೧ |
ಇಸ್ರಯೇಲರಿಗೆ ಈ ಕೆಳಕಂಡಂತೆ ಆಜ್ಞಾಪಿಸಬೇಕೆಂದು ಸರ್ವೇಶ್ವರ ಸ್ವಾಮಿ ಮೋಶೆಗೆ ತಿಳಿಸಿದರು. |
೨ |
“ಯಾರಾದರು ನರಮಾನವರ ಪ್ರಾಣವನ್ನು ಸರ್ವೇಶ್ವರನಿಗೆ ಹರಕೆಮಾಡಿ ಪ್ರತಿಷ್ಠಿಸಿದರೆ, ಅವುಗಳನ್ನು ಬಿಡಿಸುವುದಕ್ಕೆ ದೇವರ ಸೇವೆಗೆ ನೇಮಕವಾದ ಬೆಳ್ಳಿನಾಣ್ಯದ ಮೇರೆಗೆ ನೀವು ಅವರಿಂದ ಕೊಡಿಸಬೇಕಾದ ಈಡಿನ ವಿವರ ಹೀಗಿದೆ. |
೩ |
ಇಪ್ಪತ್ತರಿಂದ ಅರವತ್ತು ವರ್ಷ ವಯಸ್ಸುಳ್ಳ ಪುರುಷನ ಪರವಾಗಿ ಐವತ್ತು ಬೆಳ್ಳಿನಾಣ್ಯಗಳನ್ನು ಹಾಗು |
೪ |
ಸ್ತ್ರೀಯ ಪರವಾಗಿ ಮೂವತ್ತು ಬೆಳ್ಳಿನಾಣ್ಯಗಳನ್ನು ಕೊಡಿಸಬೇಕು. |
೫ |
ಐದರಿಂದ ಇಪ್ಪತ್ತು ವರ್ಷ ವಯಸ್ಸುಳ್ಳ ಪುರುಷನ ಪರವಾಗಿ ಇಪ್ಪತ್ತು ಬೆಳ್ಳಿನಾಣ್ಯಗಳನ್ನು ಹಾಗು ಸ್ತ್ರೀಯ ಪರವಾಗಿ ಹತ್ತು ಬೆಳ್ಳಿನಾಣ್ಯಗಳನ್ನು ಕೊಡಿಸಬೇಕು. |
೬ |
ಒಂದು ತಿಂಗಳ ವಯಸ್ಸಿನಿಂದ ಐದು ವರ್ಷ ವಯಸ್ಸಿನ ಹುಡುಗನ ಪರವಾಗಿ ಐದು ಬೆಳ್ಳಿನಾಣ್ಯಗಳನ್ನೂ ಹುಡುಗಿಯ ಪರವಾಗಿ ಮೂರು ಬೆಳ್ಳಿನಾಣ್ಯಗಳನ್ನೂ ಕೊಡಿಸಬೇಕು. |
೭ |
ಅರವತ್ತು ವರ್ಷ ವಯಸ್ಸು ದಾಟಿದ ಪುರುಷನ ಪರವಾಗಿ ಹದಿನೈದು ಬೆಳ್ಳಿನಾಣ್ಯಗಳನ್ನು ಸ್ತ್ರೀಯ ಪರವಾಗಿ ಹತ್ತು ಬೆಳ್ಳಿನಾಣ್ಯಗಳನ್ನು ಕೊಡಿಸಬೇಕು. |
೮ |
ಯಾವನಾದರು ಬಡವನಾಗಿದ್ದು ನೇಮಕವಾದ ನಾಣ್ಯವನ್ನು ಕೊಡಲಾಗದೆ ಹೋದರೆ ಅವನು ಹರಕೆ ಮಾಡಿ ಪ್ರತಿಷ್ಠಿಸಿದ ವ್ಯಕ್ತಿಯನ್ನು ಯಾಜಕನ ಮುಂದೆ ನಿಲ್ಲಿಸಬೇಕು. ಯಾಜಕನು ಹರಕೆ ಮಾಡಿದವನ ಸ್ಥಿತಿಗತಿಗೆ ತಕ್ಕಂತೆ ಅವನು ತೆರಬೇಕಾದ ನಾಣ್ಯ ಇಷ್ಟೆಂದು ನಿಗದಿ ಮಾಡಬೇಕು. |
