English
A A A A A
×

ಕನ್ನಡ ಬೈಬಲ್ (KNCL) 2016

ಧರ್ಮೋಪದೇಷಕಾಂಡ ೪
“ಇಸ್ರಯೇಲರೇ, ಕೇಳಿ; ನೀವು ಜೀವದಿಂದುಳಿದು ನಿಮ್ಮ ಪಿತೃಗಳ ದೇವರಾದ ಸರ್ವೇಶ್ವರ ನಿಮಗೆ ಕೊಡುವ ನಾಡನ್ನು ಸೇರಿ ಸ್ವಾಧೀನಮಾಡಿಕೊಳ್ಳಬೇಕಾದರೆ ನಾನು ಈಗ ಬೋಧಿಸುವ ಆಜ್ಞಾವಿಧಿಗಳನ್ನು ಗಮನದಿಂದ ಅನುಸರಿಸಬೇಕು.
ನಿಮ್ಮ ದೇವರಾದ ಸರ್ವೇಶ್ವರ ಕೊಟ್ಟ ಆಜ್ಞೆಗಳನ್ನೇ ನಾನು ನಿಮಗೆ ತಿಳಿಸುತ್ತಾ ಇದ್ದೇನೆ. ಈ ಆಜ್ಞೆಗಳನ್ನು ನೀವು ಕೈಗೊಳ್ಳಬೇಕೇ ಹೊರತು ಅವುಗಳಿಗೆ ಏನೂ ಕೂಡಿಸಬಾರದು, ಅವುಗಳಿಂದ ಏನೂ ತೆಗೆದುಬಿಡಬಾರದು.
ಪೆಗೋರದ ಬಾಳ್ ದೇವತೆಯ ವಿಷಯದಲ್ಲಿ ಸರ್ವೇಶ್ವರ ಮಾಡಿದ ಕಾರ್ಯವನ್ನು ನೀವು ನೋಡಿದ್ದೀರಷ್ಟೆ; ಆ ಪೆಗೋರದ ಬಾಳನನ್ನು ಅನುಸರಿಸಿದವರೆಲ್ಲರನ್ನು ನಿಮ್ಮ ದೇವರಾದ ಸರ್ವೇಶ್ವರ ನಿಮ್ಮ ಮಧ್ಯೆಯಿಂದ ನಾಶಮಾಡಿದರಲ್ಲವೆ?
ನಿಮ್ಮ ದೇವರಾದ ಸರ್ವೇಶ್ವರನನ್ನು ಅವಲಂಭಿಸಿದ ನೀವಾದರೋ ಇಂದಿನವರೆಗೂ ಉಳಿದುಕೊಂಡಿದ್ದೀರಿ.
“ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಹೋಗುವ ನಾಡಿನಲ್ಲಿ ಅನುಸರಿಸಬೇಕಾದ ಆಜ್ಞಾವಿಧಿಗಳನ್ನು ನನ್ನ ದೇವರಾದ ಸರ್ವೇಶ್ವರ ನನಗೆ ಆಜ್ಞಾಪಿಸಿದಂತೆಯೇ ನಿಮಗೆ ಬೋಧಿಸಿದ್ದೇನೆ.
ಇವುಗಳನ್ನು ಕೈಗೊಂಡು ಅನುಸರಿಸಿರಿ. ಅನುಸರಿಸಿದ್ದೇ ಆದರೆ ಅನ್ಯಜನಗಳು ನಿಮ್ಮನ್ನು ಜ್ಞಾನಿಗಳೂ ವಿವೇಕಿಗಳೂ ಎಂದು ತಿಳಿಯುವರು; ಈ ಆಜ್ಞೆಗಳ ಬಗ್ಗೆ ಅವರು ಅರಿತುಕೊಂಡಾಗ, ‘ಈ ದೊಡ್ಡ ಜನಾಂಗ ಎಂಥಾ ಜ್ಞಾನವಿವೇಕವುಳ್ಳ ಜನಾಂಗ’, ಎಂದು ಮಾತಾಡಿಕೊಳ್ಳುವರು.
