೧ |
ಸರ್ವೇಶ್ವರ ಸ್ವಾಮಿ ಮೋಶೆಗೆ ಹೀಗೆಂದರು: |
೨ |
“ನಿಮ್ಮಲ್ಲಿ ಯಾರಾದರು ಮತ್ತೊಬ್ಬನಿಂದ ತಮ್ಮ ವಶಕ್ಕೆ ಕೊಡಲಾದ ವಸ್ತುವಿನ ವಿಷಯದಲ್ಲಾಗಲಿ, ತಮ್ಮ ಬಳಿಯಲ್ಲಿ ಇಡಲಾದ ಅಡವಿನ ವಿಷಯದಲ್ಲಾಗಲಿ, ತಾನು ಮಾಡಿದ ಕಳವಿನ ವಿಷಯದಲ್ಲಾಗಲಿ, ಸುಳ್ಳಾಡಿಯೋ, ಮತ್ತೊಬ್ಬನನ್ನು ಮೋಸಗೊಳಿಸಿಯೋ |
೩ |
ಮತ್ತೊಬ್ಬನು ಕಳೆದುಕೊಂಡದ್ದನ್ನು ತಾವು ಕಂಡು ಬೊಂಕಿಯೋ, ಸುಳ್ಳಾಣೆಯಿಟ್ಟೋ ಅವುಗಳನ್ನು ಹಿಂದಿರುಗಿಸದೆ ತಮ್ಮಲ್ಲೇ ಇಟ್ಟುಕೊಂಡರೆ, ಇಂಥ ವಿಷಯಗಳಲ್ಲಿ ಪಾಪಮಾಡಿ, ಸರ್ವೇಶ್ವರನಿಗೆ ದ್ರೋಹಿಗಳಾಗಿ ದೋಷಕ್ಕೆ ಒಳಗಾಗುತ್ತಾರೆ. |
೪ |
ಅಂಥವರು ಆಯಾ ವಸ್ತುಗಳನ್ನು, ಅಂದರೆ ಕದ್ದದ್ದನ್ನು, ಮೋಸದಿಂದ ಪಡೆದದ್ದನ್ನು, ತಮ್ಮ ವಶಕ್ಕೆ ತೆಗೆದುಕೊಂಡದ್ದನ್ನು ಪೂರ್ತಿಯಾಗಿ ಹಿಂದಕ್ಕೆ ತಂದುಕೊಡಬೇಕು. ಅದೂ ಅಲ್ಲದೆ, ಐದನೆಯ ಒಂದು ಪಾಲನ್ನು ಹೆಚ್ಚಾಗಿ ಸೇರಿಸಿಕೊಡಬೇಕು. ಅವರು ಪರಿಹಾರ ಮಾಡುವ ದಿನದಲ್ಲೆ ಅದನ್ನು ಅದರ ನಿಜವಾದ ಒಡೆಯನಿಗೆ ಹಿಂದಕ್ಕೆ ಕೊಡಬೇಕು. |
೫ |
*** |
೬ |
ಅವರು ಪರಿಹಾರಕ್ಕಾಗಿ, ತಮ್ಮ ಹಿಂಡಿನಿಂದ ಕಳಂಕರಹಿತವಾದ ಒಂದು ಟಗರನ್ನು ಅಥವಾ ಅದಕ್ಕೆ ಸರಿಸಮಾನವಾದುದ್ದನ್ನು ತಂದು ಯಾಜಕನಿಗೆ ಒಪ್ಪಿಸಬೇಕು. |
೭ |
ಯಾಜಕನು ಅವರಿಗೋಸ್ಕರ ಸರ್ವೇಶ್ವರನ ಸನ್ನಿಧಿಯಲ್ಲಿ ದೋಷಪರಿಹಾರವನ್ನು ಮಾಡಿದಾಗ ಅವರು ಯಾವ ವಿಷಯದಲ್ಲಿ ಅಪರಾಧಕ್ಕೆ ಒಳಗಾದರೋ ಆ ವಿಷಯದಲ್ಲಿ ಅವರಿಗೆ ಕ್ಷಮೆ ದೊರಕುವುದು.” |
೮ |
ಮೋಶೆಗೆ ಸರ್ವೇಶ್ವರ ಹೀಗೆಂದರು: |
೯ |
