೧ |
ಸರ್ವೇಶ್ವರ ಸ್ವಾಮಿ, ಮೋಶೆ - ಆರೋನರಿಗೆ ಹೀಗೆಂದು ಆಜ್ಞಾಪಿಸಿದರು: |
೨ |
“ನೀವು ಲೇವಿಯರಲ್ಲಿಯ ಕೆಹಾತ್ಯರನ್ನು ಎಣಿಕೆಮಾಡಬೇಕು, ಅವರಲ್ಲಿ ಮೂವತ್ತರಿಂದ ಐವತ್ತು ವರ್ಷದವರೆಗೆ ವಯಸ್ಸಾದವರು ಹಾಗೂ ದೇವದರ್ಶನದ ಗುಡಾರದ ಸೇವೆಗೆ ಯೋಗ್ಯರಾದವರನ್ನು ಗೋತ್ರಕುಟುಂಬಗಳ ಪ್ರಕಾರ ಲೆಕ್ಕಿಸಬೇಕು. |
೩ |
*** |
೪ |
“ಕೆಹಾತ್ಯರು ಕೈಗೊಳ್ಳಬೇಕಾದ ಕರ್ತವ್ಯಗಳು ಇವು: ದೇವದರ್ಶನದ ಗುಡಾರದಲ್ಲಿ ಪರಮ ಪವಿತ್ರವಾದ ವಸ್ತುಗಳನ್ನು ಅವರು ನೋಡಿಕೊಳ್ಳಬೇಕು. |
೫ |
ದಂಡು ಹೊರಡುವಾಗ ಆರೋನನು ಮತ್ತು ಅವನ ಮಕ್ಕಳು ಒಳಗೆ ಬಂದು ಗರ್ಭಗುಡಿಯನ್ನು ಮರೆಮಾಡುವ ತೆರೆಯನ್ನು ಇಳಿಸಿ ಅದರಿಂದ ಆಜ್ಞಾಶಾಸನಗಳ ಮಂಜೂಷವನ್ನು ಮುಚ್ಚಬೇಕು. |
೬ |
ಅದರ ಮೇಲೆ ಹಸನಾದ ತೊಗಲನ್ನು ಮತ್ತು ನೀಲಿ ಬಟ್ಟೆಯನ್ನು ಹೊದಿಸಬೇಕು. (ಮಂಜೂಷದ ಬಳೆಗಳಿಗೆ) ಹೊರುವ ಕೋಲುಗಳನ್ನು ಸಿಕ್ಕಿಸಬೇಕು. |
೭ |
“ಸನ್ನಿಧಿ ಕಾಣಿಕೆಯ ಮೇಜಿನ ಮೇಲೆ ನೀಲಿಬಟ್ಟೆಯನ್ನು ಹಾಸಿ ಅದರ ಮೇಲೆ ಹರಿವಾಣಗಳನ್ನು, ಧೂಪಾರತಿಗಳನ್ನು, ಹೂಜಿಗಳನ್ನು ಹಾಗೂ ದಾನ್ಯದ್ರವ್ಯಾರ್ಪಣೆಯ ಬಟ್ಟಲುಗಳನ್ನು ಅವರು ಇಡಬೇಕು. ನಿತ್ಯಾರ್ಪಣೆಯ ರೊಟ್ಟಿಗಳನ್ನು ಅದರ ಮೇಲೆ ಇಡಬೇಕು. |
೮ |
ಅವೆಲ್ಲವುಗಳ ಮೇಲೆ ರಕ್ತವರ್ಣದ ಬಟ್ಟೆಯನ್ನು ಹಾಸಿ, ಹಸನಾದ ತೊಗಲನ್ನು ಹೊದಿಸಿ, ಹೊರುವ ಕೋಲುಗಳನ್ನು ಸಿಕ್ಕಿಸಬೇಕು. |
೯ |
“ದೀಪಸ್ತಂಭವನ್ನು, ದೀಪದ ಕುಡಿ ತೆಗೆಯುವ ಬಟ್ಟಲುಗಳನ್ನು ಹಾಗೂ ಎಣ್ಣೆಯ ಪಾತ್ರೆಗಳನ್ನು ನೀಲಿಬಟ್ಟೆಯಿಂದ ಮುಚ್ಚಿಡಬೇಕು. |
೧೦ |
ಅದಕ್ಕೂ ಅದರ ಎಲ್ಲಾ ಉಪಕರಣಗಳಿಗೂ ಹಸನಾದ ತೊಗಲನ್ನು ಹೊದಿಸಿ ಅವುಗಳನ್ನು ಅಡ್ಡ ದಂಡಕ್ಕೆ ಕಟ್ಟಬೇಕು. |
