English
A A A A A
×

ಕನ್ನಡ ಬೈಬಲ್ (KNCL) 2016

ಧರ್ಮೋಪದೇಷಕಾಂಡ ೩೨
ಆಕಾಶಮಂಡಲವೇ, ಕೇಳು ನಾ ಹೇಳುವುದನು ಭೂಮಂಡಲವೇ, ಆಲಿಸು ನನ್ನ ಮಾತುಗಳನು.
ನನ್ನ ಉಪದೇಶ ಹಸಿಹುಲ್ಲಿನ ಮೇಲೆ ಮೆಲ್ಲನೆ ಸುರಿವ ತುಂತುರುಗಳಂತೆ ನನ್ನ ಬೋಧೆ ಕಾಯಿಪಲ್ಯಗಳ ಮೇಲೆ ಮಂಜಿನಂತೆ ಬೀಳುವ ಹದಮಳೆಯಂತೆ.
ಪ್ರಕಟಿಸುವೆನು ನಾನು ಸರ್ವೇಶ್ವರನ ನಾಮಮಹತ್ವವನು ಕೊಂಡಾಡಿ ನೀವು ಆ ದೇವನ ಮಹಾಮಹಿಮೆಯನು.
“ನಿಮಗೆ ಪೊರೆಬಂಡೆ ಆತ, ಆತನ ಕಾರ್ಯ ದೋಷರಹಿತ ಆತನ ಮಾರ್ಗ ನ್ಯಾಯಯುತ, ಆ ದೇವ ನಂಬಿಕಸ್ತ. ಆತ ನಿರ್ವಂಚಕ, ಯಥಾರ್ಥನು ಹಾಗು ನೀತಿವಂತ.”
ಅವರಾದರೋ ದ್ರೋಹಿಗಳು, ಮಕ್ಕಳೆನಿಸಿಕೊಳ್ಳಲು ಅಯೋಗ್ಯರು ವಕ್ರಬುದ್ಧಿಯುಳ್ಳವರು, ಮೂರ್ಖಜಾತಿಯವರು.
ದುರಾಚಾರಿಗಳೇ, ಅವಿವೇಕಿಗಳೇ, ಸರ್ವೇಶ್ವರನ ಬಗ್ಗೆ ಹೀಗೆ ವರ್ತಿಸಬಹುದೇ? ಆತ ನಿಮ್ಮನ್ನು ಸೃಷ್ಟಿಸಿದ ತಂದೆಯಲ್ಲವೆ? ನಿಮ್ಮನ್ನೊಂದು ರಾಷ್ಟ್ರವಾಗಿ ಸ್ಥಾಪಿಸಿದವನಲ್ಲವೆ?
ನೆನಪಿಗೆ ತಂದುಕೊಳ್ಳಿ ಆ ಪೂರ್ವಕಾಲವನು ಆಲೋಚಿಸಿ ನೋಡಿ ಪೂರ್ವಿಕರ ಚರಿತೆಯನು. ವಿಚಾರಿಸಿದರೆ ತಿಳಿಸುವರು ನಿಮ್ಮ ನಿಮ್ಮ ತಂದೆಗಳು ಕೇಳಿದರೆ ವಿವರಿಸುವರು ನಿಮ್ಮ ನಿಮ್ಮ ಹಿರಿಯರು.
ಪರಾತ್ಪರ ದೇವರು ಜನಾಂಗಗಳನು ಬೇರೆಬೇರೆಮಾಡಿದಾಗ, ಅವರವರಿಗೆ ಸ್ವದೇಶಗಳನು ವಿಂಗಡಿಸಿಕೊಟ್ಟಾಗ, ದೇವಕುವರರ ಸಂಖ್ಯಾನುಸಾರ ಪ್ರದೇಶಗಳನು ಗೊತ್ತುಮಾಡಿದಾಗ.
ಇಸ್ರಯೇಲರು ಮಾತ್ರ ಸ್ವಜನರಾದರು ಸರ್ವೇಶ್ವರನಿಗೆ, ಸ್ವಕೀಯ ಪ್ರಜೆಯಾದರು ಆ ಯಕೋಬ ವಂಶಜರು ಆತನಿಗೆ.
