೧ |
ಸರ್ವೇಶ್ವರ ಮೋಶೆ ಮತ್ತು ಆರೋನರ ಸಂಗಡ ಮಾತಾಡಿ ಹೀಗೆಂದು ಆಜ್ಞಾಪಿಸಿದರು: |
೨ |
“ನೀವು ಇಸ್ರಯೇಲರಿಗೆ ತಿಳಿಸಬೇಕಾದ ವಿಷಯಗಳು ಇವು - |
೩ |
ಭೂಮಿಯ ಮೇಲಿರುವ ಚತುಷ್ಪಾದ ಪ್ರಾಣಿಗಳಲ್ಲಿ ಈ ಕೆಳಕಂಡವುಗಳ ಮಾಂಸವನ್ನು ನೀವು ತಿನ್ನಬಹುದು: ಯಾವ ಪ್ರಾಣಿಯ ಕಾಲ್ಗೊರಸು ಸೀಳಿದೆಯೋ ಅದು ಮೆಲುಕು ಹಾಕುವಂಥದಾದರೆ ಅದರ ಮಾಂಸವನ್ನು ತಿನ್ನಬಹುದು. |
೪ |
ಆದರೆ ಯಾವ ಪ್ರಾಣಿ ಮೆಲುಕು ಹಾಕಿದರೂ ಗೊರಸು ಸೀಳಿರುವುದಿಲ್ಲವೋ ಅವುಗಳ ಮಾಂಸವನ್ನು ನೀವು ತಿನ್ನಬಾರದು. ಉದಾಹರಣೆಗೆ ಒಂಟೆ ಮೆಲುಕುಹಾಕುವಂಥದ್ದಾದರೂ ಅದಕ್ಕೆ ಸೀಳು ಗೊರಸು ಇಲ್ಲ. ಆದುದರಿಂದ ನೀವು ಅದರ ಮಾಂಸವನ್ನು ಅಶುದ್ಧವೆಂದು ತಿಳಿಯಬೇಕು. |
೫ |
(ಬಿಲದ ಮೊಲ ಮೆಲುಕುಹಾಕುವಂಥದ್ದು; ಆದರೂ ಸೀಳು ಗೊರಸು ಇಲ್ಲವಾದ್ದರಿಂದ ಅದು ನಿಮಗೆ ಅಶುದ್ಧ. |
೬ |
ಮೊಲ ಮೆಲುಕುಹಾಕುವಂಥದ್ದು; ಆದರೂ ಸೀಳುಗೊರಸು ಇಲ್ಲವಾದ ಕಾರಣ ಅದು ನಿಮಗೆ ಅಶುದ್ಧ.) |
೭ |
ಹಂದಿಯ ಗೊರಸು ಸೀಳಿದೆ. ಆದರೂ ಅದು ಮೆಲುಕು ಹಾಕುವುದಿಲ್ಲ. ಆದ್ದರಿಂದ ಅದು ನಿಮಗೆ ಅಶುದ್ಧ. |
೮ |
ಇಂಥವುಗಳ ಮಾಂಸವನ್ನು ನೀವು ತಿನ್ನಬಾರದು; ಅವುಗಳ ಹೆಣವನ್ನು ಮುಟ್ಟಬಾದರು. ಅವುಗಳನ್ನು ಅಶುದ್ಧವೆಂದೆಣಿಸಬೇಕು. |
೯ |
ಜಲಜಂತುಗಳಲ್ಲಿ ನೀವು ತಿನ್ನಬಹುದಾದವುಗಳು ಯಾವುವೆಂದರೆ - ಸಮುದ್ರದಲ್ಲಿಯಾಗಲಿ, ನದಿಯಲ್ಲಿಯಾಗಲಿ, ಬೇರೆ ಜಲಾಶಯದಲ್ಲಿಯಾಗಲಿ, ಯಾವ ಜಾತಿಯ ಪ್ರಾಣಿಗೆ ರೆಕ್ಕೆ ಇದ್ದು ಮೈಯೆಲ್ಲಾ ಪರೆಪರೆಯಾಗಿರುವುದೋ ಅದರ ಮಾಂಸವನ್ನು ತಿನ್ನಬಹುದು. |
೧೦ |
