A A A A A
×

ಕನ್ನಡ ಬೈಬಲ್ (KNCL) 2016

ಪ್ರಲಾಪಗಳು ೧

ಅಯ್ಯೋ, ಅಂದು ಜನಭರಿತವಾಗಿದ್ದ ನಗರಿ ಇಂದು ಒಂಟಿಯಾಗಿ ಕುಳಿತುಬಿಟ್ಟಳಲ್ಲಾ! ರಾಷ್ಟ್ರಗಳಲ್ಲೆಲ್ಲಾ ಅತಿ ಶ್ರೇಷ್ಠಳಾಗಿದ್ದವಳು ವಿಧವೆ ಆಗಿಬಿಟ್ಟಳಲ್ಲಾ! ಪ್ರಾಂತ್ಯಗಳಲ್ಲೆಲ್ಲಾ ಬಹಳ ಪ್ರವೀಣಳಾಗಿದ್ದವಳು ದಾಸಿಯಂತೆ ಆಗಿಬಿಟ್ಟಿರುವಳಲ್ಲಾ!
ಇರುಳೆಲ್ಲ ಅತ್ತಳು ಬಿಕ್ಕಿಬಿಕ್ಕಿ ಕೆನ್ನೆ ಮೇಲೆ ನೋಡಿ, ಕಣ್ಣೀರ ಕೋಡಿ! ಆಕೆಯ ಹಲವಾರು ಪ್ರಿಯರಲ್ಲಿ ಸಂತೈಸುವವರೇ ಇಲ್ಲ ಮಿತ್ರರಾಗಿದ್ದವರೇ ದ್ರೋಹವೆಸಗಿ ಶತ್ರುಗಳಾಗಿರುವರಲ್ಲಾ!
ಘೋರಸೇವೆ ಶ್ರಮೆಗಳಿಂದ ತಪ್ಪಿಸಿಕೊಳ್ಳಲಿಕೆ ವಲಸೆಹೋಗಿರುವಳಲ್ಲಾ ‘ಯೆಹೂದಿ’ ಎಂಬಾಕೆ! ಮ್ಲೇಚ್ಛರ ಮಧ್ಯೆ ವಾಸಮಾಡುತ್ತಿರುವಳಲ್ಲಾ ನೆಮ್ಮದಿಯಿಲ್ಲದೆ ಹಿಮ್ಮೆಟ್ಟಿ ಹಿಡಿದರು ಹಿಂಸಕರೆಲ್ಲಾ ಆಕೆ ಇಕ್ಕಟ್ಟಿಗೆ ಸಿಕ್ಕಿರುವಾಗಲೆ!
ಬಿಕೋ ಎನ್ನುತ್ತಿವೆ ಸಿಯೋನಿಗೆ ತೆರಳುವ ಮಾರ್ಗಗಳು ಮಹೋತ್ಸವಕ್ಕೆ ಇನ್ನು ಬರುತ್ತಿಲ್ಲ ಯಾತ್ರಿಕರಾರು ಪಾಳುಬಿದ್ದಿವೆ ಅದರ ಬಾಗಿಲುಗಳು ನಿಟ್ಟುಸಿರಿಡುತ್ತಿರುವರು ಅದರ ಯಾಜಕರು ವ್ಯಥೆಪಡುತ್ತಿರುವರು ಅದರ ಯುವತಿಯರು ನಗರಕ್ಕೆ ನಗರವೇ ದುಃಖದಲ್ಲಿ ಮುಳುಗಿರುವುದು.
ಅದರ ಅಗಣಿತ ದ್ರೋಹಗಳಿಗಾಗಿ ಸರ್ವೇಶ್ವರ ಮಾಡಿದನದನ್ನು ದುಃಖಕ್ಕೆ ಈಡಾಗಿ, ಅದರ ವಿರೋಧಿಯೇ ಅದಕ್ಕೀಗ ಅಧಿಪತಿ! ಅದರ ಶತ್ರುಗಳಿಗೋ ಸುಖಸಮೃದ್ಧಿ! ಅದರ ಹಸುಳೆಗಳೂ ಸೆರೆಹೋಗಿವೆ ವೈರಿಯ ವಶವಾಗಿ!
