೧ |
ಮೋಶೆ ಕೂಷ್ ನಾಡಿನ ಮಹಿಳೆಯೊಬ್ಬಳನ್ನು ಮದುವೆ ಮಾಡಿಕೊಂಡಿದ್ದನು. ಈ ಕಾರಣ ಮಿರ್ಯಾಮಳು ಮತ್ತು ಆರೋನನು ಅವನಿಗೆ ವಿರುದ್ಧ ಮಾತಾಡತೊಡಗಿದರು. |
೨ |
“ಸರ್ವೇಶ್ವರ ಸ್ವಾಮಿ ಮೋಶೆಯ ಮುಖಾಂತರ ಮಾತ್ರ ಮಾತಾಡಿದ್ದಾರೋ? ನಮ್ಮ ಮುಖಾಂತರ ಮಾತಾಡಲಿಲ್ಲವೋ?’ ಎಂದು ಹೇಳತೊಡಗಿದರು. |
೩ |
ಅವರು ಆಡಿದ ಮಾತು ಸರ್ವೇಶ್ವರನಿಗೆ ಮುಟ್ಟಿತು. ಮೋಶೆ ಸಾಧುಮನುಷ್ಯ. ನರಮಾನವರಲ್ಲೆಲ್ಲಾ ಅತ್ಯಂತ ಸಾಧು. |
೪ |
ಹೀಗಿರಲಾಗಿ ಸರ್ವೇಶ್ವರ ತಟ್ಟನೆ ಮೋಶೆ, ಆರೋನ್ ಹಾಗೂ ಮಿರ್ಯಾಮರಿಗೆ, “ನೀವು ಮೂವರು ದೇವದರ್ಶನದ ಗುಡಾರಕ್ಕೆ ಬರಬೇಕು,” ಎಂದು ಆಜ್ಞಾಪಿಸಿದರು. |
೫ |
ಅವರು ಬಂದಾಗ ಸರ್ವೇಶ್ವರ ಮೇಘಸ್ತಂಭದಲ್ಲಿ ಇಳಿದು ಬಂದು ದೇವದರ್ಶನದ ಗುಡಾರದ ಬಾಗಿಲಲ್ಲಿ ನಿಂತು ಆರೋನ್ ಹಾಗೂ ಮಿರ್ಯಾಮಳನ್ನು ಹತ್ತಿರಕ್ಕೆ ಕರೆದರು. |
೬ |
ಅವರು ಸಮೀಪಿಸಿದಾಗ, “ನನ್ನ ಮಾತಿಗೆ ಕಿವಿಗೊಡಿ ನಿಮ್ಮಲ್ಲಿ ಪ್ರವಾದಿಯಿದ್ದರೆ ಅವನಿಗೆ ಕಾಣಿಸಿಕೊಳ್ಳುವೆ ಜ್ಞಾನದೃಷ್ಟಿಯಲ್ಲಿ ಇಲ್ಲವೆ ಅವನ ಸಂಗಡ ಮಾತಾಡುವೆ ಸ್ವಪ್ನದಲ್ಲಿ. |
೭ |
ನನ್ನ ದಾಸನಾದ ಮೋಶೆ ಅಂಥವನಲ್ಲ ಅವನೇ ನಂಬಿಗಸ್ತ ನನ್ನ ಮನೆಯಲ್ಲೆಲ್ಲಾ. |
೮ |
ನಾನವನ ಸಂಗಡ ಮಾತಾಡುವುದು ನಿಗೂಢವಾಗಿ ಅಲ್ಲ, ಮುಖಾಮುಖಿಯಾಗಿ, ಸ್ಪಷ್ಟವಾಗಿ, ಒಗಟಾಗಿಯಲ್ಲ ಸರ್ವೇಶ್ವರನ ಸ್ವರೂಪವನ್ನೆ ಕಂಡವನಾತ! ಇಂತಿರಲು ನನ್ನ ದಾಸ ಮೋಶೆಗೆ ವಿರುದ್ಧ ಮಾತನಾಡಲು ನೀವೇಕೆ ಭಯಪಡಲಿಲ್ಲಾ? ಎಂದು ಹೇಳಿ ಕೋಪದಿಂದ ಹೊರಟುಹೋದರು. |
