A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ಸಂಖ್ಯಾಕಾಂಡ ೩೨ರೂಬೇನ್ ಕುಲದವರಿಗೂ ಗಾದ್ ಕುಲದವರಿಗೂ ಬಹಳ ದನಕುರಿಗಳಾಗಿದ್ದವು. ಯಗ್ಜೇರ್ ಹಾಗು ಗಿಲ್ಯಾದ್ ಪ್ರದೇಶಗಳನ್ನು ದನಕುರಿಗಳ ಮೇವಿಗೆ ತಕ್ಕ ಸ್ಥಳ ಎಂದು ಅವರು ನೋಡಿ ತಿಳಿದುಕೊಂಡರು.
ಮೋಶೆ ಮತ್ತು ಮಹಾಯಾಜಕ ಎಲ್ಲಾಜಾರ್ ಇವರ ಬಳಿಗೂ ಸಮಾಜದ ಮುಖಂಡರ ಬಳಿಗೂ ಅವರು ಬಂದು,
ಸರ್ವೇಶ್ವರ ಸ್ವಾಮಿ ಇಸ್ರಯೇಲರಿಗೆ ಅಧೀನಪಡಿಸಿರುವ ಈ ಪ್ರದೇಶ, ಅಂದರೆ ಅಟಾರೋತ್, ದೀಬೋನ್, ಯಗ್ಜೇರ್, ನಿಮ್ರಾ, ಹೆಷ್ಬೋನ್, ಎಲೆಯಾಲೆ, ಸೆಬಾಮ್, ನೆಬೋ, ಬಿಯೋನ್ ಎಂಬ ಪಟ್ಟಣಗಳನ್ನು ಒಳಗೊಂಡ ಈ ಪ್ರದೇಶ ದನಕುರಿಗಳ ಮೇವಿಗೆ ಹುಲುಸಾದ ಪ್ರದೇಶ.
ನಿಮ್ಮ ದಾಸರಾದ ನಮಗೆ ಬಹಳ ದನಕುರಿಗಳಿವೆ.
ಆದಕಾರಣ ದಾಸರಾದ ನಮ್ಮ ಮೇಲೆ ದಯವಿಟ್ಟು ನಮ್ಮನ್ನು ಜೋರ್ಡನ್ ನದಿಯ ಆಚೆಗೆ ಬರಮಾಡಬೇಡಿ. ಈ ಪ್ರದೇಶವನ್ನೇ ಸೊತ್ತಾಗಿ ಕೊಡಿ,” ಎಂದು ಕೇಳಿಕೊಂಡರು.
ಅವರಿಗೆ ಮೋಶೆ, “ನಿಮ್ಮ ಬಂಧುಬಳಗದವರು ಯುದ್ಧಕ್ಕೆ ಹೊರಡುವಾಗ ನೀವು ಇಲ್ಲೇ ಕೂತಿರಬೇಕೆನ್ನುತ್ತೀರೋ?
ಸರ್ವೇಶ್ವರ ಇಸ್ರಯೇಲರಿಗೆ ಕೊಟ್ಟ ನಾಡಿಗೆ ಅವರು ಹೋಗದಂತೆ ನೀವೇಕೆ ಅಧೈರ್ಯವನ್ನು ಹುಟ್ಟಿಸುತ್ತೀರಿ?
ಆ ನಾಡನ್ನು ನೋಡಿಕೊಂಡು ಬರುವುದಕ್ಕೆ ನಾನು ಕಾದೇಶ್ ಬರ್ನೇಯದಿಂದ ನಿಮ್ಮ ಪೂರ್ವಜರನ್ನು ಕಳುಹಿಸಿದಾಗ ಅವರೂ ಹಾಗೆಯೇ ಮಾಡಿದರು.
ಅವರು ಎಷ್ಕೋಲ್ ಕಣಿವೆಗೆ ಬಂದು ಆ ನಾಡನ್ನು ನೋಡಿ ಇಸ್ರಯೇಲರಿಗೆ ಅಧೈರ್ಯವನ್ನು ಹುಟ್ಟಿಸಿದರು. ಆದ್ದರಿಂದ‍ ಇಸ್ರಯೇಲರು ತಮಗೆ ಸರ್ವೇಶ್ವರ ವಾಗ್ದಾನಮಾಡಿದ ನಾಡಿಗೆ ಹೋಗಲೇ ಇಲ್ಲ.