ನಾವು ಮೊರೆಯಿಡುವಾಗಲೆಲ್ಲಾ ನಮ್ಮ ದೇವರಾದ ಸರ್ವೇಶ್ವರ ನಮಗೆ ಸಮೀಪವಾಗಿರುವಂತೆ ಬೇರೆ ಯಾವ ಜನಾಂಗಕ್ಕೆ, ಅದೆಷ್ಟೇ ದೊಡ್ಡದಾಗಿರಲಿ, ಯಾವ ದೇವರು ಹೀಗೆ ಸಮೀಪವಾಗಿರುತ್ತಾರೆ?
ನಾನು ಈ ದಿನ ನಿಮ್ಮ ಮುಂದಿಡುವ ಇಂಥ ನ್ಯಾಯಯುತವಾದ ಆಜ್ಞಾವಿಧಿಗಳನ್ನು ಒಳಗೊಂಡ ಈ ಧರ್ಮಶಾಸ್ತ್ರಕ್ಕೆ ಸಮಾನವಾದುದು ಬೇರೆ ಯಾವ ಜನಾಂಗಕ್ಕೆ ಉಂಟು?
ಹೀಗಿರುವಲ್ಲಿ, ನೀವು ಬಹಳ ಜಾಗರೂಕತೆಯಿಂದಿರಿ; ನಿಮ್ಮ ಕಣ್ಣುಗಳಿಂದಲೇ ನೋಡಿದ ಘಟನೆಗಳನ್ನು ಎಷ್ಟು ಮಾತ್ರಕ್ಕೂ ಮರೆಯದಿರಿ; ಜೀವಮಾನಪರ್ಯಂತ ಇವುಗಳನ್ನು ನೆನಪಿನಲ್ಲಿ ಇಡಿ; ನಿಮ್ಮ ಮಕ್ಕಳಿಗೂ ಮೊಮ್ಮಕ್ಕಳಿಗೂ ತಿಳಿಸುತ್ತಾ ಹೋಗಿ,
೧೦
ಹೋರೇಬಿನಲ್ಲಿ ನಿಮ್ಮ ದೇವರಾದ ಸರ್ವೇಶ್ವರನ ಸನ್ನಿಧಿಯಲ್ಲಿ ನೀವು ನಿಂತಿದ್ದಾಗ ಅವರು ನನಗೆ, ‘ಜನರೆಲ್ಲರನ್ನು ನನ್ನ ಹತ್ತಿರಕ್ಕೆ ಕರೆ; ಅವರೇ ನನ್ನ ಆಜ್ಞೆಗಳನ್ನು ಕೇಳಿಸಿಕೊಳ್ಳಲಿ; ಆಗ ಅವರು ತಮ್ಮ ಜೀವಮಾನದಲ್ಲೆಲ್ಲಾ ನನ್ನಲ್ಲಿ ಭಯಭಕ್ತಿಯಿಂದಿರಲು ಕಲಿತುಕೊಳ್ಳುವರು; ಅಂತೆಯೇ ತಮ್ಮ ಮಕ್ಕಳಿಗೂ ಕಲಿಸಿಕೊಡುವರು,’ ಎಂದರು.
೧೧
ಅಂದು ನೀವು ಹತ್ತಿರ ಬಂದು ಆ ಬೆಟ್ಟದ ಬುಡದಲ್ಲಿ ನಿಂತುಕೊಂಡಿರಿ. ಬೆಟ್ಟವು ಬೆಂಕಿಯಿಂದ ಪ್ರಜ್ವಲಿಸುತ್ತಿರಲು ಅಂತರಿಕ್ಷದವರೆಗೂ ಕರಿಮೋಡವೂ ಕಾರ್ಗತ್ತಲೂ ಆವರಿಸಿದ್ದವು.
