೧ |
ಸರ್ವೇಶ್ವರ ಸ್ವಾಮಿ ಮೋಶೆಗೆ: |
೨ |
“ಆರೋನನು ದೇವಸ್ಥಾನದ ದೀಪಗಳನ್ನು ಹಚ್ಚುವಾಗ ಆ ಏಳು ದೀಪಗಳು ದೀಪಸ್ತಂಭದ ಎದುರಿಗಿರುವ ಸ್ಥಳಕ್ಕೆ ಬೆಳಕು ಕೊಡುವಂತೆ ನೋಡಿಕೊಳ್ಳಬೇಕೆಂದು ಅವನಿಗೆ ಆಜ್ಞಾಪಿಸು” ಎಂದು ಹೇಳಿದರು. |
೩ |
ಅಂತೆಯೇ ಆ ದೀಪಗಳನ್ನು ಕ್ರಮವಾಗಿ ಇಟ್ಟನು. |
೪ |
ಆ ದೀಪಸ್ತಂಭದ ಬುಡಭಾಗವೂ ಅದರ ಪುಷ್ಪಾಲಂಕಾರಗಳೂ ಚಿನ್ನದ ನಕಾಸಿ ಕೆಲಸದಿಂದ ಮಾಡಲ್ಪಟ್ಟಿದ್ದವು. ಸರ್ವೇಶ್ವರ ತೋರಿಸಿದ್ದ ಮಾದರಿಯಂತೆ ಮೋಶೆ ಅದನ್ನು ಮಾಡಿಸಿದ್ದನು. |
೫ |
ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದ್ದೇನೆಂದರೆ: |
೬ |
“ನೀನು ಲೇವಿಯರನ್ನು ಇಸ್ರಯೇಲರಿಂದ ಪ್ರತ್ಯೇಕಿಸಿ ಶುದ್ಧೀಕರಿಸು. |
೭ |
ಅವರನ್ನು ಶುದ್ಧೀಕರಿಸುವ ವಿಧಾನ ಇದು: ಅವರ ಮೇಲೆ ಪಾಪ ಪರಿಹಾರಕ ಜಲವನ್ನು ಚಿಮುಕಿಸು. ಅವರು ಕ್ಷೌರ ಮಾಡಿಸಿಕೊಂಡು, ತಮ್ಮ ಬಟ್ಟೆಗಳನ್ನು ಒಗೆದುಕೊಂಡು ತಮ್ಮನ್ನು ಶುದ್ಧಮಾಡಿಕೊಳ್ಳಲಿ. |
೮ |
ಬಳಿಕ ಅವರು ದಹನಬಲಿಗಾಗಿ ಒಂದು ಹೋರಿಯನ್ನೂ ಅದರೊಡನೆ ಸಮರ್ಪಿಸಬೇಕಾದ ಧಾನ್ಯನೈವೇದ್ಯವನ್ನೂ, ಅಂದರೆ ಎಣ್ಣೆಬೆರೆಸಿದ ಗೋದಿಯ ಹಿಟ್ಟನ್ನೂ ಮತ್ತು ಪಾಪಪರಿಹಾರಕ ಬಲಿಗಾಗಿ ಮತ್ತೊಂದು ಹೋರಿಯನ್ನೂ ತೆಗೆದುಕೊಳ್ಳಲಿ. |
೯ |
ಆಗ ನೀನು ಅವರನ್ನು ದೇವದರ್ಶನದ ಗುಡಾರದ ಮುಂದಕ್ಕೆ ಕರೆದುಕೊಂಡು ಬಾ. ಇಸ್ರಯೇಲ್ ಜನರನ್ನು ಸಭೆಸೇರಿಸು. |
೧೦ |
ಲೇವಿಯರನ್ನು ಸರ್ವೇಶ್ವರನ ಸನ್ನಿಧಿಯಲ್ಲಿ ನಿಲ್ಲಿಸು. ಇಸ್ರಯೇಲರು ಅವರ ಮೇಲೆ ತಮ್ಮ ಕೈಗಳನ್ನು ಇಡಲಿ. |
೧೧ |
ಲೇವಿಯರು ಇಸ್ರಯೇಲರ ಪರವಾಗಿ ಸರ್ವೇಶ್ವರನ ಪರಿಚರ್ಯ ಮಾಡಲು ಯೋಗ್ಯರಾಗುವಂತೆ ಆರೋನನು ಅವರನ್ನು ಸರ್ವೇಶ್ವರನ ಸನ್ನಿಧಿಯಲ್ಲಿ ನೈವೇದ್ಯದಂತೆ ಸಮರ್ಪಿಸಲಿ. |
