A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ಧರ್ಮೋಪದೇಷಕಾಂಡ ೧ಜೋರ್ಡನ್ ನದಿಯ ಆಚೆ, ಪಾರಾನಿಗೂ, ತೋಫೆಲ್, ಲಾಬಾನ್, ಹಚೇರೋತ್, ದೀಜಾಹಾಬ್ ಎಂಬ ಊರುಗಳಿಗೂ ನಡುವೆ, ಮರುಭೂಮಿಯಲ್ಲಿ ಅರಾಬಾ ಎಂಬ ತಗ್ಗಾದ ಪ್ರದೇಶದಲ್ಲಿ ಸೂಫಿಗೆ ಎದುರಾಗಿ ಮೋಶೆ ಇಸ್ರಯೇಲರಿಗೆ ಮಾಡಿದ ಉಪನ್ಯಾಸಗಳು ಇವು.
(ಹೋರೇಬಿನಿಂದ ಸೇಯಿರ್ ಬೆಟ್ಟಗಳ ಮಾರ್ಗವಾಗಿ ಕಾದೇಶ್ ಬರ್ನೇಯದವರೆಗೆ ಹನ್ನೊಂದು ದಿನದ ಪ್ರಯಾಣ.)
ಮೋಶೆ ಹೆಷ್ಬೋನಿನಲ್ಲಿದ್ದ ಅಮೋರಿಯರ ಅರಸ ಸೀಹೋನನನ್ನು ಮತ್ತು ಅಷ್ಟಾರೋತ್, ಎದ್ರೈ ಎಂಬ ಪಟ್ಟಣಗಳಲ್ಲಿದ್ದ ಬಾಷಾನಿನ ಅರಸ ಓಗನನ್ನು ಜಯಿಸಿದನು. ತರುವಾಯ,
ಅಂದರೆ ಇಸ್ರಯೇಲರು ಈಜಿಪ್ಟ್ ದೇಶವನ್ನು ಬಿಟ್ಟ ನಲವತ್ತನೆಯ ವರ್ಷದ ಹನ್ನೊಂದನೆಯ ತಿಂಗಳಿನ ಮೊದಲನೆಯ ದಿನ ಸರ್ವೇಶ್ವರ ಸ್ವಾಮಿ ತನಗೆ ಆಜ್ಞಾಪಿಸಿದ್ದನ್ನೆಲ್ಲ ಇಸ್ರಯೇಲರಿಗೆ ತಿಳಿಸಿದನು.
ಜೋರ್ಡನ್ ನದಿಯ ಆಚೆ ಮೋವಾಬ್ಯರ ದೇಶದಲ್ಲಿ ಮೋಶೆ ಈ ಮುಂದಣ ಧರ್ಮಶಾಸ್ತ್ರವನ್ನು ವಿವರಿಸುವುದಕ್ಕೆ ಪ್ರಾರಂಭಿಸಿದನು:
“ಹೋರೇಬಿನಲ್ಲಿ ನಮ್ಮ ದೇವರಾದ ಸರ್ವೇಶ್ವರ ನಮಗೆ, ‘ನೀವು ಈ ಬೆಟ್ಟದ ಬಳಿ ವಾಸಿಸಿದ್ದು ಸಾಕು;
ಈಗ ಹಿಂದಿರುಗಿ ಅಮೋರಿಯರು ಇರುವ ಮಲೆನಾಡಿಗೂ ಅದರ ಸುತ್ತಮುತ್ತಲಿನ ಪ್ರದೇಶಕ್ಕೂ ಪ್ರಯಾಣಮಾಡಿರಿ. ಅಲ್ಲಿನ ಕಣಿವೆ, ತಪ್ಪಲು, ಇಳಕಲು ಪ್ರದೇಶಗಳಿಗೂ ದಕ್ಷಿಣಸೀಮೆ, ಸಮುದ್ರತೀರ ಎಂಬ ನಾಡುಗಳಿಗೂ ಕಾನಾನ್ಯರ ನಾಡು, ಲೆಬನೋನ್ ಪರ್ವತ ಮತ್ತು ಯೂಫ್ರೆಟಿಸ್ ಮಹಾನದಿಯವರೆಗೆ ವಿಸ್ತರಿಸಿಕೊಂಡಿರುವ ಪ್ರದೇಶಗಳಿಗೂ ತೆರಳಿರಿ.