೧೨
ಆ ಅಗ್ನಿಜ್ವಾಲೆಯಿಂದ ಸರ್ವೇಶ್ವರ ನಿಮ್ಮ ಸಂಗಡ ಮಾತಾಡಿದರು. ಆ ವಾಣಿಯ ಶಬ್ದವನ್ನು ನೀವು ಕೇಳಿದಿರಿ. ಆಕಾರ ಯಾವುದೂ ಕಾಣಿಸಲಿಲ್ಲ, ಸ್ವರ ಮಾತ್ರ ಕೇಳಿಸಿತು.
೧೩
ಆಗ ಅವರು ಹತ್ತು ಆಜ್ಞೆಗಳಿಂದ ಕೂಡಿದ ಒಡಂಬಡಿಕೆಯನ್ನು ಘೋಷಿಸಿದರು, ಅವನ್ನು ಪಾಲಿಸಬೇಕೆಂದರು, ಅವುಗಳನ್ನು ಎರಡು ಕಲ್ಲಿನ ಹಲಗೆಗಳಲ್ಲಿ ಬರೆದರು.
೧೪
ನೀವು ನದಿದಾಟಿ ಸ್ವಾಧೀನಮಾಡಿಕೊಳ್ಳುವ ನಾಡಿನಲ್ಲಿ ಅನುಸರಿಸಬೇಕಾದ ಆಜ್ಞಾವಿಧಿಗಳನ್ನು ನಿಮಗೆ ಬೋಧಿಸಬೇಕೆಂದು ಅಂದೇ ನನಗೆ ಆಜ್ಞಾಪಿಸಿದರು.
೧೫
“ಹೋರೇಬಿನಲ್ಲಿ” ಸರ್ವೇಶ್ವರ ಅಗ್ನಿಜ್ವಾಲೆಯೊಳಗಿಂದ ನಿಮ್ಮ ಸಂಗಡ ಮಾತನಾಡಿದರು. ಆಗ ನಿಮಗೆ ಯಾವ ಆಕಾರವೂ ಕಾಣಿಸಲಿಲ್ಲ. ಆದುದರಿಂದ ಬಹಳ ಎಚ್ಚರಿಕೆಯಿಂದಿರಿ.
೧೬
ನೀವು ಭ್ರಷ್ಟರಾಗದಂತೆ ವಿಗ್ರಹಗಳನ್ನು ಮಾಡಿಕೊಳ್ಳಬೇಡಿ. ಸ್ತ್ರೀಪುರುಷರ ರೂಪದಲ್ಲಾಗಲಿ,
೧೭
ಭೂಮಿಯ ಮೇಲೆ ಸಂಚರಿಸುವ ಮೃಗದ ರೂಪದಲ್ಲಾಗಲಿ, ಆಕಾಶದಲ್ಲಿ ಹಾರಾಡುವ ಪಕ್ಷಿಯ ರೂಪದಲ್ಲಾಗಲಿ,
೧೮
ನೆಲದ ಮೇಲೆ ಹರಿದಾಡುವ ಕ್ರಿಮಿಕೀಟಗಳ ರೂಪದಲ್ಲಾಗಲಿ, ಭೂಮಿಯ ಕೆಳಗಣ ಮೀನಿನ ರೂಪದಲ್ಲಾಗಲಿ ದೇವರ ಸ್ವರೂಪವೆಂದು ವಿಗ್ರಹಗಳನ್ನು ಮಾಡಿಕೊಳ್ಳಬೇಡಿ.
