A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ಮಾರ್ಕನು ೯ಪುನಃ ಯೇಸುಸ್ವಾಮಿ, ಅವರಿಗೆ “ಇಲ್ಲಿರುವವರಲ್ಲಿ ಕೆಲವರು ದೇವರ ಸಾಮ್ರಾಜ್ಯವು ಪ್ರಭಾವದೊಡನೆ ಜಗತ್ತಿನಲ್ಲಿ ಪ್ರತ್ಯಕ್ಷವಾಗುವುದನ್ನು ನೋಡದೆ ಮರಣಹೊಂದುವುದಿಲ್ಲ ಎಂದು ನಿಮಗೆ ಖಂಡಿತವಾಗಿ ಹೇಳುತ್ತೇನೆ,” ಎಂದು ಹೇಳಿದರು.
ಆರು ದಿನಗಳ ಬಳಿಕ ಪೇತ್ರ, ಯಕೋಬ ಮತ್ತು ಯೊವಾನ್ನ ಇವರನ್ನು ಮಾತ್ರ ತಮ್ಮೊಡನೆ ಕರೆದುಕೊಂಡು ಯೇಸುಸ್ವಾಮಿ ಎತ್ತರವಾದ ಒಂದು ಬೆಟ್ಟಕ್ಕೆ ಹೋದರು. ಅಲ್ಲಿ ಆ ಶಿಷ್ಯರ ಕಣ್ಣೆದುರಿಗೇ ಯೇಸು ರೂಪಾಂತರ ಹೊಂದಿದರು.
ಆಗ ಅವರ ಉಡುಪು ಅತ್ಯಂತ ಶುಭ್ರವಾಗಿ ಹೊಳೆಯಿತು. ಜಗದ ಯಾವ ಅಗಸನಿಂದಲೂ ಮಡಿಮಾಡಲಾಗದಷ್ಟು ಅದು ಬಿಳುಪಾಯಿತು.
ಮೋಶೆ ಮತ್ತು ಎಲೀಯ ಪ್ರತ್ಯಕ್ಷರಾಗಿ ಯೇಸುವಿನೊಡನೆ ಮಾತನಾಡುತ್ತಿದ್ದುದು ಶಿಷ್ಯರಿಗೆ ಕಾಣಿಸಿತು.
ಆಗ ಪೇತ್ರನು ಯೇಸುವಿಗೆ, “ಗುರುದೇವಾ, ನಾವು ಇಲ್ಲೇ ಇರುವುದು ಒಳ್ಳೆಯದು; ಅಪ್ಪಣೆಯಾಗಲಿ, ಮೂರು ಗುಡಾರಗಳನ್ನು ಕಟ್ಟುವೆವು; ತಮಗೊಂದು, ಮೋಶೆಗೊಂದು ಮತ್ತು ಎಲೀಯನಿಗೊಂದು,” ಎಂದನು.
ಪೇತ್ರನಿಗೆ ತಾನು ಏನು ಹೇಳುತ್ತಿದ್ದೇನೆಂದೇ ತಿಳಿಯಲಿಲ್ಲ. ಶಿಷ್ಯರು ಅಷ್ಟು ಭಯಭ್ರಾಂತ ಆಗಿದ್ದರು!
ಅಷ್ಟರಲ್ಲಿ ಮೇಘವೊಂದು ಅವರನ್ನು ಆವರಿಸಿತು. ಅದರೊಳಗಿಂದ, “ಈತನು ನನ್ನ ಪುತ್ರ, ನನಗೆ ಪರಮಪ್ರಿಯನು, ಈತನ ಮಾತಿಗೆ ಕಿವಿಗೊಡಿ,” ಎಂಬ ವಾಣಿ ಕೇಳಿಸಿತು.
ತಕ್ಷಣ, ಶಿಷ್ಯರು ಸುತ್ತಲೂ ನೋಡಲು ತಮ್ಮೊಂದಿಗೆ ಯೇಸುವೊಬ್ಬರನ್ನೇ ಹೊರತು ಬೇರೆ ಯಾರನ್ನೂ ಕಾಣಲಿಲ್ಲ.
