English
A A A A A
×

ಕನ್ನಡ ಬೈಬಲ್ (KNCL) 2016

ಧರ್ಮೋಪದೇಷಕಾಂಡ ೧೨
“ನಿಮ್ಮ ಪಿತೃಗಳ ದೇವರಾದ ಸರ್ವೇಶ್ವರ ನಿಮಗೆ ಸ್ವದೇಶವಾಗುವುದಕ್ಕೆ ಕೊಡುವ ನಾಡಿನಲ್ಲೆ ನೀವು ಜೀವಮಾನ ಪರಿಯಂತರ ಅನುಸರಿಸಬೇಕಾದ ಆಜ್ಞಾವಿಧಿಗಳು ಇವು:
“ನೀವು ಸ್ವಾಧೀನಮಾಡಿಕೊಳ್ಳುವ ನಾಡಿನ ಜನಾಂಗಗಳು ದೊಡ್ಡ ಬೆಟ್ಟಗಳ ಮೇಲೂ ದಿಣ್ಣೆಗಳ ಮೇಲೂ ಹರಡಿಕೊಂಡ ಮರಗಳ ಕೆಳಗೂ ತಮ್ಮ ದೇವರುಗಳನ್ನು ಪೂಜಿಸುತ್ತಾರೆ; ಆ ಸ್ಥಳಗಳನ್ನೆಲ್ಲಾ ನೀವು ಅಗತ್ಯವಾಗಿ ನಾಶಮಾಡಬೇಕು.
ಅವರ ಬಲಿಪೀಠಗಳನ್ನು ಕೆಡವಬೇಕು; ಅವರ ಕಲ್ಲುಕಂಬಗಳನ್ನು ಒಡೆಯಬೇಕು; ಅಶೇರ ಎಂಬ ವಿಗ್ರಹಸ್ತಂಭಗಳನ್ನು ಸುಟ್ಟು, ಅವರ ದೇವತಾ ಪ್ರತಿಮೆಗಳನ್ನು ಪುಡಿಪುಡಿಮಾಡಿ ಆ ದೇವರುಗಳ ಹೆಸರೇ ಉಳಿಯದಂತೆ ಮಾಡಿಬಿಡಬೇಕು.
“ಅವರು ಅನುಸರಿಸುವ ರೀತಿಯಲ್ಲಿ ನೀವು ನಿಮ್ಮ ದೇವರಾದ ಸರ್ವೇಶ್ವರನನ್ನು ಪೂಜಿಸಬಾರದು.
ನಿಮ್ಮ ದೇವರಾದ ಸರ್ವೇಶ್ವರ ತಮ್ಮ ಹೆಸರನ್ನು ಸ್ಥಾಪಿಸಿಕೊಳ್ಳಲು ಹಾಗು ತಾವು ವಾಸಮಾಡಲು ನಿಮ್ಮ ಎಲ್ಲಾ ಕುಲಗಳಿಂದ ಆರಿಸಿಕೊಳ್ಳುವ ಸ್ಥಳದಲ್ಲೇ ನೀವು ಅವರ ದರ್ಶನಕ್ಕಾಗಿ ಸಭೆಸೇರಬೇಕು.
ನೀವು ಸಮರ್ಪಿಸುವ ದಹನಬಲಿ ಮುಂತಾದ ಯಜ್ಞಗಳ ಪಶುಪ್ರಾಣಿಗಳನ್ನು, ನಿಮ್ಮ ಬೆಳೆಯಲ್ಲಿ ದಶಮಾಂಶವನ್ನು ಪ್ರತ್ಯೇಕಿಸುವ ಪದಾರ್ಥಗಳನ್ನು ಮತ್ತು ಹರಕೇಮುಡುಪುಗಳನ್ನು, ಕಾಣಿಕೆಗಳನ್ನು ಹಾಗು ದನಕುರಿಗಳ ಚೊಚ್ಚಲು ಮರಿಗಳನ್ನು ಆ ಸ್ಥಳಕ್ಕೆ ಮಾತ್ರ ತರಬೇಕು.