೧೯
ನೀವು ಆಕಾಶದ ಕಡೆಗೆ ಕಣ್ಣೆತ್ತಿ ನೋಡುವಾಗ ಭ್ರಮೆಗೊಂಡು, ಸೂರ್ಯ, ಚಂದ್ರ, ನಕ್ಷತ್ರಗಳೆನಿಸಿಕೊಳ್ಳುವ ಆಕಾಶದ ಪರಿವಾರಗಳನ್ನು ಆರಾಧಿಸಬಾರದು, ಪೂಜಿಸಬಾರದು. ಏಕೆಂದರೆ ನಿಮ್ಮ ದೇವರಾದ ಸರ್ವೇಶ್ವರ ಅವುಗಳನ್ನು ಜಗದ ಬೇರೆ ಎಲ್ಲ ಜನಾಂಗಗಳಿಗಾಗಿ ಕೊಟ್ಟಿದ್ದಾರೆ.
೨೦
ಆದರೆ ನಿಮ್ಮನ್ನು ತಮ್ಮ ಸ್ವಕೀಯ ಜನರನ್ನಾಗಿಸಿಕೊಳ್ಳಲು ಸಂಕಲ್ಪಿಸಿ ಕಬ್ಬಿಣ ಕರಗಿಸುವ ಕುಲುಮೆಯಂತಿದ್ದ ಆ ಈಜಿಪ್ಟ್ ದೇಶದಿಂದ ನಿಮ್ಮನ್ನು ಕರೆದುತಂದು ಇದ್ದಾರೆ ಆ ಸರ್ವೇಶ್ವರ. ಅಂತೆಯೇ ನೀವು ಇಂದಿಗೂ ಅವರ ಸ್ವಂತ ಜನರಾಗಿದ್ದೀರಿ.
೨೧
“ಇದಲ್ಲದೆ, ಸರ್ವೇಶ್ವರ ನಿಮ್ಮ ದೆಸೆಯಿಂದ ನನ್ನ ಮೇಲೆ ಕೋಪಗೊಂಡರು. ನಾನು ಜೋರ್ಡನ್ ನದಿಯನ್ನು ದಾಟಿ ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಸ್ವದೇಶವನ್ನಾಗಿ ಕೊಡುವ ಆ ಚೆಲುವ ನಾಡನ್ನು ನಾನು ಸೇರಬಾರದೆಂದೂ ಇಲ್ಲಿಯೇ ಸಾಯಬೇಕೆಂದೂ ಖಂಡಿತವಾಗಿ ಹೇಳಿದ್ದಾರೆ.
೨೨
ನೀವಾದರೋ ನದಿ ದಾಟಿ ಆ ಸುಂದರ ನಾಡನ್ನು ಸೇರಿ ಸ್ವಾಧೀನ ಮಾಡಿಕೊಳ್ಳುವಿರಿ.
೨೩
“ಎಚ್ಚರಿಕೆಯಾಗಿರಿ; ನಿಮ್ಮ ದೇವರಾದ ಸರ್ವೇಶ್ವರ ನಿಮ್ಮ ಸಂಗಡ ಮಾಡಿಕೊಂಡ ಒಡಂಬಡಿಕೆಯನ್ನು ಮರೆತುಬಿಡಬೇಡಿ. ಅವರು ಪೂಜಿಸಬೇಡಿರೆಂದು ನಿಷೇಧಿಸಿದ ಯಾವ ವಿಗ್ರಹ ವಸ್ತುಗಳನ್ನೂ ಮಾಡಿಕೊಳ್ಳಬೇಡಿ.
೨೪
ಏಕೆಂದರೆ ನಿಮ್ಮ ದೇವರಾದ ಸರ್ವೇಶ್ವರ ಕಬಳಿಸಿಬಿಡುವ ಅಗ್ನಿಯಂಥವರು; ತಮಗೆ ಸಲ್ಲಬೇಕಾದ ಗೌರವವನ್ನು ಮತ್ತೊಬ್ಬನಿಗೆ ಸಲ್ಲಗೊಡದ ದೇವರು.
