A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ಆಮೋಸನ ೫ಇಸ್ರಯೇಲಿನ ಜನರೇ, ನಿಮ್ಮನ್ನು ಕುರಿತು ನಾನು ಹಾಡುವ ಈ ಶೋಕಗೀತೆಯನ್ನು ಕೇಳಿ:
“ಕನ್ಯೆ ಇಸ್ರಯೇಲಳು ಬಿದ್ದಿಹಳು ಕೆಳಗೆ ಅಶಕ್ತಳು ಆಕೆ ಮರಳಿ ಏಳಲು ಮೇಲಕೆ ದಿಕ್ಕಿಲ್ಲದೆ ಒರಗಿಹಳು ಧರೆಯ ಮೇಲೆ ಮೇಲೆತ್ತಲು ಯಾರೂ ಗತಿಯಿಲ್ಲದ ಅಬಲೆ.”
ಒಡೆಯರಾದ ಸರ್ವೇಶ್ವರ ಇಂತೆನ್ನುತ್ತಾರೆ: “ಯುದ್ಧಕ್ಕೆ ಹೊರಟ ಸಾವಿರ ಮಂದಿ ಸೈನಿಕರಲ್ಲಿ ಪಟ್ಟಣಕ್ಕೆ ಮರಳಿದವರು ನೂರೇ ಮಂದಿ: ರಣರಂಗಕ್ಕೆ ಹೊರಟ ನೂರು ಮಂದಿ ಯೋಧರಲ್ಲಿ ಇಸ್ರಯೇಲಿಗೆ ಮರಳಿದವರು ಹತ್ತೇ ಮಂದಿ.”
ಇಸ್ರಯೇಲ್ ಮನೆತನಕ್ಕೆ ಸರ್ವೇಶ್ವರ ಹೇಳುವುದೇನೆಂದರೆ: “ನನ್ನನ್ನು ಅರಸಿರಿ, ನೀವು ಬದುಕುವಿರಿ.
ಬೇತೇಲಿಗೆ ಹೋಗಬೇಡಿ, ಗಿಲ್ಗಾಲಿಗೆ ಸೇರಬೇಡಿ. ಬೆರ್ಷೆಬಾಗೆ ಯಾತ್ರೆ ಹೋಗಬೇಡಿ. ಗಿಲ್ಗಾಲ್ ಗಡೀಪಾರಾಗುವುದು. ಬೇತೇಲ್ ಬಯಲಾಗುವುದು.”
ಸರ್ವೇಶ್ವರಸ್ವಾಮಿಗೆ ಅಭಿಮುಖರಾಗಿರಿ, ನೀವು ಬದುಕುವಿರಿ. ಇಲ್ಲವಾದರೆ ಅವರು ಬೆಂಕಿಯೋಪಾದಿ ಜೋಸೆಫನ ಮನೆತನದ ಮೇಲೆ ಎರಗಿಯಾರು. ಬೇತೇಲಿನ ಜನರನ್ನು ಭಸ್ಮಮಾಡಿಯಾರು. ಆ ಬೆಂಕಿಯನ್ನು ಯಾರೂ ಆರಿಸರು.
ನ್ಯಾಯವನ್ನು ಕಹಿಯಾಗಿಸುವವರೇ, ಧರ್ಮವನ್ನು ಕಸವಾಗಿಸುವವರೇ, ನಿಮಗೆ ಧಿಕ್ಕಾರ!
ಕೃತ್ತಿಕೆ, ಮೃಗಶಿರ, ನಕ್ಷತ್ರಪುಂಜಗಳನು ಸೃಜಿಸಿದಾತನು ಕತ್ತಲನು ಬೆಳಕಾಗಿ, ಹಗಲನು ಇರುಳಾಗಿ ಮಾಡುವವನು, ಕಡಲಿನ ಜಲವನು ಮೇಲೆತ್ತಿ, ಧರೆಗೆ ಮಳೆಗರೆವಾತನು,
ಬಲಾಢ್ಯರನ್ನು ತಟ್ಟನೆ ಬಡಿದು ಕೋಟೆಗಳ ಕೆಡವುವಾತನು ಆತನೇ, ಸರ್ವೇಶ್ವರಸ್ವಾಮಿ ಎಂಬುದೇ ಆತನ ನಾಮಧೇಯ.
