A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ಸಂಖ್ಯಾಕಾಂಡ ೨೩ಆಗ ಬಿಳಾಮನು, “ಇಲ್ಲಿ ಏಳು ಬಲಿಪೀಠಗಳನ್ನು ಕಟ್ಟಿಸಿ ಏಳು ಹೋರಿಗಳನ್ನು ಮತ್ತು ಏಳು ಟಗರುಗಳನ್ನು ಸಿದ್ಧಪಡಿಸು,” ಎಂದು ಬಾಲಾಕನಿಗೆ ಹೇಳಿದನು.
ಬಾಲಾಕನು ಹಾಗೆಯೇ ಮಾಡಿದನು. ಬಾಲಾಕನು ಮತ್ತು ಬಿಳಾಮನು ಪ್ರತಿ ಬಲಿಪೀಠದ ಮೇಲೆ ಒಂದು ಹೋರಿಯನ್ನು ಹಾಗು ಒಂದು ಟಗರನ್ನು ದಹನಬಲಿದಾನವಾಗಿ ಸಮರ್ಪಿಸಿದರು.
ಬಳಿಕ ಬಿಳಾಮನು ಬಾಲಾಕನಿಗೆ, “ನೀನು ದಹನಬಲಿದಾನ ಮಾಡಿದ ಸ್ಥಳದಲ್ಲೇ ಇರು; ನಾನು ಸ್ವಲ್ಪ ದೂರ ಹೋಗಿ ಬರುತ್ತೇನೆ; ಸರ್ವೇಶ್ವರ ನನಗೆ ದರ್ಶನ ಕೊಟ್ಟರೂ ಕೊಡಬಹುದು. ಅವರು ಸೂಚಿಸುವ ಸಂಗತಿಗಳನ್ನು ನಿನಗೆ ತಿಳಿಸುತ್ತೇನೆ,” ಎಂದು ಹೇಳಿ ಮರಗಳಿಲ್ಲದ ಒಂದು ದಿಣ್ಣೆಗೆ ಹೋದನು.
ದೇವರು ಬಿಳಾಮನಿಗೆ ಎದುರಾಗಿ ಬಂದರು. ಬಿಳಾಮನು ಅವರಿಗೆ, “ನಾನು ಏಳು ಬಲಿಪೀಠಗಳನ್ನು ಕಟ್ಟಿಸಿ ಒಂದೊಂದು ಪೀಠದಲ್ಲಿ ಒಂದು ಹೋರಿಯನ್ನೂ ಒಂದು ಟಗರನ್ನೂ ದಹನಬಲಿಯಾಗಿ ಸಮರ್ಪಿಸಿದ್ದೇನೆ,” ಎಂದು ಹೇಳಿದನು.
ಸರ್ವೇಶ್ವರ ಬಿಳಾಮನಿಗೆ ಹೇಳಬೇಕಾದುದನ್ನು ಹೇಳಿ, “ನೀನು ಬಾಲಾಕನ ಬಳಿಗೆ ಹಿಂದಿರುಗಿ ಹೋಗಿ ನಾನು ಹೇಳಿದ್ದನ್ನು ತಿಳಿಸು,” ಎಂದು ಆಜ್ಞಾಪಿಸಿದರು.
ಬಿಳಾಮನು ಬಾಲಾಕನ ಬಳಿಗೆ ಬಂದಾಗ ತಾನು ದಹನಬಲಿಯನ್ನು ಸಮರ್ಪಿಸಿದ್ದ ಪೀಠದ ಹತ್ತಿರವೆ ನಿಂತಿದ್ದನು. ಮೋವಾಬ್ಯರ ಮುಖ್ಯಸ್ಥರೆಲ್ಲರು ಅವನ ಬಳಿಯಲ್ಲೆ ಇದ್ದರು. ಆಗ ಬಿಳಾಮನು ಪದ್ಯರೂಪದಲ್ಲಿ ಹೀಗೆಂದು ನುಡಿದನು:
“ಬಾಲಾಕನು ನನ್ನನ್ನು ಕರೆಸಿದ ಅರಾಮಿನಿಂದ ಮೋವಾಬರಸ ನನ್ನ ಬರಮಾಡಿದ ಮೂಡಲಗುಡ್ಡೆಗಳಿಂದ. ‘ನನ್ನ ಪರವಾಗಿ ಯಕೋಬವಂಶಜರನ್ನು ಶಪಿಸೆಂದ’ ‘ಹಾಕು ಇಸ್ರಯೇಲರಿಗೆ ಧಿಕ್ಕಾರ’ ಎಂದು ಹೇಳಿದ.