ಆ ನಾಡನ್ನು ನಿಮಗೆ ಕೊಟ್ಟಿದ್ದೇನೆ. ಸರ್ವೇಶ್ವರನೆಂಬ ನಾನು ನಿಮ್ಮ ಪಿತೃಗಳಾದ ಅಬ್ರಹಾಮ, ಇಸಾಕ, ಯಕೋಬರಿಗೂ ಅವರ ಸಂತತಿಯವರಿಗೂ ಆ ನಾಡನ್ನು ಪ್ರಮಾಣಪೂರ್ವಕವಾಗಿ ವಾಗ್ದಾನ ಮಾಡಿದ್ದೆನು. ಅದನ್ನು ಸೇರಿ ಸ್ವಾಧೀನಮಾಡಿಕೊಳ್ಳಿ,’ ಎಂದು ಆಜ್ಞಾಪಿಸಿದರು.
“ಆ ಕಾಲದಲ್ಲಿ ನಾನು ನಿಮ್ಮನ್ನು ಸಂಬೋಧಿಸಿ, ‘ನಿಮ್ಮ ಭಾರವನ್ನು ನಾನೊಬ್ಬನೇ ಹೊರುವುದು ಅಸಾಧ್ಯ;
೧೦
ನಿಮ್ಮ ದೇವರಾದ ಸರ್ವೇಶ್ವರ ನಿಮ್ಮನ್ನು ಸಂಖ್ಯೆಯಲ್ಲಿ ಹೆಚ್ಚಿಸಿದ್ದಾರೆ; ನೀವು ಆಕಾಶದ ನಕ್ಷತ್ರಗಳಷ್ಟಾಗಿದ್ದೀರಿ;
೧೧
ನೀವು ಈಗ ಇರುವುದಕ್ಕಿಂತ ಇನ್ನೂ ಸಾವಿರದಷ್ಟಾಗುವಂತೆ ನಿಮ್ಮ ಪಿತೃಗಳ ದೇವರಾದ ಸರ್ವೇಶ್ವರ ನಿಮ್ಮನ್ನು ಹೆಚ್ಚಿಸಲಿ; ಅವರೇ ವಾಗ್ದಾನಮಾಡಿದ ಪ್ರಕಾರ ನಿಮ್ಮನ್ನು ಆಶೀರ್ವದಿಸಲಿ;
೧೨
ಆದರೆ ನಿಮ್ಮ ಸಮಸ್ಯೆಗಳನ್ನೂ ಹೊಣೆಯನ್ನೂ ವ್ಯಾಜ್ಯಗಳನ್ನೂ ನಾನೊಬ್ಬನೇ ಸಹಿಸುವುದು ಹೇಗೆ?
೧೩
ಆದುದರಿಂದ ನೀವು ಪ್ರತಿಯೊಂದು ಕುಲದಿಂದ ಜ್ಞಾನಿಗಳೂ, ವಿವೇಕಿಗಳೂ, ಪ್ರಖ್ಯಾತರೂ ಆದ ವ್ಯಕ್ತಿಗಳನ್ನು ಆರಿಸಿಕೊಳ್ಳಿ; ನಾನು ಅವರನ್ನು ನಿಮಗೆ ಅಧಿಪತಿಗಳನ್ನಾಗಿ ನೇಮಿಸುತ್ತೇನೆ,’ ಎಂದು ಹೇಳಿದೆ.
