A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ಸಂಖ್ಯಾಕಾಂಡ ೩೧ಸರ್ವೇಶ್ವರ ಸ್ವಾಮಿ ಮೋಶೆಗೆ:
“ಮಿದ್ಯಾನರು ಇಸ್ರಯೇಲರಿಗೆ ಮಾಡಿದ ಹಿಂಸೆಗಾಗಿ ನೀನು ಮುಯ್ಯಿತೀರಿಸಬೇಕು. ಅನಂತರ ನಿನ್ನ ಪೂರ್ವಜರ ಬಳಿಗೆ ನೀನು ಸೇರಬೇಕು,” ಎಂದರು.
ಆಗ ಮೋಶೆ ಇಸ್ರಯೇಲರಿಗೆ, “ನೀವು ಒಂದೊಂದು ಕುಲದಿಂದ ಸಾವಿರ ಜನರ ಮೇರೆಗೆ ಕಾಲಾಳುಗಳನ್ನು ಯುದ್ಧಕ್ಕೆ ಸಿದ್ಧಮಾಡಿಕೊಳ್ಳಿ.
ಅವರು ಮಿದ್ಯಾನರಿಗೆ ಸರ್ವೇಶ್ವರ ಆಜ್ಞಾಪಿಸಿದ ದಂಡನೆಯನ್ನು ಮಾಡಬೇಕು,” ಎಂದು ಅಪ್ಪಣೆ ಕೊಟ್ಟನು.
ಅಂತೆಯೇ ಇಸ್ರಯೇಲರು ಕುಲ ಒಂದಕ್ಕೆ ಸಾವಿರ ಮಂದಿಯ ಮೇರೆಗೆ ಯುದ್ಧಕ್ಕೆ ಸನ್ನದ್ಧರಾದ ಹನ್ನೆರಡು ಸಾವಿರ ಮಂದಿಯನ್ನು ಲೆಕ್ಕಿಸಿಕೊಟ್ಟರು.
ಮೋಶೆ ಇವರನ್ನು ಮಹಾಯಾಜಕನಾದ ಎಲ್ಲಾಜಾರನ ಮಗ ಫೀನೆಹಾಸನ ಮುಂದಾಳತ್ವದಲ್ಲಿ ಪವಿತ್ರ ಉಪಕರಣಗಳೊಂದಿಗೂ ಯುದ್ಧಕಹಳೆಗಳೊಂದಿಗೂ ಯುದ್ಧಕ್ಕೆ ಕಳುಹಿಸಿದನು.
ಸರ್ವೇಶ್ವರನ ಆಜ್ಞೆಯಂತೆ ಅವರು ಮಿದ್ಯಾನರೊಡನೆ ಯುದ್ಧಮಾಡಿ ಗಂಡಸರೆಲ್ಲರನ್ನು ಸಂಹಾರ ಮಾಡಿದರು.
ಹತರಾದವರಲ್ಲಿ ಎವೀ, ರೆಕೆಮ್, ಚೂರ್, ಹೂರ್ ಹಾಗು ರೆಬಾ ಎಂಬ ಮಿದ್ಯಾನರ ಐದು ಮಂದಿ ರಾಜರು ಇದ್ದರು. ಅದೂ ಅಲ್ಲದೆ ಬೆಯೋರನ ಮಗ ಬಿಳಾಮನನ್ನು ಕತ್ತಿಯಿಂದ ಕೊಂದುಹಾಕಿದರು.
ಇಸ್ರಯೇಲರು ಮಿದ್ಯಾನರ ಎಲ್ಲಾ ಮಡದಿ ಮಕ್ಕಳನ್ನೂ ಸೆರೆಹಿಡಿದರು; ಎಲ್ಲಾ ದನಕುರಿಗಳನ್ನೂ ಆಸ್ತಿಪಾಸ್ತಿಯನ್ನೂ ಸೂರೆಮಾಡಿದರು.
೧೦
ಅವರಿದ್ದ ಊರುಕೇರಿಗಳನ್ನು ಸುಟ್ಟುಹಾಕಿದರು.