“ನೀನು ಆರೋನನಿಗೂ ಅವನ ವಂಶದವರಿಗೂ ಈ ಕೆಳಕಂಡ ದಹನ ಬಲಿಯ ಈ ನಿಯಮಗಳನ್ನು ಆಜ್ಞಾಪಿಸು: ದಹನ ಬಲಿ ದ್ರವ್ಯವು ರಾತ್ರಿಯೆಲ್ಲಾ, ಮರುದಿನದ ಬೆಳಗಿನವರೆಗೂ ಬಲಿಪೀಠದ ಮೇಲೆ ಉರಿಯುತ್ತಿರಬೇಕು. ಅದರಿಂದಲೇ ಬಲಿಪೀಠದ ಮೇಲಿನ ಬೆಂಕಿ ಹೊತ್ತಿ ಉರಿಯುತ್ತಿರಬೇಕು. |
೧೦ |
ಯಾಜಕನು ನಾರುಮಡಿಯ ನಿಲುವಂಗಿಯನ್ನು ಧರಿಸಿಕೊಂಡು, ಮಾನರಕ್ಷಕವಾದ ನಾರುಮಡಿ ಚಡ್ಡಿಯನ್ನು ಹಾಕಿಕೊಂಡು ಬಲಿಪೀಠದ ಮೇಲಿನ ದಹನಬಲಿ ದ್ರವ್ಯದ ಬೂದಿಯನ್ನು ಎತ್ತಿ ವೇದಿಕೆಯ ಬಳಿ ಇಡಬೇಕು. |
೧೧ |
ಅನಂತರ ತನ್ನ ವಸ್ತ್ರಗಳನ್ನು ಬದಲಾಯಿಸಿಕೊಂಡು ಆ ಬೂದಿಯನ್ನು ಪಾಳೆಯದ ಹೊರಗೆ ಶುದ್ಧವಾದ ಒಂದು ಸ್ಥಳಕ್ಕೆ ತೆಗೆದುಕೊಂಡು ಹೋಗಬೇಕು. |
೧೨ |
ಬಲಿಪೀಠದ ಮೇಲಿನ ಬೆಂಕಿ ದಹನಬಲಿ ದ್ರವ್ಯದಿಂದ ಉರಿಯುತ್ತಲೇ ಇರಬೇಕು. ಅದು ಆರಿಹೋಗಬಾರದು. ಪ್ರತೀ ದಿನ ಬೆಳಿಗ್ಗೆ ಯಾಜಕನು ಕಟ್ಟಿಗೆಯನ್ನು ತಂದುಹಾಕಿ ಉರಿಸಿ, ಅದರ ಮೇಲೆ ದಹನ ದ್ರವ್ಯವನ್ನು ಕ್ರಮಪಡಿಸಿ, ಶಾಂತಿಸಮಾಧಾನ ಬಲಿಪ್ರಾಣಿಗಳ ಕೊಬ್ಬನ್ನು ಅದರ ಮೇಲೆ ಹೋಮಮಾಡಬೇಕು. |
೧೩ |
ಬಲಿಪೀಠದ ಮೇಲೆ ಬೆಂಕಿ ಯಾವಾಗಲೂ ಉರಿಯುತ್ತಿರಬೇಕು, ಆರಿಹೋಗಬಾರದು. |
೧೪ |
“ಧಾನ್ಯನೈವೇದ್ಯದ ಬಗ್ಗೆ ನಿಯಮಗಳಿವು: ಆರೋನನ ವಂಶಜರು ನೈವೇದ್ಯ ದ್ರವ್ಯವನ್ನು ಸರ್ವೇಶ್ವರನ ಸನ್ನಿಧಿಯಲ್ಲಿ ಬಲಿಪೀಠದ ಎದುರಿಗೇ ಸಮರ್ಪಿಸಬೇಕು. |
೧೫ |
ಅವರಲ್ಲಿ ಒಬ್ಬನು ನೈವೇದ್ಯವಾದುದನ್ನು ಸೂಚಿಸುವುದಕ್ಕಾಗಿ ಎಣ್ಣೆ ಹೊಯ್ದ ಹಿಟ್ಟಿನಲ್ಲಿ ಒಂದು ಹಿಡಿಯನ್ನೂ ಅದರ ಮೇಲಿರುವ ಸಾಂಬ್ರಾಣಿಯೆಲ್ಲವನ್ನೂ ತೆಗೆದುಕೊಂಡು ಬಲಿಪೀಠದ ಮೇಲೆ ಹೋಮಮಾಡಿ ಸರ್ವೇಶ್ವರನಿಗೆ ಸುವಾಸನೆಯನ್ನುಂಟು ಮಾಡಬೇಕು. |