೧೪
ಅದಕ್ಕೆ ನೀವು, ‘ನಿಮ್ಮ ಆಲೋಚನೆಯಂತೆ ನಡೆಯುವುದು ವಿಹಿತವಾದದ್ದೇ’ ಎಂದು ಉತ್ತರಕೊಟ್ಟಿರಿ.
೧೫
ಆಗ ನಾನು ನಿಮ್ಮಲ್ಲಿ ಪ್ರಸಿದ್ಧರಾದ ಬುದ್ಧಿವಂತರನ್ನು ಕರೆಯಿಸಿ ಒಂದೊಂದು ಕುಲದಲ್ಲಿ ಸಾವಿರ ಮಂದಿಯ ಮೇಲೆ, ನೂರು ಮಂದಿಯ ಮೇಲೆ, ಐವತ್ತು ಮಂದಿಯ ಮೇಲೆ ಹಾಗು ಹತ್ತು ಮಂದಿಯ ಮೇಲೆ ಅಧಿಕಾರಿಗಳನ್ನಾಗಿ ಹಾಗು ಉಪಾಧಿಕಾರಿಗಳನ್ನಾಗಿ ನೇಮಿಸಿದೆ.
೧೬
ಆ ನ್ಯಾಯಾಧಿಪತಿಗಳಿಗೆ ನಾನು ಆಗ ಕೊಟ್ಟ ಸೂಚನೆ ಇದು: ‘ನೀವು ಸರ್ವಕುಲದವರ ವ್ಯಾಜ್ಯಗಳನ್ನು ವಿಚಾರಿಸಬೇಕು. ಅದು ಇಸ್ರಯೇಲರ ವ್ಯಾಜ್ಯವಾಗಿರಬಹುದು. ಅನ್ಯರೊಡನೆ ವ್ಯಾಜ್ಯವಾಗಿರಬಹುದು. ಎಲ್ಲವನ್ನು ನೀವು ನ್ಯಾಯದ ಪ್ರಕಾರವೇ ತೀರ್ಮಾನಿಸಬೇಕು.
೧೭
ನ್ಯಾಯ ವಿಚಾರಿಸುವಾಗ ಮುಖದಾಕ್ಷಿಣ್ಯ ಮಾಡಬಾರದು; ಅಧಿಕಾರಿಗೂ ಅಲ್ಪರಿಗೂ ಸಮನಾಗಿ ಕಿವಿಗೊಡಿ; ನೀವು ದೇವರ ಹೆಸರಿನಲ್ಲಿ ನ್ಯಾಯ ತೀರಿಸುವುದರಿಂದ ಯಾವ ಮನುಷ್ಯನಿಗೂ ಹೆದರಬೇಡಿ. ನೀವು ತೀರಿಸಲಿಕ್ಕಾಗದ ವ್ಯಾಜ್ಯಗಳನ್ನು ನನ್ನ ಬಳಿಗೆ ತನ್ನಿ; ನಾನೇ ಅವುಗಳನ್ನು ತೀರಿಸುತ್ತೇನೆ,’ ಎಂದು ಹೇಳಿದೆ.
೧೮
ಹೀಗೆ, ನೀವು ಮಾಡಬೇಕಾದ ಎಲ್ಲ ಕಾರ್ಯಗಳ ವಿಷಯದಲ್ಲೂ ಆಗಲೇ ನಿಮಗೆ ಆಜ್ಞೆಕೊಟ್ಟೆ.
೧೯
“ನಾವು ಹೋರೇಬಿನಿಂದ ಹೊರಟು ನಮ್ಮ ದೇವರಾದ ಸರ್ವೇಶ್ವರ ಆಜ್ಞಾಪಿಸಿದಂತೆ ಅಮೋರಿಯರ ಮಲೆನಾಡಿನ ಮಾರ್ಗವನ್ನು ಹಿಡಿದು, ನೀವು ನೋಡಿದ ಆ ಘೋರ ಮಹಾ ಅರಣ್ಯದಲ್ಲಿ ನಡೆದು, ಕಾದೇಶ್ ಬರ್ನೇಯಕ್ಕೆ ಸೇರಿದೆವು.