೧೧
ನರಮಾನವರೆನ್ನದೆ, ಪಶುಪ್ರಾಣಿಗಳೆನ್ನದೆ ಏನನ್ನೂ ಬಿಡದೆ ಎಲ್ಲವನ್ನು ಕೊಳ್ಳೆಹೊಡೆದರು.
೧೨
ಹೀಗೆ ಸೆರೆಯಾಳುಗಳನ್ನೂ ಪಶುಪ್ರಾಣಿಗಳನ್ನೂ ಆಸ್ತಿಪಾಸ್ತಿಯನ್ನೂ ತೆಗೆದುಕೊಂಡು ಜೆರಿಕೋ ಪಟ್ಟಣದ ಎದುರಿಗಿರುವ ಜೋರ್ಡನ್ ನದಿಯ ತೀರಕ್ಕೆ ಬಂದರು. ಅಲ್ಲಿ ಮೋವಾಬ್ಯರ ಮೈದಾನದ ಪಾಳೆಯದಲ್ಲಿದ್ದ ಮೋಶೆ, ಮಹಾಯಾಜಕ ಎಲ್ಲಾಜಾರ್ ಹಾಗು ಇಸ್ರಯೇಲರ ಸರ್ವಸಮಾಜದವರ ಬಳಿಗೆ ಬಂದರು.
೧೩
ಮೋಶೆ, ಮಹಾಯಾಜಕ ಎಲ್ಲಾಜಾರನು ಮತ್ತು ಸಮಾಜದ ಮುಖಂಡರು ಪಾಳೆಯದ ಹೊರಗೆ ಬಂದು ಯುದ್ಧವೀರರನ್ನು ಎದುರುಗೊಂಡರು.
೧೪
ಯುದ್ಧಭೂಮಿಯಿಂದ ಬಂದಿದ್ದ ಆ ಸೈನ್ಯದ ಸಹಸ್ರಾಧಿಪತಿಗಳನ್ನು ಹಾಗು ಶತಾಧಿಪತಿಗಳನ್ನು ಕಂಡು ಮೋಶೆ ಕೋಪಗೊಂಡನು.
೧೫
“ನೀವು ಮಹಿಳೆಯರನ್ನೆಲ್ಲ ಉಳಿಸಿದ್ದೇಕೆ?
೧೬
ಪೆಗೋರದ ಬಾಳನ ವಿಷಯದಲ್ಲಿ ಬಿಳಾಮನ ದುರಾಲೋಚನೆಯನ್ನು ಅನುಸರಿಸಿ, ಇಸ್ರಯೇಲರನ್ನು ಸರ್ವೇಶ್ವರನಿಗೆ ದ್ರೋಹಿಗಳನ್ನಾಗಿಸಿ, ಸಮಾಜದವರಲ್ಲಿ ಘೋರ ವ್ಯಾಧಿಯುಂಟಾಗುವಂತೆ ಮಾಡಿದವರು ಅವರೇ ಅಲ್ಲವೆ?
೧೭
ಆದಕಾರಣ ಈ ಗುಂಪಿನಲ್ಲಿರುವ ಎಲ್ಲ ಗಂಡುಮಕ್ಕಳನ್ನು ಮತ್ತು ಪುರುಷ ಸಂಗಮಮಾಡಿದ ಎಲ್ಲ ಹೆಂಗಸರನ್ನು ಕೊಲ್ಲಬೇಕು.
೧೮
ಪುರುಷ ಸಂಗಮ ಮಾಡದಿರುವ ಕನ್ಯೆಯರನ್ನು ನಿಮಗೋಸ್ಕರ ಉಳಿಸಿಕೊಳ್ಳಬೇಕು.
೧೯
ನಿಮ್ಮಲ್ಲಿ ಮನುಷ್ಯಪ್ರಾಣ ತೆಗೆದವರು ಹಾಗು ಶವ ಸೋಂಕಿದವರು ಏಳು ದಿನದವರೆಗೆ ಪಾಳೆಯದ ಹೊರಗಡೆ ಇರಬೇಕು. ಮೂರನೆಯ ಮತ್ತು ಏಳನೆಯ ದಿನ ನಿಮ್ಮನ್ನೂ ಸೆರೆಯಾಳುಗಳನ್ನೂ ಶುದ್ಧೀಕರಿಸಿಕೊಳ್ಳಬೇಕು.
