A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ಪರಮಗೀತೆ ೫ನಲ್ಲ: ನನ್ನ ಪ್ರಿಯಳೇ, ನನ್ನ ವಧುವೇ, ಇದೋ ನಾ ಬಂದಿರುವೆ ನನ್ನ ತೋಟದೊಳಗೆ ರಕ್ತಬೋಳ ಸುಗಂಧದ್ರವ್ಯಗಳನ್ನು ಕೂಡಿಸಿರುವೆ. ಜೇನುಗೂಡನ್ನೂ ಜೇನುತುಪ್ಪವನ್ನೂ ತಿಂದಿರುವೆ ದ್ರಾಕ್ಷಾರಸವನ್ನೂ ಹಾಲನ್ನೂ ಕುಡಿದಿರುವೆ. ಮಿತ್ರರೇ, ತಿನ್ನಿರಿ; ಪ್ರಿಯರೇ, ಕುಡಿಯಿರಿ ತೃಪ್ತಿಯಾಗುವಷ್ಟು ಪಾನಮಾಡಿರಿ. ನಲ್ಲೆ:
ನಾ ನಿದ್ರಿಸುತ್ತಿದ್ದರೂ, ಎಚ್ಚರಗೊಂಡಿತ್ತು ನನ್ನ ಹೃದಯ ಇದೋ, ಬಾಗಿಲು ತಟ್ಟುತಿಹನು ನನ್ನ ಇನಿಯ! ನಲ್ಲ: ನನ್ನ ಪ್ರಿಯಳೇ, ನನ್ನ ಕಾಂತಳೇ, ಪಾರಿವಾಳವೇ, ಪರಿಪೂರ್ಣಳೇ, ಬಾಗಿಲು ತೆಗೆ ನನಗೆ, ನನ್ನ ತಲೆಯೆಲ್ಲಾ ನೆನೆದಿದೆ ಇಬ್ಬನಿಯಿಂದ ನನ್ನ ಕೂದಲು ತೊಯ್ದಿದೆ ರಾತ್ರಿಯ ಮಂಜಿನಿಂದ. ನಲ್ಲೆ:
ತೆಗೆದುಹಾಕಿರುವೆನಲ್ಲಾ ನನ್ನ ಅಂಗಿಯನ್ನು ಮತ್ತೆ ಅದನು ಹಾಕಿಕೊಳ್ಳುವುದೆಂತು? ತೊಳೆದಿರುವೆನಲ್ಲಾ ನನ್ನ ಪಾದಗಳನು ಮತ್ತೆ ಅವುಗಳನ್ನು ಕೊಳೆಮಾಡಿಕೊಳ್ಳುವುದೆಂತು?
ನನ್ನ ಕಾಂತನು ಕೈಯೊಡ್ಡಿಹನು ಬಾಗಿಲ ಸಂದಿನಲಿ ನನ್ನ ಮನ ಮಿಡಿಯಿತು ನನ್ನಂತರಂಗದಲಿ.
ಎದ್ದೆ ನಾನು ನಲ್ಲನಿಗೆ ಬಾಗಿಲ ತೆರೆಯಲೆಂದು ಅಗುಳಿಯ ಮೇಲೆ ತೊಟ್ಟಿಕ್ಕಿತು ಪರಿಮಳ ನನ್ನ ಕೈಗಳಿಂದ ಆ ರಸಗಂಧ ದ್ರವ್ಯ ನನ್ನ ಬೆರಳುಗಳಿಂದ.
ಬಾಗಿಲ ತೆರೆದು ನೋಡಿದೆ ನನ್ನಿನಿಯನಿಗಾಗಿ ಅಷ್ಟರೊಳಗೆ ಹೋಗಿಬಿಟ್ಟಿದ್ದನವನು ಹಿಂದಿರುಗಿ. ನಿಂತಂತಾಯಿತು ಅವನ ದನಿಗೆ ನನ್ನೆದೆಯ ತುಡಿತ ಎಷ್ಟೋ ಹುಡುಕಿದೆ, ಆದರೆ ಸಿಗಲಿಲ್ಲ ಎಷ್ಟೋ ಕೂಗಿದೆ, ಆದರೆ ಉತ್ತರವೇ ಇಲ್ಲ.