೯ |
“ಸರ್ವೇಶ್ವರನಿಗೆ ಸಮರ್ಪಿಸಬಹುದಾದ ಪ್ರಾಣಿಯನ್ನು ಯಾವನಾದರೂ ಹರಕೆಮಾಡಿ ಪ್ರತಿಷ್ಠಿಸಿದ್ದರೆ ಅದು ದೇವರ ಸೊತ್ತಾಗಿರಬೇಕು. |
೧೦ |
ಅದನ್ನು ಬದಲಾಯಿಸಕೂಡದು. ಕೆಟ್ಟದ್ದಕ್ಕೆ ಬದಲಾಗಿ ಒಳ್ಳೆಯದನ್ನು, ಒಳ್ಳೆಯದಕ್ಕೆ ಬದಲಾಗಿ ಕೆಟ್ಟದ್ದನ್ನು ಹಾಗು ಒಂದಕ್ಕೆ ಬದಲಾಗಿ ಮತ್ತೊಂದನ್ನು ಕೊಡಕೂಡದು. ಅವನು ಗೊತ್ತುಮಾಡಿದ ಪ್ರಾಣಿಗೆ ಬದಲಾಗಿ ಬೇರೊಂದು ಪ್ರಾಣಿಯನ್ನು ಪ್ರತ್ಯೇಕಿಸಿಟ್ಟಿದ್ದರೆ ಮೊದಲನೆಯ ಪ್ರಾಣಿ ಹಾಗು ಅದಕ್ಕೆ ಬದಲಾಗಿ ಇಟ್ಟ ಪ್ರಾಣಿ ಎರಡೂ ಸರ್ವೇಶ್ವರನಿಗೆ ಸೇರಬೇಕು. |
೧೧ |
ಸರ್ವೇಶ್ವರನಿಗೆ ಸಮರ್ಪಿಸಕೂಡದ ಬೇರೆ ಜಾತಿಯ ಪ್ರಾಣಿಯನ್ನು ಪ್ರತಿಷ್ಠಿಸಿದ್ದರೆ ಅದನ್ನು ಯಾಜಕನ ಮುಂದೆ ನಿಲ್ಲಿಸಬೇಕು. |
೧೨ |
ಅದು ಒಳ್ಳೆಯದೊ ಕೆಟ್ಟದ್ದೋ ಎಂದು ಯಾಜಕನು ನೋಡಿ ಅದರ ಬೆಲೆ ಇಷ್ಟೆಂದು ನಿರ್ಧರಿಸಬೇಕು. ಯಾಜಕನು ನಿರ್ಧರಿಸಿದ ಬೆಲೆಯೇ ಅಂತಿಮವಾದುದು. |
೧೩ |
ಹರಕೆ ಮಾಡುವವನು ಬಿಡಿಸಿಕೊಳ್ಳಬೇಕೆಂದಿದ್ದರೆ ಅದರ ಕ್ರಯದೊಡನೆ ಐದನೆಯ ಒಂದು ಭಾಗವನ್ನು ಹೆಚ್ಚಾಗಿ ಕೊಡಬೇಕು. |
೧೪ |
“ಯಾವನಾದರು ತನ್ನ ಮನೆಯನ್ನು ಸರ್ವೇಶ್ವರನಿಗೆ ಮೀಸಲಾಗಿ ಪ್ರಟಿಷ್ಠಿಸಿದ್ದರೆ ಯಾಜಕನು ಅದು ಉತ್ತಮವಾದ ಮನೆಯೋ ಅಲ್ಲವೋ ಎಂದು ಪರೀಕ್ಷಿಸಿ ಬೆಲೆಯನ್ನು ಗೊತ್ತುಮಾಡಬೇಕು; ಯಾಜಕನು ಗೊತ್ತುಮಾಡಿದ ಬೆಲೆಯನ್ನು ಬದಲಾಯಿಸುವಂತಿಲ್ಲ. |
೧೫ |
ಹರಕೆಮಾಡಿದವನು ಆ ಮನೆಯನ್ನು ಬಿಡಿಸಿಕೊಳ್ಳಬೇಕೆಂದಿದ್ದರೆ ಅದರ ಕ್ರಯದ ಜೊತೆಗೆ ಐದನೆಯ ಒಂದು ಭಾಗವನ್ನು ಹೆಚ್ಚಾಗಿ ಕೊಡಬೇಕು. ಆಗ ಆ ಮನೆ ಅವನದಾಗುವುದು. |