೧೦
ಆಗ ಸರ್ವೇಶ್ವರ ಕೋಪಗೊಂಡರು.
೧೧
‘ಈಜಿಪ್ಟ್ ದೇಶದಿಂದ ಹೊರಬಂದ ಈ ಜನರಲ್ಲಿ ಕೆನಿಜ್ಜೀಯನಾದ ಯೆಫುನ್ನೆಯ ಮಗ ಕಾಲೇಬನು ಮತ್ತು ನೂನನ ಮಗ ಯೆಹೋಶುವನು ಇವರಿಬ್ಬರೇ ಹೊರತಾಗಿ ಯಾರೂ ನನ್ನನ್ನು ಪೂರ್ಣಮನಸ್ಸಿನಿಂದ ಅನುಸರಿಸದೆ ಹೋದರು.
೧೨
ಆದ್ದರಿಂದ ಈ ಜನರಲ್ಲಿ ಇಪ್ಪತ್ತು ವರ್ಷ ಮತ್ತು ಅದಕ್ಕೆ ಮೇಲ್ಪಟ್ಟ ವಯಸ್ಸಿನವರಲ್ಲಿ ಅವರಿಬ್ಬರೇ ಹೊರತಾಗಿ ಬೇರಾರೂ ಅಬ್ರಹಾಮ್, ಇಸಾಕ್ ಮತ್ತು ಯಕೋಬರಿಗೆ ನಾನು ಪ್ರಮಾಣಪೂರ್ವಕವಾಗಿ ಕೊಟ್ಟ ನಾಡನ್ನು ನೋಡುವುದೇ ಇಲ್ಲ’ ಎಂದು ಖಂಡಿತವಾಗಿ ಹೇಳಿದರು.
೧೩
ಸರ್ವೇಶ್ವರ ಇಸ್ರಯೇಲರ ಮೇಲೆ ಕೋಪಗೊಂಡು ತಮ್ಮ ದೃಷ್ಟಿಯಲ್ಲಿ ಕೆಟ್ಟ ನಡತೆಯುಳ್ಳವರಾಗಿದ್ದ ಆ ಪೀಳಿಗೆಯವರೆಲ್ಲರು ನಾಶವಾಗುವ ತನಕ, ಅಂದರೆ ನಾಲ್ವತ್ತುವರ್ಷ ಕಾಲ, ಇಸ್ರಯೇಲರನ್ನು ಮರುಭೂಮಿಯಲ್ಲೆ ಅಲೆಯುವಂತೆ ಮಾಡಿದರು.
೧೪
ಈಗ ಈ ದುಷ್ಟ ಪೀಳಿಗೆಗೆ ಸೇರಿದವರಾದ ನೀವು ನಿಮ್ಮ ಪೂರ್ವಜರಿಗೆ ಬದಲಾಗಿ ಬಂದು ಇಸ್ರಯೇಲರ ಮೇಲಿದ್ದ ಸರ್ವೇಶ್ವರನ ಕೋಪಾಗ್ನಿಯನ್ನು ಮತ್ತಷ್ಟು ಹೆಚ್ಚಿಸುತ್ತಿದ್ದೀರಿ.
೧೫
ನೀವು ವಿಧೇಯರಾಗಿ ನಡೆಯದೆ ಹೋದರೆ ಸರ್ವೇಶ್ವರ ಈ ಜನರನ್ನು ಇನ್ನೂ ಮರುಭೂಮಿಯಲ್ಲೇ ಇರಿಸುವರು; ಈ ಸಮಸ್ತ ಜನಾಂಗದ ನಾಶಕ್ಕೆ ನೀವೇ ಕಾರಣರು ಆಗುವಿರಿ,” ಎಂದನು.
೧೬
ಆಗ ಅವರು ಮೋಶೆಯ ಬಳಿಗೆ ಬಂದು, “ಇಲ್ಲಿ ನಮ್ಮ ದನಕುರಿಗಳಿಗೆ ದೊಡ್ಡಿಗಳನ್ನೂ ನಮ್ಮ ಕುಟುಂಬಗಳಿಗೆ ಊರುಗಳನ್ನೂ ಕಟ್ಟಿಕೊಳ್ಳುತ್ತೇವೆ.
