯನ್ನೂ ಏಳು ವರ್ಷದ ಇನ್ನೊಂದು ಹೋರಿಯನ್ನೂ ತೆಗೆದುಕೊಂಡು ಹೋಗಿ ನಿನ್ನ ತಂದೆ ಕಟ್ಟಿರುವ ಬಾಳನ ಬಲಿಪೀಠವನ್ನು ಕೆಡವಿ ಅದರ ಬಳಿಯಲ್ಲಿರುವ ಅಶೇರವೆಂಬ ವಿಗ್ರಹಸ್ತಂಭವನ್ನು ಕಡಿದುಹಾಕು. |
೨೬ |
ಈ ಗುಡ್ಡದ ಶಿಖರದಲ್ಲಿ ಸರ್ವೇಶ್ವರನಿಗಾಗಿ ನೇಮಕವಾದ ರೀತಿಯಿಂದ ಒಂದು ಬಲಿಪೀಠವನ್ನು ಕಟ್ಟಿಸು. ನೀನು ಕಡಿದುಹಾಕಿದ ಅಶೇರ ವಿಗ್ರಹಸ್ತಂಭದಿಂದ ಬೆಂಕಿಮಾಡಿ ಆ ಎರಡನೆ ಹೋರಿಯನ್ನು ದಹನ ಬಲಿಯಾಗಿ ಸಮರ್ಪಿಸು,” ಎಂದು ಹೇಳಿದರು. |
೨೭ |
ಅಂತೆಯೇ ಗಿದ್ಯೋನನು ತನ್ನ ಸೇವಕರಲ್ಲಿ ಹತ್ತು ಮಂದಿಯನ್ನು ಕರೆದುಕೊಂಡು ಹೋಗಿ, ಸರ್ವೇಶ್ವರನು ಹೇಳಿದ ಹಾಗೆ ಮಾಡಿದನು. ಆದರೆ ಅವನು ತನ್ನ ಮನೆಯವರಿಗೂ ಊರಿನವರಿಗೂ ಹೆದರಿಕೊಂಡದ್ದರಿಂದ ಅದನ್ನು ಹಗಲಿನಲ್ಲಿ ಮಾಡದೆ ರಾತ್ರಿಯಲ್ಲಿ ಮಾಡಿದನು. |
೨೮ |
ಊರಿನ ಜನರು ಬೆಳಿಗ್ಗೆ ಎದ್ದು ಬಾಳನ ಬಲಿಪೀಠ ಕೆಡವಲಾಗಿರುವುದನ್ನೂ ಅದರ ಸಮೀಪದಲ್ಲಿದ್ದ ವಿಗ್ರಹಸ್ತಂಭ ಕಡಿಯಲಾಗಿರುವುದನ್ನೂ ಹೊಸದಾಗಿ ಕಟ್ಟಿದ ಬಲಿಪೀಠದ ಮೆಲೆ ಎರಡನೆಯ ಹೋರಿ ಬಲಿಯಾದದ್ದನ್ನೂ ಕಂಡು, |
೨೯ |
“ಹೀಗೆ ಮಾಡಿದವರಾರು?” ಎಂದು ಒಬ್ಬರನ್ನೊಬ್ಬರು ವಿಚಾರಿಸಿದರು. ಯೋವಾಷನ ಮಗನಾದ ಗಿದ್ಯೋನನೇ ಎಂದು ಗೊತ್ತಾಯಿತು. |
೩೦ |
ಆ ಜನರು ಯೋವಾಷನಿಗೆ, “ನಿನ್ನ ಮಗನನ್ನು ಹೊರಗೆ ತೆಗೆದುಕೊಂಡು ಬಾ; ಅವನು ಸಾಯಬೇಕು; ಏಕೆಂದರೆ ಬಾಳನ ಬಲಿಪೀಠವನ್ನು ಕೆಡವಿ ಅದರ ಬಳಿಯಲ್ಲಿದ್ದ ಅಶೇರ ವಿಗ್ರಹಸ್ತಂಭವನ್ನು ಕಡಿದುಹಾಕಿದ್ದಾನೆ,” ಎಂದರು. |
೩೧ |
ಯೋವಾಷನು ತನಗೆ ವಿರುದ್ಧವಾಗಿ ನಿಂತವರೆಲ್ಲರಿಗೆ, “ಬಾಳನ ಪರ ನೀವು ವ್ಯಾಜ್ಯಮಾಡಬೇಕೆ? ನೀವು ಅವನನ್ನು ರಕ್ಷಿಸಬೇಕೇ? ಅವನಿಗಾಗಿ ವ್ಯಾಜ್ಯಮಾಡುವವರು ಬೆಳಗಾಗುವಷ್ಟರಲ್ಲಿ ಕೊಲ್ಲಲ್ಪಡಲಿ. ಅವನು ದೇವನಾಗಿದ್ದರೆ ತನ್ನ ಬಲಿಪೀಠವನ್ನು ಕೆಡವಿಬಿಟ್ಟದ್ದಕ್ಕಾಗಿ ತಾನೇ ವ್ಯಾಜ್ಯವಾಡಲಿ,” ಎಂದನು. |
೩೨ |