ಆದರೆ ಸಮುದ್ರದಲ್ಲಿದ್ದರೂ ನದಿಯಲ್ಲಿದ್ದರೂ ಜಲಚರಗಳಾದ ಸಕಲವಿಧವಾದ ಜೀವಜಂತುಗಳಲ್ಲಿ ಯಾವ ಜಾತಿಗೆ ರೆಕ್ಕೆಯೂ ಪರೆಪರೆಯಾದ ಮೈಯೂ ಇರುವುದಿಲ್ಲವೋ ಅದು ನಿಮಗೆ ನಿಷಿದ್ಧವಾದದ್ದು. |
೧೧ |
ಅಂಥವು ಸಂಪೂರ್ಣವಾಗಿ ನಿಷಿದ್ಧವಾಗಿರುವುದರಿಂದ ಅವುಗಳ ಮಾಂಸವನ್ನು ನೀವು ತಿನ್ನಬಾರದು; ಅವುಗಳ ಹೆಣಗಳು ನಿಮಗೆ ಹೇಯವಾಗಿರಬೇಕು. |
೧೨ |
ಜಲಜಂತುಗಳಲ್ಲಿ ಯಾವುದಕ್ಕೆ ರೆಕ್ಕೆಗಳೂ ಪರೆಪರೆಯಾದ ಮೈಯೂ ಇಲ್ಲವೋ ಅವು ನಿಮಗೆ ಹೇಯವಾಗಿರಬೇಕು. |
೧೩ |
ಪಕ್ಷಿಗಳಲ್ಲಿ ಇವುಗಳು ನಿಮಗೆ ನಿಷಿದ್ಧವು; ಗರುಡ, ಬೆಟ್ಟದ ಹದ್ದು, |
೧೪ |
ಕ್ರೌಂಚ, ಹದ್ದು, |
೧೫ |
ಸಕಲ ವಿಧವಾದ ಗಿಡಗ, ಎಲ್ಲಾ ವಿಧವಾದ ಕಾಗೆ, |
೧೬ |
ಉಷ್ಟ್ರಪಕ್ಷಿ, ಉಲೂಕ, ಕಡಲ ಹಕ್ಕಿ, |
೧೭ |
ಸಕಲ ವಿಧವಾದ ಡೇಗೆ, ಗೂಬೆ, ಹೆಗ್ಗೂಬೆ, ಕರೇಟು, |
೧೮ |
ಚೀಲಮೂಗಿ, ರಣಹದ್ದು, ನೀರು ಕಾಗೆ, ಕೊಕ್ಕರೆ, |
೧೯ |
ಎಲ್ಲ ವಿಧವಾದ ಬಕ, ಹೆಡೆ ಹಕ್ಕಿ, ಕಣ್ಣಕಪಡಿ, ಇವುಗಳ ಮಾಂಸವನ್ನು ತಿನ್ನಬಾರದು; ಇವು ಹೇಯವಾಗಿರಬೇಕು. |
೨೦ |
ರೆಕ್ಕೆಯುಳ್ಳವುಗಳಾಗಿ ಕಾಲುಗಳಿಂದ ಹರಿದಾಡುವ ಕ್ರಿಮಿಕೀಟಗಳೆಲ್ಲವೂ ನಿಮಗೆ ಹೇಯವಾಗಿರಬೇಕು. |
೨೧ |
ಆದರೆ ಕಾಲುಳ್ಳ ಯಾವ ಕ್ರಿಮಿಕೀಟಗಳಿಗೆ ನೆಲದ ಮೇಲೆ ಹಾರುವುದಕ್ಕೋಸ್ಕರ ಮುದುರಿಕೊಂಡಿರುವ ತೊಡೆಗಳು ಇರುತ್ತವೆಯೋ ಅವುಗಳನ್ನು ನೀವು ತಿನ್ನಬಹುದು. |
೨೨ |
ಸಕಲವಿಧವಾದ ಮಿಡತೆಗಳನ್ನೂ, ಬೋಳ ಮಿಡತೆಗಳನ್ನೂ, ಜಿಟ್ಟಿ ಮಿಡತೆಗಳನ್ನೂ, ಸಣ್ಣ ಮಿಡತೆಗಳನ್ನೂ ಇವುಗಳನ್ನೆಲ್ಲಾ ತಿನ್ನಬಹುದು. |
೨೩ |