೨೦
ಎಲ್ಲ ಬಟ್ಟೆಬರೆಗಳನ್ನೂ ತೊಗಲಿನ ಸಾಮಾನುಗಳನ್ನೂ ಮೇಕೆ ಕೂದಲಿನ ವಸ್ತ್ರಗಳನ್ನೂ ಹಾಗು ಮರದ ಸಾಮಾನುಗಳನ್ನೂ ಶುದ್ಧಮಾಡಿಕೊಳ್ಳಬೇಕು,” ಎಂದು ಹೇಳಿದನು.
೨೧
ಮಹಾಯಾಜಕ ಎಲ್ಲಾಜಾರನು ಯುದ್ಧಕ್ಕೆ ಹೋಗಿ ಬಂದಿದ್ದ ಸೈನಿಕರಿಗೆ ಹೀಗೆಂದನು: “ಸರ್ವೇಶ್ವರಸ್ವಾಮಿ ಮೋಶೆಗೆ ಅಪ್ಪಣೆಮಾಡಿದ ವಿಧಿನಿಯಮ ಹೀಗಿದೆ -
೨೨
ಬೆಂಕಿಯನ್ನು ತಡೆಯುವ ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ, ತವರ, ಸೀಸ ಮೊದಲಾದುವುಗಳನ್ನು ಬೆಂಕಿದಾಟಿಸಿ ಶುದ್ಧಿಮಾಡಬೇಕು.
೨೩
ಅವುಗಳನ್ನು, ಹೊಲೆ ಹೋಗಲಾಡಿಸುವ ನೀರಿನಿಂದಲೂ ಶುದ್ಧಮಾಡಬೇಕು. ಬೆಂಕಿಯನ್ನು ತಡೆಯಲಾರದ ವಸ್ತುಗಳನ್ನು ನೀರಿನಿಂದ ತೊಳೆದು ಶುದ್ಧಮಾಡಬೇಕು.
೨೪
ಏಳನೆಯ ದಿನದಲ್ಲಿ ನಿಮ್ಮ ಬಟ್ಟೆಗಳನ್ನು ಒಗೆದುಕೊಂಡ ನಂತರ ಶುದ್ಧರಾಗುವಿರಿ. ಆ ಬಳಿಕ ನೀವು ಪಾಳೆಯದೊಳಗೆ ಬರಬಹುದು.”
೨೫
ಸರ್ವೇಶ್ವರ ಮೋಶೆಗೆ:
೨೬
“ನೀನು, ಮಹಾಯಾಜಕ ಎಲ್ಲಾಜಾರನು ಮತ್ತು ಕುಲನಾಯಕರು ಸೈನಿಕರ ಕೈಗೆ ಸಿಕ್ಕಿರುವ ಸೆರೆಯಾಳುಗಳನ್ನೂ ಪಶುಪ್ರಾಣಿಗಳನ್ನೂ ಲೆಕ್ಕಮಾಡಿ ಒಟ್ಟು ಎಷ್ಟೆಂದು ತಿಳಿದುಕೊಳ್ಳಿ.
೨೭
ಅದನ್ನು ಎರಡು ಭಾಗಮಾಡಿ ಯುದ್ಧಕ್ಕೆ ಹೋಗಿದ್ದ ಸೈನಿಕರಿಗೆ ಅರ್ಧವನ್ನೂ ಮಿಕ್ಕ ಸಮಾಜದವರಿಗೆ ಅರ್ಧವನ್ನೂ ಹಂಚಿಕೊಡಿ.
೨೮
ಯುದ್ಧಕ್ಕೆ ಹೋಗಿದ್ದ ಸೈನಿಕರಿಗೆ ಬರುವ ಭಾಗದಿಂದ ಸೆರೆಯಾಳು, ದನ, ಕತ್ತೆ, ಆಡು, ಕುರಿ
೨೯
ಇವುಗಳಲ್ಲಿ ಐನೂರರಲ್ಲಿ ಒಂದರ ಮೇರೆಗೆ ಸರ್ವೇಶ್ವರನಿಗೋಸ್ಕರ ಕಪ್ಪವನ್ನು ತೆಗೆದುಕೊಳ್ಳಿ. ಇದನ್ನು ಪ್ರತ್ಯೇಕಿಸಿ ಮಹಾಯಾಜಕ ಎಲ್ಲಾಜಾರನಿಗೆ ಒಪ್ಪಿಸಿರಿ.