೨೦
ಆಗ ನಾನು, ‘ನಮ್ಮ ದೇವರಾದ ಸರ್ವೇಶ್ವರ ನಮಗೆ ಕೊಡುವ ಅಮೋರಿಯರ ಮಲೆನಾಡಿನ ಹತ್ತಿರಕ್ಕೆ ಬಂದಿದ್ದೀರಿ;
೨೧
ನಿಮ್ಮ ದೇವರಾದ ಸರ್ವೇಶ್ವರ ಆ ನಾಡನ್ನು ನಿಮಗೇ ಕೊಟ್ಟಿದ್ದಾರೆ; ನಿಮ್ಮ ಪಿತೃಗಳ ದೇವರಾದ ಸರ್ವೇಶ್ವರ ಹೇಳಿದಂತೆ ಅದನ್ನು ಏರಿ ಸ್ವಾಧೀನಮಾಡಿಕೊಳ್ಳಿ; ನೀವು ದಿಗಿಲುಪಡದೆ ಧೈರ್ಯವಾಗಿಯೇ ಇರಬೇಕು,’ ಎಂದು ಹೇಳಿದೆ.
೨೨
“ಆಗ ನೀವೆಲ್ಲರೂ ನನ್ನ ಬಳಿಗೆ ಬಂದು, ‘ನಮಗಿಂತ ಮುಂದಾಗಿ ಜನರನ್ನು ಕಳುಹಿಸುತ್ತೇವೆ; ಅವರು ನಮ್ಮ ಪರವಾಗಿ ಆ ನಾಡನ್ನು ಪರೀಕ್ಷಿಸಿನೋಡಿ, ನಾವು ಹತ್ತಿ ಹೋಗಬೇಕಾದ ದಾರಿಯ ಬಗ್ಗೆ ಹಾಗು ಸೇರಬೇಕಾದ ಊರುಗಳ ಬಗ್ಗೆ ನಮಗೆ ಸಮಾಚಾರ ತರಲಿ’, ಎಂದು ಹೇಳಿದಿರಿ.
೨೩
ಅದು ಒಳ್ಳೇ ಆಲೋಚನೆಯೆಂದು ನಾನು ತಿಳಿದು, ನಿಮ್ಮಲ್ಲಿ ಕುಲಕ್ಕೆ ಒಬ್ಬೊಬ್ಬನ ಮೇರೆಗೆ, ಹನ್ನೆರಡು ಮಂದಿಯನ್ನು ಆರಿಸಿಕೊಂಡೆ.
೨೪
ಅವರು ಹೋಗಿ ಆ ಮಲೆನಾಡನ್ನು ಹತ್ತಿ ಎಷ್ಕೋಲೆಂಬ ಕಣಿವೆಯ ಬಳಿಗೆ ಬಂದು, ಆ ಪ್ರದೇಶವನ್ನು ಸಂಚರಿಸಿ ನೋಡಿ,
೨೫
ಅಲ್ಲಿನ ಹಣ್ಣುಹಂಪಲುಗಳಲ್ಲಿ ಕೆಲವನ್ನು ತಂದು ತೋರಿಸಿದರು; ನಮ್ಮ ದೇವರಾದ ಸರ್ವೇಶ್ವರ ನಮಗೆ ಕೊಡುವ ಆ ನಾಡು ಒಳ್ಳೆಯ ನಾಡೆಂದು ನಮಗೆ ತಿಳಿಸಿದರು.
