A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ಸಂಖ್ಯಾಕಾಂಡ ೨೦



ಇಸ್ರಯೇಲ್ ಸಮಾಜದವರು ಮೊದಲನೆಯ ತಿಂಗಳಲ್ಲಿ ‘ಚಿನ್’ ಎಂಬ ಮರುಭೂಮಿಗೆ ಬಂದು ಕಾದೇಶಿನಲ್ಲಿ ಇಳಿದುಕೊಂಡರು. ಅಲ್ಲಿ ಮಿರ್ಯಾಮಳು ಮೃತಳಾದಳು; ಆಕೆಯನ್ನು ಅಲ್ಲೇ ಸಮಾಧಿಮಾಡಿದರು.
ಜನರಿಗೆ ನೀರು ಇಲ್ಲದೆಹೋಯಿತು. ಅವರು ಮೋಶೆ ಮತ್ತು ಆರೋನರ ವಿರುದ್ಧ ಸಭೆಸೇರಿ ಮೋಶೆಯ ಸಂಗಡ ವಾದಿಸತೊಡಗಿದರು:
“ಸರ್ವೇಶ್ವರನ ಸನ್ನಿಧಿಯಲ್ಲಿ ನಮ್ಮ ಬಂಧುಬಳಗದವರು ಸತ್ತಂತೆ ನಾವೂ ಸತ್ತುಹೋಗಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು! ನೀವು ಸರ್ವೇಶ್ವರನ ಪ್ರಜೆಯಾದ
ನಮ್ಮನ್ನು ಈ ಮರಳುಗಾಡಿಗೆ ಕರೆದುಕೊಂಡು ಬಂದುದೇಕೆ? ನಾವೂ ನಮ್ಮ ಜಾನುವಾರುಗಳೂ ಇಲ್ಲಿ ಸಾಯಬೇಕೆಂದೊ?
ಈಜಿಪ್ಟ್ ದೇಶದಿಂದ ನಮ್ಮನ್ನು ಬರಮಾಡಿದ್ದು ಈ ಕೀಳು ಸ್ಥಳಕ್ಕೆ ಸೇರಿಸಲಿಕ್ಕೋ? ಈ ನೆಲದಲ್ಲಿ ದವಸಧಾನ್ಯ ಬೆಳೆಯುವಂತಿಲ್ಲ; ಅಂಜೂರವಿಲ್ಲ, ದ್ರಾಕ್ಷಿಯಿಲ್ಲ, ದಾಳಿಂಬೆಯಿಲ್ಲ, ಕುಡಿಯುವುದಕ್ಕೆ ನೀರು ಕೂಡ ಇಲ್ಲ“ ಎಂದು ದೂರಿದರು.
ಮೋಶೆ ಮತ್ತು ಆರೋನರು ಆ ಜನ ಸಂದಣಿಯನ್ನು ಬಿಟ್ಟು, ದೇವದರ್ಶನದ ಗುಡಾರದ ಬಾಗಿಲ ಬಳಿಗೆ ಬಂದು ಸಾಷ್ಟಾಂಗವೆರಗಿದರು. ಆಗ ಸರ್ವೇಶ್ವರನ ತೇಜಸ್ಸು ಅವರಿಗೆ ಕಾಣಿಸಿತು.
ಆಗ ಸರ್ವೇಶ್ವರ ಮೋಶೆಗೆ, “ನೀನು ಆ ಕೋಲನ್ನು ಕೈಗೆ ತೆಗೆದುಕೋ. ನೀನು ಮತ್ತು ನಿನ್ನ ಸಹೋದರ ಆರೋನನು ಜನಸಮೂಹದವರನ್ನು ಸಭೆ ಸೇರಿಸಿರಿ. ಅವರೆಲ್ಲರ ಎದುರಿನಲ್ಲೇ ನೀರುಕೊಡಬೇಕೆಂದು ಆ ಕಡಿದಾದ ಬಂಡೆಗೆ ಆಜ್ಞೆಮಾಡು.
ಅದರಿಂದ ನೀರು ಹೊರಟು ಬರುವುದು. ಅದನ್ನು ಜನಸಮೂಹದವರಿಗೂ ಅವರ ಜಾನುವಾರುಗಳಿಗೂ ಕುಡಿಯಲು ಕೊಡಬಹುದು,” ಎಂದರು.
