೧ |
“ಆದುದರಿಂದ ನಿಮ್ಮ ದೇವರಾದ ಸರ್ವೇಶ್ವರನಲ್ಲಿ ಪ್ರೀತಿಯಿಟ್ಟು, ಅವರ ನಿಯಮಗಳನ್ನು ಕೈಕೊಂಡು ಅವರ ಆಜ್ಞಾವಿಧಿನಿರ್ಣಯಗಳನ್ನು ಯಾವಾಗಲೂ ಅನುಸರಿಸಬೇಕು. |
೨ |
“ನಿಮ್ಮ ದೇವರಾದ ಸರ್ವೇಶ್ವರ ಪ್ರಯೋಗಿಸಿದ ಶಿಕ್ಷಣಕ್ರಮವನ್ನೂ ಮಹಿಮೆಯನ್ನೂ ಭುಜಬಲವನ್ನೂ ಶಿಕ್ಷಾಹಸ್ತವನ್ನೂ |
೩ |
ಅಂದರೆ, ಅವರು ಈಜಿಪ್ಟ್ ದೇಶದಲ್ಲಿ ಫರೋಹನನ್ನೂ ಅವನ ದೇಶವನ್ನೂ ಶಿಕ್ಷಿಸುವುದಕ್ಕಾಗಿ ನಡೆಸಿದ ಸೂಚಕ ಮತ್ತು ಮಹತ್ಕಾರ್ಯಗಳನ್ನೂ; |
೪ |
ಈಜಿಪ್ಟಿನವರು ರಥಾಶ್ವಬಲಗಳಿಂದ ಕೂಡಿದಂಥ ದಂಡಿನ ಸಮೇತ ನಿಮ್ಮನ್ನು ಹಿಂದಟ್ಟಿ ಬಂದಾಗ ಕೆಂಪುಸಮುದ್ರದ ನೀರನ್ನು ಅವರ ಮೇಲೆ ಬರಮಾಡಿ ಸಂಪೂರ್ಣವಾಗಿ ನಾಶಮಾಡಿದ್ದನ್ನೂ; |
೫ |
ನೀವು ಈ ಸ್ಥಳಕ್ಕೆ ಸೇರುವ ತನಕ ನಿಮಗೆ ಮರುಭೂಮಿಯಲ್ಲಿ ಮಾಡಿದ ಉಪಕಾರಗಳನ್ನೂ; |
೬ |
ರೂಬೇನನ ಮೊಮ್ಮಕ್ಕಳೂ ಎಲೀಯಾಬನ ಮಕ್ಕಳೂ ಆದ ದಾತಾನ್ ಅಬೀರಾಮರು ದಂಗೆಯೆದ್ದಾಗ ಭೂಮಿ ಬಾಯ್ದೆರೆದು ಅವರನ್ನೂ ಅವರ ಮನೆಯವರನ್ನೂ ಡೇರೆಗಳನ್ನೂ ಅವರಿಗೆ ಸೇರಿದ ಎಲ್ಲ ಪಶುಪ್ರಾಣಿಗಳನ್ನೂ ಇಸ್ರಯೇಲರ ನಡುವೆ ನುಂಗಿಬಿಟ್ಟದ್ದನ್ನೂ ಈಗ ಜ್ಞಾಪಕಮಾಡಿಕೊಳ್ಳಿ. ಈ ಕಾರ್ಯಗಳನ್ನು ನೋಡದೆ ಹಾಗು ತಿಳಿಯದೆ ಇರುವ ನಿಮ್ಮ ಮಕ್ಕಳಿಗೆ ನಾನು ಈ ಮಾತನ್ನು ಹೇಳುತ್ತಿಲ್ಲ; |
೭ |
ಸರ್ವೇಶ್ವರ ನಡೆಸಿದ ಆ ವಿಶೇಷಕಾರ್ಯಗಳನ್ನು ಪ್ರತ್ಯಕ್ಷವಾಗಿ ನೋಡಿದವರಾದ ನಿಮಗೇ ಹೇಳುತ್ತಾ ಇದ್ದೇನೆ. |
೮ |
“ನಾನು ಈಗ ನಿಮಗೆ ಬೋಧಿಸುವ ಈ ಧರ್ಮೋಪದೇಶವನ್ನೆಲ್ಲ ನೀವು ಅನುಸರಿಸಬೇಕು. ಆಗ ನೀವು ಬಲವುಳ್ಳವರಾಗಿ ಈ ನದಿ ದಾಟಿ ಆಚೆಯಿರುವ ನಾಡನ್ನು ಸೇರಿ ಸ್ವಾಧೀನಮಾಡಿಕೊಳ್ಳುವಿರಿ; |
೯ |
