A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ಯೂದನು ೧ಪಿತನಾದ ದೇವರ ಪ್ರೀತಿಯಲ್ಲೂ ಯೇಸುಕ್ರಿಸ್ತರ ಆಶ್ರಯದಲ್ಲೂ ಬಾಳುತ್ತಿರುವ ಭಕ್ತರಿಗೆ - ಯೇಸುಕ್ರಿಸ್ತರ ದಾಸನೂ ಯಕೋಬನ ಸಹೋದರನೂ ಆದ ಯೂದನು ಬರೆಯುವ ಪತ್ರ.
ದೇವರಿಂದ ಕರೆಹೊಂದಿರುವ ನಿಮಗೆ ಕರುಣೆಯೂ ಶಾಂತಿಯೂ ಪ್ರೀತಿಯೂ ಸಮೃದ್ಧಿಯಾಗಿ ಲಭಿಸಲಿ!
ಪ್ರಿಯ ಸಹೋದರರೇ, ನಮ್ಮೆಲ್ಲರಿಗೂ ಲಭಿಸಿರುವ ಜೀವೋದ್ಧಾರವನ್ನು ಕುರಿತು ಬರೆಯಲು ಅತ್ಯಾಸಕ್ತನಾಗಿದ್ದೆನು. ಆದರೆ, ದೇವಜನರಿಗೆ ಒಮ್ಮೆಗೇ ಶಾಶ್ವತವಾಗಿ ಕೊಡಲಾಗಿರುವ ವಿಶ್ವಾಸವನ್ನು ಕಾಪಾಡಿಕೊಳ್ಳುವುದಕ್ಕಾಗಿ ಹೋರಾಡಬೇಕೆಂದು ನಿಮ್ಮನ್ನು ಪ್ರೋತ್ಸಾಹಿಸಿ ಬರೆಯುವುದು ಅವಶ್ಯವೆಂದು ತೋರಿತು.
ಏಕೆಂದರೆ, ಕೆಲವರು ಕಳ್ಳತನದಿಂದ ನಿಮ್ಮ ಸಭೆಯೊಳಗೆ ಸೇರಿಕೊಂಡಿದ್ದಾರೆ. ಇವರು ಭಕ್ತಿಹೀನರು; ನಮ್ಮ ದೇವರ ಅನುಗ್ರಹದ ನೆವದಲ್ಲಿ ತಮ್ಮ ಕಾಮಾಭಿಲಾಷೆಗಳನ್ನು ಸಮರ್ಥಿಸಿಕೊಳ್ಳುತ್ತಿರುವವರು; ನಮ್ಮ ಏಕೈಕ ಒಡೆಯರೂ ಪ್ರಭುವೂ ಆದ ಯೇಸುಕ್ರಿಸ್ತರನ್ನು ನಿರಾಕರಿಸುವವರು. ಇಂಥವರಿಗೆ ದಂಡನೆಯಾಗಬೇಕೆಂದು ಬಹಳ ಹಿಂದೆಯೇ ಪವಿತ್ರಗ್ರಂಥದಲ್ಲಿ ಲಿಖಿತವಾಗಿದೆ.
ಇದನ್ನೆಲ್ಲಾ ನೀವು ಈಗಾಗಲೇ ಚೆನ್ನಾಗಿ ಅರಿತವರಾಗಿದ್ದೀರಿ. ಆದರೂ ಕೆಲವು ವಿಷಯಗಳನ್ನು ನಿಮ್ಮ ನೆನಪಿಗೆ ತರಲು ಬಯಸುತ್ತೇನೆ: ದೇವರು ತಮ್ಮ ಪ್ರಜೆಗಳನ್ನು ಈಜಿಪ್ಟ್ ದೇಶದಿಂದ ಬಿಡುಗಡೆಮಾಡಿದರು; ವಿಶ್ವಾಸವಿಡದವರನ್ನು ಅನಂತರ ಅವರೇ ನಾಶಮಾಡಿದರು.