ಸರ್ವೇಶ್ವರ ಆಜ್ಞಾಪಿಸಿದಂತೆಯೇ ಮೋಶೆ ಆ ಕೋಲನ್ನು ಅವರ ಸನ್ನಿಧಿಯಿಂದ ತೆಗೆದುಕೊಂಡನು.
೧೦
ಆರೋನನ ಜೊತೆಯಲ್ಲಿ ಜನಸಮೂಹದವರ ಬಳಿಗೆ ಹೋಗಿ ಕಡಿದಾದ ಆ ಬಂಡೆಗೆದುರಾಗಿ ಅವರನ್ನು ಸಭೆಸೇರಿಸಿದನು. ಅವರನ್ನು ಸಂಬೋಧಿಸುತ್ತಾ, “ದಂಗೆಕಾರರೇ ಕೇಳಿ; ಈ ಬಂಡೆಯಿಂದ ನಿಮಗೆ ನಾವು ನೀರನ್ನು ಬರಮಾಡಬೇಕೋ,” ಎಂದು ಹೇಳಿ
೧೧
ಕೈಯೆತ್ತಿ ತನ್ನ ಕೈಯಲ್ಲಿದ್ದ ಕೋಲಿನಿಂದ ಆ ಬಂಡೆಯನ್ನು ಎರಡು ಸಾರಿ ಹೊಡೆದನು. ನೀರು ಪ್ರವಾಹವಾಗಿ ಹೊರಟಿತು. ಜನಸಮೂಹದವರೂ ಅವರ ಜಾನುವಾರಗಳೂ ಕುಡಿದರು.
೧೨
ಬಳಿಕ ಸರ್ವೇಶ್ವರ ಮೋಶೆ ಮತ್ತು ಆರೋನರಿಗೆ, “ನೀವು ನನ್ನನ್ನು ನಂಬದೇಹೋದಿರಿ. ಇಸ್ರಯೇಲರ ಮುಂದೆ ನನ್ನ ಗೌರವವನ್ನು ಕಾಪಾಡದೆಹೋದಿರಿ. ಆದುದರಿಂದ ಈ ಸಮಾಜದವರನ್ನು ನಾನು ವಾಗ್ದಾನಮಾಡಿದ ನಾಡಿಗೆ ನೀವು ಕರೆದುಕೊಂಡು ಹೋಗಕೂಡದು,” ಎಂದು ಹೇಳಿದರು.
೧೩
ಇಸ್ರಯೇಲರು ಅಲ್ಲಿ ಸರ್ವೇಶ್ವರನ ಸಂಗಡ ವಾದಮಾಡಿದ್ದರಿಂದ ಆ ನೀರಿನ ಪ್ರವಾಹಕ್ಕೆ ‘ಮೆರೀಬಾ’ ಎಂದು ಹೆಸರಾಯಿತು. ಅಲ್ಲಿ ಸರ್ವೇಶ್ವರ ತಮ್ಮ ಪರಮ ಪಾವನತೆಯನ್ನು ವ್ಯಕ್ತಪಡಿಸಿದರು.
೧೪
ಮೋಶೆ ಕಾದೇಶಿನಿಂದ ಎದೋಮ್ಯರ ಅರಸನ ಬಳಿಗೆ ದೂತರನ್ನು ಕಳಿಸಿದನು. “ತಮ್ಮ ಸಂಬಂಧಿಕರಾದ ಇಸ್ರಯೇಲರು ತಮ್ಮಲ್ಲಿ ಮಾಡುವ ಮನವಿ ಇದು - ನಮಗೆ ಸಂಭವಿಸಿದ ಕಷ್ಟದುಃಖಗಳೆಲ್ಲಾ ತಮಗೆ ತಿಳಿದೇ ಇವೆ.