ಅನಂತರ ಯೇಸು ಮತ್ತು ಅವರ ಶಿಷ್ಯರು ಬೆಟ್ಟದಿಂದ ಇಳಿದುಬರುವಾಗ, “ನರಪುತ್ರನು ಸತ್ತು ಪುನರುತ್ಥಾನ ಹೊಂದುವ ತನಕ ನೀವು ಕಂಡದ್ದನ್ನು ಯಾರಿಗೂ ಹೇಳಬೇಡಿ,” ಎಂದು ಆಜ್ಞಾಪಿಸಿದರು.
೧೦
ಅಂತೆಯೇ ಶಿಷ್ಯರು ಇದನ್ನು ಯಾರಿಗೂ ಹೇಳಲಿಲ್ಲ; ಆದರೂ ‘ಸತ್ತು ಪುನರುತ್ಥಾನ ಹೊಂದುವುದು’ ಎಂದರೆ ಏನು? ಎಂದು ತಮ್ಮತಮ್ಮೊಳಗೆ ಚರ್ಚಿಸಿಕೊಂಡರು.
೧೧
ಅನಂತರ, “ಎಲೀಯನು ಮೊದಲು ಬರಬೇಕಾದುದು ಅಗತ್ಯವೆಂದು ಶಾಸ್ತ್ರಜ್ಞರು ಹೇಳುತ್ತಾರಲ್ಲಾ, ಅದು ಹೇಗೆ?” ಎಂದು ಶಿಷ್ಯರು ಯೇಸುವನ್ನು ಕೇಳಿದರು.
೧೨
ಅದಕ್ಕೆ ಅವರು, “ ‘ಎಲೀಯನು ಮೊದಲು ಬಂದು ಎಲ್ಲವನ್ನೂ ಸಜ್ಜುಗೊಳಿಸುವನೆಂಬುದೇನೋ ನಿಜ. ಆದರೂ ನರಪುತ್ರನು ಜನರಿಂದ ತೀವ್ರಯಾತನೆಯನ್ನು ಅನುಭವಿಸಿ ಅವರಿಂದ ತಿರಸ್ಕೃತನಾಗಬೇಕು,’ ಎಂದು ಪವಿತ್ರಗ್ರಂಥದಲ್ಲಿ ಬರೆದಿದೆಯಲ್ಲವೆ; ಇದು ಹೇಗೆ?
೧೩
ಆದರೆ ನಾನು ನಿಮಗೆ ಹೇಳುವುದೇನೆಂದರೆ, ‘ಎಲೀಯನು ಬಂದಾಗಿದೆ; ಆತನ ವಿಷಯವಾಗಿ ಮೊದಲೇ ಬರೆದಿರುವಂತೆ ಜನರು ತಮ್ಮ ಇಚ್ಛಾನುಸಾರ ಆತನನ್ನು ಹಿಂಸಿಸಿದ್ದೂ ಆಗಿದೆ’,” ಎಂದರು.
೧೪
ಅವರೆಲ್ಲರೂ ಹಿಂದಿರುಗಿ ಬಂದಾಗ ಉಳಿದ ಶಿಷ್ಯರ ಸುತ್ತಲೂ ಜನರು ದೊಡ್ಡ ಗುಂಪಾಗಿ ನೆರೆದಿರುವುದನ್ನು ಧರ್ಮಶಾಸ್ತ್ರಿಗಳು ಇವರೊಡನೆ ವಾದಿಸುತ್ತಿರುವುದನ್ನು ಕಂಡರು.
೧೫
ನೆರೆದಿದ್ದ ಜನರು ಯೇಸುವನ್ನು ಕಂಡೊಡನೆ ಆಶ್ಚರ್ಯಪಟ್ಟು ಓಡಿಬಂದು, ಅವರಿಗೆ ನಮಸ್ಕರಿಸಿದರು.
೧೬
ಯೇಸುಸ್ವಾಮಿ, “ನಿಮ್ಮ ವಾಗ್ವಾದ ಏನು?” ಎಂದು ಕೇಳಿದರು.
೧೭
ಆ ಗುಂಪಿನಲ್ಲಿದ್ದ ಒಬ್ಬನು, “ಬೋಧಕರೇ, ನನ್ನ ಮಗನನ್ನು ತಮ್ಮ ಬಳಿಗೆಂದು ಕರೆತಂದೆ.
೧೮
