A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ಸಂಖ್ಯಾಕಾಂಡ ೨೪ಇಸ್ರಯೇಲರಿಗೆ ಶುಭವಾಗಬೇಕು ಎಂಬುದೇ ಸರ್ವೇಶ್ವರನ ಚಿತ್ತ ಎಂದು ಅರಿತ ಬಿಳಾಮನು ಮೊದಲಿನಂತೆ ಶಕುನ ನೋಡಲು ಹೋಗಲಿಲ್ಲ. ಬದಲಿಗೆ ಮರುಭೂಮಿಯ ಕಡೆ ಮುಖ ತಿರುಗಿಸಿಕೊಂಡು ಕಣ್ಣೆತ್ತಿ ನೋಡಿದನು.
ಕುಲಗಳ ಅನುಸಾರ ಡೇರೆಗಳನ್ನು ಹಾಕಿಕೊಂಡಿದ್ದ ಇಸ್ರಯೇಲರು ಅವನಿಗೆ ಕಾಣಿಸಿದರು.
ಆಗ ಅವನು ದೇವಾತ್ಮಪ್ರೇರಿತನಾಗಿ ಪದ್ಯರೂಪದಲ್ಲಿ ಇಂತೆಂದು ಭವಿಷ್ಯ ನುಡಿದನು: “ಇದು ಬೆಯೋರನ ಮಗ ಬಿಳಾಮನ ಭವಿಷ್ಯವಾಣಿ: ಮನೋದೃಷ್ಟಿಯಿಂದ ನೋಡುವ ಪುರುಷನ ವಾಣಿ
ದೈವೋಕ್ತಿಗಳನ್ನು ಕೇಳುವವನ ಭವಿಷ್ಯವಾಣಿ ಪರವಶನಾಗಿ ಕಣ್ದೆರೆದು ಸರ್ವಶಕ್ತನ ದರ್ಶನ ಹೊಂದಿದಾ ವ್ಯಕ್ತಿಯ ವಾಣಿ.
ಯಕೋಬ್ಯರೇ, ನಿಮ್ಮ ಡೇರೆಗಳೆಷ್ಟು ರಮ್ಯ! ಇಸ್ರಯೇಲರೇ, ನಿಮ್ಮ ನಿವಾಸಗಳೆಷ್ಟು ಸುಂದರ!
ಅವಿವೆ ಉದ್ದುದ್ದ ಚಾಚಿಕೊಂಡಿರುವ ಕಣಿವೆಗಳಂತೆ ನದಿಯ ಬಳಿಯಿರುವ ತೋಟಗಳಂತೆ ಸರ್ವೇಶ್ವರ ನೆಟ್ಟ ಅಗರುಮರಗಳಂತೆ, ನೀರ ಬದಿಯ ದೇವದಾರು ವೃಕ್ಷಗಳಂತೆ.
ನೀರು ಹರಿಯುತ್ತಲೇ ಇದೆ ಅವರ ಕಪಿಲೆಗಳಿಂದ ಅವರ ಬಿತ್ತನೆಗೆ ನೀರಿನ ಕೊರತೆಯೆಂಬುದಿಲ್ಲ. ಅಗಾಗ್ ರಾಜನಿಗಿಂತ ಶ್ರೇಷ್ಠ ಅವರ ಅರಸ ಅಭಿವೃದ್ಧಿಯಾಗುತ್ತಿದೆ ಅವರ ರಾಜ್ಯ.
ಅವರನ್ನು ದೇವರೇ ಕರೆದು ತಂದರು ಈಜಿಪ್ಟಿನಿಂದ ಅವರಿಗಿದೆ ಕಾಡುಕೋಣದಂಥ ಶಕ್ತಿಸಾಮರ್ಥ್ಯ. ನಿರ್ಮೂಲ ಮಾಡುವರವರು ಶತ್ರುಗಳನ್ನು ಮುರಿದು ಹಾಕುವರು ವೈರಿಗಳ ಎಲುಬುಗಳನ್ನು; ನುಚ್ಚುನೂರು ಮಾಡುವರು ಅವರ ಬಿಲ್ಲುಬಾಣಗಳನ್ನು.
