A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ಧರ್ಮೋಪದೇಷಕಾಂಡ ೨೨“ಸ್ವದೇಶದವನ ಎತ್ತಾಗಲಿ, ಕುರಿ ಆಗಲಿ ದಾರಿತಪ್ಪಿಹೋಗಿರುವುದನ್ನು ನೀವು ಕಂಡರೆ, ಕಾಣದವರಂತೆ ಅದನ್ನು ಬಿಟ್ಟುಹೋಗಬಾರದು; ಅವನ ಬಳಿಗೆ ಅಟ್ಟಿಕೊಂಡು ಹೋಗಿ ಕೊಡಲೇಬೇಕು.
ಅವನು ನಿಮಗೆ ದೂರ ಆಗಿದ್ದರೆ, ಇಲ್ಲವೆ ಅವನು ಯಾರು ಎಂದು ನಿಮಗೆ ತಿಳಿಯದೆಹೋದರೆ, ಆ ಪ್ರಾಣಿಯನ್ನು ನಿಮ್ಮ ಮನೆಗೆ ಹೊಡೆದುಕೊಂಡು ಬಂದು ಕಾಯಬೇಕು; ಅವನು ಅದನ್ನು ಹುಡುಕುತ್ತಾ ಬಂದಾಗ, ನೀವು ಅದನ್ನು ಅವನಿಗೆ ಮರಳಿಕೊಡಬೇಕು.
ಅವನ ಕತ್ತೆಯಾಗಲಿ, ಬಟ್ಟೆಯಾಗಲಿ, ಅವನು ಕಳೆದುಕೊಂಡ ಯಾವ ವಸ್ತುವೇ ಆಗಲಿ ನಿಮಗೆ ಸಿಕ್ಕಿದರೆ ಹಾಗೆಯೇ ಮಾಡಬೇಕು; ಕಾಣದವರಂತೆ ಇರಲೇಬಾರದು.
“ಸ್ವದೇಶದವನ ಕತ್ತೆಯಾಗಲಿ, ಎತ್ತಾಗಲಿ ದಾರಿಯಲ್ಲಿ ಬಿದ್ದಿರುವುದನ್ನು ನೀವು ಕಂಡರೆ ಕಾಣದವರಂತೆ ಹೋಗದೆ, ಅದನ್ನು ಎಬ್ಬಿಸಲು ಅವನಿಗೆ ಸಹಾಯಮಾಡಬೇಕು.
“ಹೆಂಗಸರು ಗಂಡಸರಂತೆ, ಗಂಡಸರು ಹೆಂಗಸರಂತೆ ಬಟ್ಟೆ ಹಾಕಬಾರದು; ಹಾಗೆ ಮಾಡುವವರು ನಿಮ್ಮ ದೇವರಾದ ಸರ್ವೇಶ್ವರನಿಗೆ ಹೇಯರು.
“ನೀವು ದಾರಿಯಲ್ಲಿ ಹೋಗುವಾಗ ಮರದ ಮೇಲಾಗಲಿ ನೆಲದ ಮೇಲಾಗಲಿ ಒಂದು ಹಕ್ಕಿಯ ಗೂಡನ್ನು ಕಂಡು ಅದರೊಳಗೆ ಮರಿಗಳು ಅಥವಾ ಮೊಟ್ಟೆಗಳು ಇದ್ದು ಅವುಗಳ ಮೇಲೆ ತಾಯಿ ಹೊದಗಿರುವುದನ್ನು ನೋಡಿದರೆ, ಮರಿಗಳನ್ನಾಗಲಿ ತಾಯಿಯನ್ನಾಗಲಿ ಹಿಡಿದುಕೊಳ್ಳಬಾರದು.
ನೀವು ಹೀಗೆ ನಡೆದುಕೊಂಡರೆ, ನಿಮಗೆ ಶ್ರೇಯಸ್ಸುಂಟಾಗುವುದು, ಮತ್ತು ಬಹುಕಾಲ ಬಾಳುವಿರಿ.