೧೨ |
ಲೇವಿಯರು ಆ ಹೋರಿಗಳ ತಲೆಯ ಮೇಲೆ ತಮ್ಮ ಕೈಗಳನ್ನಿಟ್ಟನಂತರ ನೀನು ಸರ್ವೇಶ್ವರನಿಗೆ ಪಾಪಪರಿಹಾರಕ ಬಲಿಗಾಗಿ ಒಂದು ಹೋರಿಯನ್ನು, ಹಾಗು ದಹನಬಲಿಗಾಗಿ ಮತ್ತೊಂದು ಹೋರಿಯನ್ನು ಸಮರ್ಪಿಸಿ ಅವರಿಗಾಗಿ ಪಾಪಪರಿಹಾರವನ್ನು ಮಾಡು. |
೧೩ |
“ನೀನು ಆರೋನನ ಮತ್ತು ಅವನ ಮಕ್ಕಳ ಮುಂದೆ ಲೇವಿಯರನ್ನು ನಿಲ್ಲಿಸಿ ಅವರನ್ನು ನೈವೇದ್ಯದಂತೆ ಸರ್ವೇಶ್ವರನಿಗೆ ಸಮರ್ಪಿಸು. |
೧೪ |
ಹೀಗೆ ಲೇವಿಯರನ್ನು ಇಸ್ರಯೇಲರಿಂದ ಪ್ರತ್ಯೇಕಿಸಿದಾಗ ಅವರು ನನ್ನ ಸೊತ್ತಾಗುವರು. |
೧೫ |
ನೀನು ಅವರನ್ನು ಶುದ್ಧೀಕರಿಸಿ ನೈವೇದ್ಯದಂತೆ ಸಮರ್ಪಿಸಿದ ನಂತರ ಅವರು ದೇವದರ್ಶನದ ಗುಡಾರದ ಪರಿಚರ್ಯೆಯನ್ನು ಮಾಡಲಿ. |
೧೬ |
ಇಸ್ರಯೇಲರಲ್ಲಿ ಇವರೇ ನನಗೆ ಸಂಪೂರ್ಣವಾಗಿ ಸಮರ್ಪಿತರು. ಚೊಚ್ಚಲು ಮಕ್ಕಳಿಗೆ ಬದಲಾಗಿ, ಅಂದರೆ ಇಸ್ರಯೇಲರ ಜೇಷ್ಠಪುತ್ರರಿಗೆ, ಬದಲಾಗಿ ನಾನು ಇವರನ್ನೇ ನನ್ನ ಸ್ವಂತಕ್ಕಾಗಿ ತೆಗೆದುಕೊಂಡಿದ್ದೇನೆ. |
೧೭ |
ಇಸ್ರಯೇಲರಲ್ಲಿ ಚೊಚ್ಚಲಾದ ಮನುಷ್ಯರೂ ಪಶುಪ್ರಾಣಿಗಳೆಲ್ಲವೂ ನನ್ನ ಸೊತ್ತೆಂಬುದೇನೋ ನಿಜ; ಈಜಿಪ್ಟ್ ದೇಶದಲ್ಲಿ ಚೊಚ್ಚಲಾದುದನ್ನೆಲ್ಲ ಸಂಹರಿಸಿದಾಗ ಇಸ್ರಯೇಲರಲ್ಲಿ ಚೊಚ್ಚಲಾದುದನ್ನು ನನ್ನ ಸ್ವಂತಕ್ಕಾಗಿ ಪ್ರತಿಷ್ಠಾಪಿಸಿಕೊಂಡೆ. |
೧೮ |
ಈಗ ಇಸ್ರಯೇಲರ ಚೊಚ್ಚಲು ಮಕ್ಕಳಿಗೆ ಬದಲಾಗಿ ಲೇವಿಯರನ್ನು ತೆಗೆದುಕೊಂಡಿದ್ದೇನೆ. |
೧೯ |
ಇಸ್ರಯೇಲರ ಪರವಾಗಿ ದೇವದರ್ಶನದ ಗುಡಾರದ ಪರಿಚರ್ಯವನ್ನು ನಡೆಸುವುದಕ್ಕೂ ಪಾಪಪರಿಹಾರವನ್ನು ಮಾಡುವುದಕ್ಕೂ ಲೇವಿಯರನ್ನು ಆರಿಸಿಕೊಂಡು ಆರೋನನ ಮತ್ತು ಅವನ ಮಕ್ಕಳ ವಶಕ್ಕೆ ಕೊಟ್ಟಿದ್ದೇನೆ. ಆದುದರಿಂದ ಇಸ್ರಯೇಲರು ದೇವಸ್ಥಾನದ ಹತ್ತಿರಕ್ಕೆ ಬಂದಾಗ ಅವರಿಗೆ ಯಾವ ಅಪಾಯವು ಸಂಭವಿಸುವುದಿಲ್ಲ.” |