ಅಂತೆಯೇ, ತಮ್ಮ ಆದ್ಯ ಅಂತಸ್ತನ್ನು ಉಳಿಸಿಕೊಳ್ಳದೆ, ತಮ್ಮ ಯೋಗ್ಯ ನಿವಾಸವನ್ನು ಕಳೆದುಕೊಂಡ ದೇವದೂತರನ್ನು ಶಾಶ್ವತ ಸಂಕಲೆಗಳಿಂದ ಬಂಧಿಸಲಾಯಿತು; ಮಹಾದಿನದಲ್ಲಿ ಸಂಭವಿಸುವ ದಂಡನೆಯ ತೀರ್ಪಿಗಾಗಿ ಅವರನ್ನು ಕಾರ್ಗತ್ತಲೆಯಲ್ಲಿ ಕೂಡಿಡಲಾಯಿತು.
ಸೊದೋಮ್, ಗೊಮೋರ ಮತ್ತು ಅವುಗಳ ಸುತ್ತಮುತ್ತಲಿನ ಪಟ್ಟಣಿಗರು ಆ ದೂತರಂತೆಯೇ ನಡೆದುಕೊಂಡರು. ಅಲ್ಲದೆ, ಅವರು ಅನೈತಿಕತೆಯಲ್ಲೂ ಪ್ರಕೃತಿ ವಿರುದ್ಧವಾದ ಲೈಂಗಿಕಕೃತ್ಯಗಳಲ್ಲೂ ಮಗ್ನರಾಗಿದ್ದರು. ಈ ಕಾರಣದಿಂದ ಅವರು ನಿತ್ಯಾಗ್ನಿಯ ಶಿಕ್ಷೆಗೆ ಗುರಿಯಾಗಿ ಇತರರಿಗೆ ಎಚ್ಚರಿಕೆಯನ್ನು ನೀಡುವ ನಿದರ್ಶನವಾಗಿದ್ದಾರೆ.
ಈ ದುರ್ಬೋಧಕರು ಕೂಡ ಹಾಗೆಯೇ ವರ್ತಿಸುತ್ತಾರೆ. ಕನಸು ಕಾಣುವವರಂತೆ ತಮ್ಮ ಶರೀರವನ್ನು ಪಾಪಕಳಂಕದಿಂದ ಮಲಿನವಾಗಿಸಿಕೊಳ್ಳುತ್ತಾರೆ. ಪ್ರಭುವಿನ ಅಧಿಕಾರವನ್ನು ಅಸಡ್ಡೆಮಾಡುತ್ತಾರೆ. ಸ್ವರ್ಗನಿವಾಸಿಗಳನ್ನು ದೂಷಿಸುತ್ತಾರೆ.
ಪ್ರಧಾನ ದೇವದೂತ ಮಿಕಾಯೇಲನೂ ಇಂಥ ದೂಷಣೆಯನ್ನು ಆಡಲಿಲ್ಲ. ಮೋಶೆಯ ಪಾರ್ಥಿವ ಶರೀರದ ವಿಷಯದಲ್ಲಿ ಸೈತಾನನೊಡನೆ ವಾಗ್ವಾದ ಮಾಡಿದಾಗಲೂ ಅಂಥ ದೂಷಣೆಯನ್ನು ಆಡಲು ಧೈರ್ಯಗೊಳ್ಳದೆ, “ಸರ್ವೇಶ್ವರ ನಿನ್ನನ್ನು ಖಂಡಿಸಲಿ,” ಎಂದಷ್ಟೇ ಹೇಳಿದನು.
೧೦
ಆದರೆ, ಈ ಜನರು ತಮಗೆ ಅರ್ಥವಾಗದ ಎಲ್ಲವನ್ನೂ ದೂಷಿಸುತ್ತಾರೆ. ವಿಚಾರ ಶೂನ್ಯ ಪ್ರಾಣಿಗಳಂತೆ ಸಹಜ ಪ್ರವೃತ್ತಿಯಿಂದ ಏನನ್ನು ತಿಳಿದುಕೊಳ್ಳುತ್ತಾರೋ ಅದರಿಂದಲೇ ನಾಶವಾಗುತ್ತಾರೆ.
೧೧
ಇವರ ದುರ್ಗತಿ ಭಯಂಕರವಾದುದು! ಇವರು ಕಾಯಿನನ ಮಾರ್ಗವನ್ನು ಹಿಡಿದಿದ್ದಾರೆ; ಲಾಭಕೋರರಾಗಿ ಬಿಳಾಮನ ಭ್ರಾಂತಿಯಲ್ಲಿ ಬೀಳಹೋಗುತ್ತಾರೆ; ಕೋರಹನಂತೆ ದಂಗೆ ಎದ್ದು ವಿನಾಶವಾಗುತ್ತಿದ್ದಾರೆ.