“ನೀವು ಹೊಸ ಮನೆಯನ್ನು ಕಟ್ಟಿಸಿಕೊಳ್ಳುವಾಗ ನಿಮ್ಮ ಮನೆಯ ಮಾಳಿಗೆಯ ಮೇಲೆ ಸುತ್ತಲೂ ಸಣ್ಣ ಕೈಗೋಡೆಯನ್ನು ಕಟ್ಟಿಸಬೇಕು. ಇಲ್ಲದಿದ್ದರೆ ಒಬ್ಬನು ಆ ಮಾಳಿಗೆಯಿಂದ ಬಿದ್ದು, ಅವನ ಜೀವಹತ್ಯದೋಷ ನಿಮ್ಮ ಮನೆಯ ಮೇಲೆ ಬರುವುದು.
“ದ್ರಾಕ್ಷಿತೋಟಗಳಲ್ಲಿ ಬೇರೆ ವಿಧವಾದ ಬಿತ್ತನೆ ಮಾಡಬಾರದು; ಹಾಗೆ ಮಾಡಿದರೆ ಆ ಬೆಳೆಗೂ ಮತ್ತು ದ್ರಾಕ್ಷಿಬೆಳೆಗೂ ಹೀಗೆ ಆ ತೋಟದ ಬೆಳೆಗೂ ಗತಿಕೇಡಾಗುವುದು.
೧೦
ಎತ್ತನ್ನೂ ಕತ್ತೆಯನ್ನೂ ಜೊತೆಮಾಡಿ ನೇಗಿಲಿಗೆ ಕಟ್ಟಬಾರದು.
೧೧
ನಾರು ಮತ್ತು ಉಣ್ಣೆ ಎರಡೂ ಕೂಡಿಸುವ ಬಟ್ಟೆಯನ್ನು ಹಾಕಿಕೊಳ್ಳಬಾರದು.
೧೨
“ನೀವು ಹೊದ್ದುಕೊಳ್ಳುವ ಬಟ್ಟೆಯ ನಾಲ್ಕು ಮೂಲೆಗಳಲ್ಲಿ ಗೊಂಡೆಗಳನ್ನು ಕಟ್ಟಬೇಕು.
೧೩
“ಒಬ್ಬನು ತಾನು ಮದುವೆಮಾಡಿಕೊಂಡ ಹೆಂಡತಿಯನ್ನು ದ್ವೇಷಿಸಿ
೧೪
ಅವಳ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಹೇಳಿ ‘ನಾನು ಇವಳನ್ನು ಮದುವೆಮಾಡಿಕೊಂಡೆ; ಆದರೆ ಕೂಡಿದಾಗ ಇವಳು ಕನ್ನಿಕೆಯಲ್ಲವೆಂದು ತಿಳಿದುಬಂತು’ ಎಂದು ಹೇಳಿ
೧೫
ಅವಳ ಮೇಲೆ ಆಪಾದನೆ ತರಬಹುದು. ಅವಳ ತಾಯಿತಂದೆಗಳು ತಮ್ಮ ಮಗಳು ವಿವಾಹಕ್ಕೆ ಮುಂಚೆ ಪುರುಷ ಸಂಪರ್ಕ ಇಲ್ಲದವಳು ಎಂಬುದಕ್ಕೆ ಆಧಾರವನ್ನು ಊರಬಾಗಿಲಿಗೆ ಹಿರಿಯರ ಮುಂದೇ ತಂದು ತೋರಿಸಬೇಕು.
೧೬
ತಂದೆ ಅವರಿಗೆ, ‘ನಾನು ನನ್ನ ಮಗಳನ್ನು ಈ ಪುರುಷನಿಗೆ ಮದುವೆಮಾಡಿಕೊಟ್ಟೆ; ಆಮೇಲೆ ಇವನು ಅವಳನ್ನು ದ್ವೇಷಿಸಿ
೧೭
ಪರಪುರುಷ ಸಂಪರ್ಕಮಾಡಿದವಳೆಂದು ನಿರಾಧಾರವಾದ ಮಾತುಗಳನ್ನಾಡಿ ಅವಳನ್ನು ಅವಮಾನಪಡಿಸುತ್ತಾನೆ. ಇಗೋ, ನನ್ನ ಮಗಳು ವಿವಾಹಕ್ಕೆ ಮುಂಚೆ ಪುರುಷಸಂಪರ್ಕ ಮಾಡಿದವಳಲ್ಲ ಎಂಬುದಕ್ಕೆ ಇದೇ ಪ್ರಮಾಣ’ ಎಂದು ಹೇಳಿ ಅವಳ ಹಚ್ಚಡವನ್ನು ಹಿರಿಯರ ಮುಂದೆ ಇಡಬೇಕು.