೧೬ |
“ಯಾವನಾದರು ಪಿತ್ರಾರ್ಜಿತ ಭೂಮಿಯಲ್ಲಿ ಒಂದು ಭಾಗವನ್ನು ಸರ್ವೇಶ್ವರನಿಗೆ ಹರಕೆಮಾಡಿ ಪ್ರತಿಷ್ಠಿಸಿದ್ದರೆ ಅದಕ್ಕೆ ಬಿತ್ತನೆಬೀಜ ಎಷ್ಟು ಬೇಕಾಗುತ್ತದೆ ಎಂಬುದರ ಆಧಾರದ ಮೇಲೆ ನೀವು ಅದರ ಬೆಲೆಯನ್ನು ನಿರ್ಣಯಿಸಬೇಕು. ಇಪ್ಪತ್ತು ಕಿಲೋಗ್ರಾಂ ಜವೆಗೋಧಿಯನ್ನು ಬಿತ್ತಬಹುದಾದಂಥ ಭೂಮಿಗೆ ಐವತ್ತು ಬೆಳ್ಳಿನಾಣ್ಯಗಳನ್ನು ಕೊಡಬೇಕಾಗುವುದು. |
೧೭ |
ಅವನು ಜೂಬಿಲಿ ಸಂವತ್ಸರದಿಂದ ಆ ಹೊಲವನ್ನು ಪ್ರತಿಷ್ಠಿಸಿದ್ದರೆ ಈ ಕ್ರಯ ಅಂತಿಮವಾಗಿರುವುದು. |
೧೮ |
ಜೂಬಿಲಿ ಸಂವತ್ಸರದ ತರುವಾಯ ಭೂಮಿಯನ್ನು ಹರಕೆ ಮಾಡಿದರೆ, ಮುಂದಿನ ಜೂಬಿಲಿ ಸಂವತ್ಸರಕ್ಕೆ ಕಳೆಯಬೇಕಾದ ವರ್ಷಗಳ ಸಂಖ್ಯೆಯ ಮೇರೆಗೆ ಅದರ ಬೆಲೆಯನ್ನು ಕಮ್ಮಿಮಾಡಬೇಕು. |
೧೯ |
ಹರಕೆಮಾಡಿದವನು ಅದನ್ನು ಬಿಡಿಸಿಕೊಳ್ಳಲಾಶಿಸಿದರೆ, ಅದರ ಕ್ರಯದೊಡನೆ ಐದನೆಯ ಒಂದು ಭಾಗವನ್ನು ಹೆಚ್ಚಾಗಿ ಕೊಡಬೇಕು. ಆಗ ಆ ಹೊಲ ಅವನದಾಗುವುದು. |
೨೦ |
ತಾನು ಅದನ್ನು ಬಿಡಿಸಿಕೊಳ್ಳದೆ ಮತ್ತೊಬ್ಬನಿಗೆ ಮಾರಿದರೆ ಮುಂದೆ ಅದನ್ನು ಬಿಡಿಸಿಕೊಳ್ಳುವ ಹಕ್ಕು ಇರುವುದಿಲ್ಲ. |
೨೧ |
ಬಿಡುಗಡೆಯಾಗುವ ಜೂಬಿಲಿ ಸಂವತ್ಸರದಲ್ಲಿ ಆ ಹೊಲ ಸರ್ವೇಶ್ವರನ ಸ್ವಕೀಯ ಹೊಲವಾದಂತೆ ಅವರ ಸೊತ್ತಾಗಿಯೇ ಇರಬೇಕು. ಅದು ಯಾಜಕರ ವಶದಲ್ಲಿ ಇರಬೇಕು. |
೨೨ |
“ಯಾವನಾದರು ಕ್ರಯಕ್ಕೆ ತೆಗೆದುಕೊಂಡ ಹೊಲವನ್ನು, ಅಂದರೆ ಪಿತ್ರಾರ್ಜಿತ ಭೂಮಿಗೆ ಸೇರದಿರುವ ಹೊಲವನ್ನು ಹರಕೆಮಾಡಿ ಪ್ರತಿಷ್ಠಿಸಿದರೆ |