೩೦
ಮಿಕ್ಕ ಇಸ್ರಯೇಲರಿಗೆ ಬರುವ ಭಾಗದಿಂದ ಸೆರೆಯಾಳು, ದನ, ಕತ್ತೆ, ಆಡು, ಕುರಿ ಇವುಗಳಲ್ಲಿ ಐವತ್ತರಲ್ಲಿ ಒಂದರ ಮೇರೆಗೆ ತೆಗೆದುಕೊಂಡು ಸರ್ವೇಶ್ವರನ ಗುಡಾರವನ್ನು ನೋಡಿಕೊಳ್ಳುವ ಲೇವಿಯರಿಗೆ ಕೊಡಿ,” ಎಂದು ಆಜ್ಞಾಪಿಸಿದರು.
೩೧
ಸರ್ವೇಶ್ವರನ ಅಪ್ಪಣೆಯಂತೆಯೇ ಮೋಶೆ ಮತ್ತು ಮಹಾಯಾಜಕ ಎಲ್ಲಾಜಾರನು ಮಾಡಿದರು.
೩೨
ಸೈನಿಕರು ತಂದ ಸುಲಿಗೆಯಲ್ಲಿ ಹಂಚಿಕೊಳ್ಳಲು ಉಳಿದುದರ ವಿವರ ಇದು: ಆಡುಕುರಿಗಳೂ 675,000;
೩೩
ದನಕರುಗಳು 72,000;
೩೪
ಕತ್ತೆಗಳು 61,000;
೩೫
ಕನ್ಯೆಯರು 32,000;
೩೬
ಯುದ್ಧಕ್ಕೆ ಹೋಗಿದ್ದ ಸೈನಿಕರಿಗೆ ದೊರಕಿದ ಅರ್ಧಭಾಗ ಆಗಿರುವ 337,500 ಆಡುಕುರಿಗಳಲ್ಲಿ
೩೭
675 ಆಡುಕುರಿಗಳು ಸರ್ವೇಶ್ವರನಿಗೆ ಬಂದ ಕಪ್ಪ.
೩೮
ಹಾಗೆಯೇ ಅವರಿಗೆ ದೊರಕಿದ 36,000 ದನಕರುಗಳಲ್ಲಿ 72 ದನಕರುಗಳು,
೩೯
30,500 ಕತ್ತೆಗಳಲ್ಲಿ 61 ಕತ್ತೆಗಳು,
೪೦
16,000 ಕನ್ಯೆಯರಲ್ಲಿ 32 ಮಂದಿ ಸರ್ವೇಶ್ವರನಿಗೆ ಬಂದ ಕಪ್ಪ.
೪೧
ಸರ್ವೇಶ್ವರನ ಅಪ್ಪಣೆಯ ಮೇರೆಗೆ ಮೋಶೆ ಈ ಕಪ್ಪವನ್ನು ಸರ್ವೇಶ್ವರನಿಗೆ ಪ್ರತ್ಯೇಕಿಸಿ ಮಹಾಯಾಜಕ ಎಲ್ಲಾಜಾರನಿಗೆ ಒಪ್ಪಿಸಿದನು.
೪೨
ಸೈನಿಕರು ತಂದ ಸುಲಿಗೆಯಲ್ಲಿ ಮೋಶೆ ಪ್ರತ್ಯೇಕಿಸಿದ ಮಿಕ್ಕ ಅರ್ಧಭಾಗದ ವಿವರ ಇದು:
೪೩
337,500 ಆಡುಕುರಿಗಳು;
೪೪
36,000 ದನಕರುಗಳು;
೪೫
30,500 ಕತ್ತೆಗಳು; 16,000 ಕನ್ಯೆಯರು.
೪೬
ಇಷ್ಟು ಇಸ್ರಯೇಲ ಸಮಾಜದವರ ಪಾಲಿಗೆ ಬಂದವುಗಳು.