ರೆಕ್ಕೆಯುಳ್ಳವುಗಳಾಗಿ ಕಾಲುಗಳಿಂದ ಹರಿದಾಡುವ ಸಕಲ ವಿಧವಾದ ಕ್ರಿಮಿಕೀಟಗಳು ನಿಮಗೆ ನಿಷಿದ್ಧವು. |
೨೪ |
ಇದಲ್ಲದೆ ಈ ಕೆಳಗೆ ಹೇಳಿರುವ ಜಂತುಗಳಿಂದ ನಿಮಗೆ ಅಪವಿತ್ರತೆಯುಂಟಾಗುತ್ತದೆ. ಅವುಗಳ ಹೆಣ ಯಾವನಿಗೆ ಸೋಂಕುವುದೋ ಅವನು ಆ ದಿನದ ಸಾಯಂಕಾಲದವರೆಗೂ ಅಶುದ್ಧನಾಗಿರುವನು. |
೨೫ |
ಅವುಗಳ ಹೆಣವನ್ನು ಎತ್ತಿದವನು ತನ್ನ ಬಟ್ಟೆಗಳನ್ನು ಒಗೆದುಕೊಳ್ಳಬೇಕು, ಮತ್ತು ಸಾಂಯಂಕಾಲದವರೆಗೂ ಅಶುದ್ಧನಾಗಿರುವನು. |
೨೬ |
ಅವು ಯಾವುವೆಂದರೆ, ಯಾವ ಪ್ರಾಣಿ ಗೊರಸು ಸ್ವಲ್ಪ ಸೀಳಿದ್ದರೂ ಇಗ್ಗೊರಸಾಗಿಲ್ಲವೋ ಮತ್ತು ಮೆಲುಕು ಹಾಕುವುದಿಲ್ಲವೋ ಅದು ನಿಮಗೆ ಅಶುದ್ಧ. ಅವುಗಳು ಯಾವನಿಗೆ ಸೋಂಕುವುವೋ ಅವನು ಅಶುದ್ಧನಾಗುವನು. |
೨೭ |
ಚತುಷ್ಪಾದ ಪ್ರಾಣಿಗಳಲ್ಲಿ ಅಂಗಾಲುಗಳಿಂದ ನಡೆಯುವುವುಗಳೆಲ್ಲಾ ನಿಮಗೆ ಅಶುದ್ಧವಾಗಿರುವುವು. ಅವುಗಳ ಹೆಣ ಯಾವನಿಗೆ ಸೋಂಕುವುದೋ ಅವನು ಆ ದಿನದ ಸಾಯಂಕಾಲದವರೆಗೂ ಅಶುದ್ಧನಾಗಿರುವನು. |
೨೮ |
ಅವುಗಳ ಹೆಣವನ್ನು ಎತ್ತಿದವನು ತನ್ನ ಬಟ್ಟೆಗಳನ್ನು ಒಗೆದುಕೊಳ್ಳಬೇಕು ಮತ್ತು ಆ ಸಾಯಂಕಾಲದವರೆಗೂ ಅಶುದ್ಧನಾಗಿರುವನು. ಅವು ನಿಮಗೆ ಅಶುದ್ಧ. |
೨೯ |
ನೆಲದ ಮೇಲೆ ಸಂಚರಿಸುವ ಸಣ್ಣ ಜಂತುಗಳಲ್ಲಿ ಇವು ನಿಮಗೆ ಅಶುದ್ಧವಾಗಿರಬೇಕು: ಯಾವುವೆಂದರೆ - ಮುಂಗುಸಿ, ಇಲಿ, ಸಕಲವಿಧವಾದ ಉಡ, ಹಾವುರಾಣಿ, |
೩೦ |
ಊಸುರುವಳ್ಳಿ, ಹಲ್ಲಿ, ಬಸವನಹುಳ, ಚಿಟ್ಟಿಲಿ ಇವೇ. |
೩೧ |
ನೆಲದ ಮೇಲೆ ಸಂಚರಿಸುವ ಈ ಅಶುದ್ಧವಾದ ಸಣ್ಣ ಜಂತುಗಳ ಹೆಣವು ಯಾರಿಗೆ ಸೋಂಕುವುದೋ ಅವರು ಸಾಯಂಕಾಲದವರೆಗೂ ಅಶುದ್ಧರಾಗಿರುವರು. |
೩೨ |
