A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ಸಂಖ್ಯಾಕಾಂಡ ೨೧ಇಸ್ರಯೇಲರು ಅತಾರೀಮ್ ಮಾರ್ಗವಾಗಿ ಬರುತ್ತಿದ್ದಾರೆಂದು ನೆಗೇಬಿನಲ್ಲಿ ಕಾನಾನ್ ನಾಡಿನ ದಕ್ಷಿಣ ಪ್ರಾಂತ್ಯದಲ್ಲಿದ್ದ ಕಾನಾನ್ಯನಾದ ಅರಾದ್ ಪಟ್ಟಣದ ಅರಸನು ಕೇಳಿದನು. ಅವನು ಇಸ್ರಯೇಲರ ಮೇಲೆ ಯುದ್ಧಮಾಡಿ ಕೆಲವರನ್ನು ಸೆರೆಹಿಡಿದನು.
ಇಸ್ರಯೇಲರು ಸರ್ವೇಶ್ವರನಿಗೆ ಹರಕೆ ಮಾಡಿಕೊಂಡರು: “ನಾವು ಈ ಜನರನ್ನು ಜಯಿಸುವಂತೆ ಅನುಗ್ರಹಿಸಿದರೆ ಅವರ ಗ್ರಾಮಗಳನ್ನು ಪೂರ್ಣ ಹಾಳುಮಾಡಿ ಸರ್ವೇಶ್ವರನಾದ ನಿಮಗಾಗಿಯೇ ಮೀಸಲಿಡುತ್ತೇವೆ,” ಎಂದರು.
ಸರ್ವೇಶ್ವರ ಅವರ ಪ್ರಾರ್ಥನೆಯನ್ನು ಆಲಿಸಿದರು; ಅವರು ಆ ಕಾನಾನ್ಯರನ್ನು ಜಯಿಸುವಂತೆ ಮಾಡಿದರು. ಇಸ್ರಯೇಲರು ಆ ಜನರನ್ನೂ ಅವರ ಗ್ರಾಮಗಳನ್ನೂ ನಿಶ್ಯೇಷವಾಗಿ ನಾಶಮಾಡಿಬಿಟ್ಟರು. ಈ ಕಾರಣ ಆ ಪ್ರದೇಶಕ್ಕೆ ‘ಹೊರ್ಮ‘ ಎಂದು ಹೆಸರಾಯಿತು.
ಇಸ್ರಯೇಲರು ಹೋರ್ ಬೆಟ್ಟದಿಂದ ಹೊರಟು ಎದೋಮ್ಯರ ನಾಡನ್ನು ಸುತ್ತಿಕೊಂಡು ಹೋಗುವುದಕ್ಕೆ ಕೆಂಪುಕಡಲಿನ ಮಾರ್ಗವಾಗಿ ಪ್ರಯಾಣ ಮಾಡಿದರು. ಈ ಮಾರ್ಗದ ಆಯಾಸದಿಂದ ಅವರಿಗೆ ಬೇಸರವಾಯಿತು.
ಆಗ ಅವರು ದೇವರಿಗೂ ಮೋಶೆಗೂ ವಿರುದ್ಧ ಮಾತಾಡತೊಡಗಿದರು: “ನೀವು ನಮ್ಮನ್ನು ಈ ಮರಳುಗಾಡಿನಲ್ಲಿ ಕೊಲ್ಲಬೇಕೆಂದು ಈಜಿಪ್ಟ್ ದೇಶದಿಂದ ಕರೆದುಕೊಂಡು ಬಂದಿರೋ? ಇಲ್ಲಿ ಆಹಾರವಿಲ್ಲ, ನೀರೂ ಇಲ್ಲ; ಈ ನಿಸ್ಸಾರವಾದ ಆಹಾರವನ್ನು ತಿಂದು ತಿಂದು ನಮಗೆ ಬೇಸರವಾಗಿದೆ,” ಎಂದು ಹೇಳತೊಡಗಿದರು.
ಅದಕ್ಕೆ ಸರ್ವೇಶ್ವರ ವಿಷಸರ್ಪಗಳನ್ನು ಅವರ ನಡುವೆ ಬರಮಾಡಿದರು. ಅವು ಆ ಜನರನ್ನು ಕಚ್ಚಿದವು. ಬಹುಜನ ಸತ್ತುಹೋದರು.