೧೧ |
“ತರುವಾಯ ಅವರು ಬಂಗಾರದ ವೇದಿಕೆಯ ಮೇಲೆ ನೀಲಿ ಬಟ್ಟೆಯನ್ನು ಹಾಸಿ, ಹಸನಾದ ತೊಗಲನ್ನು ಹೊದಿಸಿ, ಹೊರುವ ಕೋಲುಗಳನ್ನು ಹಾಕಬೇಕು. |
೧೨ |
ದೇವಸ್ಥಾನದ ಸೇವೋಪಕರಣಗಳನ್ನೆಲ್ಲಾ ನೀಲಿ ಬಟ್ಟೆಯಲ್ಲಿಟ್ಟು, ಹಸನಾದ ತೊಗಲನ್ನು ಹೊದಿಸಿ ಅಡ್ಡ ದಂಡಕ್ಕೆ ಕಟ್ಟಬೇಕು. |
೧೩ |
ಬಲಿಪೀಠದ ಬೂದಿಯನ್ನು ತೆಗೆದುಬಿಟ್ಟು ಆ ಪೀಠದ ಮೇಲೆ ಊದಾ ವರ್ಣದ ಬಟ್ಟೆಯನ್ನು ಹಾಸಿ |
೧೪ |
ಅದಕ್ಕೆ ಸಂಬಂಧಪಟ್ಟ ಅಗ್ಗಿಷ್ಠಿಕೆಗಳು, ಮುಳ್ಳುಗಳು, ಸಲಿಕೆಗಳು ಹಾಗೂ ಬೋಗುಣಿಗಳು ಮುಂತಾದ ಉಪಕರಣಗಳನ್ನೆಲ್ಲಾ ಮೇಲೆ ಇಟ್ಟು, ಹಸನಾದ ತೊಗಲನ್ನು ಹೊದಿಸಿ ಹೊರುವ ಕೋಲುಗಳನ್ನು ಹಾಕಬೇಕು. |
೧೫ |
ಆರೋನನು ಮತ್ತು ಅವನ ಮಕ್ಕಳು ದಂಡು ಹೊರಡುವ ಕಾಲದಲ್ಲಿ ದೇವಸ್ಥಾನದ ಎಲ್ಲ ಸಾಮಾನುಗಳನ್ನು ಮುಚ್ಚಿ ಸಿದ್ಧಮಾಡಿದ ನಂತರ ಕೆಹಾತ್ಯರು ಅವುಗಳನ್ನು ಹೊರುವುದಕ್ಕೆ ಬರಬೇಕು. ಇವರು ದೇವಸ್ಥಾನದ ಸಾಮಾನುಗಳನ್ನು ಮುಟ್ಟಬಾರದು. ಮುಟ್ಟಿದರೆ ಬದುಕಲಾರರು. ಕೆಹಾತ್ಯರು ದೇವದರ್ಶನದ ಗುಡಾರದ ಸಲಕರಣೆಗಳಲ್ಲಿ ಹೊರಬೇಕಾದವುಗಳು ಇವೇ. |
೧೬ |
ಮಹಾಯಾಜಕ ಆರೋನನ ಮಗ ಎಲ್ಲಾಜಾರನು ದೀಪದ ಎಣ್ಣೆಯನ್ನು, ಪರಿಮಳ ಧೂಪವನ್ನು, ಅನುದಿನ ನೈವೇದ್ಯ ಮಾಡುವ ಧಾನ್ಯದ್ರವ್ಯಗಳನ್ನು ಹಾಗೂ ಅಭಿಷೇಕ ತೈಲವನ್ನು ತನ್ನ ವಶದಲ್ಲೇ ಇಟ್ಟುಕೊಳ್ಳಬೇಕು. ದೇವದರ್ಶನದ ಗುಡಾರದ ಎಲ್ಲ ಭಾಗಗಳು, ಅದರಲ್ಲಿರುವ ಸಮಸ್ತ ವಸ್ತುಗಳು ಪಾತ್ರೆಪರಿಕರಗಳು ಹಾಗೂ ಅವುಗಳಲ್ಲಿರುವುದೆಲ್ಲವೂ ಅವನ ಮೇಲ್ವಿಚಾರಣೆಯಲ್ಲಿರಬೇಕು. |
೧೭ |
ಸರ್ವೇಶ್ವರ ಮೋಶೆ - ಆರೋನರಿಗೆ ಹೀಗೆಂದು ಆಜ್ಞಾಪಿಸಿದರು: |