೧೨
ತಮ್ಮ ಮಿತಿಮೀರಿದ ಮದ್ಯಪಾನಾಸಕ್ತಿಯಿಂದ ನಿಮ್ಮ ಪ್ರೇಮಭೋಜನ ಕೂಟಗಳಲ್ಲಿ ಇವರು ಕಳಂಕಪ್ರಾಯರಾಗಿದ್ದಾರೆ. ತಮ್ಮ ಕುರಿಗಳನ್ನು ತೊರೆದು ಹೊಟ್ಟೆಹೊರೆದುಕೊಳ್ಳುವ ಕುರುಬರಂತಿದ್ದಾರೆ. ಇವರು ಬಿರುಗಾಳಿಗೆ ಚದುರಿಹೋಗುವ ನೀರಿಲ್ಲದ ಮೋಡಗಳು; ಎಲೆಗಳು ಉದುರಿ, ಫಲಬಿಡದೆ, ಬಾಡಿಹೋಗಿ, ಬೇರುಸಹಿತ ಕಿತ್ತುಬೀಳುವ ಶರತ್ಕಾಲದ ಮರಗಳು;
೧೩
ತಮ್ಮ ನಾಚಿಕೆಗೇಡಿತನದ ನೊರೆಯನ್ನು ಕಾರುವ ಸಾಗರದ ಹುಚ್ಚು ತೆರೆಗಳು; ದಿಕ್ಕುಗೆಟ್ಟ ತಾರೆಗಳಿವರು. ಇವರಿಗಾಗಿ ಕಾದಿದೆ ನಿರಂತರ ಕಾರ್ಗತ್ತಲಿನ ಕಂದಕ.
೧೪
ಇವರ ವಿಷಯವಾಗಿ ಆದಾಮನ ಏಳನೆಯ ತಲೆಮಾರಿನ ಹನೋಕನು, “ಇಗೋ, ಸರ್ವೇಶ್ವರ ತಮ್ಮ ಅಸಂಖ್ಯಾತ ಪರಿಶುದ್ಧ ದೂತರ ಸಮೇತ ಆಗಮಿಸುವರು. ಎಲ್ಲರಿಗೂ ನ್ಯಾಯತೀರ್ಪು ಕೊಡುವರು.
೧೫
ಭಕ್ತಿಹೀನರು ತಮಗೆ ವಿರುದ್ಧ ಮಾಡಿದ ಎಲ್ಲಾ ದುಷ್ಕೃತ್ಯಗಳನ್ನು ಮತ್ತು ಪಾಪಿಷ್ಠರು ತಮಗೆ ವಿರುದ್ಧವಾಗಿ ಆಡಿದ ಎಲ್ಲಾ ದೂಷಣೆಗಳನ್ನು ಖಂಡಿಸಲು ಬರುವರು,” ಎಂದು ಪ್ರವಾದಿಸಿದ್ದಾನೆ.
೧೬
ಈ ದುರ್ಬೋಧಕರು ಗುಣಗುಟ್ಟುವವರು, ಅತೃಪ್ತರು, ದುರಾಶೆಗಳಿಗೆ ಬಲಿಯಾದವರು, ಬಡಾಯಿಕೊಚ್ಚಿಕೊಳ್ಳುವವರು, ಸ್ವಪ್ರಯೋಜನಕ್ಕಾಗಿ ಮುಖಸ್ತುತಿ ಮಾಡುವವರು.
೧೭
ಪ್ರಿಯರೇ, ನಮ್ಮ ಪ್ರಭುವಾದ ಕ್ರಿಸ್ತಯೇಸುವಿನ ಪ್ರೇಷಿತರು. ನಿಮಗೆ ಮುಂಚಿತವಾಗಿ ತಿಳಿಸಿದ ಮಾತುಗಳನ್ನು ನೆನಪುಮಾಡಿಕೊಳ್ಳಿ.
೧೮
“ತಮ್ಮ ದುರಿಚ್ಛೆಗಳ ಪ್ರಕಾರ ನಡೆಯುವ ಕುಚೋದ್ಯಗಾರರು ಅಂತ್ಯಕಾಲದಲ್ಲಿ ಬರುವರು,” ಎಂದು ಅವರು ಎಚ್ಚರಿಸಿದ್ದಾರೆ.