ಆಗ ಜನರು ಮೋಶೆಯ ಬಳಿಗೆ ಬಂದು, “ನಾವು ನಿಮಗೂ ಸರ್ವೇಶ್ವರನಿಗೂ ವಿರುದ್ಧ ಮಾತಾಡಿ ದೋಷಿಗಳಾದೆವು. ಈ ಸರ್ಪಗಳು ನಮ್ಮನ್ನು ಬಿಟ್ಟು ತೊಲಗುವಂತೆ ಸರ್ವೇಶ್ವರನನ್ನು ಪ್ರಾರ್ಥಿಸಿ,” ಎಂದು ಬೇಡಿಕೊಂಡರು.
ಮೋಶೆ ಜನರ ಪರವಾಗಿ ಪ್ರಾರ್ಥಿಸಿದನು. ಸರ್ವೇಶ್ವರ ಅವನಿಗೆ, “ನೀನು ಕಂಚಿನಿಂದ ವಿಷಸರ್ಪದ ಆಕಾರವನ್ನು ಮಾಡಿಸಿ, ಧ್ವಜಸ್ತಂಭದ ಮೇಲೆ ಎತ್ತಿ ನಿಲ್ಲಿಸು. ಸರ್ಪಗಳಿಂದ ಗಾಯಗೊಂಡ ಪ್ರತಿ ಒಬ್ಬನು ಅದನ್ನು ನೋಡಿ ಬದುಕಿಕೊಳ್ಳುವನು,” ಎಂದು ಆಜ್ಞಾಪಿಸಿದರು.
ಅಂತೆಯೇ ಮೋಶೆ ಕಂಚಿನಿಂದ ಸರ್ಪದ ಆಕಾರವನ್ನು ಮಾಡಿಸಿ ಧ್ವಜಸ್ತಂಭದ ಮೇಲೆ ಇಡಿಸಿದನು. ಸರ್ಪಗಳಿಂದ ಗಾಯಗೊಂಡವರಲ್ಲಿ ಯಾರು ಯಾರು ಆ ಕಂಚಿನ ಸರ್ಪವನ್ನು ಲಕ್ಷ್ಯವಿಟ್ಟು ನೋಡಿದರೋ ಅವರೆಲ್ಲರೂ ಬದುಕಿಕೊಂಡರು.
೧೦
ತರುವಾಯ ಇಸ್ರಯೇಲರು ಅಲ್ಲಿಂದ ಹೊರಟು ಓಬೋತಿನಲ್ಲಿ ಇಳಿದುಕೊಂಡರು.
೧೧
ಓಬೋತಿನಿಂದ ಹೊರಟು ಮೋವಾಬ್ ನಾಡಿನ ಪೂರ್ವ ದಿಕ್ಕಿನ ಮರುಭೂಮಿಯಲ್ಲಿ ಇಯ್ಯೇಅಬಾರೀಮಿನಲ್ಲಿ ಇಳಿದುಕೊಂಡರು.
೧೨
ಅಲ್ಲಿಂದ ಹೊರಟು ಜೆರೆಬ್‍ ಕಣಿವೆಯಲ್ಲಿ ಇಳಿದುಕೊಂಡರು.
೧೩
ಅಲ್ಲಿಂದ ಹೊರಟು ಅರ್ನೋನ್ ಹೊಳೆಯ ಆಚೆಕಡೆಯಲ್ಲಿ ಇಳಿದುಕೊಂಡರು. ಅರ್ನೋನ್ ಹೊಳೆ ಅಮೋರಿಯರ ಪ್ರದೇಶದಿಂದಾಚೆ ಇರುವ ಮರುಭೂಮಿಯಲ್ಲಿ ಮೋವಾಬ್ಯರಿಗೂ ಅಮೋರಿಯರಿಗೂ ನಡುವೆ ಇದ್ದು ಮೋಬಾಬ್ಯರ ಎಲ್ಲೆಯಾಗಿದೆ.