ದೇವರೇ ಶಪಿಸಿಲ್ಲದವರನ್ನು ನಾನೇನೆಂತು ಶಪಿಸಲಿ? ಸರ್ವೇಶ್ವರನೇ ಧಿಕ್ಕರಿಸಿಲ್ಲದವರನ್ನು ನಾನೇನೆಂತು ಧಿಕ್ಕರಿಸಲಿ?
ನಾನವರನ್ನು ಕಂಡೆ ಬೆಟ್ಟದ ಶಿಖರದಿಂದ ನೋಡಿದೆನವರನ್ನು ಗುಡ್ಡದೆತ್ತರದಿಂದ,
೧೦
ಯಕೋಬ್ಯರು ಧೂಳಿನಷ್ಟು ಅಸಂಖ್ಯ ಅವರನ್ನು ಲೆಕ್ಕಿಸಲು ಯಾರಿಂದ ಸಾಧ್ಯ? ಕಾಲ್ಭಾಗವನ್ನಾದರೂ ಹೇಳಲು ಯಾರಿಂದ ಸಾಧ್ಯ? ನಾ ಸಾಯಬೇಕು ಆ ಸಜ್ಜನರು ಸಾಯುವ ರೀತಿ ನನ್ನದಾಗಬೇಕು ಅವರಿಗಾಗುವ ಅಂತ್ಯಗತಿ.”
೧೧
ಈ ನುಡಿಗಳನ್ನು ಕೇಳಿದ ಬಾಲಾಕನು ಅವನಿಗೆ, “ಇದೇನು ನೀವು ಮಾಡಿದ್ದು? ನನ್ನ ಶತ್ರುಗಳನ್ನು ಶಪಿಸುವುದಕ್ಕೆ ನಾನು ನಿಮ್ಮನ್ನು ಕರೆದೆ. ಶಪಿಸುವುದಕ್ಕೆ ಬದಲು ಅವರನ್ನು ಆಶೀರ್ವದಿಸಿಬಿಟ್ಟಿರಲ್ಲಾ?” ಎಂದು ಹೇಳಿದನು.
೧೨
ಅದಕ್ಕೆ ಬಿಳಾಮನು, “ಸರ್ವೇಶ್ವರ ನುಡಿಸುವುದನ್ನೇ ನಾನು ನುಡಿಯಬೇಕಾಗಿದೆಯಲ್ಲವೆ?” ಎಂದುಬಿಟ್ಟನು.
೧೩
ಆಗ ಬಾಲಾಕನು, “ದಯಮಾಡಿ ನನ್ನೊಡನೆ ಇನ್ನೊಂದು ಸ್ಥಳಕ್ಕೆ ಬನ್ನಿ. ಅಲ್ಲಿಂದಲೂ ಅವರನ್ನು ನೋಡಬಹುದು. ಆದರೆ ಅವರೆಲ್ಲರೂ ಕಾಣಿಸರು. ಅವರ ಒಂದು ಕೊನೆ ತುಣುಕು ಮಾತ್ರ ಕಾಣಿಸುವುದು.
೧೪
ಅಲ್ಲಿಂದ ನನ್ನ ಪರವಾಗಿ ಅವರನ್ನು ಶಪಿಸಬೇಕು” ಎಂದು ಹೇಳಿ ಪಿಸ್ಗಾ ಬೆಟ್ಟದ ತುದಿಯಲ್ಲಿರುವ ‘ಚೋಫೀಮ್ ಬೈಲು’ ಎಂಬ ಸ್ಥಳಕ್ಕೆ ಕರೆದುಕೊಂಡು ಹೋದನು. ಅಲ್ಲಿಯೂ ಏಳು ಬಲಿಪೀಠಗಳನ್ನು ಕಟ್ಟಿಸಿ ಪ್ರತಿ ಒಂದು ಪೀಠದಲ್ಲಿ ಒಂದು ಹೋರಿ ಮತ್ತು ಟಗರನ್ನು ದಹನಬಲಿಯಾಗಿ ಸಮರ್ಪಿಸಿದನು.