೯ |
ಆ ಮೇಘವು ದೇವದರ್ಶನದ ಗುಡಾರದಿಂದ ಅದೃಶ್ಯವಾದದ್ದೇ ಇಗೋ, ಮಿರ್ಯಾಮಳ ಚರ್ಮ ಹಿಮದಂತೆ ಬಿಳಿಚಿಕೊಂಡಿತ್ತು. ಆಕೆಗೆ ತೊನ್ನು ಹತ್ತಿತ್ತು. ಆರೋನನು ಆಕೆಯನ್ನು ನೋಡಿ ಆಕೆಗೆ ತೊನ್ನು ಪ್ರಾಪ್ತವಾಯಿತೆಂದು ತಿಳಿದುಕೊಂಡನು. |
೧೦ |
*** |
೧೧ |
ಆಗ ಆರೋನನು ಮೋಶೆಗೆ, “ಅಯ್ಯಾ, ನಾವು ಮೂರ್ಖರಾಗಿ ನಡೆದು ಪಾಪಕಟ್ಟಿಕೊಂಡೆವು. ಈ ಪಾಪದ ಫಲವನ್ನು ನಾವು ಅನುಭವಿಸುವಂತೆ ಮಾಡಬೇಡ,” ಇದು ನನ್ನ ವಿನಂತಿ. |
೧೨ |
ಅರ್ಧ ಮಾಂಸ ಕೊಳೆತುಹೋಗಿ ಹುಟ್ಟಿದ ಶಿಶುವಿನ ಶವದಂತೆ ಈಕೆ ಆಗುವುದು ಬೇಡ,” ಎಂದು ಕೇಳಿಕೊಂಡನು. |
೧೩ |
ಆಗ ಮೋಶೆ ಸರ್ವೇಶ್ವರನಿಗೆ, “ಹೇ ದೇವಾ, ಆಕೆಯನ್ನು ಗುಣಪಡಿಸಬೇಕೆಂದು ಬೇಡಿಕೊಳ್ಳುತ್ತೇನೆ,” ಎಂದು ಮೊರೆಯಿಟ್ಟನು. |
೧೪ |
ಅದಕ್ಕೆ ಸರ್ವೇಶ್ವರ, “ಅವಳ ತಂದೆ ಅವಳ ಮುಖದ ಮೇಲೆ ಉಗುಳಿದ್ದರೆ ಏಳು ದಿವಸ ಅವಳು ನಾಚಿಕೆಯಿಂದ ಮರೆಯಾಗುತ್ತಿದ್ದಳಲ್ಲವೆ? ಅಂತೆಯೇ ಅವಳು ಏಳು ದಿವಸ ಪಾಳೆಯದಿಂದ ಹೊರಗಿರಲಿ. ಅನಂತರ ಅವಳನ್ನು ನೀನು ಪಾಳೆಯದೊಳಗೆ ಸೇರಿಸಿಕೊಳ್ಳಬಹುದು,” ಎಂದು ಉತ್ತರಕೊಟ್ಟರು. |
೧೫ |
ಹೀಗೆ ಮಿರ್ಯಾಮಳು ಏಳು ದಿವಸ ಪಾಳೆಯದ ಹೊರಗೆ ಇರಬೇಕಾಯಿತು. ಅವಳನ್ನು ಮರಳಿ ಸೇರಿಸಿಕೊಳ್ಳುವವರೆಗೆ ಇಸ್ರಯೇಲರು ಪ್ರಯಾಣ ಮಾಡಲಿಲ್ಲ. |
೧೬ |
ಅನಂತರ ಅವರು ಹಚೆರೋತಿನಿಂದ ಹೊರಟು ಪಾರಾನ್ ಮರುಭೂಮಿಯಲ್ಲಿ ಇಳಿದುಕೊಂಡರು.
|
Kannada Bible (KNCL) 2016 |
No Data |