೧ |
ಆರೋನನ ಮಕ್ಕಳಾದ ಯಾಜಕರಿಗೆ ಈ ಕೆಳಕಂಡಂತೆ ಆಜ್ಞಾಪಿಸಬೇಕೆಂದು ಸರ್ವೇಶ್ವರ ಸ್ವಾಮಿ ಮೋಶೆಗೆ ತಿಳಿಸಿದರು. |
೨ |
“ಯಾಜಕರಲ್ಲಿ ಯಾವನೂ ತನ್ನ ಕುಲದಲ್ಲಿ ಸತ್ತವರ ನಿಮಿತ್ತ ತನ್ನನ್ನೇ ಅಪವಿತ್ರಮಾಡಿಕೊಳ್ಳಬಾರದು. ಆದರೂ ಸಮೀಪ ರಕ್ತಸಂಬಂಧಿಗಳಾದ ತಾಯಿ, ತಂದೆ, ಮಕ್ಕಳು ಹಾಗು ಅಣ್ಣತಮ್ಮಂದಿರು ಇವರ ವಿಷಯದಲ್ಲಿ ಈ ವಿಧಿ ಅನ್ವಯಿಸುವುದಿಲ್ಲ; |
೩ |
ಇದಲ್ಲದೆ ಮದುವೆಯಾಗದೆ ತನ್ನ ಆಶ್ರಯದಲ್ಲಿರುವ ತಂಗಿಯ ವಿಷಯದಲ್ಲೂ ಈ ವಿಧಿ ಅನ್ವಯಿಸುವುದಿಲ್ಲ. |
೪ |
ಅವನು ಕುಲನಾಯಕನಾಗಿರುವುದರಿಂದ ತನ್ನನ್ನೇ ಅಪವಿತ್ರ ಮಾಡಿಕೊಳ್ಳಕೂಡದು. ಮಾಡಿಕೊಂಡರೆ ಯಾಜಕ ಸೇವಾವೃತ್ತಿಗೆ ಅಯೋಗ್ಯನಾಗುವನು. |
೫ |
ಯಾಜಕರು ತಲೆ ಬೋಳಿಸಿಕೊಳ್ಳಬಾರದು; ಗಡ್ಡವನ್ನು ಕತ್ತರಿಸಿ ವಿಕಾರಗೊಳಿಸಿಕೊಳ್ಳಬಾರದು; ದೇಹವನ್ನು ಗಾಯಮಾಡಿಕೊಳ್ಳಬಾರದು; |
೬ |
ಅವರು ದೇವರಿಗೆ ಮೀಸಲಾಗಿರಬೇಕು; ತಾವು ಸೇವೆ ಮಾಡುವ ದೇವರ ಹೆಸರಿಗೆ ಅಪಕೀರ್ತಿ ತರಬಾರದು. ತಮ್ಮ ದೇವರ ಆಹಾರವನ್ನು, ಅಂದರೆ ಸರ್ವೇಶ್ವರನ ಹೋಮದ್ರವ್ಯಗಳನ್ನು ಅವರು ಸಮರ್ಪಿಸುವವರಾಗಿರುವುದರಿಂದ ಪವಿತ್ರರಾಗಿರಬೇಕು. |
೭ |
ಯಾಜಕರು ತಮ್ಮ ದೇವರಿಗೆ ಮೀಸಲಾಗಿರುವುದರಿಂದ ವೇಶ್ಯೆಯನ್ನಾಗಲಿ, ಶೀಲಭ್ರಷ್ಟ ಸ್ತ್ರೀಯನ್ನಾಗಲಿ, ಗಂಡನಿಂದ ಬಿಡಲ್ಪಟ್ಟವಳನ್ನಾಗಲಿ ಹೆಂಡತಿಯನ್ನಾಗಿ ತೆಗೆದುಕೊಳ್ಳಬಾರದು. |
೮ |