೧೫
ನಮ್ಮ ಪೂರ್ವಜರು ಈಜಿಪ್ಟ್ ದೇಶಕ್ಕೆ ಹೋದದ್ದು, ಅಲ್ಲಿ ನಾವು ಬಹು ದಿವಸ ವಾಸವಾಗಿದ್ದದ್ದು, ಈಜಿಪ್ಟಿನವರು ನಮ್ಮನ್ನೂ ನಮ್ಮ ಪೂರ್ವಜರನ್ನೂ ಹಿಂಸಿಸಿದ್ದು, ಇವೆಲ್ಲಾ ತಿಳಿದ ವಿಷಯಗಳು.
೧೬
ನಾವು ಸರ್ವೇಶ್ವರನಿಗೆ ಮೊರೆಯಿಟ್ಟೆವು. ಅವರು ನಮ್ಮ ಪ್ರಾರ್ಥನೆಯನ್ನು ಆಲಿಸಿ ನಮ್ಮನ್ನು ಈಜಿಪ್ಟಿನಿಂದ ಬಿಡುಗಡೆ ಮಾಡಿದರು. ಇದೆಲ್ಲದರ ಅರಿವು ತಮಗಿದೆ. ಈಗ ನಾವು ತಮ್ಮ ರಾಜ್ಯದ ಗಡಿಪ್ರದೇಶವಾದ ಕಾದೇಶ್ ಎಂಬ ಊರಲ್ಲಿದ್ದೇವೆ.
೧೭
ತಮ್ಮ ನಾಡನ್ನು ದಾಟಿಹೋಗಲು ಅಪ್ಪಣೆ ಆಗಬೇಕೆಂದು ಬೇಡಿಕೊಳ್ಳುತ್ತೇನೆ. ನಾವು ಹೊಲಗದ್ದೆಗಳ ಮೇಲಾಗಲಿ, ದ್ರಾಕ್ಷಿತೋಟಗಳ ಮೂಲಕವಾಗಲಿ ಹೋಗುವುದಿಲ್ಲ. ಬಾವಿಗಳ ನೀರನ್ನೂ ಕುಡಿಯುವುದಿಲ್ಲ. ರಾಜಮಾರ್ಗದಲ್ಲೇ ನಡೆದು, ತಮ್ಮ ನಾಡಿನ ಗಡಿ ದಾಟುವ ತನಕ ಎಡಕ್ಕಾಗಲಿ ಬಲಕ್ಕಾಗಲಿ ತಿರುಗುವುದಿಲ್ಲ,” ಎಂದು ಹೇಳಿಕಳಿಸಿದನು.
೧೮
ಆದರೆ ಎದೋಮ್ಯರು, “ನಮ್ಮ ನಾಡನ್ನು ನೀವು ದಾಟಿಹೋಗಕೂಡದು. ದಾಟುವುದಾದರೆ ನಿಮ್ಮ ಮೇಲೆ ಯುದ್ಧಮಾಡುತ್ತೇವೆ,” ಎಂದು ಉತ್ತರಕೊಟ್ಟರು.
೧೯
ಅದಕ್ಕೆ ಇಸ್ರಯೇಲರು, “ನಾವು ರಾಜಮಾರ್ಗದಲ್ಲೇ ಹೋಗುತ್ತೇವೆ. ನಾವಾಗಲಿ, ನಮ್ಮ ಜಾನುವಾರುಗಳಾಗಲಿ ನಿಮ್ಮ ನೀರನ್ನು ಕುಡಿದರೆ ಅದಕ್ಕೆ ಬೆಲೆ ಕೊಡುತ್ತೇವೆ. ಬೇರೆ ಏನೂ ನಮಗೆ ಬೇಡ; ಕಾಲ್ನಡೆಯಾಗಿ ದಾಟಿಹೋಗುವುದಕ್ಕೆ ಮಾತ್ರ ಅಪ್ಪಣೆಯಾಗಬೇಕು,” ಎಂದು ವಿನಂತಿಸಿದರು.
೨೦
ಆದರೆ ಎದೋಮ್ಯರು, “ನೀವು ದಾಟಲೇ ಕೂಡದು,” ಎಂದು ಉತ್ತರಿಸಿದರು. ಮಾತ್ರವಲ್ಲ, ದೊಡ್ಡ ಪಡೆಯಾಗಿ ಕೂಡಿಕೊಂಡು ಅವರ ಮೇಲೆ ದಾಳಿಮಾಡಲು ಬಂದರು.