ಕಾಲು ಮಡಚಿ ಹೊಂಚುಕೂತ ಸಿಂಹದಂತಿದೆ ಆ ಜನಾಂಗ; ಕೆಣಕಲು ಯಾರಿಂದಾದೀತು, ಅದು ಮೃಗೇಂದ್ರನಿಗೆ ಸಮಾನ!
೧೦
ಇದನ್ನು ಕೇಳಿ ಬಾಲಾಕನಿಗೆ ಬಿಳಾಮನ ಮೇಲೆ ಕಡುಕೋಪ ಉಂಟಾಯಿತು. ಅವನು ಕೈಕೈಹಿಸಿಕಿಕೊಂಡು ಬಿಳಾಮನಿಗೆ, “ಶತ್ರುಗಳನ್ನು ಶಪಿಸುವುದಕ್ಕೆ ನಿನ್ನನ್ನು ಕರೆಸಿದೆ; ಆದರೆ ನೀನು ಮೂರು ಸಾರಿಯೂ ಅವರನ್ನೇ ಆಶೀರ್ವದಿಸಿದೆ.
೧೧
ಆದುದರಿಂದ ನಿನ್ನ ಊರಿಗೆ ತೆರಳು. ನಿನ್ನನ್ನು ಬಹಳವಾಗಿಸನ್ಮಾನಿಸಬೇಕೆಂದಿದ್ದೆ. ಆದರೆ ನಿನಗೆ ಸನ್ಮಾನ ಕೂಡದೆಂದು ಸರ್ವೇಶ್ವರ ಆಜ್ಞೆಮಾಡಿದ್ದಾನೆ,” ಎಂದನು.
೧೨
ಅದಕ್ಕೆ ಬಿಳಾಮನು, “ನೀನು ನಿನ್ನ ಮನೆತುಂಬ ಬೆಳ್ಳಿಬಂಗಾರವನ್ನು ದಾನಮಾಡಿದರೂ ನಾನು ಸರ್ವೇಶ್ವರನ ಆಜ್ಞೆಯನ್ನು ಮೀರಿ ನನ್ನ ಇಷ್ಟದಂತೆ ಏನನ್ನೂ ಮಾಡಲಾರೆ.
೧೩
ಸರ್ವೇಶ್ವರ ಆಜ್ಞಾಪಿಸಿದಂತೆಯೇ ಮಾಡುವೆನೆಂದು ನೀನು ನನ್ನ ಬಳಿಗೆ ಕಳಿಸಿದ ದೂತರಿಗೆ ನಾನು ಹೇಳಲಿಲ್ಲವೆ?
೧೪
ಆಗಲಿ, ನಾನು ನನ್ನ ಸ್ವಜನರ ಬಳಿಗೆ ತೆರಳುತ್ತೇನೆ. ಆದರೆ ಈ ಜನರು ನಿನ್ನ ಜನರಿಗೆ ಕೊನೆಗೆ ಏನು ಮಾಡುವರೋ ಅದನ್ನು ತಿಳಿಸುತ್ತೇನೆ ಕೇಳು,” ಎಂದು ಹೇಳಿ
೧೫
ಪದ್ಯರೂಪವಾಗಿ ಹೀಗೆಂದನು: ಬೆಯೋರನ ಮಗ ಬಿಳಾಮನು ನುಡಿದ ಭವಿಷ್ಯವಾಣಿ:
೧೬
ಮನೋದೃಷ್ಟಿಯಿಂದ ನೋಡುವ ಪುರುಷನ ವಾಣಿ ದೈವೋಕ್ತಿಗಳನ್ನು ಕೇಳುವವನ ಭವಿಷ್ಯವಾಣಿ ಪರಾತ್ಪರನ ಜ್ಞಾನವನ್ನು ಪಡೆದವನ ವಾಣಿ ಪರವಶನಾಗಿ ಕಣ್ದೆರೆದು ಸರ್ವಶಕ್ತನ ದರ್ಶನ ಹೊಂದಿದವನ ಭವಿಷ್ಯವಾಣಿ:
೧೭
ಒಬ್ಬಾತನನ್ನು ನೋಡುತ್ತಿದ್ದೇನೆ; ಆತ ಈಗಿನವನಲ್ಲ. ಆತ ಕಾಣಿಸುತ್ತಾನೆ, ಆದರೆ ಸಮೀಪದಲ್ಲಿಲ್ಲ. ನಕ್ಷತ್ರಪ್ರಾಯನೊಬ್ಬನು ಉದಯಿಸಿದ್ದಾನೆ ಯಕೋಬವಂಶದಲ್ಲಿ ರಾಜದಂಡ ಹಿಡಿದವನು ಕಂಡು ಬಂದಿದ್ದಾನೆ ಇಸ್ರಯೇಲರಲ್ಲಿ. ಆತ ಸೀಳಿಹಾಕಿದ್ದಾನೆ ಮೋವಾಬ್ಯರ ತಲೆಯನ್ನು; ಕೆಡವಿಬಿಟ್ಟಿದ್ದಾನೆ ಯುದ್ಧವೀರರೆಲ್ಲರನ್ನು.