೧೦
ಕಂಡ ದೋಷವನ್ನು ಮಂಟಪದಲ್ಲಿ ಖಂಡಿಸುವವನನ್ನು ನೀವು ಹಗೆಮಾಡುತ್ತೀರಿ; ನ್ಯಾಯವಾದಿಗಳ ಮೇಲೆ ದ್ವೇಷ ಸಾಧಿಸುತ್ತೀರಿ.
೧೧
ಬಡಬಗ್ಗರನ್ನು ತುಳಿಯುತ್ತೀರಿ; ಅವರ ದವಸಧಾನ್ಯಗಳನ್ನು ಕಸಿದುಕೊಳ್ಳುತ್ತೀರಿ. ಆದ್ದರಿಂದ ನೀವು ಕಟ್ಟಿರುವ ಕೆತ್ತನೆಯ ಕಲ್ಲುಮನೆಗಳಲ್ಲಿ ವಾಸಮಾಡಲಾರಿರಿ. ನೀವು ನೆಟ್ಟಿರುವ ಫಲಭರಿತ ದ್ರಾಕ್ಷಾಬಳ್ಳಿಗಳಿಂದ ರಸವನ್ನು ಕುಡಿಯಲಾರಿರಿ.
೧೨
ಸಜ್ಜನರನ್ನು ಹಿಂಸಿಸಿ, ಲಂಚಕ್ಕೆ ಕೈ ಒಡ್ಡುವವರೇ, ನ್ಯಾಯಮಂಟಪದಲ್ಲಿ ಬಡವರಿಗೆ ನ್ಯಾಯದೊರಕಿಸದಿರುವವರೇ, ನಿಮ್ಮ ಪಾಪಗಳು ಅಪಾರ! ನಿಮ್ಮ ದ್ರೋಹಗಳು ಬಹಳ! ಇದು ನನಗೆ ಗೊತ್ತು.
೧೩
ಕಾಲವು ಕೆಟ್ಟದ್ದಾಗಿ ಇರುವುದರಿಂದ ವಿವೇಕಿಯಾದವನು ಸುಮ್ಮನಿರುವುದು ಲೇಸು.
೧೪
ಕೆಟ್ಟದ್ದನ್ನು ಬಿಟ್ಟುಬಿಡಿ. ಒಳ್ಳೆಯದನ್ನು ಆಸಕ್ತಿಯಿಂದ ಮಾಡಿ; ನೀವು ಬಾಳುವಿರಿ. ಆಗ ನೀವು ಹೇಳಿಕೊಳ್ಳುವಂತೆ, ಸೇನಾಧೀಶ್ವರ ದೇವರಾದ ಸರ್ವೇಶ್ವರ ನಿಮ್ಮೊಡನೆ ಇರುವರು.
೧೫
ಕೆಟ್ಟದ್ದನ್ನು ದ್ವೇಷಿಸಿರಿ, ಒಳ್ಳೆಯದನ್ನು ಪ್ರೀತಿಸಿರಿ. ನ್ಯಾಯಮಂಟಪದಲ್ಲಿ ಸತ್ಯಕ್ಕೆ ಜಯವಾಗುವಂತೆ ನೋಡಿಕೊಳ್ಳಿರಿ. ಆಗ ಬಹುಶಃ ಸೇನಾಧೀಶ್ವರ ದೇವರಾದ ಸರ್ವೇಶ್ವರ ಅಳಿದುಳಿದ ಜೋಸೆಫನ ವಂಶಕ್ಕೆ ಕರುಣೆ ತೋರಿಯಾರು.