ಇವುಗಳ ಹೆಣವು ಯಾವ ವಸ್ತುವಿನ ಮೇಲೆ ಬೀಳುವುದೋ ಆ ವಸ್ತು ಅಶುದ್ಧವಾಗಿರುವುದು. ಅದು ಮರದ ವಸ್ತುವಾಗಲಿ ಬಟ್ಟೆಯಾಗಲಿ ಚರ್ಮವಾಗಲಿ ಗೋಣಿಯಾಗಲಿ ಅದು ಎಂಥದಾದರೂ ಯಾವ ಕೆಲಸಕ್ಕೆ ಉಪಯೋಗವಾಗಿದ್ದರೂ ಅದನ್ನು ನೀರಿನಲ್ಲಿ ನೆನಸಬೇಕು; ಅದು ಸಾಯಂಕಾಲದವರೆಗೂ ಅಶುದ್ಧವಾಗಿರುವುದು; ತರುವಾಯ ಶುದ್ಧಿಯಾಗುವುದು. |
೩೩ |
ಆ ಜಂತುಗಳ ಹೆಣ ಮಣ್ಣಿನ ಪಾತ್ರೆಯಲ್ಲಿ ಬಿದ್ದರೆ ಆ ಪಾತ್ರೆಯಲ್ಲಿರುವುದೆಲ್ಲಾ ಅಶುದ್ಧವಾಗಿರುವುದು. ಮತ್ತು ಆ ಪಾತ್ರೆಯನ್ನು ನೀವು ಒಡೆದುಬಿಡಬೇಕು. |
೩೪ |
ಅದರಲ್ಲಿರುವ ತಿನ್ನತಕ್ಕ ಪದಾರ್ಥವೆಲ್ಲಾ ನೀರಿನಿಂದ ನೆನದದ್ದಾಗಿದ್ದರೆ ಅಶುದ್ಧವಾಗುವುದು. ಪಾನದ್ರವ್ಯವು ಆ ಪಾತ್ರೆಯಲ್ಲಿದ್ದರೆ ಅದೂ ಅಶುದ್ಧವಾಗುವುದು. |
೩೫ |
ಆ ಜಂತುಗಳ ಹೆಣ ಯಾವ ವಸ್ತುಗಳ ಮೇಲೆ ಬಿದ್ದರೂ ಆ ವಸ್ತು ಅಶುದ್ಧವಾಗುವುದು. ಒಲೆಗಳಲ್ಲಿ ಅದು ಒಂಟಿ ಒಲೆಯಾಗಿದ್ದರೂ ಜೋಡಿ ಒಲೆಯಾಗಿದ್ದರೂ ಅದು ಅಶುದ್ಧವಾದುದರಿಂದ ಅದನ್ನು ಒಡೆದುಬಿಡಬೇಕು. ಅದು ಅಶುದ್ಧವೇ. |
೩೬ |
ಒರತೆ ಮೊದಲಾದ ಜಲಾಶಯಗಳನ್ನು ಮಾತ್ರ ನೀವು ಶುದ್ಧವೆಂದೆಣಿಸಬೇಕು. ಆದರೆ ಇವುಗಳೊಳಗಿಂದ ಆ ಹೆಣವನ್ನು ಎತ್ತಿದವನು ಅಶುದ್ಧನಾಗುವನು. |
೩೭ |
ಬಿತ್ತಬೇಕಾದ ಬೀಜದ ಮೇಲೆ ಈ ಜಂತುಗಳ ಹೆಣ ಬಿದ್ದರೆ ಆ ಬೀಜವು ಅಶುದ್ಧವಾಗುವುದಿಲ್ಲ. |
೩೮ |
ನೀರು ಹಾಕಿ ನೆನಸಿದ ಬೀಜದ ಮೇಲೆ ಆ ಹೆಣ ಬಿದ್ದರೆ ಅದು ನಿಮಗೆ ಅಶುದ್ಧ. |
೩೯ |
ಆಹಾರಕ್ಕೆ ಯೋಗ್ಯವಾಗಿರುವ ಪ್ರಾಣಿ ಸತ್ತರೆ ಅದರ ಹೆಣವನ್ನು ಮುಟ್ಟಿದವನು ಆ ದಿನದ ಸಾಯಂಕಾಲದವರೆಗೂ ಅಶುದ್ಧನಾಗಿರುವನು. |