೧೫
ಬಿಳಾಮನು ಅವನಿಗೆ, “ನೀನು ಇಲ್ಲಿ ದಹನಬಲಿಯರ್ಪಿಸುವ ಸ್ಥಳದಲ್ಲಿರು. ನಾನು ಅತ್ತ ಕಡೆ ಹೋಗಿ (ಸರ್ವೇಶ್ವರನನ್ನು) ಸಂದರ್ಶಿಸಿ ಬರುತ್ತೇನೆ,” ಎಂದು ಹೇಳಿಹೋದನು.
೧೬
ಸರ್ವೇಶ್ವರ ಬಿಳಾಮನಿಗೆ ದರ್ಶನಕೊಟ್ಟು ಅವನು ಹೇಳಬೇಕಾದುದನ್ನು ಕಲಿಸಿಕೊಟ್ಟು, “ನೀನು ಬಾಲಾಕನ ಬಳಿಗೆ ಹಿಂದಿರುಗಿ ನಾನು ಹೇಳಿದಂತೆಯೇ ತಿಳಿಸು,” ಎಂದರು.
೧೭
ಬಿಳಾಮನು ಬಾಲಾಕನ ಬಳಿಗೆ ಬಂದಾಗ ಬಾಲಾಕನು ತಾನು ದಹನಬಲಿಯನ್ನು ಸಮರ್ಪಿಸಿದ ಪೀಠದ ಹತ್ತಿರವೇ ನಿಂತಿದ್ದನು. ಮೋವಾಬ್ಯರ ಮುಖ್ಯಸ್ಥರು ಅವನ ಸಂಗಡವೇ ಇದ್ದರು.
೧೮
ಬಿಳಾಮನು ಪದ್ಯರೂಪವಾಗಿ ಹೀಗೆಂದು ನುಡಿದನು: “ಬಾಲಾಕನೇ, ಕಿವಿಗೊಟ್ಟು ಕೇಳು: ಚಿಪ್ಪೋರನ ಪುತ್ರನೇ, ನನ್ನ ಮಾತನ್ನು ಆಲಿಸು:
೧೯
ನರಮಾನವರಂತೆ ದೇವರು ಎರಡು ಮಾತಿನವರಲ್ಲ ನರಪುತ್ರರಂತೆ ಮನಸ್ಸನ್ನು ಬದಲಾಯಿಸಿಕೊಳ್ಳುವವರಲ್ಲ. ಆತ ನುಡಿದಂತೆ ನಡೆಯದಿರುತ್ತಾನೋ?
೨೦
ಆ ಜನರನ್ನು ಆಶೀರ್ವದಿಸಬೇಕೆಂಬ ಆದೇಶ ನನಗಿರುವುದು; ಸರ್ವೇಶ್ವರನಿತ್ತ ಆಶೀರ್ವಾದವನ್ನು ನಾನು ಮಾರ್ಪಡಿಸಲಾಗದು.
೨೧
ಈ ಯಕೋಬ್ಯರಲ್ಲಿಲ್ಲ ಆಪತ್ತಿನ ಸೂಚನೆ ಈ ಇಸ್ರಯೇಲರಲ್ಲಿಲ್ಲ ವಿಪತ್ತಿನ ಸಾಧ್ಯತೆ ಸರ್ವೇಶ್ವರನೇ ಇಹನು ಅವರ ಸಂಗಡ ದೇವರಾಗಿ ಜಯಘೋಷ ಕೇಳಿಸುತ್ತಿದೆ ಅವರ ಅರಸನಿಗಾಗಿ!
೨೨
ಅವರನ್ನು ದೇವರೇ ಕರೆದು ತಂದ ಈಜಿಪ್ಟಿನಿಂದ ಅವರಿಗಿದೆ ಕಾಡುಕೋಣದಂಥ ಶಕ್ತಿಸಾಮರ್ಥ್ಯ!