೧೬
ಸೇನಾಧೀಶ್ವರ ದೇವರಾದ ಸರ್ವೇಶ್ವರಸ್ವಾಮಿ ಇಂತೆನ್ನುತ್ತಾರೆ: “ಬೀದಿ ಚೌಕಗಳಲ್ಲೆಲ್ಲ ಗೋಳಾಟ ಇರುವುದು. ಹಾದಿಬೀದಿಗಳಲ್ಲೆಲ್ಲ ‘ಅಯ್ಯಯ್ಯೋ’ ಎಂದು ಜನರು ಪ್ರಲಾಪಿಸುವರು. ರೈತರನ್ನು ಕಣ್ಣೀರಿಡುವುದಕ್ಕೂ ಶೋಕವೃತ್ತಿಯವರನ್ನು ಗೋಳಾಡುವುದಕ್ಕೂ ಕರೆಯಲಾಗುವುದು.
೧೭
ಪ್ರತಿಯೊಂದು ದ್ರಾಕ್ಷಾತೋಟದಲ್ಲಿ ಜನರು ರೋದಿಸುವರು. ಏಕೆಂದರೆ ನಿಮ್ಮನ್ನು ದಂಡಿಸಲು ನಿಮ್ಮ ಮಧ್ಯೆ ಹಾದುಹೋಗಲಿದ್ದೇನೆ, ಇದು ಸರ್ವೇಶ್ವರಸ್ವಾಮಿಯ ನುಡಿ.”
೧೮
ಸ್ವಾಮಿಯ ಆ ದಿನಕ್ಕಾಗಿ ಕಾತುರದಿಂದ ಕಾದಿರುವರೇ, ಅಯ್ಯೋ ನಿಮಗೆ ಕೇಡು; ಆ ದಿನ ಏನಾಗುತ್ತದೆಂದು ನಿಮಗೆ ಗೊತ್ತೆ? ಸ್ವಾಮಿಯ ಆ ದಿನ ನಿಮಗೆ ಬೆಳಕಾಗಿರದು, ಕತ್ತಲೆಯ ದಿನವಾಗಿರುವುದು.
೧೯
ಅದು ಹೇಗೆಂದರೆ: “ಸಿಂಹದ ಬಾಯಿಯಿಂದ ತಪ್ಪಿಸಿಕೊಂಡು ಓಡುತ್ತಿರುವವನು ಕರಡಿಯನ್ನು ಎದುರುಗೊಳ್ಳುವಂತೆ ಆಗುವುದು ಅಥವಾ ಅವನು ಅಲ್ಲಿಂದ ಮನೆಗೆ ಓಡಿಬಂದು ಗೋಡೆಯ ಮೇಲೆ ಕೈಯೂರಲು ಅವನಿಗೆ ಹಾವು ಕಚ್ಚಿದಂತೆ ಆಗುವುದು.
೨೦
ಖಂಡಿತವಾಗಿ ಸ್ವಾಮಿಯ ದಿನ ಬೆಳಕಾಗಿರದು, ಕತ್ತಲೆಯಾಗಿರುತ್ತದೆ, ಒಂದು ಚುಕ್ಕೆಯೂ ಇಲ್ಲದ ಕಾರಿರುಳಂತಿರುತ್ತದೆ.
೨೧
“ನಿಮ್ಮ ಹಬ್ಬಹುಣ್ಣಿಮೆಗಳನ್ನು ಹಗೆಮಾಡುತ್ತೇನೆ, ತುಚ್ಛೀಕರಿಸುತ್ತೇನೆ. ನಿಮ್ಮ ಉತ್ಸವಗಳ ವಾಸನೆಯೂ ನನಗೆ ಬೇಡ.
೨೨
ನೀವು ನನಗೆ ದಹನಬಲಿದಾನಗಳನ್ನು, ಧಾನ್ಯನೈವೇದ್ಯಗಳನ್ನು ಅರ್ಪಿಸುವುದಕ್ಕೆ ಬಂದರೂ ನಾನು ಅವುಗಳನ್ನು ಸ್ವೀಕರಿಸುವುದಿಲ್ಲ. ಸಮಾಧಾನದ ಯಜ್ಞವಾಗಿ ನೀವು ಒಪ್ಪಿಸುವ ಕೊಬ್ಬಿದ ಪಶುಗಳನ್ನು ನಾನು ಕಟಾಕ್ಷಿಸೆನು.