೧೭
ಆದರೆ ನಾವು ಇಸ್ರಯೇಲರನ್ನು ಅವರವರ ಸ್ಥಳಗಳಿಗೆ ಸೇರಿಸುವ ತನಕ ಯುದ್ಧಕ್ಕೆ ಸನ್ನದ್ಧರಾಗಿ ಅವರ ಮುಂದೆಯೇ ನಡೆಯುತ್ತೇವೆ. ಅಷ್ಟರಲ್ಲಿ ನಮ್ಮ ಕುಟುಂಬಗಳವರು ಕೋಟೆ ಕಟ್ಟಿದ ಊರುಗಳಲ್ಲಿ ವಾಸಿಸಲಿ. ಏಕೆಂದರೆ ಈ ನಾಡಿನ ನಿವಾಸಿಗಳ ಭಯವಿದೆ.
೧೮
ಇಸ್ರಯೇಲರು ಎಲ್ಲರು ತಮ್ಮ ತಮ್ಮ ಸೊತ್ತುಗಳನ್ನು ಸ್ವತಂತ್ರಿಸಿಕೊಳ್ಳುವ ಪರ್ಯಂತರ ನಾವು ನಮ್ಮ ಮನೆಗಳಿಗೆ ಹಿಂದಿರುಗುವುದಿಲ್ಲ.
೧೯
ನಮಗೆ ಜೋರ್ಡನ್ ನದಿಯ ಈಚೆ ಪೂರ್ವ ದಿಕ್ಕಿನಲ್ಲಿ ಸೊತ್ತು ದೊರಕಿದ್ದುದರಿಂದ ನಾವು ನದಿಯ ಆಚೆ ಎಲ್ಲಿಯೂ ಅವರೊಂದಿಗೆ ಸೊತ್ತನ್ನು ಅಪೇಕ್ಷಿಸುವುದಿಲ್ಲ,” ಎಂದರು.
೨೦
ಅದಕ್ಕೆ ಮೋಶೆ, “ನೀವು ಈ ಮಾತಿನಂತೆ ನಡೆಯುವುದಾದರೆ ನಿಮ್ಮಲ್ಲಿರುವ ಯೋಧರೆಲ್ಲರು ಯುದ್ಧಸನ್ನದ್ಧರಾಗಲಿ.
೨೧
ಜೋರ್ಡನ್ ನದಿಯ ಆಚೆಗೆ ಹೋಗಿ ಸರ್ವೇಶ್ವರ ತಮ್ಮ ವೈರಿಗಳನ್ನು ಹೊರಡಿಸಿಬಿಟ್ಟು ಆ ನಾಡನ್ನು ಸ್ವಾಧೀನಮಾಡಿಕೊಳ್ಳುವ ತನಕ ಅವರ ಮುಂದೆ ಯುದ್ಧಮಾಡಲಿ.
೨೨
ತರುವಾಯ ನೀವು ಹಿಂದಿರುಗಿ ಬರಬಹುದು. ಆಗ ಸರ್ವೇಶ್ವರನ ಮುಂದೆ, ಇಸ್ರಯೇಲರ ಮುಂದೆ ನಿರ್ದೋಷಿಗಳಾಗುವಿರಿ, ಮಾತ್ರವಲ್ಲ ಈ ಪ್ರದೇಶ ಸರ್ವೇಶ್ವರನ ಸನ್ನಿಧಿಯಲ್ಲೇ ನಿಮಗೆ ಸೇರಿದ ಸೊತ್ತಾಗುವುದು.
೨೩
ನೀವು ಹಾಗೇನಾದರೂ ಮಾಡದೆ ಹೋದರೆ ಸರ್ವೇಶ್ವರನಿಗೆ ವಿರುದ್ಧ ಪಾಪಮಾಡಿದವರಾಗುವಿರಿ. ನಿಮ್ಮನ್ನು ದಂಡಿಸುವ ತನಕ ನಿಮ್ಮ ಪಾಪ ನಿಮ್ಮ ಬೆನ್ನತ್ತಿಬರುವುದೆಂದು ತಿಳಿದಿರಿ.
೨೪
ನಿಮ್ಮ ಕುಟುಂಬಗಳಿಗಾಗಿ ಊರುಗಳನ್ನೂ ನಿಮ್ಮ ದನಕುರಿಗಳಿಗಾಗಿ ದೊಡ್ಡಿಗಳನ್ನೂ ಕಟ್ಟಿಕೊಂಡು ನಿಮ್ಮ ಮಾತಿನಂತೆ ನಡೆದುಕೊಳ್ಳಿ,” ಎಂದನು.