೪೭
ಇವುಗಳಲ್ಲಿ ಮೋಶೆ ಸರ್ವೇಶ್ವರನ ಅಪ್ಪಣೆಯ ಪ್ರಕಾರ ಐವತ್ತರಲ್ಲಿ ಒಂದರ ಮೇರೆಗೆ ತೆಗೆದುಕೊಂಡು ಸರ್ವೇಶ್ವರನ ಗುಡಾರವನ್ನು ನೋಡಿಕೊಳ್ಳುವ ಲೇವಿಯರಿಗೆ ಕೊಟ್ಟನು.
೪೮
ಸೈನ್ಯದ ಸಹಸ್ರಾಧಿಪತಿಗಳು ಹಾಗು ಶತಾಧಿಪತಿಗಳು ಮೋಶೆ ಬಳಿಗೆ ಬಂದು,
೪೯
“ನಿಮ್ಮ ದಾಸರಾದ ನಾವು ನಮ್ಮ ಅಧಿಕಾರಕ್ಕೆ ಒಳಪಟ್ಟ ಸೈನಿಕರನ್ನು ಲೆಕ್ಕಿಸಿದಾಗ ಒಬ್ಬನಾದರೂ ಕಡಿಮೆ ಆಗಿಲ್ಲವೆಂದು ಗೊತ್ತಾಯಿತು.
೫೦
ಸರ್ವೇಶ್ವರ ಸ್ವಾಮಿ ನಮ್ಮ ಪ್ರಾಣಗಳನ್ನು ಕಾಪಾಡಿದ್ದಾರೆ. ಅದಕ್ಕೆ ಈಡಾಗಿ ಅವರಿಗೆ ಕಾಣಿಕೆಯಾಗಿ ನಮ್ಮಲ್ಲಿ ಒಬ್ಬೊಬ್ಬನು ತನಗೆ ಸಿಕ್ಕಿದ ಚಿನ್ನದ ಒಡವೆಗಳನ್ನು, ಅಂದರೆ ತೋಳ್ಬಳೆ, ಕಡಗ, ಮುದ್ರೆಯುಂಗುರ, ಮುರುವು, ಕಂಠಮಾಲೆ, ಮುಂತಾದುವುಗಳನ್ನು ತಂದಿದ್ದೇವೆ,” ಎಂದರು.
೫೧
ಅವರು ಕೊಟ್ಟ ಆ ಚಿನ್ನದ ಒಡವೆಗಳನ್ನೂ ವಿಚಿತ್ರ ಆಭರಣಗಳನ್ನೂ ಮೋಶೆ ಮತ್ತು ಮಹಾಯಾಜಕ ಎಲ್ಲಾಜಾರನು ತೆಗೆದುಕೊಂಡರು.
೫೨
ಸಹಸ್ರಾಧಿಪತಿಗಳು ಹಾಗು ಶತಾಧಿಪತಿಗಳು ಸರ್ವೇಶ್ವರನಿಗೆ ಹೀಗೆ ಪ್ರತ್ಯೇಕಿಸಿ ಸಮರ್ಪಿಸಿದ ಕಾಣಿಕೆಯ ಒಟ್ಟು ತೂಕ 16,750 ಶೆಕೆಲ್ ಗಳು.
೫೩
ಪ್ರತಿಯೊಬ್ಬ ಸೈನಿಕನೂ ಸ್ವಂತಕ್ಕಾಗಿ ಲೂಟಿಯನ್ನು ಇಟ್ಟುಕೊಂಡಿದ್ದನು.
೫೪
ಆದರೆ ಸಹಸ್ರಾಧಿಪತಿಗಳು ಮತ್ತು ಶತಾಧಿಪತಿಗಳು ಕೊಟ್ಟ ಚಿನ್ನವನ್ನು ಮೋಶೆ ಮತ್ತು ಮಹಾಯಾಜಕ ಎಲ್ಲಾಜಾರನು ಸ್ವೀಕರಿಸಿ ಅದನ್ನು ಇಸ್ರಯೇಲರಿಗೋಸ್ಕರ ಸ್ಮರಣಾರ್ಥವಾಗಿ ಸರ್ವೇಶ್ವರನ ಸನ್ನಿಧಿಯಲ್ಲಿ ದೇವದರ್ಶನದ ಗುಡಾರದೊಳಗಿಟ್ಟರು.