೧ |
“ಪ್ರಾಯಶ್ಚಿತ್ತ ಬಲಿ ನಿಯಮಗಳು ಹೀಗಿವೆ: ಈ ಬಲಿ ಮಹಾಪರಿಶುದ್ಧವಾದುದು. |
೨ |
ದಹನ ಬಲಿಪ್ರಾಣಿಯನ್ನು ವಧಿಸಿದ ಸ್ಥಳದಲ್ಲೇ ಈ ಪ್ರಾಯಶ್ಚಿತ್ತ ಬಲಿಪ್ರಾಣಿಯನ್ನು ವಧಿಸಬೇಕು. ಯಾಜಕನು ಅದರ ರಕ್ತವನ್ನು ಬಲಿಪೀಠದ ಸುತ್ತಲು ಚಿಮುಕಿಸಬೇಕು. |
೩ |
ಅವನು ಅದರ ಕೊಬ್ಬನ್ನೆಲ್ಲ, ಅಂದರೆ ಬಾಲದ ಕೊಬ್ಬನ್ನು, ಕರುಳಿನ ಸುತ್ತಲಿರುವ ಕೊಬ್ಬನ್ನು, |
೪ |
ಮೂತ್ರಪಿಂಡಗಳನ್ನು ಅದರ ಮೇಲಿರುವ ಕೊಬ್ಬನ್ನೂ ಹಾಗು ಕಾಳಿಜದ ಉತ್ತಮ ಭಾಗವನ್ನು ತೆಗೆದು |
೫ |
ಬಲಿಪೀಠದ ಮೇಲೆ ಸರ್ವೇಶ್ವರನಿಗೆ ಹೋಮಮಾಡಬೇಕು. ಇದು ಪ್ರಾಯಶ್ಚಿತ್ತ ಬಲಿ. |
೬ |
ಹೋಮ ಶೇಷವನ್ನು ಯಾಜಕರಲ್ಲಿ ಗಂಡಸರೆಲ್ಲರು ತಿನ್ನಬಹುದು; ಅದು ಮಹಾಪರಿಶುದ್ಧವಾದುದರಿಂದ ಪವಿತ್ರ ಸ್ಥಳದೊಳಗೇ ಅದನ್ನು ತಿನ್ನಬೇಕು. |
೭ |
ಈ ಪ್ರಾಯಶ್ಚಿತ್ತ ಹಾಗು ದೋಷಪರಿಹಾರಕ ಬಲಿ ಹೋಮ ಶೇಷಗಳಿಗೆ ಇರುವ ವಿಧಿ ಒಂದೇ; ಈ ಹೋಮಶೇಷಗಳು ದೋಷಪರಿಹಾರವನ್ನು ಮಾಡಿಸುವ ಯಾಜಕನಿಗೆ ಸಲ್ಲತಕ್ಕವು. |
೮ |
ಯಾರಾದರು ದಹನಬಲಿಗಾಗಿ ಒಂದು ಪ್ರಾಣಿಯನ್ನು ತಂದಾಗ, ಅದರ ಚರ್ಮ ಆ ಪಶುವನ್ನು ಸಮರ್ಪಿಸುವ ಯಾಜಕನಿಗೆ ಸೇರಬೇಕು. |
೯ |
ಒಲೆಯಲ್ಲಾಗಲಿ, ಕಬ್ಬಿಣದ ಹಂಚಿನಲ್ಲಾಗಲಿ, ಬಾಂಡ್ಲಿಯಲ್ಲಾಗಲಿ ಬೇಯಿಸಿದ ನೈವೇದ್ಯ ಪದಾರ್ಥವೆಲ್ಲ ಅದನ್ನು ಸಮರ್ಪಿಸುವ ಯಾಜಕನಿಗೆ ಸೇರತಕ್ಕದ್ದು. |
೧೦ |