೨೬
ಆದರೂ ನೀವು ಅಲ್ಲಿಗೆ ಹತ್ತಿಹೋಗದೆ ನಿಮ್ಮ ದೇವರಾದ ಸರ್ವೇಶ್ವರನ ಆಜ್ಞೆಯನ್ನು ಉಲ್ಲಂಘಿಸಿದಿರಿ;
೨೭
ನಿಮ್ಮ ನಿಮ್ಮ ಡೇರೆಗಳಲ್ಲಿ ಗೊಣಗುಟ್ಟಿದಿರಿ; ‘ಸರ್ವೇಶ್ವರ ನಮ್ಮನ್ನು ಈಜಿಪ್ಟ್ ದೇಶದಿಂದ ಬರಮಾಡಿದ್ದು ಹಗೆತನದಿಂದಲೇ; ಅಮೋರಿಯರ ಕೈಗೆ ಒಪ್ಪಿಸಿ ಸಂಹರಿಸಬೇಕೆಂದೇ.
೨೮
ನಾವು ಹೋಗಬೇಕಾದ ಆ ಸೀಮೆ ಎಂಥದೆಂದು ಆಲೋಚಿಸಿ ನೋಡಬೇಕು; ಅಲ್ಲಿಗೆ ಹೋಗಿದ್ದ ನಮ್ಮ ಸಹೋದರರು ಬಂದು ಆ ನಾಡಿನ ಜನರು ನಮಗಿಂತ ಬಲಿಷ್ಠರೂ ಎತ್ತರವಾಗಿಯೂ ಇದ್ದಾರೆ. ಅವರಿರುವ ಪಟ್ಟಣಗಳು ದೊಡ್ಡವು, ಆಕಾಶವನ್ನು ಮುಟ್ಟುವಂಥ ಕೋಟೆಕೊತ್ತಲುಳ್ಳವು; ಅಲ್ಲಿ ‘ಅನಾಕಿಮ್’ ವಂಶಸ್ಥರನ್ನು ಕಂಡೆವೆಂದು ಹೇಳಿ ನಮ್ಮ ಧೈರ್ಯವನ್ನು ಕೆಡಿಸಿದ್ದಾರೆ,’ ಎಂದುಕೊಳ್ಳುತ್ತಿದ್ದಿರಿ.
೨೯
“ಅದಕ್ಕೆ ನಾನು, ‘ಕಳವಳಪಡಬೇಡಿ, ಅವರಿಗೆ ಭಯಪಡಬೇಡಿ.
೩೦
ನಿಮ್ಮ ಮುಂದುಗಡೆಯಲ್ಲೇ ಹೋಗುವ ನಿಮ್ಮ ದೇವರಾದ ಸರ್ವೇಶ್ವರ ಈಜಿಪ್ಟ್ ದೇಶದಲ್ಲೂ ನೀವು ನೋಡಿದ ಮರುಭೂಮಿಯಲ್ಲೂ ಪ್ರತ್ಯಕ್ಷರಾಗಿ ನಿಮ್ಮ ಪರವಾಗಿ ಯುದ್ಧಮಾಡಿದಂತೆಯೇ, ಈಗಲೂ ನಿಮ್ಮ ಕಡೆಯವರಾಗಿದ್ದು ಯುದ್ಧಮಾಡುವರು.
೩೧
ನೀವು ಈ ಸ್ಥಳಕ್ಕೆ ಸೇರುವ ಪರ್ಯಂತರ ನಿಮ್ಮ ಪ್ರಯಾಣದಲ್ಲೆಲ್ಲಾ ಒಬ್ಬ ತಂದೆ ತನ್ನ ಮಗನನ್ನು ಹೇಗೋ ಹಾಗೆಯೇ, ನಿಮ್ಮ ದೇವರಾದ ಸರ್ವೇಶ್ವರ ನಿಮ್ಮನ್ನು ಹೊತ್ತುತಂದರಲ್ಲವೇ?” ಎಂದು ನಿಮಗೆ ಹೇಳಿದೆ.
೩೨
“ಆದರೂ ನೀವು ನಿಮ್ಮ ದೇವರಾದ ಸರ್ವೇಶ್ವರನನ್ನು ನಂಬಲೇ ಇಲ್ಲ.