ಸರ್ವೇಶ್ವರ ನಿಮ್ಮ ಪಿತೃಗಳಿಗೂ ಅವರ ಸಂತತಿಗೂ ಕೊಡುತ್ತೇನೆಂದು ಪ್ರಮಾಣಮಾಡಿದ ಆ ನಾಡಿನಲ್ಲಿ ನೀವು ಬಹುಕಾಲ ಬಾಳುವಿರಿ; ಅದು ಹಾಲೂ ಜೇನೂ ಹರಿಯುವ ನಾಡು. |
೧೦ |
ನೀವು ಸ್ವಾಧೀನಮಾಡಿಕೊಳ್ಳಲು ಹೋಗುವ ನಾಡು ನೀವು ಬಿಟ್ಟುಬಂದ ಈಜಿಪ್ಟ್ ದೇಶದ ಹಾಗಲ್ಲ. ಈಜಿಪ್ಟಿನಲ್ಲಿ ನೀವು ಹೊಲಗದ್ದೆಗಳಲ್ಲಿ ಬೀಜ ಬಿತ್ತಿದ ಮೇಲೆ ಕಾಯಿಪಲ್ಯಗಳ ತೋಟವನ್ನು ಸಾಗುವಳಿಮಾಡುವ ರೀತಿಯಲ್ಲಿ ಏತವನ್ನು ತುಳಿದು ನೀರುಕಟ್ಟುತ್ತಿದ್ದಿರಿ. |
೧೧ |
ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಹೋಗುವ ನಾಡೋ ಹಳ್ಳದಿಣ್ಣೆಗಳ ನಾಡು; ಆಕಾಶದಿಂದ ಮಳೆಬಿದ್ದಂತೆ ನೀರುದೊರಕುತ್ತದೆ. |
೧೨ |
ಅದು ನಿಮ್ಮ ದೇವರಾದ ಸರ್ವೇಶ್ವರ ಪರಾಂಬರಿಸುವ ನಾಡು; ಸಂವತ್ಸರದ ಪ್ರಾರಂಭ ಮೊದಲುಗೊಂಡು ಕೊನೆಯವರೆಗೂ ಅವರು ಅದನ್ನು ಸದಾ ಕಟಾಕ್ಷಿಸುವರು. |
೧೩ |
ನಾನು ಈಗ ನಿಮಗೆ ಬೋಧಿಸುವ ಆಜ್ಞೆಗಳಿಗೆ ಲಕ್ಷ್ಯಕೊಟ್ಟು ನಿಮ್ಮ ದೇವರಾದ ಸರ್ವೇಶ್ವರನನ್ನು ಸಂಪೂರ್ಣ ಹೃದಯದಿಂದಲೂ ಮನಸ್ಸಿನಿಂದಲೂ ಪ್ರೀತಿಸಿ ಅವರಿಗೆ ಸೇವೆಸಲ್ಲಿಸಿದರೆ, |
೧೪ |
ನಿಮಗೆ ಗೋದಿ, ದ್ರಾಕ್ಷಿ, ಎಣ್ಣೇಕಾಯಿ ಇವುಗಳ ಬೆಳೆ ಚೆನ್ನಾಗಿ ಆಗುವುದು. ನಿಮ್ಮ ಭೂಮಿಗೆ ಬೇಕಾದ ಮುಂಗಾರು ಹಿಂಗಾರುಗಳನ್ನು ಅವರು ಸರಿಯಾಗಿ ಸುರಿಸುವರು. |
೧೫ |
ಅಡವಿಯಲ್ಲಿ ದನಕರುಗಳಿಗೆ ಬೇಕಾದಷ್ಟು ಹುಲ್ಲನ್ನು ಕೊಡುವರು; ನೀವು ಆಹಾರದಿಂದ ತೃಪ್ತರಾಗುವಿರಿ. |
೧೬ |
ಆದರೆ ನೀವು ಎಚ್ಚರಿಕೆಯಿಂದಿರಬೇಕು; ಮರುಳುಗೊಂಡು ಸರ್ವೇಶ್ವರ ಹೇಳಿದ ಮಾರ್ಗವನ್ನು ಬಿಟ್ಟು, ಇತರ ದೇವರುಗಳನ್ನು ಅವಲಂಬಿಸಿ, ಪೂಜಿಸಿದರೆ, |
೧೭ |