ಆದರೆ ಎಣ್ಣೆ ಹೊಯ್ದ ಹಿಟ್ಟನ್ನಾಗಲಿ, ಬರಿ ಹಿಟ್ಟನ್ನಾಗಲಿ ಯಾರಾದರು ನೈವೇದ್ಯಕ್ಕಾಗಿ ತಂದಾಗ ಅದನ್ನು ಆರೋನನ ವಂಶದವರೆಲ್ಲರು ಸಮವಾಗಿ ಅನುಭವಿಸತಕ್ಕದ್ದು. |
೧೧ |
“ಶಾಂತಿ ಸಮಾಧಾನದ ಬಲಿ ನಿಯಮಗಳು ಇವು: |
೧೨ |
ಯಾರಾದರು ಕೃತಜ್ಞತೆಯನ್ನು ಸಲ್ಲಿಸುವುದಕ್ಕಾಗಿ ಶಾಂತಿಸಮಾಧಾನದ ಬಲಿಯನ್ನು ಸರ್ವೇಶ್ವರನಿಗೆ ಅರ್ಪಿಸಲಾಶಿಸಿದರೆ ಆ ಬಲಿಪ್ರಾಣಿಯ ಸಮೇತ ಎಣ್ಣೆ ಮಿಶ್ರವಾದ ಹುಳಿಯಿಲ್ಲದ ಹೋಳಿಗೆಗಳನ್ನು, ಎಣ್ಣೆ ಹಾಕಿದ ಹುಳಿಯಿಲ್ಲದ ಕಡಬುಗಳನ್ನು ಹಾಗು ಎಣ್ಣೆಯಿಂದ ಪೂರ್ತಿಯಾಗಿ ತೋಯಿಸಿದ ಗೋದಿಹಿಟ್ಟಿನ ಹೋಳಿಗೆಗಳನ್ನು ಸಮರ್ಪಿಸಬೇಕು. |
೧೩ |
ಅದೂ ಅಲ್ಲದೆ ಹುಳಿರೊಟ್ಟಿಗಳನ್ನು ಕೂಡ ಸಮರ್ಪಿಸಬೇಕು. |
೧೪ |
ಸಮರ್ಪಿಸುವ ಪ್ರತಿಯೊಂದು ವಿಧವಾದ ಪದಾರ್ಥಗಳಲ್ಲಿಯೂ ಒಂದೊಂದನ್ನು ಸರ್ವೇಶ್ವರನಿಗೋಸ್ಕರ ಪ್ರತ್ಯೇಕಿಸಬೇಕು. ಅವು ಪೀಠಕ್ಕೆ ಬಲಿಪ್ರಾಣಿಯ ರಕ್ತವನ್ನು ಚಿಮುಕಿಸಿದ ಯಾಜಕನಿಗೆ ಸೇರಬೇಕು. |
೧೫ |
ಕೃತಜ್ಞತಾ ಬಲಿಪ್ರಾಣಿಯ ಮಾಂಸವನ್ನು ಬಲಿ ನಡೆದ ದಿನದಲ್ಲೇ ಭೋಜನ ಮಾಡಬೇಕು. ಮರುದಿನದವರೆಗೆ ಕಿಂಚಿತ್ತನ್ನೂ ಉಳಿಸಬಾರದು. |
೧೬ |
“ಯಾರಾದರು ಹರಕೆಯನ್ನು ಸಲ್ಲಿಸುವುದಕ್ಕಾಗಿ ಅಥವಾ ಸ್ವೇಚ್ಛೆಯಿಂದ ಅಂಥ ಬಲಿಯನ್ನು ಒಪ್ಪಿಸಿದರೆ ಅದನ್ನು ಸಮರ್ಪಿಸಿದ ದಿನದಲ್ಲೇ ಅದರ ಮಾಂಸವನ್ನು ಪೂರ್ತಿಯಾಗಿ ಊಟ ಮಾಡಬೇಕಾಗಿಲ್ಲ; ಮಿಕ್ಕದ್ದನ್ನು ಮರುದಿನ ತಿನ್ನಬಹುದು. |
೧೭ |
ಆದರೆ ಮೂರನೆಯ ದಿನದವರೆಗೆ ಉಳಿದಿದ್ದನ್ನು ಬೆಂಕಿಯಿಂದ ಸುಟ್ಟುಬಿಡಬೇಕು. |