ಕಳೆದುಹೋಗಿದೆಯಲ್ಲಾ ಸಿಯೋನ್ ನಗರಿಯ ವೈಭವವೆಲ್ಲಾ! ಮೇವಿಲ್ಲದೆ ಬಡಕಲಾದ ಜಿಂಕೆಗಳಂತೆ ಅದರ ನಾಯಕರೆಲ್ಲಾ ಓಡಿಹೋದರು ಬೆಂಗೊಟ್ಟು ಅಟ್ಟಿಬಂದವರಿಗೆಲ್ಲಾ!
ಜೆರುಸಲೇಮ್ ದಿಕ್ಕುಪಾಲಾಗಿ ಕಷ್ಟಪಡುವಾಗ ನೆನಸಿಕೊಳ್ಳುತ್ತಾಳೆ ತನ್ನ ಪ್ರಾಚೀನ ವೈಭವಗಳನ್ನೆಲ್ಲಾ. ತನ್ನ ಜನತೆ ವೈರಿಗಳ ವಶವಾದಾಗ ಆಕೆಗೆ ಸಿಗಲಿಲ್ಲ ಯಾರೊಬ್ಬರ ಬೆಂಬಲ. ಆಕೆಯಾ ಹೀನಸ್ಥಿತಿ ನೋಡಿ ವೈರಿಗಳು ಮಾಡಿದರು ಪರಿಹಾಸ್ಯ.
ಜೆರುಸಲೇಮ್ ಅಶುದ್ಧಳಾದಳು ಪದೇ ಪದೇ ಪಾಪಮಾಡಿ. ಹೊಗಳುತ್ತಿದ್ದವರೇ ತೆಗಳುವವರಾದರು ಆಕೆಯ ನಗ್ನತೆಯನ್ನು ನೋಡಿ. ಆಕೆಯೋ ನಿಟ್ಟುಸಿರಿಡುತ್ತಿರುವಳು ಮುಖವನ್ನು ಮರೆಮಾಡಿ.
ಆಕೆಯ ನೆರಿಗೆಯೂ ಹೊಲಸಾಗಿ ಮುಂದಿನ ಗತಿ ತೋಚದಂತಾಗಿ ಸಂತೈಸುವವರೇ ಇಲ್ಲದವಳಾಗಿ ಬಿದ್ದಿರುವಳಲ್ಲಾ ಈ ಭೀಕರ ಸ್ಥಿತಿಯಲ್ಲಿ! “ಹೇ ಸರ್ವೇಶ್ವರಾ, ನೋಡು ನನ್ನ ಸಂಕಟವನು ಹೆಚ್ಚಳಪಡುತ್ತಿರುವನಲ್ಲಾ ಶತ್ರುವಾದವನು” ಎಂದು ಮೊರೆಯಿಡುತ್ತಾಳೆ ಕೂಗಿ.
೧೦
ದೋಚಿಕೊಂಡನು ದ್ರೋಹಿ ಆಕೆಯ ಆಸ್ತಿಯನ್ನು ಕೈಚಾಚಿ. 'ಸೇರಿಸಬಾರದು ಸಭೆಗೆ ಮ್ಲೇಚ್ಛರನ್ನು’ ಎಂಬುದು ದೇವನ ಆಣತಿ. ಆದರಿಗೋ ಅಂಥವರೇ ಪವಿತ್ರಾಲಯ ಪ್ರವೇಶಿಸುವ ದುರ್ಗತಿ!
೧೧
ಅಡ್ಡಾಡುತ್ತಿರುವರು ಆಕೆಯ ಜನರು ಅನ್ನಕ್ಕಾಗಿ ಮಾರುತಿರುವರು ಅಮೂಲ್ಯವಾದುದನ್ನೆ ಆಹಾರಕ್ಕಾಗಿ. “ಸರ್ವೇಶ್ವರಾ, ನೋಡು, ಕಟಾಕ್ಷಿಸು, ನನ್ನ ತುಚ್ಛತೆಯನ್ನು” ಎಂದು ಹೇಳಿ ಆಕೆ ಪ್ರಲಾಪಿಸುತ್ತಿರುವಳು.
೧೨
ಹಾದುಹೋಗುವವರೇ, ನಿಮಗಿಲ್ಲವೆ ನನ್ನ ಚಿಂತೆ? ಸರ್ವೇಶ್ವರ ಸಿಟ್ಟುಗೊಂಡು ನನಗಿತ್ತಿರುವನು ಈ ವ್ಯಥೆ! ಈ ಪರಿ ಸಂಕಟವನ್ನು ನೀವೆಲ್ಲಾದರು ನೋಡಿದ್ದುಂಟೆ?”