೧೮ |
“ಕೆಹಾತ್ಯರ ಗೋತ್ರಕುಟುಂಬಗಳವರು ಲೇವಿಯರೊಳಗೆ ಉಳಿಯದೆ ನಾಶವಾಗುವುದಕ್ಕೆ ಆಸ್ಪದಕೊಡಬೇಡಿ. |
೧೯ |
ಪರಮ ಪವಿತ್ರವಾದ ವಸ್ತುಗಳ ಹತ್ತಿರಕ್ಕೆ ಬರುವಾಗ ಅವರು ಸಾಯದಂತೆ ಎಚ್ಚರಿಕೆ ವಹಿಸಿರಿ. ಆರೋನನು ಮತ್ತು ಅವನ ಮಕ್ಕಳು ಒಳಗೆ ಬಂದು ಅವರವರ ಕೆಲಸಗಳನ್ನು ಹೊರಬೇಕಾದ ಹೊರೆಗಳನ್ನು ಗೊತ್ತುಮಾಡಬೇಕು. |
೨೦ |
ಕೆಹಾತ್ಯರೇ ಒಳಗೆ ಬಂದು, ಒಂದು ಕ್ಷಣ ಮಾತ್ರವೂ ಆ ಪವಿತ್ರ ವಸ್ತುಗಳನ್ನು ನೋಡದಿರಲಿ; ನೋಡಿ ಸಾಯದಿರಲಿ. |
೨೧ |
ಸರ್ವೇಶ್ವರ ಮೋಶೆಗೆ ಕೊಟ್ಟ ಆಜ್ಞೆ ಇದು: |
೨೨ |
“ನೀನು ಗೇರ್ಷೋನ್ಯರನ್ನು ಲೆಕ್ಕಿಸಬೇಕು. ಅವರಲ್ಲಿ ಮೂವತ್ತರಿಂದ ಐವತ್ತು ವರ್ಷದವರೆಗೆ ವಯಸ್ಸಾದವರು ಹಾಗೂ ದೇವದರ್ಶನದ ಗುಡಾರದ ಸೇವೆಗೆ ಯೋಗ್ಯರಾದವರನ್ನು ಗೋತ್ರಕುಟುಂಬದ ಪ್ರಕಾರ ಎಣಿಸಬೇಕು. |
೨೩ |
*** |
೨೪ |
“ಪರಿಚರ್ಯ ಮಾಡುವುದರಲ್ಲೂ ಹೊರೆಗಳನ್ನು ಹೊರುವುದರಲ್ಲೂ ಗೇರ್ಷೋನ್ಯರು ಮಾಡಬೇಕಾದ ಕರ್ತವ್ಯ ಇವು: |
೨೫ |
ಅವರು ದೇವದರ್ಶನದ ಗುಡಾರದ ಬಟ್ಟೆಗಳನ್ನು ಹೊರಬೇಕು - ಅಂದರೆ; ಗುಡಾರ ಅದರ ಹೊದಿಕೆ ಅದರ ಮೇಲಿನ ಹಸನಾದ ತೊಗಲಿನ ಹೊದಿಕೆ, ದೇವದರ್ಶನದ ಗುಡಾರದ ಬಾಗಿಲಿನ ಪರದೆ, |
೨೬ |
ಗುಡಾರದ ಮತ್ತು ಬಲಿಪೀಠದ ಸುತ್ತಣ ಅಂಗಳದ ತೆರೆಗಳು, ಅದರ ಬಾಗಿಲಿನ ಪರದೆ, ಹಗ್ಗಗಳು ಮತ್ತು ಅವುಗಳ ಎಲ್ಲ ಉಪಕರಣಗಳು, ಇವುಗಳನ್ನು ಹೊರಬೇಕು; ಮತ್ತು ಇವುಗಳಿಗೆ ಸಂಬಂಧಪಟ್ಟ ಎಲ್ಲ ಕೆಲಸಗಳನ್ನು ಅವರೇ ಮಾಡಬೇಕು. |
೨೭ |
ಗೇರ್ಷೋನ್ಯರು ಹೊರೆ ಹೊರುವುದರಲ್ಲೂ ಬೇರೆ ಪರಿಚರ್ಯ ಮಾಡುವುದರಲ್ಲೂ ಆರೋನನ ಮತ್ತು ಅವನ ಮಕ್ಕಳ ಅಪ್ಪಣೆಯ ಪ್ರಕಾರವೇ ನಡೆಯಬೇಕು. ನೀವೇ ಹೊರೆಗಳನ್ನು ಗೊತ್ತುಮಾಡಿ ಅವರವರ ವಶಕ್ಕೆ ಕೊಡಬೇಕು. |