ಅಲ್ಲಿಯೇ ಅವರ ಸನ್ನಿಧಿಯಲ್ಲಿ ಊಟಮಾಡಿ, ನಿಮ್ಮ ದೇವರಾದ ಸರ್ವೇಶ್ವರ ನಿಮ್ಮ ಪ್ರಯತ್ನಗಳನ್ನು ಕೈಗೂಡುವಂತೆ ಮಾಡಿದ್ದಕ್ಕಾಗಿ ನೀವೂ ನಿಮ್ಮ ಮನೆಗಳವರೂ ಸಂತೋಷದಿಂದಿರಬೇಕು.
“ನಾವು ಈಗ ಈ ಸ್ಥಳದಲ್ಲಿ ವರ್ತಿಸುವಂತೆ ಎಲ್ಲರೂ ನಡೆದುಕೊಳ್ಳಬೇಕೇ ವಿನಃ ತಮ್ಮ ತಮ್ಮ ಮನಸ್ಸಿಗೆ ತೋರಿದಂತೆ ವರ್ತಿಸಕೂಡದು;
ಏಕೆಂದರೆ ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಕೊಡುವ ನಾಡನ್ನು ಸೇರಿ, ನೀವು ಇನ್ನು ವಿಶ್ರಾಂತಿಹೊಂದಿಲ್ಲ.
೧೦
ಆದರೆ ನೀವು ಜೋರ್ಡನ್ ನದಿಯನ್ನು ದಾಟಿ ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಸೊತ್ತಾಗಿ ಕೊಡುವ ಆ ನಾಡಿನಲ್ಲಿ ಮನೆಮಾಡಿಕೊಂಡಿರುವಾಗ ನಿಮ್ಮ ಸುತ್ತಲು ಶತ್ರುಗಳು ಯಾರೂ ಇಲ್ಲದಂತೆ ಸರ್ವೇಶ್ವರ ಮಾಡುವರು;
೧೧
ಆಗ ನೀವು ನಿರ್ಭಯರಾಗಿ ನಾನು ನಿಮಗೆ ಆಜ್ಞಾಪಿಸಿದ ಎಲ್ಲಾ ಕಾಣಿಕೆಗಳನ್ನು ಅಂದರೆ, ದಹನಬಲಿ ಮುಂತಾದ ಯಜ್ಞಪಶುಗಳನ್ನು, ಬೆಳೆಯ ದಶಮಾಂಶಗಳನ್ನು, ಸರ್ವೇಶ್ವರನಿಗಾಗಿ ಪ್ರತ್ಯೇಕಿಸುವ ಪದಾರ್ಥಗಳನ್ನು, ಹರಕೆಮಾಡಿದ ವಿಶೇಷ ಕಾಣಿಕೆಗಳನ್ನು, ಇವುಗಳನ್ನೆಲ್ಲ ನಿಮ್ಮ ದೇವರಾದ ಸರ್ವೇಶ್ವರ ತಮ್ಮ ನಾಮಸ್ಥಾಪನೆಗಾಗಿ ಆರಿಸಿಕೊಳ್ಳುವ ಸ್ಥಳಕ್ಕೇ ತರಬೇಕು.
೧೨
ನೀವು, ನಿಮ್ಮ ಗಂಡು ಹೆಣ್ಣು ಮಕ್ಕಳು, ದಾಸದಾಸಿಯರು ಹಾಗು ನಿಮ್ಮೊಡನೆ ಸೊತ್ತನ್ನು ಹೊಂದದೆ ಇರುವ ನಿಮ್ಮ ಊರಿನ ಲೇವಿಯರು ನಿಮ್ಮ ದೇವರಾದ ಸರ್ವೇಶ್ವರನ ಸನ್ನಿಧಿಯಲ್ಲಿ ಸಂತೋಷವಾಗಿರಬೇಕು.
೧೩
“ನಿಮಗೆ ಇಷ್ಟಬಂದ ಸ್ಥಳಗಳಲ್ಲಿ ದಹನಬಲಿಗಳನ್ನು ಸಮರ್ಪಿಸಬಾರದು. ಎಚ್ಚರಿಕೆ!