೨೩ |
ಯಾಜಕನ ಮುಂದಿನ ಜೂಬಿಲಿ ಸಂವತ್ಸರದ ತನಕ ಇರುವ ವರ್ಷಗಳಿಗೆ ತಕ್ಕಂತೆ ಅದರ ಬೆಲೆಯನ್ನು ನಿರ್ಣಯಿಸಬೇಕು. ಪ್ರತಿಷ್ಠಿಸಿದವನು ನಿರ್ಣಯಿಸಲಾದ ಹಣವನ್ನು ಸರ್ವೇಶ್ವರನಿಗೆ ಮೀಸಲಾದುದೆಂದು ಭಾವಿಸಿ ಅದೇ ದಿನದಲ್ಲಿ ಕೊಟ್ಟುಬಿಡಬೇಕು. |
೨೪ |
ಜೂಬಿಲಿ ಸಂವತ್ಸರದಲ್ಲಿ ಆ ಹೊಲವು ಮಾರಿದವನಿಗೆ, ಅಂದರೆ ಯಾರ ಪಿತ್ರಾರ್ಜಿತ ಭೂಮಿಗೆ ಸೇರಿದೆಯೋ ಅವರಿಗೆ ಅದನ್ನು ಮರಳಿಸಬೇಕು. |
೨೫ |
ದೇವರ ಸೇವೆಯಲ್ಲಿ ಬಳಕೆಯಲ್ಲಿರುವ ‘ಶೆಕೆಲ್’ ಒಂದಕ್ಕೆ ಇಪ್ಪತ್ತು ‘ಗೇರಾ’ ತೂಕದ ನಾಣ್ಯದ ಮೇರೆಗೆ ಬೆಲೆಯನ್ನು ನಿಗದಿಮಾಡಬೇಕು. |
೨೬ |
“ಶುದ್ಧಪ್ರಾಣಿಯಲ್ಲಿ ಚೊಚ್ಚಲಾಗಿ ಹುಟ್ಟಿದ್ದು ಸರ್ವೇಶ್ವರನಿಗೆ ಸೇರಿದ್ದು. ಆದ್ದರಿಂದ ಅದನ್ನು ಯಾರೂ ಹರಕೆಯಾಗಿ ಕೊಡಕೂಡದು. ಚೊಚ್ಚಲು ಮರಿ ಹೋರಿಯೇ ಆಗಿರಲಿ, ಆಡುಕುರಿಯೇ ಆಗಿರಲಿ. ಅದು ಸರ್ವೇಶ್ವರನ ಸೊತ್ತು. |
೨೭ |
ಅಶುದ್ಧಪ್ರಾಣಿಯಲ್ಲಿ ಹುಟ್ಟಿದ ಚೊಚ್ಚಲು ಮರಿಯನ್ನು ಹರಕೆಮಾಡಿದ್ದರೆ, ಹರಕೆಮಾಡಿದವನು ನಿಗದಿಯಾದ ಬೆಲೆಯೊಂದಿಗೆ ಐದನೆಯ ಒಂದು ಭಾಗವನ್ನು ಹೆಚ್ಚಾಗಿ ಕೊಟ್ಟು ಅದನ್ನು ಬಿಡಿಸಿಕೊಳ್ಳಬಹುದು. ಅವನು ಬಿಡಿಸದೆಹೋದರೆ ಅದನ್ನು ನಿಗದಿಯಾದ ಕ್ರಯಕ್ಕೆ ಮಾರಬೇಕು. |
೨೮ |
“ಯಾರಾದರು ನರಮಾನವನನ್ನಾಗಲಿ, ಪಶುಪ್ರಾಣಿಯನ್ನಾಗಲಿ, ಪಿತ್ರಾರ್ಜಿತ ಭೂಮಿಯನ್ನಾಗಲಿ, ಬೇರೆ ಯಾವುದನ್ನೇ ಆಗಲಿ ಯಾವ ಶರತ್ತೂ ಇಲ್ಲದೆ ಸಂಪೂರ್ಣವಾಗಿ ಸರ್ವೇಶ್ವರನದಾಗಿರಲು ಹರಕೆ ಮಾಡಿಕೊಟ್ಟರೆ ಅದನ್ನು ಮಾರಲೂಕೂಡದು, ಬಿಡಿಸಿಕೊಳ್ಳಲೂಬಾರದು. ಸಂಪೂರ್ಣ ಸರ್ವೇಶ್ವರನದಾಗಿರಲು ಸಮರ್ಪಿಸುವಂಥದೆಲ್ಲಾ ಸರ್ವೇಶ್ವರನಿಗೆ ಮೀಸಲಾಗಿಯೇ ಇರಬೇಕು. |
