೧ |
ಸರ್ವೇಶ್ವರ ಸ್ವಾಮಿ ಮೋಶೆಗೆ: |
೨ |
“ನೀನು ಆರೋನನನ್ನೂ ಅವನ ಗಂಡು ಮಕ್ಕಳನ್ನೂ ಕರೆದುಕೊಂಡು ಅವರಿಗೆ ಬೇಕಾದ ದೀಕ್ಷಾವಸ್ತ್ರಗಳನ್ನು, ಅಭಿಷೇಕ ತೈಲವನ್ನು, ದೋಷಪರಿಹಾರಕ್ಕಾಗಿ ಸಮರ್ಪಿಸಬೇಕಾದ ಹೋರಿಯನ್ನು, ಎರಡು ಟಗರುಗಳನ್ನು ಹಾಗು ಹುಳಿಯಿಲ್ಲದ ಭಕ್ಷ್ಯಗಳು ತುಂಬಿರುವ ಪುಟ್ಟಿಯನ್ನು ತೆಗೆದುಕೊಂಡು ಬಾ; |
೩ |
ಜನಸಮೂಹವನ್ನೆಲ್ಲ ದೇವದರ್ಶನದ ಗುಡಾರದ ಬಾಗಿಲ ಬಳಿಗೆ ಕರೆಯಿಸು,” ಎಂದು ಆಜ್ಞೆ ಮಾಡಿದರು. |
೪ |
ಸರ್ವೇಶ್ವರ ಹೇಳಿದಂತೆಯೇ ಮೋಶೆ ಮಾಡಿದನು. ಜನರೆಲ್ಲರು ದೇವದರ್ಶನದ ಗುಡಾರದ ಬಾಗಿಲಿನ ಹತ್ತಿರ ಕೂಡಿಬಂದರು. |
೫ |
ಮೋಶೆ ಅವರಿಗೆ, “ನಾನು ಈಗ ಮಾಡುವ ಕಾರ್ಯ ಸರ್ವೇಶ್ವರ ಸ್ವಾಮಿಯೇ ಆಜ್ಞಾಪಿಸಿದ ಕಾರ್ಯ,” ಎಂದು ಹೇಳಿದನು. |
೬ |
ಬಳಿಕ ಮೋಶೆ ಆರೋನನನ್ನೂ ಅವನ ಪುತ್ರರನ್ನೂ ಹತ್ತಿರಕ್ಕೆ ಬರಮಾಡಿಕೊಂಡು ಸ್ನಾನ ಮಾಡಿಸಿದನು. |
೭ |
ಆಮೇಲೆ ಸರ್ವೇಶ್ವರ ಆಜ್ಞಾಪಿಸಿದಂತೆಯೇ ಆರೋನನಿಗೆ ನಿಲುವಂಗಿಯನ್ನು ತೊಡಿಸಿ, ನಡುಕಟ್ಟನ್ನು ಸುತ್ತಿಸಿ, ಅದರಿಂದ ಅವನ ಕವಚವನ್ನು ಕಟ್ಟಿ, |
೮ |
ವಕ್ಷಪದಕವನ್ನು ಅವನಿಗೆ ಬಿಗಿಸಿ, ಅದರ ಚೀಲದೊಳಗೆ ಊರೀಮ್ ಹಾಗು ತುಮ್ಮೀಮ್ ಎಂಬ ದಾಳಗಳನ್ನು ಹಾಕಿ |
೯ |
ಅವನ ತಲೆಗೆ ಸಿರಿಪೇಟವನ್ನು ತೊಡಿಸಿ, ಅದರ ಮುಂಭಾಗದಲ್ಲಿ ಬಂಗಾರದ ಪಟ್ಟಿಯನ್ನು ಕಟ್ಟಿದನು; ಅದು ಅವನಿಗೆ ಪವಿತ್ರ ಕಿರೀಟದಂತಿತ್ತು. |
೧೦ |
ಅನಂತರ ಮೋಶೆ ಅಭಿಷೇಕದ ಎಣ್ಣೆಯನ್ನು ತೆಗೆದುಕೊಂಡು ದೇವದರ್ಶನದ ಗುಡಾರವನ್ನು ಹಾಗು ಅದರಲ್ಲಿದ್ದ ಎಲ್ಲವನ್ನೂ ಅಭಿಷೇಕಿಸಿ ಪ್ರತಿಷ್ಠಿಸಿದನು. |