ಅವರು ನಿಮ್ಮ ಮೇಲೆ ಸಿಟ್ಟಗೊಂಡು ಮಳೆಬಾರದಂತೆ ಆಕಾಶವನ್ನು ಮುಚ್ಚಿಡಬಹುದು. ಆಗ ಭೂಮಿಯಲ್ಲಿ ಬೆಳೆಯಾಗದೆ ಸರ್ವೇಶ್ವರ ನಿಮಗೆ ಕೊಡುವ ಆ ಉತ್ತಮನಾಡಿನಲ್ಲಿ ನೀವು ಉಳಿಯದೆ ಬೇಗ ನಾಶವಾಗಿಹೋಗುವಿರಿ. |
೧೮ |
“ಆದುದರಿಂದ ನೀವು ಈ ನನ್ನ ಮಾತುಗಳನ್ನು ನಿಮ್ಮ ಹೃದಯದಲ್ಲೂ ಮನಸ್ಸಿನಲ್ಲೂ ಇಟ್ಟುಕೊಳ್ಳಬೇಕು; ಇವುಗಳನ್ನು ಜ್ಞಾಪಕಾರ್ಥವಾಗಿ ಕೈಗೆ ಕಟ್ಟಿಕೊಳ್ಳಬೇಕು; ಇವು ನಿಮ್ಮ ಹಣೆಗೆ ಕಟ್ಟಿಕೊಳ್ಳುವ ಜ್ಞಾಪಕದ ಪಟ್ಟಿಯಂತಿರಬೇಕು. |
೧೯ |
ನೀವು ಮನೆಯಲ್ಲಿರುವಾಗಲೂ ಪ್ರಯಾಣದಲ್ಲಿರುವಾಗಲೂ ಮಲಗುವಾಗಲೂ ಏಳುವಾಗಲೂ ಇವುಗಳ ವಿಷಯದಲ್ಲಿ ಮಾತಾಡುತ್ತಾ ನಿಮ್ಮ ಮಕ್ಕಳಿಗೆ ಇವುಗಳನ್ನು ಮನದಟ್ಟಾಗಿಸಬೇಕು. |
೨೦ |
ನಿಮ್ಮ ಮನೇ ಬಾಗಿಲಿನ ನಿಲುವುಪಟ್ಟಿಗಳ ಹಾಗು ಹೆಬ್ಬಾಗಿಲುಗಳ ಮೇಲೆಯೂ ಇವುಗಳನ್ನೂ ಬರೆಯಬೇಕು. |
೨೧ |
ಹೀಗೆ ಮಾಡಿದರೆ ಭೂಮಿಯ ಮೇಲೆ ಆಕಾಶ ಎಷ್ಟುಕಾಲ ನಿಂತಿರುವುದೋ ಅಷ್ಟು ಕಾಲವೂ ನೀವು ಹಾಗು ನಿಮ್ಮ ಸಂತತಿಯವರು ನಿಮ್ಮ ಪಿತೃಗಳಿಗೆ ಸರ್ವೇಶ್ವರ ಪ್ರಮಾಣಪೂರ್ವಕವಾಗಿ ವಾಗ್ದಾನಮಾಡಿದ ಆ ನಾಡಿನಲ್ಲಿ ಬಾಳುವಿರಿ. |
೨೨ |
“ನಾನು ಬೋಧಿಸುವ ಈ ಧರ್ಮೋಪದೇಶವನ್ನೆಲ್ಲ ನೀವು ಅನುಸರಿಸುವವರಾಗಿ, ನಿಮ್ಮ ದೇವರಾದ ಸರ್ವೇಶ್ವರನನ್ನು ಪ್ರೀತಿಸಿ, ಎಲ್ಲ ವಿಷಯಗಳಲ್ಲೂ ಅವರು ಹೇಳುವ ಮಾರ್ಗದಲ್ಲೇ ನಡೆದು, ಅವರನ್ನೇ ಹೊಂದಿಕೊಂಡಿದ್ದರೆ, |
೨೩ |
ಅವರು ಆ ಜನಾಂಗಗಳನ್ನೆಲ್ಲ ನಿಮ್ಮ ಬಳಿಯಿಂದ ಹೊರದೂಡುವರು; ನಿಮಗಿಂತಲೂ ಮಹಾಬಲಿಷ್ಠಜನಾಂಗಗಳ ನಾಡನ್ನು ಸ್ವಾಧೀನಮಾಡಿಕೊಳ್ಳುವಿರಿ. |
೨೪ |
ನೀವು ಹೆಜ್ಜೆಯಿಡುವ ಎಲ್ಲ ಸ್ಥಳಗಳೂ ನಿಮ್ಮದಾಗುವುವು; ಮರುಭೂಮಿ ಮೊದಲುಗೊಂಡು ಲೆಬನೋನ್ ಪರ್ವತದವರೆಗೂ ಮತ್ತು ಯೂಫ್ರೆಟಿಸ್ ನದಿಯಿಂದ ಪಶ್ಚಿಮ ಸಮುದ್ರದವರೆಗೂ ನಿಮ್ಮ ನಾಡು ವ್ಯಾಪಿಸುವುದು. |
೨೫ |
