೧ |
“ಯಾರಾದರು ಸರ್ವೇಶ್ವರ ಸ್ವಾಮಿಗೆ ಧಾನ್ಯವನ್ನು ನೈವೇದ್ಯ ಮಾಡಬೇಕೆಂದಿದ್ದರೆ ಅದು ಗೋದಿ ಹಿಟ್ಟಾಗಿರಬೇಕು. ಅದರ ಮೇಲೆ ಎಣ್ಣೆಹೊಯ್ದು, ಸಾಂಬ್ರಾಣಿಯನ್ನಿಟ್ಟು, ಅದನ್ನು ಆರೋನನ ವಂಶಜರಾದ ಯಾಜಕರ ಬಳಿಗೆ ತರಬೇಕು. |
೨ |
ಅದು ದೇವರಿಗೆ ಸಮರ್ಪಿತವಾದುದೆಂದು ಸೂಚಿಸುವುದಕ್ಕಾಗಿ ಯಾಜಕನು ಆ ಎಣ್ಣೆ ಬೆರಸಿದ ಹಿಟ್ಟಿನಲ್ಲಿ ಒಂದು ಹಿಡಿಯನ್ನು ಹಾಗು ಇಡೀ ಸಾಂಬ್ರಾಣಿಯನ್ನು ತೆಗೆದುಕೊಂಡು ಬಲಿಪೀಠದ ಮೇಲೆ ಹೋಮಮಾಡಲಿ. ಅದು ಸರ್ವೇಶ್ವರನಿಗೆ ಪ್ರಿಯವಾದ ಸುಗಂಧಕರ ದಹನ ಬಲಿ. |
೩ |
ಈ ಕಾಣಿಕೆಯಲ್ಲಿ ಮಿಕ್ಕದ್ದು ಆರೋನನಿಗೂ ಅವನ ವಂಶದವರಿಗೂ ಸೇರತಕ್ಕದ್ದು. ಸರ್ವೇಶ್ವರನಿಗೆ ಸಮರ್ಪಿತವಾಗಿ ಉಳಿಯುವ ಹೋಮಶೇಷವು ಮಹಾಪರಿಶುದ್ಧವಾದುದು. |
೪ |
“ನೀವು ಒಲೆಯಲ್ಲಿ ಅಡಿಗೆ ಮಾಡಿದ್ದನ್ನು ನೈವೇದ್ಯವಾಗಿ ಸಮರ್ಪಿಸಬೇಕಾದರೆ ಅದು ಎಣ್ಣೆ ಬೆರೆಸಿದ ಹುಳಿಯಿಲ್ಲದ ಗೋದಿ ಹಿಟ್ಟಿನ ಹೋಳಿಗೆಗಳಾಗಿರಲಿ ಅಥವಾ ಎಣ್ಣೆ ಹಾಕಿದ ಹುಳಿಯಿಲ್ಲದ ಕಡುಬುಗಳಾಗಿರಲಿ. |
೫ |
ನೀವು ಅರ್ಪಿಸುವುದು ಕಬ್ಬಿಣದ ಹೆಂಚಿನ ಮೇಲೆ ಸುಟ್ಟದ್ದಾದರೆ ಅದು ಎಣ್ಣೆ ಬೆರಸಿದ ಹುಳಿಯಿಲ್ಲದ ಗೋದಿ ಹಿಟ್ಟಿನದಾಗಿರಬೇಕು. |
೬ |
ಅದನ್ನು ಚೂರುಚೂರಾಗಿ ಮುರಿದು ಅದರ ಮೇಲೆ ಎಣ್ಣೆ ಹೊಯ್ದು ಕಾಣಿಕೆಯಾಗಿ ಕೊಡಬೇಕು. |
೭ |
ನೀವು ಅರ್ಪಿಸುವುದು ಬಾಂಡ್ಲಿಯಲ್ಲಿ ಪಕ್ವಮಾಡಿದ್ದಾದರೆ ಅದು ಎಣ್ಣೆ ಹೊಯ್ದ ಗೋದಿ ಹಿಟ್ಟಿನದಾಗಿರಬೇಕು. |
೮ |
ನೀವು ಈ ಮೂರು ವಿಧವಾದ ನೈವೇದ್ಯವನ್ನು ಸಮರ್ಪಿಸುವುದಾದರೆ ಅವುಗಳನ್ನು ಯಾಜಕನಿಗೆ ಒಪ್ಪಿಸಬೇಕು. ಅವನೇ ಅದನ್ನು ಬಲಿಪೀಠದ ಬಳಿಗೆ ತರಲಿ. |
೯ |