೧೬ |
ಮಿಕ್ಕದ್ದನ್ನು ಆರೋನನೂ ಅವನ ವಂಶಜರೂ ತಿನ್ನಬಹುದು. ಅವರು ಅದರಿಂದ ಹುಳಿಯಿಲ್ಲದ ರೊಟ್ಟಿಗಳನ್ನು ಮಾಡಿಸಿಕೊಂಡು ಪವಿತ್ರಸ್ಥಳದೊಳಗೆ, ಅಂದರೆ ದೇವದರ್ಶನದ ಗುಡಾರದ ಅಂಗಳದಲ್ಲಿ ತಿನ್ನಬೇಕು. |
೧೭ |
ಸರ್ವೇಶ್ವರನಿಗೆ ಹೋಮ ರೂಪವಾಗಿ ಸಮರ್ಪಿಸಿದ ದ್ರವ್ಯಗಳಲ್ಲಿ ಅದನ್ನು ಅವರ ಪಾಲಿಗೆ ಬಿಡಲಾಗಿದೆ. ಅದಕ್ಕೆ ಹುಳಿ ಕಲಸಿ ಸುಡಕೂಡದು. ದೋಷಪರಿಹಾರಕ ಬಲಿಯಂತೆ ಹಾಗು ಪ್ರಾಯಶ್ಚಿತ್ತ ಬಲಿದ್ರವ್ಯದಂತೆ ಅದು ಸಹ ಮಹಾಪರಿಶುದ್ಧವಾದುದು. |
೧೮ |
ಆರೋನನ ವಂಶಜರಾದ ಗಂಡಸರೆಲ್ಲರು ಅದನ್ನು ತಿನ್ನಬಹುದು. ಸರ್ವೇಶ್ವರನಿಗೆ ಹೋಮವಾಗಿ ಅರ್ಪಿತವಾದ ದ್ರವ್ಯಗಳಲ್ಲಿ ಅದು ಶಾಶ್ವತ ನಿಯಮವಾಗಿ ಆರೋನನ ಸಂತತಿಗೆ ಸಲ್ಲತಕ್ಕದು. ಆ ದ್ರವ್ಯಗಳಿಗೆ ಸೋಂಕಿದೆಲ್ಲವೂ ಪರಿಶುದ್ಧವಾಗುವುದು. |
೧೯ |
ಮೋಶೆಗೆ ಸರ್ವೇಶ್ವರ ಹೀಗೆಂದು ತಿಳಿಸಿದರು: |
೨೦ |
“ಆರೋನನಿಗೆ ಅಭಿಷೇಕವಾದ ದಿನ ಮೊದಲ್ಗೊಂಡು ಅವನೂ ಅವನ ವಂಶಜರೂ ಸರ್ವೇಶ್ವರನಿಗೆ ಸಮರ್ಪಿಸಬೇಕಾದ ಧಾನ್ಯನೈವೇದ್ಯದ ಕ್ರಮ ಇದು: ಅವರು ದಿನನಿತ್ಯವೂ ಮೂರು ಸೇರು ಗೋದಿಹಿಟ್ಟನ್ನು, ಬೆಳಿಗ್ಗೆ ಅರ್ಧ, ಸಂಜೆ ಅರ್ಧ, ಸಮರ್ಪಿಸಬೇಕು. |
೨೧ |
ಕಬ್ಬಿಣದ ಹೆಂಚಿನ ಮೇಲೆ ಎಣ್ಣೆ ಸವರಿ ಅದನ್ನು ಸುಡಬೇಕು. ಅದನ್ನು ತರುವಾಗ ಅದು ಎಣ್ಣೆಯಿಂದ ನೆನೆದೇ ಇರಬೇಕು. ಅದನ್ನು ಭಾಗಭಾಗವಾಗಿ ಮಾಡಿ ಸರ್ವೇಶ್ವರನಿಗೆ ಸುವಾಸನೆಯುಳ್ಳ ನೈವೇದ್ಯವನ್ನಾಗಿ ಸಮರ್ಪಿಸಬೇಕು. |
೨೨ |
ಆರೋನನ ಸಂತತಿಯವರಲ್ಲಿ ಯಾವನು ಅವನ ತರುವಾಯ ಅಭಿಷಿಕ್ತ ಯಾಜಕಪಟ್ಟಕ್ಕೆ ಬರುತ್ತಾನೋ ಅವನೇ ಅದನ್ನು ಸಮರ್ಪಿಸಬೇಕು. ಇದು ಶಾಶ್ವತ ನಿಯಮ. |
