೧ |
ಸರ್ವೇಶ್ವರ ಮೋಶೆಗೆ ಹೀಗೆಂದರು: |
೨ |
“ಇಸ್ರಯೇಲರ ಸಂಗಡ ನೀನು ಮಾತಾಡಿ ಒಂದೊಂದು ಕುಲದ ಅಧಿಪತಿಯಿಂದ ಒಂದೊಂದು ಕೋಲಿನ ಮೇರೆಗೆ ಹನ್ನೆರಡು ಕೋಲುಗಳನ್ನು ತೆಗೆದುಕೋ. ಅವನವನ ಕೋಲಿನ ಮೇಲೆ ಆಯಾ ಅಧಿಪತಿಯ ಹೆಸರನ್ನು ಬರೆಯಿಸು. |
೩ |
ಲೇವಿಯ ಕುಲಕ್ಕೂ ಒಂದು ಕೋಲು ಇರುವುದರಿಂದ ಅದರ ಮೇಲೆ ಆರೋನನ ಹೆಸರನ್ನು ಬರೆಯಿಸು. |
೪ |
ಆ ಕೋಲುಗಳನ್ನು ದೇವದರ್ಶನದ ಗುಡಾರದಲ್ಲಿ ಮಂಜೂಷದ ಮುಂದೆ ನಾನು ನಿನಗೆ ದರ್ಶನ ಕೊಡುವ ಸ್ಥಳದಲ್ಲಿ ಇಡು. |
೫ |
ಯಾರನ್ನು ನಾನು ಮೆಚ್ಚಿದ್ದೇನೋ ಅವನ ಕೋಲು ಚಿಗುರುವುದು. ನಿಮ್ಮಿಬ್ಬರ ವಿರುದ್ಧ ಇಸ್ರಯೇಲರು ಗೊಣಗುವುದು ಇನ್ನು ಕೇಳಿಸದಂತೆ ಹೀಗೆ ನಿಲ್ಲಿಸಿಬಿಡುತ್ತೇನೆ.” |
೬ |
ಅದರಂತೆಯೇ ಮೋಶೆ ಇಸ್ರಯೇಲರೊಡನೆ ಮಾತಾಡಿದನು. ಅವರ ಕುಲಾಧಿಪತಿಗಳೆಲ್ಲರೂ ಕುಲಕ್ಕೆ ಒಂದರಂತೆ ಹನ್ನೆರಡು ಕೋಲುಗಳನ್ನು ಅವನ ಕೈಗೆ ಕೊಟ್ಟರು. ಅವುಗಳೊಡನೆ ಆರೋನನ ಕೋಲು ಇತ್ತು. |
೭ |
ಮೋಶೆ ಆ ಕೋಲುಗಳನ್ನು ಮಂಜೂಷವಿರುವ ಗುಡಾರದಲ್ಲಿ ಸರ್ವೇಶ್ವರನ ಸನ್ನಿಧಿಯಲ್ಲಿ ಇಟ್ಟನು. |
೮ |
ಮಾರನೆಯ ದಿನ ಮೋಶೆ ಗುಡಾರದೊಳಗೆ ಹೋಗಿ ನೋಡಿದನು. ಏನಾಶ್ಚರ್ಯ! ಲೇವಿಕುಲದ ಪರವಾಗಿ ಆರೋನನು ಕೊಟ್ಟಿದ್ದ ಕೋಲು ಚಿಗುರಿತ್ತು; ಮೊಗ್ಗುಗಳು ಬಿಟ್ಟು, ಹೂವರಳಿ, ಬಾದಾಮಿ ಹಣ್ಣುಗಳನ್ನು ಫಲಿಸಿತ್ತು. |
೯ |
ಮೋಶೆ ಆ ಕೋಲುಗಳನ್ನೆಲ್ಲ ಸವೇಶ್ವರನ ಸನ್ನಿಧಿಯಿಂದ ಇಸ್ರಯೇಲರೆಲ್ಲರ ಬಳಿಗೆ ತಂದು ತೋರಿಸಿದನು. ಅವರು ತಮ್ಮ ತಮ್ಮ ಕೋಲುಗಳನ್ನು ಪರೀಕ್ಷಿಸಿ ತೆಗೆದುಕೊಂಡರು. |
೧೦ |
ಅನಂತರ ಸರ್ವೇಶ್ವರ ಮೋಶೆಗೆ: “ಆರೋನನ ಕೋಲನ್ನು ಮರಳಿ ಮಂಜೂಷದ ಮುಂದೆ ಇಡಬೇಕು. ದಂಗೆಯೇಳುವವರಿಗೆ ದೃಷ್ಟಾಂತವಾಗಿ ಅದು ಅಲ್ಲೇ ಇರಲಿ. ಇನ್ನು ಮುಂದೆ ಈ ಜನರು ನನಗೆ ವಿರುದ್ಧ ಗೊಣಗಿ ನಾಶವಾಗಬಾರದು. ಅದಕ್ಕಾಗಿ ನೀನು ಹೀಗೆ ಮಾಡು,” ಎಂದು ಆಜ್ಞಾಪಿಸಿದರು. |
೧೧ |
ಸರ್ವೇಶ್ವರನ ಅಪ್ಪಣೆಯ ಪ್ರಕಾರವೇ ಮೋಶೆ ಮಾಡಿದನು. |
೧೨ |
ಇಸ್ರಯೇಲರು ಮೋಶೆಯ ಬಳಿಗೆ ಬಂದು, “ಇಗೋ ನಾವು ನಾಶವಾಗಲಿದ್ದೇವೆ, ನಶಿಸಿಹೋಗುತ್ತೇವೆ, ನಿಶ್ಯೇಷವಾಗಿ ನಿರ್ಮೂಲವಾಗುವ ಹಾಗೆ ಕಾಣುತ್ತದೆ. |
೧೩ |
ಸರ್ವೇಶ್ವರನ ಗುಡಾರದ ಸಮೀಪಕ್ಕೆ ಬರುವವರೆಲ್ಲರು ಸಾಯಲೇ ಬೇಕಾದರೆ ಇನ್ನು ನಾವೆಲ್ಲರು ಸತ್ತಹಾಗೆ ತಾನೆ?” ಎಂದರು.
|
Kannada Bible (KNCL) 2016 |
No Data |