೧೮ |
ಆ ಬಲಿಪ್ರಾಣಿಯ ಮಾಂಸದಲ್ಲಿ ಸ್ವಲ್ಪವನ್ನಾದರೂ ಮೂರನೆಯ ದಿನದಲ್ಲಿ ಊಟಮಾಡಿದ್ದೇ ಆದರೆ ಆ ಬಲಿ ಸ್ವೀಕೃತವಾಗುವುದಿಲ್ಲ. ಅರ್ಪಿಸಿದವನಿಗೆ ಅದರಿಂದ ಫಲವೇನೂ ದೊರಕುವುದಿಲ್ಲ. ಅದು ಹೇಯವಾದುದರಿಂದ ಅದನ್ನು ತಿಂದವನು ಆ ಪಾಪದ ಫಲವನ್ನು ಅನುಭವಿಸಬೇಕು. |
೧೯ |
“ಅಶುದ್ಧವಾದ ವಸ್ತುವಿಗೆ ಸೋಂಕಿದ ಮಾಂಸವನ್ನು ಬೆಂಕಿಯಲ್ಲಿ ಸುಟ್ಟುಬಿಡಬೇಕು. |
೨೦ |
“ಶುದ್ಧವಾಗಿರುವವರೆಲ್ಲರು ಬಲಿಪ್ರಾಣಿಯ ಮಾಂಸವನ್ನು ತಿನ್ನಬಹುದು. |
೨೧ |
“ಯಾರಾದರು ಅಶುದ್ಧರಾಗಿದ್ದು ಸರ್ವೇಶ್ವರನಿಗೆ ಸಮರ್ಪಿತವಾದ ಶಾಂತಿಸಮಾಧಾನದ ಬಲಿಪ್ರಾಣಿಯ ಮಾಂಸವನ್ನು ತಿಂದರೆ ಅಂಥವರನ್ನು ತಮ್ಮ ಕುಲದಿಂದ ತೆಗೆದುಹಾಕಬೇಕು. |
೨೨ |
ಯಾರಿಗಾದರು ಮನುಷ್ಯ ದೇಹದಿಂದುಂಟಾದ ಅಶುದ್ಧವಸ್ತು, ಅಶುದ್ಧ ಮೃಗ, ನಿಷಿದ್ಧವಸ್ತು, ಇವುಗಳಲ್ಲಿ ಯಾವುದಾದರೂ ಸೋಂಕಿದರೆ ಅಂಥವರು ಸರ್ವೇಶ್ವರನಿಗೆ ಸಮರ್ಪಿತವಾದ ಬಲಿಪ್ರಾಣಿಯ ಮಾಂಸವನ್ನು ತಿನ್ನಕೂಡದು; ತಿಂದರೆ ಕುಲದಿಂದ ಬಹಿಷ್ಕೃತರಾಗಬೇಕು. |
೨೩ |
ಸರ್ವೇಶ್ವರ ಮೋಶೆಗೆ ಇಂತೆಂದರು: “ನೀನು ಇಸ್ರಯೇಲರಿಗೆ ಹೀಗೆ ಆಜ್ಞೆ ಮಾಡು:- ನೀವು ಎತ್ತು, ಕುರಿ ಹಾಗು ಆಡುಗಳ ಕೊಬ್ಬನ್ನು ತಿನ್ನಬಾರದು. |
೨೪ |
ಅಂಥ ಪ್ರಾಣಿ ರೋಗದಿಂದ ಸತ್ತರೆ, ಇಲ್ಲವೆ ಕಾಡುಮೃಗದಿಂದ ಕೊಲ್ಲಲ್ಪಟ್ಟರೆ ಅದರ ಕೊಬ್ಬನ್ನು ಬೇರೆ ಕೆಲಸಕ್ಕೆ ಉಪಯೋಗಿಸಿಕೊಳ್ಳಬಹುದು; ಆದರೆ ಎಷ್ಟು ಮಾತ್ರಕ್ಕೂ ತಿನ್ನಬಾರದು. |