೧೧ |
ಬಲಿಪೀಠದ ಮೇಲೆ ಏಳು ಸಾರಿ ಆ ಎಣ್ಣೆಯನ್ನು ಚಿಮುಕಿಸಿ ಬಲಿಪೀಠವನ್ನು, ಅದರ ಎಲ್ಲ ಉಪಕರಣಗಳನ್ನು ಹಾಗು ನೀರಿನ ತೊಟ್ಟಿಯನ್ನು ಅದರ ಪೀಠವನ್ನು ಅಭಿಷೇಕಿಸಿ ಪ್ರತಿಷ್ಠಿಸಿದನು. |
೧೨ |
ಆ ಎಣ್ಣೆಯಲ್ಲಿ ಸ್ವಲ್ಪವನ್ನು ಆರೋನನ ತಲೆಯ ಮೇಲೆ ಹೊಯ್ದು ಅವನನ್ನು ಅಭಿಷೇಕಿಸಿ ಪ್ರತಿಷ್ಠಿಸಿದನು. |
೧೩ |
ಅನಂತರ ಸರ್ವೇಶ್ವರ ಆಜ್ಞಾಪಿಸಿದಂತೆ ಮೋಶೆ ಆರೋನನ ಮಕ್ಕಳನ್ನು ಹತ್ತಿರಕ್ಕೆ ಕರೆದು, ಅವರಿಗೆ ನಿಲುವಂಗಿಗಳನ್ನು ತೊಡಿಸಿ, ನಡುಕಟ್ಟುಗಳನ್ನು ಸುತ್ತಿ, ಪೇಟಗಳನ್ನು ತೊಡಿಸಿದನು. |
೧೪ |
ಅನಂತರ ಅವನು ದೋಷಪರಿಹಾರಾರ್ಥವಾದ ಹೋರಿಯನ್ನು ತರಿಸಿದನು. ಆರೋನನು ಮತ್ತು ಅವನ ಮಕ್ಕಳು ತಮ್ಮ ಕೈಗಳನ್ನು ಅದರ ತಲೆಯ ಮೇಲೆ ಚಾಚಿದರು. |
೧೫ |
ಆ ಹೋರಿಯನ್ನು ವಧಿಸಿದ ಮೇಲೆ ಮೋಶೆ ಅದರ ರಕ್ತವನ್ನು ತನ್ನ ಬೆರಳಿನಿಂದ ಬಲಿಪೀಠದ ಕೊಂಬುಗಳಿಗೆ ಸುತ್ತಲೂ ಹಚ್ಚಿ ಬಲಿಪೀಠವನ್ನು ಪ್ರತಿಷ್ಠಿಸಿದನು. ಮಿಕ್ಕ ರಕ್ತವನ್ನು ಬಲಿಪೀಠದ ಬುಡದಲ್ಲಿ ಸುರಿದುಬಿಟ್ಟನು. ಹೀಗೆ ಬಲಿಪೀಠದ ಬಗ್ಗೆ ದೋಷಪರಿಹಾರಕ ಆಚಾರವನ್ನು ನಡೆಸಿ ಅದನ್ನು ಪವಿತ್ರೀಕರಿಸಿ ಪ್ರತಿಷ್ಠಾಪಿಸಿದನು. |
೧೬ |
ಆ ಹೋರಿಯ ಕರುಳುಗಳ ಸುತ್ತಲಿರುವ ಎಲ್ಲ ಕೊಬ್ಬನ್ನು, ಕಾಳಿಜದ ಹತ್ತಿರವಿರುವ ಕೊಬ್ಬನ್ನು, ಮೂತ್ರಪಿಂಡಗಳನ್ನು ಹಾಗು ಅವುಗಳ ಮೇಲಿರುವ ಕೊಬ್ಬನ್ನು ಮೋಶೆ ತೆಗೆದುಕೊಂಡು ಬಲಿಪೀಠದ ಮೇಲೆ ಹೋಮಮಾಡಿದನು. |