೧೪
ನಿಮ್ಮ ಯಾವುದಾದರೊಂದು ಕುಲದಲ್ಲಿ ಸರ್ವೇಶ್ವರ ಆರಿಸಿಕೊಳ್ಳುವ ಸ್ಥಳದಲ್ಲೇ ನಿಮ್ಮ ದಹನಬಲಿಗಳನ್ನು ಸಮರ್ಪಿಸಬೇಕು; ಅಲ್ಲಿಯೇ ನಾನು ಆಜ್ಞಾಪಿಸುವ ಎಲ್ಲಾ ಆಚಾರಗಳನ್ನು ನಡೆಸಬೇಕು.
೧೫
ಆದರೆ ನೀವು ಎಲ್ಲ ಊರುಗಳಲ್ಲಿ ನಿಮ್ಮ ದೇವರಾದ ಸರ್ವೇಶ್ವರ ನಿಮ್ಮನ್ನು ಅಭಿವೃದ್ಧಿಪಡಿಸುವ ಮೇರೆಗೆ ಪಶುಪ್ರಾಣಿಗಳನ್ನು ಇಷ್ಟಾನುಸಾರ ಕೊಯ್ದು ಊಟಮಾಡಬಹುದು. ಶುದ್ಧರೂ ಅಶುದ್ಧರೂ ಜಿಂಕೆದುಪ್ಪಿಗಳ ಮಾಂಸವನ್ನು ತಿನ್ನುವ ಪ್ರಕಾರ ಇವುಗಳನ್ನೂ ತಿನ್ನಬಹುದು.
೧೬
ರಕ್ತವನ್ನು ಮಾತ್ರ ಸೇವಿಸಬಾರದು; ಅದನ್ನು ನೀರಿನಂತೆ ಭೂಮಿಯ ಮೇಲೆ ಸುರಿದುಬಿಡಬೇಕು.
೧೭
“ಧಾನ್ಯ, ದ್ರಾಕ್ಷಿ, ಎಣ್ಣೇಕಾಯಿ ಈ ಬೆಳೆಗಳ ದಶಮಾಂಶಗಳನ್ನು, ದನಕುರಿಗಳ ಚೊಚ್ಚಲು ಮರಿಗಳನ್ನು, ಹರಕೆಮಾಡಿದ ಪದಾರ್ಥಗಳನ್ನು, ಕಾಣಿಕೆಗಳನ್ನು ಹಾಗು ಯಾಜಕರಿಗಾಗಿ ಪ್ರತ್ಯೇಕಿಸಿದ ಪದಾರ್ಥಗಳನ್ನು ನಿಮ್ಮ ನಿಮ್ಮ ಊರುಗಳಲ್ಲಿ ತಿನ್ನಬಾರದು.
೧೮
ನಿಮ್ಮ ದೇವರಾದ ಸರ್ವೇಶ್ವರ ಆರಿಸಿಕೊಳ್ಳುವ ಸ್ಥಳದಲ್ಲಿ, ಅವರ ಸನ್ನಿಧಿಯಲ್ಲೇ ಅವುಗಳನ್ನು ಊಟಮಾಡಬೇಕು. ನಿಮ್ಮ ಎಲ್ಲ ಪ್ರಯತ್ನಗಳು ಕೈಗೂಡಿದ್ದಕ್ಕಾಗಿ ನೀವು ನಿಮ್ಮ ದೇವರಾದ ಸರ್ವೇಶ್ವರನ ಸನ್ನಿಧಿಯಲ್ಲಿ ಸಂತೋಷದಿಂದಿರಬೇಕು; ನೀವು, ನಿಮ್ಮ ಗಂಡುಹೆಣ್ಣು ಮಕ್ಕಳು, ಆಳುಗಳು ಹಾಗು ನಿಮ್ಮ ಊರಲ್ಲಿರುವ ಲೇವಿಯರು ಇಂಥವುಗಳನ್ನು ಊಟಮಾಡಬೇಕು.