ಅವನಿಗೆ ಒಂದು ಮೂಕದೆವ್ವ ಹಿಡಿದಿದೆ. ಅವನ ಮೇಲೆ ಅದು ಬಂದಾಗಲೆಲ್ಲಾ ಅವನನ್ನು ನೆಲಕ್ಕೆ ಅಪ್ಪಳಿಸುತ್ತದೆ. ಅವನು ನೊರೆಕಾರುತ್ತಾ ಹಲ್ಲು ಕಡಿದುಕೊಳ್ಳುತ್ತಾನೆ. ಆಗ ಅವನ ದೇಹವೆಲ್ಲಾ ಮರಗಟ್ಟಿದಂತಾಗುತ್ತದೆ. ಆ ದೆವ್ವವನ್ನು ಬಿಡಿಸಬೇಕೆಂದು ತಮ್ಮ ಶಿಷ್ಯರನ್ನು ಕೇಳಿಕೊಂಡೆ. ಆದರೆ, ಅದು ಅವರಿಂದಾಗಲಿಲ್ಲ,” ಎಂದನು.
೧೯
ಇದನ್ನು ಕೇಳಿ ಯೇಸು, “ಅಯ್ಯೋ, ವಿಶ್ವಾಸವಿಲ್ಲದ ಪೀಳಿಗೆಯೇ, ಇನ್ನೆಷ್ಟು ಕಾಲ ನಿಮ್ಮೊಂದಿಗಿರಲಿ! ಇನ್ನೆಷ್ಟು ಕಾಲ ನಿಮ್ಮನ್ನು ಸಹಿಸಿಕೊಳ್ಳಲಿ! ಅವನನ್ನು ನನ್ನ ಬಳಿಗೆ ಕರೆದುಕೊಂಡು ಬನ್ನಿ,” ಎಂದರು.
೨೦
ಆಗ ಆ ಹುಡುಗನನ್ನು ಯೇಸುವಿನ ಬಳಿಗೆ ಕರೆತಂದರು. ಯೇಸುವನ್ನು ನೋಡಿದಾಕ್ಷಣ ಆ ದೆವ್ವ ಹುಡುಗನನ್ನು ನೆಲಕ್ಕೆ ಅಪ್ಪಳಿಸಿ ಒದ್ದಾಡಿಸಿತು. ಹುಡುಗ ಹೊರಳಾಡುತ್ತಾ ನೊರೆಕಾರಿದನು.
೨೧
ಯೇಸು, “ಇವನಿಗೆ ಎಷ್ಟು ದಿನದಿಂದ ಹೀಗಾಗುತ್ತಿದೆ?” ಎಂದು ಹುಡುಗನ ತಂದೆಯನ್ನು ವಿಚಾರಿಸಿದರು. ಅದಕ್ಕೆ ಅವನು “ಬಾಲ್ಯದಿಂದಲೇ ಹೀಗಾಗುತ್ತಿದೆ; ಇದಲ್ಲದೆ ದೆವ್ವವು ಇವನನ್ನು ಕೊಲ್ಲಬೇಕೆಂದು ಪದೇಪದೇ ಬೆಂಕಿಗೂ ನೀರಿಗೂ ದೂಡಿದೆ;
೨೨
ತಮ್ಮಿಂದ ಏನಾದರೂ ಸಾಧ್ಯವಾದರೆ, ನಮ್ಮ ಮೇಲೆ ದಯವಿಟ್ಟು ಸಹಾಯಮಾಡಿ,” ಎಂದು ಯೇಸುವನ್ನು ಬೇಡಿಕೊಂಡನು.
೨೩
ಅದಕ್ಕೆ ಯೇಸು, “ ‘ಸಾಧ್ಯವಾದರೆ’ ಎನ್ನುತ್ತೀಯಲ್ಲಾ? ದೇವರಲ್ಲಿ ವಿಶ್ವಾಸ ಇಡುವವನಿಗೆ ಎಲ್ಲವೂ ಸಾಧ್ಯ!” ಎಂದರು.
೨೪
ಆಗ ಆ ಬಾಲಕನ ತಂದೆ, “ನಾನು ವಿಶ್ವಾಸಿಸುತ್ತೇನೆ, ನನ್ನ ವಿಶ್ವಾಸದಲ್ಲಿ ಕೊರತೆಯಿದ್ದರೆ ನೆರವು ನೀಡಿ,” ಎಂದು ಯೇಸುವಿಗೆ ಮೊರೆಯಿಟ್ಟನು.