೧೭ |
ಸರ್ವೇಶ್ವರನ ಆಜ್ಞಾನುಸಾರ ಆ ಪ್ರಾಣಿಯ ಮಿಕ್ಕ ಭಾಗಗಳನ್ನು, ಅಂದರೆ ಅದರ ಚರ್ಮ, ಮಾಂಸ ಹಾಗು ಕಲ್ಮಷಗಳನ್ನು ಪಾಳೆಯದ ಹೊರಗೆ ಬೆಂಕಿಯಿಂದ ಸುಡಿಸಿಬಿಟ್ಟನು. |
೧೮ |
ತರುವಾಯ ಅವನು ದಹನ ಬಲಿಗಾಗಿ ಟಗರನ್ನು ತರಿಸಿದನು. ಆರೋನನು ಮತ್ತು ಅವನ ಮಕ್ಕಳು ಅದರ ತಲೆಯ ಮೇಲೆ ತಮ್ಮ ಕೈಗಳನ್ನು ಚಾಚಿದರು. |
೧೯ |
ಅದನ್ನು ವಧಿಸಿದ ಮೇಲೆ ಮೋಶೆ ಅದರ ರಕ್ತವನ್ನು ಬಲಿಪೀಠದ ಸುತ್ತಲೂ ಚಿಮುಕಿಸಿದನು. |
೨೦ |
ಆ ಟಗರನ್ನು ತುಂಡುತುಂಡಾಗಿ ಕಡಿದ ಮೇಲೆ ಮೋಶೆ ಅದರ ತಲೆಯನ್ನೂ ಮಾಂಸಖಂಡಗಳನ್ನೂ ಕೊಬ್ಬನ್ನೂ ಹೋಮಮಾಡಿದನು. |
೨೧ |
ಅದರ ಕರುಳುಗಳನ್ನೂ, ಕಾಲುಗಳನ್ನೂ ನೀರಿನಿಂದ ತೊಳೆಯಿಸಿ ಆ ಟಗರನ್ನು ಬಲಿಪೀಠದ ಮೇಲೆ ಪೂರ್ತಿಯಾಗಿ ಹೋಮಮಾಡಿಬಿಟ್ಟನು. ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದಂತೆಯೇ ಅದು ದಹನಬಲಿ, ಸರ್ವೇಶ್ವರನಿಗೆ ಪ್ರಿಯವಾದ ಸುಗಂಧಕರ ಬಲಿಯಾಯಿತು. |
೨೨ |
ಇದಾದ ಮೇಲೆ ಯಾಜಕಾಭಿಷೇಕಕ್ಕಾಗಿ ಸಮರ್ಪಿಸಬೇಕಾದ ಎರಡನೆಯ ಟಗರನ್ನು ಮೋಶೆ ತರಿಸಿದನು. ಆರೋನನೂ ಅವನ ಮಕ್ಕಳೂ ಅದರ ತಲೆಯ ಮೇಲೆ ತಮ್ಮ ಕೈಗಳನ್ನು ಚಾಚಿದರು. |
೨೩ |
ಅದನ್ನು ವಧಿಸಿದ ನಂತರ ಮೋಶೆ ಅದರ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ಆರೋನನ ಬಲಗಿವಿಯ ತುದಿಗೂ, ಬಲಗೈಯ ಹೆಬ್ಬೆರಳಿಗೂ ಮತ್ತು ಅವನ ಬಲಗಾಲಿನ ಹೆಬ್ಬೆಟ್ಟಿಗೂ ಹಚ್ಚಿದನು. |
೨೪ |