೨೩ |
“ಯಾಜಕರು ತಮಗೋಸ್ಕರ ಸಮರ್ಪಿಸುವ ನೈವೇದ್ಯ ದ್ರವ್ಯಗಳನ್ನು ನಿಶ್ಯೇಷವಾಗಿ ಹೋಮಮಾಡಿ ಬಿಡಬೇಕು; ಅದನ್ನು ತಿನ್ನಲೇಕೂಡದು.” |
೨೪ |
ಮೋಶೆಗೆ ಸರ್ವೇಶ್ವರ ಹೀಗೆಂದರು: |
೨೫ |
“ನೀನು ಆರೋನನಿಗೂ ಅವನ ವಂಶಜರಿಗೂ ದೋಷಪರಿಹಾರಕ ಬಲಿ ನಿಯಮಗಳ ಬಗ್ಗೆ ಹೀಗೆ ಆಜ್ಞಾಪಿಸು: ದಹನ ಬಲಿಪ್ರಾಣಿಯನ್ನು ವಧಿಸುವ ಸ್ಥಳದಲ್ಲೇ ದೋಷಪರಿಹಾರಕ ಬಲಿಪ್ರಾಣಿಗಳನ್ನು ಸರ್ವೇಶ್ವರನ ಸನ್ನಿಧಿಯಲ್ಲಿ ವಧಿಸಬೇಕು. |
೨೬ |
ಅದು ಮಹಾಪರಿಶುದ್ಧವಾದ್ದರಿಂದ ಸಮರ್ಪಿಸುವ ಯಾಜಕನು ಅದರ ಮಾಂಸವನ್ನು ಊಟಮಾಡಬೇಕು. ಅದನ್ನು ಪವಿತ್ರ ಸ್ಥಳದೊಳಗೆ, ಅಂದರೆ ದೇವದರ್ಶನದ ಗುಡಾರದ ಅಂಗಳದಲ್ಲಿ ಊಟಮಾಡಬೇಕು. |
೨೭ |
ಆ ಪ್ರಾಣಿಯ ಮಾಂಸಕ್ಕೆ ಸೋಂಕಿದ್ದೆಲ್ಲವೂ ಪರಿಶುದ್ಧವಾಗುವುದು, ಅದರ ರಕ್ತದಲ್ಲಿ ಸ್ವಲ್ಪವಾದರೂ ಬಟ್ಟೆಯ ಮೇಲೆ ಬಿದ್ದರೆ ಆ ಬಟ್ಟೆಯನ್ನು ಪವಿತ್ರ ಸ್ಥಳದಲ್ಲೇ ಒಗೆದುಕೊಳ್ಳಬೇಕು. |
೨೮ |
ಅದನ್ನು ಬೇಯಿಸಿದ ಮಣ್ಣಿನ ಪಾತ್ರೆಯನ್ನು ಒಡೆದುಬಿಡಬೇಕು. ತಾಮ್ರದ ಪಾತ್ರೆಯಲ್ಲಿ ಬೇಯಿಸಿದ್ದಾದರೆ ಆ ಪಾತ್ರೆಯನ್ನು ಬೆಳಗಿ ನೀರಿನಿಂದ ತೊಳೆಯಬೇಕು. |
೨೯ |
ಯಾಜಕರಲ್ಲಿ ಗಂಡಸರೆಲ್ಲರು ಅದನ್ನು ತಿನ್ನಬಹುದು; ಅದು ಮಹಾಪರಿಶುದ್ಧವಾದುದು. |
೩೦ |
ಆದರೆ ದೋಷಪರಿಹಾರಕ ಬಲಿಪ್ರಾಣಿಗಳಲ್ಲಿ ಯಾವ ಪ್ರಾಣಿಯ ರಕ್ತವು ದೋಷಪರಿಹಾರಕ್ಕಾಗಿ ದೇವದರ್ಶನದ ಗುಡಾರದೊಳಗೆ ತರಲಾಗಿದೆಯೋ ಅದರ ಮಾಂಸವನ್ನು ತಿನ್ನಲೇಬಾರದು; ಅದನ್ನು ಬೆಂಕಿಯಲ್ಲಿ ಸುಟ್ಟುಬಿಡಬೇಕು.
|
Kannada Bible (KNCL) 2016 |
No Data |