ಯಾಜಕನು ಅದು ಸಮರ್ಪಿತವಾದುದೆಂದು ಸೂಚಿಸುವುದಕ್ಕಾಗಿ ಅದರಲ್ಲಿ ಸ್ವಲ್ಪ ಭಾಗವನ್ನು ಪ್ರತ್ಯೇಕಿಸಿ ಬಲಿಪೀಠದ ಮೇಲೆ ಹೋಮಮಾಡಲಿ. ಅದು ಸರ್ವೇಶ್ವರನಿಗೆ ಪ್ರಿಯವಾದ ಸುಗಂಧಕರ ದಹನ ಬಲಿ. |
೧೦ |
ಈ ಕಾಣಿಕೆಯಲ್ಲಿ ಮಿಕ್ಕದ್ದು ಆರೋನನಿಗೂ ಅವನ ವಂಶಜರಿಗೂ ಸೇರತಕ್ಕದ್ದು. ಸರ್ವೇಶ್ವರನಿಗೆ ಸಮರ್ಪಿತವಾಗಿ ಉಳಿಕೆಯಾದದ್ದು ಮಹಾಪರಿಶುದ್ಧವಾದುದು. |
೧೧ |
“ನೀವು ಸರ್ವೇಶ್ವರನಿಗೆ ಕಾಣಿಕೆಯಾಗಿ ಸಮರ್ಪಿಸುವ ಯಾವ ಧಾನ್ಯದ ಪದಾರ್ಥವನ್ನಾಗಲಿ ಹುಳಿಹಿಟ್ಟಿನಿಂದ ಮಾಡಬಾರದು. ಯಾವ ಹುಳಿಪದಾರ್ಥವನ್ನಾಗಲಿ ಸಿಹಿಪದಾರ್ಥವನ್ನಾಗಲಿ ಸರ್ವೇಶ್ವರನಿಗೆ ಹೋಮಮಾಡಕೂಡದು. |
೧೨ |
ಅವುಗಳನ್ನು ಪ್ರಥಮ ಫಲವಾಗಿ ಸರ್ವೇಶ್ವರನಿಗೆ ಸಮರ್ಪಿಸಬಹುದೇ ಹೊರತು ಬಲಿಪೀಠದ ಮೇಲೆ ಸುವಾಸನೆಯನ್ನುಂಟುಮಾಡುವುದಕ್ಕಾಗಿ ಹೋಮ ಮಾಡಕೂಡದು. |
೧೩ |
ನೈವೇದ್ಯವಾಗಿ ಸಮರ್ಪಿಸುವ ಎಲ್ಲ ಆಹಾರ ಪದಾರ್ಥಗಳಿಗೂ ಉಪ್ಪು ಹಾಕಿಯೆ ಸಮರ್ಪಿಸಬೇಕು. ಉಪ್ಪು ಸರ್ವೇಶ್ವರನ ಸಂಗಡ ನಿಮಗಿರುವ ಒಡಂಬಡಿಕೆಯ ಸೂಚನೆ. ಆದ್ದರಿಂದ ಅದು ಯಾವ ನೈವೇದ್ಯ ದ್ರವ್ಯವಾದರೂ ಉಪ್ಪಿಲ್ಲದೆ ಇರಬಾರದು. ನೀವು ಅರ್ಪಿಸುವ ಎಲ್ಲ ಪದಾರ್ಥಗಳಲ್ಲಿಯೂ ಉಪ್ಪು ಸೇರಿಸಿಯೇ ಇರಬೇಕು. |
೧೪ |
“ನೀವು ಸರ್ವೇಶ್ವರನಿಗೆ ಪ್ರಥಮ ಧಾನ್ಯ ನೈವೇದ್ಯವನ್ನು ಮಾಡಬೇಕಾದರೆ ಅದು ಬೆಂಕಿಯಲ್ಲಿ ಸುಟ್ಟ ಗೋದಿಯ ಹಸಿ ತೆನೆಗಳಾಗಿರಬೇಕು. |
೧೫ |
ಅದು ನೈವೇದ್ಯ ವಸ್ತುವಾದುದರಿಂದ ಅದರ ಮೇಲೆ ಎಣ್ಣೆ ಹೊಯ್ಯಬೇಕು; ಸಾಂಬ್ರಾಣಿ ಇಡಬೇಕು. |
೧೬ |
ಯಾಜಕನು ಅದು ದೇವರಿಗೆ ಸಮರ್ಪಿತವಾದುದೆಂದು ಸೂಚಿಸುವುದಕ್ಕಾಗಿ ಆ ಗೋದಿ ತೆನೆಯಿಂದಲೂ, ಎಣ್ಣೆಯಿಂದಲೂ ಸ್ವಲ್ಪ ಭಾಗವನ್ನು ತೆಗೆದುಕೊಂಡು ಸಾಂಬ್ರಾಣಿಯನ್ನೆಲ್ಲ ಅದಕ್ಕೆ ಸೇರಿಸಿ ಅಗ್ನಿಯ ಮೂಲಕ ಸರ್ವೇಶ್ವರನಿಗೆ ಹೋಮಮಾಡಲಿ.
|
Kannada Bible (KNCL) 2016 |
No Data |