೧೯
ನೀವು ನಿಮ್ಮ ನಾಡಿನಲ್ಲಿ ಇರುವ ತನಕ ಲೇವಿಯರನ್ನು ಕೈಬಿಡಬಾರದು; ಇದು ನೆನಪಿರಲಿ.
೨೦
“ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ವಾಗ್ದಾನ ಮಾಡಿದಂತೆ ನಿಮ್ಮ ರಾಜ್ಯವನ್ನು ವಿಸ್ತರಿಸಿದಾಗ ನೀವು ಮಾಂಸಾಹಾರವನ್ನು ಮಾಡುವುದಕ್ಕೆ ಇಷ್ಟಪಟ್ಟರೆ ಮಾಡಬಹುದು.
೨೧
ನಿಮ್ಮ ದೇವರಾದ ಸರ್ವೇಶ್ವರ ತಮ್ಮ ಹೆಸರನ್ನು ಸ್ಥಾಪಿಸಲು ಆರಿಸಿಕೊಳ್ಳುವ ಸ್ಥಳ ನಿಮಗೆ ದೂರವಾದರೆ, ಅವರು ನಿಮಗೆ ಅನುಗ್ರಹಿಸಿದ ದನಕುರಿಗಳಲ್ಲಿ ಬೇಕಾದಷ್ಟನ್ನು, ನಾನು ಅಪ್ಪಣೆಕೊಟ್ಟ ಮೇರೆಗೆ, ನೀವು ಕೊಯ್ದು ನಿಮ್ಮ ಊರಲ್ಲೇ ಊಟಮಾಡಬಹುದು.
೨೨
ಜಿಂಕೆ ದುಪ್ಪಿಗಳನ್ನು ಶುದ್ಧರೂ ಅಶುದ್ಧರೂ ತಿನ್ನುವ ಪ್ರಕಾರ ದನಕುರಿಗಳನ್ನೂ ತಿನ್ನಬಹುದು.
೨೩
“ಆದರೆ ರಕ್ತ ಜೀವಾಧಾರವಾದುದರಿಂದ ಮಾಂಸದೊಡನೆ ರಕ್ತವನ್ನು ಸೇವಿಸಲೇಕೂಡದೆಂಬುದನ್ನು ಜ್ಞಾಪಕದಲ್ಲಿಡಿ. ಮಾಂಸದೊಡನೆ ಅದರ ಜೀವಾಧಾರವನ್ನು ತಿನ್ನಬಾರದು.
೨೪
ಅದನ್ನು ಭುಜಿಸದೆ ನೀರಿನಂತೆ ಭೂಮಿಯ ಮೇಲೆ ಸುರಿದುಬಿಡಬೇಕು.
೨೫
ನೀವು ಅದನ್ನು ಸೇವಿಸದೆ ಸರ್ವೇಶ್ವರನಿಗೆ ಮೆಚ್ಚಿಗೆಯಾಗಿರುವುದನ್ನೇ ಮಾಡಿದರೆ ನಿಮಗೂ ನಿಮ್ಮ ಸಂತತಿಯವರಿಗೂ ಶುಭವುಂಟಾಗುವುದು.
೨೬
“ಆದರೆ ನಿಮ್ಮ ಬಳಿಯಿರುವ ದೇವರ ವಸ್ತುಗಳನ್ನು ಹಾಗು ಹರಕೆಮಾಡಿದ್ದನ್ನೂ ಸರ್ವೇಶ್ವರ ಆರಿಸಿಕೊಂಡ ಸ್ಥಳಕ್ಕೇ ತೆಗೆದುಕೊಂಡು ಹೋಗಬೇಕು.