೧೮
ಸ್ವಾಧೀನವಾಗಿಸಿಕೊಂಡಿದ್ದಾನೆ ಎದೋಮ್ಯರ ನಾಡನ್ನು; ಆತನಿಗೆ ಅಧೀನರಾದರು ಹಗೆಗಳಾದ ಸೇಯೀರಿನವರು.
೧೯
ಹೌದು, ಇಸ್ರಯೇಲರು ಬಲವಂತರು ಯಕೋಬ್ಯರದೇ ದೊರೆತನವಾಯಿತು ನಗರಗಳಿಂದ ತಲೆತಪ್ಪಿಸಿಕೊಂಡವರೂ ನಾಶವಾದರು.”
೨೦
ಅನಂತರ ಅಮಾಲೇಕ್ಯರನ್ನು ನೋಡಿ ಅವರ ವಿಷಯದಲ್ಲಿ ಹೀಗೆಂದು ನುಡಿದನು: “ಅಮಾಲೇಕ್ಯರು ಶ್ರೇಷ್ಠರಲ್ಲವೆ ರಾಷ್ಟ್ರಗಳಲ್ಲಿ? ಆದರೂ ಅವರ ಗತಿ ವಿನಾಶವೇ ಸರಿ.”
೨೧
ಬಳಿಕ ಕೇನ್ಯರನ್ನು ನೋಡಿ ಅವರ ವಿಷಯದಲ್ಲಿ ಇಂತೆಂದು ನುಡಿದನು: “ನಿಮ್ಮ ನಿವಾಸಸ್ಥಳ ಸುರಕ್ಷಿತ ಬೆಟ್ಟದ ತುತ್ತತುದಿಯಲ್ಲಿ ಗೂಡು ಕಟ್ಟಿಕೊಂಡಷ್ಟು ಸುರಕ್ಷಿತ
೨೨
ಆದರೂ ಕೇನ್ಯರು ಕೂಡ ನಾಶವಾಗುವರು. ಅಶ್ಯೂರ್ಯರು ನಿಮ್ಮನ್ನು ಸೆರೆ ಹಿಡಿಯಲು ಎಷ್ಟು ಕಾಲ ತಾನೆ ಹಿಡಿಯುವುದು?”
೨೩
ಬಿಳಾಮನು ಮುಂದುವರೆದು ನುಡಿದದ್ದು ಏನೆಂದರೆ: ಅಯ್ಯೋ, ದೇವರೇ ಹೀಗೆ ಮಾಡುವಾಗ ಉಳಿಯುವವರಾರು?
೨೪
‘ಸೈಪ್ರಸ್’ ಎಂಬ ಸ್ಥಳದಿಂದ ಹಡಗುಗಳಲ್ಲಿ ಬರುವರು ಜನರು ಸೋಲಿಸುವರವರು ಅಶ್ಯೂರ್ಯರನ್ನೂ ಏಬೆರ್ ಜರನ್ನೂ; ಅವರಿಗೂ ನಾಶವುಂಟಾಗುವುದು.”
೨೫
ಇದಾದ ಮೇಲೆ ಬಿಳಾಮನು ಸ್ವಂತ ನಾಡಿಗೆ ಹಿಂದಿರುಗಿದನು. ಬಾಲಾಕನು ತನ್ನ ದಾರಿ ಹಿಡಿದನು.