೧೮
ಇಸ್ರಯೇಲಳಾದ ಮಹಿಳೆಯ ಬಗ್ಗೆ ಆ ವ್ಯಕ್ತಿ ನಿರಾಧಾರವಾದ ತಪ್ಪು ಹೊರಿಸಿದ್ದರಿಂದ
೧೯
ಆ ಊರಿನ ಹಿರಿಯರು ಅವನನ್ನು ಹಿಡಿಸಿ, ನೂರು ಬೆಳ್ಳಿ ನಾಣ್ಯದ ದಂಡವನ್ನು ವಿಧಿಸಿ, ಆ ಹಣವನ್ನು ಅವಳ ತಂದೆಗೆ ಕೊಡಿಸಬೇಕು; ಮತ್ತು ಅವನು ಆ ಮಹಿಳೆಯನ್ನು ಹೆಂಡತಿಯನ್ನಾಗಿಯೇ ಇಟ್ಟುಕೊಳ್ಳಬೇಕು; ಅವನ ಜೀವಮಾನಕಾಲವೆಲ್ಲಾ ಅವಳನ್ನು ಪರಿತ್ಯಾಗಮಾಡುವುದಕ್ಕೆ ಅವನಿಗೆ ಅಧಿಕಾರ ಇರುವುದಿಲ್ಲ.
೨೦
“ಆದರೆ ಆ ಮಹಿಳೆ ವಿವಾಹಕ್ಕೆ ಮುಂಚೆ ಪುರುಷಸಂಪರ್ಕ ಮಾಡಿದವಳೇ ಎಂದು ತಿಳಿದುಬಂದರೆ
೨೧
ಅವಳು ತಂದೆಯ ಮನೆಯಲ್ಲೇ ಸೂಳೆತನಮಾಡಿ ಇಸ್ರಯೇಲರಲ್ಲಿ ದುರಾಚಾರವನ್ನು ನಡೆಸಿದ್ದರಿಂದ ಅವಳನ್ನು ತಂದೆಯ ಮನೆಯ ಬಾಗಿಲಿಗೆ ಬರಮಾಡಬೇಕು; ಊರಿನವರೆಲ್ಲರು ಕಲ್ಲೆಸೆದು ಅವಳನ್ನು ಕೊಲ್ಲಬೇಕು. ಹೀಗೆ ಇಂಥ ಕೇಡನ್ನು ನಿಮ್ಮ ಮಧ್ಯೆಯಿಂದ ತೆಗೆದುಹಾಕಬೇಕು.
೨೨
“ಒಬ್ಬನು ಪರನ ಹೆಂಡತಿಯೊಡನೆ ವ್ಯಭಿಚಾರ ಮಾಡಿ ಸಿಕ್ಕಿಬಿದ್ದರೆ ಆ ಸ್ತ್ರೀಪುರುಷ ಇಬ್ಬರಿಗೂ ಮರಣಶಿಕ್ಷೆಯಾಗಬೇಕು. ಹೀಗೆ ನೀವು ಇಂಥ ಕೇಡನ್ನು ಇಸ್ರಯೇಲರಿಂದ ತೆಗೆದುಹಾಕಬೇಕು.