೧೩
“ಆಕಾಶದಿಂದ ಆತ ಸುರಿಸಿದ್ದಾನೆ ಅಗ್ನಿಯನ್ನೆ ಅದು ದಹಿಸುತ್ತಿದೆ ನನ್ನೊಳಗಿನ ಎಲುಬುಗಳನ್ನೆ ನನ್ನ ಕಾಲುಗಳಿಗೆ ಬಲೆಯೊಡ್ಡಿದ್ದಾನೆ ಅದು ನನ್ನನ್ನೆಳೆಯುತ್ತಿದೆ ನೆಲಕ್ಕೆ ಹಾಳುಬಿದ್ದ ನಾನು ಸದಾ ಬಳಲುತ್ತಿದ್ದೇನೆ.”
೧೪
“ನನ್ನ ದ್ರೋಹಗಳನ್ನು ನನಗೆ ಬಿಗಿದಿದ್ದಾನೆ ನೊಗದ ಕಣ್ಣುಗಳಂತೆ. ಅವು ಹುರಿಗೊಂಡು, ಸುತ್ತಿಕೊಂಡು ಕುತ್ತಿಗೆಗೆ, ನನ್ನ ಶಕ್ತಿಯನ್ನು ಹೀರುತ್ತಿವೆ. ಸಿಕ್ಕಿಸಿದನಲ್ಲಾ ಸ್ವಾಮಿ, ನನ್ನಿಂದ ಎದುರಿಸಲಾಗದಂಥವರ ಕೈಗೆ!
೧೫
“ಸ್ವಾಮಿ ತೃಣೀಕರಿಸಿದನು ನನ್ನ ಶೂರರನ್ನೆಲ್ಲಾ ನನ್ನ ಕಣ್ಮುಂದೆಯೇ. ಸೈನ್ಯಸಮೂಹವನ್ನೆ ಬರಮಾಡಿದನು ನನ್ನ ಯುವಕರನ್ನು ಸದೆಬಡಿಯಲೆಂದೇ. ಯೆಹೂದಿಯೆಂಬ ಯುವತಿಯನ್ನು ತುಳಿಸಿದನು ತೊಟ್ಟಿಯಲ್ಲಿ ದ್ರಾಕ್ಷಿ ತುಳಿವಂತೆ.
೧೬
“ಗೋಳಾಡುತ್ತಿರುವೆನು ಈ ವಿಪತ್ತುಗಳಿಂದ; ಸಂತೈಸಿ ಸುಧಾರಿಸುವವನು ಬಲುದೂರವಿರುವುದರಿಂದ ಹರಿಯುತ್ತಿದೆ ಕಂಬನಿ ಧಾರೆಧಾರೆಯಾಗಿ ಕಣ್ಗಳಿಂದ; ವೈರಿಗಳು ಗೆದ್ದು, ನನ್ನ ಕುವರರು ಬಿದ್ದುಹೋಗಿರುವುದರಿಂದ.
೧೭
ಸಿಯೋನ್ ನಗರಿ ಕೈಚಾಚಿ ಕೂಗಿಕೊಂಡರೂ ಸಂತೈಸುವವರಾರೂ ಇಲ್ಲ. ನೆರೆಹೊರೆಯವರೇ ಆಕೆಯ ವಿರೋಧಿಗಳಾಗಲೆಂದು ಸರ್ವೇಶ್ವರ ತೀರ್ಮಾನಿಸಿದ್ದಾನಲ್ಲಾ! ಅವರ ನಡುವೆ ಹೊಲೆಯಾದ ಹೆಣ್ಣಿನಂತೆ ಜೆರುಸಲೇಮ್ ಬಿದ್ದಿದ್ದಾಳಲ್ಲಾ!
೧೮
“ಸರ್ವೇಶ್ವರನು ನ್ಯಾಯಸ್ವರೂಪಿ, ನಾನಾದರೊ ಆತನ ಆಜ್ಞೆ ಮೀರಿದ ದ್ರೋಹಿ. ಜನಾಂಗಗಳೇ, ನೀವೆಲ್ಲರು ಕಿವಿಗೊಡಿ, ನನ್ನ ಸಂಕಟ ನೋಡಿ! ನನ್ನ ಯುವಕ ಯುವತಿಯರು, ಇಗೋ, ಸೆರೆಹೋಗಿರುವರು ನೋಡಿ.