೨೫
“ನೀವು ಮಕ್ಕಳನ್ನೂ ಮೊಮ್ಮಕ್ಕಳನ್ನೂ ಪಡೆಯುವಷ್ಟು ಕಾಲ ಆ ನಾಡಿನಲ್ಲಿದ್ದು, ಯಾವುದಾದರೊಂದು ವಿಗ್ರಹವನ್ನು ಮಾಡಿಕೊಂಡು ದ್ರೋಹಿಗಳಾಗಿ ನಿಮ್ಮ ದೇವರಾದ ಸರ್ವೇಶ್ವರನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿ ಅವರನ್ನು ಸಿಟ್ಟುಗೊಳಿಸಿದ್ದೇ ಆದರೆ
೨೬
ಇಗೋ, ಇಂದೇ ನಿಮಗೆ ವಿರುದ್ಧ ಭೂಮ್ಯಾಕಾಶಗಳನ್ನು ಸಾಕ್ಷಿಗಳಾಗಿಟ್ಟು ಹೇಳುತ್ತಿದ್ದೇನೆ: ನೀವು ಜೋರ್ಡನ್ ನದಿಯನ್ನು ದಾಟಿ ಸ್ವಾಧೀನಮಾಡಿಕೊಳ್ಳುವ ಆ ನಾಡಿನಲ್ಲಿ ಉಳಿಯದೆ ಬೇಗನೆ ನಾಶವಾಗಿ ಹೋಗುವಿರಿ.
೨೭
ಸರ್ವೇಶ್ವರ ನಿಮ್ಮನ್ನು ಅನ್ಯಜನಗಳ ನಡುವೆ ಚದರಿಸಿಬಿಡುವರು. ಹೀಗೆ ಓಡಿಸಿಬಿಡಲು, ಆ ಅನ್ಯನಾಡಿನ ಜನರ ನಡುವೆ ನೀವು ಸ್ವಲ್ಪ ಮಂದಿ ಮಾತ್ರ ಅಳಿದುಳಿಯುವಿರಿ.
೨೮
ಅಲ್ಲಿ ಮಾನವರ ಕೈಯಿಂದ ಮಾಡಲಾದ ಮರ ಮತ್ತು ಕಲ್ಲಿನ ದೇವರುಗಳನ್ನು ಪೂಜಿಸುವಿರಿ; ಅವುಗಳಿಂದ ನೋಡುವುದಕ್ಕಾಗಲಿ, ಕೇಳುವುದಕ್ಕಾಗಲಿ, ತಿನ್ನಲಿಕ್ಕಾಗಲಿ, ಮೂಸುವುದಕ್ಕಾಗಲಿ ಆಗದು.
೨೯
“ಅಲ್ಲಿಂದಾದರೂ ನೀವು ಪೂರ್ಣಹೃದಯದಿಂದ, ಪೂರ್ಣಮನಸ್ಸಿನಿಂದ ನಿಮ್ಮ ದೇವರಾದ ಸರ್ವೇಶ್ವರನನ್ನು ಅರಸಿದರೆ ಅವರು ನಿಮಗೆ ಸಿಗುವರು.
೩೦
ಮೇಲೆ ಹೇಳಿದ ಎಲ್ಲ ಕಷ್ಟಸಂಕಟಗಳು ನಿಮಗೆ ಸಂಭವಿಸಿ, ಕೊನೆಗೆ ನೀವು ಅವರಿಗೆ ಅಭಿಮುಖರಾಗಿ ಅವನ ಮಾತಿಗೆ ಕಿವಿಗೊಡುವಿರಿ.
೩೧
ನಿಮ್ಮ ದೇವರಾದ ಸರ್ವೇಶ್ವರ ದಯಾಮಯ ದೇವರು. ಅವರು ನಿಮ್ಮನ್ನು ಅಲಕ್ಷ್ಯ ಮಾಡುವುದಿಲ್ಲ. ವಿನಾಶಕ್ಕೆ ಬಿಟ್ಟುಬಿಡುವುದಿಲ್ಲ. ನಿಮ್ಮ ಪೂರ್ವಜರ ಸಂಗಡ ಅವರು ಪ್ರಮಾಣಪೂರ್ವಕವಾಗಿ ಮಾಡಿಕೊಂಡ ಒಡಂಬಡಿಕೆಯನ್ನು ಮರೆತುಬಿಡುವುದಿಲ್ಲ.