೨೯ |
ಸಂಪೂರ್ಣ ಸರ್ವೇಶ್ವರನ ಸೊತ್ತಾಗುವುದಕ್ಕೆ ಒಪ್ಪಿಸಲಾದದ್ದು ನರಜಾತಿಯದಾದರೆ ಬಿಡಿಸುವುದಕ್ಕಾಗದು; ಅವನಿಗೆ ಮರಣವೇ ಆಗಬೇಕು. |
೩೦ |
“ಹೊಲದ ದವಸಧಾನ್ಯವಾಗಲಿ, ತೋಟದ ಹಣ್ಣುಹಂಪಲು ಆಗಲಿ, ಭೂಮಿಯಿಂದುಂಟಾದ ಎಲ್ಲ ಆದಾಯದಲ್ಲಿ ಹತ್ತನೆಯ ಒಂದು ಪಾಲು ಸರ್ವೇಶ್ವರನದಾಗಿರಬೇಕು. ಅದು ಸರ್ವೇಶ್ವರನಿಗೆ ಮೀಸಲಾದದ್ದು. |
೩೧ |
ಯಾವನಾದರು ತಾನು ಕೊಡಬೇಕಾದ ಹತ್ತನೆಯ ಪಾಲಿನಲ್ಲಿ ಏನಾದರು ಬಿಡಿಸಿಕೊಳ್ಳಬೇಕೆಂದಿದ್ದರೆ ಅದರ ಮೌಲ್ಯದೊಡನೆ ಐದನೆಯ ಒಂದು ಭಾಗವನ್ನು ಹೆಚ್ಚಾಗಿ ಕೊಡಬೇಕು. |
೩೨ |
ದನಕರುಗಳೇ ಆಗಲಿ, ಆಡುಕುರಿಗಳೇ ಆಗಲಿ, ಒಡೆಯನು ಲೆಕ್ಕಿಸಿದ ಎಲ್ಲ ಪಶುಪ್ರಾಣಿಗಳಲ್ಲಿ ಪ್ರತಿ ಹತ್ತನೆಯದು ಸರ್ವೇಶ್ವರನಿಗೆ ಮೀಸಲಾಗಿರಬೇಕು. |
೩೩ |
ಆ ಪಶುಪ್ರಾಣಿ ಒಳ್ಳೆಯದೋ ಕೆಟ್ಟದ್ದೋ ಎಂದು ನೋಡಬಾರದು. ಅದನ್ನು ಬದಲಾಯಿಸಬಾರದು. ಕೊಡಬೇಕಾದವನು ಅದನ್ನು ಬದಲಾಯಿಸಿದ್ದಾದರೆ ಅವನು ಮೊದಲು ಲೆಕ್ಕಿಸಿದ್ದು ಹಾಗು ಅದಕ್ಕೆ ಬದಲಾಗಿ ಇಟ್ಟಿದ್ದು ಎರಡು ಸರ್ವೇಶ್ವರನದಾಗಿರಬೇಕು. ಅದನ್ನು ಬಿಡಿಸಿಕೊಳ್ಳುವ ಹಕ್ಕು ಇರುವುದಿಲ್ಲ.“ |
೩೪ |
ಇವೇ ಸರ್ವೇಶ್ವರನು ಸೀನಾಯಿ ಬೆಟ್ಟದಲ್ಲಿ ಮೋಶೆಯ ಮುಖಾಂತರ ಇಸ್ರಯೇಲರಿಗೆ ಕೊಟ್ಟ ಆಜ್ಞೆಗಳು.
|
Kannada Bible (KNCL) 2016 |
No Data |