೧೦
ಬರಿದಾದ ಭೀಕರ ಮರುಭೂಮಿಯಲಿ ಅವರನು ಕಂಡು ಕಣ್ಣಗುಡ್ಡೆಯಂತೆ ಕಾಪಾಡಿದ ಪ್ರೀತಿಯಿಂದವರನು ಅಪ್ಪಿಕೊಂಡು.
೧೧
ಗೂಡಿನಿಂದ ಮರಿಗಳನು ಹೊರಡಿಸಿದಾ ಗರುಡಪಕ್ಷಿ ಹಾರಾಡಿ ಅವು ಬೀಳದಂತೆ ಕಾಯುತ್ತದೆ ರೆಕ್ಕೆಗಳನು ಚಾಚಿ. ಅಂತೆಯೆ ಸರ್ವೇಶ್ವರ ಕಾಪಾಡಿದ ಇಸ್ರಯೇಲರನು ಕೈಚಾಚಿ.
೧೨
ಅವರನು ನಡೆಸಿದವನು ಸರ್ವೇಶ್ವರನೇ, ಅನ್ಯದೇವರಾರೂ ಇಲ್ಲ, ಆತನೊರ್ವನೇ.
೧೩
ಹತ್ತಿಸಿದವರನು ಎತ್ತರದ ಪ್ರದೇಶಗಳಿಗೆ ಇತ್ತನವರಿಗೆ ಅಲ್ಲಿಯೆ ಬೆಳೆದ ಪೈರುಫಸಲನೆ. ಗಿಟ್ಟಿತವರಿಗೆ ಗುಡ್ಡದ ಜೇನು, ಗಿರಿಯ ಎಣ್ಣೆಯು.
೧೪
ಆಹಾರಕ್ಕಿತ್ತು, ಆಕಳಿನ ಮೊಸರೋಗರ ಆಡುಕುರಿಗಳ ಕ್ಷೀರ ಬಾಷಾನಿನ ಪುಷ್ಟಪಶು, ಹೋತ, ಕೊಬ್ಬಿದ ಕುರಿಟಗರಿನ ಮಾಂಸ, ಉತ್ತಮವಾದ ಗೋಧೂಮ; ಪಾನಕ್ಕಿತ್ತು ರಕ್ತಗೆಂಪಾದ ದ್ರಾಕ್ಷಾರಸ.
೧೫
“ತೃಪ್ತಿಯಾಗಿ ತಿಂದನು ಯಕೋಬನು, ಕೊಬ್ಬಿಹೋದನು ಆ ಯೆಶೂರನು; ತೊರೆದುಬಿಟ್ಟನು ತನ್ನ ಪೊರೆಬಂಡೆಯನು ಮರೆತುಬಿಟ್ಟನು ತನ್ನ ಸೃಷ್ಟಿಕರ್ತನನು.
೧೬
ರೇಗಿಸಿದರಾತನನು ಅನ್ಯದೇವರುಗಳನು ಪೂಜಿಸುತ ಸಿಟ್ಟಿಗೇರಿಸಿದರು ನಿಷಿದ್ಧಾಚಾರಗಳನು ನಡೆಸುತ.
೧೭
ಬಲಿಯನರ್ಪಿಸಿದರು ನೂತನಾ ದೇವತೆಗಳಿಗೆ, ದೇವರಲ್ಲದಾ ಅಸುರರಿಗೆ, ಪಿತೃಗಳು ಭಜಿಸದಾ, ತಮಗೇ ತಿಳಿಯದಾ ಹೊಸ ದೇವತೆಗಳಿಗೆ.
೧೮
ಎಲೈ ಇಸ್ರಯೇಲರೇ, ಮರೆತಿರಾ ಜನ್ಮವಿತ್ತ ಪೊರೆಬಂಡೆಯನು ಸ್ಮರಿಸಲಿಲ್ಲ ನೀವು ಹೆತ್ತತಾಯಂತಿದ್ದಾ ದೇವರನು.