೨೫ |
ಜನರು ಸರ್ವೇಶ್ವರನಿಗೆ ಹೋಮ ಮಾಡುವಂಥ ಪ್ರಾಣಿಪಶುಗಳ ಕೊಬ್ಬನ್ನು ಯಾರಾದರು ತಿಂದರೆ ಅವರು ಕುಲದಿಂದ ಬಹಿಷ್ಕೃತರಾಗಬೇಕು. |
೨೬ |
ಪಕ್ಷಿಯದಾಗಲಿ, ಪ್ರಾಣಿಯದಾಗಲಿ ಯಾವ ರಕ್ತವನ್ನೂ ನೀವು ಎಲ್ಲಿಯೂ ಊಟಮಾಡಬಾರದು. |
೨೭ |
ರಕ್ತವನ್ನು ಭೋಜನ ಮಾಡಿದವನು ಕುಲದಿಂದ ಬಹಿಷ್ಕೃತನಾಗಬೇಕು.” |
೨೮ |
ಮೋಶೆಗೆ ಸರ್ವೇಶ್ವರ ಹೇಳಿದ್ದೇನೆಂದರೆ: |
೨೯ |
“ಇಸ್ರಯೇಲರಿಗೆ ಹೀಗೆಂದು ಆಜ್ಞಾಪಿಸು: ಶಾಂತಿಸಮಾಧಾನದ ಬಲಿಪ್ರಾಣಿಯನ್ನು ಸರ್ವೇಶ್ವರನಿಗೆ ಸಮರ್ಪಿಸುವವನು ಆ ಬಲಿದ್ರವ್ಯಗಳಲ್ಲಿ ಸರ್ವೇಶ್ವರನಿಗೆ ಸಲ್ಲಬೇಕಾದುದನ್ನು ತಂದುಕೊಡಬೇಕು. |
೩೦ |
ಸರ್ವೇಶ್ವರನಿಗೆ ಹೋಮರೂಪವಾಗಿ ಸಮರ್ಪಿಸಬೇಕಾದುದನ್ನು ಅಂದರೆ ಪ್ರಾಣಿಯ ಕೊಬ್ಬನ್ನು ತನ್ನ ಕೈಯಿಂದಲೆ ಕೊಡಬೇಕು. ಅದರೊಂದಿಗೆ ಅದರ ಎದೆಯ ಭಾಗವನ್ನು ನೈವೇದ್ಯರೂಪವಾಗಿ ಸರ್ವೇಶ್ವರನ ಸನ್ನಿಧಿಯಲ್ಲಿ ಆರತಿಯೆತ್ತಲು ತಂದು ಸಮರ್ಪಿಸಬೇಕು. |
೩೧ |
ಯಾಜಕನು ಆ ಕೊಬ್ಬನ್ನು ಬಲಿಪೀಠದ ಮೇಲೆ ಹೋಮಮಾಡಬೇಕು. ಎದೆಯ ಭಾಗ ಆರೋನನಿಗೂ ಅವನ ವಂಶಜರಿಗೂ ಸೇರಬೇಕು. |
೩೨ |
ನೀವು ಶಾಂತಿಸಮಾಧಾನದ ಬಲಿದ್ರವ್ಯಗಳಲ್ಲಿ ಪ್ರಾಣಿಯ ಬಲತೊಡೆಯನ್ನು ಯಾಜಕನಿಗಾಗಿ ಪ್ರತ್ಯೇಕಿಸಿ ಕೊಡಬೇಕು. |
೩೩ |
ಆರೋನನ ವಂಶಜರಲ್ಲಿ ಯಾವನು ಆ ಬಲಿಪ್ರಾಣಿಯ ರಕ್ತವನ್ನು ಹಾಗು ಕೊಬ್ಬನ್ನು ಅರ್ಪಿಸುತ್ತಾನೋ, ಆ ಪ್ರಾಣಿಯ ಬಲತೊಡೆ ಅವನ ಪಾಲಿಗೆ ಸೇರಬೇಕು. |
೩೪ |