೪೦ |
ಆ ಹೆಣದಲ್ಲಿ ಸ್ವಲ್ಪ ತಿಂದವನು ಸಹ ತನ್ನ ಬಟ್ಟೆಗಳನ್ನು ಒಗೆದುಕೊಳ್ಳಬೇಕು. ಅವನು ಆ ದಿನದ ಸಾಯಂಕಾಲದವರೆಗೂ ಅಶುದ್ಧನಾಗಿರುವನು. ಆ ಹೆಣವನ್ನು ಹೊತ್ತವನೂ ತನ್ನ ಬಟ್ಟೆಗಳನ್ನು ಒಗೆದುಕೊಳ್ಳಬೇಕು; ಅವನು ಆ ಸಾಯಂಕಾಲದವರೆಗೂ ಅಶುದ್ಧನಾಗಿರುವನು. |
೪೧ |
ನೆಲದ ಮೇಲೆ ಹರಿದಾಡುವ ಕ್ರಿಮಿಕೀಟಗಳೆಲ್ಲಾ ಹೇಯವಾಗಿವೆ; ಅವುಗಳ ಮಾಂಸವನ್ನು ತಿನ್ನಬಾರದು. |
೪೨ |
ಹೊಟ್ಟೆಯಿಂದ ನಡೆಯುವಂಥದನ್ನೂ ಕಾಲಿನಿಂದ ಹರಿದಾಡುವಂಥದನ್ನೂ ಬಹಳ ಕಾಲುಳ್ಳದ್ದನ್ನೂ ಅಂತೂ ನೆಲದ ಮೇಲೆ ಹರಿದಾಡುವ ಯಾವ ಸಣ್ಣ ಜೀವಿಯನ್ನೂ ನೀವು ತಿನ್ನಬಾರದು; ಅವು ಹೇಯವಾಗಿವೆ. |
೪೩ |
ನೀವು ಅಂತ ಯಾವ ಸಣ್ಣ ಜೀವಿಯನ್ನೂ ತಿಂದು ನಿಮ್ಮನ್ನು ನೀವೇ ಹೇಸಿಕೆಮಾಡಿಕೊಂಡು ಅಶುದ್ಧರಾಗಬಾರದು. |
೪೪ |
ಏಕೆಂದರೆ ನಾನು ನಿಮ್ಮ ದೇವರಾದ ಸರ್ವೇಶ್ವರ; ನೀವು ದೇವಜನರಿಗೆ ತಕ್ಕಂತಿರಬೇಕು. ನಾನು ಪರಿಶುದ್ಧನಾಗಿರುವುದರಿಂದ ನೀವೂ ಪರಿಶುದ್ಧರಾಗಿರಬೇಕು. ನೆಲದ ಮೇಲೆ ಹರಿದಾಡುವ ಯಾವ ಜಂತುವಿನಿಂದಾದರೂ ನೀವು ನಿಮ್ಮನ್ನು ಅಶುದ್ಧಮಾಡಿಕೊಳ್ಳಬಾರದು. |
೪೫ |
ನಿಮ್ಮ ದೇವರಾಗಿರುವುದಕ್ಕೆ ನಿಮ್ಮನ್ನು ಈಜಿಪ್ಟಿನಿಂದ ಬರಮಾಡಿದ ಸರ್ವೇಶ್ವರ ನಾನು; ನಾನು ಪರಿಶುದ್ಧನಾಗಿರುವುದರಿಂದ ನೀವೂ ಪರಿಶುದ್ಧರಾಗಿರಬೇಕು. |
೪೬ |
ಇದೇ ಪಶು, ಪಕ್ಷಿ, ಜಲಚರ ಹಾಗು ಕ್ರಿಮಿಕೀಟಗಳ ವಿಷಯವಾದ ವಿಧಿ. |
೪೭ |
ಇದರಿಂದ ಶುದ್ಧಾಶುದ್ಧಗಳನ್ನೂ, ಭಕ್ಷ್ಯಾಭಕ್ಷ್ಯಗಳನ್ನೂ ವಿವೇಚಿಸುವುದಕ್ಕೆ ನಿಮ್ಮಿಂದಾಗುವುದು
|
Kannada Bible (KNCL) 2016 |
No Data |