೧೯
ಇವರು ನಿಮ್ಮಲ್ಲಿ ಭಿನ್ನಭೇದವನ್ನು ಉಂಟುಮಾಡುವವರು, ಪ್ರಾಪಂಚಿಕ ವಿಷಯಾಸಕ್ತರು; ಪವಿತ್ರಾತ್ಮರಹಿತರಾಗಿ ಬಾಳುವವರು.
೨೦
ಪ್ರಿಯರೇ, ನೀವಾದರೋ ಅತಿ ಪರಿಶುದ್ಧ ವಿಶ್ವಾಸದ ಆಧಾರದ ಮೇಲೆ ನಿರ್ಮಿಸಲಾದ ಮಂದಿರದಂತೆ ಪ್ರವರ್ಧಿಸಿರಿ; ಪವಿತ್ರಾತ್ಮ ಅವರಿಂದ ಪ್ರೇರಿತರಾಗಿ ಪ್ರಾರ್ಥಿಸಿರಿ.
೨೧
ನಿತ್ಯಜೀವವನ್ನು ದಯಪಾಲಿಸುವ ಕರುಣಾಮಯ ಪ್ರಭು ಯೇಸುಕ್ರಿಸ್ತರನ್ನು ಎದುರುನೋಡುತ್ತಾ ದೇವರ ಪ್ರೀತಿಯಲ್ಲಿ ನೆಲೆಗೊಂಡಿರಿ.
೨೨
ಸಂಶಯಪಡುವವರಿಗೆ ಸಹೃದಯದಿಂದ ನೆರವಾಗಿರಿ.
೨೩
ಬೆಂಕಿಯ ಬಾಯಲ್ಲಿ ಇರುವವರನ್ನು ಎಳೆದು ಸಂರಕ್ಷಿಸಿರಿ. ಕೆಲವರಿಗೆ ದಯೆತೋರಿಸುವಾಗ ಭಯವಿರಲಿ. ಪಾಪದ ನಡತೆಯಿಂದ ಹೊಲಸಾದ ಅವರ ಬಟ್ಟೆಬರೆಗಳನ್ನೂ ಮುಟ್ಟದಿರಿ.
೨೪
ಪಾಪದಲ್ಲಿ ಎಡವಿ ಬೀಳದಂತೆ ನಿಮ್ಮನ್ನು ಕಾಪಾಡುವ ತಮ್ಮ ಮಹಿಮಾಸನ್ನಿಧಿಯಲ್ಲಿ ನಿಮ್ಮನ್ನು ನಿರ್ದೋಷಿಗಳನ್ನಾಗಿಯೂ ಹರ್ಷಭರಿತರನ್ನಾಗಿಯೂ ನಿಲ್ಲಿಸಲು ಶಕ್ತರಾಗಿರುವ
೨೫
ನಮ್ಮ ಉದ್ಧಾರಕರಾದ ಏಕೈಕ ದೇವರಿಗೆ ನಮ್ಮ ಪ್ರಭು ಯೇಸುಕ್ರಿಸ್ತರ ಮುಖಾಂತರ ಮಹಿಮೆ, ಮಹತ್ವ, ಅಧಿಪತ್ಯ, ಅಧಿಕಾರ ಆದಿಯಲ್ಲಿ ಇದ್ದ ಹಾಗೆ ಈಗಲೂ ಯಾವಾಗಲೂ ಸಲ್ಲಲಿ! ಆಮೆನ್.ಯೂದನು ೧:1
ಯೂದನು ೧:2
ಯೂದನು ೧:3
ಯೂದನು ೧:4
ಯೂದನು ೧:5
ಯೂದನು ೧:6
ಯೂದನು ೧:7
ಯೂದನು ೧:8
ಯೂದನು ೧:9
ಯೂದನು ೧:10
ಯೂದನು ೧:11
ಯೂದನು ೧:12
ಯೂದನು ೧:13
ಯೂದನು ೧:14
ಯೂದನು ೧:15
ಯೂದನು ೧:16
ಯೂದನು ೧:17
ಯೂದನು ೧:18
ಯೂದನು ೧:19
ಯೂದನು ೧:20
ಯೂದನು ೧:21
ಯೂದನು ೧:22
ಯೂದನು ೧:23
ಯೂದನು ೧:24
ಯೂದನು ೧:25


ಯೂದನು 1 / ಯ 1