೧೯
“ನನ್ನ ಪ್ರಿಯರನ್ನು ಕರೆದೆ; ಅವರೇ ಮೋಸಮಾಡಿದರೆನಗೆ. ನನ್ನ ಯಾಜಕರೂ ಪ್ರಮುಖರೂ ಪಟ್ಟಣದಲ್ಲೇ ಪ್ರಾಣತೆತ್ತರು, ಉಸಿರನ್ನು ಉಳಿಸಿಕೊಳ್ಳಲು ಊಟವನ್ನು ಹುಡುಕುತ್ತಿರಲು.
೨೦
“ಹೇ, ಸರ್ವೇಶ್ವರಾ, ಕಟಾಕ್ಷಿಸು; ನಾ ಇಕ್ಕಟ್ಟಿಗೆ ಸಿಕ್ಕಿಕೊಂಡಿರುವೆ. ಕರುಳು ಕುದಿಯುತ್ತಿದೆ, ಹೃದಯ ವಿಮುಖವಾಗಿದೆ ನಾ ಗೈದ ದ್ರೋಹಕ್ಕೆ, ಕತ್ತಿಗೆ ತುತ್ತಾಗುತ್ತಿರುವೆ ಹೊರಗೆ ಪ್ರಾಣಸಂಕಟಕ್ಕೆ ಗುರಿಯಾಗಿರುವೆ ಒಳಗೆ.
೨೧
ಸಾಂತ್ವನ ತರುವವರಾರೂ ಇಲ್ಲವಲ್ಲಾ ನನಗೆ! ನನ್ನ ನರಳಾಟದ ಸುದ್ದಿ ಮುಟ್ಟಿದೆ ವೈರಿಗಳ ಕಿವಿಗೆ. ನನಗಾದ ಕೇಡಿಗೆ ನೀನೇ ಕಾರಣನೆಂಬ ಸಂತಸ ಶತ್ರುವಿಗೆ. ನೀ ಮುಂತಿಳಿಸಿದ ಮೇರೆಗೆ ನನಗಾದ ಗತಿ ಬರಲಿ ಅವರಿಗೆ.
೨೨
“ಅವರು ಗೈದ ಕೆಡುಕೆಲ್ಲಾ ಬಟ್ಟಬಯಲಾಗಲಿ ನಿನ್ನ ದೃಷ್ಟಿಗೆ. ನನ್ನ ದ್ರೋಹಕ್ಕೆ ಪ್ರತಿಯಾಗಿ ನನಗೆ ಮಾಡಿರುವಂತೆ ನೀ ಮಾಡು ಅವರಿಗೆ. ನನ್ನ ನರಳಾಟ ಹೆಚ್ಚಿದೆ; ನನ್ನ ಎದೆ ಕುಂದಿಹೋಗಿದೆ.”
ಪ್ರಲಾಪಗಳು ೧:1
ಪ್ರಲಾಪಗಳು ೧:2
ಪ್ರಲಾಪಗಳು ೧:3
ಪ್ರಲಾಪಗಳು ೧:4
ಪ್ರಲಾಪಗಳು ೧:5
ಪ್ರಲಾಪಗಳು ೧:6
ಪ್ರಲಾಪಗಳು ೧:7
ಪ್ರಲಾಪಗಳು ೧:8
ಪ್ರಲಾಪಗಳು ೧:9
ಪ್ರಲಾಪಗಳು ೧:10
ಪ್ರಲಾಪಗಳು ೧:11
ಪ್ರಲಾಪಗಳು ೧:12
ಪ್ರಲಾಪಗಳು ೧:13
ಪ್ರಲಾಪಗಳು ೧:14
ಪ್ರಲಾಪಗಳು ೧:15
ಪ್ರಲಾಪಗಳು ೧:16
ಪ್ರಲಾಪಗಳು ೧:17
ಪ್ರಲಾಪಗಳು ೧:18
ಪ್ರಲಾಪಗಳು ೧:19
ಪ್ರಲಾಪಗಳು ೧:20
ಪ್ರಲಾಪಗಳು ೧:21
ಪ್ರಲಾಪಗಳು ೧:22
ಪ್ರಲಾಪಗಳು 1 / ಪ್ರಲಾ 1
ಪ್ರಲಾಪಗಳು 2 / ಪ್ರಲಾ 2
ಪ್ರಲಾಪಗಳು 3 / ಪ್ರಲಾ 3
ಪ್ರಲಾಪಗಳು 4 / ಪ್ರಲಾ 4
ಪ್ರಲಾಪಗಳು 5 / ಪ್ರಲಾ 5