೨೫
ಅದಕ್ಕೆ ಗಾದ್ಯರು ಹಾಗು ರೂಬೇನ್ಯರು, “ಒಡೆಯಾ, ನಿಮ್ಮ ಅಪ್ಪಣೆಯಂತೆಯೇ ದಾಸರಾದ ನಾವು ಮಾಡುತ್ತೇವೆ.
೨೬
ನಮ್ಮ ಮಡದಿ ಮಕ್ಕಳೂ ದನಕುರಿಗಳೂ ಇಲ್ಲೇ ಗಿಲ್ಯಾದ್ ನಾಡಿನ ಊರುಗಳಲ್ಲಿರಲಿ.
೨೭
ನಿಮ್ಮ ದಾಸರಾದ ನಮ್ಮಲ್ಲಿ ಯುದ್ಧಸನ್ನದ್ಧರೆಲ್ಲರು ತಮ್ಮ ಅಪ್ಪಣೆಯ ಮೇರೆಗೆ ಸರ್ವೇಶ್ವರನ ಸಮ್ಮುಖದಲ್ಲೇ ಮುನ್ನಡೆದು, ನದಿಯನ್ನು ದಾಟಿ ಯುದ್ಧಮಾಡುತ್ತೇವೆ,” ಎಂದು ಉತ್ತರಕೊಟ್ಟರು.
೨೮
ಮೋಶೆ ಅವರ ಬಗ್ಗೆ ಮಹಾಯಾಜಕ ಎಲ್ಲಾಜಾರನಿಗೂ ನೂನನ ಮಗನಾದ ಯೆಹೋಶುವನಿಗೂ ಹಾಗು ಇಸ್ರಯೇಲರ ಕುಲನಾಯಕರಿಗೂ ಹೀಗೆಂದು ಆಜ್ಞೆಮಾಡಿದನು:
೨೯
“ಗಾದ್ಯರಲ್ಲೂ ರೂಬೇನ್ಯರಲ್ಲೂ ಯುದ್ಧಸನ್ನದ್ಧರಾದವರೆಲ್ಲರು ನಿಮ್ಮೊಡನೆ ಜೋರ್ಡನ್ ನದಿಯನ್ನು ದಾಟಿ ಸರ್ವೇಶ್ವರನ ಸಮ್ಮುಖದಲ್ಲಿ ಯುದ್ಧಮಾಡಿದ್ದೇ ಆದರೆ ಕಾನಾನ್ ನಾಡು ನಿಮ್ಮ ಸ್ವಾಧೀನಕ್ಕೆ ಬಂದಾಗ ನೀವು ಗಿಲ್ಯಾದ್ ಪ್ರದೇಶವನ್ನು ಅವರಿಗೆ ಸೊತ್ತಾಗಿ ಕೊಡಿ.
೩೦
ಆದರೆ ಅವರು ನಿಮ್ಮೊಡನೆ ಯುದ್ಧಕ್ಕೆ ಹೋಗದಿದ್ದರೆ ಕಾನಾನ್ ನಾಡಿನಲ್ಲೇ ಅವರಿಗೆ ಸೊತ್ತು ಸಿಗಲಿ.”
೩೧
ಅದಕ್ಕೆ ಗಾದ್ಯರು ಮತ್ತು ರೂಬೇನ್ಯರು ಒಪ್ಪಿಕೊಂಡರು. “ನಿಮ್ಮ ದಾಸರಾದ ನಮಗೆ ಸರ್ವೇಶ್ವರ ಆಜ್ಞಾಪಿಸಿದಂತೆಯೇ ಮಾಡುತ್ತೇವೆ.
೩೨
ಸರ್ವೇಶ್ವರನ ಸಮ್ಮುಖದಲ್ಲಿ ಯುದ್ಧ ಸನ್ನದ್ಧರಾಗಿ ಕಾನಾನ್ ನಾಡಿಗೆ ಹೊರಡುತ್ತೇವೆ. ಜೋರ್ಡನ್ ನದಿಯ ಈಚೆಯೇ ನಮಗೆ ಆಸ್ತಿ ದೊರಕಬೇಕು,” ಎಂದು ಹೇಳಿದರು.