ಶಾಂತಿಸಮಾಧಾನದ ಬಲಿಪ್ರಾಣಿಯ ಮಾಂಸದಲ್ಲಿ ನೈವೇದ್ಯರೂಪವಾಗಿ ಆರತಿಯೆತ್ತುವ ಎದೆಯ ಭಾಗವನ್ನು ಮತ್ತು ಯಾಜಕನಿಗಾಗಿ ಪ್ರತ್ಯೇಕಿಸುವ ತೊಡೆಯನ್ನು ಸರ್ವೇಶ್ವರ ಇಸ್ರಯೇಲ್ ಜನರಿಂದ ತೆಗೆದುಕೊಂಡು ಮಹಾಯಾಜಕ ಆರೋನನಿಗೂ ಅವನ ವಂಶಜರಿಗೂ ಕೊಟ್ಟು, ಅದು ಶಾಶ್ವತ ನಿಯಮವಾಗಿ ಅವರಿಗೆ ಸಲ್ಲುವಂತೆ ಮಾಡಿದ್ದಾರೆ. |
೩೫ |
ಸರ್ವೇಶ್ವರನಿಗೆ ಹೋಮರೂಪವಾಗಿ ಅರ್ಪಿತವಾದ ದ್ರವ್ಯಗಳಲ್ಲಿ ಇವೇ ಆರೋನನಿಗೂ ಅವನ ವಂಶಜರಿಗೂ ಶಾಶ್ವತವಾಗಿ ಸಲ್ಲತಕ್ಕ ಭಾಗಗಳು. ಮೋಶೆ ಅವರನ್ನು ಸರ್ವೇಶ್ವರನ ಸನ್ನಿಧಿಯಲ್ಲಿ ಯಾಜಕ ಸೇವಾವೃತ್ತಿಗಾಗಿ ಪ್ರತಿಷ್ಠಾಪಿಸಿದ ದಿನದಂದೇ ಇದು ನೇಮಕವಾಯಿತು. |
೩೬ |
ಇಸ್ರಯೇಲರು ಇವುಗಳನ್ನು ಯಾಜಕರಿಗೆ ಸಲ್ಲಿಸಬೇಕೆಂದು ಸರ್ವೇಶ್ವರ ಅವರನ್ನು ಮೋಶೆಯ ಮುಖಾಂತರ ಪ್ರತಿಷ್ಠಿಸಿ ಅಭಿಷೇಕಿಸಿದ ದಿನದಲ್ಲೇ ವಿಧಿಸಿದರು.” |
೩೭ |
ದಹನಬಲಿದಾನ, ಧಾನ್ಯನೈವೇದ್ಯ, ದೋಷಪರಿಹಾರಕ ಬಲಿ, ಪ್ರಾಯಶ್ಚಿತ್ತ ಬಲಿ, ಯಾಜಕ ಅಭ್ಯಂಜನ ಬಲಿ, ಶಾಂತಿಸಮಾಧಾನ ಬಲಿ ಎಂಬ ಇವುಗಳ ವಿಷಯದಲ್ಲಿ ಮೇಲೆ ಹೇಳಿದ್ದೇ ಬಲಿದಾನ ವಿಧಿಗಳು. |
೩೮ |
ಸರ್ವೇಶ್ವರ ಸೀನಾಯಿ ಬೆಟ್ಟದಲ್ಲಿ ಮೋಶೆಗೆ ಈ ಆಜ್ಞೆಗಳನ್ನು ಕೊಟ್ಟರು. ಸೀನಾಯಿ ಮರುಭೂಮಿಯಲ್ಲಿ ಇಸ್ರಯೇಲರು ಅರ್ಪಿಸಬೇಕಾದುದನ್ನು ಸರ್ವೇಶ್ವರನಿಗೆ ಅರ್ಪಿಸಬೇಕೆಂದು ಮೋಶೆ ಆಜ್ಞಾಪಿಸಿ ಮೇಲ್ಕಂಡ ವಿಧಿಗಳನ್ನು ಕೊಟ್ಟನು.
|
Kannada Bible (KNCL) 2016 |
No Data |