೨೩
ಯಕೋಬ್ಯರಿಗೆ ವಿರುದ್ಧವಾದ ಶಕುನವಿಲ್ಲ ಇಸ್ರಯೇಲರಿಗೆ ವಿರುದ್ಧವಾದ ತಂತ್ರಮಂತ್ರವಿಲ್ಲ. ತಾನು ಮಾಡುವುದನ್ನು ತತ್ಕಾಲದಲ್ಲೇ ದೇವ ತಿಳಿಸುತ್ತಾನೆ ಯಕೋಬ್ಯರಿಗೆ ಅದನ್ನು ಸೂಚಿಸುತ್ತಾನೆ ಸಮಯೋಚಿತವಾಗಿ ಆ ಇಸ್ರಯೇಲರಿಗೆ.
೨೪
ಈ ಜನಾಂಗ ಯುವಸಿಂಹದಂತೆ ನಿಂತಿಹುದು ಮೃಗೇಂದ್ರನಂತೆ ಮೃಗ ಕೊಂದು, ರಕ್ತ ಕುಡಿದು, ಮಾಂಸ ತಿಂದು, ತೃಪ್ತಿಹೊಂದದ ಹೊರತು ಆ ಸಿಂಹ ವಿರಮಿಸದು.”
೨೫
ಆಗ ಬಾಲಾಕನು ಅವನಿಗೆ, “ಹಾಗಾದರೆ ನೀನು ಅವರನ್ನು ಶಪಿಸಲೂ ಬೇಡ, ಆಶೀರ್ವದಿಸಲೂ ಬೇಡ,” ಎಂದನು.
೨೬
ಅದಕ್ಕೆ ಬಿಳಾಮನು, “ಸರ್ವೇಶ್ವರ ಆಜ್ಞಾಪಿಸಿದ್ದನ್ನೇ ನಾನು ಮಾಡಬೇಕೆಂದು ನಿನಗೆ ಹೇಳಲಿಲ್ಲವೆ?” ಎಂದನು.
೨೭
ಆ ಬಳಿಕ ಬಾಲಾಕನು, “ಬಾ, ನಿನ್ನನ್ನು ಬೇರೊಂದು ಸ್ಥಳಕ್ಕೆ ಕರೆದುಕೊಂಡು ಹೋಗುತ್ತೇನೆ. ಬಹುಶಃ ಅಲ್ಲಿಯಾದರು ನೀನು ಅವರನ್ನು ಶಪಿಸುವಂತೆ ದೇವರು ಅನುಮತಿಸಬಹುದು,” ಎಂದು ಹೇಳಿದನು.
೨೮
ಅಲ್ಲಿಂದ ಅವನನ್ನು ಪೆಗೋರ್ ಎಂಬ ಬೆಟ್ಟದ ತುದಿಗೆ ಕರೆದುಕೊಂಡು ಹೋದನು. ಆ ಬೆಟ್ಟದ ಕೆಳಗಿರುವ ‘ಯೆಷೀಮೋನ್’ ಎಂಬ ಮರುಭೂಮಿ ಕಾಣಿಸುತ್ತಿತ್ತು.
೨೯
ಬಿಳಾಮನು ಬಾಲಾಕನಿಗೆ, “ಇಲ್ಲೂ, ಏಳು ಬಲಿಪೀಠಗಳನ್ನು ಕಟ್ಟಿಸಿ, ಏಳು ಹೋರಿಗಳನ್ನು ಹಾಗು ಏಳು ಟಗರುಗಳನ್ನು ಸಿದ್ಧಪಡಿಸು,” ಎಂದನು.
೩೦
ಬಾಲಾಕನು ಅಂತೆಯೇ ಮಾಡಿ ಪ್ರತಿಯೊಂದು ಪೀಠದಲ್ಲೂ ಒಂದು ಹೋರಿಯನ್ನೂ ಒಂದು ಟಗರನ್ನೂ ದಹನಬಲಿಯಾಗಿ ಸಮರ್ಪಿಸಿದನು.