ಬಳಿಕ ಆರೋನನ ಮಕ್ಕಳನ್ನು ಹತ್ತಿರಕ್ಕೆ ಕರೆದು ಆ ರಕ್ತದಲ್ಲಿ ಕಿಂಚಿತ್ತನ್ನು ಅವರವರ ಬಲಗಿವಿಯ ತುದಿಗೂ, ಬಲಗೈಯ ಹೆಬ್ಬೆರಳಿಗು ಹಾಗು ಬಲಗಾಲಿನ ಹೆಬ್ಬೆಟ್ಟಿಗು ಹಚ್ಚಿದನು. ಉಳಿದ ರಕ್ತವನ್ನು ಬಲಿಪೀಠದ ಸುತ್ತಲು ಚಿಮುಕಿಸಿದನು. |
೨೫ |
ಹಾಗೆಯೆ ಮೋಶೆ ಆ ಟಗರಿನ ಕೊಬ್ಬನ್ನು, ಅಂದರೆ ಬಾಲದ ಕೊಬ್ಬು, ಕರುಳುಗಳ ಸುತ್ತಲಿನ ಕೊಬ್ಬು, ಕಾಳಿಜದ ಹತ್ತಿರವಿರುವ ಕೊಬ್ಬು, ಮೂತ್ರಪಿಂಡಗಳು ಅವುಗಳ ಮೇಲಿರುವ ಕೊಬ್ಬು, ಇವುಗಳನ್ನು ಮತ್ತು ಬಲದೊಡೆಯನ್ನು ತೆಗೆದುಕೊಂಡನು. |
೨೬ |
ಸರ್ವೇಶ್ವರನ ಸನ್ನಿಧಿಯಲ್ಲಿ ಬುಟ್ಟಿಯಲ್ಲಿಟ್ಟಿದ್ದ ಹುಳಿಯಿಲ್ಲದ ತಿಂಡಿಪದಾರ್ಥಗಳಲ್ಲಿ ಒಂದು ರೊಟ್ಟಿಯನ್ನು, ಎಣ್ಣೆ ಮಿಶ್ರವಾದ ಒಂದು ಹೋಳಿಗೆಯನ್ನು ಹಾಗು ಒಂದು ಕಡುಬನ್ನು ತೆಗೆದುಕೊಂಡು ಆ ಕೊಬ್ಬಿನ ಮತ್ತು ಬಲದೊಡೆಯ ಮೇಲೆ ಇಟ್ಟನು. |
೨೭ |
ಇವೆಲ್ಲವುಗಳನ್ನು ಆರೋನನ ಮತ್ತು ಅವನ ಮಕ್ಕಳ ಕೈಗಳಿಗೆ ಕೊಟ್ಟು ನೈವೇದ್ಯವೆಂದು ಸೂಚಿಸುವುದಕ್ಕಾಗಿ ಸರ್ವೇಶ್ವರನ ಸನ್ನಿಧಿಯಲ್ಲಿ ಆರತಿಯೆತ್ತಿಸಿದನು. |
೨೮ |
ಆಮೇಲೆ ಮೋಶೆ ಅವುಗಳನ್ನು ಅವರ ಕೈಗಳಿಂದ ತೆಗೆದುಕೊಂಡು ಬಲಿಪೀಠದಲ್ಲಿ ದಹನಬಲಿ ದ್ರವ್ಯದ ಮೇಲಿಟ್ಟು ಹೋಮಮಾಡಿದನು. ಅದು ಸರ್ವೇಶ್ವರನಿಗೆ ಪ್ರಿಯವಾದ ಸುಗಂಧಕರ ದಹನಬಲಿ, ಯಾಜಕಾಭಿಷೇಕ ಬಲಿಯಾಗಿತ್ತು. |
೨೯ |
ಮೋಶೆ ಬಲಿಪ್ರಾಣಿಯ ಎದೇಭಾಗವನ್ನು ತೆಗೆದುಕೊಂಡು ನೈವೇದ್ಯವಾಗಿ ಸರ್ವೇಶ್ವರನ ಸನ್ನಿಧಿಯಲ್ಲಿ ಆರತಿಯೆತ್ತಿದನು. ಸರ್ವೇಶ್ವರನ ಆಜ್ಞಾನುಸಾರ ಆ ಯಾಜಕಾಭಿಷೇಕ ಬಲಿಯ ಟಗರಿನ ಎದೆಯ ಭಾಗ ಮೋಶೆಗೆ ಸಲ್ಲತಕ್ಕದಾಗಿತ್ತು. |