೨೫
ಜನಸಂದಣಿ ಬೆಳೆಯುತ್ತಿರುವುದನ್ನು ಕಂಡ ಯೇಸು, ಆ ದೆವ್ವವನ್ನು ಗದರಿಸಿ, “ಎಲೈ, ಕಿವುಡು ಮೂಕ ದೆವ್ವವೇ, ಇವನನ್ನು ಬಿಟ್ಟು ತೊಲಗು; ಇನ್ನೆಂದಿಗೂ ಇವನೊಳಗೆ ಪ್ರವೇಶಿಸಕೂಡದೆಂದು ನಿನಗೆ ಆಜ್ಞಾಪಿಸುತ್ತೇನೆ,” ಎಂದರು.
೨೬
ದೆವ್ವವು ಚೀರುತ್ತಾ, ಹುಡುಗನನ್ನು ವಿಲವಿಲನೆ ಒದ್ದಾಡಿಸಿ, ಕೊನೆಗೆ ಬಿಟ್ಟುಹೋಯಿತು. ಹುಡುಗನು ಶವದಂತಾದನು. ಅಲ್ಲಿದ್ದವರಲ್ಲಿ ಅನೇಕರು ‘ಹುಡುಗ ಸತ್ತುಹೋದ,’ ಎಂದುಕೊಂಡರು.
೨೭
ಆದರೆ ಯೇಸು ಅವನ ಕೈಹಿಡಿದು ಎತ್ತಲು ಅವನು ಎದ್ದುನಿಂತನು.
೨೮
ಅಂದು ಯೇಸುಸ್ವಾಮಿ ಮನೆಗೆ ಬಂದಾಗ, ಶಿಷ್ಯರು ಪ್ರತ್ಯೇಕವಾಗಿ ಅವರ ಬಳಿಗೆ ಬಂದು, “ಆ ದೆವ್ವವನ್ನು ಹೊರಗಟ್ಟಲು ನಮ್ಮಿಂದೇಕೆ ಆಗಲಿಲ್ಲ?” ಎಂದು ಕೇಳಿದರು.
೨೯
ಅದಕ್ಕೆ ಯೇಸು, “ಈ ಬಗೆಯ ದೆವ್ವವನ್ನು ಹೊರಗಟ್ಟಲು ಪ್ರಾರ್ಥನೆಯೇ ಹೊರತು ಬೇರೆ ಮಾರ್ಗವಿಲ್ಲ,” ಎಂದರು.
೩೦
ಯೇಸುಸ್ವಾಮಿ ಮತ್ತು ಶಿಷ್ಯರು ಹೊರಟು ಗಲಿಲೇಯ ಮಾರ್ಗವಾಗಿ ಮುಂದಕ್ಕೆ ಪ್ರಯಾಣ ಮಾಡಿದರು. ಇದು ಯಾರಿಗೂ ತಿಳಿಯಬಾರದು ಎಂಬುದು ಯೇಸುವಿನ ಇಚ್ಛೆಯಾಗಿತ್ತು.
೩೧
ಕಾರಣ, ತಮ್ಮ ಶಿಷ್ಯರಿಗೆ ಪ್ರಬೋಧಿಸುವುದರಲ್ಲಿ ಅವರು ನಿರತರಾಗಿದ್ದರು. “ನರಪುತ್ರನನ್ನು ಜನರ ವಶಕ್ಕೆ ಒಪ್ಪಿಸಲಾಗುವುದು. ಅವರು ಆತನನ್ನು ಕೊಲ್ಲುವರು. ಕೊಂದ ಮೂರನೆಯ ದಿನ ಆತನು ಪುನರುತ್ಥಾನ ಹೊಂದುವನು,” ಎಂದು ಯೇಸು ಅವರಿಗೆ ತಿಳಿಸಿದರು.
೩೨
ಆದರೆ ಯೇಸು ಹೇಳಿದ ಈ ಮಾತುಗಳನ್ನು ಶಿಷ್ಯರು ಅರ್ಥಮಾಡಿಕೊಳ್ಳಲಿಲ್ಲ. ಅವುಗಳ ಬಗ್ಗೆ ಪ್ರಶ್ನಿಸಲು ಸಹ ಅಂಜಿದರು.
೩೩