೩೨
“ದೇವರು ಮಾನವರನ್ನು ಸೃಷ್ಟಿಸಿ ಭೂಮಿಯ ಮೇಲಿರಿಸಿದ ದಿನ ಮೊದಲ್ಗೊಂಡು ಇಂದಿನವರೆಗೆ, ಒಂದು ದಿಕ್ಕಿನಿಂದ ಮತ್ತೊಂದು ದಿಕ್ಕಿನವರೆಗೆ, ಅಂಥ ಅದ್ಭುತಕಾರ್ಯ ನಡೆದದ್ದುಂಟೇ? ಅಂಥ ಸುದ್ದಿಯನ್ನಾದರೂ ಕೇಳಿದ್ದುಂಟೇ? ನೀವೇ ವಿಚಾರಿಸಿಕೊಳ್ಳಿ.
೩೩
ದೇವರು ಅಗ್ನಿಜ್ವಾಲೆಯೊಳಗಿಂದ ಮಾತಾಡಿದ ಸ್ವರ ಕೇಳಿಸಿತಲ್ಲವೆ? ಬೇರೆ ಯಾವ ಜನರಾದರು ದೇವರ ಸ್ವರ ಕೇಳಿ ಬದುಕಿದ್ದುಂಟೇ?
೩೪
ಬೇರೆ ಯಾವ ದೇವರು ತಾನೆ ಪರಿಶೋಧನೆ, ಪವಾಡ, ಮಹತ್ಕಾರ್ಯ, ಯುದ್ಧ, ಭುಜಪರಾಕ್ರಮ, ಶಿಕ್ಷಾಹಸ್ತ, ಭಯಂಕರಕಾರ್ಯ ಇವುಗಳನ್ನು ಪ್ರಯೋಗಿಸಿ ಒಂದು ಜನಾಂಗವನ್ನು ಮತ್ತೊಂದು ಜನಾಂಗದ ಕೈಯಿಂದ ತಪ್ಪಿಸಲು ಪ್ರಯತ್ನಿಸಿದ್ದಾರೆ? ನಿಮ್ಮ ದೇವರಾದ ಸರ್ವೇಶ್ವರ ಸ್ವಾಮಿಯಾದರೊ ಈಜಿಪ್ಟಿನಲ್ಲಿ ನಿಮ್ಮ ಪರವಾಗಿ, ಇದನ್ನೆಲ್ಲ ನಿಮ್ಮ ಕಣ್ಮುಂದೆಯೇ, ನಡೆಸಿದರಲ್ಲವೆ?
೩೫
ಸರ್ವೇಶ್ವರ ಸ್ವಾಮಿಯೊಬ್ಬರೇ ದೇವರು, ಬೇರೆ ದೇವರೇ ಇಲ್ಲವೆಂದು ನೀವು ಅರಿತುಕೊಳ್ಳುವುದಕ್ಕಾಗಿ ಇದನ್ನೆಲ್ಲಾ ನಿಮಗೆ ಮಾತ್ರ ತೋರಿಸಲಾಗಿದೆ.
೩೬
ನೀವು ಕಲಿತುಕೊಳ್ಳಬೇಕೆಂದೇ ಸರ್ವೇಶ್ವರ ಆಕಾಶದಿಂದ ತಮ್ಮ ಸ್ವರ ನಿಮಗೆ ಕೇಳಿಸುವ ಹಾಗೆ ಮಾಡಿದರು; ತಾವಿದ್ದ ಮಹಾ ಅಗ್ನಿಜ್ವಾಲೆಯನ್ನು ಭೂಮಿಯ ಮೇಲೆ ನೀವು ನೋಡುವಂತೆ ಮಾಡಿದರು; ಆ ಅಗ್ನಿಜ್ವಾಲೆಯ ಒಳಗಿಂದ ಅವರು ಆಡಿದ ಮಾತುಗಳನ್ನು ನೀವು ಕೇಳಿದಿರಿ.