೧೯
ಇದ ಕಂಡು ಸರ್ವೇಶ್ವರ ಬೇಸರಗೊಂಡ ತನ್ನಾ ಕುವರಕುವರಿಯರ ನಡತೆಯ ನೋಡಿ ನೊಂದುಕೊಂಡ.
೨೦
ಎಂದೇ ಇಂತೆಂದುಕೊಂಡನು; ಇವರಿಗೆ ವಿಮುಖನಾಗುವೆನು, ಇವರಿಗೊದಗಲಿರುವ ಗತಿಯನು ನೋಡುವೆನು. ಸತ್ಯವರಿತೂ ಅನುಸರಿಸದೆ ಹೋದರು ಈ ವಿದ್ರೋಹ ಮಕ್ಕಳಂತವರು.
೨೧
‘ರೇಗಿಸಿದರೆನ್ನನು ದೇವರಲ್ಲದವುಗಳ ಮೂಲಕ, ಸಿಟ್ಟೇರಿಸಿದರು ಅಚೇತ ವಿಗ್ರಹಗಳ ಮೂಲಕ. ನಾನವರಲಿ ಅಸೂಯೆ ಹುಟ್ಟಿಸುವೆನು ಜನಾಂಗವಲ್ಲದವರ ಮುಖಾಂತರ, ನಾನವರನು ಸಿಟ್ಟಿಗೆಬ್ಬಿಸುವೆನು ಸಭ್ಯರಲ್ಲದಾ ಜನರ ಮುಖಾಂತರ.
೨೨
‘ಉರಿದೇಳುತ್ತಿದೆ ಕೆಳಲೋಕದ ತನಕ ಎನ್ನ ಕೋಪಾಗ್ನಿ ದಹಿಸಿಬಿಡುವುದದು ಭೂಮಿಯನು ಬೆಳೆಸಹಿತವಾಗಿ ಭಸ್ಮಮಾಡುವುದದು ಬೆಟ್ಟಗಳನು ಬುಡಸಮೇತವಾಗಿ.
೨೩
‘ಉಪದ್ರವಗಳನು ಬರಮಾಡುವೆನು ಒಂದರ ಮೇಲೊಂದಾಗಿ ಬಿಲ್ಲುಬಾಣಗಳನು ಪ್ರಯೋಗಿಸುವೆನು ಅವರಿಗೆ ವಿರುದ್ಧವಾಗಿ.
೨೪
ಕ್ಷಯಿಸಿಹೋಗುವರವರು ಕ್ಷಾಮಡಾಮರದಿಂದ ಸಾಯುವರು ಶಾಪದಿಂದ, ಅಂಟುರೋಗಗಳಿಂದ, ನಾ ಕಳುಹಿಸುವ ಕಾಡುಮೃಗ, ವಿಷಸರ್ಪಗಳಿಂದ.
೨೫
ಹೊರಗೆ ಕತ್ತಿ, ಒಳಗೆ ಭಯಭೀತಿ ಇವರಲ್ಲಿರುವುವು. ಯುವಕ ಯುವತಿಯರು, ಮಕ್ಕಳು ಮುದುಕರು ಕತ್ತಿಕಠಾರಿಗಳಿಗೆ ತುತ್ತಾಗುವರು ಇವರೆಲ್ಲರು.
೨೬
ನಾಶ ಮಾಡುತ್ತಿದ್ದೆ ನಾನವರನು ಸಂಪೂರ್ಣವಾಗಿ ಅವರಿಲ್ಲದಂತೆ ಮಾಡುತ್ತಿದ್ದೆ ಯಾರೊಬ್ಬರ ನೆನಪಿನಲಿ.
೨೭
ಆದರೆ ತಪ್ಪು ತಿಳಿಯುತ್ತಿದ್ದರು ಅವರ ವಿರೋಧಿಗಳು; ‘ಇದಾಯಿತು ನಮ್ಮ ಶಕ್ತಿಯಿಂದ, ಸರ್ವೇಶ್ವರನಿಂದಲ್ಲ’ವೆಂದುಕೊಂಡು ಈ ಕಾರಣ ಹಿಂತೆಗೆದುಕೊಂಡೆನು ನನ್ನ ನಿಗದಿನಿರ್ಣಯವನು.