೨೮ |
ದೇವದರ್ಶನದ ಗುಡಾರದ ವಿಷಯದಲ್ಲಿ ಗೇರ್ಷೋನ್ಯರು ಮಾಡಬೇಕಾದ ಕರ್ತವ್ಯ ಇದೇ. ಮಹಾಯಾಜಕ ಆರೋನನ ಮಗ ಈತಾಮಾರನು ಅವರ ಮೇಲ್ವಿಚಾರಣೆಯನ್ನು ಮಾಡಬೇಕು |
೨೯ |
“ಮೆರಾರೀಯರಲ್ಲೂ ಯಾರಾರು ಮೂವತ್ತರಿಂದ ಐವತ್ತು ವರ್ಷ ವಯಸ್ಸಿನವರಿದ್ದಾರೋ ಹಾಗೂ |
೩೦ |
ದೇವದರ್ಶನದ ಗುಡಾರದ ಸೇವೆಮಾಡಲು ಯೋಗ್ಯರಾಗಿದ್ದಾರೋ ಅವರನ್ನು ಗೋತ್ರಕುಟುಂಬಗಳ ಪ್ರಕಾರ ಎಣಿಕೆಮಾಡು. |
೩೧ |
ದೇವದರ್ಶನದ ಗುಡಾರದ ವಿಷಯದಲ್ಲಿ ಅವರು ಮಾಡಬೇಕಾದ ಕರ್ತವ್ಯಗಳು ಯಾವುವೆಂದರೆ - |
೩೨ |
ಅವರು ಗುಡಾರದ ಚೌಕಟ್ಟುಗಳನ್ನು, ಅಗುಳಿಗಳನ್ನು, ಕಂಬಗಳನ್ನು, ಗದ್ದಿಗೆ ಕಲ್ಲುಗಳನ್ನು, ಗೂಟಗಳನ್ನು, ಹಗ್ಗಗಳನ್ನು ಮತ್ತು ಅವುಗಳ ಎಲ್ಲ ಉಪಕರಣಗಳನ್ನು ಹೊರಬೇಕು. ಅವರವರ ಹೊರೆಗಳನ್ನೆಲ್ಲ ನೀವೇ ಹೆಸರಿಸಿ ಗೊತ್ತುಮಾಡಬೇಕು. |
೩೩ |
ದೇವದರ್ಶನದ ಗುಡಾರದ ವಿಷಯದಲ್ಲಿ ಮೆರಾರೀಯರು ಮಾಡಬೇಕಾದ ಕೆಲಸ ಇದೇ. ಅವರು ಮಹಾಯಾಜಕ ಆರೋನನ ಮಗ ಈತಮಾರನ ಕೈಕೆಳಗೆ ಇದನ್ನೆಲ್ಲಾ ಮಾಡಬೇಕು.” |
೩೪ |
ಮೋಶೆ ಹಾಗು ಆರೋನರು ಮತ್ತು ಸಮೂಹದ ಮುಖ್ಯಸ್ಥರು ಕೆಹಾತ್ಯರಲ್ಲಿ ಯಾರಾರು ಮೂವತ್ತರಿಂದ ಐವತ್ತು ವರ್ಷದವರೆಗಿನ ವಯಸ್ಸುಳ್ಳವರಾಗಿದ್ದಾರೋ ಹಾಗೂ ದೇವದರ್ಶನದ ಗುಡಾರದ ಸೇವೆಗೆ ಯೋಗ್ಯರಾಗಿದ್ದಾರೋ ಅವರನ್ನು ಗೋತ್ರಕುಟುಂಬಗಳ ಪ್ರಕಾರ ಎಣಿಸಿದರು. |
೩೫ |
*** |
೩೬ |
ಅವರಲ್ಲಿ ಕುಟುಂಬಗಳ ಪ್ರಕಾರ ಎಣಿಕೆಯಾದವರ ಸಂಖ್ಯೆ 2750: |
೩೭ |
ಸರ್ವೇಶ್ವರ ಮೋಶೆಗೆ ಕೊಟ್ಟ ಆಜ್ಞೆಯಂತೆ ಕೆಹಾತ್ಯರನ್ನು ಮೋಶೆ - ಆರೋನರು ಎಣಿಕೆಮಾಡಿದಾಗ ದೇವದರ್ಶನದ ಗುಡಾರದ ಸೇವೆಗೆ ಯೋಗ್ಯರಾಗಿದ್ದವರು ಇಷ್ಟೇ ಜನ. |