ಯಾಜಕರು ನಿಮ್ಮ ದೇವರಾದ ನನಗೆ ಆಹಾರವನ್ನು ಸಮರ್ಪಿಸುವವರಾದ ಕಾರಣ ನೀವು ಅವರನ್ನು ದೇವರ ದಾಸರೆಂದು ಭಾವಿಸಬೇಕು. ನಿಮ್ಮನ್ನು ನನ್ನ ಸೇವೆಗೆ ಪ್ರತಿಷ್ಠಿಸಿಕೊಂಡಿರುವ ಸರ್ವೇಶ್ವರನೆಂಬ ನಾನು ಪರಿಶುದ್ಧನಾಗಿರುವುದರಿಂದ ಅವರನ್ನೂ ಪರಿಶುದ್ಧರೆಂದು ನೀವು ಭಾವಿಸಬೇಕು. |
೯ |
ಯಾಜಕನ ಮಗಳು ಸೂಳೆತನದಿಂದ ನಿಂದೆಗೆ ಒಳಗಾದರೆ ತನ್ನ ತಂದೆಯನ್ನೂ ನಿಂದೆಗೆ ಒಳಪಡಿಸಿದವಳಾದಳು; ಅವಳನ್ನು ಬೆಂಕಿಯಿಂದ ಸುಟ್ಟುಬಿಡಬೇಕು. |
೧೦ |
ಯಾಜಕರಲ್ಲಿ ಪ್ರಧಾನನು, ಅಂದರೆ ಯಾವನು ತೈಲಾಭಿಷೇಕ ಹೊಂದಿ ದೀಕ್ಷಾವಸ್ತ್ರಗಳನ್ನು ಧರಿಸಿ, ಪಟ್ಟಕ್ಕೆ ಬರುವನೋ ಅವನು ಸಂತಾಪ ಸೂಚನೆಗಾಗಿ ತನ್ನ ತಲೆಗೂದಲನ್ನು ಕೆದರಿಕೊಳ್ಳಬಾರದು; ಬಟ್ಟೆಗಳನ್ನು ಹರಿದುಕೊಳ್ಳಬಾರದು. |
೧೧ |
ಅವನು ಶವವಿರುವ ಯಾವ ಸ್ಥಳಕ್ಕೂ ಹೋಗಬಾರದು. ತಂದೆ ತಾಯಿಗಳ ಮರಣದ ನಿಮಿತ್ತ ತನ್ನನ್ನು ಅಪವಿತ್ರ ಮಾಡಿಕೊಳ್ಳಬಾರದು. |
೧೨ |
ಇದಕ್ಕಾಗಿ ದೇವಸ್ಥಾನವನ್ನು ಬಿಡಲೇಬಾರದು; ಬಿಟ್ಟುಹೋದರೆ ತಾನು ಸೇವೆಮಾಡುವ ದೇವಮಂದಿರದ ಗೌರವಕ್ಕೆ ಕುಂದುಬರುವುದು. ಏಕೆಂದರೆ ತನ್ನ ದೇವರ ಅಭಿಷೇಕ ತೈಲವನ್ನು ತಲೆಯ ಮೇಲೆ ಹೊಯ್ಯಿಸಿಕೊಂಡು ಪ್ರತಿಷ್ಠಿತನಾಗಿದ್ದಾನೆ. ನಾನು ಸರ್ವೇಶ್ವರ. |
೧೩ |
ಅವನು ಪುರುಷ ಸಂಪರ್ಕವೇ ಇಲ್ಲದ ಯುವತಿಯನ್ನು ಮಾಡಿಕೊಳ್ಳಬೇಕೇ ಹೊರತು |
೧೪ |
ವಿಧವೆಯನ್ನಾಗಲಿ, ಗಂಡನಿಂದ ಬಿಡಲ್ಪಟ್ಟವಳನ್ನಾಗಲಿ, ಶೀಲಭ್ರಷ್ಟ ಸ್ತ್ರೀಯನ್ನಾಗಲಿ, ವೇಶ್ಯೆಯನ್ನಾಗಲಿ ಮದುವೆ ಮಾಡಿಕೊಳ್ಳಬಾರದು. ಸ್ವದೇಶದವರಲ್ಲಿಯೇ ಹೆಣ್ಣನ್ನು ಪರಿಗ್ರಹಿಸಬೇಕು; |
೧೫ |