೨೮
“ಆಲೋಚನೆಯಿಲ್ಲದ ಜನರಿವರು ಸ್ವಲ್ಪವಾದರೂ ವಿವೇಕವಿಲ್ಲದವರು.
೨೯
ಜ್ಞಾನವಿದ್ದಿದ್ದರೆ ಗ್ರಹಿಸುತ್ತಿದ್ದರು ಈ ಸಂಗತಿಗಳನು ತಿಳಿಯುತ್ತಿದ್ದರು, ಅಂತ್ಯದೊಳು ತಮಗಾಗುವ ದುರವಸ್ಥೆಯನು.
೩೦
ಒಬ್ಬನಿಂದ ಸಾವಿರ ಮಂದಿ ಸೋತುಹೋದುದು’ ಒಬ್ಬರಿಗಂಜಿ ಹತ್ತುಸಾವಿರ ಓಡಿಹೋದುದು, ಅವರ ಪೊರೆಬಂಡೆಯಾತ ಅವರನು ವೈರಿಗೊಪ್ಪಿಸಿದ್ದರಿಂದಲ್ಲವೆ? ಅವರ ಸರ್ವೇಶ್ವರನು ಅವರನು ಕೈಬಿಟ್ಟುದರಿಂದಲ್ಲವೆ?
೩೧
‘ನಮ್ಮಾಶ್ರಯ ದುರ್ಗ ಅವರ ಆಶ್ರಯದುರ್ಗದಂತಲ್ಲ’ ಎಂದು ಅವರ ಶತ್ರುಗಳೇ ಒಪ್ಪಿಕೊಳ್ಳುತ್ತಾರಲ್ಲವೆ?
೩೨
ಅವರೋ ಸೊದೋಮ್ಯರೆಂಬ ದ್ರಾಕ್ಷಾಲತೆ ಅವರೋ ಗೊಮೋರ್ಯರೆಂಬ ತೋಟದಬೆಳೆ.
೩೩
ಅವುಗಳ ಹಣ್ಣಿನ ಗೊಂಚಲು ವಿಷ ಅವುಗಳ ರಸ ಮರಣಕರ ಸರ್ಪವಿಷ.
೩೪
“ಇಸ್ರಯೇಲನನು ಇಟ್ಟಿದ್ದೇನೆ ಮುದ್ರೆಹಾಕಿ ಉಗ್ರಾಣದೊಳು ಇಟ್ಟಿದ್ದೇನೆ ಭದ್ರವಾಗಿ.
೩೫
ಅವನ ಶತ್ರುಗಳಿಗೆ ಮುಯ್ಯಿತೀರಿಸುವುದು ನನ್ನ ಕೆಲಸ; ಸಮೀಪಿಸಿತವರಿಗೆ ಜಾರಿಬೀಳುವ ಸಮಯ, ವಿಪತ್ಕಾಲ; ಬೇಗಬರುವುದು ಅವರಿಗೆ ಸಿದ್ಧವಾದ ದುರ್ಗತಿಕಾಲ!
೩೬
ಸ್ವತಂತ್ರರು, ಪರತಂತ್ರರು ನಿರಾಶ್ರಯರಾದಾಗ ಅವರೆಲ್ಲರು ನಿಶ್ಯೇಷರಾದವರು ಎಂದು ತಿಳಿದುಬಂದಾಗ ದೊರಕಿಸುವನು ಸರ್ವೇಶ್ವರನು ನ್ಯಾಯವನು ತನ್ನ ಪ್ರಜೆಗೆ ತೋರುವನು ಅನುಕಂಪವನು ತನ್ನ ಭಕ್ತಾದಿಗಳಿಗೆ.
೩೭
ಆಗ ನುಡಿವನು ಸ್ವಾಮಿ ಸರ್ವೇಶ್ವರ ಇಂತೆಂದು; ಎಲ್ಲಿಗೆ ಹೋದರು ಅವರು ಪೂಜಿಸುತ್ತಿದ್ದ ದೇವರುಗಳು? ಎಲ್ಲಿರುವನು ಅವರು ಆಶ್ರಯಿಸಿಕೊಂಡಿದ್ದ ದುರ್ಗವಾದವನು.