೨೧
ಹೀಗೆ ಎದೋಮ್ಯರು ತಮ್ಮ ನಾಡನ್ನು ದಾಟಿಹೋಗಲು ಅಪ್ಪಣೆಕೊಡದ ಕಾರಣ ಇಸ್ರಯೇಲರು ಅಲ್ಲಿಂದ ಹಿಂದಿರುಗಿ ಹೊರಟುಹೋದರು.
೨೨
ಇಸ್ರಯೇಲ್ ಇಡೀ ಸಮಾಜದವರು ಕಾದೇಶಿನಿಂದ ಹೊರಟು ‘ಹೋರ್’ ಎಂಬ ಬೆಟ್ಟಕ್ಕೆ ಬಂದರು.
೨೩
ಎದೋಮ್ಯರ ನಾಡಿನ ಗಡಿ ಹತ್ತಿರ ಇರುವ ಆ ಹೋರ್ ಬೆಟ್ಟದ ಬಳಿ ಸರ್ವೇಶ್ವರ, ಮೋಶೆ ಮತ್ತು ಆರೋನರ ಸಂಗಡ ಮಾತಾಡಿದರು;
೨೪
“ಆರೋನನು ದೇಹತ್ಯಜಿಸಿ ತನ್ನ ಪೂರ್ವಜರನ್ನು ಸೇರಲಿ. ನೀವಿಬ್ಬರೂ ಮೆರೀಬಾ ಪ್ರವಾಹದ ಬಳಿ ನನ್ನ ಮಾತನ್ನು ಮೀರಿ ನಡೆದಿರಿ. ಆದ್ದರಿಂದ ನಾನು ಇಸ್ರಯೇಲರಿಗೆ ವಾಗ್ದಾನ ಮಾಡಿದ ನಾಡನ್ನು ಆರೋನನು ಪ್ರವೇಶಿಸಕೂಡದು.
೨೫
ಅವನನ್ನೂ ಅವನ ಮಗ ಎಲ್ಲಾಜಾರನನ್ನೂ ಕರೆದುಕೊಂಡು ನೀನು ಹೋರ್ ಬೆಟ್ಟವನ್ನು ಹತ್ತು.
೨೬
ಅಲ್ಲಿ ಆರೋನನ ಯಾಜಕ ವಸ್ತ್ರಗಳನ್ನು ತೆಗೆದು ಅವನ ಮಗ ಎಲ್ಲಾಜಾರನಿಗೆ ತೊಡಿಸು. ಆರೋನನು ಅಲ್ಲಿ ದೇಹವನ್ನು ಬಿಟ್ಟು ತನ್ನ ಪೂರ್ವಜರ ಬಳಿ ಸೇರಲಿ,” ಎಂದು ವಿಧಿಸಿದರು.
೨೭
ಸರ್ವೇಶ್ವರನ ಅಪ್ಪಣೆಯ ಮೇರೆಗೆ ಮೋಶೆ ಮಾಡಿದನು. ಸರ್ವಸಮೂಹದವರು ನೋಡುತ್ತಿರುವಾಗ ಅವರು ಹೋರ್ ಬೆಟ್ಟವನ್ನು ಹತ್ತಿದರು.
೨೮
ಮೋಶೆ ಆರೋನನ ವಸ್ತ್ರಗಳನ್ನು ತೆಗೆದು ಅವನ ಮಗ ಎಲ್ಲಾಜಾರನಿಗೆ ತೊಡಿಸಿದನು. ಆರೋನನು ಅಲ್ಲೇ ಬೆಟ್ಟದ ತುದಿಯಲ್ಲಿ ಸತ್ತುಹೋದನು. ಬಳಿಕ ಮೋಶೆ ಮತ್ತು ಎಲ್ಲಾಜಾರನು ಬೆಟ್ಟದಿಂದ ಇಳಿದುಬಂದರು.
೨೯
ಆರೋನನು ಸತ್ತುಹೋದುದನ್ನು ಇಸ್ರಯೇಲ್ ಸಮಾಜದವರೆಲ್ಲರೂ ತಿಳಿದು ಅವನಿಗಾಗಿ ಮೂವತ್ತು ದಿನಗಳವರೆಗೆ ಶೋಕಿಸಿದರು.