ಸುತ್ತುತ್ತಿದ್ದರು ಬೀದಿಗಳಲಿ ಪಹರೆಯವರು ನನ್ನನ್ನು ಕಂಡುಹಿಡಿದರು, ಹೊಡೆದು ಗಾಯಗೊಳಿಸಿದರು. ಕಿತ್ತುಕೊಂಡರು ಮೇಲುಹೊದಿಕೆಯನು ಆ ಪೌಳಿಗೋಡೆಯ ಕಾವಲುಗಾರರು.
ಜೆರುಸಲೇಮಿನ ಮಹಿಳೆಯರೇ, ಆಣೆಯಿಟ್ಟು ಹೇಳುತ್ತೇನೆ ನಿಮಗೆ: “ನೀವು ನನ್ನ ಕಾಂತನನ್ನು ಕಂಡರೆ ಅನುರಾಗದಿಂದ ನಾನು ಅಸ್ವಸ್ಥಳಾಗಿರುವೆ ಎಂದು ತಿಳಿಸಿರಿ ಅವನಿಗೆ” ಮಹಿಳೆಯರು:
“ಬೇರೆಯವರ ಕಾಂತರಿಗಿಂತ ನಿನ್ನ ಕಾಂತನಲ್ಲಿ ಏನು ವಿಶೇಷ? ಬೇರೆಯವರ ಇನಿಯರಿಗಿಂತ ನಿನ್ನ ಕಾಂತನಲ್ಲಿ ಅದೇನು ಅತಿಶಯ? ಸ್ತ್ರೀರತ್ನವೇ, ಹೇಳು ನಮಗೆಂತು ಈ ಪ್ರಮಾಣ?” ನಲ್ಲೆ:
೧೦
ನನ್ನ ನಲ್ಲ, ತೇಜೋಮಯ, ರಕ್ತವರ್ಣ ಹತ್ತುಸಾವಿರ ಜನರಲ್ಲಿ ಶ್ರೇಷ್ಠ.
೧೧
ಅವನ ಶಿರ ಅಪ್ಪಟ ಬಂಗಾರವು ಅವನ ಕೂದಲು ಕಾಗೆಕಪ್ಪು
೧೨
ಅವನ ಕಣ್ಣುಗಳು ತುಂಬುತೊರೆಗಳ ಬಳಿ ತಂಗುವ ಹಾಲಿನ ಕೊಳದಲಿ ಮೈತೊಳೆವ ಪಾರಿವಾಳಗಳು.
೧೩
ಅವನ ಕೆನ್ನೆಗಳು ಕರ್ಣಕುಂಡಲದ ಪಾತಿಗಳು ಸುಗಂಧ ಸಸ್ಯಗಳು ಬೆಳೆಯುವ ದಿಬ್ಬಗಳು ಅವನ ತುಟಿಗಳು ಅಚ್ಚ ಪರಿಮಳ ಸೂಸುವ ಕೆಂದಾವರೆಗಳು.
೧೪
ಅವನ ಕೈಗಳು ಪೀತರತ್ನಖಚಿತ ಚಿನ್ನದ ಸಲಾಕೆಗಳು ಅವನ ದೇಹ ಇಂದ್ರನೀಲಮಯವಾದ ದಂತಫಲಕವು.
೧೫
ಅವನ ಕಾಲುಗಳು ಅಪರಂಜಿಯ ಸುಣ್ಣಪಾದಗಳ ಮೇಲೆ ನಿಂತಿರುವ ಚಂದ್ರಕಾಂತ ಸ್ತಂಭಗಳು. ಅವನ ಗಾಂಭೀರ್ಯ ಲೆಬನೋನಿಗೆ ಸಮಾನ ದೇವದಾರು ಮರಗಳಂತೆ ರಮಣೀಯ.
೧೬
ಅವನ ಮಾತು ಮಧುರ ಅವನು ಸರ್ವಾಂಗ ಸುಂದರ. ಜೆರುಸಲೇಮಿನ ಮಹಿಳೆಯರೇ, ಇವನೇ ನನ್ನ ಪ್ರಿಯನು ಇವನೇ ನನ್ನ ಇನಿಯನು.