೩೩
ಹೀಗೆ ಮೋಶೆ ಗಾದ್ಯರಿಗು, ರೂಬೇನ್ಯರಿಗು, ಹಾಗು ಜೋಸೆಫನ ಮಗನಾದ ಮನಸ್ಸೆಯ ಕುಲದ ಅರ್ಧ ಜನರಿಗು ಅಮೋರಿಯರ ಅರಸನಾದ ಸೀಹೋನನ ರಾಜ್ಯವನ್ನು, ಬಾಷಾನಿನ ಅರಸನಾದ ಓಗನ ರಾಜ್ಯವನ್ನು, ಅವುಗಳ ಎಲ್ಲ ಊರುಗಳನ್ನು ಮತ್ತು ಆ ಊರುಗಳಿಗೆ ಸೇರಿದ ಎಲ್ಲ ಭೂಮಿಗಳನ್ನು ಕೊಟ್ಟನು.
೩೪
ಗಾದ್ಯರು ದೀಬೋನ್, ಅಟಾರೋತ್, ಅರೋಯೇರ್,
೩೫
ಅಟ್ರೋತ್ಷೋಫಾನ್, ಯಗ್ಜೇರ್, ಯೊಗ್ಬೆಹಾ, ಬೇತ್ನಿಮಾ,
೩೬
ಬೇತ್ ಹಾರನ್ ಎಂಬ ಸುತ್ತು ಗೋಡೆಗಳುಳ್ಳ ಊರುಗಳನ್ನು ಹೊಸದಾಗಿ ಕಟ್ಟಿಕೊಂಡರು. ತಮ್ಮ ಆಡುಕುರಿಗಳಿಗಾಗಿ ದೊಡ್ಡಿಗಳನ್ನು ಕಟ್ಟಿಕೊಂಡರು.
೩೭
ರೂಬೇನ್ಯರು ಹೆಷ್ಬೋನ್, ಎಲೆಯಾಲೆ, ಕಿರ್ಯತಯಿಮ್, ಸಿಬ್ಮಾ ಎಂಬ ಊರುಗಳನ್ನು ಹಾಗು
೩೮
ಬೇರೆ ಹೆಸರಿನಿಂದ ಉಚ್ಚರಿಸತಕ್ಕ ನೆಬೋ, ಬಾಳ್ಮೆಯೋನ್ ಊರುಗಳನ್ನು ಹೊಸದಾಗಿ ಕಟ್ಟಿ ಅವುಗಳಿಗೆ ಬೇರೆ ಹೆಸರುಗಳನ್ನು ಇಟ್ಟರು.
೩೯
ಮನಸ್ಸೆಯ ಮಗನಾದ ಮಾಕೀರನ ವಂಶದವರು ಗಿಲ್ಯಾದ್‍ಗೆ ಹೋಗಿ ಅದನ್ನು ಸ್ವಾಧೀನ ಮಾಡಿಕೊಂಡರು. ಅಲ್ಲಿದ್ದ ಅಮೋರಿಯರನ್ನು ಹೊರಡಿಸಿಬಿಟ್ಟರು.
೪೦
ಮೋಶೆ ಗಿಲ್ಯಾದ್ ಪ್ರಾಂತ್ಯವನ್ನು ಮನಸ್ಸೆಯ ಮಗನಾದ ಮಾಕೀರನ ಸಂತತಿಯವರಿಗೆ ಕೊಟ್ಟನು. ಅವರು ಅಲ್ಲೇ ವಾಸಮಾಡಿಕೊಂಡರು.
೪೧
ಮನಸ್ಸೆಯ ವಂಶದವನಾದ ಯಾಯಿರನು ಯುದ್ಧಕ್ಕೆ ಹೊರಟು ಅಮೋರಿಯರ ಗ್ರಾಮಗಳನ್ನು ಸ್ವಾಧೀನಪಡಿಸಿಕೊಂಡನು. ಅವುಗಳಿಗೆ ಯಾಯಿರನ ಗ್ರಾಮಗಳೆಂದು ಹೆಸರು ಇಟ್ಟನು.
೪೨
ನೋಬಹನು ಯುದ್ಧಮಾಡಿ ಕೆನಾತ್ ಎಂಬ ಪಟ್ಟಣವನ್ನೂ ಅದಕ್ಕೆ ಸೇರಿದ ಊರುಗಳನ್ನೂ ಜಯಿಸಿದನು. ಆ ಪಟ್ಟಣಕ್ಕೆ ನೋಬಹ ಎಂದು ತನ್ನ ಹೆಸರನ್ನೇ ಕೊಟ್ಟನು.