೩೩
ನೀವು ಹೋಗಬೇಕಾದ ದಾರಿಯನ್ನು ತೋರಿಸುವುದಕ್ಕೂ ಕಂಡು ಇಳಿಯಬೇಕಾದ ಸ್ಥಳಗಳನ್ನು ಗೊತ್ತುಮಾಡುವುದಕ್ಕೂ ಇರುಳಲ್ಲಿ ಬೆಂಕಿಯಲ್ಲೂ ಹಗಲಲ್ಲಿ ಮೇಘದಲ್ಲೂ ನಿಮ್ಮ ಮುಂದುಗಡೆ ಹೋದ ದೇವರನ್ನು ನೀವು ನಂಬಲಿಲ್ಲ.
೩೪
“ಸರ್ವೇಶ್ವರ ನಿಮ್ಮ ಮಾತುಗಳನ್ನು ಕೇಳಿ ಕೋಪಗೊಂಡರು. ಅವರು ನಿಮ್ಮ ಪಿತೃಗಳಿಗೆ ವಾಗ್ದಾನ ಮಾಡಿದ ಒಳ್ಳೇ ನಾಡನ್ನು ಈ ದುಷ್ಟಜನರಲ್ಲಿ ಯಾರೂ ನೋಡುವುದಿಲ್ಲವೆಂದು ಪ್ರಮಾಣಮಾಡಿದರು.
೩೫
***
೩೬
‘ಯೆಫುನ್ನೆಯ ಮಗ ಕಾಲೇಬನೊಬ್ಬನೇ ಸರ್ವೇಶ್ವರನಾದ ನನ್ನನ್ನು ಮನಃಪೂರ್ವಕವಾಗಿ ಅನುಸರಿಸಿದ್ದರಿಂದ ಅವನೇ ಅದನ್ನು ನೋಡುವನು; ಅವನು ಸಂಚರಿಸಿದ ಪ್ರದೇಶವನ್ನು ಅವನಿಗೆ ಹಾಗು ಅವನ ಸಂತತಿ ಅವರಿಗೆ ಕೊಡುವೆನು,’ ಎಂದು ಹೇಳಿದರು.
೩೭
ಅದು ಮಾತ್ರವಲ್ಲದೆ, ಸರ್ವೇಶ್ವರ ನಿಮ್ಮ ದೆಸೆಯಿಂದ ನನ್ನ ಮೇಲೆಯೂ ಕೋಪಮಾಡಿದರು. ‘ನೀನೂ ಆ ನಾಡಿಗೆ ಸೇರುವುದಿಲ್ಲ;
೩೮
ಆದರೆ ನಿನ್ನ ಮುಂದೆ ನಿಂತಿರುವ ನೂನನ ಮಗ ಯೆಹೋಶುವನು ಅಲ್ಲಿಗೆ ಸೇರುವನು. ಅವನೇ ಇಸ್ರಯೇಲರಿಗೆ ಆ ನಾಡನ್ನು ಸ್ವಾಧೀನಪಡಿಸುವನು; ಆದುದರಿಂದ ಅವನನ್ನು ಧೈರ್ಯಗೊಳಿಸು.
೩೯
ಆದರೆ ಪರರ ಪಾಲಾಗುವರೆಂದು ನೀವು ಹೇಳಿದ ನಿಮ್ಮ ಮನೆಯವರು ಹಾಗು ಒಳ್ಳೆಯದು, ಕೆಟ್ಟದು ಎಂಬುದನ್ನು ಅರಿಯದ ನಿಮ್ಮ ಹಸುಳೆಗಳು ಅಲ್ಲಿಗೆ ಸೇರುವರು; ಅವರಿಗೇ ಆ ನಾಡನ್ನು ಕೊಡುವೆನು; ಅವರು ಅದನ್ನು ಸ್ವಾಧೀನಮಾಡಿಕೊಳ್ಳುವರು.