೨೩
ನಿಮ್ಮ ಭಜನೆ ನಿಂತುಹೋಗಲಿ; ನಿಮ್ಮ ವೀಣಾವಾದ್ಯಗಳು ತೊಲಗಲಿ.
೨೪
ನ್ಯಾಯನೀತಿ ಹೊಳೆಯಂತೆ ಹರಿಯಲಿ; ಸದ್ಧರ್ಮ ಮಹಾನದಿಯಂತೆ ಪ್ರವಹಿಸಲಿ.
೨೫
“ಇಸ್ರಯೇಲಿನ ವಂಶದವರೇ, ನಲವತ್ತು ವರ್ಷಗಳ ಕಾಲ ನೀವು ಮರಳುಗಾಡಿನಲ್ಲಿದ್ದಾಗ, ಬಲಿಪ್ರಾಣಿಗಳನ್ನಾಗಲೀ, ಧಾನ್ಯನೈವೇದ್ಯಗಳನ್ನಾಗಲಿ ನೀವು ಅರ್ಪಿಸಬೇಕೆಂದು ನಾನು ಕೇಳಿದ್ದುಂಟೋ?
೨೬
ಆದರೆ ಈಗ ನೀವು ನಿರ್ಮಿಸಿಕೊಂಡಿರುವ ಮೂರ್ತಿಗಳಾದ ಸಿಕ್ಕುತ್ ರಾಜೇಶ್ವರನನ್ನೂ ಕಿಯೂನ್ ಎಂಬ ನಕ್ಷತ್ರ ದೇವತೆಯನ್ನೂ ನೀವೇ ಹೊತ್ತುಕೊಂಡು ಹೋಗಬೇಕಾಗುವುದು.
೨೭
ಏಕೆಂದರೆ ನಾನು ನಿಮ್ಮನ್ನು ದಮಸ್ಕದಿಂದ ಆಚೆ ತಳ್ಳಿ, ಸೆರೆಯಾಳುಗಳನ್ನಾಗಿ ಕಳುಹಿಸುವೆನು.” ಇದು ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ನುಡಿ.ಆಮೋಸನ ೫:1
ಆಮೋಸನ ೫:2
ಆಮೋಸನ ೫:3
ಆಮೋಸನ ೫:4
ಆಮೋಸನ ೫:5
ಆಮೋಸನ ೫:6
ಆಮೋಸನ ೫:7
ಆಮೋಸನ ೫:8
ಆಮೋಸನ ೫:9
ಆಮೋಸನ ೫:10
ಆಮೋಸನ ೫:11
ಆಮೋಸನ ೫:12
ಆಮೋಸನ ೫:13
ಆಮೋಸನ ೫:14
ಆಮೋಸನ ೫:15
ಆಮೋಸನ ೫:16
ಆಮೋಸನ ೫:17
ಆಮೋಸನ ೫:18
ಆಮೋಸನ ೫:19
ಆಮೋಸನ ೫:20
ಆಮೋಸನ ೫:21
ಆಮೋಸನ ೫:22
ಆಮೋಸನ ೫:23
ಆಮೋಸನ ೫:24
ಆಮೋಸನ ೫:25
ಆಮೋಸನ ೫:26
ಆಮೋಸನ ೫:27


ಆಮೋಸನ 1 / ಆಮ 1
ಆಮೋಸನ 2 / ಆಮ 2
ಆಮೋಸನ 3 / ಆಮ 3
ಆಮೋಸನ 4 / ಆಮ 4
ಆಮೋಸನ 5 / ಆಮ 5
ಆಮೋಸನ 6 / ಆಮ 6
ಆಮೋಸನ 7 / ಆಮ 7
ಆಮೋಸನ 8 / ಆಮ 8
ಆಮೋಸನ 9 / ಆಮ 9