೧೪
ಅದನ್ನು ಉಲ್ಲೇಖಿಸುತ್ತಾ, “ಸರ್ವೇಶ್ವರನ ವಿಷಯ” ಎಂಬ ಗ್ರಂಥ ಹೀಗೆನ್ನುತ್ತದೆ: ‘ಸೂಫಕ್ಕೆ ಸೇರಿದ ವಾಹೇಬನ್ನು, ಅರ್ನೋನ್ ಹೊಳೆಗೆ ಕೂಡುವ ಹಳ್ಳಗಳನ್ನು,
೧೫
ಆರ್ ಪಟ್ಟಣದ ತನಕ ಮೋವಾಬಿನ ಎಲ್ಲೆಯಾಗಿರುವ ಕೊರಕಲನ್ನು’ ದಾಟಿದ್ದಾಯಿತು.
೧೬
ಅಲ್ಲಿಂದ ಅವರು ಬೇರ್ ಎಂಬ ಸ್ಥಳಕ್ಕೆ ಬಂದರು. “ಜನರನ್ನು ಸೇರಿಸು, ಅವರಿಗೆ ಜಲಧಾರೆಯನ್ನು ಕೊಡುವೆನು” ಎಂದು ಸರ್ವೇಶ್ವರ ಮೋಶೆಗೆ ಹೇಳಿದ್ದು ಇಲ್ಲಿನ ಬಾವಿಯನ್ನು ಕುರಿತೇ.
೧೭
ಆ ಕಾಲದಲ್ಲಿ ಇಸ್ರಯೇಲರು ಹಾಡಿದ ಗೀತೆ ಇದು: ಬಾವಿಯೇ, ಎದ್ದು ಬಾ ಉಕ್ಕುತ್ತಾ ಜನರೇ, ಹಾಡಿ ಹಿಗ್ಗುತ್ತಾ!
೧೮
ಹಿರಿಯರು ತೋಡಿದರೀ ಬಾವಿಯನ್ನು ಕೋಲುಕಡ್ಡಿಗಳಿಂದ ಪ್ರಜಾಧಿಪತಿಗಳು ಅಗೆದರಿದನ್ನು ರಾಜದಂಡಗಳಿಂದ.
೧೯
ಅವರು ಮರುಭೂಮಿಯನ್ನು ಬಿಟ್ಟು ಮತ್ತಾನಕ್ಕೂ ಮತ್ತಾನದಿಂದ ನಹಲೀಯೇಲಿಗೂ ನಹಲೀಯೇಲಿನಿಂದ ಬಾಮೋತಿಗೂ ಬಂದರು.
೨೦
ಬಾಮೋತಿನಿಂದ ಮೋವಾಬ್ಯರ ಬೈಲುಪ್ರದೇಶದಲ್ಲಿರುವ ಕಣಿವೆಗೆ, ಅಂದರೆ ‘ಪಿಸ್ಗಾ’ ಎಂಬ ಮಲೆನಾಡಿನ ಅಂಚಿಗೆ ಬಂದರು. ಕೆಳಗಿರುವ ‘ಯೆಷೀಮೋನ್’ ಎಂಬ ಮರಳುಗಾಡು ಆ ಗುಡ್ಡದ ಮೇಲಿಂದ ಕಾಣಿಸುತ್ತದೆ.
೨೧
ಇಸ್ರಯೇಲರು ಅಮೋರಿಯರ ಅರಸನಾದ ಸೀಹೋನನ ಬಳಿಗೆ ದೂತರನ್ನು ಕಳಿಸಿದರು.
೨೨
“ನಿಮ್ಮ ನಾಡನ್ನು ದಾಟಿಹೋಗುವುದಕ್ಕೆ ನಮಗೆ ಅಪ್ಪಣೆಯಾಗಬೇಕು, ನಾವು ಹೊಲಗದ್ದೆಗಳ ಮೇಲಾಗಲಿ, ದ್ರಾಕ್ಷಿತೋಟಗಳ ಮೂಲಕವಾಗಲಿ ಹಾದುಹೋಗುವುದಿಲ್ಲ; ನಿಮ್ಮ ನಾಡನ್ನು ದಾಟುವವರೆಗೂ ರಾಜಮಾರ್ಗದಲ್ಲೇ ನಡೆದುಹೋಗುತ್ತೇವೆ,” ಎಂದು ಹೇಳಿಸಿದರು.