೪೦
ನೀವಾದರೋ ಹಿಂದಿರುಗಿ ಕೆಂಪು ಸಮುದ್ರದ ಮಾರ್ಗವನ್ನು ಹಿಡಿದು ಮರುಭೂಮಿಗೆ ಹೊರಟುಹೋಗಿ’ ಎಂದು ಆಜ್ಞಾಪಿಸಿದರು.
೪೧
“ಅದಕ್ಕೆ ನೀವು, ‘ನಾವು ಸರ್ವೇಶ್ವರನಿಗೆ ದ್ರೋಹಿಗಳಾದೆವು; ಆದರೂ ನಮ್ಮ ದೇವರಾದ ಸರ್ವೇಶ್ವರ ಆಜ್ಞಾಪಿಸಿದಂತೆ ನಾವೇ ಈಗ ಆ ಮಲೆನಾಡನ್ನು ಹತ್ತಿ ಯುದ್ಧಮಾಡುತ್ತೇವೆ,’ ಎಂದು ಉತ್ತರಕೊಟ್ಟಿರಿ; ನೀವೆಲ್ಲರು ನಿಮ್ಮ ನಿಮ್ಮ ಆಯುಧಗಳನ್ನು ತೆಗೆದುಕೊಂಡು ಆ ಮಲೆನಾಡನ್ನು ಹತ್ತಿ ಜಯಿಸುವುದು ಅಲ್ಪಕಾರ್ಯವೆಂದು ಭಾವಿಸಿ ಹೊರಡುವುದಕ್ಕಿದ್ದಿರಿ.
೪೨
ಆದರೆ ಸರ್ವೇಶ್ವರ ನನಗೆ, ‘ನಾನು ಇವರ ಮಧ್ಯೆ ಇಲ್ಲವಾದುದರಿಂದ ಇವರು ಸೋತುಹೋಗುವರು; ಯುದ್ಧಮಾಡಲೂಬಾರದು, ಆ ಮಲೆನಾಡಿಗೆ ಹೋಗಲೂಬಾರದು ಎಂದು ಇವರಿಗೆ ಆಜ್ಞಾಪಿಸು,’ ಎಂದರು.
೪೩
“ನಾನು ಆ ಮಾತನ್ನು ನಿಮಗೆ ತಿಳಿಸಿದರೂ ನೀವು ಕಿವಿಗೊಡದೆ ಸರ್ವೇಶ್ವರನ ಆಜ್ಞೆಯನ್ನು ತಾತ್ಸಾರಮಾಡಿ ಸೊಕ್ಕಿನಿಂದ ಆ ಬೆಟ್ಟವನ್ನು ಹತ್ತಿದಿರಿ.
೪೪
ಆಗ ಬೆಟ್ಟದಲ್ಲಿದ್ದ ಅಮೋರಿಯರು ನಿಮಗೆ ವಿರುದ್ಧ ಹೊರಟು ಜೇನುನೊಣಗಳಂತೆ ನಿಮ್ಮನ್ನು ಮುತ್ತಿ ಸೇಯೀರಿನಲ್ಲಿ ಹೊರ್ಮದವರೆಗೂ ಬೆನ್ನಟ್ಟಿ ಸಂಹರಿಸಿದರು.
೪೫
ನೀವು ಹಿಂದಿರುಗಿ ಬಂದು ಸರ್ವೇಶ್ವರನ ಮುಂದೆ ಗೋಳಾಡಿದಿರಿ. ಆಗ ಅವರು ನಿಮ್ಮ ಮೊರೆಯನ್ನು ಕೇಳಲೂ ಇಲ್ಲ, ನಿಮ್ಮನ್ನು ರಕ್ಷಿಸಲೂ ಇಲ್ಲ.
೪೬
“ಆಮೇಲೆ ನೀವು ಕಾದೇಶಿನಲ್ಲಿ ಬಹುಕಾಲ ವಾಸವಾಗಿದ್ದಿರಿ.