ಅನಂತರ ಅವರೆಲ್ಲರೂ ಕಫೆರ್ನವುಮಿಗೆ ಬಂದರು. ಮನೆ ಸೇರಿದಾಗ ಯೇಸುಸ್ವಾಮಿ, “ದಾರಿಯಲ್ಲಿ ಬರುತ್ತಾ ನೀವು ನಿಮ್ಮಲ್ಲೇ ಏನು ಚರ್ಚೆಮಾಡುತ್ತಿದ್ದಿರಿ?” ಎಂದು ಶಿಷ್ಯರನ್ನು ಕೇಳಿದರು. ಅವರು ಮೌನತಾಳಿದರು.
೩೪
ಏಕೆಂದರೆ, ತಮ್ಮಲ್ಲಿ ಯಾವನು ಅತಿ ಶ್ರೇಷ್ಠನು ಎಂದು ತಮ್ಮ ತಮ್ಮಲ್ಲೇ ವಾದಿಸುತ್ತಾ ಬಂದಿದ್ದರು.
೩೫
ಯೇಸು ಕುಳಿತುಕೊಂಡು, ಹನ್ನೆರಡು ಮಂದಿಯನ್ನೂ ಕರೆದು, ಅವರಿಗೆ, ‘ನಿಮ್ಮಲ್ಲಿ ಮೊದಲಿಗನಾಗ ಬಯಸುವವನು ಎಲ್ಲರಿಗೂ ಕಡೆಯವನಾಗಿರಲಿ; ಎಲ್ಲರ ಸೇವೆ ಮಾಡುವವನಾಗಿ ಇರಲಿ,’ ಎಂದರು.
೩೬
ಅನಂತರ ಯೇಸು, ಒಂದು ಚಿಕ್ಕ ಮಗುವನ್ನು ಕರೆದು ಅವರ ನಡುವೆ ನಿಲ್ಲಿಸಿ, ಅದನ್ನು ತಬ್ಬಿಕೊಂಡು ತಮ್ಮ ಶಿಷ್ಯರಿಗೆ,
೩೭
“ನನ್ನ ಹೆಸರಿನಲ್ಲಿ ಇಂಥ ಮಗುವೊಂದನ್ನು ಯಾರು ಬರಮಾಡಿಕೊಳ್ಳುತ್ತಾನೋ ಅವನು ನನ್ನನ್ನೇ ಬರಮಾಡಿಕೊಳ್ಳುತ್ತಾನೆ; ಯಾರು ನನ್ನನ್ನು ಬರಮಾಡಿಕೊಳ್ಳುತ್ತಾನೋ ಅವನು ನನ್ನನ್ನು ಅಲ್ಲ, ನನ್ನನ್ನು ಕಳುಹಿಸಿದಾತನನ್ನೇ ಬರಮಾಡಿಕೊಳ್ಳುತ್ತಾನೆ,” ಎಂದರು.
೩೮
ಯೊವಾನ್ನನು ಯೇಸುಸ್ವಾಮಿಗೆ, “ಗುರುವೇ, ಯಾರೋ ಒಬ್ಬನು ತಮ್ಮ ಹೆಸರಿನಲ್ಲಿ ದೆವ್ವಬಿಡಿಸುವುದನ್ನು ಕಂಡೆವು. ಅವನು ನಮ್ಮವನಲ್ಲ. ಆದಕಾರಣ ಅವನನ್ನು ತಡೆದೆವು,” ಎಂದನು.
೩೯
ಅದಕ್ಕೆ ಯೇಸು, “ಅವನನ್ನು ತಡೆಯಬೇಡಿ, ನನ್ನ ಹೆಸರಿನಲ್ಲಿ ಅದ್ಭುತ ಮಾಡುವವನು ಮರುಕ್ಷಣವೇ ನನ್ನ ವಿಷಯವಾಗಿ ಅಪಪ್ರಚಾರ ಮಾಡನು.
೪೦
ನಮಗೆ ವಿರೋಧಿ ಅಲ್ಲದವನು ನಮ್ಮ ಪರವಾದಿ.
೪೧