ಇಲ್ಲವಾದರೆ ಅವನ ಸಂತತಿ ಸ್ವಜನರೊಳಗೆ ಅಪವಾದಕ್ಕೆ ಗುರಿಯಾಗುವುದು. ಅವನನ್ನು ನನ್ನ ಸೇವೆಗೆ ಪ್ರತಿಷ್ಠಿಸಿಕೊಂಡ ಸರ್ವೇಶ್ವರ ನಾನು. |
೧೬ |
ಆರೋನನಿಗೆ ಹೀಗೆ ಆಜ್ಞಾಪಿಸಬೇಕೆಂದು ಮೋಶೆಗೆ ಸರ್ವೇಶ್ವರ ತಿಳಿಸಿದರು. |
೧೭ |
ನಿನ್ನ ಸಂತತಿಯವರಲ್ಲಿ, ತಲತಲಾಂತರದವರೆಗೂ, ಯಾವ ಅಂಗವಿಕಲನೂ ದೇವ ಆಹಾರವನ್ನು ಸಮರ್ಪಿಸಲು ನನ್ನ ಸನ್ನಿಧಿಗೆ ಬರಬಾರದು. ಅಂಗವಿಕಲನು ಈ ಸೇವೆಯನ್ನು ವಹಿಸಿಕೊಳ್ಳಲೇಕೂಡದು. |
೧೮ |
ಅವನು ಕುರುಡನಾಗಲಿ, ಕುಂಟನಾಗಲಿ, ಕೊರೆಮೂಗನಾಗಲಿ, |
೧೯ |
ಕೈಕಾಲು ಮುರುಕನಾಗಲಿ, |
೨೦ |
ಗೂನುಗುಜ್ಜಾರಿಯಾಗಲಿ, ಹೂಗಣ್ಣ ಕಾಯಿಗಣ್ಣನಾಗಲಿ, ಕಜ್ಜಿತುರಿಗಳುಳ್ಳವನಾಗಲಿ, |
೨೧ |
ನಪುಂಸಕನಾಗಲಿ, ಬೇರೆ ಯಾವ ಕಳಂಕವಿದ್ದವನಾಗಲಿ ಸರ್ವೇಶ್ವರನಿಗೆ ಹೋಮದ್ರವ್ಯಗಳನ್ನು ಸಮರ್ಪಿಸುವುದಕ್ಕೆ ಸನ್ನಿಧಿಗೆ ಬರಬಾರದು. ಅಂಥವನು ದೇಹದಲ್ಲಿ ದೋಷವಿರುವುದರಿಂದ ದೇವರ ಆಹಾರವನ್ನು ಸಮರ್ಪಿಸಲೇಬಾರದು. |
೨೨ |
ದೇವರಿಗೆ ನೈವೇದ್ಯವಾದ ಆಹಾರದಲ್ಲಿ ಪರಿಶುದ್ಧವಾದುದನ್ನೂ ಮಹಾಪರಿಶುದ್ಧವಾದುದನ್ನೂ ಅವನು ಊಟಮಾಡಬಹುದು. |
೨೩ |
ಆದರೆ ಅವನಿಗೆ ಕಳಂಕವಿರುವುದರಿಂದ ತೆರೆಯನ್ನು ದಾಟಿ ಒಳಗೆ ಬರಬಾರದು; ಬಲಿಪೀಠದ ಬಳಿಗೆ ಬರಬಾರದು; ನನ್ನ ಪವಿತ್ರಸ್ಥಾನಗಳ ಗೌರವಕ್ಕೆ ಅವನಿಂದ ಕುಂದು ಉಂಟಾಗಬಾರದು; ಆ ಸ್ಥಾನಗಳನ್ನು ನನ್ನ ಸೇವೆಗೆ ಪ್ರತಿಷ್ಠಿಸಿಕೊಂಡ ಸರ್ವೇಶ್ವರ ನಾನು. |
೨೪ |
ಮೋಶೆ ಆರೋನನಿಗೂ ಅವನ ಮಕ್ಕಳಿಗೂ ಇಸ್ರಯೇಲರಿಗೂ ಈ ಆಜ್ಞೆಗಳನ್ನು ತಿಳಿಸಿದನು.
|
Kannada Bible (KNCL) 2016 |
No Data |