೩೮
ಅವರು ಬಲಿಕೊಟ್ಟ ಕೊಬ್ಬು ಮಾಂಸವನು ತಿಂದವರೆಲ್ಲಿ? ಸಮರ್ಪಿಸಿದ ಪಾನಗಳನು ಕುಡಿದ ದೇವತೆಗಳೆಲ್ಲಿ? ಅವರೇ ನಿಮಗೆ ನೆರವಾಗಲಿ, ನಿಮ್ಮನೀಗ ಕಾಯಲಿ!
೩೯
“ಇರುವಾತನು ನಾನೇ, ನಾನೊಬ್ಬನೇ ಬದುಕಿಸುವವನು, ಕೊಲ್ಲುವವನು ನಾನೇ, ಗಾಯಗೊಳಿಸುವವನು, ವಾಸಿಮಾಡುವವನು ನಾನೇ. ಇಂದಾದರು ತಿಳಿಯಿರಿ: ನನ್ನ ವಿನಾ ದೇವರಿಲ್ಲ ನನ್ನ ಕೈಯಿಂದ ತಪ್ಪಿಸಬಲ್ಲ ಶಕ್ತನಾರೂ ಇಲ್ಲ.
೪೦
ಆಕಾಶದತ್ತ ಕೈಯೆತ್ತಿ ಪ್ರಮಾಣಮಾಡುವೆ, ಚಿರಂಜೀವಿಯಾದೆನ್ನ ಮೇಲೆ ಆಣೆಯಿಟ್ಟು ಹೇಳುವೆ:
೪೧
ಥಳಥಳಿಸುವ ಕತ್ತಿಯನು ಹದಮಾಡಿ ನ್ಯಾಯಸ್ಥಾಪಿಸುವೆನು ಮುನ್ನುಗ್ಗಿ. ಮುಯ್ಯಿ ತೀರಿಸುವೆನು ನನ್ನ ಶತ್ರುಗಳಿಗೆ ಪ್ರತಿದಂಡಿಸುವೆನು ನನ್ನ ದ್ವೇಷಿಸಿದವಗೆ.
೪೨
ಮತ್ತವಾಗುವುವು ನನ್ನ ಬಾಣಗಳು ರಕ್ತಕುಡಿದು; ನನ್ನ ಕತ್ತಿಯು ತಿನ್ನುವುದು ಸತ್ತವರ, ಖೈದಿಗಳ ರಕ್ತಮಾಂಸವನು; ಚೆಂಡಾಡುವುವು ಶತ್ರುವೀರರ ತಲೆಬುರುಡೆಗಳು.
೪೩
“ಜನಾಂಗಗಳೇ ಕೊಂಡಾಡಿರಿ ದೇವಜನರೊಡನೆ! ತನ್ನ ಭಕ್ತಾದಿಗಳ ರಕ್ತ ಚೆಲ್ಲಿದಾ ಶತ್ರುಗಳಿಗೆ ದಂಡಿಸಿ ಮುಯ್ಯಿತೀರಿಸುವವನು ಸರ್ವೇಶ್ವರನೇ. ತನ್ನ ಜನರಾ ನಾಡಿಗೆ ದೋಷಪರಿಹಾರಮಾಡುವವನು ಆತನೇ.”
೪೪
ಜನರಿಗೆ ಕೇಳಿಸುವಂತೆ ಹೇಳಿದರು ಈ ಗೀತವಚನಗಳನು ಮೋಶೆಯು ಮತ್ತು ನೂನನ ಮಗನಾದ ಯೆಹೋಶುವನು.