೨೩
ಆದರೆ ಸೀಹೋನನು ತನ್ನ ನಾಡನ್ನು ದಾಟುವುದಕ್ಕೆ ಇಸ್ರಯೇಲರಿಗೆ ಅಪ್ಪಣೆಕೊಡಲಿಲ್ಲ. ಬದಲಿಗೆ ಅವರನ್ನು ಎದುರಿಸಲು ತನ್ನ ಜನರೆಲ್ಲರನ್ನು ಕೂಡಿಸಿಕೊಂಡು ಮರುಭೂಮಿಗೆ ಹೊರಟು, ಯಹಚಕ್ಕೆ ಬಂದು, ಅವರೊಡನೆ ಯುದ್ಧಮಾಡಿದನು.
೨೪
ಇಸ್ರಯೇಲರು ಅವನ ಜನರನ್ನು ಸೋಲಿಸಿದರು, ಕತ್ತಿಯಿಂದ ಸಂಹರಿಸಿದರು. ಅರ್ನೋನ್ ಹೊಳೆಯಿಂದ ಯಬ್ಬೋಕ್ ಹೊಳೆಯವರೆಗೂ ಹಾಗೂ ಅಮ್ಮೋನಿಯರ ಎಲ್ಲೆಯವರೆಗೂ ಇದ್ದ ಸೀಹೋನನ ನಾಡನ್ನೆಲ್ಲಾ ಸ್ವಾಧೀನ ಮಾಡಿಕೊಂಡರು. ಅಮ್ಮೋನಿಯರ ಎಲ್ಲೆ ಒಂದು ದುರ್ಗವಾಗಿತ್ತು.
೨೫
ಇಸ್ರಯೇಲರು ಈ ಪಟ್ಟಣಗಳನ್ನೆಲ್ಲಾ ವಶಮಾಡಿಕೊಂಡರು. ಹೆಷ್ಬೋನಿನಲ್ಲೂ ಅದಕ್ಕೆ ಸೇರಿದ ಗ್ರಾಮಗಳಲ್ಲೂ ಅಮೋರಿಯರ ಬೇರೆ ಎಲ್ಲಾ ಊರುಗಳಲ್ಲೂ ವಾಸಿಸಿದರು.
೨೬
ಹೆಷ್ಬೋನ್ ಪಟ್ಟಣ ಅಮೋರಿಯರ ಅರಸನಾದ ಸೀಹೋನನ ರಾಜಧಾನಿ. ಅವನು ಮೋವಾಬ್ಯರ ಹಿಂದಿನ ಅರಸನ ಮೇಲೆ ಯುದ್ಧಮಾಡಿ ಅರ್ನೋನ್ ಹೊಳೆಯವರೆಗೂ ಅವನ ನಾಡನ್ನೆಲ್ಲಾ ಸ್ವಾಧೀನಮಾಡಿಕೊಂಡಿದ್ದನು.
೨೭
ಈ ವಿಷಯವಾಗಿಯೇ ಕವಿಗಳು ಹೀಗೆಂದು ಹಾಡಿದ್ದಾರೆ: ಹೆಷ್ಬೋನಿಗೆ ಬನ್ನಿ, ಕಟ್ಟಿ ಅದನ್ನು ಪುನಃ ಮತ್ತೆ ಸ್ಥಾಪನೆ ಆಗಲಿ ಸೀಹೋನನಾ ಪಟ್ಟಣ.
೨೮
ಸೀಹೋನನಾ ಪಟ್ಟಣ, ಆ ಹೆಷ್ಬೋನ್, ಅಲ್ಲಿಂದಲೆ ಹೊರಟು ಬಂದಿತು ಅಗ್ನಿಜ್ವಾಲೆ. ದಹಿಸಿ ಬಿಟ್ಟಿತದು ಮೋವಾಬ್ಯರ ರಾಜಧಾನಿಯಾದ ಆರ್ ನಗರವನ್ನು, ಅರ್ನೋನ್ ಹೊಳೆಯ ಬಳಿಯ ಪೂಜಾಸ್ಥಳಗಳ ದೇವತೆಗಳನ್ನು.