ನೀವು ಕ್ರಿಸ್ತಭಕ್ತರು ಎಂದು ಯಾವನಾದರೂ ನಿಮಗೆ ಕುಡಿಯಲು ಒಂದು ಲೋಟ ನೀರನ್ನು ಕೊಟ್ಟರೂ ಅದಕ್ಕೆ ತಕ್ಕ ಪ್ರತಿಫಲವನ್ನು ಅವನು ತಪ್ಪದೆ ಪಡೆಯುವನು ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ,” ಎಂದರು.
೪೨
ಯೇಸುಸ್ವಾಮಿ ತಮ್ಮ ಬೋಧನೆಯನ್ನು ಮುಂದುವರಿಸುತ್ತಾ, “ನನ್ನಲ್ಲಿ ವಿಶ್ವಾಸ ಇಟ್ಟಿರುವ ಈ ಚಿಕ್ಕವರಲ್ಲಿ ಒಬ್ಬನಿಗೆ ಯಾವನಾದರೂ ಪಾಪಕ್ಕೆ ಕಾರಣನಾದರೆ, ಅಂಥವನ ಕೊರಳಿಗೆ ದೊಡ್ಡ ಬೀಸುಕಲ್ಲನ್ನು ಕಟ್ಟಿ, ಅವನನ್ನು ಸಮುದ್ರದಲ್ಲಿ ದಬ್ಬುವುದೇ ಅವನಿಗೆ ಲೇಸು.
೪೩
ನಿನ್ನ ಕೈ ನಿನಗೆ ಪಾಪಕ್ಕೆ ಕಾರಣವಾದರೆ ಅದನ್ನು ಕತ್ತರಿಸಿಹಾಕು;
೪೪
ಎರಡು ಕೈಗಳಿದ್ದು ನರಕದ ಆರದ ಬೆಂಕಿಗೆ ಗುರಿಯಾಗುವುದಕ್ಕಿಂತ ಅಂಗಹೀನನಾಗಿ ಅಮರಜೀವವನ್ನು ಪಡೆಯುವುದೇ ಲೇಸು.
೪೫
ನಿನ್ನ ಕಾಲು ನಿನಗೆ ಪಾಪಕ್ಕೆ ಕಾರಣವಾದರೆ ಅದನ್ನು ಕತ್ತರಿಸಿಹಾಕು.
೪೬
ಎರಡು ಕಾಲುಳ್ಳವನಾಗಿ ನರಕಕ್ಕೆ ತಳ್ಳಿಸಿಕೊಳ್ಳುವುದಕ್ಕಿಂತ ಕುಂಟನಾಗಿ ಅಮರಜೀವವನ್ನು ಪಡೆಯುವುದೇ ಲೇಸು.
೪೭
ನಿನ್ನ ಕಣ್ಣು ನಿನಗೆ ಪಾಪಕ್ಕೆ ಕಾರಣವಾದರೆ ಅದನ್ನು ಕಿತ್ತುಹಾಕು. ಎರಡು ಕಣ್ಣುಳ್ಳವನಾಗಿ ನರಕಕ್ಕೆ ತಳ್ಳಿಸಿಕೊಳ್ಳುವುದಕ್ಕಿಂತ ಒಕ್ಕಣ್ಣನಾಗಿ ದೇವರ ಸಾಮ್ರಾಜ್ಯ ಸೇರುವುದೇ ಲೇಸು.
೪೮
ನರಕದಲ್ಲಿ ಅವರನ್ನು ಕಡಿಯುವ ಹುಳ ಸಾಯದು, ಸುಡುವ ಬೆಂಕಿ ಆರದು.
೪೯
ಊಟಕ್ಕೆ ಉಪ್ಪಿನಂತೆ ಪ್ರತಿಯೊಬ್ಬನಿಗೆ ಅಗ್ನಿಪರೀಕ್ಷೆ ಅವಶ್ಯಕ.
೫೦
ಉಪ್ಪೇನೋ ಪ್ರಯೋಜನಕರ. ಆದರೆ ಉಪ್ಪೇ ಸಪ್ಪೆಯಾದರೆ, ಇನ್ನು ಯಾವುದರಿಂದ ಅದನ್ನು ಪುನಃ ರುಚಿಗೊಳಿಸಲಾದೀತು? ನೀವು ಉಪ್ಪಿನಂತೆ ಒಬ್ಬರಿಗೊಬ್ಬರು ಒಪ್ಪಿಗೆಯಾಗಿ ಸಮಾಧಾನದಿಂದಿರಿ,” ಎಂದರು.ಮಾರ್ಕನು ೯:1