೨೭
ದಹನಬಲಿಗಳನ್ನು ಸಮರ್ಪಿಸುವಾಗ ರಕ್ತಮಾಂಸಗಳೆರಡನ್ನೂ ನಿಮ್ಮ ದೇವರಾದ ಸರ್ವೇಶ್ವರನ ಬಲಿಪೀಠದಲ್ಲಿ ದಹಿಸಿಬಿಡಬೇಕು. ಮಿಕ್ಕಬಲಿಗಳನ್ನು ಅರ್ಪಿಸುವಾಗ ರಕ್ತವನ್ನು ಸರ್ವೇಶ್ವರನ ಬಲಿಪೀಠದ ಮೇಲೆ ಸುರಿದುಬಿಟ್ಟು, ಮಾಂಸವನ್ನು ಊಟಮಾಡಬೇಕು.
೨೮
“ನಾನು ಬೋಧಿಸುವ ಈ ಎಲ್ಲಾ ಆಜ್ಞೆಗಳಿಗೆ ನೀವು ಚೆನ್ನಾಗಿ ಕಿವಿಗೊಟ್ಟು, ಅವುಗಳನ್ನು ಅನುಸರಿಸಿದರೆ ನಿಮಗೂ ನಿಮ್ಮ ಸಂತತಿಯವರಿಗೂ ಸದಾಕಾಲ ಶುಭವುಂಟಾಗುವುದು. ಏಕೆಂದರೆ ಹೀಗೆ ಮಾಡುವುದರಿಂದ ನಿಮ್ಮ ದೇವರಾದ ಸರ್ವೇಶ್ವರನ ದೃಷ್ಟಿಯಲ್ಲಿ ಸರಿಯಾದುದನ್ನೂ ಸೂಕ್ತವಾದುದನ್ನೂ ಮಾಡುತ್ತೀರಿ.
೨೯
“ನೀವು ಸ್ವಾಧೀನಮಾಡಿಕೊಳ್ಳಲು ಹೋಗುವ ನಾಡಿನ ಜನಾಂಗಗಳನ್ನು, ನಿಮ್ಮ ದೇವರಾದ ಸರ್ವೇಶ್ವರ ನಿಮ್ಮ ಮುಂದೆ ನಾಶಮಾಡಿದ ತರುವಾಯ, ನೀವು ಅವರ ನಾಡನ್ನು ತೆಗೆದುಕೊಂಡು ಅದರಲ್ಲಿ ವಾಸವಾಗಿರುವಿರಿ.
೩೦
ಆಗ ನೀವು ಭ್ರಮೆಗೊಂಡು, ನಿಮ್ಮ ಮುಂದೆ ನಾಶವಾದವರ ದುಷ್ಟ ಪದ್ಧತಿಗಳನ್ನು ಅನುಸರಿಸದಂತೆ ಜಾಗರೂಕರಾಗಿರಿ; ‘ಈ ನಾಡಿನ ಜನರು ತಮ್ಮ ದೇವರುಗಳನ್ನು ಹೇಗೆ ಪೂಜಿಸುತ್ತಿದ್ದರೋ ಹಾಗೆಯೇ ನಾವೂ ಪೂಜಿಸುವೆವು’ ಎಂದು ಹೇಳಿಕೊಂಡು ಅವರ ದೇವರುಗಳ ಬಗ್ಗೆ ಎಷ್ಟು ಮಾತ್ರವೂ ಕೇಳಿತಿಳಿದುಕೊಳ್ಳಬೇಡಿ.
೩೧
ಸರ್ವೇಶ್ವರನಿಗೆ ಅಸಹ್ಯವಾಗಿರುವ ಹಲವು ಹೇಸಿಗೆ ಕೆಲಸಗಳನ್ನು ಅವರು ತಮ್ಮ ದೇವತೆಗಳಿಗೆ ಮಾಡುತ್ತಾರೆ; ತಮ್ಮ ಗಂಡುಹೆಣ್ಣು ಮಕ್ಕಳನ್ನು ತಮ್ಮ ದೇವತೆಗಳಿಗೆ ಬೆಂಕಿಯಲ್ಲಿ ಸುಟ್ಟುಬಿಡುತ್ತಾರೆ. ನೀವು ನಿಮ್ಮ ದೇವರಾದ ಸರ್ವೇಶ್ವರನಿಗೆ ಮಾಡುವ ಸೇವೆ ಹಾಗಿರಬಾರದು.