೨೦ |
ಸರ್ವೇಶ್ವರ ಲೇವಿಯರ ವಿಷಯದಲ್ಲಿ ಆಜ್ಞಾಪಿಸಿದಂತೆಯೇ ಮೋಶೆ, ಆರೋನನು ಹಾಗು ಇಸ್ರಯೇಲ್ ಜನರೆಲ್ಲರು ಮಾಡಿದರು. |
೨೧ |
ಲೇವಿಯರು ತಮ್ಮನ್ನು ಶುದ್ಧಮಾಡಿಕೊಂಡು ಬಟ್ಟೆಗಳನ್ನು ಒಗೆದುಕೊಂಡರು. ಆರೋನನು ಅವರನ್ನು ನೈವೇದ್ಯದಂತೆ ಸರ್ವೇಶ್ವರನ ಸನ್ನಿಧಿಯಲ್ಲಿ ಸಮರ್ಪಿಸಿದನು. ಅವರನ್ನು ಶುದ್ಧೀಕರಿಸುವುದಕ್ಕಾಗಿ ಅವರಿಗೋಸ್ಕರ ಪಾಪಪರಿಹಾರವನ್ನು ಮಾಡಿದನು. |
೨೨ |
ಇದಾದ ಮೇಲೆ ಲೇವಿಯರು ತಮಗೆ ನೇಮಕವಾದ ಕೆಲಸವನ್ನು ದೇವದರ್ಶನದ ಗುಡಾರದಲ್ಲಿ ಆರೋನನ ಮತ್ತು ಅವನ ಮಕ್ಕಳ ಕೈಕೆಳಗೆ ನಡೆಸಲಾರಂಭಿಸಿದರು. ಅವರ ಬಗ್ಗೆ ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದಂತೆಯೇ ಅವರು ಮಾಡಿದರು. |
೨೩ |
ಇದಲ್ಲದೆ ಸರ್ವೇಶ್ವರ ಮೋಶೆಗೆ ಹೀಗೆಂದು ಆಜ್ಞಾಪಿಸಿದರು: |
೨೪ |
“ಲೇವಿಯರು ಅನುಸರಿಸಬೇಕಾದ ಪದ್ಧತಿ ಇದು - ಇಪ್ಪತ್ತು ವರ್ಷ ಮತ್ತು ಮೇಲ್ಪಟ್ಟ ವಯಸ್ಸಿನವರು ದೇವದರ್ಶನದ ಗುಡಾರದಲ್ಲಿ ಸೇವೆಮಾಡಲು ಸೇರಬೇಕು. |
೨೫ |
ಅವರು ಐವತ್ತು ವರ್ಷದವರಾದ ನಂತರ ಆ ಸೇವಾ ಸಂಸ್ಥೆಯನ್ನು ಬಿಟ್ಟು ದೇವಸ್ಥಾನದ ಪರಿಚರ್ಯದಿಂದ ನಿವೃತ್ತರಾಗಬೇಕು. |
೨೬ |
ಅಂಥವರು ತಮ್ಮ ಸ್ವಕುಲದವರ ಜೊತೆ ದೇವದರ್ಶನದ ಗುಡಾರವನ್ನು ಕಾಯುವ ಸೇವೆ ಮಾಡಬಹುದು. ಅದೊಂದನ್ನು ಬಿಟ್ಟು ಅವರಿಂದ ಬೇರೆ ಪರಿಚರ್ಯೆಯನ್ನು ಮಾಡಿಸಕೂಡದು. ಲೇವಿಯರು ಮಾಡಬೇಕಾದ ಕರ್ತವ್ಯಗಳನ್ನು ನೀನು ಹೀಗೆ ವಿಧಿಸಬೇಕು.
|
Kannada Bible (KNCL) 2016 |
No Data |