೨೩
“ಒಬ್ಬನಿಗೆ ನಿಶ್ಚಿತಳಾದ ಹೆಣ್ಣನ್ನು ಯಾವನಾದರು, ಊರೊಳಗೆ ಮರುಳುಗೊಳಿಸಿ, ಸಂಗಮಿಸಿದರೆ,
೨೪
ನೀವು ಅವರಿಬ್ಬರನ್ನೂ ಊರ ಬಾಗಿಲಿನ ಹೊರಕ್ಕೆ ತರಿಸಿ ಕಲ್ಲೆಸೆದು ಕೊಲ್ಲಬೇಕು. ಒಬ್ಬನಿಗೆ ನಿಶ್ಚಿತಳಾದ ಸ್ತ್ರೀಯನ್ನು ಕೆಡಿಸಿದ್ದರಿಂದ ಆ ಪುರುಷನಿಗೂ ಊರಲ್ಲಿದ್ದು ಕೂಗಿಕೊಳ್ಳದೆಹೋದುದರಿಂದ ಆ ಮಹಿಳೆಗೂ ಮರಣಶಿಕ್ಷೆ ಆಗಬೇಕು. ಹೀಗೆ ನೀವು ಇಂಥ ಕೇಡನ್ನು ನಿಮ್ಮ ಮಧ್ಯೆಯಿಂದ ತೆಗೆದುಹಾಕಬೇಕು.
೨೫
“ಆದರೆ ಆ ವ್ಯಕ್ತಿ ನಿಶ್ಚಿತಳಾದ ಆ ಮಹಿಳೆಯನ್ನು ಅಡವಿಯಲ್ಲಿ ಬಲಾತ್ಕಾರದಿಂದ ಸಂಗಮಿಸಿದ್ದರೆ ಆ ವ್ಯಕ್ತಿಗೆ ಮಾತ್ರ ಮರಣಶಿಕ್ಷೆ ಆಗಬೇಕು.
೨೬
ಆ ಮಹಿಳೆಗೆ ಯಾವ ಶಿಕ್ಷೆಯೂ ಆಗಬಾರದು. ಅವಳಲ್ಲಿ ಮರಣಶಿಕ್ಷೆಗೆ ಪಾತ್ರ ಆದ ಅಪರಾಧವೇನೂ ಇಲ್ಲ. ಒಬ್ಬ ವ್ಯಕ್ತಿ ಮತ್ತೊಬ್ಬನ ಮೇಲೆ ಬಿದ್ದು ಕೊಲ್ಲುವುದು ಹೇಗೋ ಹಾಗೆಯೇ ಇದು ಕೂಡ;
೨೭
ಆ ಮಹಿಳೆ ಅಡವಿಯಲ್ಲೇ ಅವನ ಕೈಗೆ ಸಿಕ್ಕಿದ್ದರಿಂದ ಅವಳು ಕೂಡಿಕೊಂಡಿದ್ದರೂ ತಪ್ಪಿಸುವವರು ಇರಲಿಲ್ಲ.
೨೮
“ಯಾರಿಗೂ ನಿಶ್ಚಯವಾಗದೆ ಇರುವ ಕನ್ಯೆಯೊಡನೆ ಒಬ್ಬನು ಬಲಾತ್ಕಾರ ಸಂಭೋಗಮಾಡಿ ಸಿಕ್ಕಿಬಿದ್ದರೆ
೨೯
ಅವನು ಅವಳನ್ನು ಮಾನಭಂಗಪಡಿಸಿದ್ದರಿಂದ ಅವಳ ತಂದೆಗೆ ಐವತ್ತು ಬೆಳ್ಳಿನಾಣ್ಯ ಕೊಟ್ಟು ಅವಳನ್ನು ಹೆಂಡತಿಯನ್ನಾಗಿ ಮಾಡಿಕೊಳ್ಳಬೇಕು. ಅವನು ಬದುಕುವ ತನಕ ಅವಳನ್ನು ಪರಿತ್ಯಾಗ ಮಾಡುವುದಕ್ಕೆ ಅವನಿಗೆ ಅಧಿಕಾರವಿರುವುದಿಲ್ಲ.
೩೦
“ತಂದೆಗೆ ಹೆಂಡತಿಯಾದವಳನ್ನು ಸಂಗಮಿಸಲೇಬಾರದು; ಅದು ತಂದೆಗೆ ಅಪಮಾನಪಡಿಸಿದ ಹಾಗಾಗುವುದು.