೪೫
ಮೋಶೆ ಈ ಮಾತುಗಳನ್ನೆಲ್ಲ ಇಸ್ರಯೇಲರಿಗೆ ಹೇಳಿ ಮುಗಿಸಿದನಂತರ ಅವರಿಗೆ,
೪೬
“ನಾನು ಈಗ ನಿಮಗೆ ಹೇಳಿದ ಎಚ್ಚರಿಕೆಯ ಮಾತುಗಳನ್ನೆಲ್ಲ ಮನಸ್ಸಿನಲ್ಲಿಟ್ಟುಕೊಳ್ಳಿರಿ; ನಿಮ್ಮ ಸಂತತಿಯವರಿಗೆ ಈ ಧರ್ಮಶಾಸ್ತ್ರದ ನಿಯಮಗಳನ್ನು ಅನುಸರಿಸಬೇಕೆಂದು ಆಜ್ಞಾಪಿಸಿರಿ.
೪೭
ಇದು ನಿರರ್ಥಕವೆಂದು ಭಾವಿಸಬೇಡಿ; ಇದರಿಂದ ನೀವು ಬಾಳುವಿರಿ; ನೀವು ಜೋರ್ಡನ್ ನದಿಯನ್ನು ದಾಟಿ ಸ್ವಾಧೀನಮಾಡಿಕೊಳ್ಳಲು ಹೋಗುವ ನಾಡಿನಲ್ಲಿ ಇದನ್ನು ಅನುಸರಿಸುವುದರಿಂದಲೇ ಬಹುಕಾಲ ಇರುವಿರಿ,” ಎಂದು ಹೇಳಿದನು.
೪೮
ಆ ದಿನದಲ್ಲೇ ಸರ್ವೇಶ್ವರ ಮೋಶೆಗೆ, “ನೀನು ಈ ಅಬಾರೀಮ್ ಬೆಟ್ಟಗಳನ್ನು ಅಂದರೆ, ಮೋವಾಬ್ಯರ ದೇಶದಲ್ಲಿ ಜೆರಿಕೋ ಪಟ್ಟಣಕ್ಕೆ ಎದುರಾಗಿರುವ ನೆಬೋ ಬೆಟ್ಟವನ್ನು ಹತ್ತಿ ನಾನು ಇಸ್ರಯೇಲರಿಗೆ ಸ್ವದೇಶವಾಗಲೆಂದು ಕೊಡುವ ಕಾನಾನ್ ನಾಡನ್ನು ನೋಡು.
೪೯
***
೫೦
ಅನಂತರ, ನಿನ್ನ ಅಣ್ಣನಾದ ಆರೋನನು ಹೇಗೆ ಹೋರೆಂಬ ಬೆಟ್ಟದಲ್ಲಿ ದೇಹವನ್ನು ಬಿಟ್ಟು ತನ್ನ ಪಿತೃಗಳಲ್ಲಿಗೆ ಸೇರಿದನೋ ಹಾಗೆಯೇ ನೀನೂ ಈ ಬೆಟ್ಟದಲ್ಲಿ ದೇಹವನ್ನು ಬಿಟ್ಟು ಪಿತೃಗಳಲ್ಲಿಗೆ ಸೇರಬೇಕು.
೫೧
ನೀವಿಬ್ಬರೂ ಚಿನ್ ಮರುಭೂಮಿಯಲ್ಲಿನ ಮೆರೀಬಾ ಕಾದೇಶಿನಲ್ಲಿ ನೀರು ಹೊರಟು ಬಂದ ಸ್ಥಳದ ಬಳಿಯಲ್ಲಿ, ಇಸ್ರಯೇಲರ ಮಧ್ಯೆ ನನಗೆ ವಿರೋಧವಾಗಿ ದ್ರೋಹಮಾಡಿದಿರಿ; ಅವರ ಮುಂದೆ ನನ್ನ ಗೌರವವನ್ನು ಕಾಪಾಡದೆಹೋದಿರಿ. ಆದುದರಿಂದಲೇ ಹೀಗೆ ಆಗಬೇಕು.
೫೨
ನಾನು ಇಸ್ರಯೇಲರಿಗೆ ಕೊಡುವ ನಾಡನ್ನು ನೀನು ದೂರದಿಂದ ನೋಡಬಹುದೇ ಹೊರತು, ಅದರಲ್ಲಿ ಪ್ರವೇಶಿಸಕೂಡದು,” ಎಂದು ಆಜ್ಞಾಪಿಸಿದರು.