ಆ ದಿವಸದಲ್ಲಿ ಅವನು, “ಬಾಳನು ತನ್ನ ಬಲಿಪೀಠವನ್ನು ಕೆಡವಿದವನೊಡನೆ ತಾನೇ ವ್ಯಾಜ್ಯ ಮಾಡಲಿ” ಎಂದು ಹೇಳಿದ್ದರಿಂದ ಗಿದ್ಯೋನನಿಗೆ ‘ಯೆರುಬ್ಬಾಳ’ ಎಂದು ಹೆಸರಾಯಿತು. |
೩೩ |
ಇಷ್ಟರಲ್ಲಿ ಮಿದ್ಯಾನ್ಯರೂ ಅಮಾಲೇಕ್ಯರೂ ಮೂಡಣದೇಶದವರೂ ಕೂಡಿ ಹೊಳೆದಾಟಿ ಬಂದು ಇಜ್ರೇಲಿನ ತಗ್ಗಿನಲ್ಲಿ ಪಾಳೆಯಮಾಡಿಕೊಂಡರು. |
೩೪ |
ಆಗ ಗಿದ್ಯೋನನು ಸರ್ವೇಶ್ವರಾತ್ಮಭರಿತನಾಗಿ ಕೊಂಬನ್ನು ಊದಲು ಅಬೀಯೆಜೆರನ ಗೋತ್ರದವರು ಬಂದು ಅವನನ್ನು ಹಿಂಬಾಲಿಸಿದರು. |
೩೫ |
ಅವನು ಉಳಿದ ಮನಸ್ಸೆಯವರ ಬಳಿಗೆ ದೂತರನ್ನು ಕಳುಹಿಸಿದ್ದನು. ಅವರೂ ಕೂಡಿಬಂದರು. ಅಶೇರ್, ಜೆಬುಲೂನ್, ನಫ್ತಾಲಿ ಕುಲಗಳವರ ಬಳಿಗೆ ದೂತರನ್ನು ಕಳುಹಿಸಲು ಅವರೂ ಬಂದು ದಂಡೆಯಾತ್ರೆಗಾಗಿ ಸೇರಿಕೊಂಡರು. |
೩೬ |
ಗಿದ್ಯೋನನು ದೇವರಿಗೆ, “ನೀವು ಹೇಳಿದಂತೆ ಇಸ್ರಯೇಲರನ್ನು ನನ್ನ ಮುಖಾಂತರ ರಕ್ಷಿಸುವಿರೋ ಇಲ್ಲವೋ ಎಂಬುದನ್ನು ತಿಳಿಯಪಡಿಸಿರಿ. |
೩೭ |
ಇಗೋ, ಕಣದಲ್ಲಿ ಕುರಿಯ ತುಪ್ಪಟವನ್ನು ಇಡುತ್ತೇನೆ; ಅದರಲ್ಲಿ ಮಾತ್ರ ಮಂಜು ಬಿದ್ದು ನೆಲವೆಲ್ಲಾ ಒಣಗಿದ್ದರೆ ನೀವು ಹೇಳಿದಂತೆಯೇ ಇಸ್ರಯೇಲರನ್ನು ನನ್ನ ಮುಖಾಂತರ ರಕ್ಷಿಸುವಿರೆಂದು ತಿಳಿಯುವೆನು,” ಎಂದು ವಿಜ್ಞಾಪಿಸಿದನು. |
೩೮ |
ಹಾಗೆಯೇ ಆಯಿತು; ಅವನು ಮರುದಿವಸ ಮುಂಜಾನೆ ಎದ್ದು ತುಪ್ಪಟವನ್ನು ಒತ್ತಿ ಹಿಂಡಲು ಮಂಜಿನ ನೀರು ಒಂದು ಬಟ್ಟಲು ತುಂಬಾ ಆಯಿತು. |
೩೯ |
ಅವನು ಪುನಃ ದೇವರಿಗೆ, “ಸ್ವಾಮೀ, ಸಿಟ್ಟಾಗಬೇಡಿ; ಇನ್ನೊಂದು ಸಾರಿ ಮಾತಾಡುತ್ತೇನೆ. ಇನ್ನು ಒಂದೇ ಸಾರಿ ಈ ತುಪ್ಪಟದಿಂದ ನಿಮ್ಮನ್ನು ಪರೀಕ್ಷಿಸುವುದಕ್ಕೆ ಅಪ್ಪಣೆಯಾಗಲಿ; ಈ ತುಪ್ಪಟ ಮಾತ್ರವೇ ಒಣಗಿದ್ದು ನೆಲದ ಮೇಲೆಲ್ಲಾ ಹನಿಬಿದ್ದಿರಲಿ,” ಎಂದನು. |
೪೦ |
ಆ ರಾತ್ರಿ ದೇವರು ಹಾಗೆಯೇ ಮಾಡಿದರು; ತುಪ್ಪಟ ಮಾತ್ರ ಒಣಗಿತ್ತು; ನೆಲದ ಮೇಲೆಲ್ಲಾ ಹನಿ ಬಿದ್ದಿತ್ತು.
|
Kannada Bible (KNCL) 2016 |
No Data |