ಮಾರ್ಕನು ೯:2

ಮಾರ್ಕನು ೯:3

ಮಾರ್ಕನು ೯:4

ಮಾರ್ಕನು ೯:5

ಮಾರ್ಕನು ೯:6

ಮಾರ್ಕನು ೯:7

ಮಾರ್ಕನು ೯:8

ಮಾರ್ಕನು ೯:9

ಮಾರ್ಕನು ೯:10

ಮಾರ್ಕನು ೯:11

ಮಾರ್ಕನು ೯:12

ಮಾರ್ಕನು ೯:13

ಮಾರ್ಕನು ೯:14

ಮಾರ್ಕನು ೯:15

ಮಾರ್ಕನು ೯:16

ಮಾರ್ಕನು ೯:17

ಮಾರ್ಕನು ೯:18

ಮಾರ್ಕನು ೯:19

ಮಾರ್ಕನು ೯:20

ಮಾರ್ಕನು ೯:21

ಮಾರ್ಕನು ೯:22

ಮಾರ್ಕನು ೯:23

ಮಾರ್ಕನು ೯:24

ಮಾರ್ಕನು ೯:25

ಮಾರ್ಕನು ೯:26

ಮಾರ್ಕನು ೯:27

ಮಾರ್ಕನು ೯:28

ಮಾರ್ಕನು ೯:29

ಮಾರ್ಕನು ೯:30

ಮಾರ್ಕನು ೯:31

ಮಾರ್ಕನು ೯:32

ಮಾರ್ಕನು ೯:33

ಮಾರ್ಕನು ೯:34

ಮಾರ್ಕನು ೯:35

ಮಾರ್ಕನು ೯:36

ಮಾರ್ಕನು ೯:37

ಮಾರ್ಕನು ೯:38

ಮಾರ್ಕನು ೯:39

ಮಾರ್ಕನು ೯:40

ಮಾರ್ಕನು ೯:41

ಮಾರ್ಕನು ೯:42

ಮಾರ್ಕನು ೯:43

ಮಾರ್ಕನು ೯:44

ಮಾರ್ಕನು ೯:45

ಮಾರ್ಕನು ೯:46

ಮಾರ್ಕನು ೯:47

ಮಾರ್ಕನು ೯:48

ಮಾರ್ಕನು ೯:49

ಮಾರ್ಕನು ೯:50ಮಾರ್ಕನು 1 / ಮಾರ 1

ಮಾರ್ಕನು 2 / ಮಾರ 2

ಮಾರ್ಕನು 3 / ಮಾರ 3

ಮಾರ್ಕನು 4 / ಮಾರ 4

ಮಾರ್ಕನು 5 / ಮಾರ 5

ಮಾರ್ಕನು 6 / ಮಾರ 6

ಮಾರ್ಕನು 7 / ಮಾರ 7

ಮಾರ್ಕನು 8 / ಮಾರ 8

ಮಾರ್ಕನು 9 / ಮಾರ 9

ಮಾರ್ಕನು 10 / ಮಾರ 10

ಮಾರ್ಕನು 11 / ಮಾರ 11

ಮಾರ್ಕನು 12 / ಮಾರ 12

ಮಾರ್ಕನು 13 / ಮಾರ 13

ಮಾರ್ಕನು 14 / ಮಾರ 14

ಮಾರ್ಕನು 15 / ಮಾರ 15

ಮಾರ್ಕನು 16 / ಮಾರ 16