೩೭
ನಿಮ್ಮ ಪಿತೃಗಳನ್ನು ಪ್ರೀತಿಸಿ, ತರುವಾಯ ಅವರ ಸಂತತಿಯಾದ ನಿಮ್ಮನ್ನೂ ಆರಿಸಿಕೊಂಡರು.
೩೮
ಈಗ ನಮಗೆ ತಿಳಿದಿರುವಂತೆ ನಿಮಗಿಂತ ದೊಡ್ಡವೂ ಬಲಿಷ್ಠವೂ ಆದ ಜನಾಂಗಗಳನ್ನು ಹೊರಡಿಸಿ ಅವರ ನಾಡಲ್ಲೆ ನಿಮ್ಮನ್ನು ಸೇರಿಸಿ, ಆ ನಾಡನ್ನು ನಿಮಗೇ ಸ್ವಂತ ನಾಡನ್ನಾಗಿ ಕೊಡಲು ಸಂಕಲ್ಪಿಸಿದ್ದಾರೆ. ತಾವೇ ನಿಮ್ಮೊಂದಿಗಿದ್ದು, ತಮ್ಮ ಅಪಾರ ಸಾಮರ್ಥ್ಯದಿಂದ ನಿಮ್ಮನ್ನು ಈಜಿಪ್ಟ್ ದೇಶದಿಂದ ಕರೆದುತಂದಿದ್ದಾರೆ.
೩೯
ನೀವು ಇದನ್ನೆಲ್ಲಾ ಆಲೋಚಿಸಿ, ಮೇಲೆ ಆಕಾಶದಲ್ಲಾಗಲಿ, ಕೆಳಗೆ ಭೂಮಿಯಲ್ಲಾಗಲಿ ಸರ್ವೇಶ್ವರಸ್ವಾಮಿ ಒಬ್ಬರೇ ದೇವರು, ಬೇರೆ ಯಾವ ದೇವರೂ ಇಲ್ಲವೆಂಬುದನ್ನು ಈಗ ಗ್ರಹಿಸಿಕೊಂಡು ಜ್ಞಾಪಕದಲ್ಲಿ ಇಡಬೇಕು.
೪೦
ನಾನು ಇಂದು ನಿಮಗೆ ತಿಳಿಸಿದ ಅವರ ಆಜ್ಞಾವಿಧಿಗಳನ್ನು ಅನುಸರಿಸಿ ನಡೆಯಿರಿ. ಆಗ ನಿಮಗೂ ನಿಮ್ಮ ಸಂತತಿಗೂ ಶುಭವುಂಟಾಗುವುದು; ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಶಾಶ್ವತವಾಗಿ ಕೊಡುವ ನಾಡಿನಲ್ಲಿ ನೀವು ದೀರ್ಘಕಾಲ ಬಾಳುವಿರಿ.”
೪೧
ಆ ಕಾಲದಲ್ಲಿ ಮೋಶೆ ಜೋರ್ಡನ್ ನದಿಯ ಪೂರ್ವದಿಕ್ಕಿನಲ್ಲಿ ಮೂರು ಆಶ್ರಯ ನಗರಗಳನ್ನು ಗೊತ್ತುಮಾಡಿದನು.
೪೨
ಪೂರ್ವಕಲ್ಪಿತ ಯಾವ ದ್ವೇಷವೂ ಇಲ್ಲದೆ, ಕೈತಪ್ಪಿ, ಮತ್ತೊಬ್ಬನನ್ನು ಕೊಂದವನು ಆ ನಗರಗಳಲ್ಲಿ ಒಂದಕ್ಕೆ ಓಡಿಹೋಗಿ ಬದುಕಿಕೊಳ್ಳಲಿ ಎಂದು ಆ ನಗರಗಳನ್ನು ನೇಮಿಸಿದನು.