೩೦ |
ಬಳಿಕ ಮೋಶೆ ಅಭಿಷೇಕ ಎಣ್ಣೆಯಿಂದಲೂ ಬಲಿಪೀಠದ ಮೇಲಿದ್ದ ರಕ್ತದಿಂದಲೂ ಸ್ವಲ್ಪ ತೆಗೆದುಕೊಂಡು ಆರೋನನ ಮತ್ತು ಅವನ ವಸ್ತ್ರಗಳ ಮೇಲೂ ಚಿಮುಕಿಸಿದನು. ಹೀಗೆ ಆರೋನನನ್ನೂ ಅವನ ಮಕ್ಕಳನ್ನೂ ಪ್ರತಿಷ್ಠಿಸಿದನು. |
೩೧ |
ಆರೋನನಿಗೂ ಅವನ ಮಕ್ಕಳಿಗೂ ಮೋಶೆ ಹೀಗೆಂದನು: “ಮಾಂಸವನ್ನು ನೀವು ದೇವದರ್ಶನದ ಗುಡಾರದ ಬಾಗಿಲಿನ ಹತ್ತಿರ ಬೇಯಿಸಬೇಕು. ಅದನ್ನೂ ಯಾಜಕಾಭಿಷೇಕಕ್ಕಾಗಿ ಪುಟ್ಟಿಯಲ್ಲಿ ಇಟ್ಟಿರುವ ರೊಟ್ಟಿಗಳನ್ನೂ ನೀವು ಅಲ್ಲೆ ಊಟಮಾಡಬೇಕು. ಇದು ಸರ್ವೇಶ್ವರನು ನನಗಿತ್ತ ಆಜ್ಞೆ. |
೩೨ |
ಆ ಮಾಂಸದಲ್ಲಿ ಹಾಗು ರೊಟ್ಟಿಗಳಲ್ಲಿ ಮಿಕ್ಕದ್ದನ್ನು ನೀವು ಬೆಂಕಿಯಿಂದ ಸುಟ್ಟುಬಿಡಬೇಕು. |
೩೩ |
ಇದಲ್ಲದೆ, ಈ ನಿಮ್ಮ ಯಾಜಕ ಸೇವಾವೃತ್ತಿಯ ದೀಕ್ಷೆಯನ್ನು ಪೂರೈಸುವುದಕ್ಕೆ ಏಳು ದಿವಸ ಹಿಡಿಯುವುದರಿಂದ ಆವರೆಗೂ ನೀವು ದೇವದರ್ಶನದ ಗುಡಾರದ ಬಾಗಿಲಿನ ಆಚೆಗೆ ಹೋಗಬಾರದು. |
೩೪ |
ನಿಮ್ಮ ದೋಷಪರಿಹಾರಕ್ಕಾಗಿ ಈ ದಿನ ಏನೇನು ನಡೆಯಿತೋ ಅದನ್ನು ಏಳು ದಿನವೂ ನಡೆಸಬೇಕೆಂಬುದು ಸರ್ವೇಶ್ವರನ ಆಜ್ಞೆ. |
೩೫ |
ಆದುದರಿಂದ ನೀವು ಆ ಆಜ್ಞೆಯ ಮೇರೆಗೆ ಏಳು ದಿನಗಳೂ ಹಗಲಿರುಳು ದೇವದರ್ಶನದ ಗುಡಾರದ ಬಾಗಿಲಿನ ಹತ್ತಿರ ಇರಬೇಕು; ಇಲ್ಲದಿದ್ದರೆ ಸಾಯುವಿರಿ. ಇದು ಸರ್ವೇಶ್ವರನ ಆಜ್ಞೆ. |
೩೬ |
ಸರ್ವೇಶ್ವರ ಮೋಶೆಯ ಮುಖಾಂತರ ಆಜ್ಞಾಪಿಸಿದ್ದನ್ನೆಲ್ಲಾ ಆರೋನ ಮತ್ತು ಅವನ ಮಕ್ಕಳು ಮಾಡಿದರು.
|
Kannada Bible (KNCL) 2016 |
No Data |