ಯಾರೂ ನಿಮ್ಮ ಮುಂದೆ ನಿಲ್ಲುವುದಿಲ್ಲ. ನೀವು ಕಾಲಿಡುವ ಎಲ್ಲ ಪ್ರದೇಶಗಳ ಜನಗಳಿಗೂ ನಿಮ್ಮಿಂದ ದಿಗಿಲೂ ಹೆದರಿಕೆಯೂ ಉಂಟಾಗುವ ಹಾಗೆ ನಿಮ್ಮ ದೇವರಾದ ಸರ್ವೇಶ್ವರ ತಾನೇ ಹೇಳಿರುವಂತೆ ಮಾಡುವರು. |
೨೬ |
“ಇಗೋ ನೋಡಿ, ಈ ದಿನ ಆಶೀರ್ವಾದವನ್ನೂ ಶಾಪವನ್ನೂ ನಿಮ್ಮ ಮುಂದೆ ಇಡುತ್ತಾ ಇದ್ದೇನೆ. |
೨೭ |
ನಾನು ಈಗ ನಿಮಗೆ ಬೋಧಿಸುವ ನಿಮ್ಮ ದೇವರಾದ ಸರ್ವೇಶ್ವರನ ಆಜ್ಞೆಗಳಿಗೆ ನೀವು ವಿಧೇಯರಾಗಿ ನಡೆದರೆ, ಆಶೀರ್ವಾದ ನಿಮ್ಮದಾಗುವುದು. |
೨೮ |
ಈ ಆಜ್ಞೆಗಳಿಗೆ ವಿಧೇಯರಾಗದೆ, ನಾನು ಈಗ ಬೋಧಿಸುವ ಮಾರ್ಗವನ್ನು ಬಿಟ್ಟು ನಿಮಗೆ ಗೊತ್ತಿಲ್ಲದ ಇತರ ದೇವರುಗಳನ್ನು ಅವಲಂಬಿಸಿದರೆ, ನಿಮಗೆ ಶಾಪ ತಗಲುವುದು. |
೨೯ |
“ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಹೋಗುವ ನಾಡಿಗೆ ನಿಮ್ಮ ದೇವರಾದ ಸರ್ವೇಶ್ವರ ನಿಮ್ಮನ್ನು ಸೇರಿಸಿದ ನಂತರ ನೀವು ಗೆರಿಜ್ಜೀಮ್ ಬೆಟ್ಟದ ಮೇಲೆ ಆಶೀರ್ವಾದವನ್ನೂ ಏಬಾಲ್ ಬೆಟ್ಟದ ಮೇಲೆ ಶಾಪವನ್ನೂ ಪ್ರಕಟಿಸಬೇಕು. |
೩೦ |
ಆ ಬೆಟ್ಟಗಳು ಜೋರ್ಡನ್ ನದಿಯ ಆಚೆ, ಪಡುವಣ ದಾರಿಯ ಪಶ್ಚಿಮದಲ್ಲಿ ಕಾನಾನ್ಯರು ವಾಸಿಸುವ ಅರಾಬಾ ಪ್ರದೇಶದಲ್ಲಿ, ಗಿಲ್ಗಾಲಿಗೆ ಎದುರಾಗಿ ಮೋರೆ ಎಂಬ ವೃಕ್ಷದ ಬಳಿಯಲ್ಲಿ ಇವೆ. |
೩೧ |
“ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಕೊಡುವ ನಾಡನ್ನು ಸ್ವಾಧೀನಮಾಡಿಕೊಳ್ಳುವುದಕ್ಕೆ ನೀವು ಜೋರ್ಡನ್ ನದಿಯನ್ನು ದಾಟಬೇಕಾಗಿದೆ. ನೀವು ಆ ನಾಡನ್ನು ವಶಪಡಿಸಿಕೊಂಡು, ಅದರಲ್ಲಿ ವಾಸಮಾಡುವಾಗ, |
೩೨ |
ನಾನು ಈಗ ನಿಮಗೆ ತಿಳಿಸುವ ಎಲ್ಲ ಆಜ್ಞಾವಿಧಿಗಳನ್ನು ಅನುಸರಿಸಿ ನಡೆಯಲೇಬೇಕು.
|
Kannada Bible (KNCL) 2016 |
No Data |