೪೩
ರೂಬೇನ್ಯರಿಗಾಗಿ ಮೀಶೋರ್ ಎಂಬ ಎತ್ತರವಾದ ಬಯಲು ಸೀಮೆಯ ಮರುಭೂಮಿಯಲ್ಲಿ ಇದ್ದ ಬೆಚೆರ್, ಗಾದ್ಯರಿಗಾಗಿ ಗಿಲ್ಯಾದಿನಲ್ಲಿದ್ದ ರಾಮೋತ್, ಹಾಗು ಮನಸ್ಸೆಯವರಿಗಾಗಿ ಬಾಷಾನಿನಲ್ಲಿದ್ದ ಗೋಲಾನ್ ಇವೇ ಆ ಆಶ್ರಯನಗರಗಳು.
೪೪
ಮೋಶೆ ಇಸ್ರಯೇಲರಿಗೆ ಕೊಟ್ಟ ಧರ್ಮಶಾಸ್ತ್ರ:
೪೫
ಇಸ್ರಯೇಲರು ಈಜಿಪ್ಟ್ ದೇಶದಿಂದ ಬಂದಾಗ ಮೋಶೆ ಅವರಿಗೆ ತಿಳಿಸಿದ ಆಜ್ಞಾವಿಧಿನಿರ್ಣಯಗಳು ಇವು:
೪೬
ಜೋರ್ಡನ್ ನದಿಯ ಆಚೆ ಬೇತ್ ಪೆಗೋರಿಗೆ ಎದುರಾಗಿರುವ ಕಣಿವೆಯ ಹೆಷ್ಬೋನಿನಲ್ಲಿ ವಾಸಿಸಿದ ಅಮೋರಿಯರ ಅರಸ ಸೀಹೋನನ ದೇಶದಲ್ಲಿ ಇದು ನಡೆಯಿತು. ಮೋಶೆಯೂ ಇಸ್ರಯೇಲರೂ ಈಜಿಪ್ಟಿನಿಂದ ಬಂದಾಗ ಆ ಸೀಹೋನನನ್ನು ಜಯಿಸಿದ್ದರು.
೪೭
ಅವನ ರಾಜ್ಯವನ್ನೂ ಬಾಷಾನ್ ದೇಶದ ಅರಸ ಓಗನ ರಾಜ್ಯವನ್ನೂ ಜೋರ್ಡನ್ ನದಿಯ ಆಚೆ ಪೂರ್ವದಿಕ್ಕಿನಲ್ಲಿದ್ದ ಅಮೋರಿಯರ ಇಬ್ಬರು ಅರಸರ ರಾಜ್ಯಗಳನ್ನೂ ಗೆದ್ದುಕೊಂಡಿದ್ದರು.
೪೮
ಅರ್ನೋನ್ ತಗ್ಗಿನ ಅಂಚಿನಲ್ಲಿರುವ ಅರೋಯೇರ್ ಪಟ್ಟಣ ಮೊದಲ್ಗೊಂಡು ಹೆರ್ಮೋನ್ ಎಂಬ ಸೀಯೋನ್ ಪರ್ವತದವರೆಗೂ
೪೯
ಅರಾಬ ಎಂಬ ತಗ್ಗಿನಲ್ಲಿ ಪಿಸ್ಗಾ ಬೆಟ್ಟದ ಬುಡದಲ್ಲಿ ಇರುವ ಅರಾಬದ ಸಮುದ್ರದವರೆಗೆ ಜೋರ್ಡನ್ ನದಿಯ ಆಚೆ ಇರುವ ಭಾಗವನ್ನೆಲ್ಲಾ ಸ್ವಾಧೀನ ಮಾಡಿಕೊಂಡಿದ್ದರು.