೩೮ |
ಗೇರ್ಷೋನ್ಯರಲ್ಲಿ ಮೂವತ್ತರಿಂದ ಐವತ್ತು ವರ್ಷದವರೆಗೆ ವಯಸ್ಸಾಗಿದ್ದವರ ಹಾಗೂ ದೇವದರ್ಶನದ ಗುಡಾರದ ಸೇವೆಗೆ ಸೇರಿದವರೆಂದು |
೩೯ |
*** |
೪೦ |
ಗೋತ್ರಕುಟುಂಬದ ಪ್ರಕಾರ ಎಣಿಕೆಯಾದವರ ಸಂಖ್ಯೆ - 2630: |
೪೧ |
ಸರ್ವೇಶ್ವರನ ಅಪ್ಪಣೆಯ ಮೇರೆಗೆ ಮೋಶೆ ಹಾಗು ಆರೋನರಿಂದ ಎಣಿಕೆಯಾಗಿ ದೇವದರ್ಶನದ ಗುಡಾರದ ಸೇವೆಗೆ ಯೋಗ್ಯರಾಗಿದ್ದವರು ಇಷ್ಟೇ ಮಂದಿ. |
೪೨ |
ಮೆರಾರೀಯರಲ್ಲಿ ಮೂವತ್ತರಿಂದ ಐವತ್ತರವರೆಗೆ ವಯಸ್ಸಾದವರ ಹಾಗೂ ದೇವದರ್ಶನದ ಗುಡಾರದ ಸೇವೆಗೆ ಸೇರಿದವರೆಂದು |
೪೩ |
*** |
೪೪ |
ಗೋತ್ರಕುಟುಂಬಗಳ ಪ್ರಕಾರ ಎಣಿಕೆಯಾದವರ ಸಂಖ್ಯೆ -3200: |
೪೫ |
ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದಂತೆ ಮೆರಾರೀಯರನ್ನು ಮೋಶೆ - ಆರೋನರು ಎಣಿಕೆ ಮಾಡಿದಾಗ ಅವರ ಸಂಖ್ಯೆ ಇಷ್ಟೇ ಇತ್ತು. |
೪೬ |
ಮೋಶೆ ಹಾಗು ಆರೋನರು ಮತ್ತು ಇಸ್ರಯೇಲರ ಮುಖ್ಯಸ್ಥರು ಲೇವಿಯರಲ್ಲಿ ಮೂವತ್ತರಿಂದ ಐವತ್ತರವರೆಗೆ ವಯಸ್ಸಾಗಿದ್ದವರನ್ನು ಮತ್ತು ದೇವದರ್ಶನದ ಗುಡಾರದ ಸೇವೆಯನ್ನು ಕೈಗೊಳ್ಳಲು |
೪೭ |
*** |
೪೮ |
ಹಾಗೂ ಅದರ ಹೊರೆಗಳನ್ನು ಹೊರಲು ಶಕ್ತರಾಗಿದ್ದವರನ್ನು ಎಣಿಕೆಮಾಡಿದಾಗ ದೊರೆತ ಸಂಖ್ಯೆ - 8580: |
೪೯ |
ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದಂತೆಯೇ ಪ್ರತಿಯೊಬ್ಬನಿಗೆ ಅವನವನ ಕೆಲಸ ಹಾಗೂ ಹೊಣೆಯನ್ನು ಗೊತ್ತುಮಾಡಲಾಯಿತು. ಹೀಗೆ ಸರ್ವೇಶ್ವರನ ಆಜ್ಞೆಯ ಮೇರೆಗೆ ಜನಗಣತಿ ನಡೆಯಿತು.
|
Kannada Bible (KNCL) 2016 |
No Data |