೨೯
ಮೋವಾಬ್ಯರೇ, ನಿಮಗೆ ಧಿಕ್ಕಾರ! ಕೆಮೋಷಿನ ಭಕ್ತರೇ, ನಿಮಗೆ ಪರಿವಿನಾಶ! ಮಾಡಿಹನಾತ ತನ್ನ ಕುವರರನ್ನು ದೇಶಭ್ರಷ್ಟರನ್ನಾಗಿ ತನ್ನ ಕುವರಿಯರನ್ನು ಸೆರೆಯಾಳುಗಳನ್ನಾಗಿ ಅಮೋರಿಯರ ಅರಸ ಸೀಹೋನನಿಗೆ ಸೆರೆಯವರನ್ನಾಗಿ.
೩೦
ಅವರನ್ನು ಹೊಡೆದೆವು ನಾವು ಬಿಲ್ಲುಬಾಣಗಳಿಂದ, ಹೆಷ್ಬೋನಿನಿಂದ ದೀಬೋನಿನವರೆಗೆ ಸರ್ವನಾಶ! ಹಾಳು ಮಾಡಿದೆವು ಮೇದೆಬಾ ಊರಿನ ನೆರೆಯಲ್ಲಿರುವ ನೋಫಹದ ತನಕ.
೩೧
ಹೀಗೆ ಇಸ್ರಯೇಲರು ಅಮ್ಮೋನಿಯರ ನಾಡಿನಲ್ಲಿ ವಾಸಮಾಡುವಂತಾಯಿತು.
೩೨
ಬಳಿಕ ಮೋಶೆ ಯಗ್ಜೇರನ್ನು ನೋಡಿ ಬರಲು ಗೂಢಚಾರರನ್ನು ಕಳಿಸಿದನು. ಇದಾದ ಬಳಿಕ ಇಸ್ರಯೇಲರು ಅದರ ಗ್ರಾಮಗಳನ್ನು ವಶಪಡಿಸಿಕೊಂಡು ಅಲ್ಲಿದ್ದ ಅಮೋರಿಯರನ್ನು ಹೊರಡಿಸಿಬಿಟ್ಟರು.
೩೩
ಇಸ್ರಯೇಲರು ಹಿಂದಿರುಗಿ ಬಾಷಾನಿನ ಮಾರ್ಗವಾಗಿ ಪ್ರಯಾಣ ಮಾಡಿದರು. ಬಾಷಾನಿನ ಅರಸ ಓಗನು ತನ್ನ ಜನರೆಲ್ಲರೊಡನೆ ಅವರಿಗೆ ವಿರುದ್ಧ ಯುದ್ಧಮಾಡಲು ಎದ್ರೈವೂರಿಗೆ ಹೊರಟುಬಂದನು.
೩೪
ಸರ್ವೇಶ್ವರ ಮೋಶೆಗೆ, “ಅವನಿಗೆ ಭಯಪಡಬೇಡ; ಅವನನ್ನೂ ಅವನ ಸಮಸ್ತ ಪ್ರಜೆಯನ್ನೂ ನಾಡನ್ನೂ ನಿನ್ನ ಕೈವಶಮಾಡಿದ್ದೇನೆ. ನೀನು ಹೆಷ್ಬೋನಿನಲ್ಲಿ ಅಮೋರಿಯರ ಅರಸ ಸೀಹೋನನಿಗೆ ಮಾಡಿದಂತೆಯೇ ಇವನಿಗೂ ಮಾಡು,” ಎಂದು ಹೇಳಿದರು.
೩೫
ಹಾಗೆಯೇ ಇಸ್ರಯೇಲರು ಅವನನ್ನೂ ಅವನ ಮಕ್ಕಳನ್ನೂ ಅವನ ಜನರೆಲ್ಲರನ್ನೂ, ಒಬ್ಬನನ್ನೂ ಬಿಡದೆ ಕೊಂದು ಅವನ ನಾಡನ್ನು ಸ್ವಾಧೀನಪಡಿಸಿಕೊಂಡರು.